Tag: ಮರದ

  • ಅತ್ಯಾಚಾರಗೈದು ಜೈಲು ಸೇರಿದ್ದ ಕೈದಿ ಮರದ ಮೇಲಿಂದ ಬಿದ್ದು ಸಾವು

    ಅತ್ಯಾಚಾರಗೈದು ಜೈಲು ಸೇರಿದ್ದ ಕೈದಿ ಮರದ ಮೇಲಿಂದ ಬಿದ್ದು ಸಾವು

    ಧಾರವಾಡ: ಅಪ್ರಾಪ್ತೆಯನ್ನು ಅತ್ಯಾಚಾರಗೈದು ಪೋಕ್ಸೋ ಕಾಯ್ದೆಯಡಿ ಜೈಲು ಸೇರಿದ್ದ ಕೈದಿಯೋರ್ವ ಮರ ಏರಿ, ಅದರ ಮೇಲಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಧಾರವಾಡ ಕೇಂದ್ರ ಕಾರಾಗೃಹದಲ್ಲಿ ನಡದಿದೆ.

    ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಮೂಲದ ಚೇತನ್‍ಕುಮಾರ ಅಲಿಯಾಸ್ ಮೇಕೆ(28) ಸಾವನ್ನಪ್ಪಿರುವ ಕೈದಿ. 2015ರಲ್ಲಿ ಅಪ್ರಾಪ್ತೆಯನ್ನು ಅತ್ಯಾಚಾರಗೈದಿದ್ದ ಚೇತನ್‍ಗೆ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ 10 ವರ್ಷ ಶಿಕ್ಷೆ ವಿಧಿಸಿತ್ತು. ಈ ಹಿನ್ನೆಲೆ ಕಳೆದ ಐದು ವರ್ಷಗಳಿಂದ ಬಳ್ಳಾರಿ ಜೈಲಿನಲ್ಲಿದ್ದ ಚೇತನ್ ಪದೇ ಪದೇ ಕಾರಾಗೃಹದಲ್ಲಿ ದುರ್ವರ್ತನೆ ಪ್ರದರ್ಶಿಸುತ್ತಿದ್ದನು. ಆದ್ದರಿಂದ ಆತನನ್ನು ಎರಡು ತಿಂಗಳ ಹಿಂದೆಯಷ್ಟೇ ಧಾರವಾಡ ಕೇಂದ್ರ ಕಾರಾಗೃಹಕ್ಕೆ ವರ್ಗಾಯಿಸಲಾಗಿತ್ತು.

    ಧಾರವಾಡ ಕೇಂದ್ರ ಕಾರಗೃಹದಲ್ಲಿಯೂ ಕೂಡ ದುರ್ವರ್ತನೆ ಮೆರೆಯುತ್ತಿದ್ದ ಚೇತನ್ ಹದಿನೈದು ದಿನಗಳ ಹಿಂದೆಯೂ ಮರವೇರಿದ್ದನು. ಆಗ ಆತನನ್ನು ಕಾರಾಗೃಹದ ಅಧಿಕಾರಿಗಳು ವಿಚಾರಿಸಿದಾಗ ಯಾವುದೇ ಕಾರಣ ಹೇಳಿರಲಿಲ್ಲ. ಆದರೆ ಈ ಹಿಂದೆ ಇದ್ದ ಜೈಲಿನಲ್ಲೂ ಚೇತನ್ ಪದೇ ಪದೇ ಜೈಲಿನ ಆವರಣದಲ್ಲಿದ್ದ ಮರ ಹತ್ತುತ್ತಿದ್ದನು ಎನ್ನಲಾಗಿದೆ.

    ಇಂದು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಎಲ್ಲರೂ ನಿರತರಾಗಿದ್ದಾಗ ತೆಂಗಿನ ಮರ ಏರಿದ್ದ ಚೇತನ್ ಮರದ ಮೇಲಿಂದ ಕೆಳಗೆ ಬಿದ್ದಿದ್ದಾನೆ. ಪರಿಣಾಮ ತಲೆಗೆ ಬಲವಾದ ಪೆಟ್ಟಾಗಿದ್ದು, ಕೂಡಲೇ ಆತನನ್ನು ಜೈಲಿನ ಸಿಬ್ಬಂದಿ ಜಿಲ್ಲಾಸ್ಪತ್ರೆಗೆ ರವಾನಿಸಲು ಮುಂದಾದರು. ಆದರೆ ಮಾರ್ಗಮಧ್ಯದಲ್ಲೇ ಚೇತನ್ ಸಾವನ್ನಪ್ಪಿದ್ದಾನೆ.

    ಈ ಬಗ್ಗೆ ಮಾಹಿತಿ ನೀಡಿದ ಜೈಲಿ ಅಧೀಕ್ಷಕಿ ಅನಿತಾ ಅವರು, ಚೇತನ್ ಮಾನಸಿಕ ಅಸ್ವಸ್ಥ ಆಗಿರಲಿಲ್ಲ. ಆದರೆ ಹಿಂದಿನ ಕಾರಾಗೃಹದಲ್ಲಿ ಇದೇ ರೀತಿ ವರ್ತನೆ ಮಾಡಿದ್ದರಿಂದ ಧಾರವಾಡಕ್ಕೆ ಆತನನ್ನು ಕಳುಹಿಸಿಕೊಡಲಾಗಿತ್ತು ಎಂದಿದ್ದಾರೆ. ಸದ್ಯ ಈ ಸಂಬಂಧ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.