Tag: ಮಳೆಗಾಲ

  • ಮಳೆಗಾಲಕ್ಕೂ ಮುನ್ನವೇ ಎಚ್ಚೆತ್ತ ಟ್ರಾಫಿಕ್ ಪೊಲೀಸರು

    ಮಳೆಗಾಲಕ್ಕೂ ಮುನ್ನವೇ ಎಚ್ಚೆತ್ತ ಟ್ರಾಫಿಕ್ ಪೊಲೀಸರು

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮುಂಗಾರು ಮಳೆ ಪ್ರಾರಂಭಕ್ಕೆ ಇನ್ನೊಂದು ತಿಂಗಳು ಬಾಕಿ ಇದೆ. ಸುಮಾರಾಗಿ ಮಳೆ ಬಿದ್ರೂ ಸಾಕು, ಬೆಂಗಳೂರು ತತ್ತರಿಸಿ ಹೋಗುತ್ತದೆ. ಮಳೆಯಿಂದ ಉಂಟಾಗುವ ಅವಘಡಗಳನ್ನು ತಡೆಯೋಕೆ ಬೆಂಗಳೂರು ಟ್ರಾಫಿಕ್ ಪೊಲೀಸರು ಮುಂದಾಗಿದ್ದಾರೆ.

    ಬೆಂಗಳೂರು ಯಾವುದಕ್ಕಾದರೂ ಭಯಪಡುತ್ತೆ ಅಂದ್ರೆ, ಅದು ಎರಡೇ ವಿಚಾರಕ್ಕೆ ಒಂದು ಮಳೆ, ಮತ್ತೊಂದು ಟ್ರಾಫಿಕ್. ಸಣ್ಣದೊಂದು ಮಳೆ ಬಂದರೆ ಸಾಕು ಮರಗಳು ರಸ್ತೆಗೆ ಉರುಳಿ ಬಿಡುತ್ತವೆ. ರಸ್ತೆ ತುಂಬೆಲ್ಲ ನೀರು ನಿಂತು, ಕಿಲೋಮಿಟರ್ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಮಳೆಯ ಸಂದರ್ಭದಲ್ಲಿ ಪಾತ್ ಹೋಲ್ ಗೆ ಬೈಕ್ ಇಳಿದು ಕೈಕಾಲು ಮುರಿದುಕೊಳ್ಳೋದರಿಂದ ಹಿಡಿದು, ವಾಹನ ಸವಾರರು ಜೀವ ಕಳೆದುಕೊಳ್ಳುತ್ತಾರೆ. ಮಳೆಗಾಲದಲ್ಲಿ ಅವೈಜ್ಞಾನಿಕ ವಿದ್ಯುತ್ ಕಂಬಗಳು, ಟ್ರಾನ್ಸ್ ಫಾರ್ಮರ್ ಗಳಿಂದ ಮಕ್ಕಳು, ಸಾರ್ವಜನಿಕರು ಕರೆಂಟ್ ಶಾಕ್ ಹೊಡೆದು ಪ್ರಾಣ ಕಳೆದುಕೊಂಡಿರೋ ಉದಾಹರಣೆಗಳು ಸಾಕಷ್ಟಿವೆ.

    ಇಷ್ಟೆಲ್ಲಾ ಅವಘಡಗಳನ್ನು ತಡೆಯೋ ನಿಟ್ಟಿನಲ್ಲಿ ಬೆಂಗಳೂರು ಸಂಚಾರಿ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಶೇಖರನ್, ತಮ್ಮ ಸಿಬ್ಬಂದಿ ಮೂಲಕ ನಗರದಲ್ಲಿ ಎಲ್ಲೆಲ್ಲಿ ಏನೇನ್ ಸಮಸ್ಯೆ ಆಗುತ್ತೆ, ಹೇಗೆ ಟ್ರಾಫಿಕ್ ಜಾಮ್ ಆಗುತ್ತೆ, ಆ ಸಮಸ್ಯೆಗಳಿಗೆ ಏನೆಲ್ಲಾ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಅಂತಾ ಒಂದು ರಿಪೋರ್ಟ್ ರೆಡಿ ಮಾಡಿದ್ದಾರೆ.

    ರಿಪೋರ್ಟ್ ಕಾರ್ಡ್:
    * ನಗರದ 45 ಏರಿಯಾಗಳ 130 ಕಡೆಗಳ ರಸ್ತೆಗಳಲ್ಲಿ ಮಳೆ ನೀರು ನಿಂತು ಟ್ರಾಫಿಕ್ ಜಾಮ್ ಉಂಟಾಗುತ್ತೆ.
    * 221 ಪಾದಚಾರಿ ಮಾರ್ಗಗಳ ಬಳಿ 86 ಸ್ಕೈವಾಕ್ ಹಾಗೂ ಮೇಲುಸೇತುವೆಗಳು ನಿರ್ಮಿಸಬೇಕಿದೆ.
    * 34 ಸುರಂರ್ಗ ಮಾರ್ಗ, 213 ಕಡೆಗಳಲ್ಲಿ ಪಾದಚಾರಿ ಮಾರ್ಗಗಳ ದುರಸ್ತಿಗೆ ಕ್ರಮ
    * 478 ಭಾಗಗಳಲ್ಲಿ ಜಂಕ್ಷನ್ ಗಳನ್ನು ಅಭಿವೃದ್ಧಿಗೊಳಿಸುವುದು, 292 ಜಾಗಗಳಲ್ಲಿ ಕಾಮಗಾರಿಯನ್ನು ತ್ವರಿತವಾಗಿ ಮುಗಿಸುವುದು.
    * 97 ವಿದ್ಯುತ್ ಕಂಬ ಹಾಗೂ 76 ಟ್ರಾನ್ಸ್ ಫಾರ್ಮರ್ ಸ್ಥಳಾಂತರ. ಹೊಸದಾಗಿ 105 ವಿದ್ಯುತ್ ಕಂಬ ಅಳವಡಿಕೆ.
    * 47 ಅಪಾಯಕಾರಿ ಅಕ್ಸಿಡೆಂಟ್ ಜೋನ್ಸ್‍ಗಳಲ್ಲಿ ಅಪಘಾತಗಳ ತಡೆಗೆ ಕ್ರಮ.
    * ಹೊಸದಾಗಿ 227 ಜಾಗಗಳಲ್ಲಿ ರಸ್ತೆ ಉಬ್ಬುಗಳ ನಿರ್ಮಾಣ, ಅವೈಜ್ಞಾನಿಕವಾಗಿರುವ 131 ಹಂಪ್ಸ್ ಗಳ ತೆರವು.
    * ನಗರದ 52 ಕಡೆಗಳಲ್ಲಿ ರಸ್ತೆಗೆ ಹೊಂದಿಕೊಂಡಂತೆ ಕಸದ ರಾಶಿ ಹಾಕುತ್ತಿದ್ದು, ಅವುಗಳ ತೆರವಿಗೆ ಕ್ರಮ.

    ಈ ಎಲ್ಲಾ ಮೇಲಿನ ಅಂಶಗಳನ್ನು ಪಟ್ಟಿ ಮಾಡಿದ ಸಂಚಾರಿ ಹೆಚ್ಚುವರಿ ಆಯುಕ್ತ ಹರಿಶೇಖರನ್ ಬಿಬಿಎಂಪಿ ಸೇರಿದಂತೆ ಸಂಬಂಧಪಟ್ಟ ಎಲ್ಲಾ ಇಲಾಖೆಗೆ ಪತ್ರ ಬರೆದು, ಮಳೆಗಾಲ ಪ್ರಾರಂಭಕ್ಕೂ ಮುನ್ನವೇ ಮುಂಜಾಗ್ರತೆ ವಹಿಸುವಂತೆ ಮನವಿ ಮಾಡಿದ್ದಾರೆ. ಟ್ರಾಫಿಕ್ ಪೊಲೀಸರ ಈ ಕಳಕಳಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಸ್ವರ್ಗವನ್ನ ನಾಚಿಸುವಂತಿದೆ ಅಡ್ಯಾರ್ ಫಾಲ್ಸ್-ಹಂಸ ನಡಿಗೆಯ ಚೆಲುವೆಯಂತೆ ನಾಜೂಕಾಗಿ, ಶಾಂತವಾಗಿ ಹರೀತಿದೆ ಜಲಪಾತ

    ಸ್ವರ್ಗವನ್ನ ನಾಚಿಸುವಂತಿದೆ ಅಡ್ಯಾರ್ ಫಾಲ್ಸ್-ಹಂಸ ನಡಿಗೆಯ ಚೆಲುವೆಯಂತೆ ನಾಜೂಕಾಗಿ, ಶಾಂತವಾಗಿ ಹರೀತಿದೆ ಜಲಪಾತ

    ಮಂಗಳೂರು: ಕಡಲ ನಗರಿ ಮಂಗಳೂರಿನಲ್ಲಿ ಹಲವು ಬೀಚ್‍ಗಳು ಪ್ರತಿವರ್ಷ ಸಾವಿರಾರು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಆದರೆ ಕೆಲವೊಂದು ಜಲಪಾತಗಳು ಮೂಲ ಸೌಕರ್ಯದ ಕೊರತೆಯಿಂದಾಗಿ ದೂರ ಉಳಿದುಕೊಂಡಿವೆ. ಈ ಸಾಲಿನಲ್ಲಿ ಅಡ್ಯಾರ್ ಜಲಪಾತವೂ ಸೇರುತ್ತದೆ.

    ಮಂಗಳೂರು ನಗರದಿಂದ 10 ಕಿ.ಮೀ ದೂರದ ಅಡ್ಯಾರ್ ಎಂಬಲ್ಲಿ ಈ ಜಲಪಾತವಿದೆ. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ವಳಚ್ಚಿಲ್‍ನಿಂದ ಎಡಕ್ಕೆ ಸಾಗಿದರೆ ಸಿಗೋ ಈ ಫಾಲ್ಸ್ ವಿದ್ಯಾರ್ಥಿಗಳ ನೆಚ್ಚಿನ ವೀಕೆಂಡ್ ಸ್ಪಾಟ್ ಆಗಿದೆ. ಅಡ್ಯಾರ್ ಫಾಲ್ಸ್ ಅಂತಾನೇ ಹೆಸರುವಾಸಿಯಾಗಿರೋ ಈ ಜಲಪಾತ ಮಳೆಗಾಲದಲ್ಲಿ ಮಾತ್ರ ಸ್ವರ್ಗವನ್ನೇ ನಾಚಿಸುವ ಸೌಂದರ್ಯ ಪಡೆಯುತ್ತದೆ.

    ಬೆಟ್ಟದ ಮೇಲಿಂದ ಹಾಲ್ನೊರೆಯ ಹಾಗೆ ಹರಿದು ಬರೋ ನೀರು ಲಲನೆಯ ರೀತಿ ಹರಿಯುತ್ತದೆ. ಸುಮಾರು 40 ಅಡಿ ಎತ್ತರದಿಂದ ಧುಮುಕುವ ನೀರಿನ ಸೊಬಗನ್ನು ನೋಡಲು ಎರಡು ಕಣ್ಣು ಸಾಲದು. ಹೆಚ್ಚಿನ ಜಲಪಾತಗಳು ರಭಸದಿಂದ ಹರಿದು, ಪ್ರಪಾತ ಸೇರುವ ಕಾರಣ ಕೆಲವೊಮ್ಮೆ ಪ್ರವಾಸಿಗರ ಪಾಲಿಗೆ ಅವು ಅಪಾಯಕಾರಿಯಾಗಿರುತ್ತದೆ. ಆದರೆ ವಳಚ್ಚಿಲ್ ಜಲಪಾತದಲ್ಲಿ ನೀರು ರಭಸವಾಗಿ ಹರಿಯದೆ, ಹಂಸ ನಡಿಗೆಯ ಚೆಲುವೆಯಂತೆ ನಾಜೂಕಾಗಿ ಶಾಂತವಾಗಿ ಹರಿಯುತ್ತದೆ. ಹಾಗಾಗಿಯೇ ವಿದ್ಯಾರ್ಥಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಅಡ್ಯಾರ್ ಫಾಲ್ಸ್ ಗೆ ಬರುತ್ತಾರೆ.

    ಅಡ್ಯಾರ್ ಜಲಪಾತ ಜೂನ್‍ನಲ್ಲಿ ಮಳೆಯೊಂದಿಗೆ ತೆರೆದುಕೊಳ್ಳುವ ಜಲಪಾತ ನವಂಬರ್‍ವರೆಗೂ ವೈಭವದಿಂದ ಮೇಳೈಸುತ್ತದೆ. ಆದರೆ ಫಾಲ್ಸ್ ಗೆ ಹೋಗೋಕೆ ಸಮರ್ಪಕವಾದ ರಸ್ತೆ ವ್ಯವಸ್ಥೆ ಇಲ್ಲ. ಹಾಗಾಗಿಯೇ ಜನ ಫಾಲ್ಸ್ ವೈಭವ ಕಾಣೋಕೆ ಹಿಂಜರಿಯುತ್ತಾರೆ. ಇನ್ನೊಂದೆಡೆ ಪೋಲಿಗಳು ಈ ಫಾಲ್ಸ್ ನ್ನು ಜಾಲಿ ಮಾಡೋಕೆ ಬಳಸೋದ್ರಿಂದ ಮದ್ಯದ ಬಾಟಲ್ ಗಳು, ಪ್ಲಾಸ್ಟಿಕ್ ಚೀಲಗಳು ಇದರ ಸೌಂದರ್ಯಕ್ಕೆ ಧಕ್ಕೆ ತಂದಿದೆ.

    ಒಟ್ಟಿನಲ್ಲಿ ಫಾಲ್ಸ್ ನೋಡೋಕೆ ಪಶ್ಚಿಮ ಘಟ್ಟಗಳ ತಪ್ಪಲಿಗೆ ಹೋಗೋ ಜನ ಮಂಗಳೂರಿಗೆ ಕೂಗಳತೆ ದೂರದಲ್ಲಿರೋ ಫಾಲ್ಸ್ ನ ಸೌಂದರ್ಯ ನೋಡೋ ಅವಕಾಶ ವಂಚಿತರಾಗಿದ್ದಾರೆ. ಪ್ರವಾಸೋದ್ಯಮ ಇಲಾಖೆ ಎಚ್ಚೆತ್ತು ಜಲಪಾತ ಸೌಂದರ್ಯ ಉಳಿಸಿದ್ರೆ ಕರಾವಳಿಯ ಪ್ರವಾಸಿ ತಾಣಗಳ ಪಟ್ಟಿಗೆ ಅಡ್ಯಾರ್ ಫಾಲ್ಸ್ ಕೂಡಾ ಸೇರಿ, ಪ್ರವಾಸಿಗರನ್ನು ತನ್ನತ್ತ ಸೆಳೆಯಬಹುದು.

    https://youtu.be/iYalE_HuW6k

  • ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಮಡಿಕೇರಿ ಮಂಜು

    ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಮಡಿಕೇರಿ ಮಂಜು

    ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಒಂದು ತಿಂಗಳಿನಿಂದ ಎಡೆಬಿಡದೆ ಮಳೆ ಸುರೊಯುತ್ತಿದೆ.  ವರುಣ ದೇವನ ಆರ್ಭಟ ಸ್ವಲ್ಪ ಪ್ರಮಾಣದಲ್ಲಿ  ಕಡಿಮೆಯಾಗಿದ್ದು, ಕರ್ನಾಟಕದ ಕಾಶ್ಮೀರ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

    ಮಲೆನಾಡಿನ ವಾತಾವರಣವನ್ನು ಅನುಭವಿಸಬೇಕು ಎಂದು ಪ್ಲಾನ್ ಮಾಡುವರು ಮಡಿಕೇರಿ ಸುತ್ತಮುತ್ತದ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು. ಇನ್ನು ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಇಬ್ಬನಿಯ ಸಿಂಚನದಲ್ಲಿ ಮನಸೋಲುತ್ತಿದ್ದಾರೆ. ಟ್ರಾಫಿಕ್, ಧೂಳಿನ ನಡುವೆ ಇದ್ದವರು ಮನತಣಿಸುವ ತಂಪಾದ ಪರಿಸರಕ್ಕೆ ಮೂಕವಿಸ್ಮಿತರಾಗುತ್ತಿದ್ದಾರೆ.

    ವೀಕೆಂಡ್‍ಗಳಲ್ಲಂತೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಮಂಜಿನ ವೈಭವದಿಂದ ಭೂಲೋಕದಲ್ಲಿ ಸ್ವರ್ಗ ಸೃಷ್ಠಿಯಾದಂತೆ ಭಾಸವಾಗುತ್ತಿದೆ. ಬೆಟ್ಟ ಪ್ರದೇಶಗಳಾದ ಮಾಂದಲ್ ಪಟ್ಟಿಯಲ್ಲಂತೂ ಮಂಜಿನ ಮಾಯಲೋಕ ಸೃಷ್ಠಿಯಾಗಿದೆ.

    ಮಂಜಿನ ಕಣ್ಣಾಮುಚ್ಚಾಲೆ, ಮಳೆಯ ಅರ್ಭಟ, ಮೈಕೊರೆಯುವ ಚಳಿ, ಜೊತೆಗೆ ಅಬ್ಬರಿಸುವ ಗಾಳಿಗೆ ಕೂರ್ಗ್ ಸ್ಪೆಷಲ್ ಟೇಸ್ಟಿ ಕಾಫಿ ಹಿತ ಅನುಭವ ನೀಡುತ್ತಿದ್ದು ಟೂರಿಸ್ಟ್ ಗಳು ಇವೆಲ್ಲದಕ್ಕೆ ಮನಸೋಲ್ತಿದ್ದಾರೆ. ಬೆಟ್ಟ ಪ್ರದೇಶಗಳಾದ ಮಾಂದಲ್ ಪಟ್ಟಿಯಲ್ಲಂತೂ ಮಂಜಿನ ಮಾಯಲೋಕ ಸೃಷ್ಠಿಯಾಗಿದೆ. ಗಿರಿಕಂದಕಗಳ ನಡುವೆ ಮಂಜಿನ ಥಕಧಿಮಿತ ನೋಡಲು 2 ಕಣ್ಣುಗಳು ಕೂಡ ಸಾಲುತ್ತಿಲ್ಲ. ಮಂಜಿನ ಸ್ಪರ್ಶ ಸವಿಯುತ್ತ ಎಂಜಾಯ್ ಮಾಡುವ ಪ್ರವಾಸಿಗರಿಗೆ ಕೊಡಗಿನಿಂದ ಹೋಗಲು ಮನಸೇ ಬರ್ತಿಲ್ಲ ಅಂತಾ ಹೇಳುತ್ತಿದ್ದಾರೆ.

    ಒಟ್ಟಾರೆಯಾಗಿ ಮಂಜಿನ ನಗರಿ ಪ್ರವಾಸಿಗರನ್ನು ಒಂದೆಡೆ ಸೆಳೆಯುತ್ತಿದ್ರೆ. ಅಬ್ಬರಿಸಿ ಬೊಬ್ಬರೆಯುತ್ತಿರುವ ಮಳೆಯಿಂದ ಕೊಡಗಿನ ಜನ ಮಾತ್ರ ತತ್ತರಗೊಂಡಿದ್ದಾರೆ. ಮನತಣಿಸುವ ಮಂಜಿಗೆ ಪ್ರವಾಸಿಗರು ಈಗಾಗ್ಲೇ ಮನಸೋತಿದ್ದಾರೆ. ಕೊಡಗನ್ನು ಮತ್ತೇ ಮತ್ತೇ ನೋಡಬೇಕಾನುವ ಮಟ್ಟಿಗೆ ಮಂಜಿನ ಲೋಕ ಹುಚ್ಚು ಹಿಡಿಸಿದೆ. ಮಳೆಗಾಲದಲ್ಲಿ ಕಂಗೊಳಿಸುವ ಶ್ವೇತಸುಂದರಿ ಇಡೀ ಕೊಡಗನ್ನು ಆವರಿಸಿ ಹಿತವಾದ ಅನುಭವ ನೀಡ್ತಿದ್ದು ಪ್ರವಾಸಿಗರು ಟೆನ್ಷನ್ ಮರೆತು ರಿಫ್ರೆಶ್ ಆಗುತ್ತಿದ್ದಾರೆ. ನೀವು ಕೂಡ ಕೊಡಗಿಗೊಮ್ಮೆ ಆಗಮಿಸಿ ಸೂಪರ್ ವೆದರ್ ನ ಫೀಲ್ ಮಾಡಿ.

  • ರಾಜ್ಯದಲ್ಲಿ ನಿಲ್ಲದ ಮಳೆ, ತಗ್ಗದ ಪ್ರವಾಹ – ಆಗುಂಬೆ ಸೂರ್ಯಾಸ್ತ ಗೋಪುರ ರಸ್ತೆ ಕುಸಿತ – KRS, ಹೇಮಾವತಿ ಇಂದು ಸಂಪೂರ್ಣ

    ರಾಜ್ಯದಲ್ಲಿ ನಿಲ್ಲದ ಮಳೆ, ತಗ್ಗದ ಪ್ರವಾಹ – ಆಗುಂಬೆ ಸೂರ್ಯಾಸ್ತ ಗೋಪುರ ರಸ್ತೆ ಕುಸಿತ – KRS, ಹೇಮಾವತಿ ಇಂದು ಸಂಪೂರ್ಣ

    ಬೆಂಗಳೂರು: ರಾಜ್ಯಾದ್ಯಂತ ಮಳೆರಾಯನ ಅಬ್ಬರ ಮತ್ತಷ್ಟು ಜೋರಾಗಿದೆ. ಕರಾವಳಿ, ಮಲೆನಾಡು ಜನರಿಗೆ ಸಾಕು ಅನ್ನಿಸುವಷ್ಟು ಮಳೆಯಾಗುತ್ತಿದ್ದರೆ, ಬಯಲು ಸೀಮೆಯ ಜನರಲ್ಲಿ ಖುಷಿಯೋ ಖುಷಿ. ಯಾಕಂದ್ರೆ ಎಲ್ಲಾ ಡ್ಯಾಮ್‍ಗಳಿಗೂ ಜೀವಕಳೆ ಬಂದಿದೆ.

    124.80 ಅಡಿ ಸಾಮರ್ಥ್ಯದ ಕೆಆರ್ ಎಸ್‍ನಲ್ಲೀಗ 121.40 ಅಡಿ ನೀರು ಬಂದಿದ್ದು, ಭರ್ತಿಗೆ ಮೂರು ಅಡಿ ಬಾಕಿ ಇದೆ. ಹೇಮಾವತಿಗೂ 3 ಅಡಿ ಬಾಕಿಯಿದ್ದು, ಎರಡು ಜಲಾಶಯಗಳು ಇವತ್ತೇ ಬಹುತೇಕ ತುಂಬಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ನದಿ ತಟದ ಜನರಿಗೆ ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದೆ.

    ಕಬಿನಿ ಜಲಾಶಯದಿಂದ 45 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದ್ದು, ಕಪಿಲಾ ನದಿ ಉಕ್ಕಿ ಹರಿಯುತ್ತಿದೆ. ನಂಜನಗೂಡಲ್ಲಿರುವ ಕಪಿಲಾ ನದಿ ಅಕ್ಕ-ಪಕ್ಕದ ಹಳ್ಳಿಗಳಲ್ಲಿ ಪ್ರವಾಹ ಉಂಟಾಗಿದೆ. ಮನೆಗಳು ಜಲಾವೃತಗೊಂಡಿದ್ದು, ಸ್ಥಳೀಯರು ಮನೆ ತೊರೆದು ಸಾಮಾನು ಸರಂಜಾಮುಗಳೊಂದಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳುತ್ತಿದ್ದಾರೆ. ಅತ್ತ, ಮಹಾರಾಷ್ಟ್ರದಲ್ಲಿ ವಿಪರೀತ ಮಳೆ ಆಗುತ್ತಿರೋ ಕಾರಣ ಕೃಷ್ಣಾನದಿಗೆ ಮತ್ತಷ್ಟು ನೀರು ಹರಿದು ಬಂದಿದೆ. ಚಿಕ್ಕೋಡಿ ಸುತ್ತಮುತ್ತ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

    ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನಾದ್ಯಂತ ಭಾರೀ ಮಳೆಯಾಗಿದೆ. ಮಾಲತಿ ನದಿ ತುಂಬಿ ಹರಿಯುತ್ತಿದೆ. ಗುಡ್ಡೇಕೇರಿ- ಬಿದರಗೋಡು ರಸ್ತೆ ಮೇಲೆ ಮೂರು ಅಡಿ ನೀರು ನಿಂತಿದ್ದು, ಶೃಂಗೇರಿ-ತೀರ್ಥಹಳ್ಳಿ ಸಂಪರ್ಕ ಬಂದ್ ಆಗಿದೆ. ಗ್ರಾಮೀಣ ಪ್ರದೇಶದ ಜನ ಜೀವನ ಅಸ್ತವ್ಯಸ್ತವಾಗಿದೆ. ಇನ್ನು ಆಗುಂಬೆ ಘಾಟ್‍ನಲ್ಲಿ ಮತ್ತೆ ಭೂ ಕುಸಿತವಾಗಿದೆ. ಆಗುಂಬೆ ಸನ್ ಸೆಟ್ ಪಾಯಿಂಟ್ ಬಳಿ ರಸ್ತೆ ಪಕ್ಕದಲ್ಲಿ ಭೂ ಕುಸಿದಿದ್ದು, ಸೂರ್ಯಾಸ್ತ ವೀಕ್ಷಣೆಗೆ ಸಾರ್ವಜನಿಕರಿಗೆ ನಿಷೇಧ ಹೇರಿದ್ದಾರೆ. ಚಿಕ್ಕಮಗಳೂರಿನಲ್ಲಿ ಚಿಕ್ಕ ಆಣೆಕಟ್ಟುಗಳೆಲ್ಲಾ ಭರ್ತಿ ಆಗಿದ್ದು, ರಸ್ತೆ, ಸೇತುವೆ, ಮನೆ ಗೋಡೆ, ಗುಡ್ಡಗಳೆಲ್ಲಾ ಕುಸಿಯುತ್ತಿವೆ.

    ರಾಮನಗರದ ಹಲವೆಡೆ ಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ಚನ್ನಪಟ್ಟಣ, ಕನಕಪುರದಲ್ಲಿ ಸೇರಿ ಹಲವೆಡೆ ಮಳೆಯಾಗಿದ್ದು ರಸ್ತೆಯ ಮೇಲೆ ಮಳೆ ನೀರು ನಿಂತು ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೇ ಮಳೆಯಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೆಲ ಕಾಲ ಸಂಚಾರ ಅಸ್ತವ್ಯಸ್ತವಾಗಿ ದ್ವಿಚಕ್ರ ವಾಹನ ಸವಾರರು ಸಮಸ್ಯೆ ಅನುಭವಿಸಿದರು.

    ಮಲೆನಾಡಿನಲ್ಲಿ ಸಾಕು ಅನ್ನುವಷ್ಟು ಮಳೆಯಾಗ್ತಿದ್ರೆ, ಬಿಸಿಲನಾಡು ರಾಯಚೂರು, ಧಾರವಾಡ, ಹಾವೇರಿಯಲ್ಲಿ ಮಾತ್ರ ವರುಣದೇವ ತನ್ನ ಕೃಪೆ ತೋರಿಲ್ಲ. ಉದ್ದು, ಹೆಸರು, ಎಳ್ಳು ಬಿತ್ತನೆ ಮಾಡಿದ್ದ ರೈತರು ಮೊಳಕೆ ಬಾರದೆ ನಷ್ಟ ಅನುಭವಿಸಿದ್ದಾರೆ. ಮೋಡಕವಿದ ವಾತಾವರಣವಿದ್ದರೂ ದೊಡ್ಡ ಮಳೆ ಬಾರದೆ ಕಂಗಾಲಾಗಿ ವಿಶೇಷ ಪೂಜೆಗಳನ್ನ ಮಾಡುತ್ತಿದ್ದಾರೆ. ಇತ್ತ ನವಲಗುಂದ ಪಟ್ಟಣದ ಬಿರಲಿಂಗೇಶ್ವರ ಯುವಕ ಮಂಡಳಿಯವರು ಮಳೆಗಾಗಿ ಕತ್ತೆಗಳ ಮದುವೆ ಮಾಡಿದ್ದಾರೆ.

    ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಭಾರೀ ಮಳೆಯಾಗಿದೆ. ಮಳೆ ರುದ್ರನರ್ತನಕ್ಕೆ ನಗರದ ರಸ್ತೆಗಳು, ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದೆ. ವಸತಿ ಪ್ರದೇಶಗಳಲ್ಲಿ ನೀರು ನುಗ್ಗಿದ್ದು, ಜನರು ಪರದಾಡುತ್ತಿದ್ದಾರೆ. ಮಿಂಟೋ ಸೇತುವೆಯ ಅಡಿ ಮಳೆ ನೀರು ತುಂಬಿ ಹೋಗಿದೆ. ರಸ್ತೆಗಳು ಕೆರೆಯಂತಾಗಿದ್ದು, ಹಲವಾರು ಬಸ್‍ಗಳು ಮಳೆ ನೀರಿನಲ್ಲಿ ಮುಳುಗಿ ಹೋಗಿದೆ. ಸಂಚಾರ ಸಂಪೂರ್ಣ ಅಸ್ತವ್ಯಸ್ಯಗೊಂಡಿದೆ.

  • ಮಳೆಗಾಲದಲ್ಲಿ ಪಾಲನೆ ಮಾಡಬೇಕಾದ ಆರೋಗ್ಯ ಸೂತ್ರಗಳು

    ಮಳೆಗಾಲದಲ್ಲಿ ಪಾಲನೆ ಮಾಡಬೇಕಾದ ಆರೋಗ್ಯ ಸೂತ್ರಗಳು

    ಹೊರಗೆ ಮಳೆ ಬರುತ್ತಿದೆ ಎಂದರೆ ಹಾಸಿಗೆ ಬಿಟ್ಟು ಏಳಲು ಮನಸ್ಸೇ ಆಗುವುದಿಲ್ಲ. ಬಿಸಿ ಬಿಸಿ ಬಜ್ಜಿ, ಬೋಂಡಾ, ಸಮೋಸ, ಪಾನಿಪುರಿ, ಗೋಬಿ, ಬಾಯಿ ಚಪ್ಪರಿಸುವ ತಿಂಡಿಗಳನ್ನು ತಿನ್ನಬೇಕೆನಿಸುತ್ತದೆ. ಹಾಗಾದ್ರೆ ಸ್ವಲ್ಪ ತಾಳಿ, ನೀವು ಮಳೆಗಾಲದಲ್ಲಿ ಮನಬಂದಂತೆ ಹೊರಗಿನ ತಿಂಡಿ, ಬೀದಿಬದಿಯ ತಿನಿಸುಗಳನ್ನು ತಿಂದರೆ ವೈದ್ಯರೇ ಬಳಿ ಹೋಗೋದು ಗ್ಯಾರೆಂಟಿ.

    ಜ್ವರ, ಶೀತ, ನೆಗಡಿ ಹೀಗೆ ಅನೇಕ ರೋಗಗಳು ನಿಮ್ಮನ್ನು ಆವರಿಸಬಹುದು. ಮಳೆಗಾಲದಲ್ಲಿ ನೀರಿನಲ್ಲಿ ಸೂಕ್ಷ್ಮಾಣುಗಳು ಉತ್ಪತ್ತಿ ಆಗುತ್ತದೆ. ನೀರಿನ ಮೂಲಕ ರೋಗಾಣುಗಳು ನಿಮ್ಮನ್ನು ಅಟ್ಯಾಕ್ ಮಾಡಲು ಹೊಂಚು ಹಾಕುತ್ತಿರುತ್ತದೆ. ಆದ್ದರಿಂದ ಈ ಕಾಲದಲ್ಲಿ ನೀವು ಎಚ್ಚರಿಕೆಯಿಂದಿರಬೇಕು. ಅದರಲ್ಲೂ ನೀರಿನ ವಿಚಾರದಲ್ಲಿ ಸ್ವಲ್ಪ ಕಾಳಜಿ ಹೆಚ್ಚಿದರೆ ಒಳ್ಳೆಯದು.

