Tag: ಮಲೆ ಮಹದೇಶ್ವರ ಬೆಟ್ಟ

  • ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಲಿ ಹತ್ಯೆ – ಇಬ್ಬರು ಶಂಕಿತರು ವಶಕ್ಕೆ

    ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಲಿ ಹತ್ಯೆ – ಇಬ್ಬರು ಶಂಕಿತರು ವಶಕ್ಕೆ

    – ʻಮಲೆ ಮಹದೇಶ್ವರ ಹುಲಿ ಸಂರಕ್ಷಿತ ಪ್ರದೇಶʼ ಪ್ರಸ್ತಾವನೆ ಮುನ್ನೆಲೆಗೆ
    – ಸ್ಥಳೀಯರೊಂದಿಗೆ ಸಭೆ ನಡೆಸಿ ವರದಿ ಸಲ್ಲಿಸಲು ಈಶ್ವರ ಖಂಡ್ರೆ ಸೂಚನೆ

    ಬೆಂಗಳೂರು/ಚಾಮರಾಜನಗರ: ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ (Malai Mahadeshwara Wildlife Sanctuary) ಮತ್ತೊಂದು ಹುಲಿ ಹತ್ಯೆ ಆಗಿರುವ ಹಿನ್ನೆಲೆಯಲ್ಲಿ ಹುಲಿ ಸಂರಕ್ಷಿತ ಪ್ರದೇಶ ಘೋಷಣೆಗೆ ಸ್ಥಳೀಯರೊಂದಿಗೆ ಸಭೆ ನಡೆಸಿ ವರದಿ ಸಲ್ಲಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ (Eshwar Khandre) ತಿಳಿಸಿದರು.

    ರಾಜ್ಯದ ಎಲ್ಲ ಹುಲಿ ಸಂರಕ್ಷಿತ ಪ್ರದೇಶ (Tiger Reserve Forest) ಹಾಗೂ ಮೈಸೂರು ವಿಭಾಗದ ಅರಣ್ಯಾಧಿಕಾರಿಗಳೊಂದಿಗೆ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ತುರ್ತು ಸಭೆ ನಡೆಸಿದ ಸಚಿವರು, ಈಗಾಗಲೇ ವನ್ಯಜೀವಿ ಮಂಡಳಿ ಹುಲಿ ಸಂರಕ್ಷಿತ ಪ್ರದೇಶ ಘೋಷಣೆಗೆ ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಅಂತಿಮ ವರದಿ ಸಲ್ಲಿಸಲು ತಿಳಿಸಿದರು.

    ಅರಣ್ಯ ಪ್ರದೇಶದೊಳಗೆ ಇರುವ ಹಾಡಿಗಳಲ್ಲಿರುವ ದನಕರುಗಳೆಷ್ಟು? ಈ ಹಾಡಿಗಳಲ್ಲಿ ಎಷ್ಟು ಜನರಿದ್ದಾರೆ? ಎಂಬ ಬಗ್ಗೆ ಸಂಪೂರ್ಣ ದತ್ತಾಂಶ ಕಲೆ ಹಾಕಿ ದಾಖಲಿಸಲು ಮತ್ತು ಒಂದೊಮ್ಮೆ ಹಾಡಿಯಲ್ಲಿರುವ ದನಕರುಗಳು ವನ್ಯಜೀವಿಯಿಂದ ಮೃತಪಟ್ಟರೆ (Wild Animal Death) ಪರಿಹಾರ ನೀಡಲು ಕ್ರಮ ವಹಿಸುವಂತೆ ಸೂಚಿಸಿದರು.

    ಜಾಗೃತಿ ಮೂಡಿಸಿ:
    ಮಲೆ ಮಹದೇಶ್ವರ ಮತ್ತು ಕಾವೇರಿ ವನ್ಯಜೀವಿಧಾಮದ ಅಂಚಿನ ಗ್ರಾಮಗಳಲ್ಲಿ ಮತ್ತು ಅರಣ್ಯದ ಹಾಡಿಯ ಬಳಿ ವನ್ಯಜೀವಿಗಳಿಗೆ ವಿಷ ಹಾಕುತ್ತಿರುವ ಘಟನೆಗಳು ಮತ್ತು ಕಳ್ಳಬೇಟೆ ಪ್ರಕರಣಗಳು ವರದಿಯಾಗುತ್ತಿದ್ದು, ಅರಣ್ಯವಾಸಿಗಳು ಮತ್ತು ಕಾಡಿನಂಚಿನ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುವಂತೆ ಹಾಗೂ ವನ್ಯಜೀವಿಗಳಿಂದ ಬೆಳೆ ಹಾನಿ ಆಗಿದ್ದಲ್ಲಿ ಪರಿಶೀಲಿಸಿ, ಪರಿಹಾರ ಪಾವತಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ಶಂಕಿತರಿಬ್ಬರು ವಶಕ್ಕೆ:
    ಹುಲಿಯನ್ನು ಮೂರು ಭಾಗವಾಗಿ ಕತ್ತರಿಸಿ ಹತ್ಯೆ ಮಾಡಿರುವ ಪ್ರಕರಣದ ಇಬ್ಬರು ಶಂಕಿತರನ್ನ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ನಡೆದಿದ್ದು, ಶೀಘ್ರವೇ ಹುಲಿ ಹತ್ಯೆಗೆ ನೈಜ ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.

    ಮಲೆ ಮಹದೇಶ್ವರ ಅರಣ್ಯ ಭಾಗದಲ್ಲಿ ಗಸ್ತು ಹೆಚ್ಚಿಸಲು ಸೂಚಿಸಿದ ಸಚಿವರು, ಅಧಿಕಾರಿಗಳು ಕರ್ತವ್ಯಲೋಪ ಎಸಗಿದರೆ ಕ್ರಮಕ್ಕೆ ಶಿಫಾರಸು ಮಾಡುವಂತೆ ಹಾಗೂ 5 ಹುಲಿ ಹಾಗೂ ಮೊನ್ನೆ ನಡೆದಿರುವ ಹುಲಿ ಹತ್ಯೆಯ ಆರೋಪಿಗಳಿಗೆ ಶೀಘ್ರ ಶಿಕ್ಷೆ ಕೊಡಿಸಲು ಕ್ರಮಕೈಗೊಂಡು ಸ್ಪಷ್ಟ ಸಂದೇಶ ರವಾನಿಸಲು ಸೂಚಿಸಿದರು.

    ಮೂಲಸೌಕರ್ಯ ಒದಗಿಸಲು ಸೂಚನೆ:
    ಹೊರಗುತ್ತಿಗೆಯ ಮುಂಚೂಣಿ ಸಿಬ್ಬಂದಿಗೆ ಸಕಾಲದಲ್ಲಿ ವೇತನ ಪಾವತಿ ಆಗುತ್ತಿದೆಯೇ ಇಲ್ಲವೇ, ಇವರು ಸರಿಯಾಗಿ ಗಸ್ತು ನಡೆಸುತ್ತಿದ್ದಾರೋ ಇಲ್ಲವೋ, ಎಂಸ್ಟ್ರೈಪ್ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಸಚಿವರು ಸೂಚಿಸಿದರು.

    ಸಿಬ್ಬಂದಿ ಗಸ್ತು ತಿರುಗುತ್ತಿರುವ ಕುರಿತಂತೆ ಜಿಪಿಎಸ್ ಸಹಿತ ಫೋಟೋ ತೆಗೆಯಲು ಸೂಚಿಸಿ, ಅದನ್ನು ಹಿರಿಯ ಅಧಿಕಾರಿಗಳು ಆಗಾಗ್ಗೆ ಪರಾಮರ್ಶಿಸಬೇಕು, ಜೊತೆಗೆ ಆಧುನಿಕ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದೂ ಈಶ್ವರ ಖಂಡ್ರೆ ತಿಳಿಸಿದರು. ಕಳ್ಳಬೇಟೆ ನಿಗ್ರಹ ಶಿಬಿರಗಳಲ್ಲಿರುವ ಸಿಬ್ಬಂದಿಗೆ ಬೂಟು, ಜಾಕೆಟ್, ಕುಡಿಯುವ ನೀರು, ಆಹಾರ ಧಾನ್ಯ ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸಲೂ ಸಚಿವರು ಸೂಚನೆ ನೀಡಿದರು.

    ಚನ್ನಪಟ್ಟಣ ಆನೆ ಸಾವಿನ ಬಗ್ಗೆ ಪರಾಮರ್ಶೆ:
    ಚನ್ನಪಟ್ಟಣದ ಗೊಲ್ಲರದೊಡ್ಡಿಯ ಬಳಿ ಇಂದು ತೆಂಗಿನಮರದ ಹೊಂಬಾಳೆ ತಿನ್ನಲು ಯತ್ನಿಸಿದ ಆನೆಯೊಂದು ಪಕ್ಕದಲ್ಲಿದ್ದ ವಿದ್ಯುತ್ ಕಂಬದ ತಂತಿ ಸ್ಪರ್ಶದಿಂದ ಮೃತಪಟ್ಟಿರುವ ಕುರಿತಂತೆಯೂ ಸಭೆಯಲ್ಲಿ ಪರಾಮರ್ಶಿಸಲಾಯಿತು. ಪ್ರತಿವರ್ಷ ಸರಾಸರಿ ವಿದ್ಯುತ್ ಸ್ಪರ್ಶದಿಂದ 14 ಆನೆಗಳು ಮೃತಪಡುತ್ತಿವೆ. ಆದ್ರೆ ಈ ವರ್ಷ 7 ಆನೆಗಳು ಮಾತ್ರ ವಿದ್ಯುತ್ ಸ್ಪರ್ಶದಿಂದ ಸಾವಿಗೀಡಾಗಿವೆ. ರೈತರಿಗೆ, ತೋಟದ ಮಾಲೀಕರಿಗೆ ಬೇಲಿಯ ತಂತಿಗೆ ಅಕ್ರಮವಾಗಿ ವಿದ್ಯುತ್ ಹರಿಸದಂತೆ ಮನವಿ ಮಾಡಲಾಗಿದೆ. ತಪಾಸಣೆ ನಡೆಲಾಗುತ್ತಿದೆ ಎಂದೂ ಸಭೆಗೆ ಅಧಿಕಾರಿಗಳು ತಿಳಿಸಿದರು.

    ಆನೆಗಳು ವಿದ್ಯುತ್ ಸ್ಪರ್ಶದಿಂದ ಸಾವಿಗೀಡಾಗದಂತೆ ಹಾಗೂ ಅರಣ್ಯ ಪ್ರದೇಶದಲ್ಲಿ ಅಥವಾ ಅರಣ್ಯದಂಚಿನಲ್ಲಿ ತೂಗಾಡುತ್ತಿರುವ ಅಥವಾ ಜೋತು ಬಿದ್ದಿರುವ ವಿದ್ಯುತ್ ತಂತಿಯ ದುರಸ್ತಿ ಮಾಡುವಂತೆ ವಿದ್ಯುತ್ ಸರಬರಾಜು ಕಂಪನಿಗಳಿಗೆ ಪತ್ರ ಬರೆದು ಕ್ರಮ ವಹಿಸಲು ಸೂಚಿಸುವಂತೆ ತಿಳಿಸಿದರು.

    ಸಭೆಯಲ್ಲಿ ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕರಾದ ಪಿ.ಸಿ. ರೇ ಮತ್ತಿತರರು ಪಾಲ್ಗೊಂಡಿದ್ದರು.

  • ಮಲೆ ಮಹದೇಶ್ವರ ವನ್ಯಧಾಮದಲ್ಲಿ ಹುಲಿ ಹತ್ಯೆ – ದೈತ್ಯ ಹುಲಿ ಕೊಂದಿದ್ದು ಪ್ರತೀಕಾರಕ್ಕಾ?

    ಮಲೆ ಮಹದೇಶ್ವರ ವನ್ಯಧಾಮದಲ್ಲಿ ಹುಲಿ ಹತ್ಯೆ – ದೈತ್ಯ ಹುಲಿ ಕೊಂದಿದ್ದು ಪ್ರತೀಕಾರಕ್ಕಾ?

    – ಪಿಸಿಸಿಎಫ್ ನೇತೃತ್ವದ ತಂಡದಿಂದ ತೀವ್ರ ಪರಿಶೀಲನೆ

    ಚಾಮರಾಜನಗರ: ಮಲೆ ಮಹದೇಶ್ವರ ವನ್ಯಧಾಮದಲ್ಲಿ (Malai Mahadeshwara Wildlife Sanctuary) 12 ಅಡಿ ಉದ್ದ 12 ವರ್ಷ ಪ್ರಾಯದ 250 ಕೆಜಿಗೂ ಅಧಿಕ ತೂಕದ ಹುಲಿ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ತಿದೆ. ಅಲ್ಲದೇ ಪಿಸಿಸಿಎಫ್ (PCCF) ನೇತೃತ್ವದ ತಂಡ ಕೂಡ ಸ್ಥಳಕ್ಕೆ ಭೇಟಿ ಕೊಟ್ಟು ಘಟನೆಯ ಬಗ್ಗೆ ಮಹದೇಶ್ವರ ವನ್ಯಧಾಮದ ಅಧಿಕಾರಿಗಳು,ಸಿಬ್ಬಂದಿಯಿಂದ ಮಾಹಿತಿ ಪಡೆದಿದ್ದಾರೆ. ಆದ್ರೆ ಈ ಹುಲಿ ಹತ್ಯೆಯೂ ಕೂಡ ಪ್ರತೀಕಾರಕ್ಕೆ ನಡೆದಿದೆ ಅನ್ನೋ ವಾದ ಪರಿಸರವಾದಿಗಳಾಗಿದ್ದಾಗಿದೆ.

    mm hills sanctuary tiger death

    ಮಲೆ ಮಹದೇಶ್ವರ ವನ್ಯಧಾಮದ ಹನೂರು (Hanuru) ತಾಲೂಕಿನ ಪಚ್ಚೆದೊಡ್ಡಿ ಗಸ್ತಿನಲ್ಲಿ ದೈತ್ಯ ಹುಲಿಯ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ತಿದೆ. ಈ ಹುಲಿಯ ಹತ್ಯೆ ನಡೆದಿರುವುದೇ ಪ್ರತೀಕಾರಕ್ಕೆ ಎಂಬ ಆತಂಕಕಾರಿ ವಿಚಾರ ಗೊತ್ತಾಗ್ತಿದೆ. ಸತ್ತ ಹುಲಿಯನ್ನು ಹೊತ್ತೊಯ್ಯಲು ಸಾಧ್ಯವಾಗದ ಕಾರಣ ಮೂರು ಭಾಗಗಳಾಗಿ ತುಂಡರಿಸಿ ಸಾಗಿಸುವ ಯತ್ನ ಮಾಡಿದ್ದಾರೆ. ಆದ್ರೆ ಹುಲಿಯ ತೂಕ ಹೆಚ್ಚಿದ ಕಾರಣ ಹೊತ್ತೊಯ್ಯಲು ಸಾಧ್ಯವಾಗಿಲ್ಲ. ಎರಡು ಭಾಗಗಳನ್ನು ಒಂದು ಪೊಟರೆಯಲ್ಲಿಟ್ಟು ಅದರ ಮೇಲೆ ಎಲೆಗಳನ್ನು ಮುಚ್ಚಿದ್ದರು. ಮತ್ತೊಂದು ಭಾಗವನ್ನು ಅರ್ಧ ಮಣ್ಣಿನಲ್ಲಿ ಮುಚ್ಚಿದ್ದರು. ಈ ಹುಲಿಯ ಹತ್ಯೆಯ (Tiger Death) ಬಗ್ಗೆ ಯಾರಿಗೂ ಗೊತ್ತಾಗಬಾರದೆಂದು ದುರುಳರು ಸಖತ್ ಪ್ಲ್ಯಾನ್ ಮಾಡಿದ್ದರು.

    ಮರಣೋತ್ತರ ಪರೀಕ್ಷೆ ನಡೆಸಿದರು ಕೂಡ ಹುಲಿಯ ಸಾವಿಗೆ ನಿಖರ ಕಾರಣ ಗೊತ್ತಾಗಬಾರದೆಂದು ಹುಲಿಯ ಕರುಳು ಹಾಗೂ ಲಿವರ್ ಎರಡನ್ನೂ ಕೂಡ ಬೇರೆಡೆ ತೆಗೆದುಕೊಂಡು ಹೋಗಿ ಬಿಸಾಕಿ ಸಾಕ್ಷ್ಯ ನಾಶಕ್ಕೂ ಕೂಡ ಮುಂದಾಗಿದ್ದಾರೆಂಬ ಆತಂಕಕಾರಿ ಸತ್ಯ ಹೊರ ಬಿದ್ದಿದೆ. ಇದನ್ನೂ ಓದಿ: ಮಲೆ ಮಹದೇಶ್ವರನ ವನ್ಯಧಾಮದಲ್ಲಿ ಮತ್ತೆ ಹುಲಿಯ ದಾರುಣ ಸಾವು – ಅರ್ಧ ಹುಲಿ ದೇಹ ಪತ್ತೆ

    ಆ ಹುಲಿಯ ಹತ್ಯೆ ಎಷ್ಟು ಭೀಕರವಾಗಿತ್ತು ಅನ್ನೊದಕ್ಕೆ ಒಂದಷ್ಟು ವಿಡಿಯೋಗಳು ಕೂಡ ಸಾಕ್ಷಿಯಾಗಿದೆ. ಹುಲಿಯ ದೇಹವನ್ನು ಒಂದು ಮರದ ತುಂಡಿನ ಮೇಲೆ ಇರಿಸಿ ಕೊಡಲಿಯಿಂದ ಕತ್ತರಿಸಿದ್ದಾರೆ. ಅಲ್ಲದೇ ಹುಲಿಯ ಕರುಳು ಹಾಗೂ ಲೀವರ್ ಅನ್ನೂ ಕೂಡ ಬೇರೆಡೆ ಬಿಸಾಡಿದ್ದಾರೆ. ಹಂತಕರ ಕೈಗೆ ಅಂಟಿದ್ದ ರಕ್ತವನ್ನು ಪಕ್ಕದಲ್ಲಿ ಹರಿಯುವ ನೀರಿನಲ್ಲಿ ತೊಳೆದಿದ್ದಾರೆ. ಸಂಪೂರ್ಣ ಪ್ಲ್ಯಾನ್ ಮಾಡೇ ಈ ದೈತ್ಯ ಹುಲಿಯ ಹತ್ಯೆಗೆ ಸಂಚು ಮಾಡಿದ್ದಾರೆಂಬುದು ಈ ದೃಶ್ಯಗಳಿಂದ ಗೊತ್ತಾಗ್ತಿದೆ.

    ಅರಣ್ಯ ಸಚಿವರ ಆದೇಶದ ಹಿನ್ನೆಲೆ ಹುಲಿ ಹತ್ಯೆ ನಡೆದ ಸ್ಥಳಕ್ಕೆ ಪಿಸಿಸಿಎಫ್ ನೇತೃತ್ವದಲ್ಲಿ ತಂಡ ಭೇಟಿ ಕೊಟ್ಟು ತನಿಖೆಗೆ ಮುಂದಾಗಿದೆ. ಗಸ್ತಿನ ಸಿಬ್ಬಂದಿ ಹಾಗೂ ಅರಣ್ಯಾಧಿಗಳಿಂದ ಮಾಹಿತಿ ಪಡೆದಿದ್ದಾರೆ. ಅಲ್ಲದೇ ಸ್ಥಳೀಯವಾಗಿಯೂ ಕೂಡ ಪಚ್ಚೆದೊಡ್ಡಿ ಗ್ರಾಮಕ್ಕೆ ಭೇಟಿ ಕೊಟ್ಟು ಕೆಲವರಿಂದ ಮಾಹಿತಿ ಕಲೆ ಹಾಕುವ ಕೆಲಸ ಮಾಡಿದ್ದಾರೆ.

    ಒಟ್ನಲ್ಲಿ ಈ ಹುಲಿ ಹತ್ಯೆಯ ಹಿಂದೆ ಅಕ್ಕಪಕ್ಕದ ಗ್ರಾಮಸ್ಥರೇ ಇದ್ದಾರೆಂದು ಅರಣ್ಯಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದು, ಕೃತ್ಯದಲ್ಲಿ ಇಬ್ಬರು ಅಥವಾ ಮೂವರು ಭಾಗಿಯಾಗಿರುವ ಶಂಕೆ ಕೂಡ ಇದೆ. ಶಂಕಿತ ಆರೋಪಿಗಳು ತಲೆ ಮರೆಸಿಕೊಂಡಿದ್ದು. ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಎಂಎಂ ಹಿಲ್ಸ್‌ನಲ್ಲಿ ಮತ್ತೊಂದು ಹುಲಿ ಹತ್ಯೆ; ಪಿಸಿಸಿಎಫ್ ತಂಡದ ತನಿಖೆಗೆ ಖಂಡ್ರೆ ಆದೇಶ

  • ಮಲೆ ಮಹದೇಶ್ವರನ ವನ್ಯಧಾಮದಲ್ಲಿ ಮತ್ತೆ ಹುಲಿಯ ದಾರುಣ ಸಾವು – ಅರ್ಧ ಹುಲಿ ದೇಹ ಪತ್ತೆ

    ಮಲೆ ಮಹದೇಶ್ವರನ ವನ್ಯಧಾಮದಲ್ಲಿ ಮತ್ತೆ ಹುಲಿಯ ದಾರುಣ ಸಾವು – ಅರ್ಧ ಹುಲಿ ದೇಹ ಪತ್ತೆ

    ಚಾಮರಾಜನಗರ: ಮಲೆ ಮಹದೇಶ್ವರ ವನ್ಯಧಾಮದಲ್ಲಿ ಮತ್ತೆ ಹುಲಿ ದಾರುಣ ಸಾವನ್ನಪ್ಪಿರುವ ಘಟನೆ ನಡೆದಿದೆ. ಹುಲಿಯ ಅರ್ಧ ದೇಹ ಪತ್ತೆಯಾಗಿದೆ.

    ಹನೂರು ವಲಯ ಪಚ್ಚೆದೊಡ್ಡಿ ಗ್ರಾಮದ ಬಳಿ ಹುಲಿಯ ತಲೆ, ಭುಜ, ಮುಂದಿನ ಕಾಲುಗಳು ಪತ್ತೆಯಾಗಿವೆ. ಸಿಕ್ಕಿರುವ ಕಳೇಬರದ ಭಾಗದಲ್ಲಿ ‌ಉಗುರು ಮತ್ತು ಹಲ್ಲುಗಳು ಸೇಫ್ ಆಗಿವೆ.

    ಹುಲಿಯ ಕಳ್ಳಬೇಟೆ ಶಂಕೆ ಶಂಕೆ ವ್ಯಕ್ತವಾಗಿದ್ದು, ತನಿಖೆಗೆ ಅರಣ್ಯ ಇಲಾಖೆ ಕ್ರಮವಹಿಸಿದೆ. ಹುಲಿ ದೇಹದ ಉಳಿತ ಭಾಗ ಹುಡುಕಲು ಶೋಧ ನಡೆದಿದೆ. ಹುಲಿ ಸಾವಿಗೆ ಕಾರಣವೇನು ಮತ್ತು ಕಾರಣಕರ್ತರು ಯಾರು ಎಂಬುದನ್ನು ಪತ್ತೆ ಹಚ್ಚಲು ಕ್ರಮಕೈಗೊಳ್ಳಲಾಗಿದೆ ಎಂದು ಮಹದೇಶ್ವರ ವನ್ಯಧಾಮದ ಡಿಸಿಎಫ್ ಭಾಸ್ಕರ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಇತ್ತೀಚೆಗೆ ಮಹದೇಶ್ವರ ಬೆಟ್ಟದ ಬಳಿ ಐದು ಹುಲಿಗಳಿಗೆ ವಿಶಪ್ರಾಷಣ ಮಾಡಿ ಕೊಲ್ಲಲಾಗಿತ್ತು. ಕಾಡಂಚಿನ ಗ್ರಾಮಗಳಲ್ಲಿ ಹುಲಿಗಳ ಉಪಟಳ ತಪ್ಪಿಸುವ ಉದ್ದೇಶದಿಂದ ಮೃತ ಹಸುವಿನ ದೇಹಕ್ಕೆ ವಿಷ ಹಾಕಿ, ಮಾಂಸವನ್ನು ತಿಂದು ಹುಲಿಗಳು ಸಾಯುವಂತೆ ಮಾಡಲಾಗಿತ್ತು.

  • ಮಹಾಲಯ ಅಮಾವಾಸ್ಯೆ; ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತರ ದಂಡು

    ಮಹಾಲಯ ಅಮಾವಾಸ್ಯೆ; ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತರ ದಂಡು

    ಚಾಮರಾಜನಗರ: ಮಹಾಲಯ ಅಮಾವಾಸ್ಯೆ (Mahalaya Amavasya) ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ (Male Mahadeshwara Temple) ಬೆಟ್ಟಕ್ಕೆ ಭಕ್ತರ ದಂಡು ಆಗಮಿಸುತ್ತಿದೆ.

    ಭಾನುವಾರ ಮಾದಪ್ಪನಿಗೆ ಎಣ್ಣೆ ಮಜ್ಜನ ಸೇವೆ ನಡೆಯಲಿದೆ. ರಾತ್ರಿಯಿಂದಲೇ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತರು ಬೀಡುಬಿಟ್ಟಿದ್ದಾರೆ. ಇದನ್ನೂ ಓದಿ: ನಕಲಿ ದಾಖಲೆ ತೋರಿಸಿ ಹಿಂದೂ ಯುವತಿ ಜೊತೆ ಮದ್ವೆ – ಯೂಟ್ಯೂಬರ್ ಮುಕಳೆಪ್ಪ ವಿರುದ್ಧ ಎಫ್‌ಐಆರ್

    ಮಹದೇಶ್ವರ ಬೆಟ್ಟದಲ್ಲಿ ಸಕಲ ತಯಾರಿ ನಡೆದಿದೆ. ಪ್ರಾಧಿಕಾರದಿಂದ ಭಕ್ತರಿಗಾಗಿ 2 ಲಕ್ಷ ಲಾಡು ತಯಾರಿಸಲಾಗಿದೆ. ಭಕ್ತರೆಲ್ಲರಿಗೂ ದಾಸೋಹ ವ್ಯವಸ್ಥೆ ಮಾಡಲಾಗಿದೆ. ಲೈಟಿಂಗ್‌ನಿಂದ ಮಾದಪ್ಪನ ಸನ್ನಿಧಿ ಮತ್ತಷ್ಟು ಕಂಗೊಳಿಸುತ್ತಿದೆ.

  • ಮಾದಪ್ಪನ ಬೆಟ್ಟದಲ್ಲಿ ಹುಂಡಿ ಎಣಿಕೆ – 29 ದಿನಗಳಲ್ಲಿ 1.70 ಕೋಟಿ ಸಂಗ್ರಹ

    ಮಾದಪ್ಪನ ಬೆಟ್ಟದಲ್ಲಿ ಹುಂಡಿ ಎಣಿಕೆ – 29 ದಿನಗಳಲ್ಲಿ 1.70 ಕೋಟಿ ಸಂಗ್ರಹ

    ಚಾಮರಾಜನಗರ: ಶ್ರೀಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ (Male Mahadeshwar Hills) ಹುಂಡಿ ಎಣಿಕೆ ಕಾರ್ಯ ನಡೆದಿದೆ. ಕೇವಲ 29 ದಿನಗಳಲ್ಲಿ ಮಾದಪ್ಪ ಕೋಟಿ ಒಡೆಯನಾಗಿದ್ದು, 1.70 ಕೋಟಿ ರೂ. ಸಂಗ್ರಹವಾಗಿದೆ.

    ಚಾಮರಾಜನಗರ (Chamarajanagar) ಜಿಲ್ಲೆಯ ಹನೂರು (Hanuru) ತಾಲೂಕಿನ ಶ್ರೀಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಗುರುವಾರ (ಸೆ.18) ತಡರಾತ್ರಿವರೆಗೂ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದೆ. ಮಲೆ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಎಇ ರಘು ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಬಳಿಕ ಹುಂಡಿ ಎಣಿಕೆ ನಡೆಯಿತು.ಇದನ್ನೂ ಓದಿ: ದಸರಾ ಆನೆಗಳ ತಬ್ಬಿಕೊಂಡು ಯುವತಿ ರೀಲ್ಸ್‌: ದುಡ್ಡಿದ್ದವರ ದರ್ಬಾರ್‌ಗೆ ಅಧಿಕಾರಿಗಳು ಸಾಥ್‌?

    ಶಕ್ತಿ ಯೋಜನೆಯ ಉಚಿತ ಪ್ರಯಾಣದ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಸರ್ಕಾರಿ ರಜಾ ದಿನ, ಅಮಾವಾಸ್ಯೆ, ಜಾತ್ರಾ ಮಹೋತ್ಸವ ಸೇರಿದಂತೆ ವಿವಿಧ ಕಾರಣಗಳಿಂದ ಕಡಿಮೆ ದಿನಗಳಲ್ಲೇ ಅಧಿಕ ಹಣ ಕಾಣಿಕೆ ರೂಪದಲ್ಲಿ ಸಂಗ್ರಹವಾಗಿದೆ. 30 ಗ್ರಾಂ ಚಿನ್ನ ಹಾಗೂ 1,100 ಬೆಳ್ಳಿ ಸಾಮಾನುಗಳು ಸಂಗ್ರಹವಾಗಿದೆ. ಇನ್ನೂ ಇ-ಹುಂಡಿಯಿಂದ 3.9 ಲಕ್ಷ ರೂ. ಹಣ ಸಂಗ್ರಹವಾಗಿದೆ. ಚಲಾವಣೆಯಲ್ಲಿ ಇಲ್ಲದ 2,000 ಮುಖಬೆಲೆಯ 3 ನೋಟುಗಳು ಹುಂಡಿಯಲ್ಲಿ ಸಿಕ್ಕಿವೆ.

  • ಭಕ್ತರಿಗೆ ಸಿಹಿಸುದ್ದಿ; ಮಾದಪ್ಪನ ದರ್ಶನಕ್ಕೆ ತಿರುಪತಿ ಮಾದರಿ ವ್ಯವಸ್ಥೆ

    ಭಕ್ತರಿಗೆ ಸಿಹಿಸುದ್ದಿ; ಮಾದಪ್ಪನ ದರ್ಶನಕ್ಕೆ ತಿರುಪತಿ ಮಾದರಿ ವ್ಯವಸ್ಥೆ

    ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟಕ್ಕೆ ದಿನೇ ದಿನೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಮಹದೇಶ್ವರನ ದರ್ಶನಕ್ಕಾಗಿ ಭಕ್ತರು ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಉಂಟಾಗುತ್ತಿದೆ. ಹಾಗಾಗಿ, ಭಕ್ತರು ಸುಗಮವಾಗಿ ಮಹದೇಶ್ವರನ ದರ್ಶನ ಪಡೆಯಲು ಅನುಕೂಲವಾಗುವಂತೆ ತಿರುಪತಿ ಮಾದರಿಯಲ್ಲಿ ಕ್ಯೂ ಕಾಂಪ್ಲೆಕ್ಸ್ ನಿರ್ಮಾಣ ಮಾಡಲಾಗುತ್ತಿದೆ.

    ಮಲೆ ಮಹದೇಶ್ವರ ಬೆಟ್ಟ (Male Mahadeshwara Hills) ದಕ್ಷಿಣ ಭಾರತದ ಪ್ರಮುಖ ಯಾತ್ರಾ ಸ್ಥಳ. ಕೋಟ್ಯಂತರ ಭಕ್ತರ ಆರಾಧ್ಯ ದೈವ ಮಲೆ ಮಹದೇಶ್ವರನ ಸನ್ನಿಧಿಗೆ ನಿತ್ಯ ಸಾವಿರಾರು ಭಕ್ತರು ಬರುತ್ತಿದ್ದಾರೆ. ಅದರಲ್ಲೂ ಅಮಾವಾಸ್ಯೆ, ಜಾತ್ರೆ ಹಾಗೂ ರಜಾದಿನಗಳಲ್ಲಿ ಭಕ್ತರ ಸಂಖ್ಯೆ ಲಕ್ಷ ದಾಟುತ್ತದೆ. ಶಕ್ತಿ ಯೋಜನೆ ಜಾರಿಯಾದ ನಂತರ ಭಕ್ತರು ಸಂಖ್ಯೆ ಮತ್ತಷ್ಟು ಹೆಚ್ಚಾಗಿದ್ದು, ಮಹದೇಶ್ವರನ ದರ್ಶನ ಪಡೆಯಲು ಭಕ್ತರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಇದೆ. ಹಾಗಾಗಿ, ಭಕ್ತರು ಸುಗಮ ಹಾಗೂ ಬೇಗ ಮಹದೇಶ್ವರನ ದರ್ಶನ ಪಡೆಯಲು ಅನುಕೂಲವಾಗುವಂತೆ ತಿರುಪತಿ ಮಾದರಿಯಲ್ಲಿ ಕ್ಯೂ ‌ಕಾಂಪ್ಲೆಕ್ಸ್ ನಿರ್ಮಿಸಲಾಗುತ್ತಿದೆ. ಈ ಕಾಂಪ್ಲೆಕ್ಸ್‌ಗಳಲ್ಲಿ ಭಕ್ತರು ಕುಳಿತುಕೊಳ್ಳಲು ಆಸನ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ, ಉಪಾಹಾರ, ಮಕ್ಕಳ ಆರೈಕೆ ಕೇಂದ್ರ ಮೊದಲಾದ ಸೌಲಭ್ಯಗಳನ್ನು ಒಳಗೊಂಡಿದೆ.

    ಬೆಟ್ಟಕ್ಕೆ ಬರುವ ಭಕ್ತರು ಮಹದೇಶ್ವರನ ದರ್ಶನ ಪಡೆಯಲು ಮೊದಲೇ ಸಮಯ ನಿಗದಿ ಮಾಡಲು ಸಹ ನಿರ್ಧರಿಸಲಾಗಿದೆ. ಇದರಿಂದ ಭಕ್ತರು ದೇವಸ್ಥಾನ ಆವರಣದಲ್ಲಿ ಅನವಶ್ಯಕವಾಗಿ ಕಾಯುವುದು ತಪ್ಪಲಿದೆ. ಕ್ಯೂ ಕಾಂಪ್ಲೆಕ್ಸ್ ಅಲ್ಲದೇ ಒಂದೇ ಬಾರಿಗೆ 4 ಸಾವಿರ ಮಂದಿ ಕುಳಿತು ಭೋಜನ ಮಾಡುವ ಸುಸಜ್ಜಿತ ದಾಸೋಹ ಭವನವನ್ನು ನಿರ್ಮಿಸಲಾಗುತ್ತಿದೆ.

    ಎಲ್ಲವೂ ಅಂದುಕೊಂಡಂತೆ ಆದರೆ ಮೂರು ತಿಂಗಳ ಒಳಗೆ ತಿರುಪತಿ ಮಾದರಿ ಕ್ಯೂ ಕಾಂಪ್ಲೆಕ್ಸ್ ಹಾಗೂ ಸುಸಜ್ಜಿತ ದಾಸೋಹ ಭವನ ನಿರ್ಮಾಣ ಕಾಮಗಾರಿ ಮುಗಿಯಲಿದೆ. ಇದೇ ವೇಳೆ, ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೆ ಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗೆ ತಿರುಪತಿ ಮಾದರಿ ಮೆಟ್ಟಿಲು ನಿರ್ಮಾಣ ಕಾಮಗಾರಿಯು ಪೂರ್ಣಗೊಳ್ಳುವ ನಿರೀಕ್ಷೆಯಿದೆ.

  • ಬೆನಕ ಅಮಾವಾಸ್ಯೆ: ಮಲೆ ಮಹದೇಶ್ವರನಿಗೆ 108 ಕುಂಭಾಭಿಷೇಕ

    ಬೆನಕ ಅಮಾವಾಸ್ಯೆ: ಮಲೆ ಮಹದೇಶ್ವರನಿಗೆ 108 ಕುಂಭಾಭಿಷೇಕ

    ಚಾಮರಾಜನಗರ: ಪ್ರಸಿದ್ಧ ಯಾತ್ರಾಸ್ಥಳವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ (Male Mahadeshwara Temple) ಶ್ರಾವಣ ಮಾಸದ ಕೊನೆ ದಿನವಾದ ಶನಿವಾರ ದೇವರಿಗೆ 108 ಕುಂಭಾಭಿಷೇಕ ನೆರವೇರಿತು.

    ಶ್ರೀ ಕ್ಷೇತ್ರದಲ್ಲಿ ಶ್ರಾವಣ ಮಾಸದ ಮೊದಲ ದಿನ ಮತ್ತು ಕಡೇ ದಿನದಂದು ದೇವರಿಗೆ 108 ಕುಂಭಗಳ ಪವಿತ್ರ ಜಲದಿಂದ ಅಭಿಷೇಕ ನೆರವೇರಿಸಲಿದ್ದು, ಅದರಂತೆ ಶನಿವಾರ ಮಲೆ ಮಹದೇಶ್ವರ ಬೆಟ್ಟದಲ್ಲಿ 108 ಬೇಡಗಂಪಣ ಅರ್ಚಕರು ಮಜ್ಜನ ಬಾವಿಯಿಂದ ಪವಿತ್ರ ಜಲವನ್ನು ಮೆರವಣಿಗೆಯಲ್ಲಿ ತಂದರು. ಇದನ್ನೂ ಓದಿ: ಧರ್ಮಸ್ಥಳ ಷಡ್ಯಂತ್ರ ಕೇಸನ್ನ ರಾಜ್ಯ ಸರ್ಕಾರವೇ NIA ಗೆ ಕೊಡಬೇಕು: ಆರ್‌.ಅಶೋಕ್‌ ಆಗ್ರಹ

    ಶ್ರೀ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠಾಧ್ಯಕ್ಷರಾದ ಶಾಂತ ಮಲ್ಲಿಕಾರ್ಜುನಸ್ವಾಮಿ ನೇತೃತ್ವದಲ್ಲಿ ಬೇಡಗಂಪಣ ಅರ್ಚಕರು ಮಜ್ಜನಬಾವಿಯಿಂದ 108 ಕುಂಭಗಳನ್ನು ಹೊತ್ತು ತಂದು ಹೋಮ ನೆರವೇರಿಸಿ ಸ್ವಾಮಿಗೆ ಅಭಿಷೇಕ ನೆರವೇರಿಸಿದರು.

    ಜೊತೆಗೆ, 108 ಎಳನೀರುಗಳಿಂದಲೂ ಅಭಿಷೇಕ ಮಾಡುವ ಮೂಲಕ ಶ್ರಾವಣ ಮಾಸದ ವಿಶೇಷ ಪೂಜೆ ನೆರವೇರಿತು. ಇದನ್ನೂ ಓದಿ: ಮಹೇಶ್ ತಿಮರೋಡಿಗೆ ಉಡುಪಿ ಕೋರ್ಟ್‌ನಿಂದ ಜಾಮೀನು ಮಂಜೂರು

  • ಕೋಟಿ ಒಡೆಯನಾದ ಮಾದಪ್ಪ – ಒಂದೇ ತಿಂಗಳಲ್ಲಿ ಭಕ್ತರಿಂದ 2.36 ಕೋಟಿ ಕಾಣಿಕೆ

    ಕೋಟಿ ಒಡೆಯನಾದ ಮಾದಪ್ಪ – ಒಂದೇ ತಿಂಗಳಲ್ಲಿ ಭಕ್ತರಿಂದ 2.36 ಕೋಟಿ ಕಾಣಿಕೆ

    ಚಾಮರಾಜನಗರ: ಮಲೆ ಮಹದೇಶ್ವರ ಮತ್ತೆ ಕೋಟಿ ಒಡೆಯನಾಗಿದ್ದಾನೆ. ಒಂದೇ ತಿಂಗಳಿಗೆ ಭಕ್ತರಿಂದ 2.36 ಕೋಟಿ ಕಾಣಿಕೆ ಹರಿದುಬಂದಿದೆ.

    ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ ನಡೆದಿದ್ದು, ಕಳೆದ ಮೂವತ್ತು ದಿನಗಳಲ್ಲಿ ಒಟ್ಟು 2.36 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ.

    ಇದಲ್ಲದೇ, 70 ಗ್ರಾಂ ಚಿನ್ನ, 1 ಕೆಜಿ 712 ಗ್ರಾಂ ಬೆಳ್ಳಿ ಆಭರಣಗಳನ್ನು ಭಕ್ತರು ಮಲೆ ಮಹದೇಶ್ವರನಿಗೆ ಸಮರ್ಪಿಸಿದ್ದಾರೆ. ಹುಂಡಿಯಲ್ಲಿ ಎರಡು ಸಾವಿರ ಮುಖಬೆಲೆಯ 14 ನೋಟುಗಳು ಹಾಗೂ 20 ವಿದೇಶಿ ನೋಟುಗಳು ಸಹ ಕಂಡು ಬಂದಿವೆ.

  • 5 ಹುಲಿಗಳ ಸಾವು ಪ್ರಕರಣ – ಕಾರ್ಬೋಫುರಾನ್ ಕೀಟನಾಶಕ ಬಳಕೆ: ಸಿಸಿಎಫ್ ಹೀರಾಲಾಲ್

    5 ಹುಲಿಗಳ ಸಾವು ಪ್ರಕರಣ – ಕಾರ್ಬೋಫುರಾನ್ ಕೀಟನಾಶಕ ಬಳಕೆ: ಸಿಸಿಎಫ್ ಹೀರಾಲಾಲ್

    – ಇನ್ನೆರಡು ದಿನದಲ್ಲಿ ಉನ್ನತ ಮಟ್ಟದ ಸಮಿತಿಯಿಂದ ವರದಿ ಸಲ್ಲಿಕೆ

    ಚಾಮರಾಜನಗರ: ಮಲೆ ಮಹದೇಶ್ವರ (Male Madeshwara) ವನ್ಯಧಾಮದಲ್ಲಿ ನಡೆದ 5 ಹುಲಿಗಳ ಹತ್ಯಾಕಾಂಡ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಹುಲಿ ಹಾಗೂ ಹಸುವಿನ ಅಂಗಾಂಗವನ್ನು ಲ್ಯಾಬ್‌ಗೆ ಕಳುಹಿಸಿದ್ದ ರಿಪೋರ್ಟ್ ಇದೀಗ ಬಂದಿದ್ದು, ವರದಿಯಲ್ಲಿ ಹುಲಿಗಳ ಸಾವಿಗೆ ಕಾರ್ಬೋಫುರಾನ್ ಕೀಟನಾಶಕ ಬಳಕೆಯಾಗಿರುವುದು ದೃಢಪಟ್ಟಿದೆ ಎಂದು ಸಿಸಿಎಫ್ ಹೀರಾಲಾಲ್ ತಿಳಿಸಿದ್ದಾರೆ.

    ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಧಾಮದಲ್ಲಿ ನಡೆದ 5 ಹುಲಿಗಳ ಹತ್ಯಾಕಾಂಡ ಎಲ್ಲರನ್ನೂ ದಿಗ್ಭ್ರಮೆಗೊಳಿಸಿತ್ತು. ಇದೀಗ ಲ್ಯಾಬ್ ವರದಿಯಲ್ಲಿ ಹುಲಿಗಳ ಸಾವಿಗೆ ನಿಖರ ಕಾರಣ ತಿಳಿದುಬಂದಿದೆ. ಇದನ್ನೂ ಓದಿ: ಕೋಲ್ಕತ್ತಾ ಐಐಎಂ ಬಾಯ್ಸ್ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ – ಆರೋಪಿ ಅರೆಸ್ಟ್

    ಹಸುವನ್ನು ಕಳೆದುಕೊಂಡ ದನಗಾಹಿಗಳು ಹಸುವಿಗೆ ಕಾರ್ಬೋಫುರಾನ್ ಎಂಬ ಕೀಟನಾಶಕ ಸಿಂಪಡಿಸಿದ್ದರು. ಇದನ್ನು ತಿಂದ 5 ಹುಲಿಗಳು ಹಸುವಿನ ಅಕ್ಕಪಕ್ಕದ ಸ್ಥಳದಲ್ಲೇ ಸಾವನ್ನಪ್ಪಿದ್ದವು. ಈ ಹುಲಿ ಸಾವಿನ ಪ್ರಕರಣ ರಾಷ್ಟ್ರಮಟ್ಟದಲ್ಲಿ ಕೂಡ ಸದ್ದು ಮಾಡಿತ್ತು. ಹುಲಿ ಸಾವಿನ ತನಿಖೆಗಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ಹೈ ಪವರ್ ಕಮಿಟಿ ರಚಿಸಿದ್ದರು. ಇದನ್ನೂ ಓದಿ: ಮಂಗಳೂರು | MRPLನಲ್ಲಿ ವಿಷಾನಿಲ ಸೋರಿಕೆ – ಇಬ್ಬರು ಸಿಬ್ಬಂದಿ ಸಾವು

    ಅಲ್ಲದೇ ಹುಲಿ ಸಾಯಿಸಲು ಯಾವ ಕೀಟನಾಶಕ ಬಳಸಲಾಗಿದೆ ಎಂದು ತಿಳಿಯಲು ಪ್ರಯೋಗಾಲಯಕ್ಕೆ ಹುಲಿಯ ಅಂಗಾಂಗಗಳನ್ನು ರವಾನೆ ಮಾಡಲಾಗಿತ್ತು. ಇದೀಗ ಲ್ಯಾಬ್ ವರದಿ ಕೂಡ ಸಿಕ್ಕಿದ್ದು, ಕಾರ್ಬೋಫುರಾನ್ ಎಂಬ ಕೀಟನಾಶಕವನ್ನು ಹಸುವಿಗೆ ಸಿಂಪಡಿಸಿದ್ದಾರೆಂದು ಗೊತ್ತಾಗಿದೆ.

    ಇನ್ನೂ ಈ ಕೀಟನಾಶಕವು ವನ್ಯಪ್ರಾಣಿಗಳು, ಪಕ್ಷಿಗಳ ನರಮಂಡಲದ ಮೇಲೆ ತುಂಬಾನೇ ದುಷ್ಪರಿಣಾಮ ಬೀರುತ್ತವೆ ಎಂದು ತಿಳಿದುಬಂದಿದೆ. ಈ ಹಿಂದೆ ಉತ್ತರಖಂಡದ ಜಿಮ್ ಕಾರ್ಬೆಟ್‌ನಲ್ಲೂ ಕೂಡ ಈ ಕೀಟನಾಶಕ ಬಳಸಿದ್ದು, ಎರಡು ಹುಲಿಗಳು ಸತ್ತಿವೆ ಎಂಬ ವರದಿಯಾಗಿದೆ. ಅಲ್ಲದೇ ಅಮೆರಿಕ ಹಾಗೂ ಯುರೋಪ್ ರಾಷ್ಟ್ರಗಳಲ್ಲಿ ಇದನ್ನು ನಿಷೇಧಿಸಲಾಗಿದೆ. ಆಲೂಗೆಡ್ಡೆ,ಸೋಯಾಬಿನ್, ಜೋಳ, ಭತ್ತದ ಕೃಷಿಯಲ್ಲಿ ಈ ಕೀಟನಾಶಕ ಬಳಕೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ವೈಟ್‌ ಡ್ರೆಸ್‌ನಲ್ಲಿ ಚೈತ್ರಾ ಬ್ರೈಟ್‌ – ಚುಮು ಚುಮು ಚಳಿಯಲ್ಲಿ ಪಡ್ಡೆಗಳ ಮೈಬಿಸಿ ಹೆಚ್ಚಿಸಿದ ನಟಿಯ ಲುಕ್

    ಅಲ್ಲದೇ ಇತರ ರಾಸಾಯನಿಕದಂತೆ ಈ ಕಾರ್ಬೋಫುರಾನ್ ಕೀಟನಾಶಕ ತೀವ್ರ ವಾಸನೆಯಿಲ್ಲದ ಕಾರಣ ವನ್ಯಪ್ರಾಣಿಗಳು ವಾಸನೆ ಗುರುತಿಸುವುದು ಕಷ್ಟ. ಆ ಹಿನ್ನಲೆ ಕಾರ್ಬೋಫುರಾನ್ ಬಳಕೆಯಾಗಿರುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

    ಒಟ್ಟಿನಲ್ಲಿ 5 ಹುಲಿಗಳು ಕೂಡ ವಿಷ ಪ್ರಾಶನದಿಂದಲೇ ಸಾವನ್ನಪ್ಪಿವೆ ಎಂಬುದು ಲ್ಯಾಬ್ ವರದಿಯಿಂದ ಗೊತ್ತಾಗಿದೆ. ಇನ್ನೆರಡು ದಿನಗಳಲ್ಲಿ ಉನ್ನತ ಮಟ್ಟದ ತನಿಖಾ ತಂಡ ಅರಣ್ಯ ಸಚಿವರಿಗೆ ವರದಿ ಸಲ್ಲಿಸಲಿದ್ದು, ಮತ್ತಷ್ಟು ಸ್ಫೋಟಕ ವಿಚಾರ ಬಹಿರಂಗವಾಗುವ ಸಾಧ್ಯತೆಯಿದೆ.

  • ಚಾಮರಾಜನಗರ | ಹುಲಿಗಳ ಸಾವಿನ ಬಳಿಕ ಚಿರತೆ ಶವ ಪತ್ತೆ – ವಿಷಪ್ರಾಶನ ಶಂಕೆ

    ಚಾಮರಾಜನಗರ | ಹುಲಿಗಳ ಸಾವಿನ ಬಳಿಕ ಚಿರತೆ ಶವ ಪತ್ತೆ – ವಿಷಪ್ರಾಶನ ಶಂಕೆ

    – ಚಿರತೆ ಕಳೇಬರ ಸನಿಹದಲ್ಲೇ ಕರು, ನಾಯಿ ಶವವೂ ಪತ್ತೆ

    ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ (Male Mahadeshwar Hills) 5 ಹುಲಿಗಳ ಸಾವಿನ ಬಳಿಕ ಇದೀಗ ಜಿಲ್ಲೆಯ ಕೊತ್ತಲವಾಡಿ (Kothalavadi) ಸಮೀಪದಲ್ಲಿ ಚಿರತೆಯ ಕಳೇಬರ ಪತ್ತೆಯಾಗಿದ್ದು, ವಿಷಪ್ರಾಶನ ಮಾಡಿರುವ ಶಂಕೆ ವ್ಯಕ್ತವಾಗಿದೆ.

    ಚಾಮರಾಜನಗರ (Chamarajanagar) ತಾಲೂಕಿನ ಕೊತ್ತಲವಾಡಿ ಸಮೀಪದ ಪ್ರದೀಪ್ ಎಂಬುವವರ ಗಣಿ ತ್ಯಾಜ್ಯದ ಕಲ್ಲು ಸಂಗ್ರಹಿಸಿರುವ ಜಮೀನಿನಲ್ಲಿ ಸುಮಾರು 5 ವರ್ಷದ ಗಂಡು ಚಿರತೆಯ ಶವ ಪತ್ತೆಯಾಗಿದ್ದು, ಅದರ ಸಮೀಪದಲ್ಲಿಯೇ ಕರು ಹಾಗೂ ನಾಯಿಯ ಶವ ಪತ್ತೆಯಾಗಿದೆ. ಸದ್ಯ ಸ್ಥಳಕ್ಕೆ ಬಿ.ಆರ್.ಟಿ ಅರಣ್ಯಾಧಿಕಾರಿಗಳಾದ ಸಿಸಿಎಫ್ ಹಿರಾಲಾಲ್, ಡಿಸಿಎಫ್ ಶ್ರೀಪತಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.ಇದನ್ನೂ ಓದಿ: ಮುಜರಾಯಿ ಸುಪರ್ದಿಗೆ ಗಾಳಿ ಆಂಜನೇಯ ದೇಗುಲ – 5 ವರ್ಷದ ನಂತ್ರ ಟ್ರಸ್ಟ್‌ಗೆ ವಾಪಸ್: ರಾಮಲಿಂಗಾರೆಡ್ಡಿ

    ಇದೀಗ ಅರಣ್ಯಾಧಿಕಾರಿಗಳು ಪ್ರಕರಣದ ಪತ್ತೆಗಾಗಿ ಬಂಡೀಪುರದಿಂದ ಶ್ವಾನ ದ್ರೋಣನನ್ನು ಕರೆತಂದಿದ್ದಾರೆ. ಜೊತೆಗೆ ಮೆಟಲ್ ಡಿಟೆಕ್ಟರ್ ಮೂಲಕವು ಪರಿಶೀಲನೆ ನಡೆಸಿದ್ದಾರೆ. ಒಂದೂವರೆ ವರ್ಷದ ಹಿಂದೆ ಕೊತ್ತಲವಾಡಿ ಸಮೀಪದಲ್ಲಿ ಮೂರು ಹುಲಿಗಳು ಸಾವನ್ನಪ್ಪಿದ್ದವು. ಆಗ ಅಧಿಕಾರಿಗಳು ಸ್ವಾಭಾವಿಕವಾಗಿ ಸಾವನ್ನಪ್ಪಿರುವುದಾಗಿ ಮಾಹಿತಿ ಕೊಟ್ಟಿದ್ದರು. ಇದೀಗ ಗಣಿ ತ್ಯಾಜ್ಯದ ಮೇಲೆ ಚಿರತೆ ಸಾವನ್ನಪ್ಪಿದ್ದು, 2-3 ದಿನದ ಹಿಂದೆಯೇ ಮೃತಪಟ್ಟಿರುವುದಾಗಿ ಅನುಮಾನ ಉಂಟಾಗಿದೆ. ಸದ್ಯ ಅಧಿಕಾರಿಗಳು ಚಿರತೆ ಸಾವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಹಿಂದಿನಿಂದಲೂ ಕೂಡ ಈ ಭಾಗದಲ್ಲಿ ಚಿರತೆ ಓಡಾಟ ಇತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

    ಇತ್ತೀಚೆಗೆ ಕೆಲವು ದಿನಗಳ ಹಿಂದೆ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ವಿಷಪ್ರಾಶನದಿಂದಾಗಿ 5 ಹುಲಿಗಳು ಸಾವನ್ನಪ್ಪಿದ್ದವು. ಈ ಪ್ರಕರಣ ಸಂಬಂಧ ಮೂವರನ್ನು ಬಂಧಿಸಿದ್ದರು.ಇದನ್ನೂ ಓದಿ: ಟೆನ್ನಿಸ್‌ ತಾರೆಯ ಕೊಲೆಗೆ ಸ್ಫೋಟಕ ಟ್ವಿಸ್ಟ್‌ – ಮ್ಯೂಸಿಕ್‌ ಆಲ್ಬಂಗೆ ಸಿಟ್ಟಾಗಿ ಮಗಳ ಹತ್ಯೆ?