ಬೆಂಗಳೂರು: ರಾಜ್ಯದಲ್ಲಿ ಪ್ರವಾಹ ಸ್ವರೂಪಿ ಮಳೆ ಆಗದೇ ಇದ್ದರೂ ನೆರೆ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಗೆ ಪ್ರಕೃತಿ ವಿಕೋಪ ಉಂಟಾಗಿದೆ. ಬೋರ್ಗೆರೆದು ಹರಿಯುತ್ತಿರುವ ಕೃಷ್ಣಾ ನದಿ ಐದು ಜಿಲ್ಲೆಗಳನ್ನು ಅಕ್ಷರಶಃ ಹೈರಾಣಾಗಿಸಿದೆ.
ಮಹಾರಾಷ್ಟ್ರದ ಕೊಯ್ನಾ, ರಾಯಚೂರಲ್ಲಿರುವ ನಾರಾಯಣಪುರ ಡ್ಯಾಂನಿಂದ ಅಪಾರ ಪ್ರಮಾಣದಲ್ಲಿ ನೀರು ಬಿಡಲಾಗ್ತಿದ್ದು, ಪ್ರವಾಹ ಸ್ಥಿತಿ ಉಲ್ಬಣಿಸಿದೆ. ಬಾಗಲಕೋಟೆ, ಬೆಳಗಾವಿ, ಯಾದಗಿರಿ, ರಾಯಚೂರು, ವಿಜಯಪುರ ಜಿಲ್ಲೆಗಳಲ್ಲಿ ಹರಿಯುವ ಕೃಷ್ಣಾ ನದಿ ಭಾರೀ ಪ್ರಮಾಣದ ನಷ್ಟ ಉಂಟು ಮಾಡಿದೆ.
ಮಲಪ್ರಭೆಯಲ್ಲಿ ಈಜಿ ಬಂದ ವೃದ್ಧ:
ಬೆಳಗಾವಿ ಜಿಲ್ಲೆಯಾದ್ಯಂತ ಭಾನುವಾರವೂ ವರುಣ ಅಬ್ಬರಿಸಿದ್ದಾನೆ. ಜೊತೆಗೆ ಜಿಲ್ಲೆಯಲ್ಲಿ ಹರಿಯುವ ಕೃಷ್ಣಾ, ಮಲಪ್ರಭಾ, ವೇದ ಗಂಗಾ, ದೂಧಗಂಗಾ ನದಿಗಳು ಪ್ರವಾಹದ ಮಟ್ಟ ಮೀರಿ ಹರಿಯುತ್ತಿವೆ. ಖಾನಾಪುರ ತಾಲೂಕಿನ ಚಾಪಗಾವಿ ಗ್ರಾಮದಲ್ಲಿ 75 ವರ್ಷದ ವಸಂತ ಅಪ್ಪು ಪಾಟೀಲ ಅವರು ಗ್ರಾಮಸ್ಥರ ವಿರೋಧದ ನಡುವೆಯೂ ನದಿ ದಾಟಲು ಮುಂದಾಗಿದ್ದರು. ಆದರೆ ಸೇತುವೆ ಮೇಲಿಂದ ಕೊಚ್ಚಿ ಹೋಗಿದ್ದರು. ವಸಂತ ಅವರು ಬರೋಬ್ಬರಿ 4 ಕಿ.ಮೀ. ನದಿಯಲ್ಲಿ ಈಜಿ ಹೊರ ಬಂದಿದ್ದಾರೆ.

ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಸೇತುವೆ ಮುಳುಗಡೆಯಾಗಿದೆ. ಶರಣ ಗಂಗಾಂಬಿಕಾ ಐಕ್ಯಮಂಟಪ ಜಲಾವೃತಗೊಂಡಿದೆ. ಖಾನಾಪುರ ತಾಲೂಕಿನ ಹಬ್ಬನಟ್ಟಿಯ ಮಾರುತಿ ಮಂದಿರದ ಕಲಶದವರೆಗೂ ಪ್ರವಾಹ ಬಂದಿದೆ. ಚಿಕ್ಕೋಡಿ ತಾಲೂಕಿನ ದೋಣಿತೋಟದಲ್ಲಿ ಮನೆ ಪರಿಕರಗಳ ಜೊತೆಗೆ ಎಮ್ಮೆಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದೆ.
ಮಾರ್ಕಂಡೇಯ ನದಿಯು ಗೊಡಚಿನಮಲ್ಕಿ ಜಲಪಾತದಲ್ಲಿ ಬೋರ್ಗೆರೆಯುತ್ತಿದೆ. ಕಲ್ಲೋಳದಲ್ಲಿ ಸನದಿ ತೋಟದ ವಸತಿಯಲ್ಲಿ ಸಿಲುಕಿದ್ದ ನಾಯಿಗಳಿಗೆ ಅನ್ನಹಾಕಿ ಮಾನವೀಯತೆ ಮೆರೆದಿದ್ದಾರೆ. ಮುತ್ಯಾನಟ್ಟಿ ಕೆರೆ ಒಡೆದಿದ್ದು ಇನ್ನಷ್ಟು ಮಳೆಯಾದರೆ ಮತ್ತಷ್ಟು ನೀರು ಅಕ್ಕಪಕ್ಕದ ಹಳ್ಳಿಗಳಿಗೆ ನುಗ್ಗುವ ಭೀತಿ ಎದುರಾಗಿದೆ. ದಾನವಾಡ, ದತ್ತವಾಡ ಗ್ರಾಮಗಳು ಜಲಾವೃತಗೊಂಡು ಹೊರಭಾಗದ ಸಂಪರ್ಕ ಕಳೆದುಕೊಂಡಿವೆ. ಜಮೀನಲ್ಲಿ ರೈತರು ಹಾಕಿದ್ದ ಶೆಡ್‍ಗಳು, ವಿದ್ಯುತ್ ಕಂಬಗಳು, ವಿದ್ಯುತ್ ಟ್ರಾನ್ಸ್‍ಫಾರ್ಮರ್ ಗಳು ಮುಳುಗಿವೆ.

ಕಲ್ಲೋಳ ಗ್ರಾಮದಲ್ಲಿರೋ ಬಸ್ ನಿಲ್ದಾಣ ಮುಳುಗಿ ಹೋಗಿದೆ. ದೋಣಿತೋಟದಲ್ಲಿ ಪ್ರವಾಹದಲ್ಲಿ ಸಿಲುಕಿದ್ದ 4 ತಿಂಗಳ ಮಗು ಮತ್ತು ಕುಟುಂಬವನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಯಿತು. ಖಾನಾಪುರ ತಾಲೂಕಿನ ಪಾರಿಶ್ವಾಡದಲ್ಲಿ ಮನೆ ಮತ್ತು ಮೇವಿನ ಬಣವೆಯೊಂದು ಮುಳುಗಡೆಯಾಗಿದೆ.
ಕೊಯ್ನಾ ಜಲಾಶಯವು 105 ಟಿಎಂಸಿ ಸಾಮಥ್ರ್ಯ ಹೊಂದಿದ್ದು, ಈಗಾಗಲೇ 94.20 ಟಿಎಂಸಿ ನೀರು ಸಂಗ್ರಹವಾಗಿದೆ. ಮಹಾರಾಷ್ಟ್ರದಲ್ಲಿ ಭಾರೀ ಮಳೆ ಆಗುತ್ತಿರುವುದರಿಂದ ಕೊಯ್ನಾ ಜಲಾಶಯದಿಂದ ಹೊರಹರಿವಿನ ಪ್ರಮಾಣ ಹೆಚ್ಚಾಗುತ್ತಿದೆ. ಇದರಿಂದಾಗಿ ಕೃಷ್ಣಾ ಹಾಗೂ ಉಪನದಿಗಳು ಉಕ್ಕಿ ಹರಿಯುತ್ತಿದ್ದು, ನದಿ ಪಾತ್ರದ ಸಾವಿರಾರು ಎಕರೆ ಜಮೀನುಗಳು ಮುಳುಗಡೆಯಾಗಿವೆ.

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಗೆದ್ದಲಮರಿ ಗ್ರಾಮದ ಹಳ್ಳೆಪ್ಪ ಹನುಮಂತ ಗಡ್ಡಿ ಅವರ ಕುಟುಂಬವು ಜಮೀನಿನಲ್ಲಿ ವಾಸವಾಗಿತ್ತು. ಕೃಷ್ಣಾ ನದಿ ಪ್ರವಾಹದಮಟ್ಟ ಮೀರಿ ಹರಿಯುತ್ತಿದ್ದರೂ ಜಮೀನಲ್ಲಿಯೇ ವಾಸವಾಗಿದ್ದರು. ಭಾನುವಾರ ಅವರನ್ನು ಹುಣಸಗಿ ತಹಶೀಲ್ದಾರ್ ಸುರೇಶ್ ಅವರ ನೇತೃತ್ವದ ತಂಡವು ಹಳ್ಳೆಪ್ಪ ಮತ್ತು ನಂದಮ್ಮ ದಂಪತಿಯ ಮನವೊಲಿಸಿ ಸುರಕ್ಷಿತ ಸ್ಥಳಕ್ಕೆ ಕರೆತಂದಿದ್ದಾರೆ.
ಶಹಪುರ ತಾಲೂಕಲ್ಲಿರುವ ಕೊಳ್ಳೂರು ಸೇತುವೆ ಮುಳುಗಡೆ ಆಗಿದೆ. ಪ್ರವಾಹದ ರಭಸದಲ್ಲಿ ಕೊಚ್ಚಿಬಂದ ನಾಗರಹಾವೊಂದು ಸೇತುವೆಯ ಕಂಬಿಗೆ ತನ್ನ ಬಾಲವನ್ನು ಸುತ್ತಿಕೊಂಡು ಜೀವ ಉಳಿಸಿಕೊಳ್ಳಲು ಒದ್ದಾಡಿದ್ದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೊಂಕಲ್, ತುಮಕೂರು, ಬೆಂಡಬಂಳಿ, ಕೊಳ್ಳೂರು ಮಳೆಯಾಗುವ ಹಿನ್ನೆಲೆಯಲ್ಲಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ ಡಂಗುರ ಹೊರಡಿಸಿದೆ.
ನಾರಾಯಣಪುರ ಜಲಾಶಯದಿಂದ ಈಗಾಗಲೇ 2.85 ಲಕ್ಷ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಭಾನುವಾರ ರಾತ್ರಿ ಮತ್ತೆ ಹೆಚ್ಚುವರಿಯಾಗಿ ಮೂರು ಲಕ್ಷ ಕ್ಯೂಸೆಕ್ ನೀರನ್ನ ಹೊರಬಿಡುವ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಅಸ್ಕಿ ಗ್ರಾಮದಲ್ಲಿ ಶ್ರಮಬಿಂದು ಸಾಗರ ಬ್ಯಾರೇಜ್ ಶೆಡ್ ಜಲಾವೃತಗೊಂಡಿದೆ. ಆಲಗೂರಗಡ್ಡೆ ಗ್ರಾಮಕ್ಕೂ ನೀರು ನುಗ್ಗಿದ್ದು ಪ್ರವಾಹ ಹೆಚ್ಚಾದರೆ ಚಿಕ್ಕಪಡಸಲಗಿ ಸೇತುವೆ ಮುಳುಗುವುದು ನಿಶ್ಚಿತ. ತುಬಚಿ, ಶೂರ್ಪಾಲಿ, ಮುತ್ತೂರು ಮತ್ತು ಕಂಕನವಾಡಿ ನೀರಿನಿಂದ ಆವೃತಗೊಂಡಿವೆ. ಕಡಕೋಳ ಗ್ರಾಮದ ಹೆಬ್ಬಿಬಸವೇಶ್ವರ ದೇಗುಲ ಜಲಾವೃತಗೊಂಡಿದ್ದು, ಅರ್ಚಕರು ನೀರಲ್ಲೇ ಪೂಜೆ ಮಂತ್ರ-ಪಠಣ ಮಾಡಿದ್ದಾರೆ.
ಹಸು ಸಾವು:
ಅಸ್ಕಿಗ್ರಾಮದಲ್ಲಿ ಬೋಟ್‍ಗಳ ಮೂಲಕ ಸ್ಥಳಾಂತರಗೊಂಡ ಗ್ರಾಮಸ್ಥರು ತಮ್ಮೊಂದಿಗೆ ಎಮ್ಮೆಗಳನ್ನ ಕರೆದೊಯ್ದರು. ಕಂಕಣವಾಡಿಯಲ್ಲಿ ಬೋಟ್ ಮೂಲಕ ಎಳೆದೊಯ್ಯುವಾಗ ಹಸುವೊಂದು ಭಯಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದೆ. ನಾರಾಯಣಪುರ ಜಲಾಶಯದಿಂದ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಕುರ್ವಕುರ್ದ, ಕುರ್ವಕುಲ ನಡುಗಡ್ಡೆ ಮುಳುಗಿವೆ. ಅಗತ್ಯ ವಸ್ತುಗಳಿಗಾಗಿ ಜನ ಡೊಂಗಾರಾಂಪುರಕ್ಕೆ ಬರುತ್ತಿದ್ದಾರೆ. ಲಿಂಗಸುಗೂರಿನ ಶೀಲಹಳ್ಳಿಯಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ಒಂದೇ ಕುಟುಂಬದ ಐವರನ್ನು ರಕ್ಷಣೆ ಮಾಡಲಾಯಿತು.

ಪ್ರವಾಹದಿಂದಾಗಿ ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಲೋಂಡಾ-ಕ್ಯಾಸರಲಾಕ್ ಮಧ್ಯೆಯಿರುವ ರೈಲ್ವೆ ಟ್ರ್ಯಾಕ್ ನಲ್ಲಿ ಮಣ್ಣು ಕುಸಿದಿದ್ದು, ರೈಲು ಸಂಚಾರ ಸ್ಥಗಿತಗೊಂಡಿದೆ. ದತ್ತವಾಡ ಮತ್ತು ಸದಲಗಾ ರಸ್ತೆ ಬಿರುಕುಬಿಟ್ಟಿದೆ.
ಪ್ರವಾಹ ಪೀಡಿತ ಐದೂ ಜಿಲ್ಲೆಗಳಲ್ಲೂ ರಾಜ್ಯ ವಿಪತ್ತು ಪರಿಹಾರ ಮತ್ತು ರಾಷ್ಟ್ರೀಯ ವಿಪತ್ತು ಪರಿಹಾರದ ಸಿಬ್ಬಂದಿ, ಸೈನಿಕರು, ಜಿಲ್ಲೆಯ ಅಧಿಕಾರಿಗಳು ಭರದಲ್ಲಿ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ. ಮಳೆ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದ್ದು, ಪ್ರವಾಹ ಉಲ್ಪಣಗೊಳ್ಳುವ ಎಚ್ಚರಿಕೆ ನೀಡಲಾಗಿದೆ.
ದೇಶದಲ್ಲಿ ವರುಣನ ಅಬ್ಬರ:
ಕರ್ನಾಟಕ ಮಾತ್ರವಲ್ಲ ಪಕ್ಕದ ಮಹಾರಾಷ್ಟ್ರ ಕೆಲ ದಿನಗಳಿಂದ ಜಲಪ್ರಳಯಕ್ಕೆ ಸಾಕ್ಷಿ ಆಗಿದೆ. ರಾಜಧಾನಿ ಮುಂಬೈ ಅಕ್ಷರಶಃ ಮುಳಗಿ ಹೋಗಿದೆ. ದೊಡ್ಡ ದೊಡ್ಡ ಅಪಾರ್ಟ್‍ಮೆಂಟ್‍ಗಳು, ರಸ್ತೆಗಳು ಜಲಾವೃತಗೊಂಡಿವೆ. ಪುಣೆಯ ಕಾಶ್‍ಪೇಟ್‍ನಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ಜಾನುವಾರಗಳನ್ನು ರಕ್ಷಣೆ ಮಾಡಲಾಗಿದೆ. ನಾಸಿಕ್‍ನಲ್ಲಿರುವ ಪ್ರಸಿದ್ಧ ತ್ರಯಬಂಕೇಶ್ವರ ದೇವಸ್ಥಾನ ಮುಳುಗಡೆ ಆಗಿದೆ.
ಮುಂಬೈನ ಖಂಡವಾಲಿಯಲ್ಲಿ ವಾಯುಸೇನೆ ಹೆಲಿಕಾಪ್ಟರ್ ಮೂಲಕ 50ಕ್ಕೂ ಹೆಚ್ಚು ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಮರೀನಾ ಬೀಚ್‍ನಲ್ಲಿ ಬೃಹತ್ ಎತ್ತರದ ಅಲೆಗಳು ಅಪ್ಪಳಿಸುತ್ತಿದ್ದು, ಕಡಲ ಕಿನಾರೆಗೆ ಇಳಿಯದಂತೆ ಕಟ್ಟೆಚ್ಚರ ಘೋಷಿಸಲಾಗಿದೆ.
ಗುಜರಾತ್‍ನ ವಡೋದರಾ, ನವರಸಿ, ಆನಂದ್, ಭರೂಚ್ ಸೇರಿದಂತೆ ದಕ್ಷಿಣ ಮತ್ತು ಮಧ್ಯ ಗುಜರಾತ್‍ನಲ್ಲೂ ಪ್ರಳಯ ಸ್ವರೂಪಿ ಮಳೆ ಆಗುತ್ತಿದೆ. ಮಧ್ಯಪ್ರದೇಶ, ಅಸ್ಸಾಂನಲ್ಲೂ ಧಾರಾಕಾರ ವರುಣ ಅಬ್ಬರಿಸುತ್ತಿದ್ದು, ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.