Tag: ಮಶ್ರೂಮ್ ಫ್ರೈಡ್‌ರೈಸ್

  • ಉಳಿದ ಅನ್ನದಲ್ಲಿ ಮಾಡಿ ಬೊಂಬಾಟ್ ಮಶ್ರೂಮ್ ಫ್ರೈಡ್‌ರೈಸ್

    ಉಳಿದ ಅನ್ನದಲ್ಲಿ ಮಾಡಿ ಬೊಂಬಾಟ್ ಮಶ್ರೂಮ್ ಫ್ರೈಡ್‌ರೈಸ್

    ಹಸಿದವನಿಗೆ ಅನ್ನ ಹಾಕಿದರೆ ಒಳಿತಾಗುತ್ತದೆ ಎಂಬ ಹಿರಿಯರ ಮಾತಿದೆ. ಆದರೆ ಪ್ರಸ್ತುತ ದಿನಗಳಲ್ಲಿ ಲೆಕ್ಕಕ್ಕಿಂತ ಹೆಚ್ಚಿನ ಆಹಾರ ತೆಗೆದುಕೊಂಡು ಎಸೆಯುವವರೇ ಜಾಸ್ತಿ. ಇದು ಒಳ್ಳೆಯ ಅಭ್ಯಾಸವಲ್ಲ. ಹಾಗಿದ್ದರೆ ಉಳಿದ ಅನ್ನದಿಂದ ಏನು ಮಾಡಬಹುದು ಎಂದು ಯೋಚಿಸುತ್ತಿದ್ದೀರಾ? ನಿಮ್ಮ ಈ ಪ್ರಶ್ನೆಗೆ ನಮ್ಮ ಬಳಿ ಉತ್ತರವಿದೆ. ರಾತ್ರಿ ಉಳಿದ ಅನ್ನದಿಂದ ಬೊಂಬಾಟ್ ಮಶ್ರೂಮ್ ಫ್ರೈಡ್‌ರೈಸ್ ಮಾಡುವುದನ್ನು ನಾವು ತಿಳಿಸಿಕೊಡುತ್ತೇವೆ. ಹಾಗಿದ್ದರೆ ಇದನ್ನು ಹೇಗೆ ಮಾಡುವುದು ಎಂಬುದನ್ನು ತಿಳಿದುಕೊಳ್ಳೋಣ.

    ಬೇಕಾಗುವ ಸಾಮಾಗ್ರಿಗಳು:
    ಉಳಿದ ಅನ್ನ – 1 ಕಪ್
    ತೊಳೆದು ಹೆಚ್ಚಿಟ್ಟುಕೊಂಡ ಅಣಬೆ – 150 ಗ್ರಾಂ
    ಹೆಚ್ಚಿದ ಬೆಳ್ಳುಳ್ಳಿ – ಸ್ವಲ್ಪ
    ಹೆಚ್ಚಿದ ಈರುಳ್ಳಿ – ಅರ್ಧ ಕಪ್
    ಕೊತ್ತಂಬರಿ ಸೊಪ್ಪು – ಅರ್ಧ ಚಮಚ
    ಆಲಿವ್ ಆಯಿಲ್- 2 ಚಮಚ
    ಕರಿಮೆಣಸಿನ ಪುಡಿ – ಕಾಲು ಚಮಚ
    ಉಪ್ಪು – ಅಗತ್ಯಕ್ಕೆ ತಕ್ಕಷ್ಟು

    ಮಾಡುವ ವಿಧಾನ:

    • ಮೊದಲಿಗೆ ಒಂದು ಬಾಣಾಲೆಯಲ್ಲಿ ಆಲಿವ್ ಆಯಿಲ್ ಹಾಕಿಕೊಂಡು ಕಾದ ನಂತರ ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಹಾಕಿಕೊಂಡು 2 ನಿಮಿಷಗಳ ಕಾಲ ಚನ್ನಾಗಿ ಫ್ರೈ ಮಾಡಿಕೊಳ್ಳಿ.
    • ಬಳಿಕ ಇದಕ್ಕೆ ಹೆಚ್ಚಿದ ಅಣಬೆಗಳನ್ನು ಹಾಕಿಕೊಂಡು ಕಂದು ಬಣ್ಣ ಬರುವವರೆಗೆ ಚನ್ನಾಗಿ ಹುರಿದುಕೊಳ್ಳಿ. ಇದರ ನೀರಿನಾಂಶ ಸಂಪೂರ್ಣವಾಗಿ ಬಿಡುವುದರಿಂದ ಫ್ರೈಡ್‌ರೈಸ್ ಇನ್ನಷ್ಟು ರುಚಿಯನ್ನು ನೀಡುತ್ತದೆ.
    • ನಂತರ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿಕೊಂಡು ಸ್ವಲ್ಪ ಫ್ರೈ ಮಾಡಿ ನಂತರ ಅದಕ್ಕೆ ಕರಿಮೆಣಸಿನ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಳ್ಳಿ.
    • ಬಳಿಕ ಈ ಮಿಶ್ರಣಕ್ಕೆ ಅನ್ನವನ್ನು ಹಾಕಿಕೊಂಡು 5ರಿಂದ 6 ನಿಮಿಷಗಳ ಕಾಲ ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
    • ಈಗ ಮಶ್ರೂಮ್ ಫ್ರೈಡ್‌ರೈಸ್ ತಿನ್ನಲು ರೆಡಿ. ಇದನ್ನು ಬಿಸಿ ಇರುವಾಗಲೇ ಸರ್ವ್ ಮಾಡಿ ತಿಂದು ಆನಂದಿಸಿ.