Tag: ಮಲ್ಪೆ

  • ಯೋಗೀಶ್ ಪೂಜಾರಿ ಕೊಲೆ ಪ್ರಕರಣ- ನಾಲ್ವರ ಬಂಧನ

    ಯೋಗೀಶ್ ಪೂಜಾರಿ ಕೊಲೆ ಪ್ರಕರಣ- ನಾಲ್ವರ ಬಂಧನ

    ಉಡುಪಿ: ಮಲ್ಪೆ ಪೊಲೀಸರು ಯೋಗೀಶ್ ಪೂಜಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಂಚಿನ ಕಾರ್ಯಾಚರಣೆ ಮಾಡಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಕೊಲೆ ನಡೆದು ಒಂದೇ ದಿನದಲ್ಲಿ ಪ್ರಕರಣವನ್ನು ಭೇಧಿಸಿದ ಪೊಲೀಸರು, ಕುಖ್ಯಾತ ರೌಡಿ ಶೀಟರ್ ಸುಜಿತ್ ಪಿಂಟೋ ಸಹಿತ ಮೂವರು ಆರೋಪಿಗಳ ಕೈಗೆ ಕೋಳ ಹಾಕಿದ್ದಾರೆ.

    ಸುಜಿತ್ ಪಿಂಟೋ, ಆತನ ಸಹೋದರ ರೋಹಿತ್ ಪಿಂಟೋ, ಅಣ್ಣು ಅಲಿಯಾಸ್ ಪ್ರದೀಪ್, ವಿನಯ್ ಬಂಧಿತ ಆರೋಪಿಗಳು. ಆರೋಪಿಗಳನ್ನು ಬಂಧಿಸಿರುವ ಮಲ್ಪೆ ಪೊಲೀಸರು ಕೊಲೆ ಮಾಡಿದ ಸ್ಥಳಕ್ಕೆ ಕರೆತಂದು ಮಹಜರು ಮಾಡಿದರು.

    ಲಾಕ್‍ಡೌನ್ ಸಂದರ್ಭ ಸ್ಥಳೀಯ ಶಾಲೆಯ ಜಗಲಿಯಲ್ಲಿ ಗುಂಡು ಪಾರ್ಟಿ ಮಾಡಿದ್ದಾಗ ಆ ತಂಡದ ಯುವಕನಲ್ಲಿ ಯೋಗೀಶ್ ಪೂಜಾರಿ ತಗಾದೆ ಎತ್ತಿದ್ದ. ಆ ದ್ವೇಷದಲ್ಲಿ ದೂರನ್ನು ಸುಜಿತ್ ಪಿಂಟೋನಲ್ಲಿ ಹೇಳಿಕೊಂಡಿದ್ದ ಎಂಬ ಮಾಹಿತಿಯಿದೆ. ಸೋಮವಾರ ರಾತ್ರಿ ಈ ನಾಲ್ವರ ತಂಡ ಮಾರಕಾಸ್ತ್ರಗಳಿಂದ ಇರಿದು ಕೊಂದಿದೆ. ಯೋಗೀಶ್ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದನು.

    ಕೃತ್ಯಕ್ಕೆ ಬಳಸಿದ್ದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಮತ್ತೋರ್ವ ಆರೋಪಿ ಅನೂಪ್ ತಲೆಮರೆಸಿಕೊಂಡಿದ್ದಾನೆ. ಆತನ ಬಂಧನಕ್ಕೆ ಎರಡು ತಂಡ ರಚಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

  • ಕೊರೊನಾ ಇದ್ರೂ ಮಲ್ಪೆಯಲ್ಲಿ ಸಾವಿರಾರು ಜನರ ವಹಿವಾಟು- ಏನ್ಮಾಡ್ತಿದೆ ಮೀನುಗಾರಿಕಾ ಇಲಾಖೆ?

    ಕೊರೊನಾ ಇದ್ರೂ ಮಲ್ಪೆಯಲ್ಲಿ ಸಾವಿರಾರು ಜನರ ವಹಿವಾಟು- ಏನ್ಮಾಡ್ತಿದೆ ಮೀನುಗಾರಿಕಾ ಇಲಾಖೆ?

    ಉಡುಪಿ: ಮಹಾಮಾರಿ ಕೊರೊನಾ ವಿರುದ್ಧ ಕೇಂದ್ರ ಹಾಗೂ ರಾಜ್ಯ ಸರ್ಕಾರ ಖಡಕ್ ಸೂಚನೆಗಳನ್ನು ಜನತೆಗೆ ಕೊಟ್ಟಿದೆ. ಉಡುಪಿ ಜಿಲ್ಲೆ ಶೇ.95 ರಷ್ಟು ಇದನ್ನು ಪಾಲಿಸಿದೆ. ಆದರೆ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಸರ್ಕಾರದ ಆದೇಶವನ್ನು ಸಮುದ್ರದ ಗಾಳಿಗೆ ತೂರಿಬಿಡಲಾಗಿದೆ ಎಂಬ ಪ್ರಶ್ನೆ ಕೇಳಿಬರುತ್ತಿದೆ.

    ಕಳೆದ ನಾಲ್ಕು ದಿನಗಳಿಂದ ಉಡುಪಿಯಲ್ಲಿ ಸೆಕ್ಷನ್ ವಿಧಿಸಲಾಗಿದೆ. ಜನ ಹೊರಗೆ ಬರದೆ ಸರ್ಕಾರದ ಆದೇಶವನ್ನು ಪಾಲಿಸಿ ಜನ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದಾರೆ. ಆದರೆ ಮಲ್ಪೆ ಬಂದರಲ್ಲಿ ಬಿಂದಾಸ್ ಬ್ಯುಸಿನೆಸ್ ನಡೆಯುತ್ತಾ ಇದೆ. ಇಂದು ಕೂಡ ಐದು ಸಾವಿರ ಜನರಿಂದ ಒಂದೇ ಕಡೆ ವಹಿವಾಟು ನಡೆದಿದೆ. ವಹಿವಾಟು ಮಾಡುವ ಸಂದರ್ಭ ಮೀನುಗಾರರು ಕಾರ್ಮಿಕರು ಮಾಲೀಕರು ಯಾರೂ ಕೂಡ ಮುನ್ನೆಚ್ಚರಿಕೆ ವಹಿಸಿಲ್ಲ. ಮಾಸ್ಕ್ ಹಾಕಿಲ್ಲ. ಒಬ್ಬರೊಬ್ಬರ ನಡುವೆ ಅಂತರ ಕಾಯ್ದುಕೊಂಡಿಲ್ಲ ಶುಚಿತ್ವವನ್ನು ವಹಿಸಿಲ್ಲ.

    ರಾಜ್ಯ ಸರ್ಕಾರ ಕಳೆದ ರಾತ್ರಿ ಸುತ್ತೋಲೆ ಹೊರಡಿಸಿದ್ದು ಅಗತ್ಯ ವಸ್ತುಗಳ ಜೊತೆ ಮೀನು ಮತ್ತು ಮಾಂಸವನ್ನು ಕೂಡ ಸೇರಿಸಿತ್ತು. ಹೀಗಾಗಿ ಮೀನಿಗೆ ವಿನಾಯಿತಿ ಕೊಟ್ಟದ್ದೇ ತಪ್ಪಾಯ್ತಾ ಎಂಬ ಪ್ರಶ್ನೆ ಈಗ ಕಾಡುತ್ತಿದೆ. ಇಡೀ ಕರ್ನಾಟಕ ಶಟ್ ಡೌನ್ ಆದ್ರೂ ಉಡುಪಿಯ ಮಲ್ಪೆ ಬಂದರಲ್ಲಿ ಬಿಂದಾಸ್ ಬ್ಯುಸಿನೆಸ್ ನಡೆಯುತ್ತಿದೆ. ಕೇರಳ, ತಮಿಳುನಾಡು, ಈಶಾನ್ಯ ರಾಜ್ಯದ ಕಾರ್ಮಿಕರು ಮಲ್ಪೆಯಲ್ಲಿ ತುಂಬಿಕೊಂಡಿದ್ದಾರೆ. ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೆ ವ್ಯವಹಾರ ಮಾಡಲಾಗುತ್ತಿದೆ.

    ಸರ್ಕಾರದ ಕಫ್ರ್ಯೂ ಕಾನೂನು ಸಮುದ್ರದ ಗಾಳಿಗೆ ತೂರಿ ಬಿಡಲಾಗಿದೆ. ಬಂದರಲ್ಲಿ ಐದು ಸಾವಿರ ಜನ ವಹಿವಾಟು ನಡೆಸುತ್ತಿದ್ದು, ಮೀನಿಗೆ ಸರ್ಕಾರ ವಿನಾಯಿತಿ ಕೊಟ್ಟದ್ದೇ ತಪ್ಪಾಯ್ತಾ ಅಂತ ತನ್ನ ಸಮಾಜದ ಬಗ್ಗೆ ಅತಿಯಾದ ಕಾಳಜಿ ಇರುವ ಮೀನುಗಾರ ಮುಖಂಡರೊಬ್ಬರು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ನೋವು ವ್ಯಕ್ತಪಡಿಸಿದರು.

    ಕಳೆದ ಹದಿನೈದು ದಿವಸದಿಂದ ಆರೋಗ್ಯ ಇಲಾಖೆ ಜಿಲ್ಲಾಡಳಿತ ಜನರಿಗೆ ಕೊರೊನಾ ಬಗ್ಗೆ ಜನ ಜಾಗೃತಿ ಮೂಡಿಸುತ್ತಾ ಇದೆ. ಮೀನುಗಾರರಿಗೆ ಜಿಲ್ಲಾಡಳಿತ ಕೊರೊನಾ ಕ್ಲಾಸ್ ಕೊಡುವಲ್ಲಿ ವಿಫಲವಾಗಿದ್ಯಾ ಅನ್ನೋ ಪ್ರಶ್ನೆ ಕೇಳಬೇಕಾಗುತ್ತದೆ. ಜೀವನವನ್ನು ಸಮುದ್ರದಲ್ಲಿ ಕಳೆಯುವ ಬೆಳಗ್ಗಿನಿಂದ ಸಂಜೆಯ ತನಕ ಮೀನಿನ ಬುಟ್ಟಿ ಜೊತೆ ಬದುಕುವ ಕಡಲ ಮಕ್ಕಳಿಗೆ ಮಹಾಮಾರಿ ಕೋರೋಣ ಹಬ್ಬುವ ರೀತಿ, ಹಬ್ಬಿದ ನಂತರ ಸಂಭವಿಸುವ ಆಪತ್ತು ಏನು ಅನ್ನುವ ಬಗ್ಗೆ ಇನ್ನು ಗಮನಕ್ಕೆ ಬಂದಿಲ್ಲ. ಮೊಗವೀರ ಯುವಕರಿಗೆ ಮಹಿಳೆಯರಿಗೆ ಮತ್ತು ವಹಿವಾಟು ನಡೆಸುವವರಿಗೆ ಕೊರೊನಾ ವೈರಸ್ ನ ಭೀಕರತೆಯ ಪಾಠ ಮಾಡುವ ಅಗತ್ಯ ಇದೆ.

  • ಮಹಾರಾಷ್ಟ್ರದಲ್ಲಿ ಮಲ್ಪೆಯ ಡೀಪ್ ಸೀ ಬೋಟ್ ವಶ- 7 ಮೀನುಗಾರರ ಬಂಧನ

    ಮಹಾರಾಷ್ಟ್ರದಲ್ಲಿ ಮಲ್ಪೆಯ ಡೀಪ್ ಸೀ ಬೋಟ್ ವಶ- 7 ಮೀನುಗಾರರ ಬಂಧನ

    ಉಡುಪಿ: ಮಲ್ಪೆಯಿಂದ ಮೀನುಗಾರಿಕೆಗೆ ಹೋಗಿದ್ದ ಶ್ರೀಲಕ್ಷ್ಮೀ ಹೆಸರಿನ ಡೀಪ್ ಸೀ ಬೋಟ್ ಮಹಾರಾಷ್ಟ್ರದಲ್ಲಿ ಸೆರೆಯಾಗಿದೆ. ಬೋಟಲ್ಲಿದ್ದ ಏಳು ಮಂದಿ ಮೀನುಗಾರರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.

    ಶ್ರೀಲಕ್ಷ್ಮೀ ಬೋಟ್‍ನ ಕ್ಯಾಪ್ಟನ್ ರಾಮ ಭಟ್ಕಳ ಸೇರಿ ಏಳು ಮಂದಿ ಎರಡು ದಿನಗಳ ಹಿಂದೆ ಮಲ್ಪೆಯಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದರು. ಬೋಟಲ್ಲಿದ್ದ ಏಳೂ ಮಂದಿ ಉತ್ತರಕನ್ನಡ ಜಿಲ್ಲೆಯವರು ಎಂಬ ಮಾಹಿತಿ ಲಭಿಸಿದೆ. ಗೋವಾ ರಾಜ್ಯ ದಾಟಿ ಮಹಾರಾಷ್ಟ್ರ ತಲುಪಿದ್ದ ಬೋಟ್ ಮಾಲ್ವಾನ್ ಸಮುದ್ರ ತಲುಪುತ್ತಿದ್ದಂತೆ ಅಲ್ಲಿನ ಕೋಸ್ಟ್ ಗಾರ್ಡ್ ಪೊಲೀಸರು ಬೋಟ್ ಮತ್ತು ಮೀನುಗಾರರನ್ನು ವಶಕ್ಕೆ ಪಡೆದಿದ್ದಾರೆ.

    ಮಹಾರಾಷ್ಟ್ರದ ಸಮುದ್ರ ತೀರದಿಂದ ಬೋಟ್ 12 ನಾಟೇಕಲ್ ದೂರ ಹೊರಗಿತ್ತು. ಆದ್ರೂ ಮಹಾರಾಷ್ಟ್ರದ ಮಾಲ್ವಾನ್ ಕೋಸ್ಟ್ ಗಾರ್ಡ್ ಪೊಲೀಸರಿಗೆ ಅಲ್ಲಿನ ಮೀನುಗಾರರು ದೂರು ನೀಡಿದ್ದರಿಂದ ಬಂಧನವಾಗಿದೆ ಎಂದು ಮಲ್ಪೆಯ ಮೀನುಗಾರರು ದೂರಿದ್ದಾರೆ.

    ಮಹಾರಾಷ್ಟ್ರ ರಾಜ್ಯದ ಗಡಿಯಿಂದ ಹೊರಗೆ ಅಂದ್ರೆ ಭಾರತ ದೇಶದ ಗಡಿಯೊಳಗೆ ಮೀನುಗಾರಿಕೆ ಮಾಡುತ್ತಿದ್ದ ಬೋಟನ್ನು ಮಾಲ್ವಾನ್ ನ ಸ್ಥಳೀಯ ಮೀನುಗಾರರು ಅಡ್ಡಗಟ್ಟಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಕಳೆದ ನಡುರಾತ್ರಿ 1 ಗಂಟೆಗೆ ಸುಮಾರಿಗೆ ಮೀನುಗಾರರ ಅಕ್ರಮ ಬಂಧನವಾಗಿದೆ. ನಮ್ಮವರು ನಿಯಮದಂತೆ ಮೀನುಗಾರಕೆ ಮಾಡಿದ್ರೂ ಅರೆಸ್ಟ್ ಮಾಡಿದ ಮಹಾರಾಷ್ಟ್ರ ಪೊಲೀಸರ ಕ್ರಮವನ್ನು ಉಡುಪಿ ಬೋಟ್ ಚಾಲಕರ ಸಂಘದ ಅಧ್ಯಕ್ಷ ರವಿ ಖಂಡಿಸಿದ್ದಾರೆ. ಪಬ್ಲಿಕ್ ಟಿವಿ ಜೊತೆ ಮಾತಮಾಡಿದ ಅವರು ಬಂಧಿತರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

  • ಮಹಾರಾಷ್ಟ್ರ ಸಮುದ್ರದಲ್ಲಿ ಮಲ್ಪೆಯ 7 ಮಂದಿಗೆ 200 ಮೀನುಗಾರರಿಂದ ಹಲ್ಲೆ

    ಮಹಾರಾಷ್ಟ್ರ ಸಮುದ್ರದಲ್ಲಿ ಮಲ್ಪೆಯ 7 ಮಂದಿಗೆ 200 ಮೀನುಗಾರರಿಂದ ಹಲ್ಲೆ

    – 8 ಲಕ್ಷ ಮೌಲ್ಯದ ಮೀನು, ಮಷೀನ್‍ಗಳು ದರೋಡೆ
    – ಆಳ ಸಮುದ್ರದಲ್ಲಿ ಮೀನುಗಾರರ ದರೋಡೆ
    – ಪದೇ ಪದೇ ನಡೆಯುತ್ತಿದ್ದರೂ ಸರ್ಕಾರದ ನಿರ್ಲಕ್ಷ್ಯ

    ಉಡುಪಿ: ಕರ್ನಾಟಕ ಮಹಾರಾಷ್ಟ್ರದ ಗಡಿ ಸಮಸ್ಯೆ ಬಗೆಹರಿಯುವ ಲಕ್ಷಣವೇ ಕಾಣುತ್ತಿಲ್ಲ. ಇತ್ತೀಚೆಗೆ ಸಮುದ್ರದಲ್ಲಿ ಕೂಡಾ ಕರ್ನಾಟಕ ಮೀನುಗಾರರ ಜೊತೆ ಮಹಾರಾಷ್ಟ್ರ ಕಚ್ಚಾಟ ಶುರುಮಾಡಿದೆ. ಉಡುಪಿಯಿಂದ ಕಸುಬಿಗೆ ತೆರಳಿದ ಮೀನುಗಾರರಿಗೆ ಮಹಾರಾಷ್ಟ್ರದ ಕಡಲ್ಗಳ್ಳರು ಮಾರಣಾಂತಿಕ ಹಲ್ಲೆ ಮಾಡಿ, ಮೀನು ದೋಚಿ ಅಟ್ಟಹಾಸ ಮೆರೆದಿದ್ದಾರೆ.

    ಮಲ್ಪೆಯಿಂದ ತೆರಳಿ ಮಹಾರಾಷ್ಟ್ರದ ಮಾಲ್ವಾನ್ ಕಡಲ ತೀರದಲ್ಲಿ 7 ಮೀನುಗಾರರು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಉಡುಪಿಯ ಮಲ್ಪೆಯ ಮೀನುಗಾರರ ಮೇಲೆ ಮಹಾರಾಷ್ಟ್ರದ ಕಡಲ್ಗಳ್ಳರು ಹಲ್ಲೆ ಮಾಡಿದ್ದಾರೆ. ಬೋಟ್ ಮೂಲಕ 200 ಮೀನುಗಾರರು ಮಲ್ಪೆಯ ಆಳಸಮುದ್ರದ ಬೋಟನ್ನು ಸುತ್ತುವರಿದು 7 ಮೀನುಗಾರರಿಗೆ ಮನಬಂದಂತೆ ಥಳಿಸಿದ್ದಾರೆ.

    ಕರಾವಳಿ ಮೀನುಗಾರರು ಮೀನುಗಾರಿಕೆಗೆ ಗೋವಾ, ಮಹಾರಾಷ್ಟ್ರದ ಕಡೆ ತೆರಳುತ್ತಾರೆ. ಹೀಗೆ, ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ 4 ಆಳಸಮುದ್ರ ಬೋಟನ್ನು ಅಡ್ಡಗಟ್ಟಿದ ಕಡಲ್ಗಳ್ಳರು ಲೂಟಿ ಮಾಡಿದ್ದಾರೆ. ಸುಮಾರು 8 ಲಕ್ಷ ರೂಪಾಯಿಯ ಮೀನು, ಟಬ್, ಬಲೆಗಳು, ಜಿಪಿಎಸ್ ಮತ್ತಿತರ ಮಷೀನ್‍ಗಳನ್ನು ದೋಚಿದ್ದಾರೆ.

    ರಾಜ್ಯದ ಭೂಭಾಗದಿಂದ 12 ನಾಟಿಕಲ್ ದೂರದಿಂದ ಹೊರಕ್ಕೆ ಯಾವ ರಾಜ್ಯದವರೂ ಮೀನುಗಾರಿಕೆ ಮಾಡಬಹುದು. ಅದು ರಾಷ್ಟ್ರೀಯ ವ್ಯಾಪ್ತಿಗೆ ಬರುವುದರಿಂದ ಆಕ್ಷೇಪಿಸುವಂತಿಲ್ಲ. ಆದರೆ ಮಹಾರಾಷ್ಟ್ರ ಗಡಿಯಲ್ಲಿ ಎಲ್ಲಾ ಕಾನೂನನ್ನು ಗಾಳಿಗೆ ತೂರಿ ಮಲ್ಪೆಯ ಮೀನುಗಾರರ ಮೇಲೆ ಹಲ್ಲೆ ಮಾಡಲಾಗಿದೆ.

