Tag: ಮಳೆಗಾಲ

  • ರಾಜಕಾಲುವೆ ನಿರ್ವಹಣೆಯಲ್ಲಿ ಭ್ರಷ್ಟಾಚಾರ- ಸ್ಥಳೀಯರ ಆರೋಪ

    ರಾಜಕಾಲುವೆ ನಿರ್ವಹಣೆಯಲ್ಲಿ ಭ್ರಷ್ಟಾಚಾರ- ಸ್ಥಳೀಯರ ಆರೋಪ

    ಬೆಂಗಳೂರು: ಮಳೆಗಾಲ ಬರುತ್ತಿದ್ದಂತೆ ಪಾಲಿಕೆ ದುಡ್ಡು ಮಾಡಲು ರೆಡಿಯಾಗಿದೆ. ಅದರಲ್ಲೂ ರಾಜಕಾಲುವೆಗಳ ರಿಪೇರಿ, ನಿರ್ವಹಣೆ ಹೆಸರಲ್ಲಿ ಹಣ ಪೀಕುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

    ಶಾಂತಿನಗರ ರಾಜಕಾಲುವೆ ತಡೆಗೋಡೆ ಪ್ರತಿ ವರ್ಷ ನಿರ್ವಹಣೆ ಹೆಸರಲ್ಲಿ ಒಡೆದು ಮತ್ತೆ ಕಟ್ಟುತ್ತಾರೆ. ಹಾಗಂತ ನೀರು ರಸ್ತೆಗೆ ಬರುವುದು, ಸಮಸ್ಯೆ ಆಗುವುದು ತಪ್ಪಿಲ್ಲ. ಬದಲಾಗಿ ರಸ್ತೆ ಮಧ್ಯೆ ಮಳೆ ಬಂದಾಗ ಕೆರೆ ಚಿತ್ರಣ ಇರುತ್ತದೆ. ಇಷ್ಟಾದ್ರೂ ಪಾಲಿಕೆ ಸೂಕ್ಷ್ಮ, ಅತಿ ಸೂಕ್ಷ್ಮ ಪ್ರದೇಶ ಎಂಬ ಲೆಕ್ಕಚಾರದ ಪಟ್ಟಿ ಬಿಡುಗಡೆ ಮಾಡಿ ಪ್ರತಿ ವರ್ಷ ರಾಜಕಾಲುವೆ ಗೋಡೆ ಒಡೆದು ಕಟ್ಟುವ ಪ್ರಕ್ರಿಯೆ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

    ಈ ಕುರಿತು ಮಾತನಾಡಿದ ಸ್ಥಳೀಯ ನಿವಾಸಿ ಛಾಯಾ, ವಾಹನಗಳು ಮಳೆ ಬಂದಾಗ ಕೆಡುತ್ತದೆ, ಜನರ ತೆರಿಗೆ ಹಣ ಪ್ರತಿ ವರ್ಷ ಹಾಳು ಮಾಡದೇ ಒಂದು ಸೂಕ್ತ ಪ್ರಾಜೆಕ್ಟ್ ಯೋಜನೆ ತಯಾರಿ ಮಾಡಿದರೆ ಯಾವುದೇ ಅನಾಹುತಗಳು ಆಗುತ್ತಿರಲಿಲ್ಲ ಎಂದು ಅಸಮಾಧಾನ ಹೊರಹಾಕಿದರು. ಪ್ರಸಕ್ತ ಮಳೆಗಾಲದ ತಯಾರಿ ಅಂತ ಶಾಂತಿನಗರದಲ್ಲಿ ಈಗ ಗೋಡೆ ಒಡೆದು ಕಟ್ಟುವ ಕಾರ್ಯ ಮುಂದುವರಿದಿದೆ.

  • ಮಳೆಗಾಲದಲ್ಲಿ ಬೆಟ್ಟ ಕುಸಿಯೋ ಭೀತಿ – ನಿವಾಸಿಗಳಿಗೆ ನಿರಾಶ್ರಿತರ ಶಿಬಿರವೇ ಗತಿ

    ಮಳೆಗಾಲದಲ್ಲಿ ಬೆಟ್ಟ ಕುಸಿಯೋ ಭೀತಿ – ನಿವಾಸಿಗಳಿಗೆ ನಿರಾಶ್ರಿತರ ಶಿಬಿರವೇ ಗತಿ

    ಮಡಿಕೇರಿ: ಕಳೆದ ಮೂರು ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ನಿರಂತರ ಭೂಕುಸಿತ ಸಂಭವಿಸುತ್ತಿರುವುದು ಗೊತ್ತೇ ಇದೆ. ಅದೇ ರೀತಿಯಲ್ಲೇ ವಿರಾಜಪೇಟೆ ಪಟ್ಟಣದ ಅಯ್ಯಪ್ಪ ಸ್ವಾಮಿಯ ಮಲೆತಿರಿಕೆ ಬೆಟ್ಟ ಮತ್ತು ನೆಹರು ನಗರದಲ್ಲಿ ಬೆಟ್ಟಗಳು ಬಾಯ್ದೆರೆದಿದ್ದು, ಇಲ್ಲಿನ ನಿವಾಸಿಗಳು ಆತಂಕದಲ್ಲಿ ಬದುಕು ದೂಡುತ್ತಿದ್ದಾರೆ. ಕಳೆದ ವರ್ಷದ ಮಳೆಗಾಲದಲ್ಲೇ ಈ ಮಲೆತಿರಿಕೆ ಬೆಟ್ಟ ಮತ್ತು ನೆಹರು ನಗರಗಳ ಬೆಟ್ಟಗಳಲ್ಲಿ ಭಾರೀ ಬಿರುಕು ಕಾಣಿಸಿಕೊಂಡಿತ್ತು. ತಕ್ಷಣವೇ ಎಚ್ಚೆತ್ತುಕೊಂಡಿದ್ದ ಅಧಿಕಾರಿಗಳು ಆ ಬೆಟ್ಟಗಳಲ್ಲಿ ವಾಸಿಸುವ 60ಕ್ಕೂ ಹೆಚ್ಚು ಕುಟುಂಬಗಳನ್ನು ನಿರಾಶ್ರಿತರ ಶಿಬಿರಕ್ಕೆ ಸ್ಥಳಾಂತರಿಸಿದ್ದರು. ಮಳೆಗಾಲ ಮುಗಿದ ಬಳಿಕ ಮತ್ತೆ ಆ ಕುಟುಂಬಗಳು ತಮ್ಮ ಮನೆಗಳಿಗೆ ತೆರಳಿ ಎಂದಿನಂತೆ ಜೀವನ ನಡೆಸುತ್ತಿದ್ದರು. ಆದರೀಗ ಮಳೆಗಾಲ ಆರಂಭವಾಗುತ್ತಿದ್ದು ಜನರಲ್ಲಿ ಮತ್ತೆ ಆತಂಕ ಶುರುವಾಗಿದೆ.

    ಕಳೆದ ವರ್ಷ ಬೆಟ್ಟದಲ್ಲಿ ಬಿರುಕು ಬಿಡುತ್ತಿದ್ದಂತೆ ಕೂಡಲೇ ಎಚ್ಚೆತ್ತುಕೊಂಡಿದ್ದ ಅಧಿಕಾರಿಗಳು ಬೆಟ್ಟದ ಬಿರುಕುಗಳಿಗೆ ಕಾಂಕ್ರಿಟ್ ತುಂಬಿ ಅದರೊಳಗೆ ನೀರು ಹೋಗದಂತೆ ನೋಡಿಕೊಂಡಿದ್ದರು. ಆದರೀಗ ಬೆಟ್ಟದ ಮೇಲಿರುವ 60ಕ್ಕೂ ಹೆಚ್ಚು ಕುಟುಂಬಗಳ ಬಹುತೇಕ ಮನೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿರುವುದು ಜನರ ಎದೆಯಲ್ಲಿ ನಡುಕ ಹುಟ್ಟಿಸಿದೆ. ಮಳೆಗಾಲ ಮುಗಿದ ಬಳಿಕ ಮಲೆತಿರಿಕೆ ಬೆಟ್ಟ ಮತ್ತು ನೆಹರು ನಗರಬೆಟ್ಟಗಳಲ್ಲಿ ಅಧ್ಯಯನ ನಡೆಸಿದ್ದ ಭೂಗರ್ಭ ಶಾಸ್ತ್ರಜ್ಞರು, ಮನೆಗಳು ಹಾನಿಗೀಡಾಗುವ ಮತ್ತು ಬೆಟ್ಟ ಕುಸಿಯುವ ಸಾಧ್ಯತೆ ಹೆಚ್ಚಿರುವ ಬಗ್ಗೆ ವರದಿ ನೀಡಿದ್ದಾರೆ. ಇದು ಈ ಬೆಟ್ಟಗಳ ನಿವಾಸಿಗಳನ್ನು ಕಂಗೆಡಿಸಿದೆ.

    ತೀರಾ ಅಪಾಯದಲ್ಲಿರುವ ಒಟ್ಟು 69 ಕುಟುಂಬಗಳನ್ನು ಶಾಶ್ವತವಾಗಿ ಸ್ಥಳಾಂತರ ಮಾಡಲು ಉಸ್ತುವಾರಿ ಸಚಿವ ವಿ.ಸೋಮಣ್ಣ ನೇತೃತ್ವದಲ್ಲಿ ನಿರ್ಧರಿಸಲಾಗಿತ್ತು. ಹೀಗಾಗಿಯೇ ವಿರಾಜಪೇಟೆ ಸಮೀಪದ ಬಿಟ್ಟಂಗಾಲದಲ್ಲಿ ಶಾಶ್ವತ ಸೂರು ಒದಗಿಸಲು ನಿರ್ಧರಿಸಲಾಗಿತ್ತು. ಈ ನಿರ್ಧಾರವಾಗಿ ಒಂದು ವರ್ಷವೇ ಕಳೆಯುತ್ತಿದ್ದರೂ, ಇಂದಿಗೂ ಪರ್ಯಾಯ ಮನೆಗಳನ್ನು ನಿರ್ಮಿಸಲು ಮುಂದಾಗಿಲ್ಲ. ಮನೆಗಳನ್ನು ನಿರ್ಮಿಸುವ ಮಾತಿರಲಿ, ಇಂದಿಗೂ ಭೂಮಿಯನ್ನು ಖರೀದಿಸುವ ಸಂಬಂಧ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ.

    ಹೀಗಾಗಿ ಈ ಮಳೆಗಾಲಕ್ಕೂ ಮಲೆತಿರಿಕೆ ಬೆಟ್ಟದ ನಿವಾಸಿಗಳು ಅಲ್ಲಿಯೇ ಆತಂಕದಲ್ಲೇ ಬದುಕು ದೂಡುವ ಸ್ಥಿತಿ ಎದುರಾಗಿದೆ. ಇನ್ನೇನು ಮಳೆಗಾಲ ಆರಂಭವಾಗುತ್ತಿರುವುದರಿಂದ ಈ ಬಾರಿ ಮನೆಗಳ ನಿರ್ಮಾಣದ ಕೆಲಸ ಸಾಧ್ಯವಿಲ್ಲ. ಬದಲಾಗಿ ಮಳೆಗಾಲದ ಎರಡು ತಿಂಗಳು ನಿರಾಶ್ರಿತ ಶಿಬಿರ ತೆರೆಯುತ್ತೇವೆ. ಬಯಸಿದರೆ ಎರಡು ತಿಂಗಳು ಬಾಡಿಗೆ ಹಣವನ್ನು ಕೊಡಲು ನಿರ್ಧರಿಸಲಾಗಿದ್ದು, ಜನರು ಬಾಡಿಗೆ ಮನೆಗಳಿಗೆ ತೆರಳಬಹುದು ಎನ್ನೋದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಯ ಅಭಿಪ್ರಾಯವಾಗಿದೆ.

  • ಅರಿಶಿಣ, ಕೊಬ್ಬರಿ ಎಣ್ಣೆ, ಕಹಿಬೇವು, ಕಡಲೆಹಿಟ್ಟಿನಿಂದ ಮಳೆಗಾಲದಲ್ಲಿ ತ್ವಚೆಯ ರಕ್ಷಣೆ

    ಅರಿಶಿಣ, ಕೊಬ್ಬರಿ ಎಣ್ಣೆ, ಕಹಿಬೇವು, ಕಡಲೆಹಿಟ್ಟಿನಿಂದ ಮಳೆಗಾಲದಲ್ಲಿ ತ್ವಚೆಯ ರಕ್ಷಣೆ

    ನೇಕ ದಿನಗಳಿಂದ ರಾಜ್ಯದ ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ. ಈ ನಡುವೆ ಮಳೆಯಲ್ಲಿ ಆರೋಗ್ಯ ರೀತಿಯ ತ್ವಚೆಯ ರಕ್ಷಣೆ ಮಾಡಿಕೊಳ್ಳಬೇಕು. ಮಳೆಗಾಲದಲ್ಲಿ ಶೀತ, ಉಸಿರಾಟದ ತೊಂದರೆ ಮತ್ತು ಚರ್ಮದ ಸೋಂಕು ಹೆಚ್ಚಾಗುತ್ತಿದೆ. ಹೀಗಾಗಿ ಕಾಲಕ್ಕೆ ತಕ್ಕಂತೆ ನಮ್ಮ ತ್ವಚೆಯ ರಕ್ಷಣೆ ಮಾಡಿಕೊಳ್ಳುವುದು ಮುಖ್ಯವಾಗಿರುತ್ತದೆ. ಇದನ್ನೂ ಓದಿ: ಪುರುಷರ ತ್ವಚೆಯ ರಕ್ಷಣೆಗಾಗಿ ನಾಲ್ಕು ಸರಳ ಹೆಲ್ತ್ ಟಿಪ್ಸ್

    ಸಾಮಾನ್ಯವಾಗಿ ಮಳೆಗಾಲದಲ್ಲಿ ವಾತಾವರಣದಲ್ಲಿ ಅಧಿಕ ತೇವಾಂಶವಿರುತ್ತದೆ. ಇದರಿಂದ ಚರ್ಮದಲ್ಲಿ ತುರಿಕೆ, ಅಲರ್ಜಿ, ಒಡಕು ಇಂತಹ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಈ ರೀತಿ ಸಮಸ್ಯೆಗಳಿಂದ ಚರ್ಮವನ್ನು ರಕ್ಷಿಸಿಕೊಳ್ಳಲು ಅನುಸರಿಸಬೇಕಾದರೆ ಕೆಲ ಉಪಯುಕ್ತ ಸಲಹೆಗಳು ನಿಮಗಾಗಿ ಇಲ್ಲಿವೆ.

