Tag: ಮರಳು ಕಲೆ

  • ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕ ನಂ.2

    ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕ ನಂ.2

    – 2 ಹುಲಿಗಳ ಅಂತರದಲ್ಲಿ ಮೊದಲ ಸ್ಥಾನ ತಪ್ಪಿಸಿಕೊಂಡ ಕರ್ನಾಟಕ
    – ಮಧ್ಯಪ್ರದೇಶದಲ್ಲಿವೆ ಹೆಚ್ಚು ಹುಲಿಗಳು

    ನವದೆಹಲಿ: ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಕೆಲವೇ ಸಂಖ್ಯೆಗಳ ಅಂತರದಲ್ಲಿ ಕರ್ನಾಟಕ ನಂ.1 ಪಟ್ಟ ಕೈತಪ್ಪುತ್ತಿದ್ದು, ಕಳೆದ ಬಾರಿಯಂತೆ ಈ ಬಾರಿಯೂ ಎರಡನೇ ಸ್ಥಾನದಲ್ಲಿಯೇ ಮುಂದುವರಿದಿದೆ.

    ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಮಧ್ಯ ಪ್ರದೇಶ 526 ಹುಲಿಗಳನ್ನು ಹೊಂದುವ ಮೂಲಕ ಮೊದಲ ಸ್ಥಾನ ಪಡೆದಿದೆ. ಕರ್ನಾಟಕ 524 ಹುಲಿಗಳನ್ನು ಹೊಂದುವ ಮೂಲಕ ಎರಡನೇ ಸ್ಥಾನದಲ್ಲಿದೆ. ಇನ್ನು 442 ಹುಲಿಗಳನ್ನು ಹೊಂದಿರುವ ಉತ್ತರಾಖಂಡ್ ಮೂರನೇ ಸ್ಥಾನದಲ್ಲಿದೆ. ಅಂತರಾಷ್ಟ್ರೀಯ ಹುಲಿ ದಿನದ ಅಂಗವಾಗಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹುಲಿಗಳ ಅಂಕಿ ಸಂಖ್ಯೆಗಳ ವರದಿಯನ್ನು ಬಿಡುಗಡೆ ಮಾಡಿದ್ದಾರೆ.

    ಉತ್ತರಾಖಂಡ್‍ನ ಜಿಮ್ ಕಾರ್ಬೆಟ್‍ನಲ್ಲಿ 231 ಹುಲಿಗಳಿಗಳಿದ್ದು, ನಾಗರಹೊಳೆ ಹಾಗೂ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ 127 ಹಾಗೂ 126 ಹುಲಿಗಳಿವೆ. ದೇಶದಲ್ಲಿ ಒಟ್ಟು 50 ಸಂರಕ್ಷಿತ ಪ್ರದೇಶಗಳಲ್ಲಿ 2,967 ಹುಲಿಗಳಿವೆ ಎಂದು ಜಾವಡೇಕರ್ ಅವರು ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಲಾಗಿದೆ.

    ರಾಜ್ಯದಲ್ಲಿ ಪ್ರಸ್ತುತ ಕಾಳಿ, ಭದ್ರಾ, ನಾಗರಹೊಳೆ, ಬಂಡೀಪುರ, ಬಿಳಿಗಿರಿ ರಂಗನ ಬೆಟ್ಟ ಸಂರಕ್ಷಿತ ಧಾಮಗಳಿವೆ. ರಾಜ್ಯದಲ್ಲಿ ಒಟ್ಟು 524 ಹುಲಿಗಳಿವೆ. ಪ್ರಕಾಶ್ ಜಾವಡೇಕರ್ ಹುಲಿಗಳ ಅಂಕಿ ಸಂಖ್ಯೆಗಳ ವರದಿ ಬಿಡುಗಡೆ ಮಾಡಿದರೆ, ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಅಂತಾರಾಷ್ಟ್ರೀಯ ಹುಲಿ ದಿನಕ್ಕೆ ವಿಶೇಷ ಕಲೆ ಮೂಲಕ ಜಾಗೃತಿ ಮೂಡಿಸಿದ್ದಾರೆ.

    ಪೂರಿ ಬೀಚ್‍ನಲ್ಲಿ ಮರಳಿನಲ್ಲಿ ಹುಲಿಯ ಚಿತ್ರ ಬಿಡುಸುವ ಮೂಲಕ ಗಮನ ಸೆಳೆದಿದ್ದಾರೆ. ಈ ಕುರಿತು ಚಿತ್ರವನ್ನು ಟ್ವೀಟ್ ಮಾಡಿ ಸಾಲುಗಳನ್ನು ಬರೆದಿರುವ ಅವರು, ಹುಲಿಗಳ ಆವಾಸಸ್ಥಾನಗಳನ್ನು ರಕ್ಷಿಸುವ ಮೂಲಕ ಅವುಗಳ ಸಂರಕ್ಷಣೆಗಾಗಿ ಎಲ್ಲರೂ ಒಟ್ಟಾಗೋಣ. ಪೂರಿ ಬೀಚ್‍ನಲ್ಲಿ ಬಿಡಿಸಿದಿ ಚಿತ್ರವೊಂದನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದಾರೆ. ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.