Tag: ಮರಳು ದಂಧೆಕೋರರು

  • ಪೊಲೀಸರ ಮೇಲೆ ಲಾರಿ ಹತ್ತಿಸಲು ಯತ್ನಿಸಿದ ಮರಳು ದಂಧೆಕೋರರು

    ಪೊಲೀಸರ ಮೇಲೆ ಲಾರಿ ಹತ್ತಿಸಲು ಯತ್ನಿಸಿದ ಮರಳು ದಂಧೆಕೋರರು

    ಚಿಕ್ಕಮಗಳೂರು: ಅಕ್ರಮ ಮರಳು ಗಣಿಗಾರಿಕೆಯ ಅಡ್ಡೆ ಮೇಲೆ ದಾಳಿ ಮಾಡಲು ಮುಂದಾದಾಗ ಪೊಲೀಸರ ಮೇಲೆ ಲಾರಿ ಹತ್ನಿಸಲು ಮರಳು ದಂಧೆಕೋರರು ಯತ್ನಿಸಿದ್ದಾರೆ.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿಯ ತಲಗೂರು ವ್ಯಾಪ್ತಿಯಲ್ಲಿ ಹೇಮಾವತಿ ನದಿ ಒಡಲಲ್ಲಿ ಮರಳುಗಾರಿಕೆ ನಡೆಯುತ್ತಿದ್ದ ಜಾಗಕ್ಕೆ ಪೊಲೀಸರು ರೇಡ್ ಮಾಡಿದ್ದಾರೆ. ಆಗ ಮರುಳುಗಾರಿಕೆ ಮಾಡುತ್ತಿದ್ದ ಮೊಹಿನುದ್ದಿನ್ ಎಂಬವನು ಪೊಲೀಸರ ಮೇಲೆ ಲಾರಿ ಹತ್ತಿಸಲು ಯತ್ನಿಸಿದ್ದನು. ಆಗ ಪೊಲೀಸರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು. ಈ ಘಟನೆ ಬಳಿಕ ಆತ ಕೂಡ ಅಂದಿನಿಂದ ನಾಪತ್ತೆಯಾಗಿದ್ದಾನೆ.

    ಅಂದಿನಿಂದ ವಿಷಯವನ್ನು ಗೌಪ್ಯವಾಗಿಟ್ಟಿದ್ದ ಪೊಲೀಸರು ಸೋಮವಾರ ಸುಮಾರು ನೂರಕ್ಕೂ ಅಧಿಕ ಪೊಲೀಸರು ತಲಗೂರು ಗ್ರಾಮಕ್ಕೆ ನುಗ್ಗಿದ್ದಾರೆ. ಓರ್ವ ಮರಳು ದಂಧೆಕೋರನನ್ನು ಹಿಡಿಯಲು ಐವರು ಸಬ್ ಇನ್ಸ್ ಪೆಕ್ಟರ್, ಐವರು ಸರ್ಕಲ್ ಇನ್ಸ್ ಪೆಕ್ಟರ್, ಒಂದು ನಕ್ಸಲ್ ನಿಗ್ರಹ ಪಡೆ ತುಕಡಿ, ಒಂದು ಓಬವ್ವ ತುಕಡಿ ಹಾಗೂ ಒಂದು ಸಶಸ್ತ್ರ ಮೀಸಲ ಪಡೆಯ ತುಕಡಿಯ ನೂರಕ್ಕೂ ಅಧಿಕ ಪೊಲೀಸರು ಹೋಗಿದ್ದಾರೆ. ಪೊಲೀಸರು ಹೀಗೆ ಏಕಾಏಕಿ ನುಗ್ಗುವುದು ಕಂಡು ಗ್ರಾಮಸ್ಥರು ಆತಂಕಕ್ಕೀಡಾಗಿದ್ದರು.

    ನೂರಕ್ಕೂ ಅಧಿಕ ಪೊಲೀಸರು ಗ್ರಾಮದ ಸುತ್ತಲೂ ನಾಕಾಬಂಧಿ ರಚಿಸಿ ಬೆಳಗ್ಗೆಯಿಂದ ಸಂಜೆವರೆಗೂ ಹುಡುಕಾಡಿದ್ದಾರೆ. ಆದರೆ ಆರೋಪಿಯ ಸುಳಿವು ಪತ್ತೆಯಾಗಿಲ್ಲ. ಬಳಿಕ ಆರೋಪಿಗೆ ಸೇರಿದ ಎರಡು ಟೆಂಪೋ, ಎರಡು ಬೈಕ್ ಹಾಗೂ ಎರಡು ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

  • ಮಂಡ್ಯದಲ್ಲಿ ಮರಳು ದಂಧೆಕೋರರ ಅಟ್ಟಹಾಸ – ನಾಲ್ವರು ಪೊಲೀಸರ ಮೇಲೆ ಅಟ್ಯಾಕ್

    ಮಂಡ್ಯದಲ್ಲಿ ಮರಳು ದಂಧೆಕೋರರ ಅಟ್ಟಹಾಸ – ನಾಲ್ವರು ಪೊಲೀಸರ ಮೇಲೆ ಅಟ್ಯಾಕ್

    ಮಂಡ್ಯ: ಮರಳು ದಂಧೆಕೋರರನ್ನು ಪ್ರಶ್ನೆ ಮಾಡಿದ್ದಕ್ಕೆ ನಾಲ್ವರು ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಅಟ್ಟಹಾಸ ನಡೆಸಿರುವ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ಕೊರವನಗುಂದಿ ಗ್ರಾಮದ ಬಳಿ ನಡೆದಿದೆ.

    ಎಸ್‍ಪಿ ಸ್ಕ್ವಾಡ್‍ಗೆ ಸೇರಿದ ಗುರುಮೂರ್ತಿ, ಶಶಿ, ಹರೀಶ್, ಮತ್ತು ದೇವರಾಜು ಮರಳು ದಂಧೆಕೋರರಿಂದ ಹಲ್ಲೆಗೊಳಗಾದ ಪೊಲೀಸ್ ಸಿಬ್ಬಂದಿ. ಗುರುವಾರ ರಾತ್ರಿ ಪೊಲೀಸ್ ಸಿಬ್ಬಂದಿ ಎಂದಿನಂತೆ ರೌಂಡ್ಸ್ ಗೆ ಹೋಗಿದ್ದಾರೆ. ಈ ಸಂದಂರ್ಭದಲ್ಲಿ ರಾತ್ರಿ ಸುಮಾರು 11 ಗಂಟೆಗೆ ಎರಡು ಟ್ರ್ಯಾಕ್ಟರ್‍ನಲ್ಲಿ ಮರಳು ತುಂಬಿಕೊಂಡು ಬರುವುದನ್ನು ನಾಲ್ವರು ಪೊಲೀಸರು ಗಮನಿಸಿದ್ದಾರೆ. ಈ ಬಗ್ಗೆ ಟ್ರ್ಯಾಕ್ಟರ್ ಚಾಲಕರನ್ನು ಪ್ರಶ್ನೆ ಮಾಡಿದ್ದಾರೆ. ಆದರೆ ಮರಳು ದಂಧೆಕೋರರು ತಕ್ಷಣ ತಮ್ಮವರನ್ನು ಸ್ಥಳಕ್ಕೆ ಕರೆಸಿಕೊಂಡು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ.

    ನಂತರ ಅಲ್ಲಿಂದ ಪೊಲೀಸರು ತಪ್ಪಿಸಿಕೊಂಡು ಹೋಗಿ ನಾಗಮಂಗಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ನಾಗಮಂಗಲ ಪೊಲೀಸರು ಹೆಚ್ಚುವರಿ ಪೊಲೀಸರೊಂದಿಗೆ ಸ್ಥಳಕ್ಕೆ ಬಂದು ಮೂವರು ಮರಳು ದಂಧೆಕೋರರನ್ನು ವಶಕ್ಕೆ ಪಡೆದು ತನಿಖೆ ಮಾಡುತ್ತಿದ್ದಾರೆ.

    ಈ ಹಿಂದೆ ನಾಗಮಂಗಲ ಡಿವೈಎಸ್‍ಪಿ ಆಗಿದ್ದ ಸವಿತಾ ಹೂಗಾರ್ ಅವರ ವಾಹನಕ್ಕೆ ಡಿಕ್ಕಿ ಹೊಡೆಸಿ ಕೊಲ್ಲಲು ಯತ್ನಿಸಿದ್ದರು. ಅಷ್ಟೇ ಅಲ್ಲದೇ ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ವರದಿ ಮಾಡಲು ತೆರಳಿದ್ದ ಪತ್ರಕರ್ತರ ಮೇಲೂ ಕೂಡ ಹಲ್ಲೆ ನಡೆದಿತ್ತು. ಇದೀಗ ಮತ್ತೆ ಪೊಲೀಸರ ಮೇಲೆ ಹಲ್ಲೆ ನಡೆದಿದ್ದು, ಇದರಿಂದ ಜಿಲ್ಲೆಯ ಜನರು ಬೆಚ್ಚಿ ಬೀಳುವಂತೆ ಮಾಡಿದೆ.