    ಮಳೆಗಾಲದಲ್ಲಿ ಪಾಲಿಸಬೇಕಾದ ಕೆಲವು ಟಿಪ್ಸ್ ಗಳು ಹೀಗಿವೆ

    * ಈ ಕಾಲದಲ್ಲಿ ರೋಗಗಳು ಹೆಚ್ಚಾಗಿ ನೀರಿನಿಂದ ಹರಡುತ್ತದೆ. ಹೀಗಾಗಿ ನೀರನ್ನು ಕುದಿಸಿ, ಆರಿಸಿ ಕುಡಿಯಿರಿ.
    * ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಗ್ಗುತ್ತದೆ. ಹೀಗಾಗಿ ಕಷಾಯ, ಹರ್ಬಲ್ ಟೀ ಸೇವಿಸಿ, ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುವಂತೆ ಮಾಡುತ್ತದೆ.
    * ರಸ್ತೆ ಬದಿಯ ತಿಂಡಿ ತಿನಿಸುಗಳಿಂದ ಸಾಧ್ಯವಾದಷ್ಟು ದೂರವಿರಿ.
    * ಬಿಸಿಯಾದ ಆಹಾರ ಸೇವಿಸಿ, ಹಸಿರು ಸೊಪ್ಪು, ತಾಜಾ ತರಕಾರಿಗಳ ಸೇವನೆ ಆರೋಗ್ಯಕರ.

    * ತರಕಾರಿಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ಅಡುಗೆ ಮಾಡಲು ಬಳಸಿ.
    * ಬೆಳಗ್ಗೆ ಮನೆಯಿಂದ ಹೊರಡುವಾಗ ಸ್ನಾನ ಮಾಡಿದ್ದರೂ, ಮತ್ತೊಮ್ಮೆ ಸಂಜೆ ಸ್ನಾನ ಮಾಡಿ. ಇದ್ರಿಂದ ಬೆವರಿನಿಂದ ಬರಬಹುದಾದ ಸೋಂಕಿನಿಂದ ರಕ್ಷಣೆ ಸಿಗುತ್ತದೆ.
    * ಚಳಿ ಇರುವಾಗ ಹೆಚ್ಚು ಬಾಯಾರಿಕೆ ಆಗುವುದಿಲ್ಲ. ಆದರೂ ನೀವು ನೀರು ಕುಡಿಯುವುದನ್ನು ಕಡಿಮೆ ಮಾಡಲೇಬೇಡಿ.
    * ಮಳೆಯಲ್ಲಿ ಹೆಚ್ಚಾಗಿ ಹೊರಗೆ ಹೋಗಬೇಡಿ, ಇದ್ರಿಂದ ವೈರಲ್ ರೋಗಗಳು ಬರುವ ಸಾಧ್ಯತೆ ಹೆಚ್ಚು.

    * ಮನೆಯಲ್ಲಿ ತೇವ ಅಥವಾ ಒದ್ದೆ ಇರುವ ಗೋಡೆಗಳಿದ್ದರೆ ಶಿಲೀಂದ್ರಗಳ ಅವಾಸಸ್ಥಾನವಾಗುತ್ತೆ. ಉಸಿರಾಟ ಸಮಸ್ಯೆ ಇರುವವರು ಎಚ್ಚರದಿಂದಿರಿ.
    * ಪದೇ ಪದೇ ಕೊಳೆ ಇರುವ, ತೊಳೆಯದ ಕೈಗಳಿಂದ ಕಣ್ಣುಗಳನ್ನು ಮುಟ್ಟಿಕೊಳ್ಳಬೇಡಿ. ವೈರಸ್ ಹರಡಬಹುದು.
    * ಮನೆಯಲ್ಲಿ ಮಕ್ಕಳಿದ್ದರೆ ಅವರು ತಿನ್ನುವ ಆಹಾರ, ಕುಡಿಯುವ ನೀರಿನ ಬಗ್ಗೆ ಗಮನ ವಹಿಸಿ.
    * ಮಕ್ಕಳನ್ನು ನೀರಿನಲ್ಲಿ ಆಡಲು & ಮಳೆಯಲ್ಲಿ ನೆನೆಯಲು ಬಿಡಬೇಡಿ.. ಬಟ್ಟೆ ಒದ್ದೆಯಾಗಿರದಂತೆ ನೋಡಿಕೊಳ್ಳಿ.
    * ನಿಮ್ಮ ಸುತ್ತಮುತ್ತಲಿನ ಪರಿಸರ ಕಲುಷಿತಗೊಂಡಿದ್ದರೆ ರೋಗ ಕಟ್ಟಿಟ್ಟಬುತ್ತಿ. ಹೀಗಾಗಿ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ. ಇದ್ರಿಂದ ಸೊಳ್ಳೆ, ನೊಣಗಳು ದಾಳಿ ತಪ್ಪುತ್ತದೆ.

  • ಮಳೆಗಾಲಕ್ಕಾಗಿಯೇ ಸಿದ್ಧವಾಗಿರುವ ಸ್ಮಾರ್ಟ್ ಫೋನ್‍ಗಳು-ನೀರಿನಲ್ಲಿ ಬಿದ್ದರೂ ಚಿಂತೆಯಿಲ್ಲ!

    ಮಳೆಗಾಲಕ್ಕಾಗಿಯೇ ಸಿದ್ಧವಾಗಿರುವ ಸ್ಮಾರ್ಟ್ ಫೋನ್‍ಗಳು-ನೀರಿನಲ್ಲಿ ಬಿದ್ದರೂ ಚಿಂತೆಯಿಲ್ಲ!

    -ಇವುಗಳ ಗುಣ-ವೈಶಿಷ್ಟ್ಯವೇನು? ಬೆಲೆ ಎಷ್ಟು?

    ಬೆಂಗಳೂರು: ಮಳೆಯಿಂದಾಗಿ ಸ್ಮಾರ್ಟ್ ಫೋನ್‍ಗಳು ಹಾಳಾಗುವುದನ್ನು ನಾವು-ನೀವು ನೋಡಿಯೇ ಇದ್ದೇವೆ. ಆದರೆ ಇಂದು ಮಾರುಕಟ್ಟೆಗಳಲ್ಲಿ ಲಭ್ಯವಿರುವ ವಾಟರ್ ಪ್ರೂಫ್  ಫೋನ್‍ಗಳಿಂದ ಈ ತರಹದ ಚಿಂತೆ ಮಾಡಬೇಕಾಗಿಲ್ಲ.

    ಮಾರುಕಟ್ಟೆಗಳಲ್ಲಿ ಮಳೆಗಾಲಕ್ಕಾಗಿ ಸಿದ್ಧವಾಗಿರುವ ವಾಟರ್ ಪ್ರೂಫ್  ಸ್ಮಾರ್ಟ್ ಫೋನ್‍ಗಳು ಯಾವುವು? ಅದರ ಗುಣ-ವೈಶಿಷ್ಟ್ಯವೇನು? ಹಾಗೂ ಬೆಲೆ ಎಷ್ಟು ಎಂಬುದನ್ನು ತಿಳಿದುಕೊಳ್ಳಿ

    1. ಎಚ್‍ಟಿಸಿ ಯು-11, ಬೆಲೆ 39,999 ರೂ.
    ಗುಣ-ವೈಶಿಷ್ಟ್ಯಗಳು: 5.5 ಇಂಚ್ ಕ್ಯು ಎಚ್‍ಡಿ ಡಿಸ್ಲ್ಪೇ, ಕ್ವಾಲಕಂ ಸ್ನಾಪ್‍ಡ್ರಾಗನ್ 835 ಪ್ರೊಸೆಸರ್, 12ಎಂಪಿ ಹಾಗೂ 16 ಎಂಪಿ ಕ್ಯಾಮರಾ, 6ಜಿಬಿ RAM, 128 ಜಿಬಿ ಆಂತರಿಕ ಮೆಮೊರಿ. 3000 ಎಂಎಎಚ್ ಬ್ಯಾಟರಿ ಧೂಳು ಮತ್ತು ವಾಟರ್ ಪ್ರೂಫ್.

    2. ಎಲ್‍ಜಿ ವಿ30+, ಬೆಲೆ 44,990 ರೂ.
    ಗುಣ-ವೈಶಿಷ್ಟ್ಯಗಳು: 6 ಇಂಚ್ ಓಎಲ್‍ಇಡಿ ಡಿಸ್ಲ್ಪೇ, ಕ್ವಾಲಕಂ ಸ್ನಾಪ್‍ಡ್ರಾಗನ್ 835 ಪ್ರೊಸೆಸರ್, 12ಎಂಪಿ+16ಎಂಪಿ ವ ಹಾಗೂ 5 ಎಂಪಿ ಕ್ಯಾಮೆರಾ, 4ಜಿಬಿ RAM, 128 ಜಿಬಿ ಆಂತರಿಕ ಮೆಮೊರಿ. 3300 ಎಂಎಎಚ್ ಬ್ಯಾಟರಿ. ಧೂಳು ಮತ್ತು ವಾಟರ್ ಪ್ರೂಫ್.

    3.ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್-5, ಬೆಲೆ 45,990 ರೂ.
    ಗುಣ-ವೈಶಿಷ್ಟ್ಯಗಳು: 5.7 ಇಂಚ್ ಫುಲ್ ಕ್ಯೂಎಚ್‍ಡಿ ಡಿಸ್ಲ್ಪೇ, ಎಕ್ಸಿನೋಸ್ ವೊಕ್ಟಾ ಕೋರ್ 7420 ಪ್ರೋಸೆಸರ್, 4ಜಿಬಿ RAM, 32 ಜಿಬಿ ಆಂತರಿಕ ಮೆಮೊರಿ. 3000 ಎಂಎಎಚ್ ಬ್ಯಾಟರಿ. ಧೂಳು ಮತ್ತು ವಾಟರ್ ಪ್ರೂಫ್.

    4. ಆ್ಯಪಲ್ ಐ-ಫೋನ್-7, ಬೆಲೆ 48,999 ರೂ.
    ಗುಣ-ವೈಶಿಷ್ಟ್ಯಗಳು: 4.7 ಇಂಚ್ ರೆಟಿನಾ ಎಚ್‍ಡಿ ಡಿಸ್ಲ್ಪೇ, ಎ10 ಬಯೋನಿಕ್ 64 ಬಿಟ್ ಪ್ರೋಸೆಸರ್, 32 ಜಿಬಿ ಆಂತರಿಕ ಮೆಮೊರಿ. 12ಎಂಪಿ ಕ್ಯಾಮೆರಾ ಹಾಗೂ 7ಎಂಪಿ ಫ್ರೆಂಟ್ ಕ್ಯಾಮೆರಾ. ಧೂಳು ಮತ್ತು ವಾಟರ್ ಪ್ರೂಫ್.

    5. ನೋಕಿಯಾ 8 ಸಿರೊಖೋ, ಬೆಲೆ 49,999 ರೂ.
    ಗುಣ-ವೈಶಿಷ್ಟ್ಯಗಳು: 5.5 ಇಂಚ್ ಫುಲ್ ಎಚ್‍ಡಿ ಡಿಸ್ಲ್ಪೇ, ಕ್ವಾಲಕಂ ಸ್ನಾಪ್‍ಡ್ರಾಗನ್ 835 ಪ್ರೋಸೆಸರ್, 12ಎಂಪಿ+13ಎಂಪಿ ವ ಹಾಗೂ 5 ಎಂಪಿ ಕ್ಯಾಮೆರಾ, 6ಜಿಬಿ RAM, 128 ಜಿಬಿ ಆಂತರಿಕ ಮೆಮೊರಿ. 3260 ಎಂಎಎಚ್ ಬ್ಯಾಟರಿ. ಧೂಳು ಮತ್ತು ವಾಟರ್ ಪ್ರೂಫ್.

    6. ಗೂಗಲ್ ಪಿಕ್ಸೆಲ್ 2, ಬೆಲೆ 52,999 ರೂ.
    ಗುಣ-ವೈಶಿಷ್ಟ್ಯಗಳು: 5 ಇಂಚ್ ಫುಲ್ ಎಚ್‍ಡಿ ಡಿಸ್ಲ್ಪೇ, ಕ್ವಾಲಕಂ ಸ್ನಾಪ್‍ಡ್ರಾಗನ್ 835 ಪ್ರೊಸೆಸರ್, 12ಎಂಪಿ ಹಾಗೂ 8 ಎಂಪಿ ಕ್ಯಾಮೆರಾ, 4ಜಿಬಿ RAM, 64 ಜಿಬಿ ಆಂತರಿಕ ಮೆಮೊರಿ. 2700 ಎಂಎಎಚ್ ಬ್ಯಾಟರಿ. ಧೂಳು ಮತ್ತು ವಾಟರ್ ಪ್ರೂಫ್.

    7. ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 9, ಬೆಲೆ 57,900 ರೂ.
    ಗುಣ-ವೈಶಿಷ್ಟ್ಯಗಳು: 5.8 ಇಂಚ್ ಫುಲ್ ಕ್ಯೂಎಚ್‍ಡಿ ಡಿಸ್ಲ್ಪೇ,ಎಕ್ಸಿನೋಸ್ ವೊಕ್ಟಾ ಕೋರ್ 9810 ಪ್ರೊಸೆಸರ್, 4ಜಿಬಿ RAM, 64 ಜಿಬಿ ಆಂತರಿಕ ಮೆಮೊರಿ. 3000 ಎಂಎಎಚ್ ಬ್ಯಾಟರಿ. ಧೂಳು ಮತ್ತು ವಾಟರ್ ಪ್ರೂಫ್.

    8. ಆ್ಯಪಲ್ ಐ-ಫೋನ್ 8, ಬೆಲೆ 59,990 ರೂ.
    ಗುಣ-ವೈಶಿಷ್ಟ್ಯಗಳು: 4.7 ಇಂಚ್ ರೆಟಿನಾ ಎಚ್‍ಡಿ ಡಿಸ್ಲ್ಪೇ, ಎ11 ಬಯೋನಿಕ್ 64 ಬಿಟ್ ಪ್ರೊಸೆಸರ್, 64 ಜಿಬಿ ಆಂತರಿಕ ಮೆಮೊರಿ. 12ಎಂಪಿ ಕ್ಯಾಮೆರಾ ಹಾಗೂ 7ಎಂಪಿ ಫ್ರೆಂಟ್ ಕ್ಯಾಮೆರಾ. ಧೂಳು ಮತ್ತು ವಾಟರ್ ಪ್ರೂಫ್.

    9. ಗೂಗಲ್ ಪಿಕ್ಸೆಲ್ 2 ಎಕ್ಸ್, ಎಲ್ ಬೆಲೆ 62,999 ರೂ.
    ಗುಣ-ವೈಶಿಷ್ಟ್ಯಗಳು: 6 ಇಂಚ್ ಫುಲ್ ಎಚ್‍ಡಿ ಡಿಸ್ಲ್ಪೇ, ಕ್ವಾಲಕಂ ಸ್ನಾಪ್‍ಡ್ರಾಗನ್ 835 ಪ್ರೊಸೆಸರ್, 12ಎಂಪಿ ಹಾಗೂ 8 ಎಂಪಿ ಕ್ಯಾಮೆರಾ, 4ಜಿಬಿ RAM, 64 ಜಿಬಿ ಆಂತರಿಕ ಮೆಮೊರಿ. 3520 ಎಂಎಎಚ್ ಬ್ಯಾಟರಿ. ಧೂಳು ಮತ್ತು ವಾಟರ್ ಪ್ರೂಫ್.

    10. ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್9+, ಬೆಲೆ 64,900 ರೂ.
    ಗುಣ-ವೈಶಿಷ್ಟ್ಯಗಳು: 6.2 ಇಂಚ್ ಫುಲ್ ಕ್ಯೂಎಚ್‍ಡಿ ಡಿಸ್ಲ್ಪೇ, ಎಕ್ಸಿನೋಸ್ ವೊಕ್ಟಾ ಕೋರ್ 9810 ಪ್ರೊಸೆಸರ್, 6ಜಿಬಿ RAM, 64 ಜಿಬಿ ಆಂತರಿಕ ಮೆಮೊರಿ. 3500 ಎಂಎಎಚ್ ಬ್ಯಾಟರಿ. ಧೂಳು ಮತ್ತು ವಾಟರ್ ಪ್ರೂಫ್.

    11. ಆ್ಯಪಲ್ ಐ-ಫೋನ್ 8 ಪ್ಲಸ್, ಬೆಲೆ 73,990 ರೂ.
    ಗುಣ-ವೈಶಿಷ್ಟ್ಯಗಳು: 5.5 ಇಂಚ್ ರೆಟಿನಾ ಎಚ್‍ಡಿ ಡಿಸ್ಲ್ಪೇ, ಎ11 ಬಯೋನಿಕ್ 64 ಬಿಟ್ ಪ್ರೊಸೆಸರ್, 64 ಜಿಬಿ ಆಂತರಿಕ ಮೆಮೊರಿ. 12ಎಂಪಿ+12ಎಂಪಿ ಕ್ಯಾಮೆರಾ ಹಾಗೂ 7ಎಂಪಿ ಫ್ರೆಂಟ್ ಕ್ಯಾಮೆರಾ. ಧೂಳು ಮತ್ತು ವಾಟರ್ ಪ್ರೂಫ್.

    12. ಆ್ಯಪಲ್ ಐ-ಫೋನ್ ಎಕ್ಸ್, ಬೆಲೆ 88,999 ರೂ.
    ಗುಣ-ವೈಶಿಷ್ಟ್ಯಗಳು: 5.8 ಇಂಚ್ ರೆಟಿನಾ ಎಚ್‍ಡಿ ಫುಲ್ ಡಿಸ್ಲ್ಪೇ, ಎ11 ಬಯೋನಿಕ್ 64 ಬಿಟ್ ಪ್ರೊಸೆಸರ್, 64 ಜಿಬಿ ಆಂತರಿಕ ಮೆಮೊರಿ. 12ಎಂಪಿ+12ಎಂಪಿ ಕ್ಯಾಮೆರಾ ಹಾಗೂ 7ಎಂಪಿ ಫ್ರೆಂಟ್ ಕ್ಯಾಮೆರಾ. ಧೂಳು ಮತ್ತು ವಾಟರ್ ಪ್ರೂಫ್.

  • ಎಳನೀರು, ಗುಲಾಬಿ ಗಿಡಗಳನ್ನು ಮಾರಾಟ ಮಾಡಿ ಜೀವನ ನಡೆಸ್ತಿರೋ ಮಹಿಳೆಗೆ ಬೇಕಿದೆ ಸೂರು

    ಎಳನೀರು, ಗುಲಾಬಿ ಗಿಡಗಳನ್ನು ಮಾರಾಟ ಮಾಡಿ ಜೀವನ ನಡೆಸ್ತಿರೋ ಮಹಿಳೆಗೆ ಬೇಕಿದೆ ಸೂರು

    ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಗ್ರಾಮದಲ್ಲಿ ಎಳನೀರು ಹಾಗೂ ಗುಲಾಬಿ ಹೂಗಳ ಸಸಿಗಳನ್ನು ಮಾರಾಟ ಮಾಡುತ್ತಿರುವ ಈಕೆಯ ಹೆಸರು ಮಹಾದೇವಿ.

    ಮಳೆಗಾಲ ಬಂತೆಂದರೆ ಫಾರ್ಮ್ ನಲ್ಲಿ ಬೆಳೆದ ಬಗೆಬಗೆಯ ಹೂವಿನ ಗಿಡಗಳನ್ನು ಮಹಾದೇವಿಯವರು ದೂರದ ಊರುಗಳಾದ ಮಹಾರಾಷ್ಟ್ರದ ಕೋಲ್ಹಾಪುರ, ನಿಪ್ಪಾಣಿ ಕರ್ನಾಟಕದ ವಿಜಯಪುರ, ಬಾಗಲಕೋಟೆ, ಬೆಳಗಾವಿ ಹೀಗೆ ಅನೇಕ ಕಡೆ ತಮ್ಮದೇ ಟಾಟಾ ಏಸ್ ವಾಹನದ ಮೂಲಕ ಸಾಗಿಸಿ ಮಾರಾಟ ಮಾಡುತ್ತಾರೆ. ಬೇಸಿಗೆಯಲ್ಲಿ ಎಳೆ ನೀರು ಮಾರಾಟ ಮಾಡುತ್ತಾರೆ. ನಿತ್ಯ ಡ್ರೈವ್ ಮಾಡಿಕೊಂಡು ಪಕ್ಕದ ಊರುಗಳಿಂದ ಎಳನೀರು ತಂದು ಮಾರಾಟ ಮಾಡಿ ಬಂದ ದುಡ್ಡಿನಲ್ಲಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಆರ್ಥಿಕವಾಗಿ ಸದೃಢವಾಗಿರದ ಕಾರಣ ರಸ್ತೆ ಪಕ್ಕದಲ್ಲಿ ಕುಳಿತು ವ್ಯಾಪಾರ ಮಾಡಲು ಒಂದು ಸೂರು ನಿರ್ಮಿಸಿಕೊಡಿ ಎನ್ನುತ್ತಿದ್ದಾರೆ ಮಹಾದೇವಿ.

    ಮಹಾದೇವಿಯವರು ತಮ್ಮ ಜೀವನದಲ್ಲಾದ ಕೆಡುಕುಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ನಿತ್ಯ ಕೂಲಿ ಕಾರ್ಮಿಕರ ಜೊತೆ ಕೆಲಸ ಮಾಡುತ್ತಾರೆ. ಜೊತೆಗೆ ಏಳನೀರು ಮಾರಿ ಬಂದ ದುಡ್ಡಲ್ಲಿ ಲೋನ್ ಮೂಲಕ ಒಂದು ವಾಹನ ಖರೀದಿಸಿ ನಿತ್ಯ ಕಾಯಕದಲ್ಲಿ ತೊಡಗಿದ್ದಾರೆ. ಇಬ್ಬರು ತಮ್ಮಂದಿರು ಮತ್ತು ಅಪ್ಪ-ಅಮ್ಮನನ್ನು ಸಾಕುವ ಹೊಣೆ ಹೊತ್ತಿರುವ ಮಹಾದೇವಿ ಟಾಟಾ ಏಸ್ ವಾಹನವನ್ನು ಲೀಲಾಜಾಲವಾಗಿ ಓಡಿಸುತ್ತಾರೆ. ಮದುವೆಯಾಗಿ ಕೆಲ ವರ್ಷಗಳ ನಂತರ ಗಂಡ ಬೇರೊಬ್ಬ ಹೆಂಗಸಿನ ಸಹವಾಸ ಮಾಡಿ ಮಹಾದೇವಿಯವರನ್ನ ಮನೆಯಿಂದ ಹೊರಹಾಕಿದ ನಂತರ ಮಹಾದೇವಿ ಧೃತಿಗೆಡದೆ ಸ್ವಾವಲಂಬಿಯಾಗಿ ಜೀವನ ಸಾಗಿಸುತ್ತಿರುವುದು ನಿಜಕ್ಕೂ ಮಾದರಿ ಅಂತಾರೆ ಸ್ಥಳೀಯರು.

    ಹುಟ್ಟುತ್ತಲೇ ಗಂಡು ಹೆಣ್ಣೆಂಬ ಬೇಧ-ಭಾವ ಮಾಡಿ ಅದೆಷ್ಟೋ ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿರುವ ಜನರಿಗೆ ಮಹಾದೇವಿ ಗಂಡಿಗಿಂತ ನಾನು ಯಾವುದರಲ್ಲೂ ಕಡಿಮೆ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಜೀವನ ಒಡ್ಡಿರುವ ಸವಾಲನ್ನು ದಿಟ್ಟತನದಿಂದ ಸ್ವೀಕರಿಸಿ ಮುನ್ನುಗ್ಗುತ್ತಿರುವ ಮಹಾದೇವಿಗೆ ಸಹಾಯ ಬೇಕಿದೆ.

    https://www.youtube.com/watch?v=TK7Qbe6tjD0

  • ವಿಡಿಯೋ: ಮಳೆಗಾಲ ಬರ್ತಿದೆ ಜಾರಿ ಬಿದ್ದೀರಿ ಜೋಪಾನ- ಕಾಲು ಜಾರಿ ಮೋರಿಗೆ ಬಿದ್ದ ಯುವಕ

    ವಿಡಿಯೋ: ಮಳೆಗಾಲ ಬರ್ತಿದೆ ಜಾರಿ ಬಿದ್ದೀರಿ ಜೋಪಾನ- ಕಾಲು ಜಾರಿ ಮೋರಿಗೆ ಬಿದ್ದ ಯುವಕ

    ಮೈಸೂರು: ಮಳೆಗಾಲ ಆರಂಭವಾಗಿದ್ದು, ಇನ್ನ್ಮುಂದೆ ಹಜ್ಜೆಯಿಡುವಾಗ ಎಚ್ಚರದಿಂದ ಇರಬೇಕು. ಇಲ್ಲವಾದ್ರೆ ಜಾರಿ ಬೀಳುವುದು ಖಂಡಿತ.