    * ಮಳೆಗಾಲದಲ್ಲಿ ನಮ್ಮ ರೋಗ-ನಿರೋಧಕ ಶಕ್ತಿಯನ್ನು ನಾವು ಹೆಚ್ಚಿಸಿಕೊಳ್ಳಬೇಕಾದ ಅಗತ್ಯತೆ ಇದೆ. ಏಕೆಂದರೆ ಸೋಂಕುಗಳ ಹಾವಳಿ ಈ ಸಮಯದಲ್ಲಿ ಹೆಚ್ಚಾಗಿರುವುದರಿಂದ ನಮ್ಮ ಆರೋಗ್ಯ ಬೇರೆ ಸಮಯಕ್ಕೆ ಹೋಲಿಸಿದರೆ ಮಳೆಗಾಲದಲ್ಲಿ ಹೆಚ್ಚು ಹದಗೆಡುತ್ತದೆ. ಹಾಗಾಗಿ ಬೆಳಗಿನ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಬಿಸಿ ನೀರಿಗೆ ಸ್ವಲ್ಪ ಜೇನು ತುಪ್ಪವನ್ನು ಹಾಕಿ ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳಬೇಕು. ಇದು ದೇಹದಿಂದ ವಿಷಕಾರಿ ಅಂಶಗಳನ್ನು ಮತ್ತು ಸೋಂಕುಕಾರಕ ಕ್ರಿಮಿಗಳನ್ನು ಹೊರಹಾಕುವಲ್ಲಿ ತುಂಬಾ ಸಹಾಯಕ.

    * ಮಳೆಗಾಲದಲ ವಾತಾವರಣದಲ್ಲಿ ತೇವಾಂಶ ಅಧಿಕವಿರುವುದರಿಂದ ತ್ವಚೆಯಲ್ಲಿ ತುರಿಕೆ. ಅಲರ್ಜಿ ಮುಂತಾದ ಸಮಸ್ಯೆ ಕಂಡು ಬರುವ ಸಾಧ್ಯತೆ ಹೆಚ್ಚು. ಹೀಗಾಗಿ ಲೋಳೆಸರದಲ್ಲಿ ಏನಾದರೂ ತ್ವಚೆ ಅಲರ್ಜಿ ಆಗಿದ್ದರೆ ಅದನ್ನು ಗುಣಪಡಿಸುವ ಸಾಮರ್ಥ್ಯ ಇದೆ. ತಾಜಾ ಲೋಳೆಸರವನ್ನು ತ್ವಚೆ ಅಲರ್ಜಿಯಾಗಿರುವ ಜಾಗಕ್ಕೆ ಹಚ್ಚಿದರೆ ಅಲರ್ಜಿ ಕಡಿಮೆಯಾಗುವುದು. ಅಲ್ಲದೆ ಲೋಳೆಸರ ಹಚ್ಚುವುದರಿಂದ ತ್ವಚೆ ಕಾಂತಿ ಹೆಚ್ಚುವುದು.
    * ಕಹಿಬೇವಿನಲ್ಲಿ ಸೋಂಕು ನಿವಾರಕ ಗುಣವಿದೆ. ಹೀಗಾಗಿ ಮೊಡವೆ, ಕಪ್ಪು ಕಲೆ, ಮೈ ಮೇಲೆ ಗುಳ್ಳೆಗಳು ಇವುಗಳನ್ನು ಗುಣಪಡಿಸುವಲ್ಲಿ ಕಹಿಬೇವು ಸಹಕಾರಿ.

    * ಮೊಡವೆ, ಕಪ್ಪುಕಲೆ ಮುಂತಾದ ತೊಂದರೆಗೆ ಮುಖಕ್ಕೆ ಅರಿಶಿಣ ಹಚ್ಚಿದರೆ ಒಳ್ಳೆಯದು. ಅರಿಶಿಣವನ್ನು ಆಹಾರದಲ್ಲಿ ಬಳಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಮಳೆಗಾಲದ ಆಹಾರದಲ್ಲಿ ಅರಿಶಿಣ ಇರಬೇಕು.
    * ಬಿಸಿ ನೀರಿಗೆ ಒಂದು ಚಮಚ ಕೊಬ್ಬರಿ ಎಣ್ಣೆ ಹಾಕಿ ಸ್ನಾನ ಮಾಡುವುದು. ಇದರಿಂದ ಚರ್ಮದಲ್ಲಿನ ಡ್ರೈನೆಸ್ ಹೋಗುತ್ತದೆ.
    * ತ್ವಚೆ ಒಣಗಿದಂತೆ ಅಥವಾ ತುರಿಕೆಯಂತಹ ಸಮಸ್ಯೆ ಕಂಡುಬಂದರೆ ಕೊಬ್ಬರಿ ಎಣ್ಣೆಯನ್ನು ಮೈಗೆ ಹಚ್ಚಿ, ಅರ್ಧ ಗಂಟೆ ಬಿಟ್ಟು ಬಿಸಿ ನೀರಿನಿಂದ ಸ್ನಾನ ಮಾಡುವುದು.
    * ಸ್ನಾನದ ನೀರಿನಲ್ಲಿ ಗುಲಾಬಿ ಎಸಳುಗಳನ್ನು ಹಾಕಿ ಕೆಲ ಸಮಯದ ಬಳಿಕ ಆ ನೀರಿನಲ್ಲಿ ಸ್ನಾನ ಮಾಡಬೇಕು. ಇದರಿಂದ ಮಳೆಗಾಲದಲ್ಲಿ ತ್ವಚೆ ಕಾಂತಿಯುತವಾಗಿರುತ್ತದೆ.

    * ಮುಖದಲ್ಲಿ ತುರಿಕೆಯಂತಹ ಸಮಸ್ಯೆ ಇದ್ದರೆ ಒಂದು ಚಮಚ ಕೊಬ್ಬರಿ ಎಣ್ಣೆಗೆ ಸ್ವಲ್ಪ ಸಕ್ಕರೆ ಬೆರೆಸಿ ಹಚ್ಚಿ. ಎರಡು ನಿಮಷ ಸ್ಕ್ರಬ್ ಮಾಡಿ. ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದುಕೊಳ್ಳಿ.
    * ಹೆಚ್ಚಾಗಿ ನೀರು ಕುಡಿಯುವುದು ಕೂಡ ತ್ವಚೆಯ ರಕ್ಷಣೆಗೆ ಉಪಯೋಗಕಾರಿ
    * ಮುಖದಲ್ಲಿ ಮೊಡವೆ, ಗುಳ್ಳೆಗಳಂತಹ ಸಮಸ್ಯೆಯಿದ್ದರೆ ಆಯಿಂಟ್‍ಮೆಂಟ್ ಬದಲಾಗಿ ಅರಿಶಿಣ ಹಚ್ಚುವುದು ಉತ್ತಮ.
    * ಮಳೆಗಾಲದಲ್ಲಿ ವಾರಕ್ಕೊಮ್ಮೆ ತಲೆ ಸ್ನಾನ ಮಾಡುವುದು ಉತ್ತಮ. ತೇವ ಇರುವಾಗಲೇ ಕೂದದಲನ್ನು ಬಾಚಬಾರದು. ಆದಷ್ಟೂ ಬಿಸಿಲಿನಲ್ಲಿ ಕೂದಲನ್ನು ಒಣಗಿಸಬೇಕು.

    * ಎಣ್ಣೆ ಚರ್ಮದವರು ಮುಣದ ಅಂದವನ್ನು ಕಾಪಾಡಿಕೊಳ್ಳಲು ಸೋಪು ಬಳಸುವುದುಕ್ಕಿಂತ ಕಡಲೆಹಿಟ್ಟಿನಿಂದ ಮುಖ ತೊಳೆಯುವುದು ಉತ್ತಮ.
    * ಪಪ್ಪಾಯ ಹಣ್ಣನ್ನು ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿ ಎಣ್ಣೆ ಅಂಶ ಕಡಿಮೆಯಾಗುವಂತೆ ಮಾಡಬಹುದು.

  • ಮಳೆಗಾಲದಲ್ಲಿ ಮೋಡಿ ಮಾಡುವ ಅಟ್ಲಾಸ್ ಮೋತ್

    ಮಳೆಗಾಲದಲ್ಲಿ ಮೋಡಿ ಮಾಡುವ ಅಟ್ಲಾಸ್ ಮೋತ್

    – ಉಡುಪಿಯ ಚಿಟ್ಟೆ ಆಸಕ್ತ ನಜೀರ್‌ರಿಂದ ಆನ್‍ಲೈನ್ ಕಾರ್ಯಾಗಾರ

    ಉಡುಪಿ: ದೈತ್ಯಾಕಾರದ ಪತಂಗ ಅಟ್ಲಾಸ್ ಮೋತ್ ಉಡುಪಿ ಜಿಲ್ಲೆಯ ಹಲವು ಭಾಗಗಳಲ್ಲಿ ಪತ್ತೆಯಾಗುತ್ತಿದೆ. ಬೃಹತ್ ಆಕಾರದಲ್ಲಿರುವ ಈ ಪತಂಗವು ಎಲ್ಲರಲ್ಲೂ ಆಶ್ಚರ್ಯ ಮತ್ತು ಕುತೂಹೂಲ ಮೂಡಿಸುತ್ತದೆ.

    ಬಹುತೇಕ ಮಂದಿ ಇದನ್ನು ಚಿಟ್ಟೆ ಅಥವಾ ಪಾತರಗಿತ್ತಿ ಎಂದೇ ಭಾವಿಸಿಕೊಂಡಿದ್ದಾರೆ. ಇದು ಪತಂಗವೇ ಹೊರತು ಚಿಟ್ಟೆ ಅಲ್ಲ. ಪತಂಗವನ್ನು ಆಂಗ್ಲ ಭಾಷೆಯಲ್ಲಿ ಮೊತ್ ಎಂಬುದಾಗಿ ಕರೆಯಲಾಗುತ್ತದೆ. ಚಿಟ್ಟೆಗೂ ಪತಂಗಕ್ಕೂ ತುಂಬಾ ವ್ಯಾತ್ಯಾಸ ಇದೆ. ಪತಂಗವೂ ಹಲವು ವರ್ಷಗಳ ಹಿಂದೆ ಪ್ರಪಂಚದ ಅತ್ಯಂತ ಬೃಹತ್ ಗಾತ್ರದ ಪತಂಗ ಎಂಬುದಾಗಿ ಗುರುತಿಸಿಕೊಂಡಿತ್ತು. ಅಧ್ಯಯನದಲ್ಲಿ ಇದಕ್ಕಿಂತ ದೊಡ್ಡ ಗಾತ್ರದ ಪತಂಗ ಇರುವುದನ್ನು ಗುರುತಿಸಲಾಗಿದೆ.

    ಈ ಪತಂಗವನ್ನು ಬೃಹತ್ ಆಕಾರದ ಪಂತಗ ಎಂಬುದಾಗಿ ಬರೆಯಬಹುದೇ ಹೊರತು ಪ್ರಪಂಚದ ಅತ್ಯಂತ ದೊಡ್ಡ ಪತಂಗ ಎಂಬುದು ಬರೆಯುವುದು ಸರಿಯಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಪ್ರಪಂಚದ ಅತ್ಯಂತ ಬೃಹತ್ ಗಾತ್ರದ ಈ ಪತಂಗದ ವೈಜ್ಞಾನಿಕ ಹೆಸರು ಅಟ್ಟಾಕಾಸ್ ಅಟ್ಲಾಸ್. ಇದರ ರೆಕ್ಕೆಯ ವಿಸ್ತೀರ್ಣ 24 ಸೆ.ಮೀ. ಆಗಿದೆ. ಈ ಪತಂಗ ಸ್ಥಳೀಯವಾಗಿ ಕಂಡುಬರುವ ಪೇರಳೆ, ಸಂಪಿಗೆ ಸೇರಿದಂತೆ ಕೆಲವೊಂದು ಸೀಮಿತ ಮರಗಳ ಎಲೆಗಳಲ್ಲಿ ಮೊಟ್ಟೆ ಇಡುತ್ತದೆ.

    ಮೊಟ್ಟೆಯಿಂದ ಹೊರ ಬರುವ ಹುಳ ಆ ಮರದ ಎಲೆಗಳನ್ನು ತಿಂದು ಕೋಶವನ್ನು ರಚಿಸುತ್ತದೆ. ಅದರಿಂದ ಹೊರಗೆ ಬರುವ ಗಂಡು ಪತಂಗವು, ಹೆಣ್ಣು ಪತಂಗದೊಂದಿಗೆ ಸೇರಿ ಸಾಯುತ್ತದೆ. ಮುಂದೆ ಹೆಣ್ಣು ಪತಂಗ ಮೊಟ್ಟೆ ಇಟ್ಟು ನಂತರ ಸಾಯುತ್ತದೆ ಎಂದು ಉಡುಪಿಯ ಚಿಟ್ಟೆ ಆಸಕ್ತ, ತಜ್ಞ, ಛಾಯಾಗ್ರಾಹಕ ನಜೀರ್ ಪೊಲ್ಯ ಮಾಹಿತಿ ನೀಡಿದ್ದಾರೆ. ಉಡುಪಿಯಲ್ಲಿ ಅವರು ಚಿಟ್ಟೆಗಳ ಬಗ್ಗೆ ವಿಶೇಷ ಆನ್‍ಲೈನ್ ಕಾರ್ಯಾಗಾರ ನಡೆಸಿ ಮಾಹಿತಿ ನೀಡಿದರು.

    ವಿಶೇಷ ಅಂದರೆ ಈ ಪತಂಗಕ್ಕೆ ಬಾಯಿ, ಜೀರ್ಣಾಂಗ ವ್ಯವಸ್ಥೆ ಎಂಬುದೇ ಇಲ್ಲ. ಆದುದರಿಂದ ಕೋಶದಿಂದ ಹೊರಬಂದು ಪೂರ್ಣಾವಸ್ಥೆಯ ಪತಂಗ ಆದ ನಂತರ ಯಾವುದನ್ನೂ ತಿನ್ನುವುದಿಲ್ಲ. ಇದಕ್ಕೆ ಬೇಕಾದ ಎಲ್ಲ ಎನರ್ಜಿಯನ್ನು ಹುಳ ಆಗಿರುವಾಗಲೇ ಎಲೆಗಳನ್ನು ತಿಂದು ಇಟ್ಟುಕೊಳ್ಳುತ್ತದೆ. ಇದು ಒಂದು ಅಥವಾ ಎರಡು ವಾರಗಳ ಕಾಲ ಮಾತ್ರ ಬದುಕಿರುತ್ತದೆ.

    ತನ್ನ ಎನರ್ಜಿಯನ್ನು ಹಾಗೆಯೇ ಉಳಿಸಿಕೊಳ್ಳಲು ಅದು ತುಂಬಾ ಕಡಿಮೆ ಹಾರಾಟ ಮಾಡುತ್ತದೆ. ಹೆಚ್ಚು ಸಮಯ ಎಲೆಯ ಮೇಲೆ ವಿಶ್ರಾಂತಿಯಲ್ಲಿರುತ್ತದೆ. ದಿನ ಕಳೆದಂತೆ ತುಂಬಾ ಬಲಹೀನವಾಗುವ ಈ ಪತಂಗ ಹಕ್ಕಿ, ಓತಿ, ಇರುವೆಗಳಿಗೆ ಆಹಾರವಾಗುತ್ತದೆ ಎಂದು ಉಡುಪಿಯ ಚಿಟ್ಟೆ ತಜ್ಞ ನಜೀರ್ ತಿಳಿಸಿದ್ದಾರೆ.

  • ಕಾಫಿನಾಡಲ್ಲಿ ನೋಡ ನೋಡ್ತಿದ್ದಂತೆ ಭಾರೀ ಮಳೆ- ಮತ್ತೆ ಆತಂಕ

    ಕಾಫಿನಾಡಲ್ಲಿ ನೋಡ ನೋಡ್ತಿದ್ದಂತೆ ಭಾರೀ ಮಳೆ- ಮತ್ತೆ ಆತಂಕ

    ಚಿಕ್ಕಮಗಳೂರು: ಕಳೆದ ಇಪ್ಪತ್ತು ದಿನಗಳಿಂದ ಜಿಲ್ಲೆಯಲ್ಲಿ ಬಿಡುವು ನೀಡಿದ್ದ ವರುಣದೇವ ಚಿಕ್ಕಮಗಳೂರು ನಗರದಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದಾನೆ.

    ಆಗಸ್ಟ್ ಮೊದಲ ವಾರದಲ್ಲಿ ಮನಸ್ಸೋ ಇಚ್ಛೆ ಸುರಿದು ಸಾಕಷ್ಟು ಅವಾಂತರಗಳನ್ನ ಸೃಷ್ಠಿಸಿದ್ದ ವರುಣದೇವ ಆಗಸ್ಟ್ 11ರ ಬಳಿಕ ಜಿಲ್ಲೆಯಲ್ಲಿ ಸಂಪೂರ್ಣ ಬಿಡುವು ನೀಡಿದ್ದ. ಜಿಲ್ಲೆಯ ಜನರಿಗೆ ಬೇಸಿಗೆ ಕಾಲದ ಅನುಭವವಾಗಿತ್ತು. ಇಂದು ಬೆಳಗ್ಗೆಯಿಂದಲೂ ಚಿಕ್ಕಮಗಳೂರು ನಗರದ ಕೆಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಹಾಗೂ ಬಿಸಿಲು ಇತ್ತು. ಮಧ್ಯಾಹ್ನ 1 ಗಂಟೆ ಆರಂಭವಾದ ದಿಢೀರ್ ಮಳೆ ಸುಮಾರು ಅರ್ಧ ಗಂಟೆಗಳ ಕಾಲ ಮನಸ್ಸೋ ಇಚ್ಛೆ ಸುರಿದು ಮಲೆನಾಡಿಗರಿಗೆ ಮತ್ತೆ ಆತಂಕ ತಂದಿಟ್ಟಿದ್ದಾನೆ.

    ನೋಡ-ನೋಡ್ತಿದ್ದಂತೆ ಆರಂಭವಾದ ಮಳೆ ಧಾರಾಕಾರವಾಗಿ ಸುರಿದಿದೆ. ಭಾರೀ ಮಳೆ ಕಂಡು ಸ್ಥಳೀಯರು ಮತ್ತೆ ಕಂಗಾಲಾಗಿದ್ದಾರೆ. ಆಗಸ್ಟ್ ಮೊದಲ ವಾರದ ಮಳೆ ಮಲೆನಾಡಿಗರಲ್ಲಿ ಭಯ ಹುಟ್ಟಿಸಿತ್ತು. ಒಂದೇ ವಾರದ ಮಳೆ ಮಲೆನಾಡಲ್ಲಿ ಸಾಕಷ್ಟು ಅನಾಹುತ ಸೃಷ್ಟಿಸಿತ್ತು. ಈಗ ಮತ್ತೆ ದಿಢೀರ್ ಮಳೆ ಕಂಡು ಜನ ಆತಂಕಕ್ಕೀಡಾಗಿದ್ದಾರೆ. ಚಿಕ್ಕಮಗಳೂರು ನಗರದಲ್ಲಿ ವರುಣದೇವ ಕಣ್ಣಾಮುಚ್ಚಾಲೆ ಆಟವಾಡಿದ್ದಾನೆ. ನಗರದ ಕೆಲ ಭಾಗದಲ್ಲಿ ಬಿಸಿಲು, ಕೆಲ ಭಾಗ ಧಾರಾಕಾರ ಮಳೆ ಕಂಡು ಪ್ರಕೃತಿ ಎತ್ತ ಸಾಗ್ತಿದೆ, ಏನಾಗಿದೆ ಎಂದು ಜನ ಆತಂಕಕ್ಕೀಡಾಗಿದ್ದಾರೆ.

    ಜಿಲ್ಲೆಯ ಮಲೆನಾಡು ಭಾಗದಲ್ಲೂ ಅಲ್ಲಲ್ಲೇ ಮೋಡಕವಿದ ವಾತಾವರಣವಿದ್ದು, ತುಂತುರು ಮಳೆಯಾಗಿದೆ. ಕಳೆದ ವರ್ಷ ಹಾಗೂ ಈ ಬಾರಿ ಮಲೆನಾಡಲ್ಲಿ ಭಾರೀ ಮಳೆಯಾಗಿದೆ. ಕಳೆದ ವರ್ಷವಂತೂ ಮಲೆನಾಡಿಗರು ಮನೆ-ಮಠ-ಆಸ್ತಿ-ಪಾಸ್ತಿ ಎಲ್ಲವನ್ನೂ ಕಳೆದುಕೊಳ್ಳುವಂತಹಾ ಮಳೆ ಸುರಿದಿತ್ತು. ಈ ವರ್ಷವೂ ಆಗಸ್ಟ್ ಆರಂಭದ ಮಳೆ ಅಂತದ್ದೇ ಭಯ ತರಿಸಿತ್ತು. ಆದರೆ ವರುಣದೇವ ಬಿಡುವು ನೀಡಿದ್ದರಿಂದ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಈಗ ಮತ್ತೆ ಸುರಿದ ದಿಢೀರ್ ಮಳೆ ಕಂಡು ಕಂಡು ಮತ್ತೆ ಭಯಭೀತರಾಗಿದ್ದಾರೆ.

  • ಈ ಬಾರಿಯ ಮಳೆಗಾಲ, ಚಳಿಗಾಲ ಎರಡೂ ಡೇಂಜರ್ – ಐಐಟಿ, ಏಮ್ಸ್ ಸಂಶೋಧಕರ ಜಂಟಿ ಅಧ್ಯಯನ ವರದಿ

    ಈ ಬಾರಿಯ ಮಳೆಗಾಲ, ಚಳಿಗಾಲ ಎರಡೂ ಡೇಂಜರ್ – ಐಐಟಿ, ಏಮ್ಸ್ ಸಂಶೋಧಕರ ಜಂಟಿ ಅಧ್ಯಯನ ವರದಿ

    ನವದೆಹಲಿ: ದೇಶದಲ್ಲಿ ಕೊರೊನಾ ಆರ್ಭಟಿಸುತ್ತಿದೆ. ಪ್ರತಿ ದಿನ ಹೊಸ ದಾಖಲೆ ಸೃಷ್ಟಿಸುತ್ತಲೇ ಇದೆ. ಅಬ್ಬಾಬ್ಬ ಅಂದ್ರೆ ಇನ್ನೊಂದಿಷ್ಟು ದಿನಗಳ ಈ ಸಂಕಷ್ಟ, ಲಾಕ್‍ಡೌನ್ ಜಂಜಾಟ ಅಂದುಕೊಂಡವರಿಗೆ ಹೊಸ ಅಧ್ಯಯನ ವರದಿಯೊಂದು ಶಾಕ್ ನೀಡಿದೆ. ಹೌದು ಐಐಟಿ ಭುವನೇಶ್ವರ ಮತ್ತು ಏಮ್ಸ್ ಸಂಶೋಧಕರು ಜಂಟಿಯಾಗಿ ನಡೆಸಿದ ಅಧ್ಯಯನದಿಂದ ಆತಂಕದ ವಿಚಾರ ಗೊತ್ತಾಗಿದೆ.

    ಪ್ರೊ. ವಿ. ವಿನೋಜ್ ನೇತೃತ್ವದಲ್ಲಿ ನಡೆದ ಈ ಅಧ್ಯಯನದಲ್ಲಿ ಮಳೆಗಾಲ ಮತ್ತು ಚಳಿಗಾಲದಲ್ಲಿ ಕೊರೊನಾ ಸೋಂಕು ಮತ್ತಷ್ಟು ಹೆಚ್ಚಾಗಬಹುದು ಎಂದು ಎಚ್ಚರಿಸಲಾಗಿದೆ. ಚಳಿಗಾಲ ಮತ್ತು ಮಳೆಗಾಲದಲ್ಲಿ ತಾಪಮಾನ ಕುಸಿತದಿಂದ ಕೊರೊನಾ ವೈರಸ್ ಗೆ ಪೂರಕ ವಾತವರಣ ಸೃಷ್ಟಿಯಾಗಲಿದೆ. ಇದು ಕೊರೊನಾ ವೈರಸ್ ಹರಡುವಿಕೆ ವೇಗ ಹೆಚ್ಚಾಗಲು ಸಹಕಾರಿಯಾಗಲಿದೆ ಎಂದು ಅಧ್ಯಯನ ಹೇಳಿದೆ.

    ಐಐಟಿ ಮತ್ತು ಏಮ್ಸ್ ಹೊರ ಹಾಕಿರುವ ಈ ಜಂಟಿ ಅಧ್ಯಯನ ಭಾರತದಲ್ಲಿ ಎರಡನೇ ಹಂತದಲ್ಲಿ ಸೋಂಕು ಹರಡುವ ಎಚ್ಚರಿಕೆ ನೀಡಿದೆ. ಈ ಹಿಂದೆ ಚೀನಾದ ತಜ್ಞರು ಕೂಡಾ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಇದಕ್ಕೆ ಪೂರಕ ಎನ್ನುವಂತೆ ಯುರೋಪಿಯನ್ ದೇಶಗಳಲ್ಲಿ ಸೋಂಕು ಹೆಚ್ಚಾಗಿತ್ತು. ಈ ಭಾರತದ ತಜ್ಞರೇ ಇಂತದೊಂದು ಮಾಹಿತಿ ಹೊರಹಾಕಿದ್ದು ಮತ್ತಷ್ಟು ಭೀತಿ ಹೆಚ್ಚಿಸಿದೆ.

    ಉತ್ತರ ಭಾರತವೂ ಸೇರಿ ರಾಜ್ಯದ ಹಲವೆಡೆ ಅತಿವೃಷ್ಠಿ: ಈ ನಡುವೆ ದೇಶದಲ್ಲಿ ಮುಂಗಾರು ಶುರುವಾಗಿದ್ದು ಎಲ್ಲೆಡೇ ಉತ್ತಮ ಮಳೆಯಾಗುತ್ತಿದೆ. ಅಸ್ಸಾಂ, ಬಿಹಾರ, ಮಹಾರಾಷ್ಟ್ರದಲ್ಲಿ ಅತಿವೃಷ್ಠಿಯಾದ್ರೆ ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಈ ಹಿನ್ನೆಲೆ ಈ ಮುಂಗಾರು ಮಳೆಯಿಂದ ತಾಪಮಾನ ಕಡಿಮೆಯಾಗಲಿದ್ದು ಮತ್ತೊಂದು ಆತಂಕ ಹುಟ್ಟಿಸಿದೆ.

    ಈ ವರ್ಷದ ಕೊನೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬರಬಹುದು ಎಂದು ಅಂದುಕೊಂಡಿದ್ದ ಜನರಿಗೆ ಐಐಟಿ ಏಮ್ಸ್ ಅಧ್ಯಯನ ವರದಿ ಚಳಿಗಾಲ ಮಳೆಗಾಲ ದೇಶದಲ್ಲಿ ಸೃಷ್ಟಿಸಬಹುದಾದ ಅನಾಹುತಗಳ ಬಗ್ಗೆ ಎಚ್ಚರಿಸಿದೆ. ಹೀಗಾಗಿ ಮತ್ತಷ್ಟು ಎಚ್ಚರದಿಂದರಬೇಕಿದೆ.

  • ಮಳೆಗಾಲದ ಶೀತ ಜ್ವರ ಅಂತ ನಿರ್ಲಕ್ಷ್ಯ ಬೇಡ: ಡಿಸಿ ಕಿವಿಮಾತು

    ಮಳೆಗಾಲದ ಶೀತ ಜ್ವರ ಅಂತ ನಿರ್ಲಕ್ಷ್ಯ ಬೇಡ: ಡಿಸಿ ಕಿವಿಮಾತು

    – ಕೊರೊನಾ ವಾರಿಯರ್ಸ್‌ಗೆ ಸದ್ಯಕ್ಕೆ ಸನ್ಮಾನ ಬೇಡ

    ಉಡುಪಿ: ಜಿಲ್ಲೆಯಾದ್ಯಂತ ಮುಂಗಾರು ಮಳೆ ವಿಪರೀತವಾಗಿ ಸುರಿಯುತ್ತಿದೆ. ಮಳೆಗಾಲದಲ್ಲಿ ಶೀತ, ನೆಗಡಿ, ಜ್ವರ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ. ಜಿಲ್ಲೆಯ ಜನತೆ ಯಾರೂ ಮಾಮೂಲಿ ಶೀತ ಜ್ವರ ಎಂದು ನಿರ್ಲಕ್ಷ್ಯ ಮಾಡಬಾರದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಕಿವಿಮಾತು ಹೇಳಿದ್ದಾರೆ.

    ಶೀತ ಜ್ವರದ ಲಕ್ಷಣ ಕಂಡು ಬಂದಾಗ ಹತ್ತಿರದ ಫೀವರ್ ಕ್ಲಿನಿಕ್‌ಗೆ ಭೇಟಿ ಕೊಡಬೇಕು. ಆಶಾ ಕಾರ್ಯಕರ್ತೆಯರು ಮನೆಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಆರೋಗ್ಯದಲ್ಲಿ ಬದಲಾವಣೆಯಾದರೆ ಎಲ್ಲ ಮಾಹಿತಿಗಳನ್ನು ಹಂಚಿಕೊಳ್ಳಬೇಕು ಎಂದರು.

    ಕೊರೊನಾ ವಿಚಾರದಲ್ಲಿ ಯಾರಿಗೂ ಆತಂಕ, ಭಯ ಬೇಡ. ಜಿಲ್ಲಾಡಳಿತ ಸೂಕ್ತ ಚಿಕಿತ್ಸೆಯನ್ನು ರೋಗಿಗಳಿಗೆ ಕೊಡಿಸುತ್ತಿದೆ ಎಂದು ಜಿ.ಜಗದೀಶ್ ಜನರಿಗೆ ಭರವಸೆ ನೀಡಿದರು.

    ಕೊರೊನಾ ವಾರಿಯರ್ಸ್‌ಗಳಿಗೆ ಸನ್ಮಾನ ಮಾಡುವ ಕಾರ್ಯಕ್ರಮಗಳು ಜಿಲ್ಲೆಯ ಅಲ್ಲಲ್ಲಿ ನಡೆಯುತ್ತಿದೆ. ಸನ್ಮಾನದ ಹೆಸರಿನಲ್ಲಿ ಆಯೋಜಕರು ಸಾಮಾಜಿಕ ಅಂತರ, ಮತ್ತಿತರ ಸರ್ಕಾರದ ನಿರ್ದೇಶನಗಳನ್ನು ಗಾಳಿಗೆ ತೂರುತ್ತಿದ್ದಾರೆ. ಸಾಂಕ್ರಾಮಿಕ ರೋಗ ಹರಡುತ್ತಿರುವ ಈ ಸಂದರ್ಭದಲ್ಲಿ ಇಂತಹ ಯಾವುದೇ ಕಾರ್ಯಕ್ರಮಗಳು ಬೇಡ. ಕೊರೊನಾ ಹತೋಟಿಗೆ ಬಂದ ನಂತರ ಸಂಭ್ರಮಿಸಲು ಸಾಕಷ್ಟು ಕಾಲಾವಕಾಶ ಇದೆ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

  • ಕೊಡಗಿನಲ್ಲಿ ಮಳೆಗಾಲ ಎದುರಿಸಲು ಚೆಸ್ಕಾಂ ಇಲಾಖೆ ಸನ್ನದ್ಧವಾಗಿದೆ: ಬಿ.ಸೋಮಶೇಖರ್

    ಕೊಡಗಿನಲ್ಲಿ ಮಳೆಗಾಲ ಎದುರಿಸಲು ಚೆಸ್ಕಾಂ ಇಲಾಖೆ ಸನ್ನದ್ಧವಾಗಿದೆ: ಬಿ.ಸೋಮಶೇಖರ್

    ಮಡಿಕೇರಿ: ಕೊಡಗಿನ ಮಳೆಗಾಲದಲ್ಲಿ ಎದುರಾಗುವ ವಿದ್ಯುತ್ ಸಮಸ್ಯೆಗಳನ್ನು ಎದುರಿಸಲು ಈಗಾಗಲೇ ಚೆಸ್ಕಾಂ ಇಲಾಖೆ ಸನ್ನದ್ಧವಾಗಿದೆ ಎಂದು ಚೆಸ್ಕಾಂ ಕಾರ್ಯನಿರ್ವಹಕ ಎಂಜಿನಿಯರ್.ಬಿ.ಸೋಮಶೇಖರ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಇಂದು ನಗರದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಳೆಗಾಲದಲ್ಲಿ ವಿಪರೀತ ಗಾಳಿ-ಮಳೆ ಆಗುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಎದುರಾಗುವ ವಿದ್ಯುತ್ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಲು ಇಲಾಖೆ ಸನ್ನದ್ಧವಾಗಿದೆ. ವಿದ್ಯುತ್ ಇಲಾಖೆ ಪ್ರತೀ ಮಳೆಗಾಲವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತದೆ. 2018ರಿಂದ ಜಿಲ್ಲೆಯಲ್ಲಿ ಪ್ರವಾಹದ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ ಎಂದರು.

    ಇಂತಹ ಸನ್ನಿವೇಶವನ್ನು ಸಮರ್ಥವಾಗಿ ಎದುರಿಸಲು ಚೆಸ್ಕಾಂ ಸಿಬ್ಬಂದಿ ರೆಡಿಯಾಗಿದ್ದಾರೆ. ಈಗಾಗಲೇ ನಿಗದಿಪಡಿಸಿರುವ ಸ್ಥಳಗಳಲ್ಲಿ ವಿದ್ಯುತ್ ಕಂಬಗಳನ್ನು ಸಂಗ್ರಹಿಸಿದ್ದೇವೆ. ಮಳೆಗಾಲದಲ್ಲಿ ಅಧಿಕ ಕೆಲಸ ಇರುವುದರಿಂದ ಅಗತ್ಯವಿರುವ ಸಿಬ್ಬಂದಿಯ ಜೊತೆಗೆ 150 ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲು ಟೆಂಡರ್ ಕರೆಯಲಾಗಿದೆ. ಸಾಮಾನ್ಯವಾಗಿ 5 ವಾಹನಗಳನ್ನು ಬಳಸುತ್ತಿದ್ದ ಸಿಬ್ಬಂದಿ ಈ ಸಂದರ್ಭದಲ್ಲಿ 20 ವಾಹನಗಳನ್ನು ಬಳಸಿಕೊಳ್ಳುತ್ತೇವೆ ಎಂದು ತಿಳಿಸಿದರು.

    ಸಾಮಾನ್ಯವಾಗಿ ಅತಿ ಹೆಚ್ಚು ಮಳೆಯಾಗುವ ಪ್ರದೇಶಗಳದ ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ, ಸೂರ್ಲಬ್ಬಿ, ಮಾದಾಪುರ, ಮಡಿಕೇರಿ ತಾಲೂಕಿನ ಭಾಗಮಂಡಲ ಹಾಗೂ ಪಾಲಿಬೆಟ್ಟ ಭಾಗಗಳಲ್ಲಿ ಹೆಚ್ಚಿನ ಸಮಸ್ಯೆಗಳು ಕಂಡುಬರುತ್ತವೆ. ಟ್ರಾನ್ಸ್ ಫಾರ್ಮರ್ನಿಂದ ವಿದ್ಯುತ್ ಲೈನ್‍ಗಳು 50 ರಿಂದ 60 ಕಿ.ಮೀಟರ್ ದೂರಕ್ಕೆ ಸಂಪರ್ಕ ಕಲ್ಪಿಸಿರುವುದರಿಂದ ಸಮಸ್ಯೆಗಳು ಎದುರಾಗುತ್ತವೆ ಎಂದರು.

  • ಮಳೆಗಾಲ ಆರಂಭ- ಕೊಡಗಿನಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧ

    ಮಳೆಗಾಲ ಆರಂಭ- ಕೊಡಗಿನಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಎದುರಾಗಿದ್ದ ಭೂಕುಸಿತದಿಂದ ಜನ ಸಾಕಷ್ಟು ಸಂಕಷ್ಟ ಎದುರಿಸಿದ್ದಾರೆ. ಹೀಗಾಗಿ ಈ ಬಾರಿ ಮಳೆಗಾಲ ಆರಂಭವಾಗುತ್ತಿದ್ದಂತೆ ಭಾರೀ ವಾಹನಗಳ ಸಂಚಾರಕ್ಕೆ ಕೊಡಗು ಜಿಲ್ಲಾಡಳಿತ ನಿಷೇಧ ಹೇರಿ ಆದೇಶಿಸಿದೆ.

    ಕೊಡಗಿನಲ್ಲಿ ಈಗಾಗಲೇ ಮಳೆ ಆರಂಭವಾಗಿದ್ದು, ಭೂಮಿಯಲ್ಲಿ ತೇವಾಂಶ ಹೆಚ್ಚಾದಂತೆ ಭೂ ಕುಸಿತ ಆಗುವ ಸಾಧ್ಯತೆ ಹೆಚ್ಚಿದೆ ಎಂದು ಜಿಲ್ಲಾಡಳಿತ ಈ ಕ್ರಮಕ್ಕೆ ಮುಂದಾಗಿದೆ. ಹೀಗಾಗಿ ಬುಲೆಟ್ ಟ್ಯಾಂಕರ್ಸ್, ಶಿಫ್ ಕಾರ್ಗೋ, ಕಂಟೈನರ್, ಲಾಂಗ್ ಚಾಸಿಸ್ ವಾಹನಗಳು ಸೇರಿದಂತೆ ಎಲ್ಲ ಬಗೆಯ ಭಾರಿ ವಾಹನಗಳ ಓಡಾಟಕ್ಕೆ ನಿಷೇಧ ಹೇರಿ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಆದೇಶ ಹೊರಡಿಸಿದ್ದಾರೆ.

    ಅಡುಗೆ ಅನಿಲ, ಇಂಧನ ಪೂರೈಕೆ, ಹಾಲು ಹಾಗೂ ಸರ್ಕಾರಿ ಕೆಲಸದ ನಿಮಿತ್ತ ಸಂಚರಿಸುವ ವಾಹನಗಳು, ಶಾಲಾ-ಕಾಲೇಜು ಹಾಗೂ ಸಾರ್ವಜನಿಕರು ಪ್ರಯಾಣಿಸುವ ವಾಹನಗಳನ್ನು ಹೊರತುಪಡಿಸಿ, ಮರದ ದಿಮ್ಮಿಗಳ ಸಾಗಾಟ ಮತ್ತು ಮರಳು ಸಾಗಾಟಕ್ಕೂ ನಿಷೇಧ ಹೇರಲಾಗಿದೆ. ಜೂನ್ 11 ರಿಂದ ಆಗಸ್ಟ್ 10ರ ವರೆಗೆ ಎರಡು ತಿಂಗಳುಗಳ ಕಾಲ ಎಲ್ಲ ಬಗೆಯ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿ ಆದೇಶಿಸಿದ್ದಾರೆ.

  • ಬಿರುಕು ಬಿಟ್ಟ ಬೆಟ್ಟ- ಅತಂತ್ರದ ಭೀತಿಯಲ್ಲಿ 15 ಗ್ರಾಮಗಳ ಜನ

    ಬಿರುಕು ಬಿಟ್ಟ ಬೆಟ್ಟ- ಅತಂತ್ರದ ಭೀತಿಯಲ್ಲಿ 15 ಗ್ರಾಮಗಳ ಜನ

    ಚಿಕ್ಕಮಗಳೂರು: ಜನವಸತಿ ಪ್ರದೇಶದ ಮೇಲ್ಭಾಗದ ಗುಡ್ಡ ಬಿರುಕು ಬಿಟ್ಟಿರುವುದರಿಂದ ಸುಮಾರು 15 ಹಳ್ಳಿಗಳ ಜನ ಆತಂಕದಲ್ಲಿ ಬದುಕುವಂತಹ ಪರಿಸ್ಥಿತಿ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸದಲ್ಲಿ ನಿರ್ಮಾಣವಾಗಿದೆ.

    ಮೂಡಿಗೆರೆ ತಾಲೂಕು ಅಪ್ಪಟ ಮಲೆನಾಡು. ವಾರ್ಷಿಕ ದಾಖಲೆ ಮಳೆ ಬೀಳೋ ಪ್ರದೇಶ. ಕಳೆದ ಎರಡು ವರ್ಷಗಳ ಮಳೆಗಾಲದಲ್ಲೂ ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಸುರಿದಿತ್ತು. ಸಾವು-ನೋವು ಕೂಡ ಸಂಭವಿಸಿತ್ತು. ಮಲೆನಾಡಿಗರು ಮಳೆ ಎಂದರೆ ಹೆದರುವಂತಹ ವಾತಾರವಣ ನಿರ್ಮಾಣವಾಗಿತ್ತು. ಆದರೆ ಈ ವರ್ಷ ಮಳೆಗಾಲದ ಆರಂಭದಲ್ಲಿ ಮಲೆನಾಡಿಗರು ಮಳೆ ಅಂದ್ರೆ ಬೆಚ್ಚಿ ಬೀಳುವಂತಾಗಿದೆ.

    ಕಳೆದ ಶನಿವಾರ ಕಳಸ ಭಾಗದಲ್ಲಿ ಸುರಿದ ಭಾರೀ ಮಳೆಯಿಂದ ಕಳಸ ಸಮೀಪದ ಆನೆಗುಡ್ಡದಲ್ಲಿ ಭಾರೀ ಶಬ್ದ ಕೇಳಿ ಬಂದಿದೆ. ಶಬ್ದ ಕೇಳಿ ಜನ ಕೂಡ ಕಂಗಾಲಾಗಿದ್ದರು. ಮರುದಿನ ಸ್ಥಳೀಯರು ಬೆಟ್ಟ ಹತ್ತಿ ನೋಡಿದಾಗ ಆನೆಗುಡ್ಡ ಅಲ್ಲಲ್ಲೇ ಬೆಟ್ಟ ಬಿರುಕು ಬಿಟ್ಟಿದೆ. ಬೃಹತ್ ಕಲ್ಲುಗಳು ಜಾರಿವೆ. ಇದನ್ನು ಕಣ್ಣಾರೆ ಕಂಡ ಜನ ಆತಂಕದಲ್ಲಿ ಬದುಕುತ್ತಿದ್ದಾರೆ. ಈ ಗುಡ್ಡದ ಸುತ್ತಮುತ್ತ ಸುಮಾರು 15ಕ್ಕೂ ಹೆಚ್ಚು ಹಳ್ಳಿಗಳು ಇವೆ. ಬೆಟ್ಟ ಬಾಯ್ಬಿಟ್ಟಿರೋದನ್ನು ಕಣ್ಣಾರೆ ಕಂಡ ಜನ ಮಳೆ ಎಂದರೆ ಆತಂಕಗೊಳ್ಳುತ್ತಿದ್ದಾರೆ.

    ಭೂಮಿಯೊಳಗಿಂದ ಭಾರೀ ಶಬ್ದ ಕೇಳಿ ಬಂದು ಬೆಟ್ಟ ಬಾಯ್ಬಿಡುವ ಸಂದರ್ಭ ಪ್ರಾಣಿ-ಪಕ್ಷಿಗಳ ಅರಚಾಟ-ಕಿರುಚಾಟ ಕೂಡ ಸ್ಥಳೀಯರ ಅನುಭವಕ್ಕೆ ಬಂದಿದೆ. ಕಳಸದಿಂದ ಸುಮಾರು 9 ರಿಂದ 10 ಕಿ.ಮೀ. ದೂರದಲ್ಲಿರೋ ಈ ಬೆಟ್ಟದ ತಪ್ಪಲಿನ ಗ್ರಾಮಗಳು ಕಳೆದ ವರ್ಷದ ಭಾರೀ ಮಳೆಯಿಂದ ನಗರ ಪ್ರದೇಶದ ಸಂಪರ್ಕವನ್ನೇ ಕಳೆದುಕೊಂಡಿದ್ದರು. ಈ ವರ್ಷ ಮಳೆಗಾಲದ ಆರಂಭದಲ್ಲೇ ಇಂತದ್ದೊಂದು ಘಟನೆ ನಡೆದಿರುವುದರಿಂದ ಮಲೆನಾಡಿಗರು ಈ ವರ್ಷ ಮಳೆರಾಯನ ಅಬ್ಬರ-ಅನಾಹುತ ಏನೋ ಎಂದು ಕಂಗಾಲಾಗಿದ್ದಾರೆ. ಈ ವರ್ಷವೂ ಕಳೆದ ವರ್ಷದಂತೆ ಮಳೆ ಸುರಿಯುತ್ತಾ, ಅದೇ ರೀತಿ ಮಳೆ ಸುರಿದರೆ ಬೆಟ್ಟ ಕುಸಿದು ಬೀಳುತ್ತಾ ಎಂಬ ಅನುಮಾನದೊಂದಿಗೆ ಸ್ಥಳಿಯರು ಆತಂಕದಲ್ಲೇ ಬದುಕುತ್ತಿದ್ದಾರೆ.