    ರಾಜ್ಯದ ಮೀನುಗಾರರ ಮೇಲೆ ಕಳೆದ ಹಲವಾರು ತಿಂಗಳಿಂದ ಮಹಾರಾಷ್ಟ್ರ ಮೀನುಗಾರರು ದೌರ್ಜನ್ಯ ನಡೆಸುತ್ತಿದ್ದರೂ ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಕರ್ನಾಟಕ ಗಡಿ ಪ್ರದೇಶಕ್ಕೆ ಗೋವಾ, ಮಹಾರಾಷ್ಟ್ರ, ಗುಜರಾತ್ ಮೀನುಗಾರರು ಬಂದು ಕಸುಬು ಮಾಡುತ್ತಾರೆ. ಆದರೆ ಸೌಹಾರ್ದಯುತವಾಗಿ ನಡೆಯುವ ಮೀನುಗಾರಿಕೆ ಮಹಾರಾಷ್ಟ್ರ ಗಡಿಯಲ್ಲಿ ತಿಕ್ಕಾಟಕ್ಕೆ ಕಾರಣವಾಗುತ್ತಿದೆ. ಹೀಗಾಗಿ ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರ ಈ ಬಗ್ಗೆ ಗಮನಹರಿಸಿ ಕ್ರಮ ತೆಗೆದುಕೊಳ್ಳಬೇಕಿದೆ.

  • ಮಲ್ಪೆ ಕಡಲ ತೀರದಲ್ಲಿ ಮೋದಿ ಸ್ಯಾಂಡ್ ಆರ್ಟ್- ಯುವ ಕಲಾವಿದರಿಂದ ಪ್ರಧಾನಿಗೆ ಶುಭಾಶಯ

    ಮಲ್ಪೆ ಕಡಲ ತೀರದಲ್ಲಿ ಮೋದಿ ಸ್ಯಾಂಡ್ ಆರ್ಟ್- ಯುವ ಕಲಾವಿದರಿಂದ ಪ್ರಧಾನಿಗೆ ಶುಭಾಶಯ

    ಉಡುಪಿ: ಎರಡನೇ ಬಾರಿಗೆ ನರೇಂದ್ರ ಮೋದಿ ಅವರು ದೇಶದ ಆಡಳಿತ ಚುಕ್ಕಾಣಿ ಹಿಡಿದಿದ್ದು, ಈ ನಡುವೆ ಉಡುಪಿ ಜಿಲ್ಲೆಯ ಕುಂದಾಪುರದ ಮರಳು ಶಿಲ್ಪ ಕಲಾವಿದ ಹರೀಶ್ ಸಾಗಾ ಅವರ ತಂಡ ಪ್ರಧಾನಿ ಮೋದಿಗೆ ವಿಭಿನ್ನವಾಗಿ ವಿಶ್ ಮಾಡಿದ್ದಾರೆ.

    ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಸ್ಲೋಗನ್ ಅಡಿಯಲ್ಲಿ ರಚಿಸಿದ ಮರಳು ಶಿಲ್ಪ ಮಲ್ಪೆ ಕಡಲ ತೀರದ ಪ್ರವಾಸಿಗರನ್ನು ಆಕರ್ಷಿಸಿತು. ಅನೇಕ ಪ್ರವಾಸಿಗರು ಮೋದಿ ಅಭಿಮಾನಿಗಳು ಮರಳು ಶಿಲ್ಪದ ಎದುರು ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡರು. ಮರಳ ಶಿಲ್ಪದಲ್ಲಿ ಸಂಸದ್ ಭವನ, ಪ್ರಧಾನಿ ಮೋದಿಯನ್ನು ರಚಿಸಲಾಗಿದ್ದು ಬಹಳ ಆಕರ್ಷಕವಾಗಿದೆ.

    ಸಂಜೆ ಸೂರ್ಯಾಸ್ತ ನೋಡಲು ಬಂದ ಪ್ರವಾಸಿಗರಿಗೆ ಮರಳುಶಿಲ್ಪ ನೋಡುವ ಅವಕಾಶ ಸಿಕ್ಕಿದೆ. ಕಲಾವಿದ ಹರೀಶ್ ಸಾಗಾ ಮಾತನಾಡಿ, ನರೇಂದ್ರ ಮೋದಿ ಬಹುಮತದಿಂದ ಗೆದ್ದಿದ್ದಾರೆ. ಮೊದಲ ಭಾಷಣದಲ್ಲಿ ಎಲ್ಲರ ಜೊತೆಯಾಗಿದ್ದು, ಎಲ್ಲರ ಅಭಿವೃದ್ಧಿ ಮಾಡುತ್ತಾ, ಎಲ್ಲರ ವಿಶ್ವಾಸ ಗಳಿಸುವ ಘೋಷಣೆ ಮಾಡಿದ್ದಾರೆ. ಇದು ಉತ್ತಮ ಬೆಳವಣಿಗೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಮುಂಚೂಣಿಗೆ ಬರಲಿ. ಪ್ರಬಲ ದೇಶವಾಗಿ ಬೆಳೆಯಲಿ ಎಂಬ ಉದ್ದೇಶದಿಂದ ಈ ಆರ್ಟ್ ಮಾಡಿರುವುದಾಗಿ ಹೇಳಿದರು.

  • ಸಂಸದರಾದ ನಳಿನ್, ಶೋಭಾ ಕರಂದ್ಲಾಜೆ ಏನ್ ಮಾಡ್ತಿದ್ದಾರೆ- ಸಿದ್ದರಾಮಯ್ಯ ಪ್ರಶ್ನೆ

    ಸಂಸದರಾದ ನಳಿನ್, ಶೋಭಾ ಕರಂದ್ಲಾಜೆ ಏನ್ ಮಾಡ್ತಿದ್ದಾರೆ- ಸಿದ್ದರಾಮಯ್ಯ ಪ್ರಶ್ನೆ

    ಬೆಂಗಳೂರು: ಉಡುಪಿಯ ಮಲ್ಪೆಯಿಂದ ನಾಪತ್ತೆಯಾದ ಮೀನುಗಾರರ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಸದರಾದ ನಳಿನ್ ಕುಮಾರ್ ಕಟೀಲ್ ಹಾಗೂ ಶೋಭಾ ಕರಂದ್ಲಾಜೆಯವರನ್ನು ಪ್ರಶ್ನಿಸಿದ್ದಾರೆ.

    ಮಲ್ಪೆಯ ಮೀನುಗಾರರು ನಾಪತ್ತೆಯಾಗಿ ಎರಡೂವರೆ ತಿಂಗಳುಗಳೇ ಕಳೆಯಿತು. ಅವರನ್ನು ಪತ್ತೆ ಹಚ್ಚುವ ಕೆಲಸ ಯಾಕೆ ಮಾಡಿಲ್ಲ ಎಂದು ಸಂಸದರ ವಿರುದ್ಧ ಸಿದ್ದರಾಮಯ್ಯ ಟ್ವೀಟ್ ಮಾಡುವ ಮೂಲಕ ಗರಂ ಆಗಿದ್ದಾರೆ.

    ಟ್ವೀಟ್ ನಲ್ಲೇನಿದೆ..?
    ಮಲ್ಪೆಯ ಮೀನುಗಾರರು ಸಮುದ್ರದಲ್ಲಿ ನಾಪತ್ತೆಯಾಗಿ ಎರಡೂವರೆ ತಿಂಗಳ ಮೇಲಾಯಿತು. ಸಂಸದರಾದ ನಳಿನ್‍ಕುಮಾರ್ ಕಟೀಲ್ ಮತ್ತು ಶೋಭಾ ಕರಂದ್ಲಾಜೆ ಏನು ಮಾಡ್ತಿದ್ದಾರೆ? ಅವರನ್ನು ಪತ್ತೆ ಹಚ್ಚಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರಾ? ಇಂತಹ ಪ್ರತಿನಿಧಿಗಳು ಬೇಕಾ? ಜನ ಯೋಚನೆ ಮಾಡಬೇಕು ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

    ಡಿಸೆಂಬರ್ 13ರ ರಾತ್ರಿ ಉಡುಪಿಯ ಮಲ್ಪೆಯಿಂದ `ಸುವರ್ಣ ತ್ರಿಭುಜ’ ಎಂಬ ಹೆಸರಿನ ಮೀನುಗಾರಿಕಾ ಬೋಟ್ ಗೋವಾ ಮಹಾರಾಷ್ಟ್ರ ಗಡಿ ಕಡೆ ಕಸುಬು ಮಾಡಲು ತೆರಳಿತ್ತು. ಈ ದೋಣಿಯಲ್ಲಿ 7 ಮಂದಿ ಮೀನುಗಾರರು ಇದ್ದರು. ಡಿಸೆಂಬರ್ 15ರ ಮಧ್ಯರಾತ್ರಿ 1 ಗಂಟೆ ನಂತರ ಬೋಟ್ ನ ಜಿಪಿಎಸ್ ಮತ್ತು ಫೋನ್ ಸಂಪರ್ಕ ಕಡಿತವಾಗಿದೆ. ಸಮುದ್ರದಲ್ಲಿ ಎಲ್ಲಿ ಹುಡುಕಾಟ ನಡೆಸಿದ್ರೂ ಬೋಟ್, ಮೀನುಗಾರರು ಪತ್ತೆಯಾಗಿಲ್ಲ. ಕೋಸ್ಟ್ ಗಾರ್ಡ್ ನೌಕಾದಳ, ಏರ್ ಫೋರ್ಸ್ ಅಧಿಕಾರಿಗಳು ಹುಡುಕಾಟ ಮಾಡಿದ್ರೂ ಉಪಯೋಗವಾಗಿಲ್ಲ. ಸಮುದ್ರದ ಗಡಿಯಲ್ಲಿ ಮೀನುಗಾರರು ಕಣ್ಮರೆಯಾಗಿರುವ ವಿಚಾರ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನಕ್ಕೆ ಬಂದರೂ ಈವರೆಗೆ ಯಾವುದೇ ಫಲಿತಾಂಶ ಸಿಕ್ಕಿಲ್ಲ.

    ಇತ್ತೀಚೆಗೆ ಉಡುಪಿಯಲ್ಲಿ ನಡೆದ ನಮೋ ಭಾರತ್ ಸಂಘಟನೆಯಿಂದ ಪಾಂಚಜನ್ಯ ಸಮಾವೇಶದ ಭಾಷಣದ ವೇಳೆ ಬಿಜೆಪಿ ಸಂಸದೆ, ರಾಷ್ಟ್ರೀಯ ವಕ್ತಾರೆ ಮೀನಾಕ್ಷಿ ಲೇಖಿಯವರು, ನಾಪತ್ತೆಯಾಗಿರುವ ಮೀನುಗಾರರು ದುಬೈನಲ್ಲಿ ಪತ್ತೆಯಾಗಿರುವ ಮಾಹಿತಿ ಲಭಿಸಿರುವುದಾಗಿ ಹೇಳಿದ್ದರು. ಅಲ್ಲದೆ ದುಬೈನಲ್ಲಿ ಪತ್ತೆಯಾದವರು ಮಲ್ಪೆ ಮೀನುಗಾರರೇ ಎಂಬುದು ಖಚಿತವಾದರೆ ಸರ್ಕಾರ ಅವರನ್ನು ವಾಪಸ್ ಕರೆತರಲು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಲ್ಪೆ ಬಂದರಿನಲ್ಲಿ ನಾಪತ್ತೆಯಾಗಿದ್ದ ಮೀನುಗಾರರು ದುಬೈನಲ್ಲಿ ಪತ್ತೆ?

    ಮಲ್ಪೆ ಬಂದರಿನಲ್ಲಿ ನಾಪತ್ತೆಯಾಗಿದ್ದ ಮೀನುಗಾರರು ದುಬೈನಲ್ಲಿ ಪತ್ತೆ?

    ಉಡುಪಿ: ಮಲ್ಪೆಯ ಕಡಲ ಬಂದರಿನಿಂದ ನಾಪತ್ತೆಯಾಗಿದ್ದ 7 ಮೀನುಗಾರರು ದುಬೈನಲ್ಲಿ ಪತ್ತೆಯಾಗಿರುವ ಮಾಹಿತಿ ಲಭಿಸಿದೆ ಎಂದು ಬಿಜೆಪಿ ಸಂಸದೆ, ರಾಷ್ಟ್ರೀಯ ವಕ್ತಾರೆ ಮೀನಾಕ್ಷಿ ಲೇಖಿ ತಿಳಿಸಿದ್ದಾರೆ.

    ನಮೋ ಭಾರತ್ ಸಂಘಟನೆಯಿಂದ ಪಾಂಚಜನ್ಯ ಸಮಾವೇಶ ವೇಳೆ ಭಾಷಣ ಮಾಡಿದ ಸಂದರ್ಭದಲ್ಲಿ ಹೇಳಿಕೆ ನೀಡಿದ್ದು, ದುಬೈನಲ್ಲಿ ಕೆಲ ಮೀನುಗಾರರ ಪತ್ತೆಯಾಗಿರುವ ಬಗ್ಗೆ ಕೆಲ ಮಾಧ್ಯಮಗಳು ವರದಿ ಮಾಡಿದೆ. ಈ ವರದಿಯಗಳ ಅನ್ವಯ ಪತ್ತೆಯಾದ ಮೀನುಗಾರರು ಮಲ್ಪೆಯ 7 ಮೀನುಗಾರರ ಎಂಬುವುದರ ಬಗ್ಗೆ ಮಾಹಿತಿ ಪಡೆಯಲಾಗುವುದು ಎಂದರು.

    ದುಬೈನಲ್ಲಿ ಪತ್ತೆಯಾದವರು ಮಲ್ಪೆ ಮೀನುಗಾರರೆ ಎಂಬುವುದು ಖಚಿತವಾದರೆ ಸರ್ಕಾರ ಅವರನ್ನು ವಾಪಸ್ ಕರೆತರಲು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

    ಡಿಸೆಂಬರ್ 15 ರಂದು ಮಲ್ಪೆಯಿಂದ ಮಹಾರಾಷ್ಟ್ರದ ರತ್ನಗಿರಿಗೆ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಎನ್ನುವ ಬೋಟ್ ಸಮೇತ ಅದರಲ್ಲಿದ್ದ ರಾಜ್ಯದ 7 ಮೀನುಗಾರರು ನಾಪತ್ತೆಯಾಗಿದ್ದರು. ಈವರೆಗೂ ಮೀನುಗಾರರ ಅಥವಾ ಬೋಟಿನ ಕುರಿತು ಯಾವುದೇ ಮಾಹಿತಿ ದೊರೆತಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮಲ್ಪೆಯಿಂದ ಹೊರಟು ನಾಪತ್ತೆಯಾಗಿದ್ದ ಬೋಟ್ ಮಹಾರಾಷ್ಟ್ರದಲ್ಲಿ ಪತ್ತೆ?

    ಮಲ್ಪೆಯಿಂದ ಹೊರಟು ನಾಪತ್ತೆಯಾಗಿದ್ದ ಬೋಟ್ ಮಹಾರಾಷ್ಟ್ರದಲ್ಲಿ ಪತ್ತೆ?

    ಕಾರವಾರ: ಮಹಾರಾಷ್ಟ್ರ ರಾಜ್ಯದ ಕಡಲ ತೀರದಲ್ಲಿ ಮೀನುಗಾರಿಕಾ ದೋಣಿಯೊಂದು ಪತ್ತೆಯಾಗಿದೆ.

    ಕಡಲ ತೀರದಲ್ಲಿ ಮುಳುಗಿದ್ದ ದೋಣಿಯ ಬಿಡಿ ಭಾಗವು ಮಹಾರಾಷ್ಟ್ರದ ರತ್ನಗಿರಿ ಬಳಿ ಪತ್ತೆಯಾಗಿದ್ದು, ನಾಪತ್ತೆಯಾದ ಮಲ್ಪೆ ಮೂಲದ ಬೋಟಿನ ಅವಶೇಷ ಎನ್ನುವ ಶಂಕೆ ವ್ಯಕ್ತವಾಗಿದೆ.

    ರತ್ನಗಿರಿ ಬಳಿ ಮೀನುಗಾರಿಕೆಗೆ ತೆರಳಿದ್ದ ಅಂಕೋಲಾ ತಾಲೂಕಿನ ಬೇಲೆಕೇರಿ ಮೂಲದ ಮೀನುಗಾರರ ಕಣ್ಣಿಗೆ ಈ ಅವಶೇಷಗಳು ಕಾಣಿಸಿದೆ. ಹೀಗಾಗಿ ಅವರು ಈ ಅವಶೇಷ ಮಲ್ಪೆ ಮೂಲದ ಬೋಟಿನದ್ದಾಗಿರಬಹುದೆಂದು ಶಂಕಿಸಿದ್ದಾರೆ. ಅಲ್ಲದೆ ಈ ಬಗ್ಗೆ ಮೀನುಗಾರರು ಕರಾವಳಿ ಕಾವಲು ಪಡೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಏಳು ಮೀನುಗಾರರ ನಾಪತ್ತೆ- 1 ಹಡಗಿನ ಮೆಸೇಜ್ ಬಗ್ಗೆ ತನಿಖೆಗಿಳಿದ ಪೊಲೀಸರು

    ಡಿಸೆಂಬರ್ 15 ರಂದು ಮಲ್ಪೆಯಿಂದ ಮಹರಾಷ್ಟ್ರದ ರತ್ನಗಿರಿಗೆ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಎನ್ನುವ ಬೋಟ್ ಸಮೇತ ಅದರಲ್ಲಿದ್ದ ರಾಜ್ಯದ 7 ಮೀನುಗಾರರು ನಾಪತ್ತೆಯಾಗಿದ್ದರು. ಈವರೆಗೂ ಮೀನುಗಾರರ ಅಥವಾ ಬೋಟಿನ ಕುರಿತು ಯಾವುದೇ ಮಾಹಿತಿ ದೊರೆತಿರಲಿಲ್ಲ. ಇದನ್ನೂ ಓದಿ: ಮೀನುಗಾರರ ನಾಪತ್ತೆ ಪ್ರಕರಣ – ಪ್ರಧಾನಿಗೆ ಪೇಜಾವರ ಶ್ರೀ ಪತ್ರ, ಇತ್ತ 3 ರಾಜ್ಯಕ್ಕೆ 6 ಪೊಲೀಸ್ ಟೀಂ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಡಾನ್ ರವಿ ಪೂಜಾರಿ ಬಂಧನದಿಂದ ನಿಟ್ಟಿಸಿರು ಬಿಟ್ಟ ಮಲ್ಪೆಯ ಕುಟುಂಬ

    ಡಾನ್ ರವಿ ಪೂಜಾರಿ ಬಂಧನದಿಂದ ನಿಟ್ಟಿಸಿರು ಬಿಟ್ಟ ಮಲ್ಪೆಯ ಕುಟುಂಬ

    -ದೀಪಕ್ ಜೈನ್
    ಉಡುಪಿ: ಅಂಡರ್ ವರ್ಲ್ಡ್ ಡಾನ್ ರವಿ ಪೂಜಾರಿಯನ್ನು ಆಫ್ರಿಕಾದ ಸೆನೆಗಲ್ ನಲ್ಲಿ ಬಂಧಿಸಲಾಗಿದೆ. ಈ ಮೂಲಕ ಕಳೆದ 15 ವರ್ಷಗಳಿಂದ ರಾಜಕೀಯ- ಸಿನೆಮಾ- ಉದ್ಯಮಿಗಳ ನೆಮ್ಮದಿ ಕೆಡಿಸಿದ್ದ ಪೂಜಾರಿಯ ಉಪಟಳಕ್ಕೆ ಬ್ರೇಕ್ ಬಿದ್ದಿದೆ. ರವಿ ಪೂಜಾರಿ ಬಂಧನ ಯಾರಿಗೆ ಖುಷಿ ಯಾರಿಗೆ ಬೇಸರವಾಗಿದೆಯೋ ಗೊತ್ತಿಲ್ಲ ಮಲ್ಪೆಯ ಈ ಕುಟುಂಬ ಮಾತ್ರ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.

    ಆಫ್ರಿಕಾ.. ಆಸ್ಟ್ರೇಲಿಯಾ.. ದುಬೈನಲ್ಲಿ ಕುಳಿತು ಭಾರತದ ಮೂಲೆ ಮೂಲೆಯ ಶ್ರೀಮಂತರನ್ನು ಕಾಡುತ್ತಿದ್ದ ರವಿ ಪೂಜಾರಿ ಅಂದರ್ ಆಗಿದ್ದಾನೆ. ಆಫ್ರಿಕಾದ ಸೆನೆಗಲ್ ನಲ್ಲಿ ರವಿ ಪೂಜಾರಿಯ ಅರೆಸ್ಟ್ ಆಗಿದೆ. ಶೂಟೌಟ್, ಕೊಲೆ ಬೆದರಿಕೆ, ಹಫ್ತಾ ವಸೂಲಿಯಲ್ಲಿ ನೂರು ಪ್ರಕರಣಗಳು ರವಿ ಪೂಜಾರಿ ಮೇಲಿದೆ. ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿರುವ ರವಿ ಪೂಜಾರಿ ಕರಾವಳಿ ಜಿಲ್ಲೆ ಉಡುಪಿಯ ಮಲ್ಪೆಯವನು.

    ಮಲ್ಪೆಯ ವಡಭಾಂಡೇಶ್ವರ ವಾರ್ಡ್ ನಲ್ಲಿರುವ ನೇರ್ಗಿಯ ನಿವಾಸಿ. ತಂದೆ ಕಟ್ಟಿಸಿದ ಮನೆ ಈಗಲೂ ಇದೆ. 11 ವರ್ಷದ ಹಿಂದೆ ರವಿ ಪೂಜಾರಿ ತಂದೆ ಸೂರ್ಯ ಪೂಜಾರಿ ತಾವಿದ್ದ ಮನೆಯನ್ನು ಮಾರಾಟ ಮಾಡಿದ್ದಾರೆ. ವಾಸುದೇವ ಎಂಬ ಮೀನುಗಾರಿಕಾ ವೃತ್ತಿ ಮಾಡುವವರಿಗೆ 25 ಲಕ್ಷ ರೂಪಾಯಿಗೆ ಮಾರಾಟ ಮಾಡಿ ಮುಂಬೈ ಸೇರಿಕೊಂಡಿದ್ದರು. ಅದಾಗಿ ಮನೆ ಖರೀದಿಸಿದ ಮಾಲಕರಿಗೆ ನಿರಂತರ ವಿಚಾರಣೆ ಆರಂಭವಾಗಿದೆ. ರವಿ ಪೂಜಾರಿ ಕುಟುಂಬಕ್ಕೂ ನಿಮಗೂ ಹೇಗೆ ಲಿಂಕ್ , ವ್ಯವಹಾರವಿದೆಯೇ..? ಈಗಲೂ ಸಂಪರ್ಕವಿದೆಯೇ..? ಹೀಗೆ ಕಳೆದ 10 ವರ್ಷಗಳಿಂದ ಮುಂಬೈ- ಮಂಗಳೂರು ಸಿಸಿಬಿ ನಿರಂತರ ವಿಚಾರಣೆ ಎಂಬ ಹಿಂಸೆ ಕೊಟ್ಟಿದ್ದಾರೆ. ಇದೀಗ ರವಿ ಪೂಜಾರಿ ಬಂಧನವಾಗಿದೆ ಎಂಬ ಸುದ್ದಿಕೇಳಿ ವಾಸುದೇವ ಸುಗುಣ ದಂಪತಿ ನೆಮ್ಮದಿಯ ನಗು ಬೀರಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮನೆ ಮಾಲಕಿ ಸುಗುಣ, ಮನೆ ಖರೀದಿಸುವಾಗ ರವಿ ಪೂಜಾರಿ ಮನೆ ಅಂತ ನಮಗೆ ಗೊತ್ತಿರಲಿಲ್ಲ. 10 ವರ್ಷದಿಂದ ನಿರಂತರ ನಮಗೆ ಬರೀ ಟೆನ್ಶನ್. ಪೊಲೀಸರು ಆಗಾಗ ಬಂದು ರವಿಪೂಜಾರಿ ಬಗ್ಗೆ ವಿಚಾರಣೆ ಮಾಡುತ್ತಿದ್ದರು. ಮುಂಬೈ ಪೊಲೀಸರಂತು ಆಗಾಗ ಬಂದು ಪ್ರಶ್ನೆ ಮಾಡುತ್ತಿದ್ದರು. ಶೂ ಹಾಕಿಕೊಂಡು ಮನೆಯೊಳಗೆ ಬರ್ತಾಯಿದ್ರು. ನಮ್ಮ ಮನೆಗೆ ನಾವು ಚಪ್ಪಲಿ ಹಾಕಲ್ಲ. ಇವರ್ಯಾರು ಶೂ ಹಾಕಿಕೊಂಡು ಬರಲು ಅಂತ ಕೋಪ ಬರ್ತಾಯಿತ್ತು. ಕನ್ನಡ, ತುಳು ಬಾರದ ಪೊಲೀಸರು ನಮ್ಮತ್ರ ಎಂತ ಪ್ರಶ್ನೆ ಕೇಳೂದು ಅರ್ಥವಾಗುತ್ತಾ ಇರಲಿಲ್ಲ. ಈಗ ಆ ವ್ಯಕ್ತಿಯ ಬಂಧನವಾಗಿದೆ ಅಂತ ನೆಮ್ಮದಿಯಾಗಿದೆ. ಇನ್ನಾದ್ರೂ ಚಿಂತೆಯಿಲ್ಲದೆ ಭಯವಿಲ್ಲದೆ ಜೀವನ ನಡೆಸಬಹುದು ಎಂದು ಹೇಳಿದರು.

    ಮನೆ ಖರೀದಿಸಿದ ವಾಸುದೇವ ಮಾತನಾಡಿ, ನಮಗೆ ಭಯ ಇಲ್ಲ. 25 ಲಕ್ಷ ಕೊಟ್ಟು 20 ಸೆಂಟ್ಸ್ ಜಾಗದಲ್ಲಿ ಮನೆ ಸಮೇತ ಖರೀದಿ ಮಾಡಿದ್ದೇವೆ. 10 ವರ್ಷದ ಹಿಂದೆ ಅಗ್ರಿಮೆಂಟ್ ಆಗಿದೆ. ನಾವು ರವಿಪೂಜಾರಿಯನ್ನು ನೋಡ್ಲೇ ಇಲ್ಲ. ನಮಗೂ ಅವರಿಗೂ ಯಾವುದೇ ಲಿಂಕ್ ಇಲ್ಲ. ನಾವು ಸಮುದ್ರದಲ್ಲಿ ಕಸುಬು ಮಾಡುವವರು ನಮಗ್ಯಾಕೆ ಭಯ ಅಂತ ಹೇಳಿದರು.