    ಹೌದು. ಮೈಸೂರಿನಲ್ಲಿ ಯುವಕರೊಬ್ಬರು ಕಾಲು ಜಾರಿ ಮೋರಿ ಒಳಗಡೆ ಬಿದ್ದಿದ್ದು ಕೂಡಲೇ ಅವರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಮೋರಿಗೆ ಬೀಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ನಗರದ ಮಂಡಿಮೋಹಲ್ಲಾದಲ್ಲಿ ಸಿದ್ದರಾಜು ಎಂಬವರು ಕಾಲುಜಾರಿದ್ದರಿಂದ ಪಕ್ಕದಲ್ಲಿದ್ದ ಮೋರಿಗೆ ಬಿದ್ದಿದ್ದಾರೆ. ಸಿದ್ದರಾಜು ಅವರ ಪರದಾಟದ ದೃಶ್ಯಗಳು ಮನೆಯ ಮುಂಭಾಗದ ಸಿಸಿಟಿವಿಯಲ್ಲಿ ಸರೆಯಾಗಿವೆ. ಸಿದ್ದರಾಜು ಮೋರಿಗೆ ಬೀಳುತ್ತಿದ್ದಂತೆ ಮನೆಯ ಸದಸ್ಯರು ಹಾಗು ಸ್ಥಳೀಯರು ಅವರನ್ನು ಮೇಲಕ್ಕೆತ್ತಿದ್ದಾರೆ.

    ಮಳೆಗಾಲ ಆರಂಭವಾಗಿದ್ದು, ಮಳೆಯಿಂದಾಗಿ ಮೆನಯ ಮುಂಭಾಗ ಮತ್ತು ರಸ್ತೆಗಳು ಪಾಚಿಗಟ್ಟಿರುತ್ತವೆ. ಇದ್ರಿಂದ ಕಾಲುಗಳು ಜಾರಿ ಬೀಳಬೇಕಾಗುತ್ತದೆ. ಇನ್ನು ಮನೆಗಳ ಮುಂದೆ ಕಾಮಾಗಾರಿ ನಡೆಯುತ್ತಿದ್ದರೆ ಮಕ್ಕಳು ಸೇರಿದಂತೆ ಎಲ್ಲರೂ ನಿಧಾನವಾಗಿ ನಡೆಯುವುದು ಉತ್ತಮ.

    https://youtu.be/pBTCUGTcgrM

     

  • ಕಲಬುರಗಿ: ಜೂನ್‍ನಿಂದ ಅಕ್ಟೋಬರ್‍ವರೆಗೆ ಈ ಗ್ರಾಮದಲ್ಲಿ ಗರ್ಭಿಣಿಯರು ಇರಲ್ಲ!

    ಕಲಬುರಗಿ: ಜೂನ್‍ನಿಂದ ಅಕ್ಟೋಬರ್‍ವರೆಗೆ ಈ ಗ್ರಾಮದಲ್ಲಿ ಗರ್ಭಿಣಿಯರು ಇರಲ್ಲ!

    ಕಲಬುರಗಿ: ಜಿಲ್ಲೆಯ ಬಿಕ್ಕನಳ್ಳಿ ಗ್ರಾಮದಲ್ಲಿ ಮಳೆಗಾಲ ಆರಂಭವಾಗ್ತಿದ್ದಂತೆ ತುಂಬು ಗರ್ಭಿಣಿಯರನ್ನು ಜೂನ್‍ನಿಂದ ಅಕ್ಟೋಬರ್ ತಿಂಗಳವರೆಗೆ ಗ್ರಾಮದಿಂದ ಹೊರಗಿಡ್ತಾರೆ.

    ಹೌದು. ವಿಚಿತ್ರ ಆದ್ರೂ ಸತ್ಯ. ಜೂನ್ ತಿಂಗಳು ಆರಂಭವಾಗ್ತಿದ್ದಂತೆ ಈ ಗ್ರಾಮದ ತುಂಬು ಗರ್ಭಿಣಿಯರು ಸಂಬಂಧಿಕರ ಮನೆಗೆ ಶಿಫ್ಟ್ ಆಗ್ತಾರೆ. ಯಾಕಂದ್ರೆ ಜೂನ್ ತಿಂಗಳಲ್ಲಿ ಮಳೆ ಶುರುವಾದ್ರೆ ಗ್ರಾಮಕ್ಕೆ ರಸ್ತೆ ಇಲ್ಲದ ಕಾರಣ ರಸ್ತೆ ಸಂಪರ್ಕ ಸಂಪೂರ್ಣ ಕಡಿತವಾಗುತ್ತೆ. ಇದ್ರಿಂದ ಗರ್ಭಿಣಿಯರಿಗೆ ವೈದ್ಯಕೀಯ ಸೇವೆ ಸಿಗಲ್ಲ. ಹೀಗಾಗಿ ಜೂನ್‍ನಿಂದ ಅಕ್ಟೋಬರ್‍ವರೆಗೆ ಗರ್ಭಿಣಿಯರು ಸಂಬಂಧಿಕರ ಮನೆಯಲ್ಲಿ ವಾಸಿಸ್ತಾರೆ.

    ಗ್ರಾಮಸ್ಥರ ಈ ಗೋಳು ಕಂಡ ಜನಪ್ರತಿನಿಧಿಗಳು ರಸ್ತೆ ಸಂಪರ್ಕ ಕಲ್ಪಿಸಲು ಮುಂದಾಗಿದ್ರು. ಆದ್ರೆ ಈ ಏರಿಯಾ ಕೊಂಚಾವರಂ ಸಂರಕ್ಷಿತ ಅರಣ್ಯ ಪ್ರದೇಶವಾದ್ರಿಂದ ಅರಣ್ಯ ಇಲಾಖೆ ರಸ್ತೆ ನಿರ್ಮಾಣಕ್ಕೆ ಅನುಮತಿ ನೀಡಿಲ್ಲ. ಹೀಗಾಗಿ ಜಿಲ್ಲಾಡಳಿತ ಈ ಗ್ರಾಮವನ್ನೇ ಬೇರೆಡೆ ಶಿಫ್ಟ್ ಮಾಡಲು ಯೋಜನೆ ರೂಪಿಸಿ ಪ್ರತಿ ಮನೆಗೆ 10 ಲಕ್ಷ ರೂ. ನಿಗದಿ ಮಾಡಿದೆ. ಆದ್ರೆ ಅರಣ್ಯದಲ್ಲಿರುವ ಇವರ ಜಮೀನುಗಳಿಗೆ ಕಂದಾಯ ಇಲಾಖೆ ಪರಿಹಾರ ನೀಡಲು ಮೀನಾ ಮೇಷ ಎಣಿಸ್ತಿದೆ. ಹೀಗಾಗಿ ಜನ ಅನಿವಾರ್ಯವಾಗಿ ಕಾಡಿನಲ್ಲಿ ಕಾಲ ಕಳೆಯುತ್ತಿದ್ದಾರೆ.

    ಒಟ್ಟಿನಲ್ಲಿ ಸರ್ಕಾರ ಕೂಡಲೇ ಎಚ್ಚೆತ್ತು ಈ ಗ್ರಾಮವನ್ನು ಕಾಡಿನಿಂದ ನಾಡಿಗೆ ಶಿಫ್ಟ್ ಮಾಡಬೇಕಾಗಿದೆ. ಆಗ ಮಾತ್ರ ಈ ಗ್ರಾಮದ ತುಂಬು ಗರ್ಭಿಣಿಯರು ನಿರಾಳವಾಗಿ ಕಾಲ ಕಳೆಯುವಂತಾಗುತ್ತೆ.