Tag: ಮರಳುಗಾರಿಕೆ

  • ಸುಳ್ಯದ ಪಯಸ್ವಿನಿ ನದಿಯಲ್ಲಿ ಅಕ್ರಮ ಮರಳು ದಂಧೆ- ಕಣ್ಮುಚ್ಚಿ ಕುಳಿತ ಅಧಿಕಾರಿಗಳು

    ಸುಳ್ಯದ ಪಯಸ್ವಿನಿ ನದಿಯಲ್ಲಿ ಅಕ್ರಮ ಮರಳು ದಂಧೆ- ಕಣ್ಮುಚ್ಚಿ ಕುಳಿತ ಅಧಿಕಾರಿಗಳು

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಅಕ್ರಮ ಮರಳುಗಾರಿಕೆ ರಾಜಾರೋಷವಾಗಿ ನಡೆಯುತ್ತಿದ್ದು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಕೃಪೆಯಿಂದ ಯಾವುದೇ ದಾಳಿ ನಡೆಯುತ್ತಿಲ್ಲ. ಒಂದೊಮ್ಮೆ ಕಾಟಾಚಾರಕ್ಕೆ ದಾಳಿ ನಡೆದರೂ ಕೆಲವೇ ದಿನಗಳಲ್ಲಿ ಮತ್ತೆ ಎಂದಿನಂತೆ ದಂಧೆ ಮುಂದುವರಿಯುತ್ತದೆ. ಇದರಿಂದ ಜನಸಾಮಾನ್ಯರನ್ನು ಹೈರಾಣಾಗಿಸಿದೆ.

    ಸುಬ್ರಹ್ಮಣ್ಯ, ಧರ್ಮಸ್ಥಳದ ಬಳಿಕ ಸುಳ್ಯ ತಾಲೂಕಿನ ಅರಂತೋಡು ಬಳಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ದಿನಕ್ಕೆ ನೂರಾರು ಲೋಡ್ ಗಳಷ್ಟು ಮರಳು ಸಾಗಾಟವಾಗುತ್ತಿದೆ. ಸಂಜೆಯಾದರೆ ಸಾಕು ಸುಳ್ಯ ತಾಲೂಕಿನ ಅರಂತೋಡು ಪೇಟೆ ದಾಟಿ ಮುಂದಕ್ಕೆ ಹೋಗುವಾಗ ಕಾಮಧೇನು ಹೋಟೆಲ್ ಮುಂಭಾಗದ ರಸ್ತೆಯಲ್ಲಿ ಮರಳು ಸಾಗಾಟದ ಟಿಪ್ಪರ್ ಗಳದ್ದೇ ಹಾವಳಿ. ಮಲ್ಲಡ್ಕದ ಪಯಸ್ವಿನಿ ನದಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ಅಡ್ಡೆಯಿಂದಾಗಿ ರಸ್ತೆ ಸಂಪೂರ್ಣ ಹದಗೆಟ್ಟಿದೆ.

    ಭಾರೀ ಗಾತ್ರದ ಟಿಪ್ಪರ್, ಹಿಟಾಚಿ ಸಂಚಾರಕ್ಕೆ ಗ್ರಾಮದ ಕಿರಿದಾದ ಕಚ್ಚಾರಸ್ತೆ ಬಳಕೆಯಾಗುತ್ತಿದ್ದು, ಇದರಿಂದ ಗ್ರಾಮದ ಜನರು ನಿದ್ದೆ ಕಳೆದುಕೊಂಡಿದ್ದಾರೆ. ರಾತ್ರಿಯಿಂದ ನಸುಕಿನವರೆಗೂ ಎಡೆಬಿಡದೆ ಮರಳು ಸಾಗಾಟ ನಡೆಯುತ್ತಿದ್ದು, ಮಳೆಗಾಲದಲ್ಲಿ ರಸ್ತೆಯಲ್ಲಿ ಬೇರೆ ವಾಹನಗಳ ಸಂಚಾರವೇ ಅಸಾಧ್ಯವಾಗಿದೆ. ಮಲ್ಲಡ್ಕದಲ್ಲಿ ನದಿಯ ಪಕ್ಕದ ಮನೆಯ ಹಿಂಭಾಗದಲ್ಲೇ ಅಕ್ರಮ ಮರಳು ದಾಸ್ತಾನು ಇರಿಸಲಾಗಿದ್ದು, ಗಣಿ ಇಲಾಖೆಗೆ ಗೊತ್ತಿದ್ದರೂ ದಾಳಿ ನಡೆಯುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಾಷ್ಟ್ರೀಯತೆಯ ಚಿಂತನೆಯನ್ನು ಬೆಳೆಸಿಕೊಂಡರೆ ಎಚ್‍ಡಿಕೆಗೆ ಹೊಟ್ಟೆ ಉರಿ ಯಾಕೆ: ಸೂಲಿಬೆಲೆ ಪ್ರಶ್ನೆ

    ಇಲ್ಲಿನ ಮರಳು ದಂಧೆಯ ಕುಳಗಳು ಜನಪ್ರತಿನಿಧಿಯೊಬ್ಬರ ಜೊತೆ ಗಳಸ್ಯ ಕಂಠಸ್ಯ ಸ್ನೇಹ ಹೊಂದಿದ್ದು, ಬೆಂಗಳೂರು, ದೆಹಲಿಗೆ ಜೊತೆಯಲ್ಲಿ ತಿರುಗಾಡುವ ಕಾರಣ ಸ್ಥಳೀಯ ಠಾಣಾ ಪೊಲೀಸರು ಅಕ್ರಮ ನೋಡಿಯೂ ಸುಮ್ಮನಿರುವ ಆರೋಪ ಸ್ಥಳೀಯರದ್ದಾಗಿದೆ.

    ಇದೇ ರಸ್ತೆಯಲ್ಲಿ ಮಡಿಕೇರಿ ಮಾರ್ಗವಾಗಿ ಮುಂದಕ್ಕೆ ತೆರಳಿದರೆ ಮರ್ಕಂಜ ಕ್ರಾಸ್ ರಸ್ತೆಗಿಂತ ಕೆಲವೇ ಮೀಟರ್ ಹಿಂದೆ ಖಾಸಗಿ ವ್ಯಕ್ತಿಯೊಬ್ಬ ತನ್ನ ತೋಟದ ಬಳಿಯ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಾನೆ. ಹಗಲು ಹೊತ್ತು ತೋಟಕ್ಕೆ ಗೇಟ್ ಜಡಿದು ಸಂಜೆಯಾಗುತ್ತಿದ್ದಂತೆ ಗೇಟ್ ತೆರೆದು ಟಿಪ್ಪರ್ ಗಳ ಸಾಲು ಮರಳು ಹೇರಿಕೊಂಡು ಸಾಗುತ್ತಿದ್ದರೆ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಇದನ್ನೂ ಓದಿ: RSS ನ 4 ಸಾವಿರ ಐಎಎಸ್, ಐಪಿಎಸ್ ಅಧಿಕಾರಿಗಳಿದ್ದಾರೆ- ಬಿಜೆಪಿ ವಿರುದ್ಧ ಎಚ್‍ಡಿಕೆ ವಾಗ್ದಾಳಿ 

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ಯ ಮರಳುಗಾರಿಕೆ ನಿಂತಿದೆ. ಜಿಲ್ಲಾಡಳಿತ ಯಾರ್ಡ್ ಗಳಿಗೆ ಮರಳು ಸಾಗಾಟಕ್ಕೆ ಮಾತ್ರ ಅನುಮತಿ ನೀಡಿದೆ. ಹಾಗಿದ್ದರೂ ಇಲ್ಲಿಂದ ನೂರಾರು ಲೋಡ್ ಮರಳು ಸುಳ್ಯ, ಮಡಿಕೇರಿ ಭಾಗಕ್ಕೆ ಸಾಗಾಟವಾಗುತ್ತಿದೆ. ಇದರ ಹಿಂದಿರುವ ಪ್ರಭಾವಶಾಲಿ ಕೈ ಯಾವುದು ಅನ್ನೋದು ಜನರ ಪ್ರಶ್ನೆ. ಪಯಸ್ವಿನಿ ನದಿಯಲ್ಲಿ ಮರಳು ದಂಧೆಯಿಂದ ಪ್ರಾಕೃತಿಕ ಸಮತೋಲನ ತಪ್ಪಿಹೋಗಿ ಮುಂದೊಂದು ದಿನ ಈ ಭಾಗದಲ್ಲೂ ಪ್ರವಾಹ ಪರಿಸ್ಥಿತಿ ತಲೆದೋರಿದರೆ ಅಚ್ಚರಿ ಪಡಬೇಕಿಲ್ಲ. ಹಾಗಾಗುವ ಮುನ್ನ ಜಿಲ್ಲಾಡಳಿತ, ಗಣಿ ಇಲಾಖೆ, ಪೊಲೀಸ್ ಇಲಾಖೆ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಎಚ್ಚೆತ್ತು ದಂಧೆಗೆ ಶಾಶ್ವತ ಬ್ರೇಕ್ ಹಾಕಬೇಕಿದೆ.

    ಧರ್ಮಸ್ಥಳದಲ್ಲಿ ಹಗಲು ಬಂದ್, ರಾತ್ರಿ ಓಪನ್!
    ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಹಗಲು ವೇಳೆ ನಿಂತಿದ್ದು, ರಾತ್ರಿ ವೇಳೆ ಎಂದಿನಂತೆ ಮುಂದುವರಿದಿದೆ. ಮುಂಡಾಜೆ ಚಾರ್ಮಾಡಿ ರಸ್ತೆಯಲ್ಲಿ ಮರಳು ಸಾಗಾಟದ ಟಿಪ್ಪರ್ ಗಳು ಡ್ರೆಜಿಂಗ್ ಬಳಸಿ ತೆಗೆದ ಮರಳನ್ನು ಸಾಗಿಸುತ್ತಿದ್ದು, ಇಲ್ಲಿನ ದಂಧೆ ಸಂಪೂರ್ಣ ನಿಲ್ಲುವುದು ಯಾವಾಗ ಎಂದು ಧರ್ಮಸ್ಥಳದ ನಾಗರಿಕರು ಪ್ರಶ್ನೆ ಮಾಡುತ್ತಿದ್ದಾರೆ. ಎಎಸ್‍ಪಿ ಯಾಗಿ ಖಡಕ್ ಆಫೀಸರ್ ಶಿವಂಶು ರಜಪುತ್ ಅಧಿಕಾರ ಸ್ವೀಕರಿಸಿದ್ದು, ಈ ಭಾಗದ ಅಕ್ರಮ ದಂಧೆ ಮೆಟ್ಟಿನಿಲ್ಲುವ ವಿಶ್ವಾಸ ಜನರಲ್ಲಿದೆ. ನಿನ್ನೆ ಬೆಳ್ತಂಗಡಿ ವ್ಯಾಪ್ತಿಯಲ್ಲಿ ಮರಳು ಸಾಗಾಟದ ಟಿಪ್ಪರ್ ಹಿಡಿದಿದ್ದು, ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ. ಧರ್ಮಸ್ಥಳ, ಸುಳ್ಯದಲ್ಲಿ ನದಿಯೊಡಲು ಬಗೆಯುತ್ತಿರುವ ದಂಧೆ ಮಟ್ಟಹಾಕಲು ಸಂಬಂಧಪಟ್ಟ ಅಧಿಕಾರಿಗಳು ಮನಸು ಮಾಡಬೇಕಿದೆ.

  • ರೈತರಿಗೆ ಅನುಕೂಲವಾಗಲೆಂದು ನಿರ್ಮಿಸಿರುವ ಕೆರೆಯಲ್ಲಿ ಅಕ್ರಮ ಮರಳುಗಾರಿಕೆ

    ರೈತರಿಗೆ ಅನುಕೂಲವಾಗಲೆಂದು ನಿರ್ಮಿಸಿರುವ ಕೆರೆಯಲ್ಲಿ ಅಕ್ರಮ ಮರಳುಗಾರಿಕೆ

    ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಇತ್ತೀಚೆಗೆ ಅಕ್ರಮದ್ದೇ ಸದ್ದು ಹೆಚ್ಚಾಗಿದೆ. ಅಕ್ರಮ ಕಲ್ಲು ಗಣಿಗಾರಿಕೆ ಜೊತೆಗೆ ಫಿಲ್ಟರ್ ಮರಳು ದಂಧೆ ಕೂಡ ನಡೆಯುತ್ತಿದೆ. ಊರಿನ ರೈತರ ಅನುಕೂಲಕ್ಕಾಗಿ ನಿರ್ಮಿಸಿರುವ ಕೆರೆಯಲ್ಲಿ ಪ್ರಭಾವಿ ಮಹಾನುಭಾವನೊಬ್ಬ ಮರಳು ಮಾಫಿಯಾ ನಡೆಸುತ್ತಿದ್ದಾನೆ.

    ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕ್ಯಾತನಹಳ್ಳಿ ಗ್ರಾಮದಲ್ಲಿರುವ ಕಿರಬನಕಟ್ಟೆ ಕೆರೆ ಬಳಿ ಹಲವು ವರ್ಷಗಳಿಂದ ಮರಳು ಫಿಲ್ಟರ್ ದಂಧೆ ನಡೆಸಲಾಗುತ್ತಿದೆ. ಗ್ರಾಮದ ತಮ್ಮೇಗೌಡರು ಮತ್ತವರ ಮಕ್ಕಳಾದ ಅವಿನಾಶ್ ಹಾಗೂ ಆನಂದ್ ಈ ದಂಧೆ ನಡೆಸುತ್ತಿದ್ದಾರಂತೆ. ಕೆರೆ ಪಕ್ಕದ ತಮ್ಮ ಜಮೀನಿಗೆ ಹೊರಗಡೆಯಿಂದ ಲೋಡ್ ಗಟ್ಟಲೇ ಮಣ್ಣನ್ನು ತಂದು ಶೇಖರಣೆ ಮಾಡಿಕೊಂಡು ಕೆರೆಯೊಳಗೆ ಗುಂಡಿ ನಿರ್ಮಿಸಿ, ಫಿಲ್ಟರ್ ಮಾಡಿ ನಿತ್ಯ 20ಕ್ಕೂ ಹೆಚ್ಚು ಟ್ರ್ಯಾಕ್ಟರ್ ಮರಳನ್ನು ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ನಗರಗಳಿಗೆ ರವಾನಿಸುವ ಮೂಲಕ ಲಕ್ಷಾಂತರ ಹಣ ಸಂಪಾದಿಸುತ್ತಿದ್ದಾರೆ. ಇದನ್ನೂ ಓದಿ: ಊಸರವಳ್ಳಿಯಂತೆ ಬಣ್ಣ ಬದಲಾಗುವ ಚರ್ಮ ಮನುಷ್ಯನಿಗೂ ಬಂತು

    ಮಣ್ಣಿನ ರಾಶಿಯನ್ನು ಮರಳಾಗಿ ಪರಿವರ್ತಿಸಿ ಮಾರಾಟ ಮಾಡ್ತಿರುವ ದಂಧೆ ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿಗೂ ನಡೆಯುತ್ತಿದೆ. ಈ ದಂಧೆ ಕಾನೂನು ಬಾಹಿರವಾಗಿದ್ದು, ಫಿಲ್ಟರ್ ಮರಳಿನಿಂದ ನಿರ್ಮಿಸುವ ಮನೆ ತನ್ನ ಆಯಸ್ಸು ಕಳೆದುಕೊಳ್ಳುವ ಜೊತೆಗೆ ಕೆಲವೇ ವರ್ಷಗಳಲ್ಲಿ ಶಿಥಿಲವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಅಲ್ಲದೆ ಈ ದಂಧೆಯಿಂದಾಗಿ ಕೆರೆಯಲ್ಲಿ ಹೂಳು ತುಂಬಿಕೊಳ್ಳುತ್ತಿದ್ದು, ಕೆರೆಯ ನೀರನ್ನೇ ನಂಬಿ ವ್ಯವಸಾಯ ಮಾಡುತ್ತಿರುವ ರೈತರಿಗೆ ತೊಂದರೆಯಾಗುತ್ತಿದೆ. ಆದರೆ ದಂಧೆಕೋರರಿಗೆ ಹೆದರಿ ಗ್ರಾಮಸ್ಥರು ವಿರೋಧ ಮಾಡುತ್ತಿಲ್ಲ. ಖಚಿತ ಮಾಹಿತಿ ಮೇರೆಗೆ ಕೆ.ಆರ್.ಪೇಟೆ ಠಾಣೆಯ ಪಿಎಸ್‍ಐ ಬ್ಯಾಟರಾಯಗೌಡ ನೇತೃತ್ವದ ಪೊಲೀಸರ ತಂಡ ದಾಳಿ ಮಾಡಿ 25 ಲೋಡ್ ಮರಳು ಹಾಗೂ ಮಣ್ಣನ್ನು ವಶಪಡಿಸಿಕೊಂಡಿದ್ದಾರೆ.

  • ರಾಜ್ಯದಲ್ಲಿ ಇನ್ಮುಂದೆ ಬ್ಯಾಗ್‍ನಲ್ಲೇ ಸಿಗಲಿದೆ ಮರಳು!

    ರಾಜ್ಯದಲ್ಲಿ ಇನ್ಮುಂದೆ ಬ್ಯಾಗ್‍ನಲ್ಲೇ ಸಿಗಲಿದೆ ಮರಳು!

    – 50 ಕೆ.ಜಿ.ಮರಳು ಬ್ಯಾಗ್ ಗಳಲ್ಲಿ ಲಭ್ಯ
    – ಪ್ರಾಯೋಗಿಕವಾಗಿ 5 ಕಡೆ ಘಟಕ ಆರಂಭ

    ಬೆಂಗಳೂರು: ದೇಶದಲ್ಲೇ ಪ್ರಥಮ ಬಾರಿಗೆ ಗ್ರಾಹಕರಿಗೆ ಸುಲಭವಾಗಿ ಸಿಗುವಂತೆ, ಬ್ಯಾಗ್ ಗಳಲ್ಲಿ ಮರಳು ಮಾರಾಟ ಮಾಡುವ ವಿನೂತನ ಯೋಜನೆಯನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಆರಂಭಿಸಲಿದೆ. ಸರ್ಕಾರದ ವತಿಯಿಂದಲೇ ಕೈಗೆಟುಕುವ ದರದಲ್ಲಿ ಜನಸಾಮಾನ್ಯರಿಗೆ ಮರಳು ಸಿಗಲಿದ್ದು, ಇದರ ಪ್ರಸ್ತಾವನೆಯೂ ಸಿದ್ಧವಾಗಿದೆ.

    ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಬುಧವಾರ ವಿಕಾಸಸೌಧದಲ್ಲಿ ಕಲ್ಲು ಗಣಿಗಾರಿಕೆ ಮರಳು ಕುರಿತು ಜಿಲ್ಲಾಧಿಕಾರಿಗಳು, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಸೇರಿದಂತೆ ಮತ್ತಿತರ ಅಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಿದರು. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಮದ್ಯವನ್ನು ಯಾವ ರೀತಿ ಕರ್ನಾಟಕ ರಾಜ್ಯ ಪಾನೀಯ ನಿಗಮದ ಮೂಲಕ ಮಾರಾಟ ಮಾಡುತ್ತಿದೆಯೋ, ಅದೇ ಮಾದರಿಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ತನ್ನದೇ ಸಂಸ್ಥೆಯ ಮೂಲಕ ಬ್ಯಾಗ್ ಗಳಲ್ಲಿ ಮರಳು ಮಾರಾಟ ಮಾಡಲು ಉದ್ದೇಶಿಸಿದೆ ಎಂದು ಪ್ರಕಟಿಸಿದರು.

    ಮರಳು ಸಾಗಾಣಿಕೆ ಮಾಡುವ ವೇಳೆ ಕನಿಷ್ಠ ಶೇ.25ರಿಂದ 30ರಷ್ಟು ಮರಳು ಅನುಪಯುಕ್ತವಾಗುತ್ತಿತ್ತು. ಇದನ್ನು ತಪ್ಪಿಸುವ ಉದ್ದೇಶದಿಂದ 50 ಕೆ.ಜಿ.ಯ ಬ್ಯಾಗ್, 1 ಟನ್ ಹಾಗೂ ಅದಕ್ಕಿಂತ ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕರು ಮರಳನ್ನು ಖರೀದಿಸಬಹುದು. ಪ್ರಾಯೋಗಿಕವಾಗಿ ರಾಜ್ಯದ ಐದು ಕಡೆ ಈ ಘಟಕಗಳನ್ನು ಪ್ರಾರಂಭ ಮಾಡಲಾಗುವುದು. ಮರಳು ಮಾರಾಟ ಮಾಡಲು ಬ್ಯಾಗ್‍ಗಳನ್ನು ಸಿದ್ಧಪಡಿಸುವುದು, ಸಾಗಾಣಿಕೆ ಸೇರಿದಂತೆ ಎಲ್ಲ ರೀತಿಯ ತರಬೇತಿಯನ್ನು ಸಂಬಂಧಪಟ್ಟವರಿಗೆ ನೀಡಲಿದ್ದೇವೆ ಎಂದು ತಿಳಿಸಿದರು.

    ಬ್ಯಾಗ್ ಮೂಲಕ ಮಾರಾಟ ಮಾಡುವಾಗ ಎ,ಬಿ ಮತ್ತು ಸಿ ಶ್ರೇಣಿ ಎಂದು ವರ್ಗೀಕರಣ ಮಾಡುತ್ತೇವೆ. ಮೊದಲು ಸ್ಟಾಕ್ ಯಾರ್ಡ್‍ಗಳಲ್ಲಿ ಪ್ರತ್ಯೇಕಗೊಳಿಸಿ ನಂತರ ಅದನ್ನು ಕೈಗೆಟಕುವ ದರದಲ್ಲಿ ವಿತರಣೆ ಮಾಡಲಿದ್ದೇವೆ ಎಂದು ತಿಳಿಸಿದರು.

    ಮರಳುಗಾರಿಕೆಯನ್ನು ಕೇವಲ ಆರು ತಿಂಗಳು ಮಾತ್ರ ನಡೆಸಬಹುದು. ನದಿಗಳಲ್ಲಿ ನೀರು ಸಂಗ್ರಹಣೆಯಾದರೆ ಮರಳು ತೆಗೆಯಲು ಅವಕಾಶವಿರುವುದಿಲ್ಲ. ಬ್ಯಾಗ್‍ಗಳಲ್ಲಿ ಮರಳು ಸಂಗ್ರಹಿಸಿಟ್ಟುಕೊಂಡರೆ ವರ್ಷ ಪೂರ್ತಿ ಬಳಕೆ ಮಾಡಬಹುದು ಎಂದು ಸಲಹೆ ನೀಡಿದರು.

    ಬ್ಯಾಗ್‍ಗಳಲ್ಲಿ ಮರಳು ಸಂಗ್ರಹಣೆಯಾದರೆ ಸಾರ್ವಜನಿಕರಿಗೆ ಗುಣಮಟ್ಟದ ಮರಳು ಸಿಗಲಿದೆ. ತಮ್ಮ ವಾಹನಗಳಲ್ಲಿ ಎಲ್ಲಿಗೆ ಬೇಕಾದರೂ ಸುಲಭವಾಗಿ ಸಾಗಿಸಬಹುದು. ಇದರಿಂದ ಸಾಗಾಣಿಕೆ ವೆಚ್ಚವು ಕಡಿಮೆಯಾಗಲಿದೆ ಎಂದರು.

    ವರ್ಷಪೂರ್ತಿ ಮರಳು ಸಿಗದ ಕಾರಣ ಮಾರುಕಟ್ಟೆಯಲ್ಲಿ ಮರಳಿನ ದರವು ದುಪ್ಪಟ್ಟಾಗುತ್ತಿತ್ತು. ಇದನ್ನು ತಪ್ಪಿಸಲು ಈ ಮಾರ್ಗೋಪಾಯ ಕಂಡುಕೊಳ್ಳಲಾಗಿದೆ. ಬ್ಯಾಗ್‍ಗಳಲ್ಲಿ ಮರಳನ್ನು ಸಂಗ್ರಹಿಸಿಟ್ಟರೆ ಯಾವಾಗ ಬೇಕಾದರೂ ವಿತರಣೆ ಮಾಡಬಹುದು. ಇದಕ್ಕೆ ದರ ಕಡಿಮೆ ಇರುತ್ತದೆ. ಕೇವಲ 50 ರೂ. ಖರ್ಚಾಗಬಹುದು. 5 ಲಕ್ಷಕ್ಕಿಂತ ಕಡಿಮೆ ದರದಲ್ಲಿ ಮನೆ ಕಟ್ಟಿಸಿಕೊಳ್ಳುವವರಿಗೆ ಯಾವುದೇ ರೀತಿಯ ರಾಜಧನ ಕಟ್ಟಿಸಿಕೊಳ್ಳುವುದಿಲ್ಲ. ಬಡವರು, ಬಡತನ ರೇಖೆಗಿಂತ ಕೆಳಗಿನವರು ಗ್ರಾಮ ಪಂಚಾಯತ್ ಮಟ್ಟದಲ್ಲಿ ಆಶ್ರಯ ಮನೆ ಕಲ್ಪಿಸಿಕೊಳ್ಳುವವರಿಗೆ ಉಚಿತ ಮರಳನ್ನು ವಿತರಿಸಿದ್ದೇವೆ ಎಂದು ತಿಳಿಸಿದರು.

    ಬ್ಲಾಕ್‍ಗಳನ್ನು ಗುರುತಿಸಿ: ಇದಕ್ಕೂ ಮುನ್ನ ಜಿಲ್ಲಾಧಿಕಾರಿಗಳು ಮತ್ತು ಅರಣ್ಯ ಉಪಸಂರಕ್ಷಣಾಧಿಕಾರಿಗಳ ಜತೆ ವೀಡಿಯೋ ಸಂವಾದ ನಡೆಸಿದ ಸಚಿವ ಮುರುಗೇಶ್ ನಿರಾಣಿ ಅವರು ತಕ್ಷಣವೇ ನದಿ ಪಾತ್ರಗಳಲ್ಲಿ ಒಂದು, ಎರಡು, ಮೂರನೆ ಶ್ರೇಣಿಯ ಮರಳು ಬ್ಲಾಕ್‍ಗಳನ್ನು ಗುರುತಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ಕೊಟ್ಟರು. ಕೆಎಸ್‍ಎಂಸಿಎಲ್, ಹೆಚ್‍ಜಿಎಂಎಲ್ ವತಿಯಿಂದ ನಾಲ್ಕು, ಐದು ಮತ್ತು ಆರನೆ ಶ್ರೇಣಿಯ ನದಿ ಪಾತ್ರಗಳಲ್ಲಿ ಮರಳು ಗಣಿಗಾರಿಕೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು. ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಮರಳು ಬ್ಲಾಕ್‍ಗಳನ್ನು ಗುರುತಿಸಿ, ಅಧಿಸೂಚನೆ ಹೊರಡಿಸಿ, ಕಾರ್ಯಾದೇಶ ನೀಡಲಾಗಿದೆ. ಬೇರೆ ಜಿಲ್ಲೆಗಳಲ್ಲಿ ಇದು ಏಕೆ ಸಾಧ್ಯವಾಗಿಲ್ಲ. ಕೂಡಲೇ ಬ್ಲಾಕ್ ಗುರುತಿಸುವ ಕಾರ್ಯ ಮಾಡಿ ಎಂದು ಸೂಚಿಸಿದರು.

    ಡ್ರೋನ್ ಮೂಲಕ ಸಮೀಕ್ಷೆ ನಡೆಸಬೇಕು. ಹೊಸದಾಗಿ ಟೆಂಡರ್ ಕರೆಯುವುದು ಅಥವಾ ಮರು ಟೆಂಡರ್ ಕರೆದಾದರೂ ಬ್ಲಾಕ್‍ಗಳನ್ನು ಗುರುತಿಸಬೇಕು. ಸಬೂಬು ಹೇಳಬೇಡಿ ಎಂದು ನಿರಾಣಿ ತಾಕೀತು ಮಾಡಿದರು. ಈಗಾಗಲೇ ನೂತನ ಮರಳು ನೀತಿ ಸಿದ್ಧವಾಗಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚೆ ನಡೆಸಿ ಅದಷ್ಟು ಶೀಘ್ರದಲ್ಲೇ ಬಿಡುಗಡೆ ಮಾಡಲಿದ್ದೇವೆ. ಇದು ದೇಶಕ್ಕೆ ಮಾದರಿಯಾದ ನೀತಿ ಆಗಲಿದೆ ಎಂದು ಅಭಿಪ್ರಾಯಪಟ್ಟರು.

    ಗಣಿಬಾಧಿತ ಜಿಲ್ಲೆಗಳಾದ ತುಮಕೂರು, ಚಿತ್ರದುರ್ಗ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಜಿಲ್ಲಾ ಅದಿರು ನಿಧಿಯಿಂದ ದೊಡ್ಡ ಯೋಜನೆಗಳನ್ನು ರೂಪಿಸಲು ವಿಸ್ತೃತ ಯೋಜನ ವರದಿ(ಡಿಪಿಆರ್) ಸಿದ್ಧಪಡಿಸಲು ಸಚಿವ ನಿರಾಣಿ ಸೂಚಿಸಿದರು. ಈ ಮೂರು ಜಿಲ್ಲೆಗಳ ಜಿಲ್ಲಾಧಿಕಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೇರಿದಂತೆ ಮತ್ತಿತರರ ಜೊತೆ ಪ್ರತ್ಯೇಕವಾಗಿ ವೀಡಿಯೋ ಸಂವಾದ ನಡೆಸಿದ ಅವರು, ಕೂಡಲೇ ಡಿಪಿಆರ್ ಸಿದ್ಧಪಡಿಸಲು ನಿದೇರ್ಶನ ನೀಡಿದರು. ಈ ಮೂರು ಜಿಲ್ಲೆಗಳಲ್ಲಿ ಡಿಎಂಎಫ್ ನಿಧಿಯಿಂದ ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ನೈರ್ಮಲೀಕರಣ, ಸಮುದಾಯ ಭವನ, ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಅವಕಾಶ ಇದೆ. ಡಿಎಂಎಫ್ ನಿಧಿ ಬಳಕೆ ಮಾಡಿಕೊಳ್ಳುವ ಸಂಬಂಧ ಸುಪ್ರೀಂ ಕೋರ್ಟ್ ಗೆ ಮನವರಿಕೆ ಮಾಡಿಕೊಡಲಾಗುವುದು. ವಿಶೇಷವಾಗಿ ಚಿತ್ರದುರ್ಗ, ಬಳ್ಳಾರಿ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಕಾರ್ಯಕ್ರಮಗಳನ್ನು ಜಾರಿ ಮಾಡುವ ಕುರಿತಾಗಿ ಡಿಪಿಆರ್ ಸಿದ್ಧಪಡಿಸಬೇಕೆಂದು ಹೇಳಿದರು. ಇದಕ್ಕೆ ಸಮ್ಮತಿಸಿದ ಮೂರು ಜಿಲ್ಲೆಗಳ ಅಧಿಕಾರಿಗಳು ಆದಷ್ಟು ಶೀಘ್ರ ಇಲಾಖೆಗೆ ವಿಸ್ತøತ ಯೋಜನಾ ವರದಿ ಸಿದ್ಧಪಡಿಸುವುದಾಗಿ ತಿಳಿಸಿದರು.

  • ಅಕ್ರಮ ಮರಳು ದಂಧೆಕೋರರಿಂದ ಜೀವ ಬೆದರಿಕೆ- ಯುವಕ ಎಸ್‍ಪಿ ಕಚೇರಿಯಲ್ಲಿ ಠಿಕಾಣಿ

    ಅಕ್ರಮ ಮರಳು ದಂಧೆಕೋರರಿಂದ ಜೀವ ಬೆದರಿಕೆ- ಯುವಕ ಎಸ್‍ಪಿ ಕಚೇರಿಯಲ್ಲಿ ಠಿಕಾಣಿ

    – ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಮಾಡಿದ್ದ ಯುವಕ

    ಯಾದಗಿರಿ: ಅಕ್ರಮ ಮರಳುಗಾರಿಗೆ ಅವ್ಯಾಹತವಾಗಿ ನಡೆಯುತ್ತಿರುವುದನ್ನು ಕಂಡ ಯುವಕ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿದ ದಂಧೆಕೋರರು ಯುವಕನಿಗೆ ಜೀವ ಬೆದರಿಕೆ ಒಡ್ಡಿದ್ದಾರೆ. ಹೀಗಾಗಿ ಯುವಕ ಎಸ್‍ಪಿ ಕಚೇರಿಯಲ್ಲಿ ಠಿಕಾಣಿ ಹೂಡಿದ್ದಾನೆ.

    ಜಿಲ್ಲೆಯ ವಡಗೇರಾ ತಾಲೂಕಿನ ಗಡ್ಡೆಸುಗುರು ಗ್ರಾಮದ ಭೀಮಾ ನದಿ ತೀರದಲ್ಲಿ ಅಕ್ರಮ ಮರಳು ದಂಧೆ ವಿಪರೀತವಾಗಿದ್ದು, ಅಕ್ರಮ ಮರಳು ದಂಧೆಕೋರರ ದರ್ಪಕ್ಕೆ ಕೊನೆ ಇಲ್ಲದಂತಾಗಿದೆ. ಇದಕ್ಕೆ ಸ್ಥಳೀಯ ಠಾಣೆಗಳ ಪೊಲೀಸರ ಕೃಪಾಕಟಾಕ್ಷ ಸಹ ಇರುವ ಅನುಮಾನ ಮೂಡಿದ್ದು, ಇದರಿಂದ ಅಮಾಯಕ ಜನರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ.

    ಮರಳು ಸಾಗಾಟಕ್ಕೆ ಜೆಸಿಬಿ ಆಪರೇಟಿಂಗ್ ಮಾಡಲು, ಅದೇ ಗ್ರಾಮದ ಮಲ್ಲಿಕಾರ್ಜುನ ತೆರಳಿದ್ದ, ಇದು ಅಕ್ರಮ ದಂಧೆ ಎಂದು ತಿಳಿಯದ ಮಲ್ಲಿಕಾರ್ಜುನ, ದಂಧೆ ನಡೆಯುತ್ತಿರುವುದನ್ನು ಸೆಲ್ಫಿ ವೀಡಿಯೋ ಮಾಡಿಕೊಂಡು, ಸಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ. ಬಳಿಕ ವಿಡಿಯೋ ವೈರಲ್ ಆಗಿದೆ. ಇದರಿಂದ ಕೋಪಗೊಂಡಿರುವ ಅಕ್ರಮ ಮರಳು ದಂಧೆಕೊರ ರಘುಪತಿ, ಮಲ್ಲಿಕಾರ್ಜುನ ಅವರ ಮನೆಗೆ ರಾತ್ರಿ ತೆರಳಿ ಜೀವ ಬೆದರಿಕೆ ಹಾಕಿದ್ದಾನೆ. ಅಲ್ಲದೆ ಗ್ರಾಮ ಬಿಡುವಂತೆ, ಅವಾಜ್ ಸಹ ಹಾಕಿದ್ದಾನೆ. ಈ ಬಗ್ಗೆ ರಘುಪತಿ ಸೇರಿ ಇನ್ನಿತರರ ವಿರುದ್ಧ ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾದರೂ ಆರೋಪಿಗಳ ವಿರುದ್ಧ ವಡಗೇರಾ ಠಾಣೆಯ ಪೊಲೀಸರು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ.

    ಜೀವ ಬೆದರಿಕೆ ಹಿನ್ನೆಲೆ ಊರು ತೊರೆದಿರುವ ಮಲ್ಲಿಕಾರ್ಜುನ, ರಕ್ಷಣೆ ನೀಡಬೇಕೆಂದು ಎಸ್ಪಿ ಕಚೇರಿಗೆ ಅಲೆದಾಡುತ್ತಿದ್ದಾರೆ. ಪೊಲೀಸರು ರಕ್ಷಣೆ ನೀಡದಿದ್ದರೆ ನಾವು ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳುತ್ತೆವೆ, ಪೊಲೀಸ್ ಅಧಿಕಾರಿಗಳು ನನಗೆ ಹಾಗೂ ನನ್ನ ಕುಟುಂಬಕ್ಕೆ ರಕ್ಷಣೆ ನೀಡಬೇಕು. ಒಂದು ವೇಳೆ ರಕ್ಷಣೆ ನೀಡದಿದ್ದರೆ ಮುಂದಾಗುವ ಅನಾಹುತಕ್ಕೆ ಪೊಲೀಸರೇ ಕಾರಣ ಎಂದು ಯುವಕ ಮಲ್ಲಿಕಾರ್ಜುನ ನೋವು ತೊಡಿಕೊಂಡಿದ್ದಾರೆ. ಯಾದಗಿರಿ ಎಸ್ಪಿ ಕಚೇರಿಗೆ ಆಗಮಿಸಿ ಎಸ್ಪಿಗೆ ದೂರು ಸಲ್ಲಿಸಿದ್ದಾರೆ.

  • ನೇತ್ರಾವತಿ ನದಿ ತಟದಲ್ಲಿ ಸಚಿವ ಖಾದರ್ ಆಪ್ತನಿಂದ ಅಕ್ರಮ ಮರಳುಗಾರಿಕೆ!

    ನೇತ್ರಾವತಿ ನದಿ ತಟದಲ್ಲಿ ಸಚಿವ ಖಾದರ್ ಆಪ್ತನಿಂದ ಅಕ್ರಮ ಮರಳುಗಾರಿಕೆ!

    ಮಂಗಳೂರು: ಕಾಂಗ್ರೆಸ್ ನಾಯಕ ಯು.ಟಿ ಖಾದರ್ ಪ್ರಭಾವ ಬಳಸಿ ಸ್ಥಳೀಯ ಕಾಂಗ್ರೆಸ್ ಮುಖಂಡನೊಬ್ಬ ಅಕ್ರಮ ಮರಳುಗಾರಿಕೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.

    ಧರ್ಮಸ್ಥಳದ ನೇತ್ರಾವತಿ ನದಿಯಲ್ಲಿ ಈ ಅಕ್ರಮ ನಡೆಯುತ್ತಿದ್ದು, ಸ್ಥಳೀಯ ಕಾಂಗ್ರೆಸ್ ಮುಖಂಡ ಮಹೇಶ್ ಆಚಾರಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ಮರಳುಗಾರಿಕೆ ನಡೆಯುತ್ತಿರುವ ಸ್ಥಳದ ಪಕ್ಕದಲ್ಲೇ ಎಚ್‍ಪಿ ಗ್ಯಾಸ್ ಲೈನ್ ಹಾದು ಹೋಗಿದ್ದು, ಮರಳುಗಾರಿಕೆಯಿಂದ ಗ್ಯಾಸ್ ಲೈನ್‍ಗೆ ತೊಂದರೆಯಾಗಿರೋ ಆತಂಕ ಸ್ಥಳೀಯರಲ್ಲಿ ಕಾಡುತ್ತಿದೆ. ಧರ್ಮಸ್ಥಳ ಗ್ರಾಮ ಪಂಚಾಯತ್ ಪಿಡಿಓ ಉಮೇಶ್ ರನ್ನು ಕಾಂಗ್ರೆಸ್ ಮುಖಂಡರು ತಮ್ಮ ಕೈಗೊಂಬೆಯನ್ನಾಗಿ ಮಾಡಿದ್ದು, ಅಧಿಕಾರಿಗಳ ಸಮ್ಮುಖದಲ್ಲೇ ಅಕ್ರಮ ನಡೆಸುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

    ಸುಮಾರು 20 ಎಕರೆ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಪ್ರಶ್ನೆ ಎತ್ತಿದವರಿಗೆ ಜೀವಬೆದರಿಕೆ ಒಡ್ಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ಆಪ್ತರ ಈ ಅಕ್ರಮ ನದಿಗೆ ಮಾರಕವಾಗಿದ್ದು, ಅಕ್ರಮಗಳನ್ನು ತಡೆಯಬೇಕಾದ ಅಧಿಕಾರಿಗಳೇ ಅಕ್ರಮದಲ್ಲಿ ಶಾಮೀಲಾಗಿದ್ದಾರೆ ಎಂದು ಸ್ಥಳೀಯರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

  • ಮರಳಿಗಾಗಿ ಗಡಿ ಪ್ರದೇಶ ನಮ್ಮದು ಅಂತಾ ಹೇಳ್ತಿರೋ ತೆಲಂಗಾಣ!

    ಮರಳಿಗಾಗಿ ಗಡಿ ಪ್ರದೇಶ ನಮ್ಮದು ಅಂತಾ ಹೇಳ್ತಿರೋ ತೆಲಂಗಾಣ!

    ಯಾದಗಿರಿ: ಇಷ್ಟು ದಿನ ಕೃಷ್ಣ ನದಿ ನೀರು ಹಂಚಿಕೆಯಲ್ಲಿ ಕ್ಯಾತೆ ತೆಗೆಯುತ್ತಿದ್ದ ತೆಲಂಗಾಣ ಸರ್ಕಾರ, ಈಗ ಮರಳಿಗಾಗಿ ಗಡಿ ಪ್ರದೇಶ ನಮಗೆ ಸೇರಬೇಕೆಂದು ಪಟ್ಟು ಹಿಡಿದಿದೆ. ಗಡಿ ಪ್ರದೇಶದಲ್ಲಿರೋ ಹಳ್ಳದ ಭಾಗ ನಮ್ಮ ರಾಜ್ಯಕ್ಕೆ ಸೇರಿದೆ. ಹೀಗಾಗಿ ಮರಳು ಸಾಗಿಸುತ್ತೆವೆ ಎಂದು ಪಟ್ಟು ಹಿಡಿದಿದ್ದಾರೆ.

    ಆದ್ರೆ ಕರ್ನಾಟಕದ ಅಧಿಕಾರಿಗಳು ಹಳ್ಳದ ಭಾಗ ನಮ್ಮ ವ್ಯಾಪ್ತಿಗೆ ಬರುತ್ತದೆ ಮರಳು ಸಾಗಣೆ ಮಾಡಲು ಬಿಡುವದಿಲ್ಲವೆಂದು ಖಾಕಿ ಪಡೆಯೊಂದಿಗೆ ಸರ್ಪಗಾವಲು ಹಾಕಿ ತೆಲಂಗಾಣ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

    ಯಾದಗಿರಿಯ ಗಡಿ ಭಾಗದಲ್ಲಿರುವ ಚೇಲೇರಿ ಗ್ರಾಮದ ಹಳ್ಳದ ಗಡಿ ವಿವಾದ ಇನ್ನು ಕಗ್ಗಾಂಟಾಗಿ ಪರಿಣಮಿಸಿದೆ. ತೆಲಂಗಾಣ ರಾಜ್ಯದ ಮಹೆಬೂಬನಗರ ಜಿಲ್ಲೆಯ ಕಂದಾಯ ಹಾಗೂ ಸರ್ವೆ ಅಧಿಕಾರಿಗಳು ಈಗಾಗಲೇ ಮರಳು ಗಣಿಗಾರಿಕೆಗೆ ಅನುಮತಿ ನೀಡಿದ್ದಾರೆ. ಇನ್ನು ಈಗಾಗಲೇ ಗಡಿ ಪ್ರದೇಶ ವಿವಾದಲ್ಲಿದ್ದು, ವಿವಾದಿತ ಪ್ರದೇಶದಲ್ಲಿ ಮರಳು ಗಣಿಗಾರಿಕೆ ಬೇಡವೆಂದು ರಾಜ್ಯದ ಕಂದಾಯ ಅಧಿಕಾರಿಗಳು ಪಟ್ಟುಹಿಡಿದಿದ್ದಾರೆ. ತೆಲಂಗಾಣ ಅಧಿಕಾರಿಗಳು ಕರ್ನಾಟಕದ ಮರಳಿನ ಮೇಲೆ ಕಣ್ಣು ಹಾಕಿ, ಕೋಟ್ಯಾನುಗಟ್ಟಲೆ ಮರಳು ಗಣಿಗಾರಿಕೆಯಿಂದ ಆದಾಯ ಗಳಿಸಲು ಹುನ್ನಾರ ನಡೆಸಿದೆ. ಈಗಾಗಲೇ ಮರಳು ಸಾಗಣೆ ಕೂಡ ನಡೆಸಿದೆ.

    ಮರಳುಗಾರಿಕೆಗೆ ರೈತರ ವಿರೋಧ: ಯಾವುದೇ ಕಾರಣಕ್ಕೂ ಹಳ್ಳದ ಪ್ರದೇಶದಲ್ಲಿ ಮರಳು ಗಣಿಗಾರಿಕೆ ನಡೆಸುವುದು ಬೇಡವೆಂದು ಹಳ್ಳದ ತೀರದಲ್ಲಿನ ತೆಲಂಗಾಣದ ಭಾಗದ ಸುತ್ತಲಿನ ರೈತರು ಕೂಡ ಮಹಬೂಬನಗರ ಜಿಲ್ಲಾಧಿಕಾರಿಗಳಿಗೆ ಗಮನಕ್ಕೆ ತಂದಿದ್ದಾರೆ. ಅದೇ ರೀತಿ ನಮ್ಮ ರಾಜ್ಯದ ಹಳ್ಳದ ಭಾಗದಲ್ಲಿರುವ ರೈತರು ಕೂಡ ಚೇಲೇರಿ ಗ್ರಾಮದ ಹಳ್ಳ ಭಾಗದಲ್ಲಿ ಮರಳು ಗಣಿಕಾರಿಕೆ ನಡೆಸಲು ಅನುಮತಿ ನೀಡಬೇಡಿ. ಒಂದು ವೇಳೆ ಮರಳು ಗಣಿಗಾರಿಕೆಗೆ ಅನುಮತಿ ನೀಡಿದ್ರೆ ಅಂತರ್ಜಲ ಕಡಿಮೆಯಾಗಲಿದೆ ಎಂದು ಉಭಯ ರಾಜ್ಯದ ರೈತರು ಒತ್ತಾಯ ಮಾಡಿದ್ದಾರೆ.

    ಒಂದು ಕಡೆ ಚೇಲೇರಿ ಗ್ರಾಮದ ಹಳ್ಳದ ಭಾಗ ಸುಮಾರು 143 ಎಕರೆ ಪ್ರದೇಶ ನಮಗೆ ಸೇರುತ್ತದೆ ಎಂದು ರಾಜ್ಯದ ಕಂದಾಯ ಅಧಿಕಾರಿಗಳ ವಾದವಾಗಿದೆ. ಇನ್ನೊಂದು ಕಡೆ ತೆಲಂಗಾಣದ ಅಧಿಕಾರಿಗಳು ಹಳ್ಳದ ಪ್ರದೇಶ ಸುಮಾರು 40 ಎಕರೆಗೂ ಹೆಚ್ಚು ಪ್ರದೇಶ ನಮಗೆ ಸೇರುತ್ತದೆ ಎಂದು ವಾದಿಸುತ್ತಿದ್ದಾರೆ. ಉಭಯ ರಾಜ್ಯದ ಕಂದಾಯ ನಕಾಶೆಯಲ್ಲಿ ಈ ಬಗ್ಗೆ ಸಾಕಷ್ಟು ಗೊಂದಲವಿದೆ. ನಕಾಶೆ ಪರಿಶೀಲಿಸಿದ್ರೂ, ಗಡಿ ಪ್ರದೇಶ ಕಗ್ಗಂಟು ಸಮಸ್ಯೆ ಪರಿಹಾರ ಕಾಣುವ ಲಕ್ಷಣ ಕಾಣುತ್ತಿಲ್ಲ. ಈ ಬಗ್ಗೆ ಖುದ್ದು ಉಭಯ ರಾಜ್ಯಗಳ ಅಧಿಕಾರಿಗಳು ಹಳ್ಳದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ್ರು. ಸಮಸ್ಯೆ ಇನ್ನು ಬಗೆ ಹರಿಯುವ ಲಕ್ಷಣ ಕಾಣುತ್ತಿಲ್ಲ.

    https://youtu.be/eK_a5jngGWg