Tag: ಮಲೆ ಮಹದೇಶ್ವರ ಬೆಟ್ಟ

  • ಕೊರೊನಾ ಕಾಲದಲ್ಲೂ ಮಾದಪ್ಪನಿಗೆ ಹಣದ ಹೊಳೆ – 47 ದಿನದಲ್ಲಿ 2.33 ಕೋಟಿ ಸಂಗ್ರಹ

    ಕೊರೊನಾ ಕಾಲದಲ್ಲೂ ಮಾದಪ್ಪನಿಗೆ ಹಣದ ಹೊಳೆ – 47 ದಿನದಲ್ಲಿ 2.33 ಕೋಟಿ ಸಂಗ್ರಹ

    ಚಾಮರಾಜನಗರ: ರಾಜ್ಯದ ಪ್ರಮುಖ ದೇಗುಲಗಳಲ್ಲಿ ಒಂದಾದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ ನಡೆದಿದ್ದು, ಬರೋಬ್ಬರಿ 2.33 ಕೋಟಿ ಸಂಗ್ರಹವಾಗಿದೆ.

    122 ದಿನಗಳ ಬಳಿಕ ಹುಂಡಿ ಎಣಿಕೆ ಕಾರ್ಯ ನಡೆದರೂ ಕೊರೊನಾ ಲಾಕ್ ಡೌನ್ ಪರಿಣಾಮ 75 ದಿನ ಭಕ್ತರಿಗೆ ದೇವಾಲಯ ಬಂದ್ದಾಗಿದ್ದರಿಂದ ಕೇವಲ 47 ದಿನಗಳಲ್ಲಿ 2,33,57,28 ಕೋಟಿ ರೂ. ಸಂಗ್ರಹವಾಗಿದ್ದು ಭಕ್ತಾದಿಗಳು ಮಾದಪ್ಪನಿಗೆ ಹಣದ ರೂಪದಲ್ಲಿ ಭಕ್ತಿಯ ಹೊಳೆಯನ್ನೇ ಹರಿಸಿದ್ದಾರೆ. ಇಷ್ಟೇ ಅಲ್ಲದೇ ಹುಂಡಿಯಲ್ಲಿ 150 ಗ್ರಾಂ ಚಿನ್ನ, 2.2 ಕೆಜಿ ಬೆಳ್ಳಿಯನ್ನು ಭಕ್ತರು ದೇವರಿಗೆ ಅರ್ಪಿಸಿದ್ದಾರೆ.

    ಇಂದಿನಿಂದ ದಾಸೋಹ ವ್ಯವಸ್ಥೆ: ಮಹಾಮಾರಿ ಕರಿ ಛಾಯೆ ಮಲೆಮಹದೇಶ್ವರ ಬೆಟ್ಟದಲ್ಲಿ ಸ್ಥಗಿತಗೊಂಡಿದ್ದ ದಾಸೋಹ ವ್ಯವಸ್ಥೆ ಇಂದಿನಿಂದ ಪ್ರಾರಂಭವಾಗಲಿದೆ. ಆದರೆ ಲಾಡು ವಿತರಣೆ, ವಿಶೇಷ ಸೇವೆಗಳು, ಮುಡಿ ಸೇವೆಗಳಿಗೆ ನಿರ್ಬಂಧ ಹೇರಲಾಗಿದೆ. ಇದನ್ನೂ ಓದಿ:  ಬಿಎಸ್‍ವೈ ರಾಜೀನಾಮೆ ನೀಡಿದ್ರೆ ಬಿಜೆಪಿಯಿಂದ ಲಿಂಗಾಯತ ಸಮುದಾಯ ದೂರಾಗುತ್ತೆ: ಸಿದ್ದಲಿಂಗ ಸ್ವಾಮೀಜಿ

  • ಲಾಕ್‍ಡೌನ್ ಎಫೆಕ್ಟ್- ಮಾದಪ್ಪನ ಬೆಟ್ಟದ 189 ಸಿಬ್ಬಂದಿ ಸೇವೆಗೆ ಬ್ರೇಕ್

    ಲಾಕ್‍ಡೌನ್ ಎಫೆಕ್ಟ್- ಮಾದಪ್ಪನ ಬೆಟ್ಟದ 189 ಸಿಬ್ಬಂದಿ ಸೇವೆಗೆ ಬ್ರೇಕ್

    ಚಾಮರಾಜನಗರ: ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ 189 ಜನ ಸಿಬ್ಬಂದಿ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

     

    ಲಾಕ್‍ಡೌನ್ ನಿಂದಾಗಿ ನಿರೀಕ್ಷಿತ ಆದಾಯ ಬರದಿರುವುದರಿಂದ ಬೆಟ್ಟದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ದಾಸೋಹ ವಿಭಾಗ, ಸ್ವಚ್ಛತೆ, ಲಾಡು ತಯಾರಿಕಾ ವಿಭಾಗ, ಸೆಕ್ಯೂರಿಟಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ 189 ನೌಕರರನ್ನು ಜೂನ್ 4 ರಿಂದಲೇ ಪೂರ್ವಾನ್ವಯವಾಗುವಂತೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಆದೇಶಿಸಿದ್ದಾರೆ.

    ದೇವಾಲಯಕ್ಕೆ ಭಕ್ತಾದಿಗಳ ಪ್ರವೇಶ, ವಿವಿಧ ಸೇವೆಗಳಿಗೆ ಆಗಿಂದಾಗ್ಗೆ ನಿಷೇಧ ಹೇರುತ್ತಿರುವ ಹಿನ್ನೆಲೆಯಲ್ಲಿ ಹಾಗೂ ದಾಸೋಹ ಸೇವೆಯೂ ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾಗುವ ಸಾಧ್ಯತೆಗಳಿಲ್ಲದಿರುವುದರಿಂದ, ಲಾಡು ಮಾರಾಟ ಸಹ ಗಣನೀಯ ಸಂಖ್ಯೆಯಲ್ಲಿ ಕಡಿಮೆಯಾಗಿರುವುದರಿಂದ ಆದಾಯ ಕುಸಿದಿದೆ. ಧಾರ್ಮಿಕ ದತ್ತಿ ಇಲಾಖೆಯ ಕಾಯ್ದೆಯನ್ವಯ ದೇವಾಲಯದ ಆದಾಯದಲ್ಲಿ ಶೇ.35ರಷ್ಟು ಭಾಗವನ್ನು ಮಾತ್ರ ಬಳಸಿಕೊಳ್ಳಲು ಅವಕಾಶವಿದ್ದು, ಇದರಿಂದಾಗಿ ಖಾಯಂ ನೌಕರರಿಗೆ ಸಂಬಳ ಪಾವತಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ದೇವಾಲಯ ಸಂಪೂರ್ಣವಾಗಿ ತೆರೆಯುವ ವರೆಗೆ 189 ನೌಕರರನ್ನು ಸೇವೆಯಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಕೋವಿಡ್ ಕರ್ತವ್ಯಕ್ಕಾಗಿ ನಿಯೋಜಿಸಲ್ಪಟ್ಟಿದ್ದ ನೌಕರರ ಪೈಕಿ 26 ಮಂದಿ ಸೇವೆಗೆ ಹಾಜರಾಗಿರಲಿಲ್ಲ. ಇವರ ಸೇವೆಯನ್ನು ಸಹ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

  • ಮಲೆ ಮಹದೇಶ್ವರ ಬೆಟ್ಟ, ಗೋಪಿನಾಥಂಗೆ ಸುರೇಶ್‍ಕುಮಾರ್ ಭೇಟಿ – ಕೋವಿಡ್ ನಿಯಂತ್ರಣ ಕ್ರಮಗಳ ಪರಿಶೀಲನೆ

    ಮಲೆ ಮಹದೇಶ್ವರ ಬೆಟ್ಟ, ಗೋಪಿನಾಥಂಗೆ ಸುರೇಶ್‍ಕುಮಾರ್ ಭೇಟಿ – ಕೋವಿಡ್ ನಿಯಂತ್ರಣ ಕ್ರಮಗಳ ಪರಿಶೀಲನೆ

    ಚಾಮರಾಜನಗರ: ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಸುರೇಶ್‍ಕುಮಾರ್ ಅವರು ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಹಾಗೂ ಗೋಪಿನಾಥಂಗೆ ಇಂದು ಭೇಟಿ ನೀಡಿ ಆ ಭಾಗದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿದರು.

    ಮಲೆ ಮಹದೇಶ್ವರ ಬೆಟ್ಟದ ನಾಗಮಲೆ ಭವನದಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ವಿವಿಧ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವರು ಮಲೆ ಮಹದೇಶ್ವರ ಬೆಟ್ಟ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಕೋವಿಡ್ ವ್ಯಾಪಕವಾಗಿ ಹಬ್ಬುತ್ತಿರುವ ಕುರಿತಂತೆ ಕಳವಳ ವ್ಯಕ್ತಪಡಿಸಿ, ಅಧಿಕಾರಿಗಳು ಹೆಚ್ಚಿನ ಬದ್ಧತೆಯಿಂದ ಕೆಲಸ ಮಾಡಬೇಕೆಂದು ತಾಕೀತು ಮಾಡಿದರು.

    ಕೊರೊನಾ ಮೊದಲನೆ ಅಲೆಯಲ್ಲಿ ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿತ್ತು. ಆದರೆ ಎರಡನೇ ಅಲೆಯ ಪ್ರಸ್ತುತ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಕೋವಿಡ್ ಸಂಬಂಧ ನಿಗಾ ವಹಿಸಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಉದ್ದೇಶದಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೇ ಟಾಸ್ಕ್ಪೋರ್ಸ್ ಸಮಿತಿಯನ್ನು ರಚಿಸಲಾಗಿದೆ. ಸೋಂಕಿತರನ್ನು ಹೋಮ್ ಐಸೋಲೇಷನ್‍ಗೆ ಕಳುಹಿಸುವ ಬದಲು ಕೋವಿಡ್ ಕೇರ್ ಕೇಂದ್ರಗಳಿಗೆ ದಾಖಲಿಸಬೇಕು ಎಂದು ಸೂಚನೆ ನೀಡಿದರು.

    ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಗಂಟಲು ದ್ರವ ಪರೀಕ್ಷೆ ಸಂಖ್ಯೆಯನ್ನು ಹೆಚ್ಚಳ ಮಾಡಬೇಕು. ಇದರಿಂದ ಕೋವಿಡ್ ಸೋಂಕು ಪತ್ತೆಯಾಗಿ ಮತ್ತಷ್ಟು ಹರಡದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಲಿದೆ. ಮಲೆ ಮಹದೇಶ್ವರ ಬೆಟ್ಟದ ವ್ಯಾಪ್ತಿಯ ಗ್ರಾಮಗಳ ಜನರಿಗೆ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಲು ಅರಿವು ಮೂಡಿಸಬೇಕು. ಸೋಂಕು ಹರಡದಂತೆ ವಹಿಸಬೇಕಿರುವ ಮುನ್ನಚ್ಚರಿಕೆಯ ಕ್ರಮಗಳನ್ನು ಪಾಲಿಸಲು ಜಾಗೃತಿ ಮೂಡಿಸಬೇಕು ಎಂದು ನಿರ್ದೇಶನ ನೀಡಿದರು.

    ಮಲೆ ಮಹದೇಶ್ವರ ಬೆಟ್ಟದ ಆಸ್ಪತ್ರೆಗೆ ವೈದ್ಯರ ನೇಮಕ: ಮಲೆ ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾಯಂ ವೈದ್ಯರಿಲ್ಲದಿರುವುದು ಗಮನಕ್ಕೆ ಬಂದಿದೆ. ಸರ್ಕಾರ ಸದ್ಯದಲ್ಲಿಯೇ ವೈದ್ಯರನ್ನು ನೇಮಕ ಮಾಡಿಕೊಳ್ಳಲಿದೆ. ಹೀಗಾಗಿ ಮಲೆ ಮಹದೇಶ್ವರ ಬೆಟ್ಟದ ಆಸ್ಪತ್ರೆಗೆ ವೈದ್ಯರನ್ನು ನೇಮಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ತಿಳಿಸಿದರು.

    ಶಾಸಕರಾದ ಆರ್. ನರೇಂದ್ರರವರು ಮಾತನಾಡಿ ಕೋವಿಡ್ ನಿಯಂತ್ರಣ ಕುರಿತು ಅಧಿಕಾರಿಗಳು ಅತ್ಯಂತ ಮುತುವರ್ಜಿ ಹಾಗೂ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಸೋಂಕಿತರಿಗೆ ಯಾವುದೇ ತೊಂದರೆಯಾಗದಂತೆ ಕೂಡಲೇ ಸ್ಪಂದಿಸಿ ಔಷಧ, ಆರೈಕೆಗೆ ಪ್ರಮುಖ ಆದ್ಯತೆ ನೀಡಬೇಕೆಂದು ಹೇಳಿದರು.

    ಗೋಪಿನಾಥಂ ಶಾಲೆಗೆ ಭೇಟಿ: ಸಭೆಯ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರು ಗೋಪಿನಾಥಂ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅವರಣದಲ್ಲಿ ಮುಖಂಡರೊಂದಿಗೆ ಮಾತನಾಡಿ ಕೋವಿಡ್ ನಿಯಮ ಪಾಲನೆ ಬಗ್ಗೆ ಅರಿವು ಮೂಡಿಸಿ ಸೋಂಕು ವ್ಯಾಪಿಸದಂತೆ ತಡೆಯುವಲ್ಲಿ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

    ಕೋವಿಡ್ ಸೋಂಕು ಲಕ್ಷಣಗಳು ಕಾಣಿಸಿಕೊಂಡ ಆರಂಭದಲ್ಲಿಯೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಯಾವುದೇ ರೋಗ ಲಕ್ಷಣಗಳು ಕಂಡುಬಂದರೂ ಕೂಡಲೇ ಆಸ್ಪತ್ರೆಗೆ ತೆರಳಬೇಕು. ಯಾವುದೇ ನಿರ್ಲಕ್ಷ್ಯ ವಹಿಸಬಾರದು. ಕೊರೊನಾ ಮುಕ್ತ ಗ್ರಾಮವನ್ನಾಗಿಸಲು ಪ್ರತಿಯೊಬ್ಬರ ಪಾತ್ರವು ಮುಖ್ಯವಾಗಿದೆ ಎಂದು ಸುರೇಶ್‍ಕುಮಾರ್‍ರವರು ತಿಳಿಸಿದರು.

    ಸಾಲೂರು ಶ್ರೀಗಳಾದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಜಿಲ್ಲಾಧಿಕಾರಿ ಡಾ. ಎಂ.ಆರ್ ರವಿ, ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಬೋಯರ್ ನಾರಾಯಣರಾವ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಸಿ. ರವಿ, ಡಿವೈಎಸ್ಪಿ ನಾಗರಾಜು, ತಹಶೀಲ್ದಾರ್ ನಾಗರಾಜು, ತಾಲೂಕು ಆರೋಗ್ಯ ಅಧಿಕಾರ ಪ್ರಕಾಶ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ್, ಇನ್ಸ್ಪೆಕ್ಟರ್ ರಮೇಶ್, ಇತರ ಅಧಿಕಾರಿಗಳು ಹಾಜರಿದ್ದರು.

  • ಮಾದಪ್ಪನ ಬೆಟ್ಟದಲ್ಲಿ ಭಕ್ತರ ನಿರ್ಬಂಧದ ನಡುವೆ ಸರಳ, ಸಾಂಪ್ರದಾಯಿಕವಾಗಿ ಯುಗಾದಿ ಆಚರಣೆ

    ಮಾದಪ್ಪನ ಬೆಟ್ಟದಲ್ಲಿ ಭಕ್ತರ ನಿರ್ಬಂಧದ ನಡುವೆ ಸರಳ, ಸಾಂಪ್ರದಾಯಿಕವಾಗಿ ಯುಗಾದಿ ಆಚರಣೆ

    ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಸರಳ ಹಾಗೂ ಸಾಂಪ್ರದಾಯಿಕವಾಗಿ ಯುಗಾದಿ ಆಚರಿಸಲಾಯಿತು.