    ರವಿ ಪೂಜಾರಿ ಉಡುಪಿಯ ಮಲ್ಪೆ ಮೂಲದವರಾದ್ರೂ ಪೂಜಾರಿ ಬಗ್ಗೆ ಸ್ಥಳೀಯರಿಗೆ ಗೊತ್ತಿರೋದು ಕಡಿಮೆ. ಐದಾರು ತಿಂಗಳ ಹಿಂದೆ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಧಮ್ಕಿ ಹಾಕಿ ಹಫ್ತಾಕ್ಕೆ ಬೇಡಿಕೆಯಿಟ್ಟಿದ್ದ. ದೊಡ್ಡ ಸುದ್ದಿಯಾಗಿ ಹಾಲಾಡಿ ಒಬ್ಬ ಸಜ್ಜನ ಅಂತ ತೀರ್ಮಾನಕ್ಕೆ ಬಂದು ಕ್ಷಮೆ ಕೇಳಿದ್ದ. ರವಿ ಪೂಜಾರಿ ಮೇಲೆ ಉಡುಪಿ ಜಿಲ್ಲೆಯಲ್ಲಿ 10 ಪ್ರಕರಣಗಳು ದಾಖಲಾಗಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.

    ರವಿ ಪೂಜಾರಿ ಬಂಧನಕ್ಕೂ ಮೊದಲು ಆತನ ಸಹಚರರನ್ನು ಬಂಧಿಸಿ ತೀವ್ರವಾಗಿ ವಿಚಾರಣೆ ನಡೆಸಿದ್ದರು. ಕೆಲವೇ ದಿನಗಳಲ್ಲಿ ಬಂಧನವಾಗಿದೆ. ರವಿ ಪೂಜಾರಿ ಹೆಸರು ಹೇಳಿಕೊಂಡು ಸಾಕಷ್ಟು ಯುವಕರ ಗುಂಪುಗಳು ಕರಾವಳಿಯಲ್ಲಿ ಕಾರ್ಯಾಚರಿಸುತ್ತಿತ್ತು. ರವಿಪೂಜಾರಿ ಬಂಧನದ ಮೂಲಕ ಅದಕ್ಕೆಲ್ಲಾ ಫುಲ್ ಸ್ಟಾಪ್ ಬೀಳಲಿದೆ ಅಂತ ಪೊಲೀಸರು ಹೇಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಮಲ್ಪೆ ಮೀನುಗಾರರು ಕಣ್ಮರೆ – ಆಡಿಯೋ ವೈರಲ್

    ಮಲ್ಪೆ ಮೀನುಗಾರರು ಕಣ್ಮರೆ – ಆಡಿಯೋ ವೈರಲ್

    ಉಡುಪಿ: ಮಲ್ಪೆ ಬಂದರಿನಿಂದ ಹೋರಾಟ 7 ಮೀನುಗಾರರು ಕಣ್ಮರೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆಡಿಯೋ ಒಂದು ವೈರಲಾಗಿದೆ.

    ಗೋವಾ ರಾಜ್ಯದ ಕೊಂಕಣಿ ಮಾತನಾಡುವ ಮೀನುಗಾರನ ಧ್ವನಿ ಎನ್ನಲಾಗಿದ್ದು, ಮೀನುಗಾರನ ಆಡಿಯೋದಲ್ಲಿ ಮಹತ್ವದ ಮಾಹಿತಿಯಿದೆ. ನಾಪತ್ತೆಯಾದ 8ನೇ ದಿನಕ್ಕೆ ಬೋಟು ನಾನು ನೋಡಿದ್ದೇನೆ. ಮಹಾರಾಷ್ಟ್ರ ಬಂದರಿನಿಂದ ಕೆಲವೇ ದೂರದಲ್ಲಿ ಕಣ್ಣಿಗೆ ಬಿತ್ತು. ಸಮುದ್ರದಲ್ಲಿ ನಿಂತಿದ್ದ ಬೋಟಿನ ಮೇಲೆ ನಾನು ಟಾರ್ಚ್ ಲೈಟ್ ಹಾಯಿಸಿದ್ದೆ. ಮೀನುಗಾರರು ಕಳ್ಳರಂತೆ ತಲೆತಗ್ಗಿಸಿ ಕುಳಿತಿದ್ದರು ಎಂದು ಮಾತನಾಡಿರುವುದು ದಾಖಲಾಗಿದೆ.

    ಬೋಟಿನಲ್ಲಿದ್ದ ಒಬ್ಬ ಯುವಕನನ್ನು ಸರಿಯಾಗಿ ನೋಡಿದ್ದು, ಬೋಟ್ ಹೆಸರು ಸುವರ್ಣ ತ್ರಿಭುಜ ಅಂತ ಇತ್ತು. ಬೋಟಿನಲ್ಲಿ ಯುವಕ ಅಡಗಿ ಕೂತಿದ್ದ. ಬೋಟ್ ಹೊರ ಭಾಗದಲ್ಲಿ ಕೆಂಪು ಬಣ್ಣದ ಹನುಮಂತನ ಬಾವುಟ ನೋಡಿದ್ದೇನೆ ಹೇಳಿದ್ದಾನೆ. ವ್ಯಕ್ತಿ ಗೋವಾ ರಾಜ್ಯದ ಕೊಂಕಣಿಯಲ್ಲಿ ಮಾತನಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವಾಯ್ಸ್ ನೋಟ್ ಹರಿದಾಡುತ್ತಿದೆ. ಆದರೆ ಪ್ರಕರಣ ತನಿಖೆ ಮಾಡುತ್ತಿರುವ ಪೊಲೀಸರು ಈ ಬಗ್ಗೆ ಯಾವುದೇ ದೃಢೀಕರಣ ನೀಡಿಲ್ಲ. ಈ ಆಡಿಯೋದ ಸತ್ಯಾಸತ್ಯತೆ ಬಗ್ಗೆ ತನಿಖೆ ಮಾಡುತ್ತಿದ್ದಾರೆ.

    ಮಲ್ಪೆ ಮೀನುಗಾರಿಕಾ ಬಂದರಿನಿಂದ ಗೋವಾ, ಮಹಾರಾಷ್ಟ್ರ ಗಡಿಭಾಗಕ್ಕೆ ತೆರಳಿದ್ದ ಏಳು ಮೀನುಗಾರರು ನಾಪತ್ತೆಯಾಗಿದ ಬಳಿಕ ಮೀನುಗಾರ ಮಹಿಳೆಯರು ಬಂದರಿನಲ್ಲಿ ಮೀನುಗಾರಿಕಾ ಕೆಲಸಕ್ಕೆ ತೆರಳಿಲ್ಲ. ಆತಂಕದಲ್ಲಿರುವ ಮೊಗವೀರ ಮಹಿಳೆಯರು ಸರ್ಕಾರದ ವಿಳಂಬ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೀನುಗಾರರ ಬಗ್ಗೆ ಜನಪ್ರತಿನಿಧಿಗಳಿಗೆ ಕಾಳಜಿಯಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದು, ಅಧಿಕಾರಿಗಳಿಗೆ ಬಂದರಿಗೆ ಇಳಿಯಲು ಬಿಡುವುದಿಲ್ಲ ಎಂದು ತಾಕೀತು ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv