Tag: ಮಲ್ಪೆ ಬೀಚ್

  • ಗಾಂಜಾ ನಶೆಯಲ್ಲಿದ್ದ ಗುಂಪಿನಿಂದ ದಂಪತಿ ಮೇಲೆ ಹಲ್ಲೆ

    ಗಾಂಜಾ ನಶೆಯಲ್ಲಿದ್ದ ಗುಂಪಿನಿಂದ ದಂಪತಿ ಮೇಲೆ ಹಲ್ಲೆ

    ಉಡುಪಿ: ಗಾಂಜಾ ನಶೆಯಲ್ಲಿದ್ದ ಗುಂಪೊಂದು ದಂಪತಿ ಮೇಲೆ ಹಲ್ಲೆ ಮಾಡಿರುವ ಘಟನೆ ಉಡುಪಿಯ ಮಲ್ಪೆ ಬೀಚ್ (Malpe Beach) ಬಳಿ ನಡೆದಿದೆ.

    ಬೀಚ್ ಬಳಿ ಬೈಕ್ ಪಾರ್ಕಿಂಗ್ ವಿಚಾರದಲ್ಲಿ ವಾಗ್ವಾದ ಶುರುವಾಗಿತ್ತು. ಕ್ಷುಲ್ಲಕ ಕಾರಣಕ್ಕೆ ದಂಪತಿಗಳ ಮೇಲೆ ಹಲ್ಲೆ ನಡೆದಿದೆ. ಶೇಖರ್ ತಿಂಗಳಾಯ ಮತ್ತು ಗೀತಾ ಹಲ್ಲೆಗೊಳಗಾದ ದಂಪತಿ.

    ಸಾಗರ್, ಚರಣ್, ಯಶವಂತ್, ಕಿಶೋರ್, ರಾಜ ಮೇಲೆ ಹಲ್ಲೆ ಆರೋಪ ಹೊರಿಸಲಾಗಿದೆ. ಸಿಸಿ ಕ್ಯಾಮೆರಾದಲ್ಲಿ ಹಲ್ಲೆಯ ದೃಶ್ಯ ಸೆರೆಯಾಗಿದೆ.

    ಉಡುಪಿ ಸರ್ಕಾರಿ ಆಸ್ಪತ್ರೆಯಲ್ಲಿ ದಂಪತಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • New Year 2025: ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರ ಜಾತ್ರೆ – ಮಸಾಲೆ ಹಚ್ಚಿಕೊಂಡು ಕಾಯುತ್ತಿರುವ ತಾಜಾ ಮೀನು

    New Year 2025: ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರ ಜಾತ್ರೆ – ಮಸಾಲೆ ಹಚ್ಚಿಕೊಂಡು ಕಾಯುತ್ತಿರುವ ತಾಜಾ ಮೀನು

    ಉಡುಪಿ: ಹೊಸ ವರ್ಷ ಬರಮಾಡಿಕೊಳ್ಳಲು ಜನ ಸಿದ್ಧರಾಗಿದ್ದಾರೆ. ಕರಾವಳಿ ಜಿಲ್ಲೆ ಉಡುಪಿ ಪ್ರತಿ ದಿನ ಲಕ್ಷ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಬರಮಾಡಿಕೊಳ್ಳುತ್ತಿದೆ.

    ಮಲ್ಪೆ ಬೀಚ್ ಪ್ರವಾಸಿಗರಿಂದ ತುಂಬಿ ತುಳುಕಿದೆ. ವಾಟರ್ ಸ್ಪೋರ್ಟ್ಸ್‌ಗಳಲ್ಲಿ ಜನ ಮೈ ಮರೆತು ಸಂಭ್ರಮಿಸುತಿದ್ದಾರೆ. ಸೈಂಟ್ ಮೇರೀಸ್ ಐಲ್ಯಾಂಡ್, ಸ್ಪೀಡ್ ಬೋಟ್, ರೋಲಿಂಗ್ ಬಲೂನ್ ಜನರ ಖುಷಿಯನ್ನು ಹೆಚ್ಚು ಮಾಡುತ್ತಿದೆ.

    ನ್ಯೂ ಇಯರ್ ಹಿನ್ನೆಲೆ ಉಡುಪಿಗೆ ಬರುವ ಪ್ರವಾಸಿಗರಿಗೆ ಫ್ರೆಶ್ ಫಿಶ್ ಖಾದ್ಯಗಳು ಸಿದ್ಧವಾಗುತ್ತಿವೆ. ಬಂಗುಡೆ, ಮಾಂಜಿ, ಫ್ರಾನ್ಜ್, ನಾಟಿಕೋಳಿಯ ತರೆಹೇವಾರಿ ಐಟಂ ರೆಡಿಯಾಗುತ್ತಿದೆ.

    ಬೀಚ್‌ನಲ್ಲಿ ಹೊಸ ವರ್ಷ ಆಚರಿಸಿ, ಮೀನು ತಿಂದು ಮಸ್ತಿ ಮಾಡೋ ಜನಕ್ಕೆ ಸರ್ವ್ ಮಾಡೋದಕ್ಕೆ ಹೋಟೆಲ್, ಫುಡ್ ಕೋರ್ಟ್‌ಗಳು ಸರ್ವ ಸನ್ನದ್ಧವಾಗಿವೆ.

    ಐಸ್ ಹಾಕದ ಸಮುದ್ರದ ತಾಜಾ ಮೀನುಗಳು ಮಸಾಲೆ ಹಚ್ಚಿಕೊಂಡು ರೆಡಿಯಾಗುತ್ತಿವೆ. ಆಹಾರ ಪ್ರಿಯರ ಬಾಯಲ್ಲಿ ನೂರೂರಿಸುವಂತಿದೆ ದೃಶ್ಯಗಳು.

  • ನಾಪತ್ತೆಯಾಗಿದ್ದ ಇಬ್ಬರು ಪಿಯು ವಿದ್ಯಾರ್ಥಿನಿಯರು ಹೋಗಿದ್ದು ಮಲ್ಪೆಗೆ – ಒಬ್ಬಳು ನೀರುಪಾಲು, ಓರ್ವಳ ರಕ್ಷಣೆ

    ನಾಪತ್ತೆಯಾಗಿದ್ದ ಇಬ್ಬರು ಪಿಯು ವಿದ್ಯಾರ್ಥಿನಿಯರು ಹೋಗಿದ್ದು ಮಲ್ಪೆಗೆ – ಒಬ್ಬಳು ನೀರುಪಾಲು, ಓರ್ವಳ ರಕ್ಷಣೆ

    ಮಡಿಕೇರಿ: ಮಲ್ಪೆ ಸಮುದ್ರ ತೀರದಲ್ಲಿ (Malpe Beach) ನೀರಿನಲ್ಲಿ ಆಟವಾಡುತ್ತಿದ್ದ ಮಡಿಕೇರಿ (Madikeri) ಮೂಲದ ಇಬ್ಬರು ಬಾಲಕಿಯರು ನೀರುಪಾಲಾಗಿ ಓರ್ವ ಬಾಲಕಿ ಮೃತಪಟ್ಟ ಘಟನೆ ಶನಿವಾರ ರಾತ್ರಿ ನಡೆದಿದೆ.

    ಮೃತರನ್ನು ಮಡಿಕೇರಿ ನಿವಾಸಿ ಮಾನ್ಯ(16) ಎಂದು ಗುರುತಿಸಲಾಗಿದೆ. ಈಕೆಯೊಂದಿಗೆ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಆಕೆಯ ಗೆಳತಿ ಯಶಸ್ವಿನಿಯನ್ನು (16) ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಯಶಸ್ವಿನಿ ನೀಡಿದ ಮಾಹಿತಿ ಪ್ರಕಾರ ಅವರಿಬ್ಬರೂ ಮೂರು ದಿನಗಳ ಹಿಂದೆ ಮನೆ ಬಿಟ್ಟು ಬಂದಿದ್ದಾರೆ. ಪ್ರಥಮ ಪಿಯುಸಿ ವಿಜ್ಞಾನ (ಪಿಸಿಎಂ) ವಿದ್ಯಾರ್ಥಿಗಳಾಗಿರುವ ಇವರು ಆಪ್ತ ಗೆಳತಿಯರು. ಇವರಲ್ಲಿ ಯಶಸ್ವಿನಿ ಮನೆ ಬಿಟ್ಟು ಹೊರಟಾಗ ಮಾನ್ಯ ಕೂಡಾ ಆಕೆಗೆ ಸಾಥ್‌ ನೀಡಿದ ವಿಚಾರ ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.

    ಇಬ್ಬರು ನಾಪತ್ತೆಯಾದ ಬಗ್ಗೆ ಮಡಿಕೇರಿ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಆರಂಭಗೊಂಡಿತ್ತು. ಆದರೆ ಇವರಿಬ್ಬರೂ ಮನೆ ಬಿಟ್ಟು ಮಂಗಳೂರು ಕಡೆಗೆ ಹೊರಟವರು ಪಣಂಬೂರು ಬೀಚ್ ನಲ್ಲಿ ಆಟವಾಡಿ ಬಳಿಕ ಬಸ್ ಹತ್ತಿಕೊಂಡು ಮುಸ್ಸಂಜೆ ವೇಳೆ ಮಲ್ಪೆ ಬೀಚಿಗೆ ಬಂದಿದ್ದಾರೆ.  ಇದನ್ನೂ ಓದಿ: 70ಲೋ ಬಿಪಿಯಾಗಿ ಮರದಿಂದ ಬಿದ್ದು ಪೊಲೀಸ್ ಸಿಬ್ಬಂದಿ ಸಾವು

    ರಾತ್ರಿ ವೇಳೆ ಮಲ್ಪೆ ಬೀಚಿನ ಸಮುದ್ರದಲ್ಲಿ ಆಟ ಆಡುತ್ತಿದ್ದ ವೇಳೆ ಅಬ್ಬರದ ಅಲೆಗಳಿಗೆ ಸಿಲುಕಿ ಇವರಿಬ್ಬರೂ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರೆ ಎನ್ನಲಾಗಿದೆ. ಇವರನ್ನು ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ರಕ್ಷಿಸಿ ತೀರಕ್ಕೆ ತಂದಿದ್ದಾರೆ. ಈ ಪೈಕಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಮಾನ್ಯ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಳು ಎಂದು ತಿಳಿದುಬಂದಿದೆ.


    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಫ್ಲೋಟಿಂಗ್ ಬ್ರಿಡ್ಜ್ ಮುರಿಯಲು ತಾಂತ್ರಿಕ ಕಾರಣ ಇರಬೇಕು: ಆನಂದ್ ಸಿಂಗ್

    ಫ್ಲೋಟಿಂಗ್ ಬ್ರಿಡ್ಜ್ ಮುರಿಯಲು ತಾಂತ್ರಿಕ ಕಾರಣ ಇರಬೇಕು: ಆನಂದ್ ಸಿಂಗ್

    ಬೆಂಗಳೂರು: ಮಲ್ಪೆ ಬೀಚ್‍ನಲ್ಲಿ ಫ್ಲೋಟಿಂಗ್ ಬ್ರಿಡ್ಜ್ ಮುರಿಯಲು ತಾಂತ್ರಿಕ ಕಾರಣ ಇರಬೇಕು ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.

    ಉಡುಪಿಯ ಮಲ್ಪೆ ಬೀಚ್‍ನಲ್ಲಿ ಪ್ರವಾಸಿಗರ ಆಕರ್ಷಣೆಗಾಗಿ ತೇಲುವ ಸೇತುವೆಯನ್ನು ನಿರ್ಮಿಸಲಾಗಿತ್ತು. ಆದರೆ ಅರಬ್ಬೀ ಸಮುದ್ರದ ಅಬ್ಬರ ಜೋರಾಗಿರುವುದರಿಂದ ಸೇತುವೆ ಮುರಿದು ಬಿದ್ದಿದೆ. ಇದು ಕರ್ನಾಟಕ ರಾಜ್ಯದಲ್ಲೇ ಪ್ರಥಮ ತೇಲುವ ಸೇತುವೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಆದರೆ ಕಳೆದ 2 ದಿನಗಳ ಹಿಂದೆಯಷ್ಟೇ ಉದ್ಘಾಟನೆಯಾಗಿದ್ದ, ಈ ತೇಲುವ ಸೇತುವೆ ಇದೀಗ ಸ್ಥಗಿತಗೊಂಡಿದೆ. ಪ್ರವಾಸಿಗರ ಆಕರ್ಷಣೆಗೆ ನಿರ್ಮಾಣವಾಗಿದ್ದ ಮಲ್ಪೆಯ ತೇಲುವ ಸೇತುವೆ ಸ್ಥಗಿತ

    ಸದ್ಯ ಈ ಕುರಿತಂತೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆನಂದ್ ಸಿಂಗ್ ಅವರು, ಫ್ಲೋಟಿಂಗ್ ಬ್ರಿಡ್ಜ್ ಮುರಿಯಲು ನಿಖರ ಕಾರಣ ತಿಳಿದುಬಂದಿಲ್ಲ. ಸೇತುವೆ ಮುರಿಯಲು ತಾಂತ್ರಿಕ ಕಾರಣ ಇರಬೇಕು. ಸಮುದ್ರದ ಅಲೆ ತೀವ್ರ ಇದ್ದಾಗ ಇಂಥ ಬ್ರಿಡ್ಜ್‌ಗಳು ನಿಲ್ಲಲ್ಲ. ಹೆಚ್ಚು ದಿನಗಳ ಕಾಲ ಫ್ಲೋಟಿಂಗ್ ಬ್ರಿಡ್ಜ್ ಬಾಳಿಕೆ ಬರುವುದಿಲ್ಲ ಎಂದಿದ್ದಾರೆ.

    ಮೂವರು ಉದ್ಯಮಿಗಳ ಬಂಡವಾಳದಿಂದ ಈ ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು. ಅಲ್ಲದೇ ಜಿಲ್ಲಾಡಳಿತದ ಅನುಮತಿಯೊಂದಿಗೆ ಉದ್ಯಮಿಗಳಿಂದ ಸೇತುವೆ ನಿರ್ಮಾಣ ಮಾಡಿ ಖಾಸಗಿ ನಿರ್ವಹಣೆಯ ತೇಲುವ ಸೇತುವೆ ಇದೆ. ಮಲ್ಪೆ ಬೀಚ್‍ನಲ್ಲಿ ನಿರ್ಮಿಸಲಾಗಿರುವ ಈ ತೇಲುವ ಸೇತುವೆಯು 100 ಮೀಟರ್ ಉದ್ದ ಮತ್ತು 3.5 ಮೀಟರ್ ಅಗಲ ಹೊಂದಿದ್ದು, 80 ಲಕ್ಷ ವೆಚ್ಚದಲ್ಲಿ ಸಿದ್ಧಪಡಿಸಲಾಗಿತ್ತು.

    ಮತ್ತೊಂದೆಡೆ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಅವರು ಇದರಲ್ಲಿ ಬಿಜೆಪಿ 40% ಕಮೀಷನ್ ಪಡೆದಿದೆ ಎಂದು ಆರೋಪಿಸಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, 40% ಬಿಜೆಪಿಯ ಪಾಲು, 60% ಗಾಳಿ, ಸಮುದ್ರದ ಪಾಲು, ರಾಜ್ಯದ ಅಭಿವೃದ್ಧಿ ಮಣ್ಣುಪಾಲು, ಜನರ ಬದುಕು ಬೀದಿಪಾಲು. ಬಿಜೆಪಿ ಸರ್ಕಾರ ವಿಧಾನ ಸೌಧವನ್ನು ವ್ಯಾಪಾರ ಸೌಧ ಮಾಡಿರುವಾಗ ‘ಅಭಿವೃದ್ಧಿ’ ಎನ್ನುವುದು ಗಾಳಿಯಲ್ಲಿ ಹಾರಿ ಹೋಗುತ್ತಿದೆ, ಸಮುದ್ರದಲ್ಲೂ ತೇಲಿ ಹೋಗುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

  • ಕೊಡಗಿನ ಯುವತಿ ಸಮುದ್ರದಲ್ಲಿ ಕಣ್ಮರೆ- ವಿಹಾರಕ್ಕೆ ಬಂದಿದ್ದ ನಾಲ್ವರ ತಂಡ

    ಕೊಡಗಿನ ಯುವತಿ ಸಮುದ್ರದಲ್ಲಿ ಕಣ್ಮರೆ- ವಿಹಾರಕ್ಕೆ ಬಂದಿದ್ದ ನಾಲ್ವರ ತಂಡ

    ಉಡುಪಿ: ಕರಾವಳಿ ಜಿಲ್ಲೆಗಳಿಗೆ ವಿಶೇಷವಾಗಿ ಸಮುದ್ರತೀರಕ್ಕೆ ಪ್ರವಾಸ ಬರಬೇಡಿ ಎಂದು ಎಷ್ಟು ಎಚ್ಚರಿಕೆ ನೀಡಿದರೂ ಜನ ಕೇಳುತ್ತಿಲ್ಲ. ವೀಕೆಂಡ್ ಬಂದ್ರೆ ಈಗಲೂ ನೂರಾರು ಜನ ಸಮುದ್ರ ತೀರದತ್ತ ಮುಖ ಮಾಡುತ್ತಾರೆ. ಹೀಗೆ ಕೊಡಗು ಮತ್ತು ಮೈಸೂರು ಭಾಗದಿಂದ ಬಂದಿದ್ದ ಯುವಕ-ಯುವತಿಯರ ತಂಡವೊಂದು ಮಲ್ಪೆಗೆ ಆಗಮಿಸಿತ್ತು. ಈ ವೇಳೆ ಸಮುದ್ರದ ಅಲೆಗಳಲ್ಲಿ ಈಜುತ್ತಿದ್ದಾಗ ನೀರು ಪಾಲಾದ ಘಟನೆ ಮಲ್ಪೆ ಸಮುದ್ರ ತೀರದಲ್ಲಿ ನಡೆದಿದೆ.

    ಮೈಸೂರಿನ ಯುವಕ ಹಾಗೂ ಕೊಡಗಿನಿಂದ ಮೂವರು ಯುವತಿಯರು ಬೀಚ್ ಗೆ ಬಂದಿದ್ದರು. ನಾಲ್ವರ ಪೈಕಿ ಓರ್ವ ಯುವಕ ಹಾಗೂ ಇಬ್ಬರು ಯುವತಿಯರನ್ನು ರಕ್ಷಿಸಲಾಗಿದೆ. ಕೊಡಗಿನ ಯುವತಿ ದಶಮಿ (20) ಸಮುದ್ರದಲ್ಲಿ ಕಣ್ಮರೆಯಾಗಿದ್ದಾಳೆ. ಯುವಕನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವತಿಗಾಗಿ ಹುಡುಕಾಟ ನಡೆಯುತ್ತಿದೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಅಲೆಗಳ ತೀವ್ರತೆ ಹೆಚ್ಚಿರುವುದರಿಂದ ಸಮುದ್ರಕ್ಕೆ ಇಳಿಯಬೇಡಿ ಎಂದು ಎಚ್ಚರಿಕೆ ನೀಡಲಾಗಿತ್ತು. ಎಚ್ಚರಿಕೆಯ ಹೊರತಾಗಿಯೂ ತಂಡ ನೀರಿನಲ್ಲಿ ಆಟವಾಡುತ್ತಿದ್ದ ವೇಳೆ ಅಲೆಗಳ ಆರ್ಭಟಕ್ಕೆ ಸಿಲುಕಿದೆ. ಕರಾವಳಿ ಜಿಲ್ಲೆ ಉಡುಪಿಯಲ್ಲಿ ಕಳೆದ ಒಂದು ತಿಂಗಳಿನಿಂದ ನಿರಂತರ ಮಳೆ ಸುರಿಯುತ್ತಿದೆ. ನದಿಗಳು ತುಂಬಿ ಹರಿಯುತ್ತಿದ್ದು, ಸಮುದ್ರದ ಅಬ್ಬರ ಹೆಚ್ಚಾಗಿದೆ. ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದರೂ ಹೊರ ಜಿಲ್ಲೆಯವರು ನಿರ್ಲಕ್ಷ್ಯ ತೋರುತ್ತಿದ್ದಾರೆ.

  • ಮಲ್ಪೆ ಕಡಲಲ್ಲಿ ಮುಳುಗಿದ ಮೂವರು ಬೆಂಗಳೂರಿಗರು!

    ಮಲ್ಪೆ ಕಡಲಲ್ಲಿ ಮುಳುಗಿದ ಮೂವರು ಬೆಂಗಳೂರಿಗರು!

    – ಜೆಟ್ ಸ್ಕೀಯಲ್ಲಿ ತೆರಳಿ ರಕ್ಷಣೆ

    ಉಡುಪಿ: ಜಿಲ್ಲೆಯ ಮಲ್ಪೆ ಕಡಲತೀರದಲ್ಲಿ ಬೆಂಗಳೂರು ಮೂಲದ ಮೂವರು ನೀರಿನಲ್ಲಿ ಮುಳುಗಿದ್ದು, ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಬೆಳಗ್ಗೆ ಬೆಂಗಳೂರಿನ 10 ಜನ ಪ್ರವಾಸಿಗರು ಮಲ್ಪೆಯ ಕಡಲತೀರಕ್ಕೆ ಆಗಮಿಸಿದ್ದರು.

    ಈ ಪೈಕಿ ಐದಾರು ಜನ ನೀರಿಗಿಳಿದು ಮೋಜು ಮಸ್ತಿಯಲ್ಲಿ ತೊಡಗಿದ್ದರು. ಮೊದಲು ಯುವತಿಯೊಬ್ಬರು ನೀರಿನಲ್ಲಿ ಮುಳುಗಿದ್ದರು. ಆಕೆಯ ರಕ್ಷಣೆಗೆ ಇನ್ನಿಬ್ಬರು ನೀರಿಗೆ ಹಾರಿದ್ದಾರೆ. ಈ ವೇಳೆ ಮೂವರು ಕೂಡ ಅಪಾಯಕ್ಕೆ ಸಿಲುಕಿದ್ದರು. ದಡದಲ್ಲಿ ಇದ್ದ ವರು ರಕ್ಷಣೆಗಾಗಿ ಕೂಗಿಕೊಂಡಿದ್ದಾರೆ ಸಮುದ್ರ ತೀರದಿಂದ ಸುಮಾರು 20 ಮೀಟರ್ ದೂರದಲ್ಲಿ ಮುಳುಗುತ್ತಿದ್ದ ಅವರನ್ನು ರಕ್ಷಿಸಲು ಜೆಟ್ ಸ್ಕೀ ಮತ್ತು ಪ್ರವಾಸಿ ದೋಣಿಯ ಚಾಲಕರು ಬಂದಿದ್ದಾರೆ.

    ಜೆಟ್ಸ್ಕಿ ಬೋಟ್ ನ ಮೂಲಕ ಮೊದಲು ರಕ್ಷಣೆ ಮಾಡಿ ಪ್ರವಾಸಿಗರು ಸೈಂಟ್ ಮೇರಿಸ್ ತೆರಳುವ ದೋಣಿಗೆ ಹಾಕಿದ್ದಾರೆ. ಈ ಮೂಲಕ ಅಪಾಯದಲ್ಲಿದ್ದ ಮೂವರನ್ನೂ ರಕ್ಷಣೆ ಮಾಡಲಾಯ್ತು. ತಕ್ಷಣ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಮಲ್ಪೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಪ್ರತಿದಿನ 11:36 ಸುಮಾರಿನಿಂದ ಮಧ್ಯಾಹ್ನ ಒಂದು ಗಂಟೆಯವರೆಗೆ ವಿಪರೀತವಾಗಿ ಕಡಲು ಪ್ರಕ್ಷುಬ್ಧ ಇರುತ್ತದೆ. ಈ ಸಂದರ್ಭ ಪ್ರವಾಸಿಗರು ಕಡಲಿಗೆ ಇಳಿಯಬಾರದು ಅಂತ ಎಷ್ಟು ಹೇಳಿದರೂ ಕೂಡ ಮಾತನ್ನು ಧಿಕ್ಕರಿಸಿ ಪ್ರವಾಸಿಗರು ನೀರಿಗಿಳಿಯುತ್ತಾರೆ.

    ಸ್ವಿಮ್ಮಿಂಗ್ ಪೂಲ್, ನದಿಯಲ್ಲಿ ಈಜಲು ಕಲಿತವರು ಸಮುದ್ರಕ್ಕೆ ತಿಳಿದು ಈಜುತ್ತವೆ ಎಂದು ಅಂದುಕೊಂಡಿದ್ದರೆ ಅದು ಮೂರ್ಖತನ ಎಂದು ಸ್ಥಳೀಯ ಮೀನುಗಾರ ವಿಠಲ ಕಾಂಚನ್ ಹೇಳಿದರು.

  • ಮಲ್ಪೆ ಬೀಚ್‍ನಲ್ಲಿ ಮಸ್ತ್ ವೀಕೆಂಡ್- ಕೊರೊನಾ ಲೆಕ್ಕಿಸದೆ ನೂರಾರು ಜನ ಜಮಾವಣೆ

    ಮಲ್ಪೆ ಬೀಚ್‍ನಲ್ಲಿ ಮಸ್ತ್ ವೀಕೆಂಡ್- ಕೊರೊನಾ ಲೆಕ್ಕಿಸದೆ ನೂರಾರು ಜನ ಜಮಾವಣೆ

    ಉಡುಪಿ: ಅನ್‍ಲಾಕ್ ಬಳಿಕ ಎಲ್ಲವೂ ತೆರೆದಂತಾಗಿದ್ದು, ಇದರಿಂದ ಜನರ ಓಡಾಟವೂ ಹೆಚ್ಚಾಗಿದೆ. ಮಾತ್ರವಲ್ಲದೆ ಕೊರೊನಾ ಲೆಕ್ಕಿಸದೆ ಜನ ಪ್ರವಾಸಕ್ಕೆ ತೆರಳುತ್ತಿದ್ದು, ಸಾಮಾಜಿಕ ಅಂತರವನ್ನು ಮರೆತು ಬೇಕಾಬಿಟ್ಟಿಯಾಗಿ ವರ್ತಿಸುತ್ತಿದ್ದಾರೆ. ವೀಕೆಂಡ್ ಹಿನ್ನೆಲೆ ಉಡುಪಿಯ ಮಲ್ಪೆ ಬೀಚ್‍ನಲ್ಲಿ ಸಹ ಹೆಚ್ಚು ಜನ ಸೇರಿದ್ದು, ಕೊರೊನಾ ಮರೆತು ಮಜಾ ಮಾಡುತ್ತಿದ್ದಾರೆ.

    ನೂರಾರು ಪ್ರವಾಸಿಗರು ಮಲ್ಪೆ ಬೀಚಿನಲ್ಲಿ ವೀಕೆಂಡ್ ಎಂಜಾಯ್ ಮಾಡುತ್ತಿದ್ದು, ನೀರಿಗಿಳಿದ ಮೇಲೆ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಬಳಸಲು ಸಾಧ್ಯವಿಲ್ಲ. ಆದರೂ ಇದನ್ನು ಲೆಕ್ಕಿಸದೆ ಪ್ರವಾಸಿಗರು ಮಸ್ತ್ ಮಜಾ ಮಾಡುತ್ತಿದ್ದಾರೆ. ಕುಟುಂಬದವರ ಜೊತೆ ಹಾಗೂ ಸ್ನೇಹಿತರೊಂದಿಗೆ ಹಲವು ಜನ ಆಗಮಿಸಿ ಬೀಚ್‍ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಈ ವೇಳೆ ಕೊರೊನಾ ನಿಯಮಗಳನ್ನು ಸಹ ಗಾಳಿಗೆ ತೂರುತ್ತಿದ್ದಾರೆ.

    ನಾಲ್ಕೈದು ತಿಂಗಳು ಮನೆಯೊಳಗೆ ಇದ್ದು ಬೇಜಾರಾಗಿತ್ತು. ಕಿರಿಕಿರಿ ಅನುಭವಿಸಿದ್ದೆವು. ಹೀಗಾಗಿ ಸ್ವಲ್ಪ ಎಂಜಾಯ್ ಮಾಡಲೆಂದು ಪ್ರವಾಸಕ್ಕೆ ಬಂದಿದ್ದೇವೆ. ಇಂದು ಮಲ್ಪೆ ಬೀಚ್‍ಗೆ ಬಂದಿದ್ದೇವೆ. ತುಂಬಾ ದಿನಗಳ ಬಳಿಕ ದೂರ ಪ್ರಯಾಣ ಮಾಡಿದಂತಾಗಿದೆ ಎಂದು ಪ್ರವಾಸದ ಅನುಭವ ಹಂಚಿಕೊಂಡಿದ್ದಾರೆ.

    ಬೀಚ್‍ನಿಂದ ಹೊರ ಬಂದ ಬಳಿಕ ಸಹ ಬಹುತೇಕರು ಮಾಸ್ಕ್, ಸಾಮಾಜಿಕ ಅಂತರ ಸೇರಿದಂತೆ ಕೊರೊನಾ ನಿಯಮಗಳನ್ನು ಪಾಲಿಸುತ್ತಿಲ್ಲ. ಹೀಗಾಗಿ ಪ್ರವಾಸಿಗರಿಂದಲೇ ಮತ್ತೆ ಕೊರೊನಾ ಹೆಚ್ಚಾಗುತ್ತದೆಯಾ ಎಂಬ ಆತಂಕ ಈಗ ಮೂಡಿದೆ. ಚಿಕ್ಕಮಗಳೂರಿಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಿದ್ದು, ಯಾರೂ ಸಹ ಕೊರೊನಾ ನಿಯಮ ಪಾಲಿಸುತ್ತಿಲ್ಲ.

  • ಮಲ್ಪೆಯ ಬ್ಲ್ಯಾಕ್ ರಾಕ್ ನಡುವೆ ರಾಕಿಂಗ್ ಸ್ಟಾರ್ ಯಶ್ ಖದರ್

    ಮಲ್ಪೆಯ ಬ್ಲ್ಯಾಕ್ ರಾಕ್ ನಡುವೆ ರಾಕಿಂಗ್ ಸ್ಟಾರ್ ಯಶ್ ಖದರ್

    ಉಡುಪಿ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-1 ಚಿತ್ರ 2018ರಲ್ಲಿ ವಿಶ್ವದಾದ್ಯಂತ ಸೌಂಡ್ ಮಾಡಿತ್ತು. ಇದೀಗ ಕೆಜಿಎಫ್-2 ಮತ್ತೆ ಧೂಳೆಬ್ಬಿಸಲು ತಯಾರಾಗುತ್ತಿದೆ. ಲಾಕ್‍ಡೌನ್ ಫ್ರೀ ಆದ ನಂತರ ಚಿತ್ರದ ಚಿತ್ರೀಕರಣ ಜೋರಾಗಿ ನಡೆಯುತ್ತಿದೆ. ಇದೀಗ ಚಿತ್ರದ ಜಬರ್ದಸ್ತ್ ಸೀಕ್ವೆನ್ಸ್ ಉಡುಪಿಯ ಮಲ್ಪೆಯಲ್ಲಿ ನಡೆಯುತ್ತಿದೆ.

    ಕಪ್ಪು ಬಣ್ಣದ 8-10 ಕಾರುಗಳು, ಅರಬ್ಬಿ ಸಮುದ್ರದ ತಟದಲ್ಲಿ ಐದಾರು ಬೋಟುಗಳು, ಬ್ರೌನ್ ಅಂಡ್ ವೈಟ್ ಡ್ರೆಸ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಮಿಂಚುತ್ತಿದ್ದಾರೆ. ಕೊರೊನ ಲಾಕ್‍ಡೌನ್ ಮುಗಿಸಿದ ನಂತರ ಕೆಜಿಎಫ್ ಚಿತ್ರತಂಡ ಚಿತ್ರೀಕರಣ ಜೋರಾಗಿ ನಡೆಸುತ್ತಿದೆ. ಪ್ರಶಾಂತ್ ನೀಲ್ ಬೆಟಾಲಿಯನ್ ಉಡುಪಿ ಜಿಲ್ಲೆ ಮಲ್ಪೆ ಸಮೀಪದ ಪಡುಕೆರೆ ಕಡಲಕಿನಾರೆಯಲ್ಲಿ ಶೂಟಿಂಗ್ ನಡೆಯುತ್ತಿದೆ. ಚಿತ್ರದ ನಾಯಕ ಯಶ್ ಮತ್ತು ನಾಯಕಿ ಶ್ರೀನಿಧಿ ಶೆಟ್ಟಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.

    ಎಂಟು ಹತ್ತು ಕಾರುಗಳು ಗಿರ್ ಗಿರ್ ಅಂತ ರೌಂಡ್ ಹೊಡೀತಿದ್ರೆ ನಡುವೆ ಯಶ್ ಬಿಳಿ ಅಂಗಿ ಬ್ರೌನ್ ಪ್ಯಾಂಟ್ ನಲ್ಲಿ ಮಿರ ಮಿರ ಮಿಂಚುತ್ತಿದ್ದರು. ಪಕ್ಕದಲ್ಲಿ ಶ್ರೀನಿಧಿ ಗೋಲ್ಡನ್ ಮತ್ತು ಬ್ಲ್ಯಾಕ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಸೀಕ್ವೆನ್ಸ್ ಒಂದನ್ನು ಪಡುಕೆರೆ ಕಡಲಕಿನಾರೆಯಲ್ಲಿ ಚಿತ್ರೀಕರಿಸಲಾಯಿತು. 2 ಗ್ಯಾಂಗ್ ಸ್ಟರ್ ಗುಂಪುಗಳು ಅರಬ್ಬಿ ಸಮುದ್ರದಲ್ಲಿ ಮುಖಾಮುಖಿಯಾಗುವ ದೃಶ್ಯವನ್ನು ಕೂಡ ಈ ಸಂದರ್ಭದಲ್ಲಿ ಸೆರೆಹಿಡಿಯಲಾಯಿತು. ಅರಬ್ಬಿ ಸಮುದ್ರದಲ್ಲಿ ಒಟ್ಟು ಮೂರು ಮೀನುಗಾರಿಕಾ ಬೋಟ್ ಗಳನ್ನು ಕೆಜಿಎಫ್-2 ಚಿತ್ರಕ್ಕೆ ಬಳಸಲಾಗಿದೆ.

    ರಾಕಿ ಬಾಯ್‍ನನ್ನು ನೋಡಬೇಕು ಸೆಲ್ಫಿ ತೆಗಿಬೇಕು ಅಂತ ನೂರಾರು ಮಂದಿ ಪಡುಕೆರೆ ಕಡಲಕಿನಾರೆಗೆ ಬಂದಿದ್ದರು. ಆದರೆ ಸಮುದ್ರ ತೀರದಲ್ಲಿ ಸುಮಾರು ನೂರು ಮಂದಿ ಬೌನ್ಸರ್ ಗಳು ಮೊಬೈಲ್ ಚಿತ್ರೀಕರಣ ನಡೆಸದಂತೆ ತಡೆದರು ಯಶ್ ಅವರನ್ನು ಹತ್ತಿರದಿಂದ ನೋಡಬೇಕು ಎಂದು ದೂರದ ಊರುಗಳಿಂದ ಬಂದಿದ್ದ ಯುವಕ-ಯುವತಿಯರಿಗೆ ನಿರಾಶೆಯಾಯಿತು.

    ಉಡುಪಿಯಲ್ಲಿ ಕೆಜಿಎಫ್ ಚಿತ್ರ ತಂಡ ಮೂರು ದಿನ ಟೆಂಡ್ ಹಾಕಿದೆ. ಮಲ್ಪೆ ಬೀಚ್, ಮಲ್ಪೆ ಬಂದರು, ಪಡುಕೆರೆ ಬ್ರಿಜ್ ಆಸುಪಾಸಿನಲ್ಲಿ ಚಿತ್ರೀಕರಣ ನಡೆಸಲಿದೆ. ಮಹಾರಾಷ್ಟ್ರದಲ್ಲಿ ಕೊರೊನಾ ಅಟ್ಟಹಾಸ ಜೋರಾಗಿರುವುದರಿಂದ ಮಲ್ಪೆ-ಪಡುಕೆರೆ ಕಡಲ ತೀರವನ್ನು ಮುಂಬೈ ಮಾದರಿಯಲ್ಲಿ ಚಿತ್ರೀಕರಿಸಲಾಗುತ್ತಿದೆ ಎಂಬ ಮಾಹಿತಿ ಇದೆ.

  • ರಾಜ್ಯದ ಹಲವೆಡೆ ಮಳೆ- ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋದ ಮಲ್ಪೆ ಬೀಚ್

    ರಾಜ್ಯದ ಹಲವೆಡೆ ಮಳೆ- ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋದ ಮಲ್ಪೆ ಬೀಚ್

    ಬೆಂಗಳೂರು: ರಾಜ್ಯದ ಹಲವೆಡೆ ಧಾರಾಕಾರ ಮಳೆಯಾಗಿದ್ದು, ಅವಾಂತರ ಸೃಷ್ಟಿಸಿದೆ. ಯಾದಗಿರಿಯಲ್ಲಿ ಮಳೆ ಅಬ್ಬರಕ್ಕೆ ಹಳ್ಳ, ಕೊಳ್ಳ, ಹೊಲ-ಗದ್ದೆ ಸೇರಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು ಲಕ್ಷಾಂತರ ರೂ. ಮೌಲ್ಯದ ಬೆಳೆ ಹಾನಿಯಾಗಿದೆ. ಬೆಳೆಹಾನಿಯಿಂದ ಕಂಗಾಲಾದ ಶಹಾಪೂರದ ರೈತ ವಿಡಿಯೋ ಮೂಲಕ ಅಳಲು ತೋಡಿಕೊಂಡಿದ್ದಾನೆ.

    ಉಡುಪಿಯಲ್ಲಿ ಭಾರೀ ಮಳೆಯಾಗಿದ್ದು ಅರಬ್ಬೀ ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದ್ದು ಮಲ್ಪೆ ಬೀಚ್ ಕೊಚ್ಚಿ ಹೋಗಿದೆ. ಇನ್ನು ಚಿಕ್ಕಬಳ್ಳಾಪುರದಲ್ಲಿಯೂ ಮಳೆಯಾಗಿದ್ದು ಜಕ್ಕಲಮಡಗು ಡ್ಯಾಂನಲ್ಲಿ 4 ಅಡಿಯಷ್ಟು ನೀರು ಸಂಗ್ರಹವಾಗಿದೆ. ತುಮಕೂರಿನ ಹಲವೆಡೆ ಮಳೆಯಾಗಿದ್ದು ತಗ್ಗುಪ್ರದೇಶಗಳಿಗೆ ನೀರು ನುಗ್ಗಿದೆ. ತಿಪಟೂರಿನ ಈಡೇನಹಳ್ಳಿಯಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ರಸ್ತೆಗಳು ಕುಸಿದು ಬಿದ್ದಿವೆ. ಕೆಲವರ ಜಮೀನುಗಳು ಹಾನಿಯಾಗಿದ್ದು ಸ್ಥಳಕ್ಕೆ ಅಧಿಕಾರಿಗಳು ಬಂದಿಲ್ಲ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನಿನ್ನೆ ಸಂಜೆಯಿಂದಲೂ ಹಾಸನ ಜಿಲ್ಲೆಯ ಹಲವೆಡೆ ಭರ್ಜರಿ ಮಳೆಯಾಗಿದೆ. ಚನ್ನರಾಯಪಟ್ಟಣದ ನಂದಿನಿ ಹಾಲು ಉತ್ಪಾದಕ ಘಟಕದಿಂದ ಹೊರಬಂದ ನೀರು ಶೆಟ್ಟಿಹಳ್ಳಿಯ ಜಮೀನುಗಳಿಗೆ ನುಗ್ಗಿ ಕೆರೆಯಂತಾಗಿದೆ. ಇತ್ತ ಕೋಲಾರದ ಚಿಟ್ನಹಳ್ಳಿಯಲ್ಲಿ ಕೆಸಿ ವ್ಯಾಲಿ ಗೇಟ್ ವಾಲ್‍ನಿಂದ ನೀರು ಪೋಲಾಗಿದೆ. ಕಳೆದ ರಾತ್ರಿಯಿಂದ ಪೋಲಾಗಿ ಹರಿಯುತ್ತಿರುವ ನೀರು 60 ಅಡಿ ಎತ್ತರಕ್ಕೆ ಚಿಮ್ಮುತ್ತಿದೆ. ಸ್ಥಳಕ್ಕೆ ಅಧಿಕಾರಿಗಳು ಬರಲಿಲ್ಲ ಅಂತ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಬಿಕೋ ಅನ್ನುತ್ತಿದೆ ಮಲ್ಪೆ ಬೀಚ್

    ಬಿಕೋ ಅನ್ನುತ್ತಿದೆ ಮಲ್ಪೆ ಬೀಚ್

    – ವಾರಾಂತ್ಯದಲ್ಲಿ 10 ಸಾವಿರ, ಇಂದು 100 ಜನರೂ ಇಲ್ಲ

    ಉಡುಪಿ: ಕೊರೊನಾ ವೈರಸ್‍ಗೆ ಕರ್ನಾಟಕದ ಪ್ರವಾಸಿಗರು ಬೆಚ್ಚಿ ಬಿದ್ದಿದ್ದಾರೆ. ವೀಕೆಂಡ್ ಬಂದರೆ ಸಾಕು ಉಡುಪಿಯ ಮಲ್ಪೆ ಬೀಚಲ್ಲಿ 10-20 ಸಾವಿರ ಪ್ರವಾಸಿಗರು ತುಂಬಿಕೊಳ್ಳುತ್ತಿದ್ದರು. ಆದರೆ ಇಂದು ಬೆರಳಣಿಕೆ ಪ್ರವಾಸಿಗರಿದ್ದಾರೆ.

    ಹೊರ ಜಿಲ್ಲೆಗಳಿಂದ ಪ್ರವಾಸಿಗರು ಮಲ್ಪೆಗೆ ಬರಲು ಹಿಂದೇಟು ಹಾಕಿದ್ದಾರೆ. ರಾಜ್ಯಾದ್ಯಂತ ಸಿಎಂ ಒಂದು ವಾರ ಹೈ ಅಲರ್ಟ್ ಘೋಷಣೆ ಮಾಡಿದ್ದಾರೆ. ಜೊತೆಗೆ ಉಡುಪಿಯ ಮಣಿಪಾಲದಲ್ಲಿ ಶಂಕಿತ ಕೊರೊನಾ ಪ್ರಕರಣ ಪತ್ತೆಯಾಗಿರುವ ಕಾರಣ ಬೀಚ್ ಕಡೆ ಜನ ಬರುತ್ತಿಲ್ಲ. ಕೊರೊನಾದಿಂದ ಭಾರತದ ಸೇಫೆಸ್ಟ್ ಬೀಚ್ ಬಿಕೋ ಅಂತಿದೆ.

    ಮಲ್ಪೆ ಲೈಫ್ ಗಾರ್ಡ್ ಅಚ್ಯುತ್ ಸುವರ್ಣ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ವಾರಾಂತ್ಯದಲ್ಲಿ ಕನಿಷ್ಠ 10 ಸಾವಿರ ಜನ ಬರುತ್ತಾರೆ. ಆದರೆ ಇವತ್ತು ನೂರು ಜನರೂ ಬರಲಿಲ್ಲ. ಹೊರಗಿನ ಪ್ರವಾಸಿಗರು ಇಲ್ಲ. ನಮ್ಮ ಊರಿನವರೂ ಬರುತ್ತಿಲ್ಲ. ಕೊರೊನಾ ಉಂಟಾ ಇಲ್ವಾ ಗೊತ್ತಿಲ್ಲ. ಆದರೆ ಜನರಲ್ಲಿ ಭಯ ಇದೆ ಎಂದರು.

    ಬೋಟ್ ಸಿಬ್ಬಂದಿ ಸೀತಾರಾಮ ಕುಮಾರ್ ತನ್ನ ವ್ಯಾಪಾರ ಇಲ್ಲದ ದಿನದ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಇವತ್ತು ಒಂದು ಬೋಟಿಂಗ್‍ಗೂ ವ್ಯಾಪಾರ ಆಗಿಲ್ಲ. ಪ್ರವಾಸಿಗರು ಬೋಟಿಂಗ್ ಕಡೆ ಬರುತ್ತಲೇ ಇಲ್ಲ ಎಂದರು. ಇನ್ನೂ ವ್ಯಾಪಾರ ಇಲ್ಲದೆ ಅಂಗಡಿ ಮುಂಗಟ್ಟುಗಳು ಖಾಲಿಯಾಗಿದ್ದವು.