    ಇಂದು ಬೆಳಗ್ಗಿನ ಜಾವ 3 ರಿಂದ 6 ಗಂಟೆಯವರೆಗೆ ಮಹದೇಶ್ವರನಿಗೆ ವಿಶೇಷ ಪೂಜೆ ನಡೆಯಿತು. ಕೊರೊನಾ ಹಿನ್ನೆಲೆಯಲ್ಲಿ ರಥೋತ್ಸವ ರದ್ದಾದ ಕಾರಣ ಉಮಾ ಮಹೇಶ್ವರ ಉತ್ಸವ ಮೂರ್ತಿಗೆ ಅಭಿಷೇಕ ಮಾಡಿ ಮಹಾರಥಕ್ಕೆ ಸಾಂಕೇತಿಕವಾಗಿ ಪೂಜೆ ಸಲ್ಲಿಸಲಾಯಿತು. ನಂತರ ದೇವಾಲಯದ ಆವರಣದಲ್ಲಿ ಬಿಳಿ ಆನೆಯ ಉತ್ಸವ, ಹುಲಿವಾಹನ, ಬಸವವಾಹನ ಹಾಗೂ ರುದ್ರಾಕ್ಷಿ ಉತ್ಸವಗಳನ್ನು ಸರಳವಾಗಿ ನೆರವೇರಿಸಲಾಯಿತು.

    ಅರ್ಚಕರು, ದೇವಾಲಯದ ಸಿಬ್ಬಂದಿ ಹಾಗು ಸ್ಥಳೀಯರು ಮಾತ್ರ ಪಾಲ್ಗೊಂಡಿದ್ದರು. ಪ್ರತಿ ವರ್ಷ ಲಕ್ಷಾಂತರ ಭಕ್ತರು ಯುಗಾದಿ ಹಬ್ಬದಂದು ಮಾದಪ್ಪನ ದರ್ಶನ ಪಡೆಯುತ್ತಿದ್ದರು. ಯುಗಾದಿ ಹಬ್ಬದಂದು ಮಹಾರಥೋತ್ಸವ ನಡೆಯುತ್ತಿತ್ತು. ಆದರೆ ಈ ಬಾರಿ ಕೊರೊನಾ ಕಾರಣದಿಂದ ರಥೋತ್ಸವ ರದ್ದು ಪಡಿಸಲಾಗಿದ್ದು, ಹೊರಗಿನ ಭಕ್ತರಿಗೆ ಬೆಟ್ಟಕ್ಕೆ ಪ್ರವೇಶ ನಿಷೇಧ ಹೇರಲಾಗಿತ್ತು.

  • ಮಾದಪ್ಪನ ಬೆಟ್ಟದಲ್ಲಿ 400 ಕೆ.ಜಿ ಅನುಪಯುಕ್ತ ಬೆಳ್ಳಿ ಕರಗಿಸಿ ಗಟ್ಟಿ ತಯಾರಿ ಕಾರ್ಯಕ್ಕೆ ಚಾಲನೆ

    ಮಾದಪ್ಪನ ಬೆಟ್ಟದಲ್ಲಿ 400 ಕೆ.ಜಿ ಅನುಪಯುಕ್ತ ಬೆಳ್ಳಿ ಕರಗಿಸಿ ಗಟ್ಟಿ ತಯಾರಿ ಕಾರ್ಯಕ್ಕೆ ಚಾಲನೆ

    ಚಾಮರಾಜನಗರ: ಮಲೆ ಮಹದೇಶ್ವರ ದೇಗುಲದ ಖಜಾನೆಯಲ್ಲಿದ್ದ 400 ಕೆ.ಜಿ ಅನುಪಯುಕ್ತ ಬೆಳ್ಳಿ ವಸ್ತುಗಳನ್ನು ಕರಗಿಸಿ ಶುದ್ಧ ಬೆಳ್ಳಿ ಗಟ್ಟಿಗಳನ್ನು ಮಾಡುವ ಪ್ರಕ್ರಿಯೆ ಆರಂಭಿಸಲಾಗಿದೆ. ಈ ವೇಳೆ ಶತಮಾನಗಳಷ್ಟು ಹಳೆಯದಾದ ಬೆಳ್ಳಿ ನಾಣ್ಯಗಳು ಪತ್ತೆಯಾಗಿವೆ.

    ಮಹದೇಶ್ವರನಿಗೆ ಬೆಳ್ಳಿ ರಥ ನಿರ್ಮಿಸಲು ಈಗಾಗಲೇ ನಿರ್ಧರಿಸಲಾಗಿದ್ದು, ಇದಕ್ಕೆ ಬೇಕಾಗುವ ಬೆಳ್ಳಿಯನ್ನು ಭಕ್ತರಿಂದ ಕಾಣಿಕೆ ರೂಪದಲ್ಲಿ ಪಡೆಯಲು ಮಲೈ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ನಿರ್ಧರಿಸಿ ಆ ಕಾರ್ಯವೂ ನಡೆಯುತ್ತಿತ್ತು. ಈ ನಡುವೆ ದೇಗುಲದ ಖಜಾನೆಯಲ್ಲಿರುವ ಬೆಳ್ಳಿ ವಸ್ತುಗಳನ್ನು ಕರಗಿಸಿ ಅದನ್ನೇಕೆ ಬೆಳ್ಳಿರಥ ನಿರ್ಮಾಣಕ್ಕೆ ಬಳಸಿಕೊಳ್ಳಬಾರದು ಎಂದು ಚಿಂತಿಸಿದ ಪ್ರಾಧಿಕಾರ, ಬೆಳ್ಳಿ ಕರಗಿಸುವ ಪರಿಣಿತರನ್ನು ದೇವಾಲಯಕ್ಕೇ ಕರೆಸಿ ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಮಕ್ಷಮದಲ್ಲಿ ಬೆಳ್ಳಿ ಕರಗಿಸಿ ಶುದ್ಧ ಬೆಳ್ಳಿಗಟ್ಟಿಗಳನ್ನು ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

    ನಾಲ್ಕು ಕ್ವಿಂಟಾಲ್ ನಷ್ಟಿರುವ ಬೆಳ್ಳಿ ವಸ್ತುಗಳನ್ನು ಕರಗಿಸಿ ಶುದ್ಧ ಬೆಳ್ಳಿ ಗಟ್ಟಿಗಳನ್ನು ಮಾಡುವ ಸಂಪೂರ್ಣ ಪ್ರಕ್ರಿಯೆಯನ್ನು ಪಾರದರ್ಶಕತೆಯಿಂದ ಮಾಡುವ ದೃಷ್ಟಿಯಿಂದ ವಿಡಿಯೋ ಚಿತ್ರೀಕರಣ ಮಾಡಲಾಗುತ್ತಿದೆ. ಇದರ ಜೊತೆಗೆ ಎರಡು ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಬೆಳ್ಳಿ ಕರಗಿಸುವ ಪ್ರಕ್ರಿಯೆಗೆ 3 ರಿಂದ 4 ದಿನ ಹಿಡಿಯಲಿದೆ. ಇದರಿಂದ ಬರುವ ಗಟ್ಟಿ ಬೆಳ್ಳಿ ಶೇ.100 ಶುದ್ಧ ಇರುವುದಿಲ್ಲ. ಸುಮಾರು ಶೇ.70 ರಿಂದ 80 ರಷ್ಟು ಶುದ್ಧ ಬೆಳ್ಳಿ ಬರಬಹುದು ಎಂದು ಪಬ್ಲಿಕ್ ಟಿವಿಗೆ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದರು.

  • ಯುಗಾದಿ ಹಬ್ಬದ ನಾಲ್ಕು ದಿನದ ಜಾತ್ರೆಗೆ ಮಾದಪ್ಪನ ಬೆಟ್ಟಕ್ಕೆ ಭಕ್ತರಿಗೆ ನಿರ್ಬಂಧ

    ಯುಗಾದಿ ಹಬ್ಬದ ನಾಲ್ಕು ದಿನದ ಜಾತ್ರೆಗೆ ಮಾದಪ್ಪನ ಬೆಟ್ಟಕ್ಕೆ ಭಕ್ತರಿಗೆ ನಿರ್ಬಂಧ

    ಚಾಮರಾಜನಗರ: ಏಪ್ರಿಲ್ 10 ರಿಂದ 13 ರವರೆಗೆ ನಡೆಯುವ ಯುಗಾದಿ ಜಾತ್ರೆಗೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ.

    ಹೌದು. ಸಾರ್ವಜನಿಕರು ಹಾಗೂ ಭಕ್ತಾದಿಗಳ ಸುರಕ್ಷತೆ ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ಕೊರೊನಾ ವೈರಸ್ ಹರಡದಂತೆ ತಡೆಯುವ ಮುಂಜಾಗ್ರತಾ ಕ್ರಮವಾಗಿ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕು ಮಲೆ ಮಹದೇಶ್ವರ ಬೆಟ್ಟದಲ್ಲಿ ಈ ನಿಷೇಧ ಹೇರಲಾಗಿದೆ.

    ಜಾತ್ರಾ ಮಹೋತ್ಸವದ ವಿಶೇಷ ಪೂಜಾ ಕಾರ್ಯಗಳಿಗೆ ದೇವಾಲಯದ ಅರ್ಚಕರು, ಸಿಬ್ಬಂದಿ, ಸ್ಥಳೀಯರು, ಸರ್ಕಾರಿ ಕೆಲಸದ ನಿಮಿತ್ತ ತೆರಳುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಹೊರತುಪಡಿಸಿ ಜಿಲ್ಲಾ ಹಾಗೂ ಅಂತರ ಜಿಲ್ಲಾ, ಹೊರ ರಾಜ್ಯದ ಸಾರ್ವಜನಿಕರು ಮತ್ತು ಭಕ್ತಾದಿಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಈ ಮೂಲಕ ಜಾತ್ರಾ ಮಹೋತ್ಸವವನ್ನು ಸರಳ ಹಾಗೂ ಸಾಂಪ್ರದಾಯಿಕವಾಗಿ ನಡೆಸುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಆದೇಶ ಹೊರಡಿಸಿದ್ದಾರೆ.

  • 5.18 ಕೋಟಿ ರೂ. ಬಾಡಿಗೆ ಬಾಕಿ- ಮಹದೇಶ್ವರ ಬೆಟ್ಟದ 18 ಅಂಗಡಿಗಳಿಗೆ ಬೀಗ ಮುದ್ರೆ

    5.18 ಕೋಟಿ ರೂ. ಬಾಡಿಗೆ ಬಾಕಿ- ಮಹದೇಶ್ವರ ಬೆಟ್ಟದ 18 ಅಂಗಡಿಗಳಿಗೆ ಬೀಗ ಮುದ್ರೆ

    ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ 5.18 ಕೋಟಿ ರೂಪಾಯಿ ಬಾಡಿಗೆ ಬಾಕಿ ಉಳಿಸಿಕೊಂಡಿದ್ದ 18 ಅಂಗಡಿ ಮಳಿಗೆಗಳಿಗೆ ಬೀಗಮುದ್ರೆ ಹಾಕಲಾಗಿದೆ.

    ಅಂಗಡಿ ಮಳಿಗೆಗಳನ್ನು ಬಾಡಿಗೆಗೆ ಟೆಂಡರ್ ಪಡೆದಿದ್ದ ವ್ಯಾಪಾರಿಗಳು ಅವಧಿ ಮುಗಿದರೂ ಖಾಲಿ ಮಾಡದೆ ಮುಂದುವರಿದಿದ್ದರು. ಇದಲ್ಲದೆ ಕೊರೊನಾ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ 20 ತಿಂಗಳ ಬಾಡಿಗೆಯನ್ನೂ ಮನ್ನಾ ಮಾಡಿತ್ತು. ಆದರೂ ಸಹ 5.18 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದ್ದರು.

    ಈ ಹಿನ್ನಲೆಯಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ 18 ಅಂಗಡಿಗಳಿಗೆ ಬೀಗಮುದ್ರೆ ಹಾಕಲಾಗಿದೆ.

  • ಮಾದಪ್ಪನ ಶಿವರಾತ್ರಿ ಜಾತ್ರೆ ರದ್ದು: ಸಂಪ್ರದಾಯಿಕವಾಗಿ ಪೂಜೆ, ಸ್ಥಳೀಯರಿಗಷ್ಟೇ ಅವಕಾಶ

    ಮಾದಪ್ಪನ ಶಿವರಾತ್ರಿ ಜಾತ್ರೆ ರದ್ದು: ಸಂಪ್ರದಾಯಿಕವಾಗಿ ಪೂಜೆ, ಸ್ಥಳೀಯರಿಗಷ್ಟೇ ಅವಕಾಶ

    ಚಾಮರಾಜನಗರ: ಚಾಮರಾಜನಗರದ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರನ ಬೆಟ್ಟದಲ್ಲಿ ಈ ಬಾರಿ ಮಹಾ ಶಿವರಾತ್ರಿ ಜಾತ್ರೆಯನ್ನು ರದ್ದುಗೊಳಿಸಲಾಗಿದೆ.

    ಈ ಮುನ್ನ ಮಾರ್ಚ್ 10 ರಿಂದ 14 ರವರೆಗೆ ನಾಲ್ಕು ದಿನಗಳ ಕಾಲ ಜಾತ್ರೆ ನಡೆಸಲು ಜಿಲ್ಲಾಡಳಿತ ನಿರ್ಧರಿಸಿತ್ತು. ಆದರೆ ನೆರೆಯ ರಾಜ್ಯ ಕೇರಳದಲ್ಲಿ ಈಗಾಗಲೇ ಕೊರೊನಾ ಪ್ರಕರಣ ಮತ್ತೆ ಹೆಚ್ಚಾಗುತ್ತಿದ್ದು, ಕೊರೊನಾ ನಿಯಂತ್ರಣಕ್ಕೆ ಜಾತ್ರೆ ರದ್ದುಗೊಳಿಸುವ ನಿರ್ಧಾರವನ್ನು ಕೈಗೊಂಡಿದೆ. ರಾಜ್ಯದ ಹೈಪವರ್ ಕಮಿಟಿ ಕೂಡ ಜಾತ್ರೆ ನಡೆಸದಂತೆ ಸೂಚನೆ ನೀಡಿದೆ.

    ಇಂದು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆಯಿತು. ಈ ಸಭೆಯಲ್ಲಿ ಶಿವರಾತ್ರಿ ಜಾತ್ರೆ ರದ್ದುಗೊಳಿಸುವ ನಿರ್ಣಯ ಕೈಗೊಳ್ಳಲಾಗಿದೆ.

    ಶಿವರಾತ್ರಿ ಹಿನ್ನೆಲೆಯಲ್ಲಿ ಮಲೆ ಮಾದಪ್ಪನ ದರ್ಶನಕ್ಕೆ ಭಕ್ತರ ದಂಡೇ ಹರಿದು ಬರುತ್ತಿತ್ತು. ಸುಮಾರು 4 ಲಕ್ಷಕ್ಕೂ ಹೆಚ್ಚು ಭಕ್ತರು ಮಾದಪ್ಪನ ದರ್ಶನ ಪಡೆದು ಹೋಗುತ್ತಿದ್ದರು. ಕೊರೊನಾ ಆತಂಕದ ಹಿನ್ನಲೆಯಲ್ಲಿ ಜಾತ್ರೆಯನ್ನು ರದ್ದುಗೊಳಿಸುವ ನಿರ್ಧಾರ ಮಾಡಲಾಗಿದೆ.

    ಶಿವರಾತ್ರಿ ಜಾತ್ರೆಯನ್ನು ಸಾಂಪ್ರದಾಯಿಕವಾಗಿ ನಡೆಸಲು ನಿರ್ಧರಿಸಲಾಗಿದ್ದು, ಮಹದೇಶ್ವರ ಬೆಟ್ಟದ ಗ್ರಾಮ ಪಂಚಾಯತಿ ವ್ಯಾಪ್ತಿಯ ಸ್ಥಳೀಯರಿಗಷ್ಟೇ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಸ್ಥಳೀಯರು ಕೂಡ ದೇವರ ದರ್ಶನ ಪಡೆಯಬೇಕಾದರೆ ಗುರುತಿನ ಚೀಟಿ ತರುವುದನ್ನು ಕಡ್ಡಾಯಗೊಳಿಸಲಾಗಿದೆ. ಕೊರೊನಾ ಕಾರ್ಮೋಡದ ನಡುವೆಯೂ ಈ ಬಾರಿ ಸರಳ, ಸಾಂಪ್ರದಾಯಿಕವಾಗಿ ಪೂಜೆ, ಪುನಸ್ಕಾರಗಳಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ.

  • ಕೊರೊನಾ ಅಲೆ – ಮಾದಪ್ಪನ ದರ್ಶನಕ್ಕೆ ಹೊಸ ರೂಲ್ಸ್

    ಕೊರೊನಾ ಅಲೆ – ಮಾದಪ್ಪನ ದರ್ಶನಕ್ಕೆ ಹೊಸ ರೂಲ್ಸ್

    ಚಾಮರಾಜನಗರ: ಶ್ರೀ ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ನೈಟ್ ಕರ್ಫ್ಯೂ  ಹಿನ್ನೆಲೆ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಇದನ್ನು ಕಡ್ಡಾಯವಾಗಿ ಪಾಲಿಸಲು ಭಕ್ತರಿಗೆ ಮನವಿ ಮಾಡಲಾಗಿದೆ. 24-12-2020 ರಿಂದ (ರಾತ್ರಿ 11 ಗಂಟೆಯಿಂದ) 02-01-2021ರ ಬೆಳಗ್ಗೆ 5-00ರವರೆಗೆ ರಾತ್ರಿ ಕರ್ಫ್ಯೂ ಜಾರಿಯಾಗಿರುವುದರ ಪ್ರಯುಕ್ತ, ದೇವಾಲಯಕ್ಕೆ ಬರುವ ಎಲ್ಲ ಭಕ್ತಾದಿಗಳು ಹೊಸ ಸೂಚನೆಗಳನ್ನ ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದೆ.

    1. ಕೊಠಡಿಗಳನ್ನ ಆನ್‍ಲೈನ್ ನಲ್ಲಿ ಕಾಯ್ದಿರಿಸಿರುವ ಭಕ್ತಾದಿಗಳು ರಾತ್ರಿ 10.30 ರೊಳಗೆ ಮಹದೇಶ್ವರ ಬೆಟ್ಟಕ್ಕೆ ಬಂದು ಮಾಹಿತಿ ಕೇಂದ್ರದಲ್ಲಿ ನೋಂದಾಯಿಸಿ ಸಂಬಂಧಪಟ್ಟ ವಸತಿ ಗೃಹದೊಳಗೆ ವಾಸ್ತವ್ಯಕ್ಕೆ 10.45ರೊಳಗೆ ತಲುಪತಕ್ಕದ್ದು.
    2. ರಾತ್ರಿ 11ರಿಂದ ಬೆಳಗ್ಗೆ 5ರವರೆಗೆ ಮಾಹಿತಿ ಕೇಂದ್ರ ಮುಚ್ಚಲಾಗುವುದು ಹಾಗೂ ಯಾವುದೇ ಕೊಠಡಿಗಳನ್ನು ಈ ಸಮಯದಲ್ಲಿ ವಿತರಿಸಲಾಗುವುದಿಲ್ಲ.
    3. ರಾತ್ರಿ 11 ರಿಂದ ಬೆಳಗ್ಗೆ 5ರವರೆಗೆ ಸಂಪೂರ್ಣ ಲಾಕ್‍ಔಟ್ ಪಾಲಿಸಲಾಗುವುದು. ಯಾವುದೇ ಸಂಚಾರಕ್ಕೆ ಅವಕಾಶವಿರುವುದಿಲ್ಲ.
    4. ದೇವಸ್ಥಾನ, ಲಾಡು ಕೌಂಟರ್ ಹಾಗೂ ದಾಸೋಹಕ್ಕೆ ಬರುವವರು ರಾತ್ರಿ 10ರ ಒಳಗಾಗಿ ದರ್ಶನ ಪಡೆಯುವುದು, ದಾಸೋಹ ಸ್ವೀಕರಿಸುವುದು ಹಾಗೂ ಲಾಡು ಖರೀದಿಸುವುದು. ರಾತ್ರಿ 10ರ ನಂತರ ಈ ಮೂರೂ ಸೇವೆಗಳು ಲಭ್ಯವಿರುವುದಿಲ್ಲ.

    5. ಕೊಠಡಿ ಕಾಯ್ದಿರಿಸಿರುವವರು ನಂತರ ಬಂದಲ್ಲಿ ರೀಫಂಡ್ ನೀಡಲಾಗುವುದಿಲ್ಲ. ಈ ಬಗ್ಗೆ ಪತ್ರ ವ್ಯವಹಾರಕ್ಕೆ ಅವಕಾಶವಿರುವುದಿಲ್ಲ.
    6. ಬೆಳಗ್ಗೆ 4ಕ್ಕೆ ಪ್ರಾರಂಭವಾಗುವ ಅಭಿಷೇಕಕ್ಕೆ ಭಕ್ತಾದಿಗಳಿಗೆ ಪ್ರವೇಶವಿರುವುದಿಲ್ಲ. ಆದರೆ ಸಾಂಪ್ರದಾಯಿಕವಾಗಿ ಅಭಿಷೇಕವನ್ನು ಬೇಡಗಂಪಣರು ಹಾಗೂ ದೇವಾಲಯದ ಒಳಾವರಣದ ಸಿಬ್ಬಂದಿ ನಡೆಸಲಿರುವರು. ಬೆಳಗ್ಗೆ 5ರ ನಂತರ ದರ್ಶನಕ್ಕೆ ಅನುವು ಮಾಡಿಕೊಡಲಾಗುವುದು.
    7. ದೇವಾಲಯದ ಆವರಣದಲ್ಲಿ ವಸತಿ ಗೃಹಗಳು, ಕಾಟೇಜುಗಳು ಹಾಗೂ ಡಾರ್ಮಿಟರಿ ಹೊರತುಪಡಿಸಿ, ಬೇರೆ ಯಾವುದೇ ತೆರೆದ ಜಾಗಗಳು ಹಾಗೂ ದೇವಾಲಯದ ಪಕ್ಕದಲ್ಲಿರುವ ಭಕ್ತಾದಿಗಳಿಗೆ ನೆರಳಿನ ವ್ಯವಸ್ಥೆಯ ಷೆಡ್‍ನಲ್ಲಿ ಉಳಿದುಕೊಳ್ಳಬಾರದಾಗಿ ಮನವಿ.

    8. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿಯೇ ಶ್ರೀ ಕ್ಷೇತ್ರಕ್ಕೆ ಬರುವುದು ಹಾಗೂ ಶ್ರೀ ಕ್ಷೇತ್ರದಿಂದ ತೆರಳುವವರೆಗೆ ಧರಿಸಿರಲು ಕೋರಿದೆ. ವೈಯುಕ್ತಿಕವಾಗಿ ಸ್ಯಾನಿಟೈಸರ್ ಇಟ್ಟುಕೊಳ್ಳಲು ಹಾಗೂ ಆಗ್ಗಾಗ್ಗೆ ಉಪಯೋಗಿಸಲು ಕೋರಿದೆ.
    9. ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸುವುದು. ವಿಶೇಷವಾಗಿ ದೇವಸ್ಥಾನದ ಕ್ಯೂ ಲೈನಿನಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡೇ ದರ್ಶನ ಮಾಡುವುದು.
    10. ದಾಸೋಹದಲ್ಲಿ ಕಡ್ಡಾಯವಾಗಿ ಕ್ಯೂ ಲೈನಿನಲ್ಲಿ ಹಾಗೂ ಕುಳಿತುಕೊಳ್ಳುವ ಮೇಜಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು.
    11. ಯಾವುದೇ ಸಂದೇಹವಿದ್ದಲ್ಲಿ ಮಾಹಿತಿ ಕೇಂದ್ರದಲ್ಲಿ ನಿರ್ವಹಣೆಯಲ್ಲಿರುವ ಸಹಾಯವಾಣಿ ನಂಬರಿಗೆ 1860 425 4350 ಗೆ ಕರೆ ಮಾಡುವುದು.

  • ಮೂರು ದಿನ ಭಕ್ತರಿಗಿಲ್ಲ ಮಾದಪ್ಪನ ದರ್ಶನ!

    ಮೂರು ದಿನ ಭಕ್ತರಿಗಿಲ್ಲ ಮಾದಪ್ಪನ ದರ್ಶನ!

    ಚಾಮರಾಜನಗರ: ಮೂರು ದಿನಗಳ ಕಾಲ ಮಲೆ ಮಾದಪ್ಪ ತನ್ನ ಭಕ್ತರಿಗೆ ದರ್ಶನ ಕೊಡಲ್ಲ.

    ಜಿಲ್ಲೆಯ ಹನೂರು ತಾಲೂಕಿನ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟದಲ್ಲಿ ಮೂರು ದಿನ ಭಕ್ತರಿಗೆ ದೇವರ ದರ್ಶನ ಸಿಗಲ್ಲ. ಕೊನೆಯ ಕಾರ್ತಿಕ ಸೋಮವಾರದ ಹಿನ್ನೆಲೆಯಲ್ಲಿ ಲಕ್ಷಾಂತರ ಭಕ್ತರು ಬೆಟ್ಟಕ್ಕೆ ಬರುವ ಸಾಧ್ಯತೆ ಇದೆ.

    ಕೊರೊನಾ ಮುಂಜಾಗ್ರತಾ ಕ್ರಮವಾಗಿ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಡಿ.12 ರಿಂದ ಡಿ.14 ರ ವರೆಗೆ ಮಾದಪ್ಪನ ದರ್ಶನ ಭಕ್ತರಿಗಿಲ್ಲ ಸಿಗಲ್ಲ. ಎಣ್ಣೆ ಮಜ್ಜನ, ತೆಪ್ಪೋತ್ಸವ ಸೇರಿದಂತೆ ವಿಶೇಷ ಪೂಜೆಗಳು ನಡೆಯುತ್ತಿತ್ತು. ಆದರೆ ಈ ಬಾರಿ ವಿಶೇಷ ಪೂಜೆಗಳಿಗೆ ಭಾಗವಹಿಸಲು ಭಕ್ತರಿಗೆ ಪ್ರಾಧಿಕಾರ ಅವಕಾಶ ಕೊಟ್ಟಿಲ್ಲ.