Tag: ಮಲ್ಲೇಶ್ವರಂ ಬಿಜೆಪಿ ಕಚೇರಿ

  • 30 ವರ್ಷದಿಂದ ತಲೆಮರೆಸಿಕೊಂಡಿದ್ದ ಬೆಂಗಳೂರು ಸ್ಫೋಟದ ಉಗ್ರ ಬಂಧನ

    30 ವರ್ಷದಿಂದ ತಲೆಮರೆಸಿಕೊಂಡಿದ್ದ ಬೆಂಗಳೂರು ಸ್ಫೋಟದ ಉಗ್ರ ಬಂಧನ

    – ದಕ್ಷಿಣ ಭಾರತದ ಸ್ಫೋಟಗಳ ಪ್ರಮುಖ ಆರೋಪಿ ಸೇರಿ ಇಬ್ಬರ ಅರೆಸ್ಟ್

    ಚೆನ್ನೈ: ಬೆಂಗಳೂರು ನಗರ ಸೇರಿ ದಕ್ಷಿಣ ಭಾರತದ ಹಲವು ಬಾಂಬ್ ಸ್ಫೋಟಗಳ (Bengaluru Blast) ಪ್ರಮುಖ ಸೂತ್ರಧಾರಿಯನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ (Tamil Nadu) ನಾಗೂರು ನಿವಾಸಿ ಅಬೂಬಕರ್ ಸಿದ್ದಿಕ್ (60) ಬಂಧಿತ ಉಗ್ರ.

    1995ರಿಂದ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ತಮಿಳುನಾಡು ಪೊಲೀಸರು ಆಂಧ್ರಪ್ರದೇಶದ ಅನ್ನಮಯ ಜಿಲ್ಲೆಯಲ್ಲಿ ಬಂಧಿಸಿದ್ದಾರೆ. ನಿಷೇಧಿತ ಸಂಘಟನೆಗಳಾದ ತಮಿಳುನಾಡಿದ ಅಲ್ ಉಮ್ಮ ಸೇರಿ ಹಲವು ಸಂಘಟನೆಗಳಿಗೆ ನೇಮಕಾತಿ ಮಾಡುತ್ತಿದ್ದ ಆರೋಪಿಯಾಗಿದ್ದ ಸಿದ್ದಿಕ್. ಈತನ ಜೊತೆಗಿದ್ದ ಮೊಹಮ್ಮದ್ ಅಲಿಯನ್ನು ಕೂಡಾ ಪೊಲೀಸರು ಬಂಧಿಸಿದ್ದಾರೆ. ಈತ 1999ರಿಂದ ತಲೆ ಮರೆಸಿಕೊಂಡಿದ್ದ. ಇದನ್ನೂ ಓದಿ: ಮಲ್ಲೇಶ್ವರಂ ಸ್ಫೋಟದಲ್ಲಿ ಭಾಗಿಯಾಗಿದ್ದ ಉಗ್ರನಿಂದ ಕಲಬುರಗಿ ಸೆಂಟ್ರಲ್ ಜೈಲಿನಿಂದಲೇ ಹನಿಟ್ರ್ಯಾಪ್?

    ಪ್ರಕರಣಗಳು ಯಾವುವು..?

    ತಮಿಳುನಾಡು, ಕರ್ನಾಟಕ ರಾಜ್ಯಗಳಲ್ಲಿ ನಡೆದ ಹಲವು ಪ್ರಕರಣಗಳಲ್ಲಿ ಸಿದ್ದಿಕ್ ಆರೋಪಿಯಾಗಿದ್ದಾನೆ. 1999ರ ಬೆಂಗಳೂರು ಸ್ಫೋಟ, 2013ರ ಬೆಂಗಳೂರಿನ ಮಲ್ಲೇಶ್ವರಂ ಬಿಜೆಪಿ ಕಚೇರಿ ಸ್ಫೋಟ, 2011ರಲ್ಲಿ ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿ ನೇತೃತ್ವದ ರಥಯಾತ್ರೆಯ ಮೇಲೆ ಮಧುರೈಯಲ್ಲಿ ನಡೆದ ಪೈಪ್ ಬಾಂಬ್ ದಾಳಿ, 1991ರ ಚೆನ್ನೈ ಹಿಂದೂ ಮುನ್ನಣಿ ಕಾರ್ಯಾಲಯದ ಮೇಲೆ ನಡೆದ ದಾಳಿಯಲ್ಲೂ ಈತ ಆರೋಪಿಯಾಗಿದ್ದ.

    ಅಲ್ಲದೆ, ನಾಗೂರಿನಲ್ಲಿ ಪಾರ್ಸೆಲ್ ಬಾಂಬ್ ಸ್ಫೋಟ, 1997ರಲ್ಲಿ ಚೆನ್ನೈ, ತಿರುಚಿರಾಪಳ್ಳಿ, ಕೊಯಮತ್ತೂರು ಸೇರಿ 7 ಕಡೆ ನಡೆದ ಸ್ಫೋಟ, ಚೆನ್ನೈ ಎಗ್ಮೋರ್ ಪೊಲೀಸ್ ಕಮೀಷನರ್ ಕಚೇರಿ ಸ್ಫೋಟ, 2012ರ ವೆಲ್ಲೂರು ಅರವಿಂದ ರೆಡ್ಡಿ ಕೊಲೆ ಪ್ರಕರಣದಲ್ಲೂ ಈತನೇ ಸೂತ್ರಧಾರನಾಗಿದ್ದ ಎಂದು ತಿಳಿದು ಬಂದಿದೆ.

    ರಹಸ್ಯ ಮಾಹಿತಿಯಿಂದ ಸಿಕ್ಕಿ ಬಿದ್ರು!

    ಅಬೂಬಕರ್ ಸಿದ್ದಿಕ್ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದರು. ರಹಸ್ಯ ಮಾಹಿತಿ ಆಧರಿಸಿ ನಡೆಸಿದ ಕಾರ್ಯಾಚರಣೆಯಲ್ಲಿ ಆಂಧ್ರಪ್ರದೇಶದ ಅನ್ನಮಯ ಜಿಲ್ಲೆಯಲ್ಲಿ ಅಬೂಬಕರ್ ಸಿದ್ದಿಕ್‍ನನ್ನು ಬಂಧಿಸಿದ್ದಾರೆ. ಇವರಿಬ್ಬರನ್ನು ಶೀಘ್ರದಲ್ಲೇ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಿದ್ದಾರೆ. ಅಬೂಬಕರ್ ಬಂಧನ ಮಹತ್ವದ ಸಾಧನೆ ಎಂದು ತಮಿಳುನಾಡು ಪೊಲೀಸರು ಹಾಗೂ ಎನ್‍ಐಎ ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: Exclusive | ರಾಮೇಶ್ವರಂ ಕೆಫೆ ಬ್ಲಾಸ್ಟ್ ಕೇಸ್: ಬಾಂಬ್‌ ಇಟ್ಟ ಬಳಿಕ ಮಸೀದಿಯಲ್ಲಿ ಪ್ರಾರ್ಥನೆ ಮಾಡಿದ್ದ ಮಾಸ್ಟರ್‌ ಮೈಂಡ್‌

  • ಬಿಜೆಪಿ ಕಚೇರಿ, ನ್ಯಾಷನಲ್ ಕಾಲೇಜಿನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ: ಯಾವ ರಸ್ತೆಯಲ್ಲಿ ಮೆರವಣಿಗೆ ಹೋಗುತ್ತೆ?

    ಬಿಜೆಪಿ ಕಚೇರಿ, ನ್ಯಾಷನಲ್ ಕಾಲೇಜಿನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ: ಯಾವ ರಸ್ತೆಯಲ್ಲಿ ಮೆರವಣಿಗೆ ಹೋಗುತ್ತೆ?

    ಬೆಂಗಳೂರು: ಅದಮ್ಯ ಚೇತನ, ಬಡವರ ಬಂಧು, ಧೀಮಂತ ನಾಯಕ, ಸ್ನೇಹ ಜೀವಿ, ರಾಜ್ಯ ಬಿಜೆಪಿಯ ಆಧಾರ ಸ್ತಂಭ ಅನಂತ್ ಕುಮಾರ್ ಇನ್ನು ನೆನಪು ಮಾತ್ರ. ಶ್ವಾಸಕೋಶದ ಕ್ಯಾನರ್ ನಿಂದ ಬಳಲುತ್ತಿದ್ದ ಅವರು ಸೋಮವಾರ ಬೆಳಗಿನ ಜಾವ 2 ಗಂಟೆಗೆ ಬೆಂಗಳೂರಿನ ಶಂಕರ ಆಸ್ಪತ್ರೆಯಲ್ಲಿ ವಿಧಿವಶರಾದರು. ಅನಂತ್ ಕುಮಾರ್ ಅಕಾಲಿಕ ನಿಧನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೂರು ದಿನ ಶೋಕಾಚರಣೆ ನಡೆಸಲಾಗುತ್ತಿದೆ.

    ಅನಂತ್ ಕುಮಾರ್ ಪಾರ್ಥಿವ ಶರೀರವನ್ನು ನಿನ್ನೆ ಅವರ ಬಸವನಗುಡಿ ನಿವಾಸದಲ್ಲಿ ಇರಿಸಲಾಗಿತ್ತು. ಈ ವೇಳೆ ಪ್ರಧಾನಿ ಮೋದಿ, ರಾಜ್ಯ ನಾಯಕರು ನಿವಾಸಕ್ಕೆ ತೆರಳಿ ಅಂತಿಮ ದರ್ಶನವನ್ನು ಪಡೆದರು. ಇಂದು ಬೆಳಗ್ಗೆ ಬಿಜೆಪಿ ಕಚೇರಿ ಇರಿಸಿದ ಬಳಿಕ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

    ಬೆಳಗ್ಗೆ 8 ರಿಂದ 9 ಗಂಟೆವರೆಗೆ ಬಿಜೆಪಿ ಕಾರ್ಯಕರ್ತರಿಗೆ ಅಂತಿಮ ನಮನ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ನಂತರ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯ-ರಾಷ್ಟ್ರದಿಂದ ಗಣ್ಯಾತಿಗಣ್ಯರು, ಬೆಂಬಲಿಗರು ಅಪಾರ ಅಭಿಮಾನಿಗಳು ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದು ಬಿಗಿಭದ್ರತೆ ಕೈಗೊಳ್ಳಲಾಗಿದೆ.

    ಮಧ್ಯಾಹ್ನ 1 ಗಂಟೆಯ ಬಳಿಕ ಚಾಮರಾಜಪೇಟೆಯ ಟಿ.ಆರ್.ಮಿಲ್ ರುದ್ರಭೂಮಿಯಲ್ಲಿ ವೈದಿಕ ಸಂಪ್ರದಾಯದಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.

    ಇವತ್ತು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಪಕ್ಷದ ಅಧ್ಯಕ್ಷ ಅಮಿತ್ ಶಾ, ಅಡ್ವಾಣಿ ಸೇರಿದಂತೆ ಬಿಜೆಪಿ ಅಗ್ರ ನಾಯಕರು ಅಶ್ರುತರ್ಪಣ ಸಲ್ಲಿಸಲಿದ್ದಾರೆ.

    ಸೋಮವಾರ ರಾತ್ರಿ ಆಗಮಿಸಿದ ಪ್ರಧಾನಿ ಮೋದಿ ಅವರು ಅನಂತಕುಮಾರ್ ಅವರ ಅಂತಿಮ ದರ್ಶನ ಪಡೆದು, ನಮನ ಸಲ್ಲಿಸಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಪ್ರಧಾನಿ ಮೋದಿಗೆ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್, ರಾಜ್ಯಪಾಲ ವಜೂಭಾಯ್ ವಾಲಾ ಸಾಥ್ ನೀಡಿದರು. ಸಂಪುಟ ಸಹೋದ್ಯೋಗಿಗಳಾದ ಜೆಪಿ ನಡ್ಡಾ, ಪ್ರಕಾಶ್ ಜಾವಡೇಕರ್, ಮೊನ್ ರಾಧಾಕೃಷ್ಣನ್, ಸಾದ್ವಿ ನಿರಂಜನ್ ಜ್ಯೋತಿ, ರಾಮದಾಸ್ ಅಠಾವಳೆ, ಅಶ್ವಿನ್‍ಕುಮಾರ್ ಚೌಬೆ, ಅನಂತಕುಮಾರ್ ಹೆಗಡೆ, ರಮೇಶ್ ಜಿಗಜಿಣಗಿ, ಸ್ಪೀಕರ್ ಸುಮಿತ್ರಾ ಮಹಾಜನ್, ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಬಿಹಾರ ಡಿಸಿಎಂ ಸುಶೀಲ್ ಮೋದಿ, ಹರಿಯಾಣ ಕೃಷಿ ಸಚಿವ ಓಂ ಪ್ರಕಾಶ್ ಧನಕರ್ ಕೂಡ ನಿನ್ನೆಯೇ ಅಂತಿಮ ದರ್ಶನ ಪಡೆದರು.

    ಬೆಂಗಳೂರಿನ ಪ್ರಮುಖ ರಸ್ತೆಯಲ್ಲಿ ಪಾರ್ಥಿವ ಶರೀರ ಮೆರವಣಿಗೆ ಸಾಗಲಿರುವ ಹಿನ್ನೆಲೆಯಲ್ಲಿ ಟ್ರಾಫಿಕ್ ಜಾಮ್ ಆಗದಂತೆ 15 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

    ಯಾವ ರಸ್ತೆಯಲ್ಲಿ ಮೆರವಣಿಗೆ ಹೋಗುತ್ತದೆ?
    ಅನಂತ ಕುಮಾರ್ ನಿವಾಸದಿಂದ – ಬಿಜೆಪಿ ಕಚೇರಿ
    ಅನಂತಕುಮಾರ್ ನಿವಾಸ – ಎಸ್‍ಪಿ ಸಮಾಜ್ ರಸ್ತೆ – ಬಸವನಗುಡಿ ಮೆಡಿಕಲ್ ಸೆಂಟರ್ ಬಳಿ ಎಡ ತಿರುವು – ಲಾಲ್‍ಬಾಗ್ ಪಶ್ಚಿಮ ದ್ವಾರ – ಆರ್.ವಿ.ರಸ್ತೆ – ಮಿನರ್ವ ಸರ್ಕಲ್ – ಭಾರತಿ ಜಂಕ್ಷನ್ – ಶಿವಾಜಿ ಜಂಕ್ಷನ್ – ಸ್ಟಾಕ್ 14 ಜಂಕ್ಷನ್ – ಎನ್.ಆರ್.ಸ್ಕ್ವೇರ್ – ಪೊಲೀಸ್ ಕಾರ್ನರ್ – ಮೈಸೂರು ಬ್ಯಾಂಕ್ ಬಲ ತಿರುವು -ಮಹಾರಾಣಿ ಜಂಕ್ಷನ್ – ಓಲ್ಡ್ ಹೈ ಗ್ರೌಂಡ್ ಪೊಲೀಸ್ ಸ್ಟೇಷನ್ ಜಂಕ್ಷನ್ – ಬಿ ನಾಟ್ ಟು ಜಂಕ್ಷನ್ – ಪಿಜಿ ಹಳ್ಳಿ ಜಂಕ್ಷನ್ – ಕಾವೇರಿ ಜಂಕ್ಷನ್ ಎಡತಿರುವು – ಭಾಷ್ಯಂ ಸರ್ಕಲ್ – ಸರ್ಕಲ್ ಮಾರಮ್ಮ ಜಂಕ್ಷನ್ ಎಡ ತಿರುವು – ಸಂಪಂಗಿ ರಸ್ತೆ – ಮೆಗ್ರಾಸ್ ರಸ್ತೆ – ಸಂಪಿಗೆ ರಸ್ತೆ – ಬಿಜೆಪಿ ಕಚೇರಿ

    ಬಿಜೆಪಿ ಕಚೇರಿಯಿಂದ – ನ್ಯಾಷನಲ್ ಕಾಲೇಜು ಮೈದಾನ
    ಬಿಜೆಪಿ ಕಚೇರಿ ಬಳಿ ಎಡ ತಿರುವು – ಕಾಡು ಮಲ್ಲೇಶ್ವರ ದೇಗುಲ ಬಳಿ ಬಲ ತಿರುವು – ಸಂಪಿಗೆ ರಸ್ತೆ ಬಳಿ ಬಲ ತಿರುವು – ಸ್ಯಾಂಕಿ ಟ್ಯಾಂಕಿ ರಸ್ತೆ – ಭಾಷ್ಯಂ ಸರ್ಕಲ್ – ಕಾವೇರಿ ಜಂಕ್ಷನ್ – ಪಿಜಿ ಹಳ್ಳಿ ಜಂಕ್ಷನ್ – ಬಿ ನಾಟ್ ಟು ಜಂಕ್ಷನ್ – ಓಲ್ಡ್ ಹೈ ಗ್ರೌಂಡ್ ಪೊಲೀಸ್ ಸ್ಟೇಷನ್ ಜಂಕ್ಷನ್ – ಎಲ್‍ಆರ್‍ಡಿ ಜಂಕ್ಷನ್ ಬಳಿ ಬಲ ತಿರುವು – ಸ್ಟಾಕ್ ಟೆನ್ ಜಂಕ್ಷನ್ – ಸಿಐಡಿ ಜಂಕ್ಷನ್ – ಮಹಾರಾಣಿ ಕಾಲೇಜ್ ಸರ್ವೀಸ್ ರೋಡ್ ಎಡ ತಿರುವು – ಕೆ.ಆರ್.ಸರ್ಕಲ್ – ನೃಪತುಂಗ ರಸ್ತೆ – ಪೊಲೀಸ್ ಕಾರ್ನರ್ – ಕಾರ್ಪೊರೇಷನ್ ಸರ್ಕಲ್ – ಎನ್.ಆರ್.ಸ್ಕ್ವೇರ್ ಬಳಿ ಎಡ ತಿರುವು – ದೇವನಾಗ ಜಂಕ್ಷನ್ ಬಳಿ ಬಲ ತಿರುವು – ಪೂರ್ಣಿಮಾ ಜಂಕ್ಷನ್ – ಊರ್ವಶಿ ಜಂಕ್ಷನ್ – ಸ್ಟಾಕ್ 35 ಜಂಕ್ಷನ್ – ವಾಣಿ ವಿಲಾಸ್ ರಸ್ತೆ – ಪಂಪ ಮಹಾಕವಿ ರಸ್ತೆ ಎಡ ತಿರುವು – ನ್ಯಾಷನಲ್ ಕಾಲೇಜು ಗ್ರೌಂಡ್

    ನ್ಯಾಷನಲ್ ಕಾಲೇಜು ಮೈದಾನದಿಂದ – ರುದ್ರಭೂಮಿ
    ನ್ಯಾಷನಲ್ ಕಾಲೇಜ್ ಮೈದಾನದಿಂದ – ಪಂಪ ಮಹಾಕವಿ ರಸ್ತೆ ಎಡ ತಿರುವು – ರಾಮಕೃಷ್ಣ ಆಶ್ರಮ ಜಂಕ್ಷನ್ – ಬುಲ್ ಟೆಂಪಲ್ ರಸ್ತೆ – ಉಮಾ ಥಿಯೇಟರ್ ಜಂಕ್ಷನ್ – ಚಾಮರಾಜಪೇಟೆ ಜಂಕ್ಷನ್ – ಐಒಸಿ ಪೆಟ್ರೋಲ್ ಬಂಕ್ – ಟಿ.ಆರ್.ಮಿಲ್ ಜಂಕ್ಷನ್ – ವಿಠ್ಠಲ ದೇವಾಲಯ – ಚಾಮರಾಜಪೇಟೆಯ ರುದ್ರಭೂಮಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews