Tag: ಮರಣೋತ್ತರ ಪರೀಕ್ಷೆ

  • ಪೊಲೀಸರ ಟಾರ್ಚರ್‌ನಿಂದ ಮಗನ ಸಾವು – ಮರು ಮರಣೋತ್ತರ ಪರೀಕ್ಷೆಗೆ ಆದೇಶ

    ಪೊಲೀಸರ ಟಾರ್ಚರ್‌ನಿಂದ ಮಗನ ಸಾವು – ಮರು ಮರಣೋತ್ತರ ಪರೀಕ್ಷೆಗೆ ಆದೇಶ

    – ಪೊಲೀಸರ ವಿರುದ್ಧ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದ ತಾಯಿ
    – ಬಿಡುಗಡೆಯಾದ ಮರು ದಿನವೇ ಸಾವನ್ನಪ್ಪಿದ್ದ ವಿದ್ಯಾರ್ಥಿ

    ಚೆನ್ನೈ: ಪೊಲೀಸ್ ಟಾರ್ಚರ್‍ನಿಂದ ಸಾವನ್ನಪ್ಪಿದ್ದಾನೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ತಮಿಳುನಾಡು ವಿದ್ಯಾರ್ಥಿಯ ಮೃತದೇಹವನ್ನು ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ನಡೆಸುವಂತೆ ಮದ್ರಾಸ್ ಹೈಕೋರ್ಟ್ ಆದೇಶಿಸಿದೆ.

    ರಾಮನಾಥಪುರ ಜಿಲ್ಲೆ ಮುದುಕಲತ್ತೂರು ಸಮೀಪದ ನೀರ್ ಕೊಜಿಯೆಂತಲ್ ಗ್ರಾಮದ ಕಾಲೇಜು ವಿದ್ಯಾರ್ಥಿ ಎಲ್.ಮಣಿಕಂದನ್(21)ನನ್ನು ವಾಹನ ತಪಾಸಣೆ ವೇಳೆ ಪೊಲೀಸರು ವಶಕ್ಕೆ ಪಡೆದಿದ್ದರು.

    POLICE JEEP

    ಶನಿವಾರ ಸಂಜೆ ಪೊಲೀಸರು ಕಸ್ಟಡಿಯಿಂದ ಬಿಡುಗಡೆ ಮಾಡಿದ್ದರು. ಆದರೆ ಬಿಡುಗಡೆ ಮಾಡಿದ ಮರುದಿನವೇ ಅಂದರೆ ಭಾನುವಾರ ಆತ ಮೃತಪಟ್ಟಿದ್ದಾನೆ. ಈ ಹಿನ್ನೆಲೆ ಆತನ ಸಾವು ಸಹಜವಲ್ಲ ಎಂದು ತಾಯಿ ರಾಮಲಕ್ಷ್ಮಿ ಆರೋಪಿಸಿ ನ್ಯಾಯಲಯದ ಮೊರೆ ಹೋಗಿದ್ದರು. ಇದನ್ನೂ ಓದಿ: ಏಳಕ್ಕೆ ಏಳು ಜೆಡಿಎಸ್ ಶಾಸಕರಿದ್ದರೂ ಮಂಡ್ಯ ಅಭಿವೃದ್ಧಿಯಾಗಿಲ್ಲ ಯಾಕೆ: ಸಿದ್ದರಾಮಯ್ಯ

    ನನ್ನ ಮಗ ತನ್ನ ಬೈಕ್‍ನಲ್ಲಿ ವಾಹನ ಚೆಕ್‍ಪೋಸ್ಟ್‍ನಿಂದ ಪರಾರಿಯಾಗಲು ಯತ್ನಿಸಿದ್ದ. ಈ ಕಾರಣಕ್ಕೆ ಪೊಲೀಸರು ವಿಚಾರಣೆ ಮಾಡುವುದಾಗಿ ಠಾಣೆಗೆ ಕರೆದೊಯ್ದಿದ್ದರು. ನಂತರ ನಮಗೆ ಮಣಿಕಂದನ್ ಅನ್ನು ಮನೆಗೆ ಕರೆದುಕೊಂಡು ಹೋಗುವಂತೆ ಹೇಳಿದರು. ನಾವು ಮಣಿಕಂದನ್ ನನ್ನು ಮನೆಗೆ ಕರೆದುಕೊಂಡು ಹೋಗಿದ್ದು, ನಿಗೂಢವಾಗಿ ಅವನು ಸಾವನ್ನಪ್ಪಿದ್ದಾನೆ. ನನ್ನ ಮಗನ ಸಾವಿಗೆ ನ್ಯಾಯ ಕೊಡಿಸಬೇಕೆಂದು ಅರ್ಜಿಯಲ್ಲಿ ಮನವಿ ಮಾಡಿದ್ದರು.

    ನನ್ನ ಮಗನಿಗೆ ಪೊಲೀಸರು ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ್ದರಿಂದಲೇ ಆತ ಸಾವನ್ನಪ್ಪಿದ್ದಾನೆ. ಈ ಹಿನ್ನೆಲೆಯಲ್ಲಿ ಮಗನ ಮರು ಮರಣೋತ್ತರ ಪರೀಕ್ಷೆ ನಡೆಸಿ ಹಿರಿಯ ಪೊಲೀಸ್ ಅಧಿಕಾರಿಗಳಿಂದ ತನಿಖೆಗೆ ಆದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಿಕೊಂಡಿದ್ದರು.

    ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಜಿಆರ್ ಸ್ವಾಮಿನಾಥನ್, ರಾಮನಾಥಪುರಂ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಣಿಕಂದನ್ ಪಾರ್ಥಿವ ಶರೀರದ ಮರು ಮರಣೋತ್ತರ ಪರೀಕ್ಷೆ ನಡೆಸುವಂತೆ ಆದೇಶಿಸಿದರು. ಅಷ್ಟೇ ಅಲ್ಲದೇ ಮರಣೋತ್ತರ ಪರೀಕ್ಷೆಯ ಎಲ್ಲ ಪ್ರಕ್ರಿಯೆಯ ವಿಡಿಯೋವನ್ನು ಸೆರೆ ಹಿಡಿಯುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ: ನೀವು ಬದಲಾಗದಿದ್ದರೆ ಮುಂದೆ ಎಲ್ಲವೂ ಬದಲಾಗುತ್ತೆ: ಸಂಸದರಿಗೆ ಮೋದಿ ಎಚ್ಚರಿಕೆ

    ಏನಿದು ಘಟನೆ?
    ಶನಿವಾರ ಪರಮಕುಡಿ-ಕೀಳತೂವಲ್ ರಸ್ತೆಯಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ, ಮಣಿಕಂದನ್ ತನ್ನ ಸ್ನೇಹಿತನೊಂದಿಗೆ ಬೈಕ್ ನಲ್ಲಿ ಹೋಗುತ್ತಿದ್ದ. ಅವರು ನಿಲ್ಲಿಸದ ಕಾರಣ, ಅಧಿಕಾರಿಯೊಬ್ಬರು ಆತನ ವಾಹನವನ್ನು ಹಿಂಬಾಲಿಸಿಕೊಂಡು ಹೋಗಿ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದರು. ಸಂಜೆ ಆತನನ್ನು ಬಿಡುಗಡೆ ಮಾಡಿದ್ದರು. ಪೊಲೀಸ್ ಕಸ್ಟಡಿಯಿಂದ ಬಂದ ಮರುದಿನವೇ ಮಣಿಕಂದನ್ ಮೃತಪಟ್ಟಿದ್ದು ಅನುಮಾನಕ್ಕೆ ಕಾರಣವಾಗಿದೆ.

  • ವ್ಯಾಕ್ಸಿನ್ ಪಡೆದ ನಂತರ ಮಗನ ಸಾವು – ಪೋಷಕರ ಆರೋಪ

    ವ್ಯಾಕ್ಸಿನ್ ಪಡೆದ ನಂತರ ಮಗನ ಸಾವು – ಪೋಷಕರ ಆರೋಪ

    ಹಾಸನ: ಕೋವಿಡ್-19 ಚುಚ್ಚುಮದ್ದು ಹಾಕಿಸಿಕೊಂಡ ನಂತರ ಮಗ ಸಾವನ್ನಪ್ಪಿದ್ದಾನೆ ಎಂದು ಪೋಷಕರು ಆರೋಪಿಸಿರುವ ಘಟನೆ ಹಾಸನದ ಅರಸೀಕೆರೆ ತಾಲೂಕಿನಲ್ಲಿ ನಡೆದಿದೆ.

    ಜಿಲ್ಲೆಯ ಅರಸೀಕೆರೆ ತಾಲೂಕಿನ ಬಾಣಾವರ ಸಮೀಪದ ಬೋರನಕೊಪ್ಪಲು ತಾಂಡ್ಯದ ವಸಂತ್ ನಾಯಕ್(35) ಮೃತ ದುರ್ದೈವಿಯಾಗಿದ್ದಾರೆ. ಸೆ.4 ರಂದು ವಸಂತ್ ನಾಯಕ್ ಕೋವಿಡ್-19 ಲಸಿಕೆ ಹಾಕಿಸಿಕೊಂಡಿದ್ದು, ನಂತರ ಅಸ್ವಸ್ಥಗೊಂಡಿದ್ದಾರೆ. ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಸಂತ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನನ್ನೇ ಕೊಂದ ಯುವಕ

    ಮಗನ ಸಾವಿಗೆ ಕೋವಿಡ್-19 ಲಸಿಕೆ ಕಾರಣ ಎಂದು ವಸಂತ್ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಆದರೆ ಲಸಿಕೆಯಿಂದಲೇ ಸಾವು ಸಂಭವಿಸಿದೆ ಎಂಬುದನ್ನು ವೈದ್ಯರು ನಿರಾಕರಿಸಿದ್ದು, ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಮೃತರ ಪೋಷಕರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮಕ್ಕಳಿಗಾಗಿ ಮಿಡಿದ ಹೃದಯ – ರಕ್ತದಾನ ಮಾಡಿ ಮಾನವೀಯತೆ ಮೆರೆದ ಪೊಲೀಸರು 

    ಮರಣೋತ್ತರ ಪರೀಕ್ಷೆ
    ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸತೀಶ್, ಜಿಲ್ಲೆಯಲ್ಲಿ 12 ಲಕ್ಷಕ್ಕೂ ಹೆಚ್ಚು ಜನರಿಗೆ ಕೋವಿಡ್-19 ಲಸಿಕೆಯನ್ನು ಹಾಕಲಾಗಿದೆ. ಯಾರಿಗೂ ಸಹ ಹೆಚ್ಚಿನ ಅಡ್ಡ ಪರಿಣಾಮ ಉಂಟಾಗಿಲ್ಲ ಹಾಗೂ ಸಾವು ಸಂಭವಿಸಿಲ್ಲ. ಇದೀಗ ನಡೆದಿರುವ ಪ್ರಕರಣ ಕುರಿತು ಮರಣೋತ್ತರ ವೈದ್ಯಕೀಯ ಪರೀಕ್ಷೆಯ ನಂತರ ಯಾವ ರೀತಿ ಸಾವು ಸಂಭವಿಸಿದೆ ಎಂದು ಹೇಳಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಗನ ಪ್ರಾಣ ಉಳಿಸಿಕೊಳ್ಳಲು ವೈದ್ಯರ ಕಾಲು ಹಿಡಿದ ತಾಯಿ 

    ಮೃತ ವ್ಯಕ್ತಿ ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ವ್ಯಾಕ್ಸಿನ್ ಹಾಕಿಸಿಕೊಂಡು, ನಂತರ ಅರಸೀಕೆರೆಗೆ ಬಂದಿದ್ದು, ಈ ವೇಳೆ ಏಕೆ ಸಾವು ಸಂಭವಿಸಿದೆ? ಎಂದು ತಿಳಿಯಲು ಮರಣೋತ್ತರ ಪರೀಕ್ಷೆ ಮಾಡಿಸಲಾಗುತ್ತಿದೆ ಎಂದಿದ್ದಾರೆ.

     

  • ದುಬೆ ಸತ್ತಿದ್ದು ಪೊಲೀಸರ ಗುಂಡೇಟಿನಿಂದಲ್ಲ – ಮರಣೋತ್ತರ ವರದಿ ಹೇಳಿದ್ದೇನು?

    ದುಬೆ ಸತ್ತಿದ್ದು ಪೊಲೀಸರ ಗುಂಡೇಟಿನಿಂದಲ್ಲ – ಮರಣೋತ್ತರ ವರದಿ ಹೇಳಿದ್ದೇನು?

    ಲಕ್ನೋ: ಪೊಲೀಸ್ ಎನ್‍ಕೌಂಟರ್ ನಲ್ಲಿ ಸಾವನ್ನಪ್ಪಿದ ಗ್ಯಾಂಗ್‍ಸ್ಟರ್ ವಿಕಾಸ್ ದುಬೆಯ ಮರಣೋತ್ತರ ಪರೀಕ್ಷೆ ಬಂದಿದ್ದು, ವರದಿಯಲ್ಲಿ ಆತ ಪೊಲೀಸರ ಗುಂಡೇಟಿನಿಂದ ಸಾನ್ನಪ್ಪಿಲ್ಲ ಎಂದು ತಿಳಿದು ಬಂದಿದೆ.

    ಜುಲೈ 2ರಂದು ರಾತ್ರಿ ಪೊಲೀಸರ ತಂಡ 60 ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ ವಿಕಾಸ್ ದುಬೆಯನ್ನು ಬಂಧಿಸಲೆಂದು ದಿಕ್ರು ಗ್ರಾಮಕ್ಕೆ ತೆರಳಿತ್ತು. ಈ ವಿಚಾರ ಮೊದಲೇ ತಿಳಿದಿದ್ದ ವಿಕಾಸ್ ದುಬೆ ಬೆಂಬಲಿಗರು ರಸ್ತೆಗೆ ಅಡ್ಡಲಾಗಿ, ಕಲ್ಲು ಹಾಗೂ ಇಟ್ಟಿಗೆಗಳನ್ನು ಇಟ್ಟಿದ್ದರು. ಇದನ್ನು ತೆರವುಗೊಳಿಸಿ ಪೊಲೀಸರು ದುಬೆ ಅವಿತಿದ್ದ ಮನೆಯತ್ತ ಆಗಮಿಸುತ್ತಿದ್ದರು. ಈ ವೇಳೆ ಗುಂಡಿನ ಮಳೆ ಸುರಿಸಿದ್ದಾರೆ. ಪರಿಣಾಮ ಡಿವೈಎಸ್ಪಿ ದೇವೇಂದ್ರ ಮಿಶ್ರಾ, ಮೂವರು ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ಗಳು ಹಾಗೂ 4 ಪೊಲೀಸರು ಮೃತಪಟ್ಟಿದ್ದರು.

    ಪೊಲೀಸರನ್ನು ಕೊಂದಿದ್ದ ವಿಕಾಸ್ ದುಬೆಯನ್ನು ಪೊಲೀಸರು ಎನ್‍ಕೌಂಟರ್ ಮಾಡಿದ್ದರು. ಆದರೆ ದುಬೆ ಸಾವನ್ನಪ್ಪಿದ್ದು, ಪೊಲೀಸರು ಹೊಡೆದ ಗುಂಡೇಟಿನಿಂದಲ್ಲ. ಪೊಲೀಸರು ಗುಂಡು ಹೊಡೆದಾಗ ಆತ ಸತ್ತಿರಲಿಲ್ಲ. ಬದಲಿಗೆ ಪೊಲೀಸರು ಗುಂಡು ಹೊಡೆದಾಗ ಆತನಿಗೆ ತೀವ್ರ ರಕ್ತಸ್ರಾವವಾಗಿದೆ. ಜೊತೆಗೆ ಗುಂಡು ಬಿದ್ದ ತಕ್ಷಣ ಆತ ಶಾಕ್‍ಗೆ ಒಳಗಾಗಿದ್ದಾನೆ. ಹೀಗಾಗಿ ಆತ ರಕ್ತಸ್ರಾವ ಮತ್ತು ಶಾಕ್‍ನಿಂದ ಸಾವನ್ನಪ್ಪಿದ್ದಾನೆ ಎಂದು ಮರಣೋತ್ತರ ಪರೀಕ್ಷೆ ವರದಿ ತಿಳಿಸಿದೆ. ಇದನ್ನು ಓದಿ: 22 ವರ್ಷದ ಹಿಂದೆಯೇ ಪೊಲೀಸರನ್ನು ಓಡಾಡಿಸಿಕೊಂಡು ಹೊಡೆದಿತ್ತು ದುಬೆ ಫ್ಯಾಮಿಲಿ

    ಎಂಟು ಪೊಲೀಸರನ್ನು ಹತ್ಯೆ ಮಾಡಿದ್ದ ಗ್ಯಾಂಗ್‍ಸ್ಟರ್ ವಿಕಾಸ್ ದುಬೆಯನ್ನು ಜುಲೈ 10ರಂದು ಮುಂಜಾನೆ ಉತ್ತರಪ್ರದೇಶದ ಪೊಲೀಸರು ಎನ್‍ಕೌಂಟರ್ ಮಾಡಿದ್ದರು. ವಿಕಾಸ್ ದುಬೆಯನ್ನು ಬಂಧಿಸಿ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ (ಎಸ್‍ಟಿಎಫ್) ಮಧ್ಯ ಪ್ರದೇಶದಿಂದ ಕಾನ್ಪುರಕ್ಕೆ ವಾಪಸ್ ಕರೆತರಲಾಗುತ್ತಿತ್ತು. ಆದರೆ ಕಾನ್ಪುರದ ಬಾರ್ರಾ ಪೊಲೀಸ್ ವಲಯಕ್ಕೆ ತಲುಪುತ್ತಿದ್ದಂತೆ ವಿಕಾಸ್ ದುಬೆ ಕುಳಿತಿದ್ದ ವಾಹನವು ಭಾರೀ ಮಳೆಯಿಂದಾಗಿ ರಸ್ತೆಯಲ್ಲಿ ಪಲ್ಟಿಯಾಗಿದೆ.

    ಆಗ ಪೊಲೀಸರು ವಿಕಾಸ್‍ನನ್ನು ವಾಹನದಿಂದ ಹೊರಗೆ ಎಳೆದುಕೊಂಡಿದ್ದಾರೆ. ಈ ವೇಳೆ ಆರೋಪಿ ಗಾಯಗೊಂಡ ಪೊಲೀಸರೊಬ್ಬರಿಂದ ಬಂದೂಕನ್ನು ಕಿತ್ತುಕೊಂಡು ಪೊಲೀಸರ ಮೇಲೆ ಗುಂಡು ಹಾರಿಸಲು ಯತ್ನಿಸಿದ್ದಾನೆ. ಆಗ ಪೊಲೀಸರು ಕೂಡ ಗುಂಡಿನ ದಾಳಿ ಮಾಡಿದ್ದರು. ಈ ಶೂಟೌಟ್‍ನಲ್ಲಿ ಪೊಲೀಸರು ಆರೋಪಿ ವಿಕಾಸ್ ದುಬೆಯನ್ನ ಎನ್‍ಕೌಂಟರ್ ಮಾಡಿದ್ದರು. ಪರಿಣಾಮ ಗ್ಯಾಂಗ್‍ಸ್ಟರ್ ವಿಕಾಸ್ ದುಬೆ ಎನ್‍ಕೌಂಟರ್ ಗೆ ಬಲಿಯಾಗಿದ್ದ.

  • 14 ದಿನ ಊಟ, ನೀರು ಸೇವಿಸಲಾಗದೇ ನರಳಿ ನರಳಿ ಗರ್ಭಿಣಿ ಆನೆ ಸಾವು

    14 ದಿನ ಊಟ, ನೀರು ಸೇವಿಸಲಾಗದೇ ನರಳಿ ನರಳಿ ಗರ್ಭಿಣಿ ಆನೆ ಸಾವು

    – ಮರಣೋತ್ತರ ಪರೀಕ್ಷೆ ವರದಿ ಬಯಲು

    ತಿರುವನಂತಪುರಂ: ಬಾಯಿಯಲ್ಲಿ ಪೈನಾಪಲ್‍ನಲ್ಲಿ ಪಟಾಕಿ ಸಿಡಿದು 15 ವರ್ಷದ ಗರ್ಭಿಣಿ ಆನೆಯ ಸಾವಿನ ದುರಂತಕ್ಕೆ ಇಡೀ  ದೇಶವೇ ಮರಗುತ್ತಿದೆ. ಇದೀಗ ಆನೆಯ ಸಾವಿನ ಪ್ರಾಥಮಿಕ ಮರಣೋತ್ತರ ವರದಿಯನ್ನು ಅರಣ್ಯ ಇಲಾಖೆ ಬಿಡುಗಡೆ ಮಾಡಿದೆ.

    ಆನೆಯ ಬಾಯಲ್ಲಿ ಪೈನಾಪಲ್‍ ಸ್ಫೋಟಗೊಂಡ ಪರಿಣಾಮ 14 ದಿನಗಳ ಕಾಲ ಆಹಾರವನ್ನೇ ಸೇವಿಸಿಲ್ಲ ಎಂಬ ಅಂಶ ಮರಣೋತ್ತರ ಪರೀಕ್ಷೆಯಿಂದ ಬಯಲಾಗಿದೆ. ಆನೆಯ ಮರಣೋತ್ತರ ಪರೀಕ್ಷೆಯನ್ನು ಮನ್ನಾರ್ ಕಾಡ್ ವಿಭಾಗೀಯ ಆಸ್ಪತ್ರೆಯ ವೈದ್ಯರು ನಡೆಸಿದ್ದಾರೆ. ಪಟಾಕಿ ಸ್ಫೋಟದ ಪರಿಣಾಮ ಆನೆಗೆ ಶ್ವಾಸಕೋಶದ ವೈಫಲ್ಯವಾಗಿದೆ. ಹೀಗಾಗಿ ಆನೆ ಮೃತಪಟ್ಟಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಇದನ್ನೂ ಓದಿ: ಗರ್ಭಿಣಿ ಆನೆ ಹತ್ಯೆಗೈದ ಪ್ರಕರಣ- ಮೂವರು ಶಂಕಿತರು ವಶಕ್ಕೆ

    ಕೇರಳದ ಪಾಲಕ್ಕಾಡ್ ಜಿಲ್ಲೆಗೆ ಬಂದಿದ್ದ ಗರ್ಭಿಣಿ ಆನೆಗೆ ಹಸಿವು ತಾಳಲಾಗದೇ ಪೈನಾಪಲ್ ಹಣ್ಣು ತಿಂದಿದೆ. ಈ ವೇಳೆ ಬಾಯಿಯಲ್ಲಿ ಪಟಾಕಿ ಸ್ಫೋಟಗೊಂಡಿದ್ದು, ಆನೆಗೆ ಗಂಭೀರವಾಗಿ ಗಾಯವಾಗಿದೆ. ಇದರಿಂದ ಆನೆಗೆ ಆಹಾರ ಸೇವೆನೆ ಮಾಡಲು ಸಾಧ್ಯವಾಗಿಲ್ಲ. ಇದನ್ನೂ ಓದಿ: ಅವಳ ನಂಬಿಕೆಯನ್ನು ನಾವು ಉಳಿಸಿಕೊಳ್ಳಲಿಲ್ಲ: ವಿಜಯಲಕ್ಷ್ಮಿ ದರ್ಶನ್

    ಅಷ್ಟೇ ಅಲ್ಲದೇ ಆನೆಗೆ ನೀರನ್ನು ಕುಡಿಯಲೂ ಸಹ ಸಾಧ್ಯವಾಗಲಿಲ್ಲ. ಹೀಗಾಗಿ ಗರ್ಭಿಣಿ ಆನೆ ಸುಮಾರು ಎರಡು ವಾರ ಆಹಾರ, ನೀರು ಏನನ್ನು ಸೇವಿಸಲು ಸಾಧ್ಯವಾಗದೇ ನೋವನ್ನು ಅನುಭವಿಸಿದೆ. ಈ ನೋವನ್ನು ನಿವಾರಿಸಿಕೊಳ್ಳಲು ಆನೆ ಸದಾ ನೀರಿನಲ್ಲೇ ಕಾಲಕಳೆಯುತ್ತಿದೆ. ಕೊನೆಗೆ 14 ದಿನಗಳ ಕಾಲ ಹಸಿವು, ಗಾಯದ ನೋವು ಸಹಿಸಿಕೊಂಡು ನೀರಿನಲ್ಲಿ ಮುಳುಗಿ ಉಸಿರಾಡಲು ಸಾಧ್ಯವಾಗದೇ ಮೃತಪಟ್ಟಿದೆ ಎಂದು ವರದಿಯಲ್ಲಿ ಬಯಲಾಗಿದೆ.

    ಸದ್ಯಕ್ಕೆ ಗರ್ಭಿಣಿ ಆನೆಯನ್ನು ಹತ್ಯೆಗೈದ ಪ್ರಕರಣದ ಸಂಬಂಧ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಆರೋಪಿ ಕೇರಳದ ಮಲಪ್ಪುರಂ ಜಿಲ್ಲೆಯ ಮನ್ನಾರ್ಕಡ್ ಅರಣ್ಯ ಪ್ರದೇಶದನಾಗಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, “ಪಾಲಕ್ಕಾಡ್ ಜಿಲ್ಲೆಯಲ್ಲಿ ನಡೆದ ದುರಂತದಲ್ಲಿ ಗರ್ಭಿಣಿ ಆನೆ ಮೃತಪಟ್ಟಿದೆ. ಈ ಸಂಬಂಧ ಅನೇಕರು ನಮಗೆ ದೂರು ನೀಡಿದ್ದಾರೆ. ನಿಮ್ಮ ಕಾಳಜಿ ಯಾವುದೇ ಕಾರಣಕ್ಕೂ ವ್ಯರ್ಥವಾಗುವುದಿಲ್ಲ ಎಂದು ಭರವಸೆ ನೀಡುತ್ತೇನೆ. ನ್ಯಾಯ ಮೇಲುಗೈ ಸಾಧಿಸುತ್ತದೆ” ಎಂದು ತಿಳಿಸಿದ್ದಾರೆ.

  • ಬಳ್ಳಾರಿ ಅಪಘಾತ ಕೇಸ್‍ಗೆ ಹೊಸ ಟ್ವಿಸ್ಟ್ – ಸ್ಫೋಟಕ ಮಾಹಿತಿ ಬಿಚ್ಚಿಟ್ಟ ವೈದ್ಯ

    ಬಳ್ಳಾರಿ ಅಪಘಾತ ಕೇಸ್‍ಗೆ ಹೊಸ ಟ್ವಿಸ್ಟ್ – ಸ್ಫೋಟಕ ಮಾಹಿತಿ ಬಿಚ್ಚಿಟ್ಟ ವೈದ್ಯ

    ಬಳ್ಳಾರಿ: ಬಳ್ಳಾರಿ ಅಪಘಾತದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಮೃತ ಸಚಿನ್ ಮರಣೋತ್ತರ ಪರೀಕ್ಷೆ ಮಾಡಿದ ವೈದ್ಯ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: ಹೌದು, ಈ ಫೋಟೋದಲ್ಲಿರುವ ವ್ಯಕ್ತಿ ಕಾರಿನಲ್ಲಿದ್ದರು: ಪ್ರತ್ಯಕ್ಷದರ್ಶಿ

    ಕಾರು ಅಪಘಾತದಲ್ಲಿ ಮೃತಪಟ್ಟ ಬೆಂಗಳೂರು ಮೂಲದ ಸಚಿನ್ ಸಚಿವ ಆರ್. ಆಶೋಕ್ ಸಂಬಂಧಿ ಎಂದು ಮರಿಯಮ್ಮನಹಳ್ಳಿ ಸಬ್ ಇನ್ಸ್‌ಪೆಕ್ಟರ್‌ರಿಂದ ಮಾಹಿತಿ ಬಂದಿತ್ತು. ಆ ಕಾರಣಕ್ಕೆ ತಡರಾತ್ರಿ ನಂತರ ಮರಣೋತ್ತರ ಪರೀಕ್ಷೆ ಮಾಡಿ ಮೃತದೇಹವನ್ನು ಕೊಡಲಾಯಿತು. ಐದು ಜನ ಚಿಕಿತ್ಸೆಗಾಗಿ ಬಂದಿದ್ದರು. ಶಿವಕುಮಾರ್, ರಾಹುಲ್‍ಗೆ ಸಣ್ಣಪುಟ್ಟ ಗಾಯಗಳಾಗಿವೆ. ರಾಕೇಶ್‍ಗೆ ಬೆನ್ನು ಮೂಳೆ ಮುರಿದಿತ್ತು. ವರುಣ್ ಚಿಕಿತ್ಸೆ ಪಡೆಯದೆ ಹಾಗೆ ಹೋಗಿದ್ದಾರೆ ಎಂದು ಹೊಸಪೇಟೆ ವೈದ್ಯ ಮಹಾಂತೇಶ್ ತಿಳಿಸಿದ್ದಾರೆ. ಇದನ್ನೂ ಓದಿ: ಕಾರಲ್ಲಿ ಆರ್. ಅಶೋಕ್ ಪುತ್ರ ಇರಲಿಲ್ಲ: ಎಸ್‍ಪಿ ಸಿ.ಕೆ ಬಾಬಾ ಸ್ಪಷ್ಟನೆ

    ಸಚಿನ್ ಅವರು ಬೆಂಗಳೂರಿನವರು, ಅಲ್ಲದೇ ಮೃತ ವ್ಯಕ್ತಿ ಸಚಿವ ಆರ್.ಅಶೋಕ್ ಕಡೆಯವರು, ಆದ್ದರಿಂದ ಬೇಗ ಮರಣೋತ್ತರ ಪರೀಕ್ಷೆ ಮಾಡಿ ಅಂತ ಹೇಳಿದರು. ಸಾಮಾನ್ಯವಾಗಿ ನಾವು ಮಧ್ಯರಾತ್ರಿ ಮರಣೋತ್ತರ ಪರೀಕ್ಷೆ ಮಾಡುವುದಿಲ್ಲ. ಆದರೂ ರಾತ್ರಿ 1.30ಕ್ಕೆ ಸಚಿನ್ ಮರಣೋತ್ತರ ಪರೀಕ್ಷೆ ಮಾಡಿದ್ದೇವೆ ಎಂದರು.

    ಮರಣೋತ್ತರ ಪರೀಕ್ಷೆಯನ್ನು ಬೇಗ ಮಾಡಿಕೊಡುವಂತೆ ಪಿಎಸ್‍ಐ ಹೇಳಿದರು. ತುರ್ತಾಗಿ ಪರೀಕ್ಷೆ ಮಾಡುವಂತೆ ಮನವಿ ಮಾಡಿಕೊಂಡರು. ಪಿಎಸ್‍ಐ ಹೇಳಿದ್ದಕ್ಕೆ ಬೇಗ ಮರಣೋತ್ತರ ಪರೀಕ್ಷೆ ಮಾಡಲಾಯಿತು. ಅಲ್ಲದೇ ಮೃತದೇಹವನ್ನ ಬೆಂಗಳೂರಿಗೆ ತೆಗೆದುಕೊಂಡು ಹೋಗಬೇಕು ಅಂದರು. ಹೀಗಾಗಿ ಮರಣೋತ್ತರ ಪರೀಕ್ಷೆ ಮಾಡಿದ್ದೇವೆ ಎಂದು ತಾಲೂಕು ಆಸ್ಪತ್ರೆ ವೈದ್ಯ ಮಹಾಂತೇಶ್ ಹೇಳಿದರು.

  • ಅನುಮಾನಸ್ಪದ ಸಾವು: ಹೂತಿಟ್ಟ ಅಪ್ರಾಪ್ತೆ ಮೃತದೇಹ ಹೊರ ತೆಗೆದು ಮರಣೋತ್ತರ ಪರೀಕ್ಷೆ

    ಅನುಮಾನಸ್ಪದ ಸಾವು: ಹೂತಿಟ್ಟ ಅಪ್ರಾಪ್ತೆ ಮೃತದೇಹ ಹೊರ ತೆಗೆದು ಮರಣೋತ್ತರ ಪರೀಕ್ಷೆ

    ಕೋಲಾರ: ಕಳೆದ ಮೂರು ದಿನಗಳ ಹಿಂದೆ ಸಹಜ ಸಾವು ಎಂದು ತೀರ್ಮಾನ ಮಾಡಿ ಅಪ್ರಾಪ್ತ ಬಾಲಕಿ ಅಂತ್ಯಸಂಸ್ಕಾರ ನಡೆಸಿದ್ದ ಮೃತದೇಹವನ್ನು ಮತ್ತೆ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ ಘಟನೆ ಕೋಲಾರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    17 ವರ್ಷದ ಅಪ್ರಾಪ್ತ ಬಾಲಕಿ ಕಳೆದ ಮೂರು ದಿನಗಳ ಹಿಂದೆ ಸಂಪ್‍ನಲ್ಲಿ ಬಿದ್ದು ಸಾವನ್ನಪ್ಪಿದ್ದಾಗಿ ಪೋಷಕರು ಆಕೆಯ ಅಂತ್ಯಸಂಸ್ಕಾರ ನೆರವೇರಿಸಿದ್ದರು. ಆದರೆ ಭಾನುವಾರ ಬಾಲಕಿಯ ಪೋಷಕರಿಗೆ ಬಂದ ಫೋನ್ ಕರೆ ಆಕೆಯ ಸಾವಿನ ಬಗ್ಗೆ ಅನುಮಾನವನ್ನು ಮೂಡಿಸಿತ್ತು. ಹೀಗಾಗಿ ಪಿಯುಸಿ ವಿದ್ಯಾರ್ಥಿನಿಯ ಸಾವಿನ ರಹಸ್ಯ ತಿಳಿಯಲು ಇಂದು ತಹಶೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಶವ ಪರೀಕ್ಷೆ ನಡೆಸಲಾಯಿತು.

    ಶನಿವಾರ ಬಾಲಕಿ ಮನೆಯ ಎದುರಿಗಿದ್ದ ಸಂಪ್‍ನಲ್ಲಿ ಬಿದ್ದು ಸಾವನ್ನಪ್ಪಿದ್ದಳು. ಭಾನುವಾರ ಬಾಲಕಿಯ ಪ್ರಿಯಕರ ಎಂದು ಪೋಷಕರಿಗೆ ಫೋನ್ ಮಾಡಿದ್ದ ಯುವಕನ ವರ್ತನೆ ಕಂಡ ಪೋಷಕರು ಅನುಮಾನದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ಫೋನ್ ಮಾಡಿದ ವೇಳೆ ಯುವಕ, ನಾನು ಪ್ರೀತಿಸುತ್ತಿದ್ದ ಹುಡುಗಿಗೆ ಏನಾಯ್ತು? ಎಂದು ಪೋಷಕರಿಗೆ ಧಮ್ಕಿ ಹಾಕಿ ಕರೆ ಕಟ್ ಮಾಡಿದ್ದ. ಇದರಿಂದ ಅನುಮಾನಗೊಂಡ ಪೋಷಕರು ಯಾರೋ ಕೊಲೆ ಮಾಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದರು.

    ದ್ವಿತೀಯ ಪಿಯುಸಿ ಓದುತ್ತಿದ್ದ ಬಾಲಕಿ ಮನೆಯಲ್ಲಿ ಎಲ್ಲರಿಗೂ ಅಚ್ಚು ಮೆಚ್ಚಾಗಿದ್ದಳು. ಎಂದಿನಂತೆ ಶನಿವಾರ 3 ಗಂಟೆಗೆ ಕಾಲೇಜು ಮುಗಿಸಿಕೊಂಡು ಮನೆಗೆ ಬಂದಿದ್ದಳು. ಈ ವೇಳೆ ಆಕೆಯನ್ನು ಮನೆಯಲ್ಲಿ ಬಿಟ್ಟು ಪೋಷಕರು ತೋಟದ ಬಳಿ ತೆರಳಿದ್ದರು. ಸಂಜೆ ಮನೆಗೆ ಬಂದು ನೋಡಿದ ಬಳಿಕ ಮಗಳು ಮನೆಯಲ್ಲಿ ಇಲ್ಲದಿರುವುದು ತಿಳಿದಿತ್ತು. ಆ ಬಳಿಕ ಎಲ್ಲಾ ಕಡೆ ಹುಡುಕಾಟ ನಡೆಸಿದ್ದರು ಬಾಲಕಿ ಸಿಕ್ಕಿರಲಿಲ್ಲ. ಬಳಿಕ ನೀರೆತ್ತಲು ಸಂಪ್ ತೆಗೆದ ವೇಳೆ ಬಾಲಕಿಯ ಶವ ಪತ್ತೆಯಾಗಿತ್ತು.

    ಆ ವೇಳೆ ಎಲ್ಲೋ ಆಯಾ ತಪ್ಪಿ ಸಂಪ್‍ಗೆ ಬಿದ್ದಿರಬಹುದು ಎಂದು ಪೋಷಕರು ಶನಿವಾರ ಸಂಜೆಯೇ ಗ್ರಾಮಸ್ಥರ ಸಮ್ಮುಖದಲ್ಲಿ ಬಾಲಕಿಯ ಅಂತಿಮ ಸಂಸ್ಕಾರ ಪೂರ್ಣಗೊಳಿಸಿದ್ದರು. ಭಾನುವಾರ ಯುವಕನಿಂದ ಫೋನ್ ಕರೆ ಬಂದ ಹಿನ್ನೆಲೆಯಲ್ಲಿ ಇಂದು ಪೊಲೀಸರು, ತಹಶೀಲ್ದಾರ್ ಶೋಭಿತಾ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿಲಾಯಿತು. ಮೃತ ದೇಹದ ಕೆಲ ಮಾದರಿಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‍ಎಸ್‍ಎಲ್)ವರದಿಗಾಗಿ ಕಳುಹಿಸಿಕೊಡಲಾಗಿದೆ. ಕೋಲಾರ ಗ್ರಾಮಾಂತರ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

    ಶನಿವಾರ ಸಂಜೆ ಮನೆಯಲ್ಲಿ ಏನಾಯ್ತು? ಭಾನುವಾರದ ಬಂದ ಫೋನ್ ಕರೆ ಯಾರದ್ದು? ಬಾಲಕಿ ಸಾವು ಆಕಸ್ಮಿಕವೋ, ಕೊಲೆಯೋ ಎಂಬ ಅನುಮಾನಗಳು ಪೋಷಕರನ್ನು ಕಾಡುತ್ತಿದೆ. ಘಟನೆಯ ಸತ್ಯಾಂಶವೆಲ್ಲವೂ ಪೊಲೀಸ್ ತನಿಖೆಯ ಬಳಿಕವೇ ಹೊರಬರಬೇಕಾಗಿದೆ.

  • ತೆಲಂಗಾಣದಲ್ಲಿ ಸಿಕ್ಕ ಮಹಿಳೆ ಶವ ಕೊಲೆ ಅಲ್ಲ ಆತ್ಮಹತ್ಯೆ

    ತೆಲಂಗಾಣದಲ್ಲಿ ಸಿಕ್ಕ ಮಹಿಳೆ ಶವ ಕೊಲೆ ಅಲ್ಲ ಆತ್ಮಹತ್ಯೆ

    ಹೈದರಬಾದ್: ಪಶುವೈದ್ಯೆ ಪ್ರಿಯಾಂಕ ರೆಡ್ಡಿ ನಂತರ ಅದೇ ಪ್ರದೇಶದಲ್ಲಿ ಸಿಕ್ಕ ಮೊತ್ತೊಂದು ಮಹಿಳೆ ಶವ ಕೊಲೆ ಮಾಡಿ ಸುಟ್ಟಿರುವುದಲ್ಲ ಅದು ಆತ್ಮಹತ್ಯೆ ಎಂದು ಪೊಲೀಸರು ಹೇಳಿದ್ದಾರೆ.

    ಹೈದರಾಬಾದ್ ಸಮೀಪ ಶಂಶಾಬಾದ್ ನಗರದ ಹೊರ ವಲಯದ ಅಂಡರ್ ಬ್ರಿಡ್ಜ್ ಕೆಳಗೆ ಗುರುವಾರ ಪಶುವೈದ್ಯ ಪ್ರಿಯಾಂಕ ಶವ ಸಿಕ್ಕಿತ್ತು. ಇದೇ ಜಾಗದ ಸಮೀಪದಲ್ಲಿ ಮತ್ತೋರ್ವ ಮಹಿಳೆಯ ಮೃತದೇಹವು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅದನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು.

    ಈಗ ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಪ್ರಿಯಾಂಕ ಶವದ ನಂತರ ಸಿಕ್ಕ ಮಹಿಳೆ ಶವ ಕೊಲೆ ಮಾಡಿ ಸುಟ್ಟಿದ್ದಲ್ಲ. ಆಕೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿದ್ದಾರೆ. ಈ ಪ್ರಕರಣದ ಪ್ರಾಥಮಿಕ ತನಿಖೆಯಿಂದ ಶವವಾಗಿ ಸಿಕ್ಕಿರುವ 35 ವರ್ಷದ ಮಹಿಳೆ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಆಕೆಯ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿದ್ದಾರೆ.

    ಈ ಪ್ರಕರಣದ ತನಿಖೆಯಲ್ಲಿ ನಾವು ಸಿಸಿಟಿವಿಯನ್ನು ಚೆಕ್ ಮಾಡಿದ್ದೇವೆ. ಇದರಲ್ಲಿ ಶುಕ್ರವಾರ ಸಂಜೆ ಮಹಿಳೆ ಬ್ಯಾಗ್ ಅನ್ನು ಹಿಡಿದುಕೊಂಡು ದೇವಸ್ಥಾನದ ಬಳಿ ಹೋಗಿರುವುದು ಗೊತ್ತಾಗಿದೆ. ಆ ಬ್ಯಾಗ್ ನಲ್ಲಿ ಪೆಟ್ರೋಲ್ ತೆಗೆದುಕೊಂಡು ಹೋಗಿದ್ದಾಳೆ ಎನ್ನಲಾಗಿದೆ. ಇದರ ಜೊತೆಗೆ ಸ್ಥಳೀಯರು ಅವಳನ್ನು ಆ ಸಮಯದಲ್ಲಿ ನೋಡಿದ್ದು, ಆಕೆ ಹಿಂದಿಯಲ್ಲಿ ಮಾತನಾಡುತ್ತಾ ಆಳುತ್ತಿದ್ದಳು ಎಂದು ಹೇಳಿದ್ದಾರೆ. ಆದ್ದರಿಂದ ಈಕೆ ಉತ್ತರ ಭಾರತ ಮೂಲದವಳಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

    ನಾವು ಮಾಡಿದ ಪ್ರಾಥಮಿಕ ತನಿಖೆ ಆಧಾರದ ಮೇಲೆ ಆತ್ಮಹತ್ಯೆ ಎಂದು ತಿಳಿದು ಬಂದಿದೆ. ಆದರೆ ನಾವು ಹೆಚ್ಚಿನ ತನಿಖೆ ಮಾಡುತ್ತಿದ್ದೇವೆ. ಮರಣೋತ್ತರ ಪರೀಕ್ಷೆಯ ನಂತರ ಹೆಚ್ಚಿನ ವಿವರಗಳನ್ನು ನೀಡಲಾಗುವುದು. ಸಿಸಿಟಿವಿ ದೃಶ್ಯವನ್ನು ನೋಡಿ ಆಕೆ ಯಾರು ಎಂಬುದನ್ನು ಕಂಡು ಹಿಡಿಯುತ್ತೇವೆ. ಆದರೆ ಈಗ ಸಿಸಿಟಿವಿ ಮತ್ತು ಆಕೆಯ ದೇಹ ಪತ್ತೆಯಾದ ಸುತ್ತಮುತ್ತ ಸ್ಥಳದಲ್ಲಿ ದೊರೆತ ವಸ್ತುಗಳ ಆಧಾರದ ಮೇಲೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಇದನ್ನು ಓದಿ: ಪಶುವೈದ್ಯೆಯನ್ನ ಗ್ಯಾಂಗ್‍ರೇಪ್ ಮಾಡಿ, ಕೊಲೆ – 25 ಕಿ.ಮೀ ದೂರ ಶವವೊಯ್ದು ಸುಟ್ಟರು

    ಇದಕ್ಕೂ ಮುನ್ನಾ ತೆಲಂಗಾಣದ ಪಶುವೈದ್ಯೆ ಪ್ರಿಯಾಂಕ ರೆಡ್ಡಿ ಅವರನ್ನು ನಾಲ್ವರು ಪಾಪಿಗಳು ಬೈಕ್ ಪಂಕ್ಚರ್ ಹಾಕಿಸಿಕೊಡುವ ನೆಪದಲ್ಲಿ ಆಕೆಯನ್ನು ಆತ್ಯಾಚಾರ ಮಾಡಿ ಕೊಲೆ ಮಾಡಿ ಸುಟ್ಟು ಹಾಕಿದ್ದರು. ಈ ವಿಚಾರ ಇಡೀ ದೇಶವನ್ನೆ ನುಡುಗಿಸಿತ್ತು. ಈ ಪ್ರಕರಣದ ಆರೋಪಿಗಳನ್ನು ಬಂಧಿಸಿದ ಕೆಲವೇ ಗಂಟೆಗಳಲ್ಲಿ ಸುಟ್ಟ ರೀತಿಯಲ್ಲಿ ಇನ್ನೊಂದು ಮಹಿಳೆಯ ಶವ ಪತ್ತೆಯಾಗಿ ಹಲವಾರು ಅನುಮಾನ ಹುಟ್ಟಿಹಾಕಿತ್ತು.

  • ಪಾಕ್‍ನಲ್ಲಿ ಹಿಂದೂ ಯುವತಿ ಸಾವು – ಆತ್ಮಹತ್ಯೆ ಅಲ್ಲ ಇದು ರೇಪ್ ಆ್ಯಂಡ್ ಮರ್ಡರ್

    ಪಾಕ್‍ನಲ್ಲಿ ಹಿಂದೂ ಯುವತಿ ಸಾವು – ಆತ್ಮಹತ್ಯೆ ಅಲ್ಲ ಇದು ರೇಪ್ ಆ್ಯಂಡ್ ಮರ್ಡರ್

    ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಹಿಂದೂ ಯುವತಿಯು ಆತ್ಮಹತ್ಯೆ ಮಾಡಿಕೊಂಡಿಲ್ಲ ಅವಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಆಕೆಯ ಮರಣೋತ್ತರ ಪರೀಕ್ಷೆಯ ವರದಿ ತಿಳಿಸಿದೆ.

    ಸೆಪ್ಟೆಂಬರ್ 16 ರಂದು ಲಾರ್ಕಾನಾದ ಶಹೀದ್ ಮೊಹತರ್ಮಾ ಬೆನಜೀರ್ ಭುಟ್ಟೋ ವೈದ್ಯಕೀಯ ವಿಶ್ವವಿದ್ಯಾಲಯದ (ಎಸ್‍ಎಂಬಿಬಿಎಂಯು) ಹಾಸ್ಟೆಲ್ ಕೋಣೆಯೊಂದರಲ್ಲಿ ಡೆಂಟಲ್ ಸರ್ಜರಿ ವಿಭಾಗದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿ ವ್ಯಾಸಂಗ ಮಾಡುತ್ತಿದ್ದ ನಮೃತ ಕುಮಾರಿಯ ಮೃತ ದೇಹವು ಸಿಲಿಂಗ್ ಫ್ಯಾನ್‍ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

    ನಮೃತ ಯಾಕೆ ಹೀಗೆ ಮಾಡಿಕೊಂಡಿದ್ದಳು ಎಂದು ಯಾರಿಗೂ ಗೊತ್ತಿರಲಿಲ್ಲ. ಆದರೆ ನಮೃತ ಸಹೋದರ ಮಾತ್ರ ನನ್ನ ತಂಗಿ ಆತ್ಮಹತ್ಯೆ ಮಾಡಿಕೊಳ್ಳುವ ರೀತಿ ದುರ್ಬಲವಾಗಿ ಇರಲಿಲ್ಲ. ಅಲ್ಲದೇ ಆಕೆ ಯಾವುದೇ ರೀತಿಯ ಖಿನ್ನತೆಯಿಂದ ಬಳಲುತ್ತಿರಲಿಲ್ಲ. ಆಕೆಯನ್ನು ಯಾರೋ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದರು.

    ನಮೃತ ಸಾವಿನ ಸುದ್ದಿ ಹೊರಬಂದ ಕೂಡಲೇ ಸಿಂಧ್ ಪ್ರಾಂತ್ಯದಲ್ಲಿ ಭಾರೀ ಪ್ರತಿಭಟನೆಯಾಗಿತ್ತು. ಪ್ರತಿಭಟನೆಕಾರರ ಹೋರಾಟಕ್ಕೆ ಮಣಿದ ಸಿಂಧ್ ಸರ್ಕಾರ ಈ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಗೆ ಆದೇಶಿಸಿತ್ತು. ಸಿಂಧ್ ಉಚ್ಛ ನ್ಯಾಯಾಲಯದ ನ್ಯಾಯಾಧೀಶರ ನಿರ್ದೇಶನದಂತೆ ಲರ್ಕಾನಾ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಈ ಕೊಲೆ ಪ್ರಕರಣದ ತನಿಖೆಯ ಮೇಲುಸ್ತುವಾರಿಯನ್ನು ವಹಿಸಿಕೊಂಡಿದ್ದರು.

    ಈಗ ಈ ವಿಚಾರಕ್ಕೆ ಸಂಬಂಧಿಸಿದಂತೆ ನಮೃತ ಮೃತದೇಹದ ಮರಣೋತ್ತರ ಪರೀಕ್ಷೆಯ ವರದಿ ಪ್ರಕಟವಾಗಿದೆ. ನಮೃತ ಆತ್ಮಹತ್ಯೆಯನ್ನು ಮಾಡಿಕೊಂಡಿಲ್ಲ. ಆಕೆಯನ್ನು ಯಾರೋ ರೇಪ್ ಮಾಡಿ ಕೊಲೆ ಮಾಡಿದ್ದಾರೆ ಎನ್ನುವ ಅಂಶ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಮರಣೋತ್ತರ ಪರೀಕ್ಷೆ ಮಾಡಲು ನಮೃತ ಮೃತದೇಹವನ್ನು ಲರ್ಕಾನದಲ್ಲಿರುವ ಛಂಡ್ಕಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ನೀಡಲಾಗಿದ್ದು, ಅಲ್ಲಿನ ವೈದ್ಯರು ಬುಧವಾರದಂದು ವರದಿಯನ್ನು ಬಿಡುಗಡೆ ಮಾಡಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಛಂಡ್ಕಾ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯೆ ಅಮೃತ, ನಮೃತ ಕುತ್ತಿಗೆ ಭಾಗ ಬಿಗಿದಿದ್ದ ಪರಿಣಾಮ ಆಕೆ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ. ಯುವತಿಯ ಬಟ್ಟೆಯ ಮೇಲಿ ಇದ್ದ ವೀರ್ಯದ ಕಲೆಯ ಆಧಾರದ ಮೇಲೆ ಡಿಎನ್‍ಎ ಪರೀಕ್ಷೆ ಮಾಡಿದಾಗ ಅದು ಯಾವುದೋ ಪುರುಷನದ್ದು ಎಂದು ತಿಳಿದು ಬಂದಿದೆ. ಆಕೆಯ ಜನನಾಂಗವನ್ನು ಪರೀಕ್ಷೇ ಮಾಡಿದಾಗ ಯಾರೋ ಬಲವಂತಾಗಿ ಲೈಂಗಿಕ ಕ್ರಿಯೇ ನಡೆಸಿರುವುದು ಕಂಡು ಬಂದಿದೆ ಎಂದು ಹೇಳಿದ್ದಾರೆ.

  • ಕಳೇಬರ ಪತ್ತೆ – ರಾಮನಗರಕ್ಕೂ ಮಂಗನ ಕಾಯಿಲೆ ಎಂಟ್ರಿ?

    ಕಳೇಬರ ಪತ್ತೆ – ರಾಮನಗರಕ್ಕೂ ಮಂಗನ ಕಾಯಿಲೆ ಎಂಟ್ರಿ?

    ರಾಮನಗರ: ಮಲೆನಾಡಿಗರ ನಿದ್ದೆಗೆಡಿಸಿದ್ದ ಮಂಗನ ಕಾಯಿಲೆ ಭೀತಿ ಇದೀಗ ರಾಮನಗರಕ್ಕೂ ಕಾಲಿಟ್ಟಿರುವ ಸಂಶಯ ಮೂಡಿದೆ.

    ರಾಮನಗರ ಹೊರವಲಯದಲ್ಲಿ ಅನಾರೋಗ್ಯದಿಂದ ಮೃತಪಟ್ಟಿರುವ ಮಂಗದ ದೇಹ ಪತ್ತೆಯಾಗಿದ್ದು, ಮಂಗನ ಕಾಯಿಲೆ ಶಂಕೆ ಹಿನ್ನೆಲೆಯಲ್ಲಿ ಮೃತ ಮಂಗದ ಮರಣೋತ್ತರ ಪರೀಕ್ಷೆ ನಡೆಸಿ ದೇಹದ ಕೆಲ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

    ರಾಮನಗರ ಹೊರವಲಯದ ಕಾಮತ್ ಹೋಟೆಲ್ ಬಳಿ ಮಂಗ ಮೃತಪಟ್ಟಿದ್ದು, ಸುಮಾರು 5 ವರ್ಷದ ಹೆಣ್ಣು ಮಂಗ ಸಾವನ್ನಪ್ಪಿದೆ. ಬೆಳಗ್ಗೆ ಹೋಟೆಲ್ ಸಿಬ್ಬಂದಿ ಮಂಗ ಸಾವನ್ನಪ್ಪಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಅಧಿಕಾರಿಗಳು ಪಶುವೈಧ್ಯಾಧಿಕಾರಿಗಳ ಮೂಲಕ ಸಾವನ್ನಪ್ಪಿರುವ ಕೋತಿಯ ಮರಣೋತ್ತರ ಪರೀಕ್ಷೆ ನಡೆಸಿದ್ದು, ಮರಣೋತ್ತರ ಪರೀಕ್ಷೆಯ ವೇಳೆ ಮಂಗನ ದೇಹದಲ್ಲಿ ಗೆಡ್ಡೆಯೊಂದು ಕಾಣಿಸಿಕೊಂಡಿದೆ. ಅದು ಮೇಲ್ನೋಟಕ್ಕೆ ಅನಾರೋಗ್ಯದಿಂದ ಆಹಾರ ಸೇವಿಸದೇ ಸಾವನ್ನಪ್ಪಿರುವ ಸಂದೇಹವನ್ನು ವೈದ್ಯಾಧಿಕಾರಿಗಳು ಹೊರಹಾಕಿದ್ದಾರೆ.

    ಮರಣೋತ್ತರ ಪರೀಕ್ಷೆ ನಡೆಸಿ ಮಾದರಿಗಳನ್ನ ಪುಣೆ ಹಾಗೂ ಬೆಂಗಳೂರಿನ ಪ್ರಯೋಗಾಲಯಗಳಿಗೆ ರವಾನಿಸಲಾಗಿದೆ. ರಾಮನಗರ ಹೊರವಲಯದ ಕಾಮತ್ ಹೋಟೆಲ್, ಜನಪದಲೋಕ, ಕೆಂಗಲ್ ಆಂಜನೇಯ ದೇವಾಲಯದ ಬಳಿ ಸುಮಾರು ಐನೂರಕ್ಕು ಹೆಚ್ಚು ಮಂಗಗಳು ವಾಸ ಮಾಡುತ್ತಿದ್ದು, ಇತ್ತೀಚೆಗೆ ಕೆಲವು ಮಂಗಗಳು ಕಾಯಿಲೆಯಿಂದ ಬಳಲುತ್ತಿರುವ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಇದನ್ನೂ ಓದಿ: ಏನಿದು ಮಂಗನ ಜ್ವರ? ಕಾಯಿಲೆ ಹೇಗೆ ಬರುತ್ತೆ? ರೋಗ ಲಕ್ಷಣ ಏನು? ಚಿಕಿತ್ಸೆ ಹೇಗೆ- ಇಲ್ಲಿದೆ ಸಂಪೂರ್ಣ ಮಾಹಿತಿ

    ರಾಜ್ಯದಲ್ಲಿ ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡು ಹಲವರು ಸಾವನ್ನಪ್ಪಿರುವ ಬಗ್ಗೆ ಇದೀಗ ಜನರಲ್ಲಿ ಆತಂಕವನ್ನುಂಟು ಮಾಡಿದೆ. ಸಾವನ್ನಪ್ಪಿರುವ ಕೋತಿಯ ಮರಣೋತ್ತರ ಪರೀಕ್ಷೆಯನ್ನ ಮುಂಜಾಗ್ರತಾ ಕ್ರಮವಾಗಿ ನಡೆಸಲಾಗಿದೆ. ಅಲ್ಲದೇ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರಕ್ತ ಹಾಗೂ ದೇಹದ ಕೆಲವು ಭಾಗಗಳನ್ನು ಕಳುಹಿಸಲಾಗಿದೆ ಎಂದು ಅರಣ್ಯ ಇಲಾಖೆಯ ಎಸಿಎಫ್ ರಾಮಕೃಷ್ಣಪ್ಪ ಮಾಹಿತಿ ನೀಡಿದ್ದಾರೆ. ಇತ್ತ ಮಂಗನ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಹೋಟೆಲ್ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಪೂಜೆ ಪುನಸ್ಕಾರ ನಡೆಸಿ ಕೋತಿಯ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಬಹು ಅಂಗಾಂಗ ವೈಫಲ್ಯದಿಂದ ಶಿರೂರು ಶ್ರೀ ಸಾವು?

    ಬಹು ಅಂಗಾಂಗ ವೈಫಲ್ಯದಿಂದ ಶಿರೂರು ಶ್ರೀ ಸಾವು?

    ಉಡುಪಿ: ಇಲ್ಲಿನ ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿಯದ್ದು ಸಹಜ ಸಾವು ಎಂದು ಮರಣೋತ್ತರ ಪರೀಕ್ಷೆಯ ಅಂತಿಮ ವರದಿ ಬಂದಿದೆ ಎನ್ನಲಾಗಿದೆ.

    ಶಿರೂರು ಸ್ವಾಮೀಜಿಯವರದ್ದು ಅನುಮನಾಸ್ಪದ ಸಾವು ಪ್ರಕರಣವಾಗಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಪೊಲೀಸರು ಕಾಯುತ್ತಿದ್ದರು. ಈ ಎರಡೂ ವರದಿಗಳನ್ನು ಹೋಲಿಕೆ ಮಾಡಿ ಅಂತಿಮ ವರದಿಯನ್ನು ಕೆಎಂಸಿ ವೈದ್ಯರು ನೀಡಲಿದ್ದಾರೆ. ಮರಣೋತ್ತರ ಪರೀಕ್ಷೆ ಅಂತಿಮ ವರದಿ ಎಫ್.ಎಸ್.ಎಲ್ ಇಂದು ಅಥವಾ ನಾಳೆ ಬರುವ ಸಾಧ್ಯತೆಯಿದೆ.

    ಮರಣೋತ್ತರ ವರದಿಯಲ್ಲಿ ಸಹಜ ಸಾವು ಎಂಬ ಉಲ್ಲೇಖವಿದೆ ಎನ್ನಲಾಗಿದೆ. ಶ್ರೀಗಳ ದೇಹದಲ್ಲಿ ವಿಷದ ಅಂಶವಿಲ್ಲ ಎಂಬ ವರದಿ ಪೊಲೀಸರ ಕೈಸೇರಿರುವ ಸಾಧ್ಯತೆ ಇದೆ. ಎರಡು ವರದಿ ಬಂದ ಬಳಿಕ ಸ್ವಾಮೀಜಿ ಸಾವಿಗೆ ಕಾರಣವನ್ನು ಮಣಿಪಾಲ ವೈದ್ಯರು ಪೊಲೀಸರಿಗೆ ವಿವರಿಸಲಿದ್ದಾರೆ.

    ಜುಲೈ 19ರಂದು ಸಾವನಪ್ಪಿದ್ದ ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಹೊಟ್ಟೆಯಲ್ಲಿ ವಿಷಕಾರಿ ಅಂಶ ಸಿಕ್ಕಿದೆ ಅಂತ ಕೆಎಂಸಿ ವೈದ್ಯರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಬಹುಅಂಗಾಂಗ ವೈಫಲ್ಯದಿಂದ ಸ್ವಾಮೀಜಿ ಸಾವನ್ನಪ್ಪಿದ್ದಾರೆ ಎಂದೂ ವೈದ್ಯರು ಹೇಳಿದ್ದರು. ಈ ಹೇಳಿಕೆ ನಂತರ ಸ್ವಾಮೀಜಿ ಸಾವು ಸಾಕಷ್ಟು ಚರ್ಚೆಗಳಿಗೆ, ಅನುಮಾನಗಳಿಗೆ ಕಾರಣವಾಗಿತ್ತು. ಪೊಲೀಸರಿಗೆ ತನಿಖೆ ಕೂಡಾ ಬಹಳ ಸವಾಲಿನದ್ದಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv