Tag: ಮಸ್ಕಿ

  • ಉಪಚುನಾವಣೆ ಮತ ಪ್ರಚಾರ – ಮಸ್ಕಿಯಲ್ಲಿ ಬಿಜೆಪಿ ಬೃಹತ್ ಸಮಾವೇಶ

    ಉಪಚುನಾವಣೆ ಮತ ಪ್ರಚಾರ – ಮಸ್ಕಿಯಲ್ಲಿ ಬಿಜೆಪಿ ಬೃಹತ್ ಸಮಾವೇಶ

    – ಸಿಂಧನೂರಿನಲ್ಲಿ ವಾಸ್ತವ್ಯ ಹೂಡಲಿರುವ ಸಿಎಂ

    ರಾಯಚೂರು: ಮಸ್ಕಿಯಲ್ಲಿ ಉಪಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭಾಗವಹಿಸಲಿರುವ ಬಿಜೆಪಿ ಬೃಹತ್ ಬಹಿರಂಗ ಸಮಾವೇಶಕ್ಕೆ ಅಂತಿಮ ಸಿದ್ಧತೆಗಳು ಭರದಿಂದ ಸಾಗಿವೆ. ಸಮಾವೇಶಕ್ಕೆ ಬೃಹತ್ ವೇದಿಕೆ ಸಜ್ಜಾಗಿದ್ದು ಪಕ್ಷದ ನಾಯಕರುಗಳ ದಂಡೇ ಮಸ್ಕಿಗೆ ಆಗಮಿಸಲಿದೆ.

    ಇಂದು ಸಂಜೆ 4:10ಕ್ಕೆ ಜಿಲ್ಲೆಯ ಸಿಂಧನೂರಿನ ಸರ್ಕ್ಯೂಟ್ ಹೌಸ್ ಹೆಲಿಪ್ಯಾಡ್‍ಗೆ ಹೆಲಿಕಾಪ್ಟರ್ ಮೂಲಕ ಆಗಮಿಸಲಿರುವ ಬಿಎಸ್‍ವೈ, ರಸ್ತೆಯ ಮೂಲಕ ಮಸ್ಕಿಗೆ ತೆರಳಲಿದ್ದಾರೆ. ಸಂಜೆ 4:50ಕ್ಕೆ ಜಿಲ್ಲಾ ಬಿಜೆಪಿಯಿಂದ ಆಯೋಜಿಸಿರುವ ಬಹಿರಂಗ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಬಳಿಕ ಸಿಂಧನೂರಿನಲ್ಲಿ ರಾತ್ರಿ ವಾಸ್ತವ್ಯ ಹೂಡಿ ಮಾರ್ಚ್ 21 ರ ಬೆಳಗ್ಗೆ 9:30ಕ್ಕೆ ಹೆಲಿಕ್ಯಾಪ್ಟರ್ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ. ಬೃಹತ್ ಬಹಿರಂಗ ಸಮಾವೇಶದಲ್ಲಿ ಬಿಜೆಪಿ ಅಭ್ಯರ್ಥಿ ಪರ ಯಡಿಯೂರಪ್ಪ ಮತಯಾಚಿಸಲಿದ್ದಾರೆ.

    ಸಮಾವೇಶಕ್ಕೆ ಸಕಲ ಸಿದ್ಧತೆಗಳು ನಡೆದಿದ್ದು ಕಾರ್ಯಕ್ರಮದಲ್ಲಿ ಸಿಎಂ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಡಿಸಿಎಂ ಗೋವಿಂದ ಕಾರಜೋಳ, ಡಿಸಿಎಂ ಲಕ್ಷ್ಮಣ ಸವದಿ, ಸಚಿವ ಶ್ರೀರಾಮುಲು, ಕೆ.ಎಸ್.‌ಈಶ್ವರಪ್ಪ, ಮಸ್ಕಿ ಉಪಚುನಾವಣೆ ಉಸ್ತುವಾರಿ ಬಿ.ವೈ.ವಿಜಯೇಂದ್ರ, ರವಿಕುಮಾರ್ ಸೇರಿ ಇನ್ನೂ ಹಲವಾರು ಬಿಜೆಪಿ ಮುಖಂಡರು ಭಾಗವಹಿಸಲಿದ್ದಾರೆ.

    ಮಸ್ಕಿ ಪಟ್ಟಣದ ಪೊಲೀಸ್ ಠಾಣೆ ಬಳಿಯ ಮೈದಾನದಲ್ಲಿ ಬೃಹತ್ ವೇದಿಕೆ ಸಜ್ಜಾಗಿದೆ. ಇದೇ ವೇದಿಕೆಯಲ್ಲಿ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ತಮ್ಮ ನೂರಾರು ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಬಹಿರಂಗ ಸಮಾವೇಶದಲ್ಲಿ 30 ಸಾವಿರ ಜನ ಸೇರುವ ನಿರೀಕ್ಷೆಯಿದೆ. ಕೋವಿಡ್ ನಿಯಮ ಪಾಲನೆ ಮಾಡಿ ಸಮಾವೇಶ ಮಾಡಲು ಸಿದ್ಧತೆ ಮಾಡಿಕೊಂಡಿರುವುದಾಗಿ ಬಿಜೆಪಿ ಸಂಭಾವ್ಯ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ತಿಳಿಸಿದ್ದಾರೆ.

  • ಬೆಳಗಾವಿ, ಮಸ್ಕಿ, ಬಸವಕಲ್ಯಾಣಕ್ಕೆ ಏ.17 ರಂದು ಉಪ ಚುನಾವಣೆ

    ಬೆಳಗಾವಿ, ಮಸ್ಕಿ, ಬಸವಕಲ್ಯಾಣಕ್ಕೆ ಏ.17 ರಂದು ಉಪ ಚುನಾವಣೆ

    ನವದೆಹಲಿ: ಬೆಳಗಾವಿ ಲೋಕಸಭಾ ಕ್ಷೇತ್ರ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್‌ 17 ರಂದು ಉಪಚುನಾವಣೆ ನಡೆಯಲಿದೆ.

    ಕೇಂದ್ರ ಚುನಾವಣಾ ಆಯೋಗ ಇಂದು ದಿನಾಂಕವನ್ನು ಪ್ರಕಟಿಸಿದೆ. ಮೂರು ಕ್ಷೇತ್ರಗಳ ಮತದಾನ ಮೇ 2 ರಂದು ನಡೆಯಲಿದೆ. ಮಾರ್ಚ್‌ 30 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದು, ಏಪ್ರಿಲ್‌ 4 ನಾಮಪತ್ರ ಹಿಂತೆಗೆತಕ್ಕೆ ಕೊನೆಯ ದಿನವಾಗಿದೆ.

    ಬೆಳಗಾವಿ ಲೋಕಸಭಾ ಸದಸ್ಯರಾಗಿದ್ದ ರೈಲ್ವೇ ಖಾತೆಯ ರಾಜ್ಯ ಸಚಿವ ಸುರೇಶ್‌ ಅಂಗಡಿ ಕೊರೊನಾದಿಂದ ಮೃತಪಟ್ಟಿದ್ದರಿಂದ ಕ್ಷೇತ್ರ ತೆರವಾಗಿತ್ತು.

    ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ನಾರಾಯಣರಾವ್ ಅವರು ಕೋವಿಡ್‌ ಹಾಗೂ ಬಹುಅಂಗಾಂಗ ವೈಫಲ್ಯದಿಂದ 2020ರ ಸೆಪ್ಟೆಂಬರ್‌ 24 ರಂದು ನಿಧನರಾಗಿದ್ದರು.

    ಮಸ್ಕಿಗೆ ಯಾಕೆ?
    ಕಾಂಗ್ರೆಸ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಶಾಸಕ ಪ್ರತಾಪಗೌಡ ಪಾಟೀಲ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಆದರೆ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಪರಾಜಿತ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಹೈಕೋರ್ಟ್‌ನಲ್ಲಿ  ಪ್ರತಾಪಗೌಡ ಬಿಜೆಪಿಗೆ ಸೇರ್ಪಡೆಯಾಗುವ ಮೊದಲೇ ತಕರಾರು ಅರ್ಜಿ ಸಲ್ಲಿಸಿದ್ದರು.

