Tag: ಮರುಪರೀಕ್ಷೆ

  • ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ – ಮರುಪರೀಕ್ಷೆಗೆ ಸರ್ಕಾರ ತೀರ್ಮಾನ

    ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ – ಮರುಪರೀಕ್ಷೆಗೆ ಸರ್ಕಾರ ತೀರ್ಮಾನ

    ಬೆಂಗಳೂರು: 545 ಪಿಎಸ್‌ಐ ಹುದ್ದೆಗಳ ಅಕ್ರಮ ನೇಮಕಾತಿಗೆ ಸಂಬಂಧಿಸಿದಂತೆ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದ್ದು, ಈ ಸಂಬಂಧ ನಡೆಸಲಾಗಿದ್ದ ಪರೀಕ್ಷೆಯನ್ನು ರದ್ದುಗೊಳಿಸಿ ಮರು ಪರೀಕ್ಷೆ ನಡೆಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

    ವಿಕಾಸಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಆರಗ ಜ್ಞಾನೇಂದ್ರ, ಈ ಹಿಂದೆ ಪರೀಕ್ಷೆ ಬರೆದಿದ್ದ ಎಲ್ಲಾ 54,289 ಪರೀಕ್ಷಾರ್ಥಿಗಳು ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ಪಡೆಯಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಉತ್ತರ ಪತ್ರಿಕೆ ಬಂದೋಬಸ್ತ್‌ನಲ್ಲಿದ್ದ ಪೊಲೀಸ್ ಸಿಬ್ಬಂದಿ ಆತ್ಮಹತ್ಯೆ

    ಇದೇ ವೇಳೆ, ಸಿಐಡಿಯಿಂದ ಬಂಧಿತರಾದ ಅಭ್ಯರ್ಥಿಗಳನ್ನು ಮರು ಪರೀಕ್ಷೆಯಿಂದ ಹೊರಗಿಡಲಾಗುವುದು. ಮರು ಪರೀಕ್ಷೆಯ ದಿನಾಂಕವನ್ನು ಶೀಘ್ರದಲ್ಲೇ ನಿಗದಿಗೊಳಿಸಲಾಗುವುದು ಎಂದು ಗೃಹ ಸಚಿವರು ತಿಳಿಸಿದ್ದಾರೆ.

    ಮರು ಪರೀಕ್ಷೆ ನಿರ್ಧಾರದಿಂದ, ಅಕ್ರಮವಾಗಿ ನೇಮಕಾತಿ ಪಡೆದವರ ಜಾಗಕ್ಕೆ ಪ್ರತಿಭಾವಂತ ಹಾಗೂ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅವಕಾಶ ದೊರಕಲಿದೆ. ಪರೀಕ್ಷಾ ಅಕ್ರಮಗಳು ಒಂದಕ್ಕಿಂತ ಹೆಚ್ಚು ಕೇಂದ್ರಗಳಲ್ಲಿ ನಡೆದಿದೆ ಎಂಬ ಬಗ್ಗೆಯೂ ಅನುಮಾನಗಳಿದ್ದು, ಮರು ಪರೀಕ್ಷೆ ನಡೆಸುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಅಮಿತ್ ಶಾ, ಬೊಮ್ಮಾಯಿ ಜೊತೆ ಸಂಪುಟ ಪುನಾರಚನೆ, ಸಮಾಲೋಚನೆ

    ಮುಂದಿನ ದಿನಗಳಲ್ಲಿ ಇಂಥಹ ಅಕ್ರಮಗಳು ನಡೆಯದಂತೆ ತಡೆಯಲು ಕಠಿಣ ಕಾನೂನುಗಳನ್ನು ಜಾರಿಗೆ ತರುವ ಬಗ್ಗೆಯೂ ಅಲೋಚಿಸಲಾಗುವುದು ಎಂದಿದ್ದಾರೆ. ಮಾಧ್ಯಮಗೋಷ್ಠಿಯಲ್ಲಿ ರಾಜ್ಯ ಪೊಲೀಸ್ ಇಲಾಖೆ ಮುಖ್ಯಸ್ಥ ಪ್ರವೀಣ್ ಸೂದ್ ಹಾಗೂ ರಾಜ್ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರು ಉಪಸ್ಥಿತರಿದ್ದರು.

    ಆದರೆ ಸರ್ಕಾರದ ಈ ಕ್ರಮಕ್ಕೆ ಕೆಲ ಅಭ್ಯರ್ಥಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ನಾನು ಪ್ರಮಾಣಿಕವಾಗಿ ಪರೀಕ್ಷೆ ಬರೆದು ಆಯ್ಕೆಯಾಗಿದ್ದೇವೆ. ಪರೀಕ್ಷೆಗಾಗಿ ತುಂಬಾ ಶ್ರಮವಹಿಸಿದ್ದೇವೆ. ಯಾರೋ ಮಾಡಿದ ತಪ್ಪಿಗೆ ನಾವೂ ಶಿಕ್ಷೆ ಅನುಭವಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.