Tag: ಮಸ್ಕಿ ಬೈ ಎಲೆಕ್ಷನ್

  • ಉಪಚುನಾವಣೆಗೆ ಸಿದ್ಧವಾದ ಮಸ್ಕಿಗೆ ಸರ್ಕಾರದಿಂದ ಭರ್ಜರಿ ಗಿಫ್ಟ್

    ಉಪಚುನಾವಣೆಗೆ ಸಿದ್ಧವಾದ ಮಸ್ಕಿಗೆ ಸರ್ಕಾರದಿಂದ ಭರ್ಜರಿ ಗಿಫ್ಟ್

    ರಾಯಚೂರು: ಮಸ್ಕಿ ಬೈ ಎಲೆಕ್ಷನ್ ಹಿನ್ನೆಲೆ ಸರ್ಕಾರದಿಂದ ಕ್ಷೇತ್ರಕ್ಕೆ ಭರ್ಜರಿ ಗಿಫ್ಟ್ ಸಿಕ್ಕಿದೆ. ಮಸ್ಕಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮಂಜೂರಾತಿ ಸಿಕ್ಕಿದ್ದು, ಒಟ್ಟು 17 ಕೆರೆಗಳಿಗೆ ನೀರು ತುಂಬಿಸುವ 457.18 ಕೋಟಿ ರೂಪಾಯಿಯ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ಸಿಕ್ಕಿದೆ. ಮೊದಲ ಕಂತಾಗಿ ಆರ್ಥಿಕ ಇಲಾಖೆ 82.33 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ತಕ್ಷಣ ಟೆಂಡರ್ ಕರೆಯುವಂತೆಯೂ ಸೂಚನೆ ನೀಡಲಾಗಿದೆ.

    ಇತ್ತೀಚಿಗೆ ಕನಕ ಹಾಗು ಹೇಮರಡ್ಡಿ ಮಲ್ಲಮ್ಮ ಭವನಕ್ಕೆ 2.50 ಕೋಟಿ ರೂಪಾಯಿ ಮಂಜೂರಾತಿ ನೀಡಲಾಗಿತ್ತು. ನಿರ್ಮಾಣವಾಗಿರುವ ಕಟ್ಟಡಗಳು ವಿವಿಧ ಕಾಮಗಾರಿಗಳಿಗೆ ಈಗ ಒಂದೊಂದಾಗೆ ಚಾಲನೆ ನೀಡಲಾಗುತ್ತಿದೆ. ನಿನ್ನೆಯಷ್ಟೇ ಕ್ಷೇತ್ರದ ವಟಗಲ್ ನಲ್ಲಿ 1 ಕೋಟಿ ರೂಪಾಯಿ ವೆಚ್ಚದಲ್ಲಿ ಎರಡು ಇಂದಿರಾಗಾಂಧಿ ವಸತಿ ಶಾಲೆ ಆರಂಭಿಸಲಾಗಿದೆ. ಮಸ್ಕಿ ಬೈ ಎಲೆಕ್ಷನ್ ಇಷ್ಟರಲ್ಲಿಯೇ ಘೋಷಣೆಯಾಗುವ ಸಾಧ್ಯತೆಯಿದ್ದು, ಚುನಾವಣೆ ಗೆಲ್ಲಲು ಬಿಜೆಪಿ ಕಾರ್ಯತಂತ್ರ ನಡೆಸಿದೆ.

    ಸರ್ಕಾರದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮತ ಸೆಳೆಯುವ ತಂತ್ರಗಾರಿಕೆಯಂತೂ ನಡೆದಿದೆ. ಮಸ್ಕಿ ಬೈ ಎಲೆಕ್ಷನ್ ನಲ್ಲಿ ಪ್ರತಾಪಗೌಡ ಬಿಜೆಪಿ ಅಭ್ಯರ್ಥಿಯಾಗಲಿದ್ದು, ಚುನಾವಣಾ ಉಸ್ತುವಾರಿಯನ್ನ ಬಿ.ವೈ.ವಿಜಯೇಂದ್ರ, ಶ್ರೀರಾಮುಲು, ರವಿಕುಮಾರ್, ಡಾ.ಶಿವರಾಜ್ ಪಾಟೀಲ್, ರಾಜೂಗೌಡ, ನೇಮಿರಾಜ್ ನಾಯಕ್ ವಹಿಸಿಕೊಂಡಿದ್ದಾರೆ.

    ಒಂದೆಡೆ ಎನ್‍ಆರ್ ಬಿ ಸಿ 5 ಎ ಕಾಲುವೆಗಾಗಿ ಪಾಮನಕಲ್ಲೂರಿನಲ್ಲಿ ನಡೆಯುತ್ತಿರುವ ಹೋರಾಟ 80 ನೆಯ ದಿನಕ್ಕೆ ಕಾಲಿಟ್ಟಿದೆ. ರೈತರ ಹೋರಾಟದ ಮಧ್ಯೆಯೇ ಸಣ್ಣ ನೀರಾವರಿ ಇಲಾಖೆಯಿಂದ ಕೆರೆ ತುಂಬಿಸುವ ಯೋಜನೆಗೆ ಅನುಮೋದನೆ ನೀಡಲಾಗಿದೆ.

  • 5ಎ ಕಾಲುವೆಗಾಗಿ ನಿಲ್ಲದ ರೈತರ ಹೋರಾಟ: ಮಸ್ಕಿ ಬಂದ್ ಯಶಸ್ವಿ

    5ಎ ಕಾಲುವೆಗಾಗಿ ನಿಲ್ಲದ ರೈತರ ಹೋರಾಟ: ಮಸ್ಕಿ ಬಂದ್ ಯಶಸ್ವಿ

    – 30 ಗ್ರಾಮಗಳ ರೈತರಿಂದ 50 ದಿನಗಳ ಸತತ ಹೋರಾಟ
    – ಭರವಸೆ ನೀಡಿದ ಸರ್ಕಾರದಿಂದ ಸ್ಪಂದನೆಯಿಲ್ಲ

    ರಾಯಚೂರು: 5 ಎ ಕಾಲುವೆಗೆ ಒತ್ತಾಯಿಸಿ ರೈತರು ಕರೆ ನೀಡಿದ್ದ ಜಿಲ್ಲೆ ಮಸ್ಕಿ ಬಂದ್‍ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 30ಕ್ಕೂ ಅಧಿಕ ಹಳ್ಳಿಗಳ ರೈತರು ಸತತ 50 ದಿನಗಳಿಂದ ಹೋರಾಟ ನಡೆಸುತ್ತಿದ್ದರು ಸರ್ಕಾರ ಕಿವಿಗೊಡದ ಹಿನ್ನೆಲೆ 5 ಎ ಕಾಲುವೆ ಹೋರಾಟ ಸಮಿತಿ ಮಸ್ಕಿ ಬಂದ್‍ಗೆ ಕರೆ ನೀಡಿತ್ತು. ವ್ಯಾಪಾರಿಗಳು ಸ್ವಯಂ ಪ್ರೇರಿತರಾಗಿ ಅಂಗಡಿ ಮುಗ್ಗಟ್ಟುಗಳನ್ನ ಮುಚ್ವುವ ಮೂಲಕ ಬಂದ್‍ಗೆ ಬೆಂಬಲ ನೀಡಿದ್ದಾರೆ. ಹೋರಾಟದಲ್ಲಿ 30ಕ್ಕೂ ಹೆಚ್ಚು ಗ್ರಾಮಗಳ ಸಾವಿರಾರು ಜನ ಭಾಗವಹಿಸಿ ಹಕ್ಕೊತ್ತಾಯ ಮಾಡಿದರು.

    ಮಹಿಳೆಯರು, ಮಕ್ಕಳು, ವೃದ್ಧರು ಸಹ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಕಾಲುವೆಗಾಗಿ ಒತ್ತಾಯಿಸಿದರು. ಭಿತ್ತಿ ಪತ್ರಗಳನ್ನ ಪ್ರದರ್ಶಿಸಿ ಮಕ್ಕಳು ಗಮನ ಸೆಳೆದರೆ, ಹೋರಾಟಗಾರರೊಂದಿಗೆ ಘೋಷಣೆ ಕೂಗುತ್ತಾ ಮೆರವಣಿಗೆಯಲ್ಲಿ ಭಾಗಿಯಾಗಿ ವೃದ್ಧೆ ರೈತರಿಗೆ ಸ್ಪೂರ್ತಿ ತುಂಬಿದಳು. ನಮಗೆ ಕಾಲುವೆ ನಿರ್ಮಿಸಿ ನೀರು ಕೊಡಿ ಎಂದು ಘೋಷಣೆ ಕೂಗಿದಳು. ಲಿಂಗಸಗೂರು -ಸಿಂಧನೂರು ಮಾರ್ಗ ಬಸ್ ತಡೆದು ರೈತರು ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದ್ದರಿಂದ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಈಗಲೂ ಸರ್ಕಾರ ಎಚ್ಚೆತ್ತು ಬೇಡಿಕೆ ಈಡೇರಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ರೈತರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

    ಎನ್ ಆರ್ ಬಿ ಸಿ 5ಂ ಉಪ ಕಾಲುವೆಯನ್ನ ನಿರ್ಮಾಣ ಮಾಡಿ ನೀರು ಕೊಡಲು ಒತ್ತಾಯಿಸಿ ನಡೆದಿರುವ ಹೋರಾಟಕ್ಕೆ ಈವರೆಗೂ ಸರ್ಕಾರ ಸ್ಪಂದಿಸಿಲ್ಲ. ಹೀಗಾಗಿ
    ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಈಗಾಗಲೇ ನಾಲ್ಕು ಗ್ರಾಮಗಳ ಗ್ರಾಮಸ್ಥರು ಚುನಾವಣೆಯನ್ನೇ ಬಹಿಷ್ಕಾರ ಮಾಡಿದ್ದರು. ಮುಂಬರುವ ಮಸ್ಕಿ ವಿಧಾನಸಭಾ ಉಪಚುನಾವಣೆ ಸೇರಿ ಎಲ್ಲಾ ಚುನಾವಣೆ ಮತದಾನವನ್ನ ಬಹಿಷ್ಕರಿಸುವುದಾಗಿ ರೈತರು ಹೇಳಿದ್ದಾರೆ.