    ಕಾಂಗ್ರೆಸ್‌ ಅಭ್ಯರ್ಥಿ ಪ್ರತಾಪಗೌಡ ಪಾಟೀಲ 218 ಮತಗಳ ಅಂತರದಿಂದ ಗೆದ್ದಿದ್ದಾರೆ. ಪ್ರತಾಪಗೌಡ ಪಾಟೀಲ ಅವರ ಪುತ್ರಿ ಅಮೆರಿಕದಲ್ಲಿದ್ದರೂ ಅವರ ಹೆಸರಿನಲ್ಲಿ ಮತ್ತು ಮರಣ ಹೊಂದಿದವರ ಹೆಸರಿನಲ್ಲಿ ಮತದಾನವಾಗಿವೆ. ಒಬ್ಬ ಮತದಾರನ ಹೆಸರಿನಲ್ಲಿ ಹಲವು ಮತಗಳನ್ನು ಹಾಕಲಾಗಿದೆ. ಈ ಫಲಿತಾಂಶ ರದ್ದುಪಡಿಸಬೇಕು ಎಂದು ಆರೋಪಿಸಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಬಸನಗೌಡ ತುರ್ವಿಹಾಳ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಾಪಸ್‌ ಪಡೆದ ಹಿನ್ನೆಲೆಯಲ್ಲಿ ಈಗ ಉಪಚುನಾವಣಾ ದಿನಾಂಕ ಪ್ರಕಟವಾಗಿದೆ.

  • ಉಪಸಮರಕ್ಕೆ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು – ನಾಲ್ಕು ಕ್ಷೇತ್ರ, ಯಾರು? ಎಲ್ಲಿಂದ ಸ್ಪರ್ಧೆ?

    ಉಪಸಮರಕ್ಕೆ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು – ನಾಲ್ಕು ಕ್ಷೇತ್ರ, ಯಾರು? ಎಲ್ಲಿಂದ ಸ್ಪರ್ಧೆ?

    ಬೆಂಗಳೂರು: ಮೂರು ವಿಧಾನಸಭಾ ಕ್ಷೇತ್ರ ಮತ್ತು ಒಂದು ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯಬೇಕಿದ್ದು, ಶನಿವಾರ ಅಥವಾ ಮುಂದಿನ ವಾರ ಎಲೆಕ್ಷನ್ ದಿನಾಂಕ ಘೋಷಣೆ ಆಗುವ ಸಾಧ್ಯತೆಗಳಿವೆ. ಹಾಗಾಗಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳ ಆಯ್ಕೆಗಾಗಿ ಕಸರತ್ತು ಆರಂಭಿಸಿದ್ದು, ಮತ್ತೊಂದು ಕಡೆ ಟಿಕೆಟ್ ಆಕಾಂಕ್ಷಿಗಳು ಲಾಬಿಗೆ ಮುಂದಾಗಿದ್ದಾರೆ. ಕೆಲವರು ದೆಹಲಿ ಮಟ್ಟದಲ್ಲಿಯೂ ಲಾಬಿಗೆ ಮುಂದಾಗಿ, ಬಹಿರಂಗವಾಗಿಯೇ ತಾವು ಟಿಕೆಟ್ ಆಕಾಂಕ್ಷಿಗಳೆಂದು ಹೇಳುತ್ತಿದ್ದಾರೆ.

    2020ರಲ್ಲಿ ನಡೆದ ಎರಡು ಕ್ಷೇತ್ರಗಳಿಗೆ (ಆರ್.ಆರ್.ನಗರ ಮತ್ತು ಶಿರಾ) ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದು ಬೀಗಿತ್ತು. ಗೆಲುವಿನ ಹುಮ್ಮಸ್ಸಿನಲ್ಲಿರುವ ಕಮಲ ಪಾಳಯ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಧ್ವಜ ಹಾರಿಸಲು ಭರ್ಜರಿ ಸಿದ್ಧತೆ ನಡೆಸಿಕೊಂಡಿದೆ. ಇನ್ನು ಕಾಂಗ್ರೆಸ್‍ಗೆ ತನ್ನ ಕ್ಷೇತ್ರಗಳಾಗಿರುವ ಮಸ್ಕಿ ಮತ್ತು ಬಸವಕಲ್ಯಾಣ ಉಳಿಸಿಕೊಳ್ಳುವ ಸವಾಲು ಒಂದೆಡೆಯಾದ್ರೆ, ಬಿಜೆಪಿ ಪ್ರಾಬಲ್ಯದ ಬೆಳಗಾವಿ ಹಾಗೂ ಜೆಡಿಎಸ್ ಶಾಸಕ ಎಂ.ಸಿ.ಮನಗೂಳಿ ಅವರ ನಿಧನದಿಂದ ತೆರವಾದ ಸಿಂದಗಿಯನ್ನ ಕೈ ವಶ ಮಾಡಿಕೊಂಡು ಇಬ್ಬರಿಗೂ ತಿರುಗೇಟು ನೀಡಲು ಕೈ ಪಾಳಯ ತಂತ್ರ ರೂಪಿಸುತ್ತಿದೆ. ಇತ್ತ ಬೈ ಎಲೆಕ್ಷನ್ ನಿಂದ ದೂರ ಉಳಿಯುವ ಮಾತುಗಳನ್ನಾಡುತ್ತಿರುವ ದಳಪತಿಗಳಿಗೆ ತನ್ನ ಕ್ಷೇತ್ರ ಸಿಂದಗಿಯನ್ನ ಉಳಿಸಿಕೊಳ್ಳೋದು ಗೌರವದ ಪ್ರಶ್ನೆಯಾಗಿದೆ. ಹಾಗಾಗಿ ಮೂರು ಪಕ್ಷಗಳು ಚುನಾವಣೆಗೆ ಸಿದ್ಧತೆ ನಡೆಸುತ್ತಿವೆ.

    ಸಿಂದಗಿ, ಬಸವಕಲ್ಯಾಣ, ಮಸ್ಕಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ, ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಭೂಮಿಕೆ ಸಿದ್ಧವಾಗಿದೆ. ಯಾರಿಗೆ ಯಾವ ಕ್ಷೇತ್ರದ ಟಿಕೆಟ್ ನೀಡಬೇಕು ಎಂಬುದರ ಬಗ್ಗೆ ಪಕ್ಷಗಳಲ್ಲಿ ಬಿಸಿ ಬಿಸಿ ಚರ್ಚೆಗಳು ನಡೆಯಯುತ್ತಿವೆ.

    ಯಾರಿಗೆ ಯಾವ ಕ್ಷೇತ್ರದ ಟಿಕೆಟ್ ಸಾಧ್ಯತೆ?:
    ಸಿಂದಗಿ ಕ್ಷೇತ್ರದ ಮೇಲೆ ಡಿಸಿಎಂ ಲಕ್ಷ್ಮಣ ಸವದಿ ಕಣ್ಣು ಹಾಕಿದ್ದಾರೆ ಎನ್ನಲಾಗ್ತಿದೆ. ಇತ್ತ ಸ್ಥಳೀಯ ನಾಯಕ ರಮೇಶ್ ಭೂಸನೂರು ಸಹ ಸಿಂದಗಿ ಕ್ಷೇತ್ರದ ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಬಿಜೆಪಿಯಲ್ಲಿ ಲಕ್ಷ್ಮಣ ಸವದಿ ವರ್ಸಸ್ ರಮೇಶ್ ಭೂಸನೂರು ಎಂಬಂತೆ ಬಿಂಬಿತವಾಗಿದೆ. ಜೆಡಿಎಸ್ ನಿಂದ ಮನಗೂಳಿ ಅವರ ಪುತ್ರನಿಗೆ ಟಿಕೆಟ್ ಕೊಡುವ ಬಗ್ಗೆ ಚರ್ಚೆ ನಡೆದಿದೆ. ಕಾಂಗ್ರೆಸ್ ನಿಂದ ಮನಗೂಳಿ ಪುತ್ರನ ಆಪರೇಷನ್ ತಂತ್ರದ ಪ್ರಯತ್ನ ನಡೆದಿದೆ ಎನ್ನಲಾಗುತ್ತಿದೆ.

    ಮಸ್ಕಿಯಲ್ಲಿ ಪ್ರತಾಪ್ ಗೌಡ ಪಾಟೀಲ್ ಬಿಜೆಪಿ ಅಭ್ಯರ್ಥಿಯಾದ್ರೆ, ಕಾಂಗ್ರೆಸ್ ನಿಂದ ಆರ್.ಬಸನಗೌಡ ತುರುವಿಹಾಳ ಸ್ಪರ್ಧಿಸೋದು ಖಚಿತವಾಗಿದೆ. ಆದ್ರೆ ಮಸ್ಕಿಯಲ್ಲಿ ಇಬ್ಬರು ಅಭ್ಯರ್ಥಿಗಳು ಕಳೆದ ಬಾರಿ ಸ್ಪರ್ಧೆ ಮಾಡಿದ್ದರು. ಆದ್ರೆ ಈ ಬಾರಿ ಪಕ್ಷಗಳು ಅದಲು ಬದಲು ಆಗಿದೆ. ಜೆಡಿಎಸ್ ನಿಂದ ಅಭ್ಯರ್ಥಿ ಹಾಕುವುದು ಅನುಮಾನ ಎಂಬ ಮಾತುಗಳು ಕೇಳಿ ಬರುತ್ತಿವೆ.

    ಬಸವಕಲ್ಯಾಣದಲ್ಲೂ ಬಿಜೆಪಿಯಿಂದ ಮೂವರು, ಕಾಂಗ್ರೆಸ್ ನಿಂದ ನಾರಾಯಣ್ ರಾವ್ ಪುತ್ರನ ಸ್ಪರ್ಧೆ ಬಗ್ಗೆ ಸರ್ಕಸ್ ನಡೆದಿದ್ದು, ಅಂತಿಮವಾಗಿಲ್ಲ. ಬಸವಕಲ್ಯಾಣದ ಅಖಾಡದಿಂದಲೂ ಜೆಡಿಎಸ್ ದೂರ ಉಳಿಯುವ ಸಾಧ್ಯತೆಗಳಿವೆ. ಈ ನಡುವೆ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ದಿವಂಗತ ಸುರೇಶ್ ಅಂಗಡಿ ಪುತ್ರಿ ಶ್ರದ್ಧಾ, ಆರ್‍ಎಸ್‍ಎಸ್ ಹಿನ್ನೆಲೆವುಳ್ಳ ವೈದ್ಯ ರವಿ ಪಾಟೀಲ್ ನಡುವೆ ಪೈಪೋಟಿ ಇದ್ರೆ, ಕಾಂಗ್ರೆಸ್ ನಿಂದ ಸತೀಶ್ ಜಾರಕಿಹೊಳಿ ಅವರನ್ನ ನಿಲ್ಲಿಸುವ ಪ್ರಯತ್ನ ನಡೆಯುತ್ತಿದೆ.

    ಒಟ್ಟಾರೆ ಮುಂದಿನ ವಾರದೊಳಗೆ ಉಪ ಚುನಾವಣೆ ಘೋಷಣೆಯಾದ್ರೆ ಬಜೆಟ್ ಅಧಿವೇಶನದ ಮೇಲೂ ಪರಿಣಾಮ ಬೀರಲಿದೆ. ಹಾಗಾಗಿ ಮೂರು ಪಕ್ಷಗಳು ಚುನಾವಣಾ ದಿನಾಂಕ ಘೋಷಣೆಯನ್ನು ಎದುರು ನೋಡ್ತಿವೆ.

  • ಉಪಚುನಾವಣೆಗೆ ಸಿದ್ಧವಾದ ಮಸ್ಕಿಗೆ ಸರ್ಕಾರದಿಂದ ಭರ್ಜರಿ ಗಿಫ್ಟ್

    ಉಪಚುನಾವಣೆಗೆ ಸಿದ್ಧವಾದ ಮಸ್ಕಿಗೆ ಸರ್ಕಾರದಿಂದ ಭರ್ಜರಿ ಗಿಫ್ಟ್

    ರಾಯಚೂರು: ಮಸ್ಕಿ ಬೈ ಎಲೆಕ್ಷನ್ ಹಿನ್ನೆಲೆ ಸರ್ಕಾರದಿಂದ ಕ್ಷೇತ್ರಕ್ಕೆ ಭರ್ಜರಿ ಗಿಫ್ಟ್ ಸಿಕ್ಕಿದೆ. ಮಸ್ಕಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮಂಜೂರಾತಿ ಸಿಕ್ಕಿದ್ದು, ಒಟ್ಟು 17 ಕೆರೆಗಳಿಗೆ ನೀರು ತುಂಬಿಸುವ 457.18 ಕೋಟಿ ರೂಪಾಯಿಯ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ಸಿಕ್ಕಿದೆ. ಮೊದಲ ಕಂತಾಗಿ ಆರ್ಥಿಕ ಇಲಾಖೆ 82.33 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ತಕ್ಷಣ ಟೆಂಡರ್ ಕರೆಯುವಂತೆಯೂ ಸೂಚನೆ ನೀಡಲಾಗಿದೆ.

    ಇತ್ತೀಚಿಗೆ ಕನಕ ಹಾಗು ಹೇಮರಡ್ಡಿ ಮಲ್ಲಮ್ಮ ಭವನಕ್ಕೆ 2.50 ಕೋಟಿ ರೂಪಾಯಿ ಮಂಜೂರಾತಿ ನೀಡಲಾಗಿತ್ತು. ನಿರ್ಮಾಣವಾಗಿರುವ ಕಟ್ಟಡಗಳು ವಿವಿಧ ಕಾಮಗಾರಿಗಳಿಗೆ ಈಗ ಒಂದೊಂದಾಗೆ ಚಾಲನೆ ನೀಡಲಾಗುತ್ತಿದೆ. ನಿನ್ನೆಯಷ್ಟೇ ಕ್ಷೇತ್ರದ ವಟಗಲ್ ನಲ್ಲಿ 1 ಕೋಟಿ ರೂಪಾಯಿ ವೆಚ್ಚದಲ್ಲಿ ಎರಡು ಇಂದಿರಾಗಾಂಧಿ ವಸತಿ ಶಾಲೆ ಆರಂಭಿಸಲಾಗಿದೆ. ಮಸ್ಕಿ ಬೈ ಎಲೆಕ್ಷನ್ ಇಷ್ಟರಲ್ಲಿಯೇ ಘೋಷಣೆಯಾಗುವ ಸಾಧ್ಯತೆಯಿದ್ದು, ಚುನಾವಣೆ ಗೆಲ್ಲಲು ಬಿಜೆಪಿ ಕಾರ್ಯತಂತ್ರ ನಡೆಸಿದೆ.

    ಸರ್ಕಾರದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮತ ಸೆಳೆಯುವ ತಂತ್ರಗಾರಿಕೆಯಂತೂ ನಡೆದಿದೆ. ಮಸ್ಕಿ ಬೈ ಎಲೆಕ್ಷನ್ ನಲ್ಲಿ ಪ್ರತಾಪಗೌಡ ಬಿಜೆಪಿ ಅಭ್ಯರ್ಥಿಯಾಗಲಿದ್ದು, ಚುನಾವಣಾ ಉಸ್ತುವಾರಿಯನ್ನ ಬಿ.ವೈ.ವಿಜಯೇಂದ್ರ, ಶ್ರೀರಾಮುಲು, ರವಿಕುಮಾರ್, ಡಾ.ಶಿವರಾಜ್ ಪಾಟೀಲ್, ರಾಜೂಗೌಡ, ನೇಮಿರಾಜ್ ನಾಯಕ್ ವಹಿಸಿಕೊಂಡಿದ್ದಾರೆ.

    ಒಂದೆಡೆ ಎನ್‍ಆರ್ ಬಿ ಸಿ 5 ಎ ಕಾಲುವೆಗಾಗಿ ಪಾಮನಕಲ್ಲೂರಿನಲ್ಲಿ ನಡೆಯುತ್ತಿರುವ ಹೋರಾಟ 80 ನೆಯ ದಿನಕ್ಕೆ ಕಾಲಿಟ್ಟಿದೆ. ರೈತರ ಹೋರಾಟದ ಮಧ್ಯೆಯೇ ಸಣ್ಣ ನೀರಾವರಿ ಇಲಾಖೆಯಿಂದ ಕೆರೆ ತುಂಬಿಸುವ ಯೋಜನೆಗೆ ಅನುಮೋದನೆ ನೀಡಲಾಗಿದೆ.

  • 5ಎ ಕಾಲುವೆ ಹೋರಾಟ- ರಾಯಚೂರು ಡಿಸಿ ಮನವೊಲಿಕೆ ಯತ್ನ ವಿಫಲ

    5ಎ ಕಾಲುವೆ ಹೋರಾಟ- ರಾಯಚೂರು ಡಿಸಿ ಮನವೊಲಿಕೆ ಯತ್ನ ವಿಫಲ

    ರಾಯಚೂರು: ಎನ್‍ಆರ್ ಬಿಸಿ ಯೋಜನೆಯಡಿ 5ಎ ಕಾಲುವೆಗೆ ಒತ್ತಾಯಿಸಿ ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರಿನಲ್ಲಿ ರೈತರು ನಡೆಸಿರುವ ಪ್ರತಿಭಟನಾ ಸ್ಥಳಕ್ಕೆ ರಾಯಚೂರು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ಭೇಟಿ ನೀಡಿ ರೈತರೊಂದಿಗೆ ಚರ್ಚೆ ನಡೆಸಿದರು. ಧರಣಿ ನಿರತ ರೈತ ಮುಖಂಡರೊಂದಿಗೆ ಯೋಜನೆ ಅನುಷ್ಠಾನದ ತಾಂತ್ರಿಕ ವಿಷಯಗಳ ಬಗ್ಗೆ ಮಾತನಾಡಿದರು.

    ಜಿಲ್ಲಾಧಿಕಾರಿಗಳ ಜೊತೆ ರೈತರು ಸಮಾಲೋಚನೆ ನಡೆಸಿದರಾದರೂ 5ಎ ಕಾಲುವೆ ಜಾರಿಯಾಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಅಂತ ಸ್ಪಷ್ಟಪಡಿಸಿದರು. 5ಎ ಕಾಲುವೆ ಬದಲಾಗಿ ಬೇರೆ ಯೋಜನೆಗಳನ್ನ ಸರ್ಕಾರ ಜಾರಿಗೆ ತರಲು ಮುಂದಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಯೋಜನೆಯ ಅನುಷ್ಠಾನಕ್ಕಾಗಿ 12 ವರ್ಷಗಳಿಂದ ರೈತರು ಹೋರಾಟ ಮಾಡುತ್ತಿದ್ದರೂ ಇಲ್ಲಿಯವರೆಗೂ ಯೋಜನೆ ಘೋಷಣೆ ಆಗಿಲ್ಲ. ಕೂಡಲೇ ಘೋಷಣೆ ಮಾಡಬೇಕು ಅಂತ ರೈತರು ಒತ್ತಾಯಿಸಿದರು.

    ಜಿಲ್ಲಾಧಿಕಾರಿ ಭೇಟಿ ವೇಳೆ ಎನ್‍ಆರ್ ಬಿಸಿ ಮುಖ್ಯ ಅಭಿಯಂತರ ರಂಗರಾಮ್, ಲಿಂಗಸಗೂರು ಸಹಾಯಕ ಆಯುಕ್ತ ರಾಜಶೇಖರ್ ಡಂಬಳ, ಮಸ್ಕಿ ತಹಶೀಲ್ದಾರ್ ಬಲರಾಮ್ ಕಟ್ಟಿಮನಿ, ಸಹಾಯಕ ಕಾರ್ಯನಿರ್ವಾಹಕ ಬಿ.ಡಿ. ಬಿರಾದಾರ್, ಇನ್ನಿತರೆ ಅಧಿಕಾರಿಗಳು ಹಾಗೂ ರೈತರು ಹಾಜರಿದ್ದರು.

  • 60 ದಿನ ಪೂರೈಸಿದ 5 ಎ ಕಾಲುವೆ ಹೋರಾಟ – ರೈತರ ಮಧ್ಯೆ ಬಿರುಕು ಮೂಡಿಸಲು ಯತ್ನ?

    60 ದಿನ ಪೂರೈಸಿದ 5 ಎ ಕಾಲುವೆ ಹೋರಾಟ – ರೈತರ ಮಧ್ಯೆ ಬಿರುಕು ಮೂಡಿಸಲು ಯತ್ನ?

    – ಪ್ರತಾಪ್‍ಗೌಡ ಪಾಟೀಲ್ ವಿರುದ್ದ ರೈತರ ಆಕ್ರೋಶ
    – ಮೊದಲು ಭರವಸೆ ಕೊಟ್ಟು ಈಗ ಅವೈಜ್ಞಾನಿಕ ಅಂತಿರೋ ಸರ್ಕಾರ

    ರಾಯಚೂರು: ಜಿಲ್ಲೆಯ ಮಸ್ಕಿಯ ನಾರಾಯಣಪುರ ಬಲದಂಡೆ 5 ಎ ಕಾಲುವೆ ಹೋರಾಟ 60 ದಿನಗಳನ್ನ ಪೂರೈಸಿದರು ಸರ್ಕಾರ ರೈತರಿಗೆ ಸ್ಪಂದಿಸಿಲ್ಲ. ಬದಲಾಗಿ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ರೈತರ ಮಧ್ಯೆ ಜಗಳ ತಂದಿಡುವ ಕೆಲಸ ಮಾಡಿದ್ದಾರೆ ಅಂತ ರೈತರು ಕಿಡಿಕಾರಿದ್ದಾರೆ. ಹೋರಾಟದ ದಿಕ್ಕನ್ನ ಬದಲಿಸುವ ಪ್ರಯತ್ನ ನಡೆದಿದೆ ಅಂತ ರೈತರು ರೊಚ್ಚಿಗೆದ್ದಿದ್ದಾರೆ.

    ನಾಲ್ಕು ಗ್ರಾಮ ಪಂಚಾಯತಿಗಳ ಬಹಿಷ್ಕಾರ, ಮಸ್ಕಿ ಬಂದ್, ಸತತ 60 ದಿನಗಳಿಂದ ಅನಿರ್ಧಿಷ್ಟಾವದಿ ಧರಣಿ ನಡೆಸಿದರು 5 ಎ ಕಾಲುವೆ ಹೋರಾಟಕ್ಕೆ ಸರ್ಕಾರದಿಂದ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ. ರಾಯಚೂರಿನ ಮಸ್ಕಿಯ ಪಾಮನಕಲ್ಲೂರಿನಲ್ಲಿ ರೈತರು ಕಾಲುವೆಗಾಗಿ ನಿರಂತರ ಹೋರಾಟವನ್ನ ನಡೆಸಿದ್ದಾರೆ. ಆದ್ರೆ ಪ್ರತಾಪ್ ಗೌಡ ಪಾಟೀಲ್ ತಮ್ಮ ಬೆಂಬಲಿಗರನ್ನೇ 5 ಎ ಕಾಲುವೆ ಹೋರಾಟ ನಿರತ ರೈತರು ಅಂತ ಬೆಂಗಳೂರಿಗೆ ಕರೆದೊಯ್ದು ಸರ್ಕಾರಕ್ಕೆ ಹರಿ ನೀರಾವರಿ ಬಗ್ಗೆ ಮನವಿ ಮಾಡಿದ್ದಾರೆ. ನೀರಾವರಿ ಸಚಿವರೊಂದಿಗೆ ಮಾತನಾಡಿದವರು ಯಾರೂ 5 ಎ ರೈತರಲ್ಲ ಬದಲಾಗಿ ಪ್ರತಾಪ್ ಗೌಡ ಪಾಟೀಲ್ ಬೆಂಬಲಿಗರು. ರೈತರ ಮಧ್ಯೆ ತಂದಿಡುವ ಕೆಲಸವನ್ನ ಮಾಡಲಾಗುತ್ತಿದೆ ಅಂತ ರೈತರು ಆರೋಪಿಸಿದ್ದಾರೆ.

    5 ಎ ಕಾಲುವೆ ಅವೈಜ್ಞಾನಿಕವಾಗಿರುವುದರಿಂದ ನಂದವಾಡಗಿಯಿಂದ 23 ಗ್ರಾಮಗಳಿಗೆ ಅನುಕೂಲವಾಗುವಂತೆ ತೆರೆದ ಕಾಲುವೆ ಮುಖಾಂತರ ಹನಿ ನೀರಾವರಿ ಬದಲು ಹರಿ ನೀರಾವರಿ ಯೋಜನೆ ಜಾರಿ ಮಾಡಲಾಗುವುದು ಅಂತ ಸರ್ಕಾರ ಈಗ ಹೇಳುತ್ತಿದೆ. ಇದು ಸರಿಯಾದ ಕ್ರಮವಲ್ಲ ಅಂತ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಾವಿರಾರು ಹೆಕ್ಟೇರ್ ಫಲವತ್ತಾದ ಭೂಮಿ ಇದ್ರೂ ನೀರಿನ ಅಲಭ್ಯತೆಯಿಂದ ರೈತರು ಗುಳೆ ಹೋಗುತ್ತಿದ್ದಾರೆ. ಹೀಗಾಗಿ 12 ವರ್ಷಗಳಿಂದ 5ಎ ಕಾಲುವೆಗಾಗಿ ಹೋರಾಟ ನಡೆದಿದೆ. ಹಲವಾರು ತಾಂತ್ರಿಕ ಕಾರಣಗಳ ನೆಪವೊಡ್ಡಿ ಮಸ್ಕಿ, ಮಾನ್ವಿ, ಸಿರವಾರ ಹಾಗೂ ರಾಯಚೂರು ತಾಲೂಕಿನ 107 ಗ್ರಾಮಗಳನ್ನ ನೀರಿನಿಂದ ವಂಚಿತರನ್ನಾಗಿ ಮಾಡಲಾಗಿದೆ. ಮಸ್ಕಿಯ ಕಾಳಾಪುರದಿಂದ ಶುರುವಾಗಬೇಕಿದ್ದ 5 ಎ ಕಾಲುವೆ ಕಾಮಗಾರಿ ಈವರೆಗೂ ಪ್ರಾರಂಭ ಮಾಡಿಯೇ ಇಲ್ಲ. ಕೂಡಲೇ ಸರ್ಕಾರ ರೈತರ ಹೋರಾಟಕ್ಕೆ ಸ್ಪಂದಿಸಬೇಕು ಅಂತ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗೌರವಾಧ್ಯಕ್ಷ ಚಾಮರಸ ಮಾಲೀಪಾಟೀಲ್ ಒತ್ತಾಯಿಸಿದ್ದಾರೆ.

    ಒಟ್ನಲ್ಲಿ, ರೈತರ ಹೋರಾಟಕ್ಕೆ ಸ್ಪಂದಿಸಿ ಅನುಕೂಲ ಮಾಡಿಕೊಡಬೇಕಾದ ಸರ್ಕಾರ ಅನ್ನದಾತರಿಗೆ ಒಳಿತು ಮಾಡುವ ಬದಲು ಸಮಯವ್ಯರ್ಥ ಮಾಡುತ್ತ ಚೆಲ್ಲಾಟವಾಡುತ್ತಿದೆ. ಈ ಮೊದಲು ಚುನಾವಣಾ ಪ್ರಚಾರ ಭಾಷಣದಲ್ಲಿ ಕಾಲುವೆ ನಿರ್ಮಾಣ ಬಗ್ಗೆ ಭರವಸೆ ನೀಡಿದ ಜನಪ್ರತಿನಿಧಿಗಳೇ ಈಗ ವರಸೆ ಬದಲಿಸಿದ್ದಾರೆ. ಹೀಗಾಗಿ ರೈತರು 5 ಎ ಕಾಲುವೆ ಜಾರಿಯಾಗುವವರೆಗೂ ಹೋರಾಟ ಮುಂದುವರೆಸುವುದಾಗಿ ಪಟ್ಟು ಹಿಡಿದಿದ್ದಾರೆ.

  • ಸಮಯಕ್ಕೆ ಬಾರದ ಬಸ್ – ಮಸ್ಕಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ನಿತ್ಯ ಪರದಾಟ

    ಸಮಯಕ್ಕೆ ಬಾರದ ಬಸ್ – ಮಸ್ಕಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ನಿತ್ಯ ಪರದಾಟ

    ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕಿನ ಗ್ರಾಮೀಣ ಭಾಗಕ್ಕೆ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಮಸ್ಕಿ ಬಸ್ ಡಿಪೋ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಡಿಪೋ ವ್ಯವಸ್ಥಾಪಕರೊಂದಿಗೆ ವಾಗ್ವಾದ ನಡೆಸಿ ಬಸ್ ಬಿಡದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

    ಶಾಲಾ ಕಾಲೇಜುಗಳು ಆರಂಭವಾಗಿರುವುದರಿಂದ ವಿದ್ಯಾರ್ಥಿಗಳು ಬಸ್ ವ್ಯವಸ್ಥೆಯಿಲ್ಲದೆ ಪರದಾಡುತ್ತಿದ್ದಾರೆ. ಪಾಮನಕಲ್ಲೂರು, ಹರ್ವಾಪುರ, ತುಪ್ಪದೂರು, ಬೆಂಚಮರಡಿ, ಇಲಾಲಪುರ, ಬುದ್ದಿನ್ನಿ ಎಸ್, ಹೂವಿನಭಾವಿ, ಮತ್ತು ಮುದಬಾಳ ಗ್ರಾಮಗಳ ನೂರಾರು ನೂರಾರು ವಿದ್ಯಾರ್ಥಿಗಳು ನಿತ್ಯ ಮಸ್ಕಿಗೆ ಬರುತ್ತಿದ್ದು, ಸರಿಯಾದ ಸಮಯಕ್ಕೆ ಬಸ್ ಇಲ್ಲದೆ ಕಷ್ಟಪಡುತ್ತಿದ್ದಾರೆ.

    ಮಸ್ಕಿಗೆ ಬರಲು ಬಸ್ ಸಿಕ್ಕರೆ ವಾಪಸ್ ಹೋಗಲು ಸರಿಯಾದ ಸಮಯಕ್ಕೆ ಬಸ್ ಗಳು ಸಿಗುತ್ತಿಲ್ಲ. ಹೀಗಾಗಿ ವಿದ್ಯಾರ್ಥಿಗಳು ತಡರಾತ್ರಿ ಗ್ರಾಮಗಳಿಗೆ ಮರಳಬೇಕಾದ ಪರಸ್ಥಿತಿಯಿದೆ. ರಾತ್ರಿವರೆಗೂ ಬಸ್ ನಿಲ್ದಾಣದಲ್ಲೇ ವಿದ್ಯಾರ್ಥಿಗಳು ಕಾಲಕಳೆಯಬೇಕಾಗಿದೆ. ಆದ್ರೂ ಬಸ್ ಗಳು ಬಾರದೆ ಖಾಸಗಿ ವಾಹನಗಳಲ್ಲಿ ಗ್ರಾಮಕ್ಕೆ ಮರಳಬೇಕಿದೆ. ಹೀಗಾಗಿ ಸರಿಯಾದ ಸಮಯಕ್ಕೆ ಬಸ್ ಗಳ ಓಡಾಟ ಆರಂಭಿಸಬೇಕು ಅಂತ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇನ್ನೂ ಬುದ್ದಿನ್ನಿ ಎಸ್ ಗ್ರಾಮದಲ್ಲಿ ಪ್ರೌಢಶಾಲಾ ಕಟ್ಟಡ ಪೂರ್ಣಗೊಂಡಿದ್ದರೂ, ಪ್ರೌಢಶಾಲಾ ಕಲಿಕೆಗೆ ಅನುಮತಿ ನೀಡಿಲ್ಲ. ಬುದ್ದಿನ್ನಿ ಎಸ್ ಗ್ರಾಮದಲ್ಲಿ ಪ್ರೌಢಶಾಲೆ ಆರಂಭವಾದರೆ ವಿದ್ಯಾರ್ಥಿಗಳ ಪರದಾಟ ಸ್ವಲ್ಪ ಮಟ್ಟಿಗೆ ತಪ್ಪುತ್ತದೆ ಅಧಿಕಾರಿಗಳು ಗಮನಹರಿಸಬೇಕು ಅಂತ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.

  • 5ಎ ಕಾಲುವೆಗಾಗಿ ನಿಲ್ಲದ ರೈತರ ಹೋರಾಟ: ಮಸ್ಕಿ ಬಂದ್ ಯಶಸ್ವಿ

    5ಎ ಕಾಲುವೆಗಾಗಿ ನಿಲ್ಲದ ರೈತರ ಹೋರಾಟ: ಮಸ್ಕಿ ಬಂದ್ ಯಶಸ್ವಿ

    – 30 ಗ್ರಾಮಗಳ ರೈತರಿಂದ 50 ದಿನಗಳ ಸತತ ಹೋರಾಟ
    – ಭರವಸೆ ನೀಡಿದ ಸರ್ಕಾರದಿಂದ ಸ್ಪಂದನೆಯಿಲ್ಲ

    ರಾಯಚೂರು: 5 ಎ ಕಾಲುವೆಗೆ ಒತ್ತಾಯಿಸಿ ರೈತರು ಕರೆ ನೀಡಿದ್ದ ಜಿಲ್ಲೆ ಮಸ್ಕಿ ಬಂದ್‍ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 30ಕ್ಕೂ ಅಧಿಕ ಹಳ್ಳಿಗಳ ರೈತರು ಸತತ 50 ದಿನಗಳಿಂದ ಹೋರಾಟ ನಡೆಸುತ್ತಿದ್ದರು ಸರ್ಕಾರ ಕಿವಿಗೊಡದ ಹಿನ್ನೆಲೆ 5 ಎ ಕಾಲುವೆ ಹೋರಾಟ ಸಮಿತಿ ಮಸ್ಕಿ ಬಂದ್‍ಗೆ ಕರೆ ನೀಡಿತ್ತು. ವ್ಯಾಪಾರಿಗಳು ಸ್ವಯಂ ಪ್ರೇರಿತರಾಗಿ ಅಂಗಡಿ ಮುಗ್ಗಟ್ಟುಗಳನ್ನ ಮುಚ್ವುವ ಮೂಲಕ ಬಂದ್‍ಗೆ ಬೆಂಬಲ ನೀಡಿದ್ದಾರೆ. ಹೋರಾಟದಲ್ಲಿ 30ಕ್ಕೂ ಹೆಚ್ಚು ಗ್ರಾಮಗಳ ಸಾವಿರಾರು ಜನ ಭಾಗವಹಿಸಿ ಹಕ್ಕೊತ್ತಾಯ ಮಾಡಿದರು.

    ಮಹಿಳೆಯರು, ಮಕ್ಕಳು, ವೃದ್ಧರು ಸಹ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಕಾಲುವೆಗಾಗಿ ಒತ್ತಾಯಿಸಿದರು. ಭಿತ್ತಿ ಪತ್ರಗಳನ್ನ ಪ್ರದರ್ಶಿಸಿ ಮಕ್ಕಳು ಗಮನ ಸೆಳೆದರೆ, ಹೋರಾಟಗಾರರೊಂದಿಗೆ ಘೋಷಣೆ ಕೂಗುತ್ತಾ ಮೆರವಣಿಗೆಯಲ್ಲಿ ಭಾಗಿಯಾಗಿ ವೃದ್ಧೆ ರೈತರಿಗೆ ಸ್ಪೂರ್ತಿ ತುಂಬಿದಳು. ನಮಗೆ ಕಾಲುವೆ ನಿರ್ಮಿಸಿ ನೀರು ಕೊಡಿ ಎಂದು ಘೋಷಣೆ ಕೂಗಿದಳು. ಲಿಂಗಸಗೂರು -ಸಿಂಧನೂರು ಮಾರ್ಗ ಬಸ್ ತಡೆದು ರೈತರು ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದ್ದರಿಂದ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಈಗಲೂ ಸರ್ಕಾರ ಎಚ್ಚೆತ್ತು ಬೇಡಿಕೆ ಈಡೇರಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ರೈತರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

    ಎನ್ ಆರ್ ಬಿ ಸಿ 5ಂ ಉಪ ಕಾಲುವೆಯನ್ನ ನಿರ್ಮಾಣ ಮಾಡಿ ನೀರು ಕೊಡಲು ಒತ್ತಾಯಿಸಿ ನಡೆದಿರುವ ಹೋರಾಟಕ್ಕೆ ಈವರೆಗೂ ಸರ್ಕಾರ ಸ್ಪಂದಿಸಿಲ್ಲ. ಹೀಗಾಗಿ
    ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಈಗಾಗಲೇ ನಾಲ್ಕು ಗ್ರಾಮಗಳ ಗ್ರಾಮಸ್ಥರು ಚುನಾವಣೆಯನ್ನೇ ಬಹಿಷ್ಕಾರ ಮಾಡಿದ್ದರು. ಮುಂಬರುವ ಮಸ್ಕಿ ವಿಧಾನಸಭಾ ಉಪಚುನಾವಣೆ ಸೇರಿ ಎಲ್ಲಾ ಚುನಾವಣೆ ಮತದಾನವನ್ನ ಬಹಿಷ್ಕರಿಸುವುದಾಗಿ ರೈತರು ಹೇಳಿದ್ದಾರೆ.

  • ಮಸ್ಕಿಯಲ್ಲಿ ಸಚಿವರ ದಂಡು – ಕಾಂಗ್ರೆಸ್ ಮುಕ್ತ ಗ್ರಾ.ಪಂಗಳ ನಿರ್ಮಾಣಕ್ಕೆ ಬಿಜೆಪಿ ಸಂಕಲ್ಪ

    ಮಸ್ಕಿಯಲ್ಲಿ ಸಚಿವರ ದಂಡು – ಕಾಂಗ್ರೆಸ್ ಮುಕ್ತ ಗ್ರಾ.ಪಂಗಳ ನಿರ್ಮಾಣಕ್ಕೆ ಬಿಜೆಪಿ ಸಂಕಲ್ಪ

    ರಾಯಚೂರು: ರಾಜ್ಯದಲ್ಲಿ ಶೇಕಡ 80 ರಷ್ಟು ಗ್ರಾಮ ಪಂಚಾಯತಿಗಳಲ್ಲಿ ಬಿಜೆಪಿ ಬೆಂಬಲಿತರು ಆಯ್ಕೆಯಾಗಬೇಕು. ಹಳ್ಳಿಯಿಂದ ದಿಲ್ಲಿವರೆಗೆ ಬಿಜೆಪಿ ಕಾರ್ಯಕರ್ತರನ್ನು ಹುರಿದುಂಬಿಸಲು ಗ್ರಾಮಸ್ವರಾಜ್ಯ ಸಮಾವೇಶ ನಡೆಸಿದ್ದೇವೆ ಅಂತ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ. ಜಿಲ್ಲೆಯ ಮಸ್ಕಿಯಲ್ಲಿ ಆಯೋಜಿಸಿದ್ದ ಗ್ರಾಮ ಸ್ವರಾಜ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸವದಿ ಉಪಚುನಾವಣೆಯ ದೃಷ್ಠಿಕೋನದಲ್ಲಿ ಇಂದು ಮಸ್ಕಿಯಲ್ಲಿ ಸಮಾವೇಶ ಮಾಡಿದ್ದೇವೆ ಎಂದರು.

    ಸಿದ್ದರಾಮಯ್ಯ ಆಧಾರ ರಹಿತವಾಗಿ ಮಾತನಾಡುತ್ತಾರೆ. ಆದ್ರೆ ಮೋದಿ ಯಾವುದನ್ನು ಹೇಳುತ್ತಾರೊ ಅದನ್ನೇ ಮಾಡುತ್ತಾರೆ, ಕೊಟ್ಟ ಮಾತು ಉಳಿಸಿಕೊಳ್ಳುತ್ತಿದ್ದಾರೆ. ಮಸ್ಕಿ ಉಪಚುನಾವಣೆಗೂ ಮುನ್ನ ನೀರಾವರಿಯ ಎಲ್ಲಾ ಯೋಜನೆಗಳ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. 5 ಎ ಕಾಲುವೆ ಹೋರಾಟಗಾರರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇವೆ ಎಂದರು. ಇಂದು ಅಥವಾ ನಾಳೆ ದಿನಾಂಕ ಘೋಷಣೆಯಾಗುವ ಸಾಧ್ಯತೆ ಹಿನ್ನೆಲೆ ಚುನಾವಣೆಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದೇವೆ. ಬಿಜೆಪಿಯು ಕಾರ್ಯಕರ್ತರಿಗೋಸ್ಕರ ನಾಯಕರನ್ನು ಬಳಸಿಕೊಳ್ಳುತ್ತಿದೆ. ಹಳ್ಳಿಯಲ್ಲಿರುವ ಕಾರ್ಯಕರ್ತರಿಗೆ ಅಧಿಕಾರ ಸಿಗಬೇಕು. ಅಭಿವೃದ್ಧಿ ಯೋಜನೆಗಳು ಎಲ್ಲರಿಗೂ ಸಿಗಬೇಕು ಎನ್ನುವ ಕಲ್ಪನೆಯಿಂದ ಗ್ರಾಮಸ್ವರಾಜ್ ಸಮಾವೇಶ ಮಾಡುತ್ತಿದ್ದೇವೆ. ಕಾರ್ಯಕರ್ತರ ಋಣ ನಮ್ಮ ಮೇಲಿದೆ, ಅದನ್ನು ತೀರಿಸಬೇಕಾಗಿದೆ ಎಂದರು.

    ಡಿಸೆಂಬರ್ ಒಂದರಿಂದ ಭತ್ತ ಖರೀದಿ ಆರಂಭವಾಗುತ್ತದೆ. 50 ಕಾಲುವೆಯ ಚಾಲನೆಗೆ ಹಣಕಾಸು ಇಲಾಖೆ ಒಪ್ಪಿಗೆ ಪಡೆದು ಪೂರಕ ತೀರ್ಮಾನ ತಗೆದುಕೊಳ್ಳಬೇಕಿದೆ. ಮಸ್ಕಿಯ ಬುದ್ದಿನ್ನಿ ಗ್ರಾಮದ ಶಾಲೆಗೆ ಉನ್ನತೀಕರಣ ಮಾಡಲಾಗುವುದು. ಮಸ್ಕಿ ಕ್ಷೇತ್ರದ 15 ಕೆರೆಗೆ ನೀರು ತುಂಬಿಸುವ ಕೆಲಸವಾಗಲು ನಾವೆಲ್ಲರೂ ನಿಮ್ಮೊಂದಿಗೆ ಇದ್ದೇವೆ. ರಾಮ (ಶ್ರೀರಾಮುಲು) ಲಕ್ಷ್ಮಣ( ಸವದಿ) ನಾವೆಲ್ಲ ಸೇರಿ ಮಸ್ಕಿ ಚುನಾವಣೆಯಲ್ಲಿ ಪ್ರತಾಪಗೌಡರನ್ನ ಗೆಲ್ಲಿಸುತ್ತೇವೆ, ಅವರು ಮಂತ್ರಿಯಾಗುತ್ತಾರೆ. ಬಸನಗೌಡ ತುರವಿಹಾಳ ಕಾಂಗ್ರೆಸ್ ಹೋಗಿದ್ದಾರೆ ಅಲ್ಲಿ ಏನು ಆಗುವುದಿಲ್ಲ, ಮತ್ತೆ ಅವರು ಮರಳಿ ಬರಲಿ ಎಂದರು.

    ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಮಾತನಾಡಿ, ಮಸ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿಯಿಲ್ಲ ಹೀಗಾಗಿ ನಮ್ಮ ನಮ್ಮಲ್ಲೆ ಎತ್ತಿಕಟ್ಟುವ ಕೆಲಸ ಮಾಡಿದ್ದಾರೆ. ದೇಶವನ್ನ ಕಾಂಗ್ರೆಸ್ ಮುಕ್ತ ಮಾಡುವುದು ನರೇಂದ್ರ ಮೋದಿ ಸಂಕಲ್ಪ. ಗ್ರಾಮ ಪಂಚಾಯತಿಗಳಲ್ಲಿ ಕಾಂಗ್ರೆಸ್ ಮುಕ್ತವಾಗಬೇಕು. ಬಿಜೆಪಿ ಒಂದು ವ್ಯಕ್ತಿಯ ಮೇಲೆ ಇಲ್ಲ, ಪಕ್ಷದ ಮೇಲೆ ನಿಂತಿದೆ ಎಂದರು. ವಾಲ್ಮೀಕಿ ಸಮಾಜಕ್ಕೆ ಶೇ. 7.50 ರಷ್ಟು ಮಿಸಲಾತಿಗೆ ನಾನು ಪ್ರಯತ್ನಿಸುತ್ತೇನೆ. ಉಪಸಮಿತಿ ವರದಿಯ ನಂತರ ಮೀಸಲಾತಿ ಜಾರಿಯಾಗುತ್ತದೆ. ನಾನು ಕೊಟ್ಟ ಮಾತು ನಡೆಸಿ ಕೊಡದಿದ್ದರೆ ಅಧಿಕಾರ ಬಿಡುತ್ತೇನೆ. ನಾನು ಉಪಮುಖ್ಯಮಂತ್ರಿ ಯಾಗಬೇಕೆಂಬುದು ಜನರ ತುಂಬಾ ದಿನಗಳ ಬೇಡಿಕೆ. ಪಕ್ಷದ ವೇದಿಕೆಯಲ್ಲಿ ಅದನ್ನ ನಿರ್ಧರಿಸಲಾಗುವುದು ಅಂತ ಹೇಳಿದರು. ಮೊಳಕಲ್ಮೂರನ್ನು ಬಳ್ಳಾರಿ ಜಿಲ್ಲೆಗೆ ಸೇರಿಸುವ ಬಗ್ಗೆ ಹೋರಾಟಗಾರರು ಬೇಡಿಕೆ ಇಟ್ಟಿದ್ದಾರೆ ಈ ಬಗ್ಗೆ ಸಿಎಂ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂದರು.

    ಅರಣ್ಯ ಖಾತೆ ಸಚಿವ ಆನಂದ್ ಸಿಂಗ್ ಸಮಾವೇಶಕ್ಕೂ ಮೊದಲು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಕಂಪ್ಲಿ ಬಳ್ಳಾರಿಗೆ ಸೇರಿಸಬೇಕು ಎಂಬ ಹೋರಾಟ ನಡೆದಿದೆ. ಎಲ್ಲರಿಗೂ ಹೋರಾಟ ಮೂಲಕ ಬೇಡಿಕೆ ಸಲ್ಲಿಸುವ ಹಕ್ಕಿದೆ. ಕಾನೂನಾತ್ಮಕವಾಗಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಕಂಪ್ಲಿ ಶಾಸಕ ಗಣೇಶ ತೊಡೆ ತಟ್ಟಿರುವ ಘಟನೆ ವಿಚಾರದ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ ಅಂತ ಸಚಿವ ಆನಂದ್ ಸಿಂಗ್ ತಿಳಿಸಿದರು.

  • ಅಭ್ಯರ್ಥಿಗಳ ಪಕ್ಷ ಬದಲು – ಮಸ್ಕಿ ಅಖಾಡ ಹೇಗಿದೆ? ಗೆಲವು ಯಾರಿಗೆ?

    ಅಭ್ಯರ್ಥಿಗಳ ಪಕ್ಷ ಬದಲು – ಮಸ್ಕಿ ಅಖಾಡ ಹೇಗಿದೆ? ಗೆಲವು ಯಾರಿಗೆ?

    ರಾಯಚೂರು: ಮಸ್ಕಿ ಉಪಚುನಾವಣೆ ದಿನಾಂಕ ಇನ್ನೂ ಪ್ರಕಟವಾಗಿಲ್ಲ, ಆದರೆ ಕ್ಷೇತ್ರದಲ್ಲಿ ಸಂಭಾವ್ಯ ಅಭ್ಯರ್ಥಿಗಳು ಹಾಗೂ ಪಕ್ಷದ ಕಾರ್ಯಕರ್ತರು ಚುನಾವಣೆಯ ತುಂಬು ಉತ್ಸಾಹದಲ್ಲಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿಗೆ ಉಪಚುನಾವಣೆ ಜಿದ್ದಾಜಿದ್ದಿನ ಕಣವಾಗಿದ್ದು ಜೆಡಿಎಸ್ ಸದ್ಯಕ್ಕೆ ತಟಸ್ಥವಾಗಿದೆ. ಸಮಾವೇಶಗಳ ಮೂಲಕ ಕಾರ್ಯಕರ್ತರ ಸಂಘಟನೆಯ ಜೊತೆ ತಳಮಟ್ಟದಿಂದಲೂ ಪಕ್ಷ ಬಲಪಡಿಸಿಕೊಳ್ಳಲು ಕಾಂಗ್ರೆಸ್ ಬಿಜೆಪಿ ಮುಂದಾಗಿವೆ. ಕಳೆದ ಬಾರಿಯ ಚುನಾವಣೆಯಲ್ಲಿದ್ದ ಪ್ರಬಲ ಅಭ್ಯರ್ಥಿಗಳೇ ಈ ಬಾರಿಯೂ ಮುಖಾಮುಖಿಯಾಗುತ್ತಿದ್ದಾರೆ. ಆದರೆ ಪಕ್ಷಗಳು ಮಾತ್ರ ಅದಲು ಬದಲು ಆಗಿರುವುದರಿಂದ ಕಾರ್ಯಕರ್ತರು ಸಹ ಪಕ್ಷಗಳನ್ನು ಬದಲಿಸಿದ್ದಾರೆ.

    ನವೆಂಬರ್ 7ರಂದು ಬೆಂಗಳೂರಲ್ಲಿ ಅನೌಪಚಾರಿಕವಾಗಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದ ಆರ್.ಬಸನಗೌಡ ತುರುವಿಹಾಳ ನವೆಂಬರ್ 23ರಂದು ಸುಮಾರು ಐದು ಸಾವಿರ ಬೆಂಬಲಿಗರೊಂದಿಗೆ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದಾರೆ. ಪ್ರತಾಪ್ ಗೌಡರನ್ನು ಸೋಲಿಸಲು ಕಾಂಗ್ರೆಸ್‍ಗೆ ಬಂದಿರುವುದಾಗಿ ಹೇಳಿರುವ ಬಸನಗೌಡ ಬಿಜೆಪಿಯಲ್ಲಿ ನಮ್ಮ ಕಾರ್ಯಕರ್ತರಿಗೆ ಬೆಲೆಯಿಲ್ಲದ ಕಾರಣ ಕಾಂಗ್ರೆಸ್ ಸೇರ್ಪಡೆಯಾಗಿದ್ದೇವೆ ಅಂತ ತಿಳಿಸಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಕಾಲಿಗೆ ನಮಸ್ಕರಿಸಿ, ಸಮಾವೇಶದಲ್ಲಿ ನೆರೆದಿದ್ದ ಸಾವಿರಾರು ಜನರಿಗೆ ಸಾಷ್ಟಾಂಗ ನಮಸ್ಕಾರ ಹಾಕಿ ಬಸನಗೌಡ ತುರವಿಹಾಳ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.

    ಸಮಾವೇಶದಲ್ಲಿ ಸುಮಾರು 20 ಸಾವಿರ ಜನರನ್ನು ಸೇರಿಸುವ ಮೂಲಕ ಬಲಪ್ರದರ್ಶನವನ್ನೂ ಕಾಂಗ್ರೆಸ್ ಮಾಡಿದೆ. ಸಮಾವೇಶದಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ, ಪ್ರತಾಪಗೌಡ ಪಾಟೀಲ್ ಕಾಂಗ್ರೆಸ್ ಪಕ್ಷ ಹಾಗೂ ಮತದಾರರಿಗೆ ಮೋಸ ಮಾಡಿದ್ದಾರೆ. ಪ್ರತಾಪ್ ಗೌಡರನ್ನು ಗೆಲ್ಲುವ ಕುದುರೆ ಅಂತ ಪಕ್ಷಕ್ಕೆ ಸೇರಿಸಿಕೊಂಡೆವು ಆದರೆ ಪ್ರತಾಪ್ ಗೌಡ ಚೆಂಗೂಲಿ ಕುದುರೆ ಅಂತ ಜರಿದಿದ್ದಾರೆ. ಯಾವ ಪಕ್ಷ ಎಂಎಲ್‍ಎ ಮಾಡಿತ್ತೋ ಅದೇ ಪಕ್ಷಕ್ಕೆ ಚೂರಿ ಹಾಕಿ ಬಿಜೆಪಿಗೆ ಹೋಗಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಅನುದಾನ ಕೊಟ್ಟಿಲ್ಲ ಅದಕ್ಕೆ ಹೋಗುತ್ತೇನೆ ಅಂತ ಬಿಜೆಪಿ ಹೋಗಿದ್ದಾರೆ. ಕೇಳಿದಾಗೆಲ್ಲ ಅನುದಾನ ಕೊಟ್ಟಿದ್ದರು ದ್ರೋಹ ಮಾಡಿದ್ದಾರೆ. ಅವರಿಗೆ ಜನ ಪಾಠ ಕಲಿಸುತ್ತಾರೆ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಸಮಾವೇಶದಲ್ಲಿ ಡಿ.ಕೆ.ಶಿವಕುಮಾರ್ ಪ್ರತಾಪ್ ಗೌಡ ಅಭಿವೃದ್ಧಿ ವಿಚಾರದಲ್ಲಿ ಇಚ್ಚಾಶಕ್ತಿಯಿಲ್ಲದ ವ್ಯಕ್ತಿ, 5 ಎ ಕಾಲುವೆ ಬಗ್ಗೆ ಕೇಳಿದಾಗಲೆಲ್ಲಾ ಸುಮ್ಮನಾಗುತ್ತಿದ್ದರು. ಈಗ ಕಾಲುವೆ ಬಗ್ಗೆ ಮಾತನಾಡುತ್ತಿದ್ದಾರೆ. ನಮ್ಮ ಅವಧಿಯಲ್ಲೇ ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳು ಜಾರಿಗೆ ಬಂದಿವೆ. ನಂದವಾಡಗಿ ಯೋಜನೆ ಕಾಂಗ್ರೆಸ್ ಕೊಡುಗೆ. ಮುಂದೆ ನಮ್ಮ ಸರ್ಕಾರವೇ ಬರುತ್ತೆ ಬಸನಗೌಡ ತುರವಿಹಾಳ ಶಾಸಕರಾಗಿ ಇರುತ್ತಾರೆ. 5 ಎ ಕಾಲುವೆ ಯೋಜನೆ ಜಾರಿಯಾಗುತ್ತೆ ಎಂದು ತಮ್ಮ ಭಾಷಣದಲ್ಲಿ ಜಲಾಸ್ತ್ರ ಪ್ರಯೋಗಿಸಿ ಮತದಾರರನ್ನ ಸೆಳೆಯುವ ಪ್ರಯತ್ನ ಮಾಡಿದರು.

    ಬಿಜೆಪಿ ಸಹ ಕ್ಷೇತ್ರದಲ್ಲಿ ನಿರಂತರವಾಗಿ ಮೆರವಣಿಗೆ, ಸಮಾವೇಶಗಳ ಮೂಲಕ ಕಾರ್ಯಕರ್ತರನ್ನು ಒಗ್ಗೂಡಿಸುತ್ತಿದೆ. ಪ್ರತಾಪ್ ಗೌಡ ಪಾಟೀಲ್ ಚುನಾವಣೆಯಲ್ಲಿ ಗೆದ್ದರೆ ಕೇವಲ ಶಾಸಕರಲ್ಲ ಸಚಿವರಾಗುತ್ತಾರೆ ಅಂತಲೇ ಕ್ಷೇತ್ರದ ಉಸ್ತುವಾರಿ ಹೊತ್ತಿರುವ ವಸತಿ ಸಚಿವ ವಿ.ಸೋಮಣ್ಣ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಪ್ರಚಾರ ನಡೆಸಿದ್ದಾರೆ.

    ಇತ್ತೀಚಿಗೆ ಸಿಂಧನೂರಿನಲ್ಲಿ ಆಯೋಜಿದ್ದ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ರಾಜ್ಯ ಮುಖಂಡರ ದಂಡೆ ಭಾಗವಹಿಸಿತ್ತು. ಮಸ್ಕಿ ಉಪಚುನಾವಣೆಗೆ ಪಕ್ಷ ಬಲಪಡಿಸಲು ರಾಜ್ಯಾಧ್ಯಕ್ಷರ ನಳಿನ್‍ಕುಮಾರ್ ಕಟೀಲ್, ಉಪಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಹಲವಾರು ಮುಖಂಡರು ಭಾಗಿಯಾಗಿದ್ದರು. ಕ್ಷೇತ್ರದ ನೀರಾವರಿ ಯೋಜನೆಗಳ ಅನುಷ್ಠಾನ ಹಾಗೂ ಪ್ರತಾಪ್ ಗೌಡ ಪಾಟೀಲ್‍ರನ್ನು ಸಚಿವರನ್ನಾಗಿ ಮಾಡುವ ಭರವಸೆ ನೀಡುತ್ತಾ ಮತದಾರರನ್ನು ಸೆಳೆಯಲು ಬಿಜೆಪಿ ಮುಖಂಡರು ಮುಂದಾಗಿದ್ದಾರೆ.

    ಕಳೆದ ಬಾರಿ ಕೇವಲ 213 ಮತಗಳ ಕಡಿಮೆ ಅಂತರದಲ್ಲಿ ಸೋತಿರುವ ಬಸನಗೌಡ ತುರವಿಹಾಳಗೆ ಅನುಕಂಪದ ಅಲೆಯಿದ್ದರೆ. ಮೂರು ಬಾರಿ ಶಾಸಕರಾಗಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಉಪಚುನಾವಣೆಗೆ ಕಾರಣರಾಗಿರುವ ಪ್ರತಾಪ್ ಗೌಡ ಪಾಟೀಲ್ ವಿರೋಧ ಅಲೆಯೂ ಜೋರಾಗಿದೆ. ಆದರೆ ಈ ಇಬ್ಬರ ಪಕ್ಷಗಳೂ ಸಹ ಈಗ ಬದಲಾಗಿರುವುದರಿಂದ ಜನ ಯಾರ ಮೇಲೆ ಒಲವು ತೋರುತ್ತಾರೋ ಗೊತ್ತಿಲ್ಲ.