Tag: ಮಲಪ್ಪುರಂ

  • ಕೇರಳದಲ್ಲಿ ಮತ್ತೆ ಭೂ ಕುಸಿತ – 80 ಮಂದಿ ಕಣ್ಮರೆ

    ಕೇರಳದಲ್ಲಿ ಮತ್ತೆ ಭೂ ಕುಸಿತ – 80 ಮಂದಿ ಕಣ್ಮರೆ

    ತಿರುವನಂತಪುರಂ: ಕೇರಳದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಮಲಪ್ಪುರಂ ಜಿಲ್ಲೆಯ ಕವಳಪ್ಪಾರಂ ಬಳಿ ಮೋಘಸ್ಫೋಟ ಸಂಭವಿಸಿದೆ. ಪರಿಣಾಮ ಭೂ ಕುಸಿತ ಉಂಟಾಗಿ ಸುಮಾರು 35 ಮನೆಗಳು ನಾಮಾವಶೇಷವಾಗಿದೆ ಎಂಬ ಮಾಹಿತಿ ಲಭಿಸಿದೆ.

    ಜಿಲ್ಲೆಯ ನಿಲಂಬೂರ್ ಬಳಿಯ ಭೂಧನಂ ಬಳಿ ಭೂಕುಸಿತ ಸಂಭವಿಸಿದ್ದು, ಸುಮಾರು 35 ಮನೆಗಳು ನೆಲಸಮವಾಗಿದೆ. ಈಗ ಈ ಪ್ರದೇಶ ಸಂಪೂರ್ಣ ಬಯಲು ಪ್ರದೇಶವಾಗಿ ಕಾಣುತ್ತಿದೆ. ಮನೆಗಳಲ್ಲಿ ವಾಸವಿದ್ದ ನಿವಾಸಿಗಳ ಫೋನ್‍ಗೆ ಕರೆ ಮಾಡಿದರೆ ಸ್ವಿಚ್ ಆಫ್, ನಾಟ್ ರೀಚಬಲ್ ಎಂದ ಸಂದೇಶ ಬರುತ್ತಿದ್ದು, ಸುಮಾರು 80ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ. ಗುಡ್ಡ ಪ್ರದೇಶದ ಸುಮಾರು 100 ಎಕರೆ ಭೂಮಿ ಕುಸಿತವಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಪ್ರವಾಹ ಮತ್ತು ಭೂಕುಸಿತದಿಂದ ವಿವಿಧ ಭಾಗಗಳಲ್ಲಿ ಭಾರೀ ಪ್ರಮಾಣದ ಹಾನಿಯಾಗಿದೆ.

    ದುರ್ಘಟನಾ ಸ್ಥಳದಲ್ಲಿ ಸದ್ಯ 3 ರಿಂದ 4 ಮನೆ ಇರುವ ಕುರುಹುಗಳು ಮಾತ್ರ ಕಾಣುತ್ತಿದೆ. ಕವಳಪ್ಪಾರಂ ಮಾತ್ರವಲ್ಲದೇ ನೀಲಂಬೂರ್, ಭುತಾನಂ ಎಂಬಲ್ಲೂ ಭೂಕುಸಿತ ಸಂಭವಿಸಿರುವ ಕುರಿತು ಮಾಹಿತಿ ಲಭಿಸಿದೆ. ದುರ್ಘಟನೆ ಕುರಿತು ಮಾಹಿತಿ ಪಡೆದಿರುವ ಎನ್‍ಡಿಆರ್ ಎಫ್ ತಂಡ ಪ್ರದೇಶವನ್ನು ತಲುಪಲು ಹರಸಾಹಸ ಪಡುತ್ತಿದೆ.

    ಮುನ್ಸೂಚನೆಯಂತೆಯೇ ಕೇರಳದಲ್ಲಿ ಕಳೆದ 2 ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಸರ್ಕಾರ ನೀಡಿರುವ ಅಧಿಕೃತ ಮಾಹಿತಿಯ ಅನ್ವಯ 22 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 315 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, 22 ಸಾವಿರ ಜನ ಈ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಆಗಸ್ಟ್ 15ರ ವರೆಗೂ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ.