ನವದೆಹಲಿ: ವನ್ಯಜೀವಿಗಳಿಗೂ ಭಾವನೆಗಳಿವೆ, ತಮ್ಮವರಿಗಾಗಿ ಅವುಗಳು ಕೂಡ ಪರಿತಪಿಸುತ್ತವೆ ಎನ್ನುವುದಕ್ಕೆ ಸದ್ಯ ಕಾಡಾನೆಗಳ ಹಿಂಡೊಂದು ಮೃತಪಟ್ಟ ಮರಿ ಆನೆಯ ಶವವನ್ನು ಹೊತ್ತೊಯ್ದ ವಿಡಿಯೋ ಸಾಕ್ಷಿಯಾಗಿದೆ.
ಕಾಡಿನ ಮಧ್ಯದಲ್ಲಿ ಹಾದು ಹೋಗುವ ರಸ್ತೆಯಲ್ಲಿ ಆನೆಯೊಂದು ಮೃತಪಟ್ಟ ಮರಿ ಆನೆಯನ್ನು ಕಚ್ಚಿಕೊಂಡು ಹೋಗುತಿತ್ತು. ಈ ವೇಳೆ ಅದರ ಹಿಂದೆಯೇ ಶವ ಸಂಸ್ಕಾರಕ್ಕೆ ಆನೆಯ ಹಿಂಡೇ ನಾಯಕ ಆನೆಯನ್ನು ಹಿಂಬಾಲಿಸುತ್ತಿರುವ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪ್ರವೀಣ್ ಕಾಸ್ವಾನ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಆನೆಗಳ ಮೂಕವೇದನೆ ಕಂಡು ನೆಟ್ಟಿಗರು ಮರುಗಿದ್ದಾರೆ.

ವಿಡಿಯೋದಲ್ಲಿ ಆನೆಯೊಂದು ಸತ್ತ ಮರಿಯನ್ನು ಕಚ್ಚಿಕೊಂದು ಬರುತ್ತಿದ್ದು, ಮೊದಲಿಗೆ ರಸ್ತೆ ದಾಟಿ ಮರಿಯ ಶವವನ್ನು ಅಲ್ಲಿಯೇ ಇಡುತ್ತದೆ. ಬಳಿಕ ಕೆಲ ಕ್ಷಣದ ನಂತರ ಮತ್ತೊಂದು ಆನೆ ಬಂದು ಮರಿ ಬಳಿ ನಿಲ್ಲುತ್ತದೆ. ಇದಾದ ನಂತರ ಆನೆಗಳ ಹಿಂಡೊಂದು ಸ್ಥಳಕ್ಕೆ ಬಂದು ಮರಿಯನ್ನು ಹೊತ್ತುಕೊಂಡು ಕಾಡಿನ ಮತ್ತೊಂದು ದಿಕ್ಕಿಗೆ ಹೋಗಿರುವ ದೃಶ್ಯ ಸೆರೆಯಾಗಿದೆ.
ಈ ವಿಡಿಯೋ ಪೋಸ್ಟ್ ಮಾಡಿರುವ ಅಧಿಕಾರಿ, ಶವ ಸಂಸ್ಕಾರಕ್ಕೆ ಆನೆಗಳ ಹಿಂಡು ಮೃತಪಟ್ಟ ಮರಿ ಆನೆಯನ್ನು ಹೊತ್ತೊಯ್ಯುತ್ತಿದೆ. ಮರಿಯನ್ನು ಬಿಟ್ಟು ಹೋಗಲು ಈ ಕುಟುಂಬ ಬಯಸುತ್ತಿಲ್ಲ ಎಂದು ಬರೆದು ವಿಡಿಯೋ ಜೊತೆ ಟ್ವೀಟ್ ಮಾಡಿದ್ದಾರೆ.

ಅಲ್ಲದೆ ಮತ್ತೊಂದು ಟ್ವೀಟ್‍ನಲ್ಲಿ, ಹಿಂದಿನ ಕಾಲದಲ್ಲಿ ಅರಣ್ಯಗಳಲ್ಲಿ ಆನೆಗಳು ಶವ ಸಂಸ್ಕಾರ ಮಾಡಿರುವ ಬಗ್ಗೆ ಸಿದ್ಧಾಂತಗಳಿವೆ. ಸ್ಟ್ರೆಸಿ ಸೇರಿದಂತೆ ಹಲವರು ಈ ಬಗ್ಗೆ ತಮ್ಮ ಪುಸ್ತಕಗಳಲ್ಲಿ ಬರೆದಿದ್ದಾರೆ. ಆದರೆ ಈವರೆಗೆ ಈ ಬಗ್ಗೆ ನನಗೆ ಯಾವುದೆ ಸಾಕ್ಷಿ ಸಿಕ್ಕಿಲ್ಲ. ಬಹುತೇಕ ಪ್ರಕರಣದಲ್ಲಿ ಆನೆಗಳು ಹೆಚ್ಚಾಗಿ ನೀರು ಹರಿಯುವ ಸ್ಥಳದಲ್ಲೇ ಕೊನೆಯುಸಿರು ಎಳೆಯುತ್ತವೆ ಎಂದು ತಿಳಿದ್ದಾರೆ.
https://twitter.com/ParveenKaswan/status/1137553283596185602
ಅದು ಏನೆಯಾಗಲಿ, ಈ ಆನೆಗಳ ಮೂಕವೇದನೆಯ ವಿಡಿಯೋ ನೋಡಿದವರು ಮಾತ್ರ ಮನುಷ್ಯರಿಗಿಂತ ಪ್ರಾಣಿಗಳೇ ಲೇಸು. ಪ್ರಾಣಿಗಳಿಂದ ಮನುಷ್ಯ ಕಲಿಯಬೇಕಾದದ್ದು ಬಹಳಷ್ಟಿದೆ ಎಂದು ವಿಡಿಯೋಗೆ ಕಮೆಂಟ್ ಮಾಡಿದ್ದಾರೆ. ಜೂನ್ 7ರಂದು ಈ ವಿಡಿಯೋ ಅಪ್ಲೋಡ್ ಮಾಡಲಾಗಿದ್ದು, ಸದ್ಯ ಎಲ್ಲೆಡೆ ಸಖತ್ ಸದ್ದು ಮಾಡುತ್ತಿದೆ.