Tag: ಮಹತ್ವ

  • Navratri 2025: ವಿಜಯದಶಮಿಯ ಪೌರಾಣಿಕ ಮಹತ್ವವೇನು?

    Navratri 2025: ವಿಜಯದಶಮಿಯ ಪೌರಾಣಿಕ ಮಹತ್ವವೇನು?

    ದುಷ್ಟತನದ ವಿರುದ್ಧ ದೈವತ್ವದ ವಿಜಯವನ್ನು ಸಾರುವ ಹಬ್ಬವೇ ವಿಜಯದಶಮಿ. ಮೂಲತಃ ಈ ದಿನವನ್ನು ಆದಿ ಶಕ್ತಿಯು ಶುಂಭ ಮತ್ತು ನಿಶುಂಭರ ಮೇಲೆ ಸಾಧಿಸಿದ ಜಯದ ನೆನಪಿಗಾಗಿ ಆಚರಿಸಲಾಗುತ್ತದೆ. ಇದು ದೈವತ್ವವು ದುಷ್ಟ ಶಕ್ತಿಗಳ ಅಟ್ಟಹಾಸದ ಮೇಲೆ ಸಾಧಿಸಿದ ಮೇಲೆ ಜಯದ ಆಚರಣೆಯಾಗಿರುತ್ತದೆ. ಇನ್ನೂ ಕುತೂಹಲಕಾರಿ ವಿಚಾರವೇನೆಂದರೆ, ಈ ದಿನವು ಇನ್ನೂ ಹಲವಾರು ಜಯಗಳನ್ನು ತನ್ನ ಹೆಸರಿನಲ್ಲಿ ದಾಖಲಿಸಿಕೊಂಡಿದೆ.

    ದಶಕಂಠನ ಮೇಲೆ ಶ್ರೀರಾಮನ ವಿಜಯ:
    ವಿಜಯದಶಮಿಯನ್ನು ರಾವಣನ ಮೇಲೆ ಶ್ರೀರಾಮಚಂದ್ರನು ಸಾಧಿಸಿದ ವಿಜಯದ ನೆನಪಿಗಾಗಿ ಸಹ ಆಚರಿಸಲಾಗುತ್ತದೆ. ಸೀತಾ ಮಾತೆಯನ್ನು ಲಂಕೆಯಿಂದ ಬಿಡಿಸಿಕೊಂಡು ಹೋಗಲು ಬಂದ ಶ್ರೀರಾಮನು ರಾವಣನನ್ನು ಸಂಹರಿಸುತ್ತಾನೆ. ಇದರ ನೆನಪಿನಾರ್ಥವಾಗಿ ರಾವಣನ ಪ್ರತಿಕೃತಿಗಳನ್ನು ದಹನ ಮಾಡುತ್ತಾರೆ. ಇದು ಕೆಟ್ಟದ್ದರ ವಿರುದ್ಧ ಒಳ್ಳೆಯದು ಗೆಲುವು ಸಾಧಿಸಿದ ಧ್ಯೋತಕ ಎಂದು ನಂಬಲಾಗುತ್ತದೆ. ರಾವಣನಿಗೆ ಹತ್ತು ತಲೆಗಳು ಇದ್ದವು. ಇವೆಲ್ಲವೂ ರಾವಣನಿಗೆ ಅಸಾಧ್ಯವಾದ ಅಹಂ ಅನ್ನು ನೀಡಿದ್ದವು. ಈ ಹತ್ತು ತಲೆಗಳನ್ನು ಸಂಹರಿಸಿದ ದಿನವೇ ‘ದಶ ಹರ’ ಎಂದು ಕರೆಯಲ್ಪಟ್ಟಿತು. ಮುಂದೆ ಇದೇ ಜನರ ಬಾಯಲ್ಲಿ ದಸರಾ ಎಂದು ಬದಲಾಯಿತು. ಅಹಂ ಅನ್ನು ಓಡಿಸುವ ದಿನ ಇದು ಎಂದು ಸಹ ಕರೆಯಲ್ಪಡುತ್ತದೆ.

    ಪಾಂಡವರ ವನವಾಸ ಅಂತ್ಯಗೊಂಡ ದಿನ:
    ಮಹಾಭಾರತದಲ್ಲಿ ಪಾಂಡವರ ಅಜ್ಞಾತವಾಸವು ಅಂತ್ಯಗೊಂಡ ದಿನವೇ ‘ವಿಜಯದಶಮಿ’. ಕೌರವರ ಜೊತೆಗೆ ನಡೆದ ಪಗಡೆಯಾಟದಲ್ಲಿ ಸೋತು, ನಿಯಮದ ಪ್ರಕಾರ ಹನ್ನೆರಡು ವರ್ಷಗಳ ವನವಾಸ ಮತ್ತು ಒಂದು ವರ್ಷದ ಅಜ್ಞಾತ ವಾಸವನ್ನು ಮಾಡಿದ ಪಾಂಡವರು, ತಮ್ಮ ಅಜ್ಞಾತವಾಸವನ್ನು ಮುಗಿಸಿ, ತಮ್ಮ ರಾಜ್ಯವನ್ನು ತಮಗೆ ನೀಡಿರಿ ಎಂದು ಕೇಳಲು ಬಂದರು. ಆ ಕ್ರಿಯೆಗೆ ಮುನ್ನುಡಿ ಹಾಡಿದ ವಿರಾಟನ ಗೋಗ್ರಹಣಕ್ಕೆ ಪ್ರತಿಯಾಗಿ ಯುದ್ಧವೊಂದು ನಡೆಯಿತು. ಆ ಯುದ್ಧ ನಡೆದಿದ್ದು ವಿಜಯದಶಮಿಯಂದು.

    ದಕ್ಷಿಣ ಭಾರತದಲ್ಲಿ ವಿಜಯದಶಮಿಯನ್ನು ಚಾಮುಂಡೇಶ್ವರಿ ಅಥವಾ ದುರ್ಗಾ ದೇವಿಯ ಆರಾಧನೆ ಮಾಡಲು ಆಚರಿಸುತ್ತಾರೆ. ದೇವಾನುದೇವತೆಗಳ ಬಣ್ಣ ಬಣ್ಣದ ಬೊಂಬೆಗಳನ್ನು ತಯಾರಿಸಿ ಮನೆಗಳಲ್ಲಿ ಇಡುತ್ತಾರೆ. ಇದನ್ನು ತಮಿಳು ನಾಡಿನಲ್ಲಿ ‘ಗೋಲು’ ಎಂದು, ಕರ್ನಾಟಕದಲ್ಲಿ ‘ಗೊಂಬೆ ಹಬ್ಬ’ ಎಂದು ಕರೆಯುತ್ತಾರೆ. ಕೇರಳದಲ್ಲಿ, ವಿಜಯದಶಮಿಯ ದಿನ ಸರಸ್ವತಿ ದೇವಿಯನ್ನು ಪೂಜಿಸುತ್ತಾರೆ. ಈ ದಿನ ಎಳೆಯ ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಮಾಡುತ್ತಾರೆ. ಈ ದಿನ ವಿದ್ಯಾಭ್ಯಾಸವನ್ನು ಆರಂಭಿಸಲು ಒಳ್ಳೆಯ ದಿನ ಎಂಬ ನಂಬಿಕೆ ಇದೆ.

    ಕೆಟ್ಟದ್ದರ ವಿರುದ್ಧ ಒಳ್ಳೆಯದು ಸಾಧಿಸಿದ ಗೆಲುವನ್ನು ಆಚರಿಸಲು ವಿಜಯದಶಮಿಯನ್ನು ಆಚರಿಸಲಾಗುತ್ತದೆ. ಯಾವುದೇ ಧರ್ಮ, ಮತಗಳ ಭೇದವಿಲ್ಲದೆ ಹಲವರು ಈ ಹಬ್ಬವನ್ನು ಆಚರಿಸುತ್ತಾರೆ. ಎಲ್ಲರಿಗೂ ಸಿಹಿಗಳನ್ನು ಹಂಚಿ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಶಾಂತಿ ಮತ್ತು ಸೌಹಾರ್ದತೆಯ ಜೊತೆಗೆ ಸಂಪತ್ತನ್ನು ಕರುಣಿಸು ಎಂದು ದೇವಿಯನ್ನು ಪ್ರಾರ್ಥಿಸುತ್ತಾರೆ.

  • Navratri 2025 Day 9: ಸಿದ್ಧಿ ಕರುಣಿಸಿ ಭಕ್ತರನ್ನು ಕಾಪಾಡುವ ಸಿದ್ಧಿದಾತ್ರಿ ದೇವಿ

    Navratri 2025 Day 9: ಸಿದ್ಧಿ ಕರುಣಿಸಿ ಭಕ್ತರನ್ನು ಕಾಪಾಡುವ ಸಿದ್ಧಿದಾತ್ರಿ ದೇವಿ

    ವರಾತ್ರಿಯ ಒಂಬತ್ತನೇ ದಿನ ಅಂದರೆ ಮಹಾನವಮಿಯ ದಿನ ದುರ್ಗಾ ದೇವಿಯ ಒಂಬತ್ತನೇ ರೂಪವಾದ ದೇವಿ ಸಿದ್ಧಿದಾತ್ರಿಗೆ ಸಮರ್ಪಿತವಾಗಿದೆ. ಸಿದ್ಧಿದಾತ್ರಿ ದೇವಿಯು ತನ್ನ ಎರಡು ಕೈಗಳಲ್ಲಿ ಗದಾ ಮತ್ತು ಚಕ್ರವನ್ನು ಹೊಂದಿದ್ದಾಳೆ. ಇನ್ನೆರಡು ಕೈಗಳಲ್ಲಿ ಕಮಲ ಮತ್ತು ಶಂಕು ಹಿಡಿದಿದ್ದಾಳೆ.

    ಸಿದ್ಧಿದಾತ್ರಿಯ ಮಹತ್ವ:
    ಸಿದ್ಧಿದಾತ್ರಿ ದೇವಿಯು ಎಲ್ಲಾ ಸಿದ್ಧಿಗಳ ಮೂಲ. ಆಕೆ ಎಲ್ಲಾ ಎಂಟು ಅಷ್ಟಸಿದ್ಧಿಗಳನ್ನು ಹೊಂದಿದ್ದಾಳೆ. ದೇವಿಯ ಆರಾಧನೆಯು ಸಹಸ್ರಾರ ಚಕ್ರವನ್ನು ಪ್ರಚೋದಿಸುತ್ತದೆ. ಇದನ್ನು ಕಿರೀಟ ಚಕ್ರ ಎಂದೂ ಕರೆಯುತ್ತಾರೆ. ಹಿಂದೂ ಶಾಸನಗಳ ಪ್ರಕಾರ, ಅವಳು ತನ್ನ ಭಕ್ತರಿಗೆ ಅದೃಷ್ಟವನ್ನು ಆಶೀರ್ವದಿಸುತ್ತಾಳೆ ಮತ್ತು ಅವರಿಗೆ ಮೋಕ್ಷವನ್ನು ಒದಗಿಸುತ್ತಾಳೆ.

    ಸಿದ್ಧಿ ಎಂದರೆ ಅಲೌಕಿಕ ಶಕ್ತಿ ಅಥವಾ ಸೃಷ್ಟಿ, ಅಸ್ತಿತ್ವದ ಅಂತಿಮ ಮೂಲದ ಅರ್ಥವನ್ನು ಸಾಧಿಸುವ ಸಾಮರ್ಥ್ಯ. ದಾತ್ರಿ ಎಂದರೆ ಕೊಡುವುದು. ತಾಯಿಯನ್ನು ಪೂಜೆ ಮಾಡಿದರೆ ನಿಜವಾದ ಅಸ್ತಿತ್ವವನ್ನು ಅರಿತುಕೊಳ್ಳುವ ಶಕ್ತಿ ಪ್ರಾಪ್ತಿಯಾಗುತ್ತದೆ. ತಾಯಿಯ ಆರಾಧನೆಯು ನಮ್ಮ ಮನಸ್ಸಿನಲ್ಲಿರುವ ಅಜ್ಞಾನವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಪುರಾಣ ಗ್ರಂಥಗಳ ಪ್ರಕಾರ ಜಗತ್ತಿನ ಎಂಟು ಸಿದ್ಧಿಗಳೆಂದರೆ ಅನಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಕ್ಯಾಮ್ಯ, ಇನ್ಶಿತ್ವ, ವಶಿತ್ವ. ನವದುರ್ಗೆಗಳಲ್ಲಿ ತಾಯಿ ಸಿದ್ಧಿದಾತ್ರಿಯು ಈ ಎಲ್ಲ ಅದ್ಭುತ ಅಂಶಗಳನ್ನು ಹೊಂದಿದ್ದಾಳೆ.

    ಪುರಾಣದ ಕಥೆಗಳ ಪ್ರಕಾರ ತಾಯಿ ಸಿದ್ಧಿದಾತ್ರಿಯಿಂದ ಆಶೀರ್ವಾದ ಪಡೆದ ಶಿವನು ಆಕೆಯಿಂದ ಎಂಟು ಸಿದ್ಧಿಗಳನ್ನು ಪಡೆದ ಎಂದು ಹೇಳಲಾಗುತ್ತದೆ. ಬ್ರಹ್ಮಾಂಡದ ಸೃಷ್ಟಿಯ ವೇಳೆ ಶಿವನು ಪರಾಕಾಷ್ಟೆಯನ್ನು ಆರಾಧಿಸಿದನು. ಎಷ್ಟೇ ಆರಾಧಿಸದರೂ ಶಕ್ತಿ ದೇವತೆ ಪ್ರತ್ಯಕ್ಷಳಾಗಲಿಲ್ಲ. ನಂತರ ಆಕೆಯು ಶಿವನ ಎಡ ಭಾಗದ ಅರ್ಧದಲ್ಲಿ ಕಾಣಿಸಿಕೊಂಡಳು. ಅಂದಿನಿಂದ ಪರಶಿವನು ಅರ್ಧನಾರೀಶ್ವರ ಎಂಬ ಇನ್ನೊಂದು ಹೆಸರಿನಿಂದ ಗುರುತಿಸಿಕೊಂಡನು ಎಂದು ಹೇಳಲಾಗುತ್ತದೆ.

  • Navratri 2025 Day 5: ಈ ದಿನ ಸ್ಕಂದಮಾತೆ ಪೂಜೆ ನೆರವೇರಿಸಿದ್ರೆ ಏನು ಲಾಭ?

    Navratri 2025 Day 5: ಈ ದಿನ ಸ್ಕಂದಮಾತೆ ಪೂಜೆ ನೆರವೇರಿಸಿದ್ರೆ ಏನು ಲಾಭ?

    ಗನ್ಮಾತೆ ದುರ್ಗೆಯ ಐದನೇ ಸ್ವರೂಪವನ್ನು ಸ್ಕಂದಮಾತಾ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ವಾಸ್ತವಿಕವಾಗಿ ಇದು ಜಗತ್ ಕಲ್ಯಾಣ ರೂಪ. ತಾರಕಾಸುರನ ಉಪಟಳದಿಂದ ದೇವತೆಗಳು, ಭೂಮಿಯ ಜನರು ದುಃಖಪೀಡಿತರಾಗಿರುತ್ತಾರೆ. ತಾರಕಾಸುರನು ಬ್ರಹ್ಮನ ವರಬಲದಿಂದ ಕೊಬ್ಬಿರುತ್ತಾನೆ. ಶಿವ ಪಾರ್ವತಿಯರ ಕಂದನಿಂದ ಮಾತ್ರವೇ ತನಗೆ ಮರಣ ಎಂದು ಅವನು ವರ ಪಡೆದಿರುತ್ತಾನೆ. ಹಾಗಾಗಲು ಸಾಧ್ಯವಿಲ್ಲ ಎಂಬುದು ಅವನ ಎಣಿಕೆ. ಆದರೆ ಪಾರ್ವತಿ ಹಾಗೂ ಶಿವನ ಮದುವೆಯಾದ ಬಳಿಕ, ಸ್ಕಂದ ಅಥವಾ ಷಣ್ಮುಖನು ಜನ್ಮ ತಾಳುತ್ತಾನೆ. ಷಣ್ಮುಖನನ್ನೇ ತಮ್ಮ ದೇವಸೈನ್ಯಕ್ಕೆ ದೇವತೆಗಳು ಸೇನಾನಿಗಳಾಗಿಸಿಕೊಳ್ಳುತ್ತಾರೆ. ದೇವಿಯೂ ಸೇರಿದಂತೆ ಸರ್ವರೂ ಈತನಿಗೆ ತಮ್ಮ ಶಕ್ತಿಗಳನ್ನು ನೀಡುತ್ತಾರೆ. ಸ್ಕಂದನು ದೇವಸೇನಾ ಸಮೇತನಾಗಿ ತೆರಳಿ, ತಾರಕಾಸುರನನ್ನು ಘೋರ ಯುದ್ಧದಲ್ಲಿ ಕೊಂದು ಮರಳುತ್ತಾನೆ. ಹೀಗೆ ಜಗತ್ಕಲ್ಯಾಣಕಾರಕನಾದ ಸ್ಕಂದನನ್ನು ಹೆತ್ತು ಕೊಟ್ಟ ಈಕೆ ಸ್ಕಂದಮಾತೆ ಎನಿಸಿಕೊಳ್ಳುತ್ತಾಳೆ.

    ಸ್ಕಂದ ಮಾತೆಯು ಬುಧಗ್ರಹದ ಮೇಲೆ ಅಧಿಪತ್ಯವನ್ನು ಹೊಂದಿರುತ್ತಾಳೆ. ಶುದ್ಧಮನಸ್ಸಿನಿಂದ, ಭಕ್ತಿಯಿಂದ ಯಾರು ಆರಾಧನೆ ಮಾಡುತ್ತಾರೋ ಅವರಿಗೆ ದೇವಿಯು ಹೆಸರು, ಸಂಪತ್ತು ಹಾಗೂ ಸಮೃದ್ಧಿಯನ್ನು ನೀಡುತ್ತಾಳೆ. ಜನ್ಮ ಕುಂಡಲಿಯಲ್ಲಿ ಬುಧನು ಪ್ರತಿಕೂಲ ಸ್ಥಾನದಲ್ಲಿದ್ದರೆ ಉಂಟಾಗುವ ತೊಂದರೆಯನ್ನು ದೇವಿಯು ನಿವಾರಿಸುತ್ತಾಳೆ.

    ಸ್ಕಂದ ಮಾತೆಯ ರೂಪ:
    ಸ್ಕಂದ ಮಾತೆಗೆ ನಾಲ್ಕು ಭುಜಗಳಿದ್ದು, ಒಂದು ಕೈಯಲ್ಲಿ ಸ್ಕಂದನನ್ನು ಹಾಗೂ ಎರಡು ಕೈಯಲ್ಲಿ ಕಮಲವನ್ನು ಹಿಡಿದಿರುತ್ತಾಳೆ. ಇನ್ನೊಂದು ಹಸ್ತವು ಅಭಯ ಮುದ್ರೆಯಲ್ಲಿದ್ದು, ಸದಾ ತನ್ನ ಭಕ್ತರಿಗೆ ಆಶೀರ್ವಾದ ಮಾಡುತ್ತಾಳೆ. ಇವಳ ಶರೀರದ ಬಣ್ಣವೂ ಸಂಪೂರ್ಣವಾಗಿ ಬೆಳ್ಳಗಿದ್ದು, ಕಮಲದ ಆಸನದಲ್ಲಿ ವಿರಾಜಮಾನಳಾಗಿದ್ದಾಳೆ. ಈ ಕಾರಣಕ್ಕಾಗಿ ಇವಳನ್ನು ಪದ್ಮಾಸನಾ ದೇವಿ ಎಂದು ಕರೆಯುತ್ತಾರೆ. ಸಿಂಹವು ಸ್ಕಂದಮಾತೆಯ ವಾಹನವಾಗಿದೆ.

    ಸ್ಕಂದ ಮಾತೆಯ ಪೂಜಾ ವಿಧಾನ:
    ಈ ದಿನ ಸ್ಕಂದಮಾತಾ ದೇವಿಗೆ ಹಸಿರು ಬಣ್ಣ ನೆಚ್ಚಿನದ್ದು ಎಂದು ಪರಿಗಣಿಸಲಾಗುತ್ತದೆ. ಹಸಿರು ಬಣ್ಣವು ಬೆಳವಣಿಗೆ ಮತ್ತು ಸಾಮರಸ್ಯವನ್ನ ಪ್ರತಿನಿಧಿಸುತ್ತದೆ. ಇದು ಶಾಂತಿಯ ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಹೀಗಾಗಿ ಹಬ್ಬದ ಸಮಯದಲ್ಲಿ ಸಮತೋಲನ ಮತ್ತು ಗುಣಪಡಿಸುವಿಕೆಯನ್ನು ಸಾಧಿಸಲು ಬಯಸುವವರಿಗೆ ಪರಿಪೂರ್ಣ ಬಣ್ಣವಾಗಿದೆ.

    ನವರಾತ್ರಿಯ ಐದನೇ ದಿನದಂದು ಸ್ಕಂದಮಾತೆಯ ಪೂಜೆ ಮಾಡಿದರೆ ಮನಃಶುದ್ಧಿಯಾಗುವುದು. ದೇವಿಯು ಬುದ್ಧಿಶಕ್ತಿ ಹೆಚ್ಚುವಂತೆ ಆಶೀರ್ವಾದ ಮಾಡುತ್ತಾಳೆ. ಈ ದೇವಿಯ ಆರಾಧನೆಯಿಂದ ಭಕ್ತರು ಯಶಸ್ಸು ಹಾಗೂ ಖ್ಯಾತಿಯನ್ನು ಪಡೆಯುತ್ತಾರೆ. ಅಲ್ಲದೇ ಯಶಸ್ಸಿನ ಹಾದಿಯಲ್ಲಿ ಮುಂದುವರಿಯುತ್ತಾರೆ.

  • Navratri 2025 Day 3: ಚಂದ್ರಘಂಟಾ ದೇವಿ ಯಾರು? ಪುರಾಣ ಕಥೆ ಏನು ಹೇಳುತ್ತೆ?

    Navratri 2025 Day 3: ಚಂದ್ರಘಂಟಾ ದೇವಿ ಯಾರು? ಪುರಾಣ ಕಥೆ ಏನು ಹೇಳುತ್ತೆ?

    ವರಾತ್ರಿಯ ಮೂರನೇ ದಿನದಂದು ಚಂದ್ರಘಂಟಾ ದೇವಿಯನ್ನು ಆರಾಧಿಸಲಾಗುತ್ತದೆ. ದುರ್ಗಾದೇವಿಯ ಒಂಭತ್ತು ಅವತಾರಗಳಲ್ಲಿ ಚಂದ್ರಘಂಟಾ ಅವತಾರವೂ ಒಂದಾಗಿದೆ. ತನ್ನ ಭಕ್ತರ ಕಷ್ಟಗಳನ್ನು ಕ್ಷಣಮಾತ್ರದಲ್ಲೇ ನಿವಾರಿಸಿ, ಸಂತೋಷ, ಸಮೃದ್ಧಿಯನ್ನು ನೀಡುವ ತಾಯಿಯೇ ಚಂದ್ರಘಂಟಾ ದೇವಿ. ದುರ್ಗಾಮಾತೆಯ ವೈವಾಹಿಕ ಅವತಾರವಾಗಿರುವ ಚಂದ್ರಘಂಟಾ ದೇವಿಯನ್ನು ನವರಾತ್ರಿಯ ಮೂರನೇ ದಿನ ಆರಾಧಿಸಲಾಗುತ್ತದೆ. ದುರ್ಗಾ ಮಾತೆಯ ರೌದ್ರಸ್ವರೂಪವಾಗಿಯೂ ಚಂದ್ರಘಂಟಾ ಕಂಡುಬರುತ್ತಾಳೆ. ದುಷ್ಟಶಕ್ತಿಗಳಿಗೆ ಸಿಂಹಸ್ವಪ್ನವಾಗಿ ತನ್ನ ಭಕ್ತರನ್ನು ಪ್ರೀತಿಯಿಂದ ಸಲಹುವ ತಾಯಿ ಈಕೆ.

    ಚಂದ್ರಘಂಟಾ ಅಂದರೆ ಘಂಟೆಯಾಕಾರದ ಚಂದ್ರನನ್ನು ಮಸ್ತಕದಲ್ಲಿ ಧರಿಸಿದವಳು ಎಂದರ್ಥ. ಚಂದ್ರಘಂಟಾ ದೇವಿಯ ಮೂರನೇ ಕಣ್ಣು ತೆರೆದೇ ಇರುತ್ತದೆ. ಯಾವ ಸಮಯದಲ್ಲಿ ಆದರೂ ದುಷ್ಟ ಶಕ್ತಿಗಳ ನಿಗ್ರಹಕ್ಕೆ ಸಿದ್ಧಳಾಗಿರುವಂತೆ ಕಾಣುತ್ತಾಳೆ. ಚಂದ್ರಘಂಟಾ ದೇವಿಯನ್ನು ಚಂದ್ರಿಕಾ, ರಣಚಂಡಿ ಎಂದೂ ಕರೆಯುತ್ತಾರೆ. ಇವಳಿಗೆ ಹತ್ತು ಕೈಗಳಿದ್ದು, ಹತ್ತೂ ಕೈಗಳಲ್ಲಿ ಶಸ್ತ್ರಾಸ್ತ್ರ ಹಿಡಿದುಕೊಂಡು ಸಿಂಹವಾಹಿನಿಯಾಗಿ ರಾರಾಜಿಸುತ್ತಾಳೆ.

    ಚಂದ್ರಘಂಟಾ ದೇವಿ ಯಾರು?
    ಚಂದ್ರಘಂಟ ದೇವಿಯು ಶುಕ್ರ ಗ್ರಹದ ಅಧಿದೇವತೆಯಾಗಿದ್ದಾಳೆ. ಈಕೆ ಭೂಮಿಯ ಮೇಲಿರುವ ಎಲ್ಲಾ ಜೀವಿಗಳಿಗೂ ಸಂತೋಷವನ್ನು ನೀಡುವ ತಾಯಿ. ಇವಳ ಆರಾಧನೆಯಿಂದ ಸಂಪತ್ತು ಹಾಗೂ ಸಮೃದ್ಧಿಯನ್ನು ಪಡೆಯಬಹುದು. ಈಕೆಯ ಆಶೀರ್ವಾದದಿಂದ ನಿಮ್ಮ ಮನೆಯಲ್ಲಿ ಎಂದಿಗೂ ಆಹಾರ ಕೊರತೆ ಕಂಡುಬರದು.

    ಹಿನ್ನೆಲೆ ಏನು?
    ಹೊಸದಾಗಿ ವಿವಾಹವಾದ ಸ್ವರೂಪವನ್ನು ದುರ್ಗಾಮಾತೆಯು ಚಂದ್ರಘಂಟಾ ರೂಪದಲ್ಲಿ ನೋಡಬಹುದು. ಪಾರ್ವತಿ ದೇವಿಯು ಕಠಿಣವಾದ ತಪಸ್ಸನ್ನು ಮಾಡಿ, ಶಿವನನ್ನು ಮದುವೆಯಾಗುವಲ್ಲಿ ಸಫಲರಾಗುತ್ತಾರೆ. ವಿವಾಹ ಸಂದರ್ಭದಲ್ಲಿ ಕೈಲಾಸದ ಗಣಗಳೊಂದಿಗೆ ಶಿವನು ಪಾರ್ವತಿಯ ಅರಮನೆಯನ್ನು ಪ್ರವೇಶಿಸುತ್ತಾನೆ. ಅತಿ ಭಯಂಕರನಾಗಿ ಕಾಣುತ್ತಿದ್ದ ಶಿವನನ್ನು ನೋಡಿ ಪಾರ್ವತಿ ದೇವಿಯ ತಾಯಿ ಮೂರ್ಛೆಹೋಗುತ್ತಾಳೆ. ಆಗ ಪಾರ್ವತಿಯು ಚಂದ್ರಘಂಟಾ ರೂಪದಲ್ಲಿ ಶಿವನ ಮುಂದೆ ಪ್ರತ್ಯಕ್ಷಳಾಗಿ ಶಿವನು ರಾಜಕುಮಾರನ ರೂಪವನ್ನು ತಾಳಬೇಕಾಗಿ ವಿನಂತಿಸಿಕೊಳ್ಳುತ್ತಾಳೆ. ಹೀಗೆ ಶಿವನು ಸುಂದರ ವರನ ರೂಪವನ್ನು ತಾಳಿದ ನಂತರ ಶಿವ ಪಾರ್ವತಿಯ ಮದುವೆ ನೆರವೇರುತ್ತದೆ.

    ಪೂಜೆಯ ಮಹತ್ವ:
    ನವರಾತ್ರಿಯ ಮೂರನೇ ದಿನ ಚಂದ್ರಘಂಟಾ ದೇವಿಯ ಪೂಜೆ ಮಾಡುವುದರಿಂದ ಮನಸ್ಸಿನಲ್ಲಿರುವ ಭಯವೆಲ್ಲಾ ನಿವಾರಣೆಯಾಗಿ ಜೀವನದಲ್ಲಿ ಯಶಸ್ಸನ್ನು ಸಾಧಿಸಬಲ್ಲೆ ಎಂಬ ವಿಶ್ವಾಸ ಬೆಳೆಯುತ್ತದೆ. ದೇವಿಯ ಮಸ್ತಕದಲ್ಲಿರುವ ಚಂದ್ರಘಂಟಾ ನಾದವು ಋಣಾತ್ಮಕ ಶಕ್ತಿಯನ್ನು ಹೊಂದಿದ್ದು, ದುಷ್ಟಶಕ್ತಿಗಳನ್ನೆಲ್ಲಾ ದೂರ ಮಾಡುವುದು. ಹಾಗಾಗಿ ಚಂದ್ರಘಂಟಾ ದೇವಿಯ ಪೂಜೆಯನ್ನು ಮಾಡಿದರೆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳೆಲ್ಲಾ ದೂರವಾಗಿ ಮನೆಶುದ್ಧಿಯಾಗುವುದು.

    ಯಾರು ಜೀವನದಲ್ಲಿ ಭರವಸೆಯನ್ನು ಕಳೆದುಕೊಂಡು ವ್ಯವಹಾರದಲ್ಲಿ ಹೊಸ ಹಾದಿಯನ್ನು ತುಳಿಯಲು ಇಚ್ಛಿಸುತ್ತಾರೋ ಅವರು ಚಂದ್ರಘಂಟಾ ದೇವಿಯ ಪೂಜೆ ಮಾಡಿದರೆ ಅವರು ಸಾಗುವ ದಾರಿಯಲ್ಲಿ ಬೆಳಕನ್ನು ಚೆಲ್ಲಿ, ಯಶಸ್ಸಿನ ಮೆಟ್ಟಿಲೇರಲು ಸಹಕರಿಸುತ್ತಾಳೆ ತಾಯಿ ಚಂದ್ರಘಂಟಾ ದೇವಿ.

  • ಮಹಾಶಿವರಾತ್ರಿ  ಹಬ್ಬದ ದಿನ ಉಪವಾಸ ಏಕೆ ಮಾಡ್ತಾರೆ?

    ಮಹಾಶಿವರಾತ್ರಿ ಹಬ್ಬದ ದಿನ ಉಪವಾಸ ಏಕೆ ಮಾಡ್ತಾರೆ?

    ಇಂದು ಮಹಾಶಿವರಾತ್ರಿ ಹಬ್ಬವನ್ನು ಭಾರತಾದ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತದೆ.  ಸೋಮವಾರ ಶಿವನಿಗೆ ಬಹಳ ಇಷ್ಟವಾದ ದಿನ. ಆದರೆ ಈ ಬಾರಿ ಹಬ್ಬ ಮಂಗಳವಾರ ಬಂದಿದೆ.

    ಶಿವನ ಪೂಜೆ ಮಾಡುವುದು ಹೇಗೆ:
    ಮಹಾಶಿವರಾತ್ರಿ ದಿನ ಹಸುವಿನ ತುಪ್ಪದ ಜೊತೆ ಕರ್ಪೂರವನ್ನು ಬೆರೆಸಿ ಮೃತ್ಯುಂಜಯ ಮಂತ್ರವನ್ನು ಪಠಿಸಬೇಕು. ಈ ದಿನ ರುದ್ರಾಕ್ಷಿಯ ಮಾಲೆ ಧರಿಸಿದರೆ ಒಳ್ಳೆಯದಾಗುತ್ತದೆ ಎಂದು ಹೇಳಲಾಗುತ್ತದೆ. ಹಸಿ ಹಾಲಿನಲ್ಲಿ ಗಂಗಾ ಜಲವನ್ನು ಬೆರೆಸಿ ಶಿವನಿಗೆ ಅಭಿಷೇಕ ಮಾಡಬೇಕು. ನಂತರ ಚಂದನ, ಹೂ, ದೀಪ ಹಾಗೂ ಧೂಪ ಹಚ್ಚಿ ಪೂಜೆ ಮಾಡಬೇಕು.

    ವ್ರತದ ಮಹತ್ವ:
    ಮಹಾಶಿವರಾತ್ರಿ ಹಬ್ಬದಂದು ವ್ರತ ಮಾಡುವುದರಿಂದ ಪಾಪ ದೂರ ಆಗುತ್ತದೆ ಹಾಗೂ ಆತ್ಮ ಶುದ್ಧ ಆಗುತ್ತದೆ. ಎಲ್ಲೆಲ್ಲಿ ಶಿವಲಿಂಗವನ್ನು ಸ್ಥಾಪಿಸಲಾಗುತ್ತದೋ ಅಲ್ಲಿ ಶಿವ ಖಂಡಿತವಾಗಿಯೂ ಇರುತ್ತಾನೆ ಎಂಬುದು ಜನರ ನಂಬಿಕೆ. ಮಹಾಶಿವರಾತ್ರಿ ಇಡೀ ದಿನ ಶ್ರದ್ಧೆಯಿಂದ ವ್ರತ ಮಾಡಿದರೆ, ಶಿವ ಎಲ್ಲ ಕಷ್ಟಗಳನ್ನು ದೂರ ಮಾಡುತ್ತಾನೆ ಎನ್ನುವ ನಂಬಿಕೆಯಿದೆ. ಮಹಾಶಿವರಾತ್ರಿ ದಿನ ಮಾಡುವ ವ್ರತ ಪ್ರಭಾವಶಾಲಿ ಎಂದು ಹಿರಿಯರು ಹೇಳುತ್ತಾರೆ.

    ಶಿವನನ್ನು ಪ್ರಸನ್ನಗೊಳಿಸಲು ಮಹಾಶಿವರಾತ್ರಿ ಇಡೀ ದಿನ ಜನರು ಉಪವಾಸವಿರುತ್ತಾರೆ. ಕೆಲವರು ಇಡೀ ದಿನ ಅನ್ನ ಹಾಗೂ ನೀರು ಸೇವಿಸದೇ ಉಪವಾಸ ಮಾಡಿದರೆ, ಮತ್ತೆ ಕೆಲವರು ಹಣ್ಣು, ಡ್ರೈ ಫ್ರೂಟ್ಸ್ ಮಾತ್ರ ಸೇವಿಸುತ್ತಾರೆ.

  • ದೀಪಾವಳಿ ಹಬ್ಬದ ಆಚರಣೆ ಹಾಗೂ ಅದರ ಮಹತ್ವ ಏನು?

    ದೀಪಾವಳಿ ಹಬ್ಬದ ಆಚರಣೆ ಹಾಗೂ ಅದರ ಮಹತ್ವ ಏನು?

    ತ್ತಲೆಯನ್ನು ಹೋಗಲಾಡಿಸಿ ಮನೆ ಹಾಗೂ ಮನದ ಕತ್ತಲೆಯನ್ನು ನಿವಾರಿಸಿ ಬೆಳಕನ್ನು ಉಂಟು ಮಾಡುವ ಹಬ್ಬವೇ ದೀಪಾವಳಿ. ಮುಂಗಾರು ಬೆಳೆ ಕೊಯ್ಲಿಗೆ ಬರುವ ಸಮಯದಲ್ಲಿ ಈ ಹಬ್ಬ ಬರುವುದು ವಿಶೇಷ. ಕೆಲ ಕಡೆ ಆಶ್ವಯುಜ ಮಾಸದ ಕೊನೆಯ ಎರಡು ದಿನಗಳು ಹಾಗೂ ಕಾರ್ತಿಕ ಮಾಸದ ಮೊದಲನೆಯ ದಿನ ಈ ಹಬ್ಬವನ್ನು ಆಚರಿಸಿದರೆ ಇನ್ನು ಕೆಲ ಕಡೆ ಮುಂದಿನ ಎರಡು ದಿನಗಳನ್ನು ಸೇರಿಸಿ 5 ದಿನ ವಿಜೃಂಭಣೆಯಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ.

    ಹಿಂದೂ ಕ್ಯಾಲೆಂಡರ್ ಪ್ರಕಾರ ಈ ಹಬ್ಬ ಕಾರ್ತಿಕ ಮಾಸದಲ್ಲಿ ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆ ಕೆಲವರು ಮನೆಗೆ ಹೊಸ ವಸ್ತುಗಳನ್ನು ತರುತ್ತಾರೆ.

    ದೀಪಾವಳಿ ಹಬ್ಬದ ಮಹತ್ವ:
    ದೀಪಾವಳಿ ‘ದೀಪಾ’ ಎಂದರೆ ಮಣ್ಣಿನ ದೀಪ ಹಾಗೂ ‘ವಲಿ’ ಎಂದು ಯಾವುದಾದರು ವಸ್ತು ಸರಣಿಯಾಗಿಯಿಡುವುದು. ದೀಪಾವಳಿಯ ಅಮವಾಸ್ಯೆಯನ್ನು ದೀವಾಳಿ ಅಮಾವಾಸ್ಯೆಯೆಂದು ಕರೆಯುತ್ತಾರೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಆ ದಿನ ಕತ್ತಲೆಯಿಂದ ಕೂಡಿರುತ್ತದೆ. ದೀಪಾವಳಿ ಹಬ್ಬವನ್ನು ಹಿಂದೂಗಳ ಹಬ್ಬ ಮಾತ್ರ ಆಗಿರದೇ ಈ ಹಬ್ಬವನ್ನು ಜೈನ್, ಸಿಖ್‍ಗಳು ಹಾಗೂ ಬೌದ್ಧರು ಕೂಡ ಈ ಹಬ್ಬವನ್ನು ಆಚರಿಸುತ್ತಾರೆ.

    ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ ದೀಪಾವಳಿಗೆ ಅದರದ್ದೇ ಆದ ಮಹತ್ವವಿದೆ ಹಾಗೂ ಅವರದ್ದೆ ಆದ ಕೆಲವು ಸಂಪ್ರದಾಯಗಳು ಇರುತ್ತದೆ. ಕೆಲವರು ತಮ್ಮ ಸಂಪ್ರದಾಯಕ್ಕೆ ತಕ್ಕಂತೆ ತಮ್ಮ ಹಬ್ಬವನ್ನು ಆಚರಿಸುತ್ತಾರೆ. ಆದರೆ ಎಲ್ಲರ ಪ್ರಕಾರ ದೀಪಾವಳಿ ಹಬ್ಬ ರಾಮಾಯಣದ ಕಥೆಗೆ ಹೊಂದಿಕೊಂಡಿದೆ.

    ರಾವಣನನ್ನು ಸಂಹಾರ ಮಾಡಿ ರಾಮ, ಸೀತಾ, ಲಕ್ಷ್ಮಣ ಹಾಗೂ ಹನುಮಂತ ಲಂಕೆಯಿಂದ ಆಯೋಧ್ಯೆಗೆ ಹಿಂದಿರುಗಿದ ದಿನ. ಅಲ್ಲದೇ ರಾಮ ಪಟ್ಟಾಭಿಷೇಕಗೊಂಡ ದಿನ. ಹಾಗಾಗಿ ಜನರು ಆ ದಿನ ಆನಂದದಿಂದ ದೀಪಗಳನ್ನು ಬೆಳಗಿಸಿ ರಾಮನನ್ನು ಸ್ವಾಗತಿಸಿದ್ದರು. ಅಲ್ಲದೇ ಪಾಂಡವರು ಕೂಡ ಅದೇ ದಿನ ತಮ್ಮ ಅಜ್ಞಾತವಾಸವನ್ನು ಮುಗಿಸಿದ ದಿನ ಎನ್ನುವ ಕಥೆಯು ಇದೆ.

    ದೀಪಾವಳಿಯ ಐದು ಹಬ್ಬಗಳು ಹಾಗೂ ಅದರ ಮಹತ್ವಗಳು;

    1. ದನ್ತೇರಸ್: ದನ್ತೇರಸ್ ಹಬ್ಬವನ್ನು ನವೆಂಬರ್ 5ರಂದು ಆಚರಿಸುತ್ತಾರೆ. ಈ ದಿನ ಜನರು ತಮ್ಮ ಮನೆಗೆ ಅಡುಗೆ ಪಾತ್ರೆಗಳು, ಚಿನ್ನದ ನಾಣ್ಯ ಹಾಗೂ ಆಭರಣಗಳನ್ನು ಖರೀದಿಸಲು ಹೋಗುತ್ತಾರೆ. ಅಲ್ಲದೇ ತಮ್ಮ ಮನೆ ಹಾಗೂ ಕಚೇರಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಮಣ್ಣಿನ ದೀಪವನ್ನು ಹಚ್ಚಿ ಅಲಂಕರಿಸುತ್ತಾರೆ.

    2. ನರಕ ಚತುರ್ದಶಿ: ನರಕ ಚತುರ್ದಶಿಯನ್ನು ಚೋಟಾ ದೀಪಾವಳಿ ಎಂದು ಕರೆಯುತ್ತಾರೆ. ನವೆಂಬರ್ 6 ರಂದು ಈ ಹಬ್ಬವನ್ನು ಆಚರಿಸುತ್ತಾರೆ. ಶ್ರೀಕೃಷ್ಣನು ನರಕಾಸುರನನ್ನು ಕೊಂದ ನೆನಪನ್ನು ಈ ಹಬ್ಬ ತರುತ್ತದೆ. ನರಕಾಸುರನನ್ನು ಆಶ್ವಯುಜ ಕೃಷ್ಣ ಚತುರ್ದಶಿಯ ಕತ್ತಲೆಯಲ್ಲಿ ಕೃಷ್ಣ ಸಂಹಾರ ಮಾಡುತ್ತಾನೆ. ಈ ಹಬ್ಬದಂದು ಸಿಹಿ ತಿನುಸುಗಳನ್ನು ಖರೀದಿಸಿ ಕುಟುಂಬದವರಿಗೆ, ಸ್ನೇಹಿತರಿಗೆ ಹಾಗೂ ಸಂಬಂಧಿಕರಿಗೆ ಹಂಚುತ್ತಾರೆ. ಸಿಹಿ ತಯಾರಿಸುವವರು ನರಕ ಚತುರ್ದಶಿದಂದು ಹೆಚ್ಚು ಸಮಯ ಕೆಲಸ ಮಾಡುತ್ತಾರೆ.

    3. ದೀಪಾವಳಿ: ದೀಪಾವಳಿಯಂದು ಲಕ್ಷ್ಮಿ ಪೂಜೆ ಮಾಡುತ್ತಾರೆ. ಲಕ್ಷ್ಮೀ ಎಂದರೆ ಕೇವಲ ಧನಾಧಿದೇವತೆ ಎಂಬ ಪ್ರತೀತಿಯಿದೆ. ಲಕ್ಷ್ಮೀ ಕೇವಲ ಧನಲಕ್ಷ್ಮೀ ಮಾತ್ರವಲ್ಲ. ಸಕಲ ಶ್ರೇಯಸ್ಸುಗಳಿಗೆ ಲಕ್ಷ್ಮೀ ಕಾರಣ ಎಂದು ಹೇಳುತ್ತಾರೆ. ಈ ಹಬ್ಬದಂದು ಎಲ್ಲರೂ ತಮ್ಮ ಕುಟುಂಬದವರೊಂದಿಗೆ ಸೇರಿ ಒಬ್ಬರಿಗೊಬ್ಬರು ಸಿಹಿ ಹಂಚಿ ಉಡುಗೊರೆ ನೀಡುತ್ತಾರೆ.

    4. ಗೋಪೂಜೆ: ದೀಪಾವಳಿಯ ನಾಲ್ಕನೇ ದಿನ ಗೋ ಪೂಜೆ ಮಾಡುತ್ತಾರೆ. ಈ ದಿನದಂದು ಗೋವುಗಳನ್ನು ಅಲಂಕರಿಸಿ, ಹಾಲು ಹಿಡಿಯುವ ಪಾತ್ರೆ, ಕುಡಗೋಲುಗಳನ್ನು ಪೂಜಿಸಿ, ಗೋಶಾಲೆಯನ್ನು ದೀಪದಿಂದ ಬೆಳಗಿ, ಹಸುಗಳಿಗೆ ಅಕ್ಕಿ, ಬೆಲ್ಲ, ತಿಂಡಿ ತಿನಿಸುಗಳನ್ನು ನೀಡುತ್ತಾರೆ. ಉತ್ತರ ಭಾರತದಲ್ಲಿ ಅಥವಾ ಕೆಲವರ ಸಂಪ್ರದಾಯದಲ್ಲಿ ಈ ದಿನದಂದು ಪತಿ ತಮ್ಮ ಪತ್ನಿಯರಿಗೆ ಉಡುಗೊರೆ ನೀಡುತ್ತಾರೆ. ಅಲ್ಲದೇ ಹೊಸದಾಗಿ ಮದುವೆಯಾದ ಜೋಡಿಯನ್ನು ಮನೆಗೆ ಔತಣಕ್ಕೆ ಕರೆದು ಉಡುಗೊರೆ ನೀಡಲಾಗುತ್ತದೆ.

    5. ಬಾಯ್ ದೂಜ್: ಬಾಯ್ ದೂಜ್ ಅನ್ನು ಬಯ್ಯಾ ದೂಜ್ ಎಂದು ಕರೆಯುತ್ತಾರೆ. ದೀಪಾವಳಿಯ ಐದನೇ ದಿನದಂದು ಈ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬ ಅಣ್ಣ-ತಂಗಿಯರ ಹಬ್ಬವಾಗಿದ್ದು, ಅಣ್ಣಂದಿರು ತಮ್ಮ ತಂಗಿಯ ಮನೆಗೆ ಊಟಕ್ಕೆ ಹೋಗುತ್ತಾರೆ. ಅಲ್ಲದೇ ತಿಲಕ ಶಾಸ್ತ್ರ ಮಾಡುತ್ತಾರೆ. ಸಹೋದರಿಯರು ತಮ್ಮ ಸಹೋದರನಿಗೆ ತಿಲಕ ಶಾಸ್ತ್ರ ಮಾಡುತ್ತಾರೆ. ಇದನ್ನು ಮತ್ತೊಂದು ರಕ್ಷಾ ಬಂಧನ ಎಂದೂ ಕರೆಯಲಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv