Tag: ಮಲೆ ಮಹದೇಶ್ವರ ಬೆಟ್ಟ

  • ದಾಸೋಹದ ಅಕ್ಕಿಯನ್ನ ಬಡವರಿಗೆ ವಿತರಿಸಲು ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರ ನಿರ್ಧಾರ

    ದಾಸೋಹದ ಅಕ್ಕಿಯನ್ನ ಬಡವರಿಗೆ ವಿತರಿಸಲು ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರ ನಿರ್ಧಾರ

    – 5 ಕೆಜಿ ತೂಕದ 5 ಸಾವಿರ ಬ್ಯಾಗ್‍ಗಳು ಸಿದ್ಧ

    ಚಾಮರಾಜನಗರ: ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳ ಮಲೆಮಹದೇಶ್ವರ ಬೆಟ್ಟಕ್ಕೆ ದಾನಿಗಳಿಂದ ಬಂದಿರುವ ಅಕ್ಕಿಯನ್ನು ಬೆಟ್ಟದ ಸುತ್ತಮುತ್ತಲಿನ ಸುಮಾರು ಆರುವರೆ ಸಾವಿರ ಬಡ ಕುಟುಂಬಗಳಿಗೆ ವಿತರಿಸಲು ಮಹದೇಶ್ವರ ಬೆಟ್ಟ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ.

    ಲಾಕ್‍ಡೌನ್ ಹಿನ್ನೆಲೆಯಲ್ಲಿ ಮಹದೇಶ್ವರ ಬೆಟ್ಟ ವ್ಯಾಪ್ತಿಯಲ್ಲಿರುವ ಕಾಡಂಚಿನ ಗ್ರಾಮಗಳ ಜನರ ಬದುಕು ದುಸ್ತರವಾಗಿದೆ. ಈ ಹಿನ್ನೆಲೆಯಲ್ಲಿ ಅವರ ನೆರವಿಗೆ ಧಾವಿಸಲು ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ ನಿರ್ಧರಿಸಿದೆ. ಮಹ ದೇಶ್ವರಬೆಟ್ಟದ ದಾಸೋಹಕ್ಕೆ ದಾನಿಗಳಿಂದ ಸುಮಾರು 80 ಟನ್ ಅಕ್ಕಿ ಸಂಗ್ರಹವಾಗಿದೆ. ಇದರಲ್ಲಿ ಸದ್ಯಕ್ಕೆ ಸುಮಾರು 32 ಟನ್ ಅಕ್ಕಿಯನ್ನು ಕೊಂಬುಡಿಕ್ಕಿ, ದೊಡ್ಡಾಣೆ, ತುಳಸಿಕೆರೆ, ಪಡಸಲನತ್ತ, ನಾಗನತ್ತ, ಗೋಪಿನಾಥಂ, ಪೊನ್ನಾಚಿ ಬಿದರಹಳ್ಳಿ ಮೊದಲಾದ ಗ್ರಾಮಗಳ ಆರುವರೆ ಸಾವಿರ ಬಡ ಕುಟುಂಬಗಳಿಗೆ ವಿತರಿಸಲು ನಿರ್ಧರಿಸಲಾಗಿದೆ.

    ಈ ಗ್ರಾಮಗಳಲ್ಲಿ ಬಹುತೇಕ ಬಡವರು ವಾಸಿಸುತ್ತಿದ್ದು, ಅವರ ನೆರವಿಗೆ ಧಾವಿಸುವ ಸಲುವಾಗಿ ಹನೂರು ಕ್ಷೇತ್ರದ ಶಾಸಕ ಆರ್.ನರೇಂದ್ರ ದಾಸೋಹದ ಅಕ್ಕಿಯನ್ನು ಹಂಚುವ ಪ್ರಸ್ತಾವನೆ ಮಾಡಿದ್ದರು. ಇದಕ್ಕೆ ಮಹದೇಶ್ವರ ಬೆಟ್ಟ ಪ್ರಾಧಿಕಾರದ ಉಪಾಧ್ಯಕ್ಷರಾದ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‍ಕುಮಾರ್ ಮೌಖಿಕವಾಗಿ ಸಮ್ಮತಿ ಸೂಚಿಸಿದ್ದಾರೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ.

    ಏಪ್ರಿಲ್ 19 ರಂದು ಮಹದೇಶ್ವರಬೆಟ್ಟ, ಕೊಂಬುಡಿಕ್ಕಿ, ಗೋಪಿನಾಥಂ, ಪೊನ್ನಾಚಿ, ಬಿದರಹಳ್ಳಿಯಲ್ಲಿ ಅಕ್ಕಿ ವಿತರಣೆ ಚಾಲನೆಗೆ ಸಚಿವ ಸುರೇಶ್ ಕುಮಾರ್ ಚಾಲನೆ ನೀಡಲಿದ್ದಾರೆ. ಇದಕ್ಕಾಗಿ 5 ಕೆ.ಜಿ.ತೂಕದ 5,000 ಬ್ಯಾಗ್‍ಗಳನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಅಲ್ಲದೇ ಪ್ರಾಧಿಕಾರದ ವತಿಯಿಂದ ಕರ್ತವ್ಯ ನಿರತ ಅಧಿಕಾರಿ, ಸಿಬ್ಬಂದಿ ಮತ್ತು ಬಡಕುಟುಂಬಗಳಿಗೆ ವಿತರಿಸಲು 10 ಸಾವಿರ ಮಾಸ್ಕ್ ಗಳನ್ನು ತಯಾರಿಸಲಾಗುತ್ತಿದೆ.

    ಇದೇ ವೇಳೆ ಡೈನಾಮಿಕ್ ಭಾರತ್ ಗ್ಲೋಬಲ್ ವಿಷನ್ ಎಂಬ ಸ್ವಯಂ ಸೇವಾ ಸಂಸ್ಥೆ, ಕಾಡಿನಲ್ಲಿಯೇ ವಾಸವಿರುವ ಹಾಗೂ ಮೂಲ ಗ್ರಾಮಗಳಿಗೆ ಸಂಪರ್ಕವೇ ಇರದ ಒಂದು ಸಾವಿರ ಕುಟುಂಬಗಳಿಗೆ ಮುಂದಿನ ಮೂರು ತಿಂಗಳಿಗೆ ಆಗುವಷ್ಟು ಪಡಿತರ ಹಾಗೂ 30 ವಿವಿಧ ಪದಾರ್ಥಗಳನ್ನು ನೀಡಲು ಮುಂದೆ ಬಂದಿದೆ. ಈ ಕಾರ್ಯಕ್ಕೂ ಸಹ ಏಪ್ರಿಲ್ 19 ರಂದು ಚಾಲನೆ ನೀಡಲಾಗುವುದು ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ.

  • ಮಾದಪ್ಪನ ಸನ್ನಿಧಿಯಲ್ಲಿ ಉಳಿದಿದೆ 70 ಸಾವಿರ ಲಡ್ಡು

    ಮಾದಪ್ಪನ ಸನ್ನಿಧಿಯಲ್ಲಿ ಉಳಿದಿದೆ 70 ಸಾವಿರ ಲಡ್ಡು

    ಚಾಮರಾಜನಗರ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಮಾದಪ್ಪನ ಬೆಟ್ಟದಲ್ಲಿ ಭಕ್ತರಿಗಾಗಿ ತಯಾರಾದ ಲಾಡುಗಳು ಆಗೆ ಉಳಿದಿರುವ ಘಟನೆ ಇಂದು ನಡೆದಿದೆ.

    ಮಹದೇಶ್ವರ ಬೆಟ್ಟದಲ್ಲಿ ಭಕ್ತರ ಕೈ ತಲುಪದೆ ಸುಮಾರು 70 ಸಾವಿರ ಲಾಡುಗಳು ಉಳಿದಿದೆ. ಭಕ್ತರಿಗೆ ಪ್ರವೇಶ ನಿಷೇಧ ಹಿನ್ನೆಲೆ ಈಗಾಗಲೇ ಮಲೆ ಮಾದಪ್ಪನ ಸನ್ನಿಧಿ ಸಂಪೂರ್ಣ ಸ್ಥಬ್ದಗೊಂಡಿದೆ.

    ಭಕ್ತರಿಗೆ ವಿತರಿಸಲೆಂದು ಲಾಡುಗಳು ತಯಾರಾಗಿದ್ದವು. ಇದೀಗ ಎಲ್ಲಾ ದೇವಾಲಯಗಳಲ್ಲಿ ಭಕ್ತರಿಗೆ ನಿಷೇಧ ಹೇರಿರುವುದರಿಂದ ಲಾಡುಗಳು ಹಾಗೆಯೇ ಉಳಿದಿದೆ ಅಂತಾ ತಿಳಿದುಬಂದಿದೆ. ಮಹದೇಶ್ವರ ಬೆಟ್ಟದ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಸಿಎಂ ಇತ್ತ ಗಮನಹರಿಸಬೇಕಾಗಿದೆ. ಅಲ್ಲದೆ ಎಂಎಂ ಹಿಲ್ಸ್ ಪ್ರಾಧಿಕಾರದ ಜಯವಿಭವಸ್ವಾಮಿ ಸಿಎಂ ಜೊತೆಗೆ ಚರ್ಚಿಸಿ ಲಾಡು ವಿಲೇವಾರಿ ಹೇಗೆ ಮಾಡಬೇಕೆಂದು ನಿರ್ಧರಿಸಬೇಕಾಗಿದೆ.

    ಇಬ್ಬರ ಗಂಟಲು ದ್ರವ, ರಕ್ತ ಮಾದರಿ ಪರೀಕ್ಷೆಗೆ ರವಾನೆ:
    ಕೊರೊನಾ ಶಂಕೆ ಹಿನ್ನೆಲೆಯಲ್ಲಿ ಹೊರ ರಾಜ್ಯದಿಂದ ಬಂದ ಇಬ್ಬರು ಶಂಕಿತ ವ್ಯಕ್ತಿಗಳ ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಅವರಿಬ್ಬರು ಕೂಡ ಆರೋಗ್ಯವಾಗಿದ್ದಾರೆ. ಯಾವುದೇ ಸಮಸ್ಯೆಯಿಲ್ಲ. ಮುನ್ನೆಚ್ಚರಿಕೆಯ ದೃಷ್ಟಿಯಿಂದ ರಕ್ತ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಡಿಸಿ ಎಂ.ಆರ್ ರವಿ ತಿಳಿಸಿದ್ದಾರೆ.

    ಇತ್ತೀಚೆಗಷ್ಟೇ ಮೂವರ ರಕ್ತದ ಮಾದರಿ ಪರೀಕ್ಷೆ ವರದಿ ಬಂದಿದ್ದು ನೆಗೆಟಿವ್ ಎಂದು ತಿಳಿದುಬಂದಿದೆ. ನೆಗೆಟಿವ್ ಬಂದ ವ್ಯಕ್ತಿಗಳು 14 ದಿನದ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿರೋ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದೆ. ವಿದೇಶದಿಂದ ಬಂದ 12 ಮಂದಿ ಈಗಾಗಲೇ ಹೋಂ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ್ದು, 23 ಮಂದಿಗೆ ಹೋಮ್ ಕ್ವಾರಂಟೈನ್ ಮುಂದುವರಿದಿದೆ ಎಂದು ಡಿಸಿ ಎಂ.ಆರ್ ರವಿ ಮಾಹಿತಿ ನೀಡಿದ್ದಾರೆ.

  • ಜನತಾ ಕರ್ಫ್ಯೂಗೆ ಚಾಮರಾಜನಗರದಲ್ಲಿ ಬೆಂಬಲ- ಭಕ್ತರಿಲ್ಲದೆ ಬಿಕೋ ಎನ್ನುತ್ತಿದೆ ಮಾದಪ್ಪನ ಸನ್ನಿಧಿ

    ಜನತಾ ಕರ್ಫ್ಯೂಗೆ ಚಾಮರಾಜನಗರದಲ್ಲಿ ಬೆಂಬಲ- ಭಕ್ತರಿಲ್ಲದೆ ಬಿಕೋ ಎನ್ನುತ್ತಿದೆ ಮಾದಪ್ಪನ ಸನ್ನಿಧಿ

    ಚಾಮರಾಜನಗರ: ಕೊರೊನಾ ಹರಡುವುದನ್ನು ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂಗೆ ಗಡಿನಾಡು ಚಾಮರಾಜನಗರದಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಎಲ್ಲ ವರ್ಗದ ಜನತೆ ಬೆಂಬಲ ವ್ಯಕ್ತಪಡಿಸಿದ್ದು ಇಡೀ ಚಾಮರಾನಗರ ಬಹುತೇಕ ಸ್ತಬ್ಧವಾಗಿದೆ. ಅಂಗಡಿಮುಂಗಟ್ಟುಗಳು ಸಂಪೂರ್ಣವಾಗಿ ಬಂದ್ ಆಗಿವೆ. ಹೋಟೆಲ್ ಗಳು ಮುಚ್ಚಿವೆ. ಕೆ.ಎಸ್.ಆರ್.ಟಿ.ಸಿ ಹಾಗೂ ಖಾಸಗಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದ್ದು ಬಸ್ ಕೆಎಸ್‍ನಿಲ್ದಾಣ ಬಿಕೋ ಎನ್ನುತ್ತಿದೆ.

    ಇನ್ನೊಂದೆಡೆ ಚಾಮರಾಜನಗರದಿಂದ ಹೊರಡುವ ಎಲ್ಲಾ ಆರು ರೈಲುಗಳನ್ನು ರದ್ದುಪಡಿಸಲಾಗಿದ್ದು, ರೈಲು ನಿಲ್ದಾಣವೂ ಬಿಕೋ ಎನ್ನುತ್ತಿದೆ. ಆಟೋಗಳು ಸಹ ರಸ್ತೆಗಿಳಿದಿಲ್ಲ. ಎಪಿಎಂಸಿ ಮಾರುಕಟ್ಟೆಯಲ್ಲಿ ಕೂಡ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ಒಟ್ಟಾರೆ ಬಹುತೇಕ ಎಲ್ಲ ವರ್ಗದ ಜನತೆ ಜನತಾ ಕರ್ಫ್ಯೂಗೆ ಬೆಂಬಲ ವ್ಯಕ್ತಪಡಿಸುವ ಮೂಲಕ ಕೊರೊನಾ ಹರಡುವುದನ್ನು ತಡೆಗಟ್ಟುವುದಕ್ಕೆ ಸಹಕಾರ ನೀಡಿದ್ದಾರೆ.

    ಬಿಕೋ ಎನ್ನುತ್ತಿದೆ ಮಾದಪ್ಪನ ಸನ್ನಿಧಿ:
    ಜನತಾ ಕರ್ಫ್ಯೂ ಹಿನ್ನಲೆಯಲ್ಲಿ ಇತಿಹಾಸ ಪ್ರಸಿದ್ಧ ಮಲೆಮಹದೇಶ್ವರಬೆಟ್ಟ ಸಂಪೂರ್ಣ ಸ್ತಬ್ಧವಾಗಿದೆ. ಸದಾ ಸಾವಿರಾರು ಭಕ್ತರಿಂದ ತುಂಬಿ ತುಳುಕುತ್ತಿದ್ದ ಮಾದಪ್ಪನ ಸನ್ನಿಧಿ ಇಂದು ಭಕ್ತರಿಲ್ಲದೆ ಬಿಕೋ ಎನ್ನುತ್ತಿದೆ. ಮಲೆಮಹದೇಶ್ಚರನ ದರ್ಶನಕ್ಕೆ ರಾಜ್ಯದ ನಾನಾ ಮೂಲೆಗಳಿಂದ ಹಾಗೂ ನೆರೆಯ ತಮಿಳುನಾಡಿನಿಂದ ನಿತ್ಯ ಸಾವಿರಾರು ಭಕ್ತರು ಬರುತ್ತಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ ಕರೆನೀಡಿರುವ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಯಾವುದೇ ಭಕ್ತರು ಮಹದೇಶ್ವರ ಬೆಟ್ಟದತ್ತ ಸುಳಿದಿಲ್ಲ.

    ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹದೇಶ್ವರ ದೇವಾಲಯ ಬಂದ್ ಆಗಿದ್ದು ದೇವಾಲಯದ ಪ್ರಮುಖ ದ್ವಾರಗಳಿಗೆ ಬೀಗ ಹಾಕಲಾಗಿದೆ. ಜನತಾ ಕರ್ಫ್ಯೂಗೆ ಮಹದೇಶ್ವರನ ಬೆಟ್ಟದಲ್ಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

  • ಸ್ಟಾರ್, ಸೆಲೆಬ್ರಿಟಿ ಎಂಬ ಅಹಂ ಇಲ್ಲದ ವಿಜಿಯಣ್ಣ ಇರುವುದೇ ಹೀಗೆ: ನವೀನ್

    ಸ್ಟಾರ್, ಸೆಲೆಬ್ರಿಟಿ ಎಂಬ ಅಹಂ ಇಲ್ಲದ ವಿಜಿಯಣ್ಣ ಇರುವುದೇ ಹೀಗೆ: ನವೀನ್

    ಬೆಂಗಳೂರು: ನಟ ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿರುವ ‘ಸಲಗ’ ಸಿನಿಮಾ ಇದೇ ತಿಂಗಳು ತೆರೆಗೆ ಬರಲು ಸಿದ್ಧವಾಗಿದೆ. ಈ ವೇಳೆ ದುನಿಯಾ ವಿಜಿ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ, ದೇವರ ಆಶೀರ್ವಾದ ಪಡೆದುಕೊಂಡಿದ್ದಾರೆ.

    ಶುಕ್ರವಾರ ದುನಿಯಾ ವಿಜಿ ಪತ್ನಿ ಕೀರ್ತಿ ಮತ್ತು ಚಿತ್ರತಂಡದ ಜೊತೆ ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ್ದರು. ದುನಿಯಾ ವಿಜಿಗೆ ಗಾಯಕ ನವೀನ್ ಸಜ್ಜು ಕೂಡ ಸಾಥ್ ನೀಡಿದ್ದರು. ನಂತರ ದೇವರಿಗೆ ವಿಶೇಷವಾದ ಪೂಜೆ ಮಾಡಿಸಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಅಲ್ಲದೇ ಬೆಟ್ಟದಲ್ಲಿರುವ ಆನೆಗೆ ಹಣ್ಣು-ಹಂಪಲು ಕೊಟ್ಟು ಆಶೀರ್ವಾದ ಪಡೆದುಕೊಂಡಿದ್ದಾರೆ.

    ಇದೇ ವೇಳೆ ಅಭಿಮಾನಿಗಳು ಮುಗಿಬಿದ್ದಿದ್ದು, ಸೆಲ್ಫಿ ಕ್ಕಿಕ್ಕಿಸಿಕೊಂಡಿದ್ದಾರೆ. ನವೀಜ್ ಸಜ್ಜು, ದುನಿಯಾ ವಿಜಿ ಅವರ ಸರಳತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಬಗ್ಗೆ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ವಿಜಿ ಅವರ ಸರಳ ವ್ಯಕ್ತಿತ್ವದ ಬಗ್ಗೆ ಬರೆದುಕೊಂಡಿದ್ದಾರೆ.

    “ಸರಳತೆಯ ಸಲಗ, ಶುಕ್ರವಾರ ವಿಜಯಣ್ಣನೊಂದಿಗೆ ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದೆ. ಬೆಟ್ಟಕ್ಕೆ ಹೋಗುವ ಮಾರ್ಗಮಧ್ಯೆ ಸಿಕ್ಕ ಈ ಪುಟ್ಟ ಗುಡಿಸಲು ಹೋಟೆಲ್‍ಗೆ ಕರೆದೊಯ್ದ ವಿಜಿಯಣ್ಣ ಉಪಾಹಾರ ಕೊಡಿಸಿದ್ದರು. ಸ್ಟಾರ್, ಸೆಲೆಬ್ರಿಟಿ ಎಂಬ ಯಾವ ಅಹಂ ಇಲ್ಲದ ವಿಜಿಯಣ್ಣ ಇರುವುದೇ ಹೀಗೆ, ಬದುಕುತ್ತಿರುವುದು ಹೀಗೆ. ಇವರು ತುಂಬಾ ಸರಳವಾದ ವ್ಯಕ್ತಿ. ನಿನ್ನೆಯ ಜರ್ನಿ ಅದ್ಭುತವಾಗಿತ್ತು. ಮುಂದಿನ ಸಲಗ ಜರ್ನಿ ಕೂಡ ಯಶಸ್ವಿಯಾಗಿ ಇರಲೆಂದು ಮಾದೇಶ್ವರನಲ್ಲಿ ಬೇಡಿಕೊಳ್ಳುತ್ತೇನೆ” ಎಂದು ಪ್ರೀತಿ ಬರೆದುಕೊಂಡಿದ್ದಾರೆ.

    https://www.instagram.com/p/B9ZWv81hV8E/

    ದುನಿಯಾ ವಿಜಿ ನಟನೆಯ ‘ಸಲಗ’ ಚಿತ್ರಕ್ಕೆ ಸಿಂಗರ್ ನವೀನ್ ಸಜ್ಜು ಎರಡು ಹಾಡುಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿ ಹಾಡಿದ್ದಾರೆ. ಈಗಾಗಲೇ ರೆಕಾರ್ಡಿಂಗ್ ಮುಗಿಸಿದ ತಂಡ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಿ ಪೂಜೆ ಸಲ್ಲಿಸಿ ಬಂದಿದ್ದಾರೆ. ಇದು ದುನಿಯಾ ವಿಜಿ ನಿರ್ದೇಶನದ ಮೊದಲ ಚಿತ್ರ, ಸಿನಿಮಾದಲ್ಲಿ ನಟಿಯಾಗಿ ಸಂಜನಾ ಆನಂದ್ ಅಭಿನಯಿಸಿದ್ದಾರೆ. ಸದ್ಯದಲ್ಲೇ ಹಾಡು ರಿಲೀಸ್ ಆಗಲಿದೆ.

  • ಮಲೆ ಮಹದೇಶ್ವರ ಬೆಟ್ಟದ ಪ್ರಸಾದ ವಿತರಣೆಗೆ ತೀವ್ರ ಕಟ್ಟೆಚ್ಚರ

    ಮಲೆ ಮಹದೇಶ್ವರ ಬೆಟ್ಟದ ಪ್ರಸಾದ ವಿತರಣೆಗೆ ತೀವ್ರ ಕಟ್ಟೆಚ್ಚರ

    ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದ ಪ್ರಸಾದ ವಿತರಣೆ ಕುರಿತು ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಪ್ರಸಾದ ತಯಾರಿಸುವ ಅಡುಗೆ ಮನೆ, ಲಾಡು ತಯಾರಿಕಾ ಘಟಕ, ದಾಸೋಹ ಭವನದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

    ದೇಶವನ್ನೇ ಬೆಚ್ಚಿ ಬೀಳಿಸಿದ ಸುಳ್ವಾಡಿ ವಿಷ ಪ್ರಸಾದ ದುರಂತಕ್ಕೆ ಒಂದು ವರ್ಷ ತುಂಬುತ್ತಿರೋ ಬೆನ್ನಲ್ಲೇ ಸರ್ಕಾರ ಮುಜರಾಯಿ ಇಲಾಖೆಯಿಂದ ಆದೇಶ ಹೊರಡಿಸಲು ರೆಡಿಯಾಗಿದೆ. ಪ್ರಸಾದ ವಿತರಣೆಗೆ ಆರೋಗ್ಯ ಇಲಾಖೆಯಿಂದ ಅನುಮತಿ ಕಡ್ಡಾಯ ಮಾಡಲು ಹೊರಟಿದ್ದು, ಇದು ನಿಯಮ ಇತಿಹಾಸ ಪ್ರಸಿದ್ಧ ದೇವಾಲಯಗಳ ಪ್ರಸಾದ ವಿತರಣೆಗೂ ಅನ್ವಯವಾಗಲಿದೆ. ಈ ಆದೇಶ ಹಿನ್ನೆಲೆಯಲ್ಲಿ ದೇವಸ್ಥಾನ ಆಡಳಿತ ಮಂಡಳಿಯಿಂದ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಸುಳ್ವಾಡಿ ಪ್ರಕರಣದ ಆರೋಪಿಯ ಜಾಮೀನು ಅರ್ಜಿ ವಜಾ

    ಕಳೆದ ವರ್ಷ ಸಂಭವಿಸಿದ ಸುಳ್ವಾಡಿ ವಿಷ ಪ್ರಸಾದ ದುರಂತದ ಹಿನ್ನೆಲೆಯಲ್ಲಿ ಪ್ರಸಿದ್ಧ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಪ್ರಸಾದ ತಯಾರಿಸಿ, ವಿತರಿಸುವ ದಾಸೋಹ ಭವನ ಹಾಗೂ ಲಾಡು ತಯಾರಿಕಾ ಘಟಕಗಳಲ್ಲಿ 330 ಡಿಗ್ರಿಯ 36 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅಡುಗೆ ಮನೆಗೆ ಅಪರಿಚಿತರಿಗೆ ಪ್ರವೇಶ ನಿಷೇಧಿಸಲಾಗಿದ್ದು, ಖಾಯಂ ನೌಕರರಿಂದ ಮಾತ್ರ ಪ್ರಸಾದ ಹಾಗೂ ಲಾಡು ತಯಾರಿಸಲಾಗುತ್ತಿದೆ. ಪ್ರಸಾದ ತಯಾರಿಸುವ ಅಡುಗೆ ಮನೆ, ಲಾಡು ತಯಾರಿಕಾ ಘಟಕ ಹಾಗು ದಾಸೋಹ ಭವನದಲ್ಲಿ ಅಧೀಕ್ಷಕ ಮಟ್ಟದ ಅಧಿಕಾರಿಗಳಿಂದ ದಿನವಿಡೀ ಮೇಲ್ವಿಚಾರಣೆ ನಡೆಸಲಾಗುತ್ತಿದೆ.

    ಅಲ್ಲದೆ ತಯಾರಿಸಿದ ಪ್ರಸಾದದ ಸ್ಯಾಂಪಲ್‍ನ್ನು 24 ಗಂಟೆಗಳ ಕಾಲ ಸಂಗ್ರಹಿಸಿ ಇಡಲು ಕ್ರಮವಹಿಸಲಾಗಿದ್ದು, ಈ ಅವಧಿಯಲ್ಲಿ ಪ್ರಸಾದದಿಂದ ಭಕ್ತರ ಆರೋಗ್ಯದಲ್ಲಿ ವ್ಯತ್ಯಾಸವಾದರೆ ಪ್ರಸಾದವನ್ನು ಪರೀಕ್ಷೆಗೆ ಒಳಪಡಿಸಲು ಕ್ರಮ ಕೈಗೊಳ್ಳಲಾಗಿದೆ.

    ಸುಳ್ವಾಡಿ ವಿಷ ಪ್ರಸಾದ ದುರಂತದಲ್ಲಿ 17 ಮಂದಿ ಸಾವನ್ನಪ್ಪಿ, ಹಲವರು ವಿಷ ಪ್ರಸಾದ ಸೇವಿಸಿದರೂ ಅದೃಷ್ಟವಶಾತ್ ಬದುಕುಳಿದಿದ್ದಾರೆ. ಆದ್ದರಿಂದ ಪ್ರಸಾದ ನೀಡುವ ಸಮಯದಲ್ಲಿ ಮುಂಜಾಗ್ರತೆ ವಹಿಸುವುದು ಒಳ್ಳೆಯ ಬೆಳವಣಿಗೆ. ಇದರಿಂದ ಪ್ರಸಾದ ತಿನ್ನುವ ವೇಳೆ ಭಕ್ತರನ್ನು ಕಾಡುತ್ತಿದ್ದ ಭಯ ದೂರವಾಗಲಿದ್ದು, ಮಲೆ ಮಹದೇಶ್ವರ ಪ್ರಾಧಿಕಾರ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.

    ಒಟ್ಟಿನಲ್ಲಿ ಸುಳ್ವಾಡಿ ವಿಷ ಪ್ರಸಾದ ದುರಂತದ ನಂತರ ದೇವಾಲಯದಲ್ಲಿ ಪ್ರಸಾದ ತಿನ್ನೊದಕ್ಕೂ ಕೂಡ ಭಕ್ತರು ಬೆಚ್ಚಿ ಬೀಳುತ್ತಿದ್ದರು. ಆದರೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಪ್ರಸಾದ ವಿತರಣೆಗೆ ಮುಂಜಾಗ್ರತೆ ವಹಿಸಿರುವ ನಡೆ ಎಲ್ಲರ ಮನ ಗೆದ್ದಿದೆ.

  • ಮಾದಪ್ಪನ ಬೆಟ್ಟದಲ್ಲಿ ಹಾಲರುವೆ ಉತ್ಸವದ ಸಂಭ್ರಮ- ಇದರ ವಿಶೇಷ, ಹಿನ್ನೆಲೆಯೇನು?

    ಮಾದಪ್ಪನ ಬೆಟ್ಟದಲ್ಲಿ ಹಾಲರುವೆ ಉತ್ಸವದ ಸಂಭ್ರಮ- ಇದರ ವಿಶೇಷ, ಹಿನ್ನೆಲೆಯೇನು?

    ಚಾಮರಾಜನಗರ: ದಕ್ಷಿಣ ಭಾರತದ ಪ್ರಮುಖ ಯಾತ್ರಾಸ್ಥಳ ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಅಂಗವಾಗಿ ಹಾಲರುವೆ ಉತ್ಸವ ನಡೆಯಿತು.

    ಬೇಡಗಂಪಣ ಜನಾಂಗಕ್ಕೆ ಸೇರಿದ 101 ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳು 9 ಕಿ.ಮೀ ದೂರದ ಹಾಲರೆ ಹಳ್ಳದಿಂದ ಬಲಿಗಾಲಲ್ಲಿ ನೀರು ಹೊತ್ತು ತಂದು ಮಾದಪ್ಪನಿಗೆ ಅಭಿಷೇಕ ಮಾಡುವುದು ಹಾಲರುವೆ ಉತ್ಸವದ ವಿಶೇಷವಾಗಿದೆ.

    ಮಲೆಮಹದೇಶ್ವರ ಬೆಟ್ಟದಲ್ಲಿ ಪ್ರತಿ ವರ್ಷ ಮೂರು ದಿನಗಳ ಕಾಲ ದೀಪಾವಳಿ ಜಾತ್ರೆ ನಡೆಯುತ್ತದೆ. ಮಾದಪ್ಪನಿಗೆ ಎಣ್ಣೆಮಜ್ಜನಸೇವೆ, ಹಾಲರವೆ ಉತ್ಸವ ಮೂರನೇ ದಿನ ರಥೋತ್ಸವ ನಡೆಯುವುದು ಇಲ್ಲಿನ ವಿಶೇಷ. ಅದರಲ್ಲೂ ಎರಡನೇ ದಿನ ನಡೆಯುವ ಹಾಲರುವೆ ಉತ್ಸವ ವಿಭಿನ್ನ ಹಾಗೂ ವಿಶೇಷ ರೀತಿಯಲ್ಲಿ ನಡೆಯುತ್ತದೆ.

    ಮಹದೇಶ್ವರ ದೇವಸ್ಥಾನಕ್ಕೆ 9 ಕಿ.ಮೀ ದೂರದಲ್ಲಿ ಬೆಟ್ಟಗುಡ್ಡಗಳ ನಡುವೆ ಒಂದು ಹಳ್ಳ ಹರಿಯುತ್ತದೆ. ಮಹದೇಶ್ವರರು ಇಲ್ಲಿ ಕಾರಯ್ಯ ಬಿಲ್ಲಯ್ಯ ಎಂಬ ಬೇಟೆಗಾರರು ತಂದುಕೊಟ್ಟ ಕಾಡೆಮ್ಮೆ ಹಾಲನ್ನು ಆಕಸ್ಮಿಕವಾಗಿ ಚೆಲ್ಲಿದರು ಎಂಬ ಐತಿಹ್ಯವಿದೆ. ಈ ಹಳ್ಳದ ನೀರು ಹಾಲಿನಂತೆ ಬೆಳ್ಳಗೆ ಇರುವ ಕಾರಣ ಇದಕ್ಕೆ ಹಾಲಹಳ್ಳ ಎಂಬ ಹೆಸರು ಬಂದಿದೆ.

    ದೀಪಾವಳಿ ಜಾತ್ರೆಯ ಎರಡನೇ ದಿನ ಬೇಡಗಂಪಣ ಜನಾಂಗದ ಹನ್ನೊಂದು ವರ್ಷದೊಳಗಿನ 101 ಹೆಣ್ಣುಮಕ್ಕಳು ಉಪವಾಸವಿದ್ದು ಹಾಲಹಳ್ಳಕ್ಕೆ ಬಂದು ಸ್ನಾನ ಮಾಡಿ ಹಳ್ಳದಲ್ಲಿ ಹರಿಯುವ ನೀರು ಹೊತ್ತು ತರುತ್ತಾರೆ. ಬರಿಗಾಲಲ್ಲಿ 9 ಕಿ.ಮೀ ಬೆಟ್ಟಗುಡ್ಡ ಹತ್ತಿ ಬರುವ ಇವರನ್ನು ಸತ್ತಿಗೆ ಸೂರಿಪಾನಿ, ಮಂಗಳವಾದ್ಯ ಸಮೇತ ದೇವಸ್ಥಾನಕ್ಕೆ ಕರೆದೊಯ್ಯಲಾಗುತ್ತದೆ ಎಂದು ಪ್ರಧಾನ ಅರ್ಚಕ ಕೆ. ಮಹದೇಶ್ ಹೇಳುತ್ತಾರೆ.

    ಬೇಡಗಂಪಣ ಬಾಲೆಯರಿಂದ 101 ಕುಂಭದಲ್ಲಿ ತಂದ ನೀರನ್ನು ಮಹದೇಶ್ವರನಿಗೆ ಅಭಿಷೇಕ ಮಾಡಲಾಗುತ್ತದೆ. ಬಳಿಕ ಅಭಿಷೇಕದ ನೀರನ್ನು ಭಕ್ತರಿಗೆ ತೀರ್ಥ ರೂಪದಲ್ಲಿ ನೀಡಲಾಗುತ್ತದೆ. ಈ ತೀರ್ಥ ಸ್ವೀಕರಿಸಲು ಸಾವಿರಾರು ಭಕ್ತರು ಸಾಲುಗಟ್ಟಿ ನಿಂತಿರುತ್ತಾರೆ.

    ಮಕ್ಕಳಿಗೆ ಕುಡಿಸಲು ಎದೆ ಹಾಲು ಬಾರದ ತಾಯಂದಿರು ಹರಕೆ ಹೊತ್ತು ಹಾಲರುವೆ ಅಭಿಷೇಕದ ತೀರ್ಥ ಸೇವಿಸಿದರೆ ಹಾಲು ಬರುತ್ತೆ ಎಂಬ ನಂಬಿಕೆಯೂ ಇದೆ. ಹೀಗಾಗಿ ಅಂತಹ ತಾಯಂದಿರು ಸಹ ಹಾಲರುವೆ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಒಟ್ಟಾರೆ ಏಳು ಮಲೆ ಒಡೆಯನಿಗೆ ದೀಪಾವಳಿಯಲ್ಲಿ ಎಲ್ಲ ಅಭಿಷೇಕಗಳಿಗಿಂತ ಹಾಲರುವೆ ಅಭಿಷೇಕ ವಿಶೇಷವಾದುದ್ದಾಗಿದೆ.

  • ಮಳೆಯ ಅಬ್ಬರಕ್ಕೆ ಮಲೆ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ಕುಸಿತ

    ಮಳೆಯ ಅಬ್ಬರಕ್ಕೆ ಮಲೆ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ಕುಸಿತ

    ಚಾಮರಾಜನಗರ: ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಅವಾಂತರವನ್ನೇ ಸೃಷ್ಟಿಸಿದೆ. ವಿಪರೀತ ಮಳೆಯಿಂದಾಗಿ ಭೂ ಕುಸಿತ ಸಂಭವಿಸುತ್ತಿದ್ದು, ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿಯೂ ಸಹ ರಸ್ತೆ ಕುಸಿದ ಪರಿಣಾಮ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

    ಹನೂರು ತಾಲೂಕಿನ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ಕುಸಿತ ಸಂಭವಿಸಿದೆ. ಮಲೆಮಹದೇಶ್ವರ ಬೆಟ್ಟದ ಪಾಲಾರ್ ಮಾರ್ಗದಲ್ಲಿ ಮೂರು ಕಡೆ ರಸ್ತೆ ಕುಸಿತವಾಗಿದೆ. ರಸ್ತೆ ಕುಸಿತದ ಪರಿಣಾಮ ಬೆಳಗ್ಗೆಯಿಂದಲೇ ಭಾರೀ ವಾಹನಗಳು ಹಾಗೂ ಅಂತರರಾಜ್ಯ ಸಂಪರ್ಕಿಸುವ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

    ಮಲೆ ಮಹದೇಶ್ವರ ಬೆಟ್ಟದಿಂದ ಹೋಗೆನಕಲ್ ಫಾಲ್ಸ್ ಗೆ ಸಂಪರ್ಕ ಕಲ್ಪಿಸುವ ಕೆಲ ರಸ್ತೆಗಳಲ್ಲೂ ಗುಡ್ಡ ಕುಸಿತ ಉಂಟಾಗಿದ್ದು, ಜೆಸಿಬಿಯಿಂದ ಮಣ್ಣು ತೆಗೆಯುವ ಕೆಲಸ ಆರಂಭವಾಗಿದೆ. ಹೀಗಾಗಿ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ.

    ಮಳೆಯ ಅಬ್ಬರಕ್ಕೆ ನಾಡದೇವತೆ ಚಾಮುಂಡಿ ದರ್ಶನಕ್ಕೆ ಹೋಗುವ ಚಾಮುಂಡಿ ಬೆಟ್ಟದಲ್ಲೂ ಭೂ ಕುಸಿತವಾಗಿದೆ. ಚಾಮುಂಡಿ ಬೆಟ್ಟದ ವ್ಯೂವ್ ಪಾಯಿಂಟ್ ಬಳಿಯಲ್ಲಿ ಭೂಮಿ ಕುಸಿದಿದ್ದರಿಂದ ರಸ್ತೆಯೂ ಕುಸಿತವಾಗಿದೆ. ನಂದಿ ವಿಗ್ರಹದ ಕಡೆಗೆ ಸಾಗುವ ಮಾರ್ಗದ ಸನಿಹದಲ್ಲಿಯೇ ಈ ವ್ಯೂವ್ ಪಾಯಿಂಟ್ ಇದೆ. ಸ್ಥಳಕ್ಕೆ ಅಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಿದ್ದಾರೆ.

    ಇತ್ತ ಮಳೆಯಬ್ಬರಕ್ಕೆ ಗೋಕಾಕ್ ಫಾಲ್ಸ್ ಬಳಿ ಇರುವ ಗುಡ್ಡ ಮತ್ತೆ ಕುಸಿಯುತ್ತಿದ್ದು, ರಸ್ತೆಗೆ ಬೃಹತ್ ಗಾತ್ರದ ಕಲ್ಲುಗಳು ಉರುಳಿ ಬಿದ್ದಿವೆ. ಬೆಳಗಾವಿ-ಗೋಕಾಕ್ ಸಂಪರ್ಕಿಸುವ ರಸ್ತೆಯಲ್ಲಿ ವಾಹನ ಸವಾರರು ಆತಂಕದಲ್ಲೇ ಓಡಾಡುತ್ತಿದ್ದಾರೆ. ಉರುಳಿ ಬಿದ್ದಿರುವ ಬಂಡೆಗಲ್ಲುಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಬೆಳಗ್ಗೆ 7 ಗಂಟೆಯಿಂದ ಮತ್ತೆ ಆರಂಭವಾಗಿದೆ. ಉರುಳಿರುವ ಎರಡು ಬೃಹತ್ ಬಂಡೆಗಳನ್ನು ಮೊದಲು ಬ್ಲಾಸ್ಟ್ ಮಾಡಿ ಅವುಗಳನ್ನು ಅಲ್ಲಿಂದ ಸಾಗಿಸಲಾಗುತ್ತದೆ.

  • ಲಘು ಹೃದಯಾಘಾತವಾಗಿ ರಸ್ತೆಯಲ್ಲಿ ಬಿದ್ದಿದ್ದ ಮಹಿಳೆಗೆ ನೆರವಾದ ಶ್ರೀರಾಮುಲು

    ಲಘು ಹೃದಯಾಘಾತವಾಗಿ ರಸ್ತೆಯಲ್ಲಿ ಬಿದ್ದಿದ್ದ ಮಹಿಳೆಗೆ ನೆರವಾದ ಶ್ರೀರಾಮುಲು

    ಚಾಮರಾಜನಗರ: ಲಘು ಹೃದಯಾಘಾತವಾಗಿ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ಮಹಿಳೆಯನ್ನು ಕಂಡ ಆರೋಗ್ಯ ಸಚಿವ ಶ್ರೀರಾಮುಲು ಅವರು, ತಮ್ಮ ಕಾರಿನಲ್ಲೇ ಮಹಿಳೆಯನ್ನು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಿ ಮಾನವೀಯತೆ ಮರೆದಿದ್ದಾರೆ.

    ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗುವ ದಾರಿಯಲ್ಲಿ ಮಹಿಳೆಯೊಬ್ಬರಿಗೆ ಲಘು ಹೃದಯಾಘಾತವಾಗಿ ರಸ್ತೆ ಮಧ್ಯೆಯಲ್ಲಿ ಬಿದ್ದು ಒದ್ದಾಡುತ್ತಿದ್ದರು. ಇದೇ ಮಾರ್ಗದಲ್ಲಿ ಶ್ರೀರಾಮುಲು ಅವರು ಕೂಡ ಮಲೆ ಮಹದೇಶ್ವರನ ಬೆಟ್ಟಕ್ಕೆಂದು ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ಒದ್ದಾಡುತ್ತಿದ್ದ ಮಹಿಳೆಯನ್ನು ಕಂಡ ಸಚಿವರು ಸಹಾಯ ಹಸ್ತ ಚಾಚಿದ್ದಾರೆ. ತಮ್ಮ ಕಾರಿನಲ್ಲೇ ಮಹಿಳೆಯನ್ನು ಪ್ರಾರ್ಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ, ಚಿಕಿತ್ಸೆ ಕೊಡಿಸಿ ಜೀವ ಉಳಿಸಿದ್ದಾರೆ.

    ಈಗಾಗಲೇ ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಇರುವ ಸಮಸ್ಯೆ, ಕುಂದುಕೊರತೆಗಳನ್ನು ಅರಿಯಲು ಸ್ವತಃ ಶ್ರೀರಾಮುಲು ಅವರು ಆಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ರೋಗಿಗಳ ಸಮಸ್ಯೆಗಳನ್ನು ಹತ್ತಿರದಿಂದ ತಿಳಿಯಲು ಶ್ರೀರಾಮುಲು ಆಸ್ಪತ್ರೆಯಲ್ಲಿ ತಂಗಿದ್ದಾರೆ. ಬೆಳಗ್ಗೆ ಎದ್ದು ಆಸ್ಪತ್ರೆಯ ಶೌಚಾಲಯದಲ್ಲೇ ಸ್ನಾನ ಮುಗಿಸಿ, ತಾವು ಉಳಿದಿದ್ದ ಕೊಠಡಿಯಲ್ಲೇ ಸಚಿವರು ಶಿವಪೂಜೆ ನೆರವೇರಿಸಿದ್ದರು.

    ಪೂಜೆಯ ಬಳಿಕ ಆಸ್ಪತ್ರೆ ಆವರಣದಲ್ಲಿ ಶ್ರೀರಾಮುಲು ಅವರು ಸಿಬ್ಬಂದಿ ಜೊತೆ ಕುಂದುಕೊರತೆ ಸಭೆ ನಡೆಸಿದ್ದು, ಶುಶ್ರೂಷಕರ ಡಿ ದರ್ಜೆ ನೌಕರರ ಸಮಸ್ಯೆಗಳನ್ನು ಆಲಿಸಿದರು. ಜೊತೆಗೆ ಸೇವಾಭದ್ರತೆ, ಸಂಬಳದ ಕೊರತೆ ಬಗ್ಗೆ ಸಚಿವರಲ್ಲಿ ಶುಶ್ರೂಷಕಿಯರು ಮನವಿ ಮಾಡಿದ್ದರು.

    ಆಸ್ಪತ್ರೆಯ ಸಮಸ್ಯೆ, ಸಿಬ್ಬಂದಿ ಸಮಸ್ಯೆಗಳನ್ನು ಆಲಿಸಿದ ಸಚಿವರು, ಕೇಂದ್ರ ಸರ್ಕಾರದ ನೂತನ ಯೋಜನೆ ಬಗ್ಗೆ ತಿಳಿಸಿ ಸಂಬಳ ಹೆಚ್ಚಿಸುವ ಬಗ್ಗೆ ಭರವಸೆ ನೀಡಿದರು. ಶ್ರೀರಾಮುಲು ಅವರ ಈ ಪ್ರಯತ್ನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಸ್ವತಃ ಸಚಿವರೇ ಹೀಗೆ ಸಮಸ್ಯೆಗಳನ್ನು ಕಣ್ಣಾರೆ ಕಂಡು ಪರಿಹಾರ ನೀಡುವುದು ಒಂದೊಳ್ಳೆ ಪ್ರಯತ್ನ ಎಂದು ಶ್ಲಾಘಿಸಿದ್ದಾರೆ. ಈಗ ಕಷ್ಟದಲ್ಲಿದ್ದ ಮಹಿಳೆಗೆ ಸಹಾಯ ಮಾಡುವ ಮೂಲಕ ಶ್ರೀರಾಮುಲು ಅವರು ಮನ ಗೆದ್ದಿದ್ದಾರೆ.

  • ಮಲೆ ಮಹದೇಶ್ವರಸ್ವಾಮಿ ಹುಂಡಿ ಎಣಿಕೆ – 1.14 ಕೋಟಿ ಹಣ ಸಂಗ್ರಹ

    ಮಲೆ ಮಹದೇಶ್ವರಸ್ವಾಮಿ ಹುಂಡಿ ಎಣಿಕೆ – 1.14 ಕೋಟಿ ಹಣ ಸಂಗ್ರಹ

    ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಐತಿಹಾಸಿಕ ಮಲೆ ಮಹದೇಶ್ವರ ದೇವಾಲಯದ ಹುಂಡಿ ಎಣಿಕೆ ಕಾರ್ಯ ಮುಗಿದಿದ್ದು, 1 ಕೋಟಿ 14 ಲಕ್ಷ ರೂ. ಹಣ ಸಂಗ್ರಹವಾಗಿದೆ.

    ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಕೆ.ಎಂ ಗಾಯತ್ರಿ ಮತ್ತು ಶ್ರೀ ಸಾಲೂರು ಬೃಹನ್ಮಠದ ಶ್ರೀ ಶ್ರೀ ಪಟ್ಟದ ಗುರುಸ್ವಾಮಿಗಳವರ ಸಮ್ಮುಖದಲ್ಲಿ ನೂರಾರು ಸಿಬ್ಬಂದಿಗಳು ದೇವಾಲಯದ ಹುಂಡಿಯಲ್ಲಿದ್ದ ಹಣವನ್ನು ಎಣಿಸುವ ಕಾರ್ಯವನ್ನು ನಡೆಸಿದ್ದರು.

    ಮಹದೇಶ್ವರಸ್ವಾಮಿ ದೇವಾಲಯದಲ್ಲಿ ಪ್ರತಿ ತಿಂಗಳಿಗೊಮ್ಮೆ ಹುಂಡಿ ಎಣಿಕೆ ಕಾರ್ಯ ನಡೆಯುತ್ತಿದೆ. ಆಗಸ್ಟ್ ತಿಂಗಳ ಹುಂಡಿ ಎಣಿಕೆ ಕಾರ್ಯದಲ್ಲಿ 1 ಕೋಟಿ 14 ಲಕ್ಷ ರೂಪಾಯಿ ನಗದು ಹಣ ಸಿಕ್ಕಿದೆ. ಹಣ ಮಾತ್ರವಲ್ಲದೇ 31 ಗ್ರಾಂ ಚಿನ್ನ ಮತ್ತು 600 ಗ್ರಾಂ ಬೆಳ್ಳಿ ವಸ್ತುಗಳು ಸಿಕ್ಕಿವೆ. ಇದೇ ತಿಂಗಳಿನಲ್ಲಿ ಶ್ರಾವಣ ಇದ್ದ ಕಾರಣ ದೇವಾಲಯಕ್ಕೆ ಅಪಾರ ಭಕ್ತರು ಆಗಮಿಸಿದ್ದರು. ಆದ್ದರಿಂದ ದೊಡ್ಡ ಮೊತ್ತದ ಹಣವು ಹುಂಡಿಯಲ್ಲಿ ಸಂಗ್ರಹವಾಗಿದೆ.

    ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಸಭೆ ವೇಳೆ ಅಧಿಕಾರಿಯೊಬ್ಬರು ಮಹದೇಶ್ವರ ಬೆಟ್ಟದಲ್ಲಿ ಒಂದು ಬೆಳ್ಳಿ ರಥವನ್ನು ನಿರ್ಮಾಣ ಮಾಡುವ ಪ್ರಸ್ತಾಪ ಮಾಡಿದ್ದರು. ಇದಕ್ಕಾಗಿ ನಮಗೆ 400 ಕೆಜಿ ಬೆಳ್ಳಿ ಬೇಕು. ಭಕ್ತರಿಂದ ನಮಗೆ ಈಗಾಗಲೇ 800 ಕೆಜಿ ಬೆಳ್ಳಿ ಸಂಗ್ರಹವಾಗಿದೆ. ರಥ ತಯಾರಿಸುವ ಪ್ರಕ್ರಿಯೆ ಆರಂಭಿಸಬೇಕು ಎಂದು ತಿಳಿಸಿದ್ದರು. ಈ ವೇಳೆ ಸಿದ್ದರಾಮಯ್ಯ ಅವರು ನನ್ನ ಬಳಿಯೂ ಸಾಕಷ್ಟು ಬೆಳ್ಳಿ ಇದೆ. ಕಾರ್ಯಕ್ರಮಗಳಲ್ಲಿ ಕೊಟ್ಟ ಬೆಳ್ಳಿ ಗದೆ, ಕಿರೀಟ ಇತ್ಯಾದಿ ಬೆಳ್ಳಿ ಉಡುಗೊರೆಗಳು ಇವೆ. ಅವುಗಳನ್ನು ರಥ ನಿರ್ಮಾಣಕ್ಕೆ ನಾನು ನೀಡುತ್ತೇನೆ ಎಂದು ಅಧಿಕಾರಿಗಳಿಗೆ ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಲೆಮಹದೇಶ್ವರ ಬೆಟ್ಟಕ್ಕೆ ಹೋಗೋರು ಹುಷಾರ್- ಕಲ್ಯಾಣಿ ಸೇರ್ತಿದೆ ಮೋರಿ, ಶೌಚಾಲಯದ ನೀರು!

    ಮಲೆಮಹದೇಶ್ವರ ಬೆಟ್ಟಕ್ಕೆ ಹೋಗೋರು ಹುಷಾರ್- ಕಲ್ಯಾಣಿ ಸೇರ್ತಿದೆ ಮೋರಿ, ಶೌಚಾಲಯದ ನೀರು!

    ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟಕ್ಕೆ ಹೋಗೋ ಭಕ್ತರು ಇನ್ಮುಂದೆ ಸ್ವಲ್ಪ ಹುಷಾರಾಗಿರಬೇಕು. ಯಾಕಂದ್ರೆ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಕಲ್ಯಾಣಿಯ ನೀರು ಮಲಿನಗೊಂಡಿದೆ.

    ಮೋರಿ ನೀರು ಹಾಗೂ ಶೌಚಾಲಯದ ನೀರು ಸೇರಿ ಕಲ್ಯಾಣಿಯ ಶುದ್ಧ ನೀರು ಕೊಳತು ನಾರುತ್ತಿದೆ. ಇದೇ ಕಲ್ಯಾಣಿಯಲ್ಲಿ ವರ್ಷಕ್ಕೆ ನಾಲ್ಕು ಬಾರಿ ಮಹದೇಶ್ವರನ ಉತ್ಸವ ಮೂರ್ತಿಯನ್ನು ಇಟ್ಟು ತೆಪ್ಪೋತ್ಸವ ಮಾಡಲಾಗುತ್ತೆ.

    ಕಲ್ಯಾಣಿ ಮಾತ್ರವಲ್ಲದೆ ಕುಡಿಯುವ ನೀರಿನ ಕೊಳಕ್ಕೂ ಶೌಚಾಲಯದ ನೀರು ಸೇರುತ್ತಿದ್ದು, ಭಕ್ತರು ಇದೇ ನೀರನ್ನು ಕುಡಿಯಬೇಕಾಗಿದೆ. ರಾಜ್ಯದಲ್ಲಿ ಅತೀ ಹೆಚ್ಚು ಆದಾಯ ತರುವ 2ನೇ ದೇಗುಲ ಇದಾಗಿದ್ದು, ಭಕ್ತರಿಗೆ ಕನಿಷ್ಠ ಸೌಲಭ್ಯ ನೀಡುವಲ್ಲಿ ಪ್ರಾಧಿಕಾರ ವಿಫಲವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.