Tag: ಮರಗಳು

  • ಅಮೆಜಾನ್‌ ಕಾಡಿನ ಮರಗಳು ದಪ್ಪ ಆಗ್ತಿವೆಯಂತೆ – ಇದು ಗುಡ್‌ ನ್ಯೂಸ್‌ or ಬ್ಯಾಡ್‌ ನ್ಯೂಸ್?

    ಅಮೆಜಾನ್‌ ಕಾಡಿನ ಮರಗಳು ದಪ್ಪ ಆಗ್ತಿವೆಯಂತೆ – ಇದು ಗುಡ್‌ ನ್ಯೂಸ್‌ or ಬ್ಯಾಡ್‌ ನ್ಯೂಸ್?

    ಮೆಜಾನ್ ಕಾಡು (Amazon Rainforest) ಭೂಮಿಯ ಶ್ವಾಸಕೋಶ ಇದ್ದಂತೆ. ಮನುಷ್ಯ ಸೇರಿದಂತೆ ಹಲವು ಜೀವಸಂಕುಲದ ಪ್ರಾಣವಾಯು ಆಮ್ಲಜನಕ. ಭೂಮಿಯ ಒಟ್ಟಾರೆ ಆಮ್ಲಜನಕದಲ್ಲಿ ಶೇ.20 ರಷ್ಟು ಭಾಗ ಈ ಕಾಡಿನಲ್ಲೇ ಸಿಗುತ್ತದೆ. ಕೋಟ್ಯಂತರ ಜೀವಸಂಕುಲವನ್ನು ತನ್ನ ಮಡಿಲಲ್ಲಿಟ್ಟುಕೊಂಡು ಈ ಕಾಡು ಪೊರೆಯುತ್ತಿದೆ. ಮನುಷ್ಯನಿಗೆ ಶ್ವಾಸಕೋಶ ಎಷ್ಟು ಮುಖ್ಯವೋ, ಈ ಭೂಮಿಯಲ್ಲಿರುವ ಜೀವರಾಶಿಯ ಉಸಿರಿಗೆ ಅಮೆಜಾನ್ ಮಳೆಕಾಡು ಅಷ್ಟೇ ಮುಖ್ಯ. ಅಂತಹ ಕಾಡು ಈಗ ತನ್ನ ಮರಗಳ ವಿಚಾರವಾಗಿ ಸುದ್ದಿಯಲ್ಲಿದೆ. ಭೂಮಿಗೆ ಅಮೆಜಾನ್ ಕಾಡು ಏಕೆ ಮುಖ್ಯ? ಅದರಿಂದ ಆಗುತ್ತಿರುವ ಪ್ರಯೋಜನ ಏನು? ಈಗ ಕಾಡು ಯಾಕೆ ಮತ್ತೆ ಸುದ್ದಿಯಲ್ಲಿದೆ ಎಂಬ ಪ್ರಶ್ನೆಗಳಿಗೆ ವಿವರ ಇಲ್ಲಿದೆ.

    ಅಮೆಜಾನ್ ಮಳೆಕಾಡು
    ಅಮೆಜಾನ್ ಅರಣ್ಯದಲ್ಲಿ ಇರುವಷ್ಟು ಕಾಡು ಬೇರೆ ಯಾವ ಭಾಗದಲ್ಲೂ ಇಲ್ಲ. ಅಲ್ಲಿನ ವಾತಾವರಣವೇ ಇದಕ್ಕೆ ಮುಖ್ಯ ಕಾರಣ. ಸುಮಾರು 5.5 ಮಿಲಿಯನ್ ಸ್ಕ್ವೇರ್‌ ಕಿ.ಮೀ.ನಷ್ಟು ಅಂದರೆ, ಸುಮಾರು 130 ಕೋಟಿ ಎಕರೆಗೂ ಹೆಚ್ಚಿನ ಅರಣ್ಯ ಪ್ರದೇಶವನ್ನು ಇದು ಹೊಂದಿದೆ. ಹೆಚ್ಚಿನ ಮಳೆ, ಸದಾ ತುಂಬಿ ಹರಿಯುವ ನದಿಯಿಂದಾಗಿ ಅರಣ್ಯ ಸುತ್ತಲೂ ದಟ್ಟವಾದ ಮರಗಳು ಬೆಳೆದು ನಿಂತಿವೆ. ಇಲ್ಲಿ ನೂರಾರು ಮತ್ತು ಸಾವಿರಾರು ಜಾತಿಯ ಗಡಿ-ಮರಗಳು, ಪ್ರಾಣಿ-ಪಕ್ಷಗಳು, ಜಲಚರಗಳನ್ನು ಕಾಣಬಹುದು. ಜೀವಕೋಟಿಗೆ ಇದು ಅಪೂರ್ವ ಸಂಪತ್ತು. 427 ಸಸ್ತನಿಗಳು, 1,300 ಪಕ್ಷಿಗಳು, 378 ಸರೀಸೃಪಗಳು, 400 ಕ್ಕೂ ಹೆಚ್ಚು ಉಭಯಚರಗಳು ಮತ್ತು 2,500 ರಿಂದ 3,000 ಕ್ಕೂ ಹೆಚ್ಚು ಸಿಹಿನೀರಿನ ಮೀನುಗಳು ಅಸ್ತಿತ್ವದಲ್ಲಿವೆ. ಅಮೆಜಾನ್ ಮಳೆಕಾಡು ವಿಶ್ವದ ಅತಿದೊಡ್ಡ ಉಷ್ಣವಲಯದ ಮಳೆಕಾಡಾಗಿದ್ದು, ದಕ್ಷಿಣ ಅಮೆರಿಕಾದ ಒಂಬತ್ತು ದೇಶಗಳನ್ನು ವ್ಯಾಪಿಸಿದೆ. ಬ್ರೆಜಿಲ್, ಪೆರು, ಕೊಲಂಬಿಯಾ, ಬೊಲಿವಿಯಾ, ಈಕ್ವೆಡಾರ್, ಫ್ರೆಂಚ್ ಗಯಾನಾ, ಗಯಾನಾ, ಸುರಿನಾಮ್ ಮತ್ತು ವೆನೆಜುವೆಲಾದಲ್ಲಿ ಕಾಡು ವ್ಯಾಪಿಸಿದೆ. ಆದಾಗ್ಯೂ, ಸುಮಾರು 60% ಮಳೆಕಾಡು ಬ್ರೆಜಿಲ್‌ನಲ್ಲಿದೆ. ಇದನ್ನೂ ಓದಿ: ಟ್ರಂಪ್‌ ಮಾತಿಗೆ ಇಸ್ರೇಲ್‌ ಡೋಂಟ್‌ ಕೇರ್‌ – ಗಾಜಾ ಮೇಲೆ ಮತ್ತೆ ವೈಮಾನಿಕ ದಾಳಿ, 6 ಮಂದಿ ಸಾವು

    ಕಾಡಿನ ಪ್ರಯೋಜನ ಏನು?
    ಹವಾಮಾನ ನಿಯಂತ್ರಣದಲ್ಲಿ ಅಮೆಜಾನ್ ಕಾಡು ಪ್ರಮುಖ ಪಾತ್ರ ವಹಿಸುತ್ತದೆ. ಕೋಟ್ಯಂತರ ಟನ್ ಇಂಗಾಲವನ್ನು ಹೀರಿಕೊಂಡು ವಾತಾವರಣಕ್ಕೆ ಬಿಡುಗಡೆಯಾಗುವುದನ್ನು ತಡೆಯುತ್ತದೆ. ಅಮೆಜಾನ್ ಭೂಮಿಯ ಮೇಲೆ ಕಂಡುಬರುವ ಶೇ.10 ಕ್ಕಿಂತ ಹೆಚ್ಚು ಜೀವವೈವಿಧ್ಯವನ್ನು ಹೊಂದಿದೆ. ಭೂಮಿಯ ಉಷ್ಣವಲಯದ ಕಾಡುಗಳಲ್ಲಿ ಸಂಗ್ರಹವಾಗುವ ಇಂಗಾಲದ 3ನೇ ಒಂದು ಭಾಗಕ್ಕಿಂತ ಹೆಚ್ಚು ಅಮೆಜಾನ್ ಕಾಡಿನಲ್ಲಿದೆ. ಇಂಗಾಲದ ಡೈಆಕ್ಸೈಡ್ ಹೀರಿಕೊಂಡು ಹವಾಮಾನ ಬದಲಾವಣೆ ತಡೆಯುತ್ತದೆ. ಜೀವವೈವಿಧ್ಯತೆ ಕಾಪಾಡುತ್ತದೆ. ಭೂಮಿ ಮೇಲೆ ಮಳೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ. ಇದು ವಿಶ್ವದಾದ್ಯಂತ ನೀರಿನ ಚಕ್ರಕ್ಕೆ ಕೊಡುಗೆ ನೀಡುತ್ತದೆ. ವಿಶ್ವಕ್ಕೆ ಔಷಧೀಯ ಪ್ರಯೋಜನ ಇದರಿಂದ ಸಿಗುತ್ತಿದೆ.

    ಅಮೆಜಾನ್ ಕಾಡಿನಲ್ಲಿ ಹೆಚ್ಚುತ್ತಿದೆ ಮರಗಳ ಗಾತ್ರ
    ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್ (CO2) ಹೆಚ್ಚುತ್ತಿರುವ ಕಾರಣದಿಂದಾಗಿ ಅಮೆಜಾನ್ ಮಳೆಕಾಡಿನಲ್ಲಿರುವ ಮರಗಳ ಗಾತ್ರವು ಹೆಚ್ಚುತ್ತಿದೆ. ಪ್ರತಿ ಹತ್ತು ವರ್ಷಗಳಿಗೊಮ್ಮೆ ಮರಗಳು ಗಾತ್ರದಲ್ಲಿ ಶೇ.3 ಕ್ಕಿಂತ ಹೆಚ್ಚು ಕಾಣುತ್ತಿದೆ. ಸೆಪ್ಟೆಂಬರ್ 25 ರಂದು ನೇಚರ್ ಪ್ಲಾಂಟ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆಯೊಂದು ಈ ಅಂಶವನ್ನು ಬಹಿರಂಗಪಡಿಸಿದೆ. ದಕ್ಷಿಣ ಅಮೆರಿಕಾ ಮತ್ತು ಯುನೈಟೆಡ್ ಕಿಂಗ್‌ಡಮ್ ಸೇರಿದಂತೆ ವಿಶ್ವದಾದ್ಯಂತ 60 ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳ ಸುಮಾರು 100 ವಿಜ್ಞಾನಿಗಳ ಅಂತರರಾಷ್ಟ್ರೀಯ ತಂಡವು ಈ ಸಂಶೋಧನೆ ನಡೆಸಿದೆ.

    ವಿಜ್ಞಾನಿಗಳು ಅಮೆಜಾನ್ ಜಲಾನಯನ ಪ್ರದೇಶದಾದ್ಯಂತ ಸರಾಸರಿ 12,000 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿರುವ 188 ಶಾಶ್ವತ ಅರಣ್ಯ ಪ್ಲಾಟ್‌ಗಳಾದ್ಯಂತ ಮರಗಳನ್ನು ಅಧ್ಯಯನಕ್ಕೆ ಒಳಪಡಿಸಿದ್ದಾರೆ. 30 ವರ್ಷಗಳ ದೀರ್ಘಾವಧಿಯ ಸಂಶೋಧನೆಗಳು ಕೂಡ ನಡೆದಿವೆ. ಈ ಸಮಯದಲ್ಲಿ ಪ್ರತಿ ದಶಕದಲ್ಲಿ (10 ವರ್ಷಕ್ಕೊಮ್ಮೆ) ಮರಗಳು ಸರಾಸರಿ 3.3% ನಷ್ಟು ದಪ್ಪ ಆಗುತ್ತಿವೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಸಾಮಾನ್ಯವಾಗಿ, ಕಾಡಿನ ಪ್ರದೇಶದಲ್ಲಿನ ಮರಗಳ ಗಾತ್ರವು ಸರಿಸುಮಾರು ಒಂದೇ ಆಗಿರುತ್ತದೆ. ಏಕೆಂದರೆ ಸಸಿಗಳು ಬಿದ್ದ ದೊಡ್ಡ ಮರಗಳ ಸ್ಥಾನವನ್ನು ಪಡೆದು ಬೆಳೆಯುತ್ತವೆ. ಆದರೆ, ವಾತಾವರಣದ CO2 ಹೆಚ್ಚಳದಿಂದಾಗಿ ಮರಗಳ ಗಾತ್ರದಲ್ಲಿ ಬದಲಾವಣೆ ಕಂಡುಬರುತ್ತಿದೆ. ಕಳೆದ 30 ವರ್ಷಗಳಲ್ಲಿ ಸುಮಾರು ಐದನೇ ಒಂದು ಭಾಗದಷ್ಟು ಮರಗಳು ಗಾತ್ರದಲ್ಲಿ ಹೆಚ್ಚಳ ಕಂಡಿವೆ. ಇಂಗಾಲದ ಫಲೀಕರಣ ಪರಿಣಾಮ ಎಂದು ಕರೆಯಲ್ಪಡುವ ವಿದ್ಯಮಾನದಿಂದಾಗಿ CO2 ಮಟ್ಟಗಳ ಏರಿಕೆಯು ಮರದ ಬೆಳವಣಿಗೆಗೆ ಪ್ರಯೋಜನ ನೀಡುತ್ತಿದೆ. ವಾತಾವರಣದಲ್ಲಿ CO2 ದ್ಯುತಿಸಂಶ್ಲೇಷಣೆಯ ದರವನ್ನು ಹೆಚ್ಚಿಸುತ್ತದೆ. ಇದು ಕೆಲವು ಸಸ್ಯಗಳಲ್ಲಿ ಬೆಳವಣಿಗೆಗೆ ಕೊಡುಗೆ ನೀಡುತ್ತಿದೆ. ಇದನ್ನೂ ಓದಿ: ಭಾರತ ನನ್ನ ಮಾತೃಭೂಮಿ, ಪಾಕಿಸ್ತಾನ ನನ್ನ ಜನ್ಮಭೂಮಿ – ಪಾಕ್‌ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ

    ಇದು ಏಕೆ ಮಹತ್ವದ್ದಾಗಿದೆ?
    ದೊಡ್ಡದಾದ ಮರಗಳು ಹಿಂದಿನದಕ್ಕಿಂತ ಹೆಚ್ಚು ಇಂಗಾಲವನ್ನು ಹೀರಿಕೊಳ್ಳುವುದರಿಂದ ಸಾಕಷ್ಟು ಪ್ರಯೋಜನ ಸಿಗಲಿದೆ. CO2 ಗೊಬ್ಬರವಾಗಿ ಕಾರ್ಯನಿರ್ವಹಿಸುತ್ತಿದೆ. ಮರಗಳ ಬೆಳವಣಿಗೆಯನ್ನು ಹೆಚ್ಚಿಸುತ್ತಿದೆ. ಮರವು ಜಾಗತಿಕವಾಗಿ ಮಹತ್ವದ ಇಂಗಾಲದ ಸಿಂಕ್ ಆಗಿರುವುದರಿಂದ ಹಲವು ವಿಧಗಳಲ್ಲಿ ಇದು ಭರವಸೆ ನೀಡುತ್ತದೆ ಎಂದು ಡರ್ಹ್ಯಾಮ್ ವಿಶ್ವವಿದ್ಯಾಲಯದ (ಯುಕೆ) ಸಂಶೋಧಕ ಪೀಟರ್ ಎಚೆಲ್ಸ್ ತಿಳಿಸಿದ್ದಾರೆ. CO2ನಿಂದ ಸಾಕಷ್ಟು ಪ್ರಯೋಜನ ಸಿಗುತ್ತಿದೆ. ಆದರೆ, ಅರಣ್ಯ ನಾಶದಿಂದ ಪರಿಸರ ವ್ಯವಸ್ಥೆಗೆ ತುಂಬಾ ಸಮಸ್ಯೆಯಾಗುತ್ತಿದೆ ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

    ದಪ್ಪ ಆಗ್ತಿರೋದು ಅಮೆಜಾನ್‌ ಕಾಡು ಮರಗಳು ಮಾತ್ರವೇ?
    ಮರಗಳ ಗಾತ್ರದಲ್ಲಿನ ಬದಲಾವಣೆಗೆ ತೆರೆದುಕೊಂಡಿರುವ ಏಕೈಕ ಅರಣ್ಯ ಅಮೆಜಾನ್ ಅಷ್ಟೇ ಅಲ್ಲ. ಕೆನಡಾದ ನ್ಯೂ ಬ್ರನ್ಸ್‌ವಿಕ್ ವಿಶ್ವವಿದ್ಯಾಲಯದ 2023 ರ ಅಧ್ಯಯನವು, ಬೆಚ್ಚಗಿನ ತಾಪಮಾನ ಮತ್ತು ಅವು ತರುವ ದೀರ್ಘ ಬೆಳವಣಿಗೆಯ ಋತುಗಳಿಂದಾಗಿ ಬೋರಿಯಲ್ ಕಾಡುಗಳು (ಉತ್ತರ ಎತ್ತರದ ಅಕ್ಷಾಂಶದ ಕಾಡುಗಳು) 2050 ರ ಹೊತ್ತಿಗೆ ಶೇ.20 ರಷ್ಟು ವೇಗವಾಗಿ ಬೆಳೆಯುತ್ತವೆ ಎಂದು ತಿಳಿಸಿದೆ.

    12.1 ಕೋಟಿ ಎಕರೆಯಷ್ಟು ಕಾಡು ನಾಶ!
    ಸಸ್ಯವರ್ಗದ ಅಗಾಧ ಸಾಂದ್ರತೆಯನ್ನು ಅಮೆಜಾನ್‌ ಕಾಡು ಹೊಂದಿದೆ. ಹವಾಮಾನ ಬದಲಾವಣೆಯ ವಿರುದ್ಧ ಮನುಷ್ಯನ ಹೋರಾಟದಲ್ಲಿ ಈ ಕಾಡು ಕೇಂದ್ರಬಿಂದು. ಇದು ಹಸಿರುಮನೆ ಅನಿಲ ಹೊರಸೂಸುವಿಕೆಗೆ ಪ್ರಮುಖ ಇಂಗಾಲದ ಸಿಂಕ್ ಆಗಿ ಕಾರ್ಯನಿರ್ವಹಿಸುತ್ತದೆ. ವಿಸ್ತಾರವಾದ ಮಳೆಕಾಡು ಭೂಮಿಯಿಂದ ಹೀರಿಕೊಳ್ಳಲ್ಪಟ್ಟ CO2 ನ ನಾಲ್ಕನೇ ಒಂದು ಭಾಗವನ್ನು ತನ್ನ ಒಡಲಿಗೆ ಸೆಳೆದುಕೊಳ್ಳುತ್ತಿದೆ. ಪರಿಣಾಮವಾಗಿಯೇ ಕಳೆದ 40 ವರ್ಷಗಳಲ್ಲಿ, ಅಮೆಜಾನ್ ಸರಿಸುಮಾರು 12.1 ಕೋಟಿ ಎಕರೆ ಮಳೆಕಾಡನ್ನು ಕಳೆದುಕೊಂಡಿದೆ. ಇದು ಬ್ಯಾಡ್‌ ನ್ಯೂಸ್‌ ಎಂದೇ ಹೇಳಬಹುದು.

    ಬರ & ಬಿರುಗಾಳಿಗೆ ಮರಗಳು ಬೀಳುತ್ತವೆಯೇ?
    ಬರ ಮತ್ತು ಬಲವಾದ ಬಿರುಗಾಳಿಗೆ ದೊಡ್ಡ ಮರಗಳು ಬೇರು ಸಮೇತ ಬೀಳುತ್ತವೆ ಎಂಬುದು ತಜ್ಞರ ಅಭಿಪ್ರಾಯ. ಆದರೆ, ಅಮೆಜಾನ್‌ ಮಳೆಕಾಡಿನಲ್ಲಿ ದಪ್ಪ ಆಗುತ್ತಿರುವ ಮರಗಳು ಈ ಮಾತನ್ನೇ ಸುಳ್ಳಾಗಿಸಿದೆ. ಮರಗಳು ತುಂಬಾ ಬಲವಾಗಿ ನಿಂತಿವೆ. 10 ವರ್ಷಗಳಿಗೊಮ್ಮೆ ತಮ್ಮ ಗಾತ್ರವನ್ನು ಹೆಚ್ಚಿಸಿಕೊಳ್ಳುತ್ತಿವೆ. ಅಮೆಜಾನ್ ಪರಿಸರ ವ್ಯವಸ್ಥೆ ಸರಿಯಾಗಿದ್ದರೆ ಮಾತ್ರ ದೈತ್ಯ ಮರಗಳು ಆರೋಗ್ಯಕರವಾಗಿ ಉಳಿಯಲು ಸಾಧ್ಯ. ಅರಣ್ಯ ನಾಶವು ಅಮೆಜಾನ್‌ ಕಾಡಿಗೆ ಕಂಟಕವಾಗಿದೆ. ಪಳೆಯುಳಿಕೆ ಇಂಧನಗಳಿಂದ ಹಸಿರು ಶಕ್ತಿಯ ಭವಿಷ್ಯಕ್ಕೆ ನಾವು ಪರಿವರ್ತನೆಗೊಳ್ಳುತ್ತಿದ್ದೇವೆ. ಈ ಬೆಳವಣಿಗೆ ಪ್ರಪಂಚದಾದ್ಯಂತ ಮಳೆಕಾಡುಗಳ ಸಮೃದ್ಧಿಗೆ ಕೊಡುಗೆ ನೀಡಲಿದೆ.

  • ಬೆಂಗಳೂರಿನಲ್ಲಿ ಮರಗಳ ಮಾರಣ ಹೋಮ – 100 ವರ್ಷಗಳ ಹಳೆಯ ಮರಗಳಿಗೆ ಕೊಡಲಿ ಏಟು!

    ಬೆಂಗಳೂರಿನಲ್ಲಿ ಮರಗಳ ಮಾರಣ ಹೋಮ – 100 ವರ್ಷಗಳ ಹಳೆಯ ಮರಗಳಿಗೆ ಕೊಡಲಿ ಏಟು!

    ಬೆಂಗಳೂರು: ಬೇಸಿಗೆ ಕಾಲ ಬಂದುಬಿಟ್ಟಿದೆ, ತಾಪಮಾನ ಹೆಚ್ಚುತ್ತಿದ್ದಂತೆ ಬಿಸಿ ಗಾಳಿ ಮೈಗೆ ಅಪ್ಪಳಿಸುತ್ತಿದೆ, ಮಳೆ ಮಾಯವಾಗುತ್ತಿದೆ. ಈ ನಡುವೆಯೂ ಮರಗಿಡಗಳು (Trees), ಪರಿಸರದ ಮೇಲಿನ ದೌರ್ಜನ್ಯ ವಿಪರೀತವಾಗಿ ವಿನಾಶ ಕಾಲ ಶುರುವಾದಂತೆ ಕಾಣ್ತಿದೆ.

    ಹೌದು. ಮರಗಿಡ ಬೆಳೆಸಿ, ಪರಿಸರ ಉಳಿಸಿ ಎಂದು ಸರ್ಕಾರ ಮತ್ತು ಸಂಘಟನೆಗಳು ಘೋಷಿಸುತ್ತವೆ. ಸಾರ್ವಜನಿಕರೂ ಮಾತನಾಡಿಕೊಳ್ಳುತ್ತಾರೆ. ಇದು ಕೇವಲ ಔಪಚಾರಿಕ ಸಮಾರಂಭಕ್ಕೆ, ಭಾಷಣಕ್ಕೆ ಸೀಮಿತವಾಗಿ ಮರೆತು ಹೋಗುತ್ತದೆ. ಆದರೆ, ವಾಸ್ತವದಲ್ಲಿ ಮರಗಳನ್ನು ಉಳಿಸುವ ಬದಲು ಉರುಳಿಸುವ ಕೆಲಸವೇ ಹೆಚ್ಚಾಗಿ ಕಂಡು ಬರುತ್ತದೆ. ಇದಕ್ಕೆ ಬೆಂಗಳೂರು ನಗರದಲ್ಲಿ 100 ವರ್ಷಗಳ ಹಳೆಯ ಮರಗಳಿಗೆ ಕೊಡಲಿ ಏಟು ಕೊಟ್ಟಿರುವುದೇ ಸಾಕ್ಷಿಯಾಗಿದೆ.

    ಸಾಂದರ್ಭಿಕ ಚಿತ್ರ

    ಅಭಿವೃದ್ಧಿ, ಸುರಕ್ಷತೆ, ರಸ್ತೆ ಸಂಚಾರಕ್ಕೆ ಅಡಚಣೆ ಹೆಸರಲ್ಲಿ ಮರ ಕತ್ತರಿಸುವ ಸಂಸ್ಕೃತಿ ದಿನೇ ದಿನೇ ಹೆಚ್ಚುತ್ತಿದೆ. ಆದರೂ ಯಾರೂ ಕೇಳುವರಿಲ್ಲದೇ ಪರಿಸರ ಜಾಗೃತಿ ಬದಲು ದುರ್ಗತಿ ಎದುರಾಗುತ್ತಿದೆ. ಇದೀಗ ಆಹಾರಸೌಧ ಕಟ್ಟಡ ನೆಪದಲ್ಲಿ ಸರ್ಕಾರದಿಂದಲೇ ಮರಗಳ ಮಾರಣಹೋಮ ಮಾಡುವ ಕೆಲಸ ನಡೆಯುತ್ತಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.

    ಸರ್ಕಾರ ಅರಣ್ಯ ಇಲಾಖೆ ಜಾಗದಲ್ಲಿ ಆಹಾರ ಸೌಧ ಮಾಡಲು ತಯಾರಿ ನಡೆಸಿದೆ. ಹೀಗಾಗಿ ಬೆಂಗಳೂರಿನ ಅಲಿಅಸ್ಕರ್ ರಸ್ತೆಯಲ್ಲಿ 100 ವರ್ಷಗಳಷ್ಟು ಹಳೆಯದಾದ 23 ಮರಗಳಿಗೆ ಕೊಡಲಿ ಏಟು ನೀಡಿದೆ. ಇದಕ್ಕೆ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಮೊದಲೇ ಕಾಂಕ್ರೀಟ್‌ ಕಾಡಿನಂತಾಗಿರುವ ಬೆಂಗಳೂರಿನಲ್ಲಿ ಮರಗಳನ್ನು ಕಡಿದು ಇನ್ನಷ್ಟು ಅಪಾಯ ತಂದೊಡ್ಡಬೇಡಿ ಎಂದು ಜನರು ಮನವಿ ಮಾಡಿದ್ದಾರೆ. ಇದಕ್ಕೆ ಸರ್ಕಾರ ಏನು ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.

  • ಗಾಳಿ, ಮಳೆ ರಭಸಕ್ಕೆ ಭಾರೀ ಗಾತ್ರದ ಮರ ನೆಲಸಮ – ಸ್ಯಾಂಟ್ರೋ ಕಾರು ಜಖಂ

    ಗಾಳಿ, ಮಳೆ ರಭಸಕ್ಕೆ ಭಾರೀ ಗಾತ್ರದ ಮರ ನೆಲಸಮ – ಸ್ಯಾಂಟ್ರೋ ಕಾರು ಜಖಂ

    ಬೆಂಗಳೂರು: ಸಿಲಿಕಾನ್‌ ಸಿಟಿ ಸೇರಿದಂತೆ ರಾಜ್ಯದ ವಿವಿಧೆಡೆ ಉತ್ತಮ ಮಳೆಯಾಗಿದ್ದು (Bengaluru Rains), ಭಾರೀ ಅವಾಂತರಗಳನ್ನೂ ಸೃಷ್ಟಿಸಿದೆ. ಭಾರೀ ಮಳೆಗೆ ಆಕಾಶದೆತ್ತರಕ್ಕೆ ಬೆಳೆದಿದ್ದ ಮರಗಳು ನೆಲ ಕಚ್ಚಿವೆ. ಆಟೋ, ಕಾರು, ಮನೆಗಳ ಮೇಲೆ ಬಿದ್ದು ಜಖಂ ಆಗಿವೆ.

    ಬಸವೇಶ್ವರನಗರದ 17ನೇ ಕ್ರಾಸ್ ಬಳಿ ಮನೆ ಮುಂದೆ ಕಾರು ಪಾರ್ಕ್ ಮಾಡಿದ್ದ ಕಾರಿನ (Car) ಮೇಲೆ ಮರ ಬಿದ್ದಿದ್ದು, ರಸ್ತೆಯಲ್ಲಿ ವಾಹನಗಳು ಓಡಾಡದ ಪರಿಸ್ಥಿತಿ ನಿರ್ಮಾಣ ಆಗಿದೆ. ಮಳೆ ಬಂದು ನಿಂತರೂ ಹಲವೆಡೆ ಮನೆಯಲ್ಲೇ ಗೃಹಬಂಧನವಾಗಿ ಇರಬೇಕಾರ ಪರಿಸ್ಥಿತಿ ನಿರ್ಮಾಣವಾಗಿದೆ. ಬಸವೇಶ್ವರ ನಗರದ (Basaveshwaranagara) ಶಾರದಾ ಕಾಲೋನಿಯ ಬಳಿ ಬೃಹತ್ ಮರ ಮನೆ ಮೇಲೆ ಬಿದ್ದಿದೆ.

    ಬೃಹತ್‌ ಮರವೊಂದು ಎರಡಂತಸ್ತಿನ ಕಟ್ಟಡದ ಮೇಲೆ ಬಿದ್ದಿದೆ, ಜೊತೆಗೆ ಸ್ಯಾಂಟ್ರೋ ಕಾರಿನ ಮೇಲೆ ಬಿದ್ದು ಜಖಂ ಆಗಿದೆ. ರಸ್ತೆ ಉದ್ದಕ್ಕೂ ಏಳೆಂಟು ಮರಗಳು ಬಿದ್ದಿವೆ. ಇದನ್ನೂ ಓದಿ: Election Results – ಟ್ರೆಂಡ್‌ ಬೇಗನೇ ಗೊತ್ತಾದ್ರೂ ತಡವಾಗಲಿದೆ ಅಧಿಕೃತ ಫಲಿತಾಂಶ

    ನಗರದ 10ಕ್ಕೂ ಹೆಚ್ಚು ಸ್ಥಳಗಳಲ್ಲಿ ಮೆಗಳು ಧರೆಗುರುಳಿವೆ. ಕರ್ನಾಟಕ ಲೇಔಟ್, ಬೆಮೆಲ್ ಲೇಔಟ್, ಕಿರ್ಲೋಸ್ಕರ್ ಕಾಲೋನಿ ಹಾಗೂ ಕುರುಬರಹಳ್ಳಿ ಮೇನ್ ರೋಡ್ ನಲ್ಲಿ ಮರಗಳು ಬಿದ್ದಿದ್ದು, ಬೆಳ್ಳಂ ಬೆಳಗ್ಗೆ ಬಿಬಿಎಂಪಿ ಹಾಗೂ ಬೆಸ್ಕಾಂ ಅಧಿಕಾರಿಗಳು ತೆರವುಗೊಳಿಸುವ ಕಾರ್ಯಾಚರಣೆಗೆ ಇಳಿದಿದ್ದಾರೆ. ಮಹಾಲಕ್ಷ್ಮಿ ಲೇಔಟ್ ನ ಕಮಲಾನಗರದ ವಾಟರ್ ಟ್ಯಾಂಕ್ ಮುಖ್ಯ ರಸ್ತೆಯಲ್ಲಿಯೂ ಮರಗಳ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಶಾಸಕ ಕೆ. ಗೋಪಾಲಯ್ಯ ಸಹ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಬುರ್ಖಾ ವಿದ್ಯಾರ್ಥಿನಿಯಿಂದ ಗೇಲಿಗೆ ಒಳಗಾಗುವ ಪರಿಸ್ಥಿತಿ ಹಿಂದುತ್ವವಾದಿಗಳಿಗೆ ಬಂದಿದ್ದು ದುರದೃಷ್ಟಕರ: ಪ್ರತಾಪ್‌ ಸಿಂಹ

  • ಮರ ಕಡಿದು ಪರಿಸರ ಶಾಲೆ ಮಾಡುತ್ತಿದೆ ಖಾಸಗಿ ಸಂಸ್ಥೆ- ಗ್ರಾಮಸ್ಥರ ಅಕ್ರೋಶ

    ಮರ ಕಡಿದು ಪರಿಸರ ಶಾಲೆ ಮಾಡುತ್ತಿದೆ ಖಾಸಗಿ ಸಂಸ್ಥೆ- ಗ್ರಾಮಸ್ಥರ ಅಕ್ರೋಶ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ 2018ರಲ್ಲಿ ಆರಂಭವಾದ ಭಾರೀ ಕುಸಿತದಂತಹ ಘಟನೆಗಳು ಮತ್ತೆ ಮರುಕಳುಹಿಸುತ್ತಲೇ ಇವೆ. ಇದರ ನಡುವೆಯೇ ಮೊಬೀಯಸ್ ಫೌಂಡೇಷನ್ ಹತ್ತಾರು ಎಕರೆ ಪ್ರದೇಶದಲ್ಲಿ ನೂರು ಮರಗಳನ್ನು ಕಡಿದು ಅಂತರಾಷ್ಟ್ರೀಯ ಮಟ್ಟದ ಪರಿಸರ ವಿಜ್ಞಾನ ಶಾಲೆಯನ್ನು ಆರಂಭಿಸಲು ಹೊರಟಿದೆ. ಇದಕ್ಕೆ ಕೊಡಗಿನ ಪರಿಸರವಾದಿಗಳು ಮತ್ತು ಸ್ಥಳೀಯರ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

    ಮೊಬೀಯಸ್ ಫೌಂಡೇಷನ್ ಮಡಿಕೇರಿ ತಾಲೂಕಿನ ಹೊಸಕೇರಿಯ ಬೆಟ್ಟದ ಮೇಲೆ ಬರೋಬ್ಬರಿ 30 ಎಕರೆ ಪ್ರದೇಶದಲ್ಲಿ ಅಂತರಾಷ್ಟ್ರೀಯ ಶಾಲೆ ನಿರ್ಮಿಸುವುದಕ್ಕೆ ಮುಂದಾಗಿದೆ. ವಸತಿ ಶಾಲೆಯಾಗಿರುವ ಕಾರಣ, ಶಾಲೆ ಮತ್ತು ವಸತಿ ಉದ್ದೇಶಕ್ಕಾಗಿ 7 ಎಕರೆ ಪ್ರದೇಶ ವ್ಯಾಪ್ತಿಯಲ್ಲಿ ಭಾರೀ ಕಟ್ಟಡಗಳು ತಲೆ ಎತ್ತಲಿವೆ. ಶಾಲೆಯಲ್ಲಿ ಒಟ್ಟು 550 ವಿದ್ಯಾರ್ಥಿಗಳಿಗೆ ಕಲಿಯುವ ಅವಕಾಶವಿದ್ದು, ಸಿಬ್ಬಂದಿ ಸೇರಿದಂತೆ 700 ಕ್ಕೂ ಹೆಚ್ಚು ಜನರು ಇಲ್ಲಿ ತಂಗಲಿದ್ದಾರೆ. ಜೊತೆಗೆ ಕಟ್ಟಡವಲ್ಲದೆ, ಶಾಲಾ ವಿದ್ಯಾರ್ಥಿಗಳಿಗಾಗಿ ಫುಟ್ ಬಾಲ್ ಮೈದಾನದಷ್ಟ್ರು ವಿಸ್ತೀರ್ಣದ ನಾಲ್ಕು ಮೈದಾನಗಳು ನಿರ್ಮಾಣಗೊಳ್ಳಲಿವೆ. ಎಷ್ಟೆಲ್ಲಾ ವಿದ್ಯಾರ್ಥಿ ಮತ್ತು ಸಿಬ್ಬಂದಿಗೆ ಅಗತ್ಯವಿರುವ ನೀರಿಗಾಗಿ ಮಳೆಕೊಯ್ಲು ಮಾಡುವ ಯೋಜನೆ ಇದೆ. ಅದಕ್ಕಾಗಿ ಬೆಟ್ಟಗಳ ಮೇಲೆ ಕೆರೆಗಳನ್ನು ನಿರ್ಮಿಸುವ ಯೋಜನೆ ಈಗಾಗಲೇ ಸಿದ್ಧವಾಗಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಕಟ್ಟಡಗಳ ನಿರ್ಮಾಣಕ್ಕಾಗಿ 530 ಮರಗಳನ್ನು ಕಡಿಯಲು ಈ ಫೌಂಡೇಷನ್ ಸಿದ್ಧತೆ ನಡೆಸಿದ್ದು, ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದೆ. ಇದೆಲ್ಲವನ್ನು ಗಮನಿಸಿರುವ ಸ್ಥಳೀಯರು ಇದಕ್ಕೆ ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

    ಸದ್ಯ ಕಾಫಿ ಎಸ್ಟೇಟ್ ಆಗಿರುವ ಇದು ಬಹುತೇಕ ಬಂಡೆಗಳಿಂದ ಕೂಡಿದ್ದು, ಕಾಮಗಾರಿಗಳನ್ನು ನಡೆಸಲು ಬಂಡೆಗಳನ್ನು ಸೀಳುವ ಸಾಧ್ಯತೆ ಇದೆ. ಒಂದು ವೇಳೆ ಹಾಗೇ ಮಾಡಿದರೆ ಎತ್ತರವಾಗಿರುವ ಈ ಬೆಟ್ಟದಲ್ಲಿ ಭೂಕುಸಿತವಾಗೋದು ಖಚಿತ ಅನ್ನೋದು ಸ್ಥಳೀಯರ ಆರೋಪ. 50 ಡಿಗ್ರಿಯಷ್ಟ್ರು ಕಡಿದಾದ ಬೆಟ್ಟ ಇದಾಗಿದ್ದು, ಮರಗಳನ್ನು ಕಡಿದಲ್ಲಿ ಮತ್ತು ಕೆರೆಗಳನ್ನು ನಿರ್ಮಿಸಿದಲ್ಲಿ ಭೂಕುಸಿತವಾಗೋದು ಖಚಿತ ಎನ್ನೋ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ.

    ತಲಕಾವೇರಿಯ ಗಜಗಿರಿ ಬೆಟ್ಟದಲಲೂ ಇಂಗು ಗುಂಡಿಗಳನ್ನು ತೆಗೆದು ದೊಡ್ಡ ಅನಾಹುತಕ್ಕೆ ಕಾರಣವಾಯಿತು. ಇಲ್ಲಿಯೂ ಮರಗಳನ್ನು ಕಡಿದು, ನಾಲ್ಕೈದು ಕೆರೆಗಳನ್ನು ನಿರ್ಮಿಸಿದರೆ ಅಂತಹದ್ದೇ ಅನಾಹುತ ಸಂಭವಿಸುತ್ತದೆ. ಈ ಬೆಟ್ಟದ ತಪ್ಪಲಿನ ಸುತ್ತಲೂ ನೂರಾರು ಕುಟುಂಬಗಳು ತಲತಲಾಂತರಗಳಿಂದ ಜೀವನ ನಡೆಸುತ್ತಿವೆ. ಇದೀಗ ಅಂತರಾಷ್ಟ್ರೀಯ ಮಟ್ಟದ ಪರಿಸರ ಶಾಲೆಯನ್ನು ಮಾಡುವುದಕ್ಕೆ ಇಲ್ಲಿನ ಪರಿಸರ ಹಾಳು ಮಾಡುವುದು ಸರಿಯೇ ಎನ್ನೋದು ಸ್ಥಳೀಯರ ಪ್ರಶ್ನೆ. ಈಗಾಗಲೇ ಜಿಲ್ಲಾಡಳಿತ 20 ಸೆಂಟ್ ಜಾಗವನ್ನು ಕಟ್ಟಡ ನಿರ್ಮಾಣದ ಉದ್ದೇಶಕ್ಕೆ ಭೂಪರಿವರ್ತನೆ ಮಾಡಿಕೊಟ್ಟಿದೆ. ಆದರೆ ಮೊಬೀಯಸ್ ಫೌಂಡೇಷನ್ 30 ಎಕರೆ ಭೂ ಪರಿವರ್ತನೆಗೆ ಅವಕಾಶ ಕೋರಿ ಮನವಿ ಸಲ್ಲಿಸಿದೆ. ಅಲ್ಲದೆ ನಾವು ಮಳೆ ನೀರು ಕೊಯ್ಲು, ಕಟ್ಟಡ ನಿರ್ಮಾಣ ಮತ್ತು ಆಟದ ಮೈದಾನಗಳನ್ನು ವೈಜ್ಞಾನಿಕವಾಗಿ ಮಾಡುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ. ಆದರೆ ಕೆಲವರು ತಮ್ಮ ವೈಯಕ್ತಿಕ ಉದ್ದೇಶಕ್ಕಾಗಿ ಶಾಲೆ ನಿರ್ಮಾಣಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ ಎನ್ನೋದು ಉದ್ದೇಶಿತ ಶಾಲೆಯ ಸಲಹೆಗಾರ ಮಧು ಬೋಪಣ್ಣ ಅವರ ಆರೋಪ.

  • ಆಕ್ಸಿಜನ್ ಪ್ಲಾಂಟ್ ನಿರ್ಮಾಣಕ್ಕಾಗಿ ಬೃಹತ್ ಮರಗಳಿಗೆ ಕೊಡಲಿ ಏಟು

    ಆಕ್ಸಿಜನ್ ಪ್ಲಾಂಟ್ ನಿರ್ಮಾಣಕ್ಕಾಗಿ ಬೃಹತ್ ಮರಗಳಿಗೆ ಕೊಡಲಿ ಏಟು

    – ಸ್ಥಳಾವಕಾಶವಿದ್ದರೂ ಮರಗಳ ಕಡಿದರು

    ಬೆಳಗಾವಿ/ಚಿಕ್ಕೋಡಿ: ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡಲು ಎರಡು ಬೃಹತ್ ಮರಗಳಿಗೆ ಅರಣ್ಯ ಇಲಾಖೆ ಕೊಡಲಿ ಏಟು ಹಾಕಿರುವ ಘಟನೆ ಜಿಲ್ಲೆಯ ಅಥಣಿ ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ನಡೆದಿದೆ.

    ಒಂದು ಕಡೆ ಉಸಿರಾಟಕ್ಕೆ ಜನರು ಆಕ್ಸಿಜನ್ ಸಿಲಿಂಡರ್ ಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದು ಕಡೆ ಇದ್ದ ಎರಡು ಬೃಹತ್ ಮರಗಳನ್ನು ಅರಣ್ಯ ಇಲಾಖೆ ಕತ್ತರಿಸಿದ್ದಕ್ಕೆ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದೆ. ಅಥಣಿ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಸಾಕಷ್ಟು ಸ್ಥಳವಾಕಾಶ ಇದ್ದರೂ ಆಸ್ಪತ್ರೆ ವೈದ್ಯಾಧಿಕಾರಿಗಳ ಸಮನ್ವಯದ ಕೊರತೆಯಿಂದ ಎರಡು ಮರಗಳಿಗೆ ಕೊಡಲಿ ಏಟು ಹಾಕಲಾಗಿದೆ.

    ಒಟ್ಟು 390 ಲೀಟರ್ ನಷ್ಟು ಆಕ್ಸಿಜನ್ ಸಾಮರ್ಥ್ಯದ ಪ್ಲಾಂಟ್ ನಿರ್ಮಾಣಕ್ಕಾಗಿ ಮರಗಳ ಮಾರಣ ಹೋಮ ತಡೆದಿದೆ. ಅರಣ್ಯ ಇಲಾಖೆಯ ಸಿಬ್ಬಂದಿಯೇ ಮುಂದೆ ನಿಂತು ಮರಗಳನ್ನು ಕಡಿದು ಹಾಕಿದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

  • ಆಶ್ಲೇಷ ಮಳೆಗೆ ಹೈರಾಣಾದ ಮಲೆನಾಡು- 500ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗೆ

    ಆಶ್ಲೇಷ ಮಳೆಗೆ ಹೈರಾಣಾದ ಮಲೆನಾಡು- 500ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗೆ

    ಚಿಕ್ಕಮಗಳೂರು: ಮಲೆನಾಡು ಕಳೆದೊಂದು ವಾರದಿಂದ ಅಕ್ಷರಶಃ ಮಳೆ ನಾಡಾಗಿದೆ. ಇದರಿಂದ ಜಿಲ್ಲಾದ್ಯಂತ 120ಕ್ಕೂ ಹೆಚ್ಚು ಮನೆಗಳು ಭಾಗಶಃ ಹಾನಿಯಾಗಿದರೆ, ಎರಡು ಮನೆಗಳು ಸಂಪೂರ್ಣ ನೆಲಸಮವಾಗಿದೆ. ಜೊತೆಗೆ ಮಲೆನಾಡು ಭಾಗದಲ್ಲಿ 500ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಇಂದಿಗೂ ಮಲೆನಾಡ ಗ್ರಾಮಗಳು ಕತ್ತಲಲ್ಲಿ ಬದುಕುವಂತಾಗಿದೆ.

    ಕಳೆದೊಂದು ವಾರದಿಂದ ಜಿಲ್ಲಾದ್ಯಂತ ಸುಮಾರು 500ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಮಲೆನಾಡಿನ ನೂರಾರು ಗ್ರಾಮಗಳು ಕಗ್ಗತ್ತಲಲ್ಲಿ ಬದುಕುವಂತಾಗಿದೆ. ರಸ್ತೆಯಲ್ಲಿ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ವಿದ್ಯುತ್ ತಂತಿಗಳು ರಸ್ತೆ ತುಂಬಾ ಹರಡಿಕೊಂಡಿವೆ. ಕೆಇಬಿಯವರು ಇಂದಿಗೂ ದುರಸ್ಥಿ ಮಾಡಲು ಸಾಧ್ಯವಾಗಿಲ್ಲ.

    ಕೆಲ ಗ್ರಾಮಗಳು ಇಂದಿಗೂ ಕಗ್ಗತ್ತಲಲ್ಲಿ ಬದುಕುತ್ತಿವೆ. ಯುಪಿಎಸ್ ಇರುವಂತ ಮನೆಯವರು ಕೂಡ ಕರೆಂಟ್ ಕಾಣದೆ ನಾಲ್ಕು ದಿನ ಕಳೆದಿದೆ. ಈಗ ಆನ್‍ಲೈನ್ ಶಿಕ್ಷಣ ಆರಂಭವಾಗಿದೆ. ಮಲೆನಾಡಿನ ಮಕ್ಕಳು ವಿದ್ಯುತ್ ಇಲ್ಲದೆ, ಮೊಬೈಲ್ ಚಾರ್ಜ್ ಇಲ್ಲದೆ ಸೂಕ್ತ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಯುಪಿಎಸ್ ಇದ್ದವರು ಕೇವಲ ಮೊಬೈಲ್ ಚಾರ್ಜ್ ಮಾಡಿಕೊಳ್ಳಲು ಯುಪಿಎಸ್‍ಗಳನ್ನ ಬಳಸುತ್ತಿದ್ದಾರೆ. ಇದು ಮಲೆನಾಡ ಸದ್ಯದ ದುಸ್ಥಿತಿಯಾಗಿದೆ.

    ಸರ್ಕಾರ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂದು ಸ್ಥಳೀಯರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಒಂದು ವಾರಗಳ ಕಾಲ ನಿರಂತರವಾಗಿ ಸುರಿದ ಮಳೆ ಮಲೆನಾಡಿಗರ ಜನಜೀವನವನ್ನ ಅಸ್ತವ್ಯಸ್ತ ಮಾಡಿದೆ.

  • ತುಮಕೂರಿನಲ್ಲಿ ಮರಗಳ ಹನನ- ಪಿಐಎಲ್ ಸಲ್ಲಿಸಲು ನಿರ್ಧಾರ

    ತುಮಕೂರಿನಲ್ಲಿ ಮರಗಳ ಹನನ- ಪಿಐಎಲ್ ಸಲ್ಲಿಸಲು ನಿರ್ಧಾರ

    ಚಿಕ್ಕಮಗಳೂರು: ತುಮಕೂರಿನಲ್ಲಿ ತೆಂಗು- ಅಡಿಕೆ ಮರಗಳ ಹನನ ಪ್ರಕರಣದ ವಿರುದ್ಧ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯಲ್ಲಿ ಪಿಐಎಲ್ ಸಲ್ಲಿಸಲು ರಾಜ್ಯ ಕಿಸಾನ್ ಕಾಂಗ್ರೆಸ್ ತೀರ್ಮಾನಿಸಿದೆ.

    ಮಾ.18ರಂದು ವಕೀಲ ಗೋಪಾಲ್ ಸಿಂಗ್ ಮೂಲಕ ಸುಪ್ರೀಂ ಕೋರ್ಟ್ ಅನುಮತಿ ಪಡೆದು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯಲ್ಲಿ ಪಿಐಎಲ್ ಸಲ್ಲಿಸಲು ರಾಜ್ಯ ಕಿಸಾನ್ ಕಾಂಗ್ರೆಸ್ ತೀರ್ಮಾನಿಸಿದೆ.

    ಯಾವುದೇ ನ್ಯಾಯಾಲಯ ಮರಗಳನ್ನು ಕಡಿದು ಹಾಕುವಂತೆ ನಿರ್ದೇಶನ ಮಾಡಿಲ್ಲ. ಈ ಮಧ್ಯೆಯೂ ಮಕ್ಕಳಂತೆ ಸಾಕಿದ ಮರಗಳನ್ನು ಕಡಿದ ಹಾಗೂ ಕಡಿಯಲು ಪರೋಕ್ಷವಾಗಿ ಕಾರಣರಾದ ವ್ಯಕ್ತಿಗಳ ಮೇಲೆ ದೂರು ದಾಖಲಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ತುಮಕೂರು ಜಿಲ್ಲಾಧಿಕಾರಿ, ಗುಬ್ಬಿ ತಹಸಿಲ್ದಾರ್, ಗ್ರಾಮ ಲೆಕ್ಕಿಗನ ವಿರುದ್ಧ ದೂರು ದಾಖಲು ಮಾಡಲು ಕಾಂಗ್ರೆಸ್ ಕಿಸಾನ್ ಘಟಕ ನಿರ್ಧರಿಸಿದೆ. ನೊಂದ ರೈತರಿಗೆ ನ್ಯಾಯ ಒದಗಿಸಲು ಕಿಸಾನ್ ಕಾಂಗ್ರೆಸ್ ಬದ್ಧವಾಗಿದೆ ಎಂದು ಕರ್ನಾಟಕ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ ಹೇಳಿದ್ದಾರೆ.

    ಸುಮಾರು 30 ವರ್ಷಗಳಿಂದ ಬೆಳೆದು ನಿಂತಿದ್ದ ತೋಟವನ್ನು ಏಕಾಏಕಿ ಉರುಳಿಸಿ ತಹಶೀಲ್ದಾರ್ ದರ್ಪ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ತುಮಕೂರು ಜಿಲ್ಲೆಯ ಗುಬ್ಬಿ ತಹಶೀಲ್ದಾರ್ ಮಮತಾ ಅವರ ಮೇಲೆ ಆರೋಪ ಕೇಳಿ ಬಂದಿದ್ದು, ತಾಲೂಕಿನ ತಿಪ್ಪೂರು ಗ್ರಾಮದ ಸಣ್ಣಕೆಂಪಯ್ಯ ಮತ್ತು ಸಿದ್ದಮ್ಮ ಅವರ ತೋಟವನ್ನು ನಾಶ ಮಾಡಲಾಗಿದೆ. ಉಡುಸಲಮ್ಮ ದೇವಸ್ಥಾನದಿಂದ ಕೊಡುಗೆಯಾಗಿ 5.18 ಎಕರೆ ಜಮೀನನ್ನು ಈ ಕುಟುಂಬಕ್ಕೆ ನೀಡಲಾಗಿದೆ. ಕಳೆದ 30 ವರ್ಷಗಳಿಂದಲೂ ತೆಂಗು, ಅಡಿಕೆ, ಬಾಳೆ ಬೆಳೆದುಕೊಂಡು ಬಂದಿದ್ದಾರೆ. ಈ ನಡುವೆ ಉಡುಸಲಮ್ಮ ದೇವರ ಜಾತ್ರೆಗೆ ಜಾಗ ಸಾಕಾಗುವುದಿಲ್ಲ ಎಂದು ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ತಹಶಿಲ್ದಾರ್ ಮಮತಾ ಅವರು ತೋಟವನ್ನು ಉರುಳಿಸಲು ಆದೇಶ ಕೊಟ್ಟಿದ್ದಾರೆ ಎನ್ನಲಾಗಿದೆ.

    ಅದರಂತೆ ಗ್ರಾಮ ಲೆಕ್ಕಿಗ ಮುರುಳಿ ಯಾವುದೇ ನೋಟಿಸ್ ನೀಡದೇ ಏಕಾಏಕಿ ತೋಟಕ್ಕೆ ನುಗ್ಗಿ ಫಸಲಿಗೆ ಬಂದಿದ್ದ 300 ಅಡಿಕೆ, 30 ತೆಂಗು ಮತ್ತು ಬಾಳೆ ಗಿಡಗಳನ್ನು ಉರುಳಿಸಿದ್ದಾರೆ. ಸಣ್ಣ ಕೆಂಪಯ್ಯ ಮತ್ತು ಸಿದ್ದಮ್ಮ ಕುಟುಂಬ ಉಡುಸಲಮ್ಮ ದೇವಸ್ಥಾನದ ಅರ್ಚಕರಾಗಿದ್ದಾರೆ. ಹೀಗಾಗಿ ಈ ಕುಟುಂಬಕ್ಕೆ ದೇವಸ್ಥಾನದಿಂದಲೇ ಜಮೀನು ಕೊಡುಗೆಯಾಗಿ ಕೊಟ್ಟಿದ್ದಾರೆ ಎನ್ನಲಾಗಿದೆ. ಅಲ್ಲದೆ ಜಮೀನು ಪೂರ್ಣ ಸ್ವಾಧೀನ ಕೋರಿ ಜಿಲ್ಲಾ ನ್ಯಾಯಾಲಯದಲ್ಲಿ ಮುನಿ ಕೆಂಪಯ್ಯ ಕುಟುಂಬ ಅರ್ಜಿ ಸಲ್ಲಿಸಿತ್ತು. ಆದರೆ ಅಧಿಕಾರಿಗಳು ಏಕಾಏಕಿ ಗಿಡಗಳನ್ನು ನಾಶ ಮಾಡಿದ್ದಾರೆ.

    ಗುಬ್ಬಿ ಪೊಲೀಸರ ಸಮುಖದಲ್ಲೇ ಗ್ರಾಮ ಲೆಕ್ಕಿಗ ಮುರುಳಿ ಮರಗಳನ್ನು ಕಡಿದಿದ್ದಾರೆ. ಇದರಿಂದ ಆಘಾತಕ್ಕೊಳಗಾದ ಕುಟುಂಬ ದುಃಖದ ಮಡುವಿನಲ್ಲಿದೆ. ಮುನಿ ಕೆಂಪಯ್ಯ ಕುಟುಂಬದ ಆಕ್ರಂದನದ ವಿಡಿಯೋ ವೈರಲ್ ಆಗಿದೆ.

  • ರೈತ ಮಹಿಳೆಯ ಮರ ಕಡಿಯಲು ನಾನು ಅನುಮತಿ ನೀಡಿಲ್ಲ: ತಹಶೀಲ್ದಾರ ಮಮತಾ

    ರೈತ ಮಹಿಳೆಯ ಮರ ಕಡಿಯಲು ನಾನು ಅನುಮತಿ ನೀಡಿಲ್ಲ: ತಹಶೀಲ್ದಾರ ಮಮತಾ

    – ನಮ್ಮ ಸಿಬ್ಬಂದಿ ಮರ ಕಡಿದಿದ್ದು ತಪ್ಪು

    ತುಮಕೂರು: ರೈತ ಮಹಿಳೆಯ ಮರ ಕಡಿಯಲು ನಾನು ಅನುಮತಿ ನೀಡಿಲ್ಲ. ಆದರೂ ನಮ್ಮ ಸಿಬ್ಬಂದಿ ಮರ ಕಡಿದು ತಪ್ಪು ಮಾಡಿದ್ದಾರೆ ಎಂದು ಗುಬ್ಬಿ ತಾಲೂಕಿನ ತಹಶೀಲ್ದಾರ್ ಮಮತಾ ಹೇಳಿದ್ದಾರೆ.

    ತಾಲೂಕಿನ ತಿಪ್ಪೂರು ಗ್ರಾಮದ ಸಣ್ಣಕೆಂಪಯ್ಯ ಮತ್ತು ಸಿದ್ದಮ್ಮ ಅವರಿಗೆ ಉಡುಸಲಮ್ಮ ದೇವಸ್ಥಾನದಿಂದ ಕೊಡುಗೆಯಾಗಿ 5.18 ಎಕರೆ ಜಮೀನು ನೀಡಲಾಗಿತ್ತು. ಆದರೆ ಜಾತ್ರೆಗೆ ಜಾಗ ಬೇಕು ಎಂದು ಈ ಜಮೀನಿನಲ್ಲಿ ಬೆಳದಿದ್ದ ಅಡಕೆ, ತೆಂಗು ಮತ್ತು ಬಾಳೆಯನ್ನು ಕಡಿದು ಹಾಕಲಾಗಿತ್ತು. ಇದನ್ನು ಮಮತಾ ಅವರ ಆದೇಶ ಮೇರೆಗೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.

    ಈಗ ಈ ಆರೋಪವನ್ನು ತಳ್ಳಿ ಹಾಕಿರುವ ಮಮತಾ, ನಾನು ರೈತ ಮಹಿಳೆ ಸಿದ್ದಮ್ಮರ ಮರ ಕಡಿಯಲು ಅನುಮತಿ ನೀಡಿರಲಿಲ್ಲ. ಆದರೂ ನಮ್ಮ ಸಿಬ್ಬಂದಿ ಮರ ಕಡಿದು ತಪ್ಪು ಮಾಡಿದ್ದಾರೆ. ಗ್ರಾಮ ಲೆಕ್ಕಿಗ ಮುರುಳಿ ಸೇರಿದಂತೆ ಇತರ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಒಪ್ಪಿಗೆ ಕೊಟ್ಟ ಅರ್ಚಕರ ಮರವನ್ನು ಮಾತ್ರ ತೆರುಗೊಳಿಸಲು ಆದೇಶಿಸಲಾಗಿತ್ತು. ಆದರೆ ನಮ್ಮ ಸಿಬ್ಬಂದಿ ಅಲ್ಲಿಗೆ ಹೋದಾಗ ಅನುಮತಿ ಇಲ್ಲದಿದ್ದರು ಈ ಕೆಲಸ ಮಾಡಿದ್ದಾರೆ ಎಂದು ಮಮತಾ ಅವರು ತಿಳಿಸಿದ್ದಾರೆ.

    ಉಡುಸಲಮ್ಮ ದೇವರ ಜಾತ್ರೆಗೆ ಜಾಗ ಸಾಕಾಗುವುದಿಲ್ಲ ಎಂದು ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ತಹಶೀಲ್ದಾರ್ ಮಮತಾ ಅವರು ತೋಟವನ್ನು ಉರುಳಿಸಲು ಆದೇಶ ಕೊಟ್ಟಿದ್ದಾರೆ ಎನ್ನಲಾಗಿತ್ತು. ಅದರಂತೆ ಗ್ರಾಮ ಲೆಕ್ಕಿಗ ಮುರುಳಿ ಯಾವುದೇ ನೋಟಿಸ್ ನೀಡದೇ ಏಕಾಏಕಿ ತೋಟಕ್ಕೆ ನುಗ್ಗಿ ಫಸಲಿಗೆ ಬಂದಿದ್ದ 300 ಅಡಿಕೆ, 30 ತೆಂಗು ಮತ್ತು ಬಾಳೆ ಗಿಡಗಳನ್ನು ಉರುಳಿಸಿದ್ದರು. ಸಣ್ಣ ಕೆಂಪಯ್ಯ ಮತ್ತು ಸಿದ್ದಮ್ಮ ಕುಟುಂಬ ಉಡುಸಲಮ್ಮ ದೇವಸ್ಥಾನದ ಅರ್ಚಕರಾಗಿದ್ದಾರೆ. ಹೀಗಾಗಿ ಈ ಕುಟುಂಬಕ್ಕೆ ದೇವಸ್ಥಾನದಿಂದಲೇ ಜಮೀನು ಕೊಡುಗೆಯಾಗಿ ಕೊಟ್ಟಿದ್ದರು. ಅಲ್ಲದೆ ಜಮೀನು ಪೂರ್ಣ ಸ್ವಾಧೀನ ಕೋರಿ ಜಿಲ್ಲಾ ನ್ಯಾಯಾಲಯದಲ್ಲಿ ಮುನಿ ಕೆಂಪಯ್ಯ ಕುಟುಂಬ ಅರ್ಜಿ ಸಲ್ಲಿಸಿತ್ತು. ಆದರೆ ಅಧಿಕಾರಿಗಳು ಏಕಾಏಕಿ ಗಿಡಗಳನ್ನು ನಾಶ ಮಾಡಿದ್ದಾರೆ.

    ಈ ನಡುವೆ ಸಣ್ಣ ಕೆಂಪಯ್ಯ ಮತ್ತು ಸಿದ್ದಮ್ಮರ ಮಧ್ಯೆಯೇ ಜಮೀನು ಹಂಚಿಕೆಯಲ್ಲಿ ವಿವಾದ ಉಂಟಾಗಿತ್ತು. ಇದರ ಲಾಭ ಪಡೆದುಕೊಂಡ ತಾಲೂಕು ಆಡಳಿತ ಏಕಾಏಕಿ ತೋಟವನ್ನು ಉರುಳಿಸಿದೆ. ಗುಬ್ಬಿ ಪೊಲೀಸರ ಸಮುಖದಲ್ಲೇ ಗ್ರಾಮ ಲೆಕ್ಕಿಗ ಮುರುಳಿ ಮರಗಳನ್ನು ಕಡಿದಿದ್ದಾರೆ. ಇದರಿಂದ ಆಘಾತಕ್ಕೊಳಗಾದ ಕುಟುಂಬ ದುಃಖದ ಮಡುವಿನಲ್ಲಿದೆ.

  • ಅಮಿತ್ ಶಾ ಕಾರ್ಯಕ್ರಮಕ್ಕೆ ಮರಗಳ ಮಾರಣಹೋಮ!

    ಅಮಿತ್ ಶಾ ಕಾರ್ಯಕ್ರಮಕ್ಕೆ ಮರಗಳ ಮಾರಣಹೋಮ!

    ಹುಬ್ಬಳ್ಳಿ: ಜನವರಿ 18ರಂದು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ನಡೆಯಲಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ಜನಜಾಗೃತಿ ಸಮಾವೇಶಕ್ಕೆ ಹತ್ತಾರು ಮರಗಳನ್ನ ಕಡಿದು ಹಾಕಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ನೆಹರು ಮೈದಾನದಲ್ಲಿ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಲಕ್ಷಾಂತರ ಜನರು ಭಾಗವಹಿಸಲಿದ್ದಾರೆ. ಈ ಸಮಾವೇಶಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿದ್ದಾರೆ. ಹೀಗಾಗಿ ಭದ್ರತಾ ದೃಷ್ಟಿಯಿಂದ ಹತ್ತಾರು ಮರಗಳ ಟೊಂಗೆ ಕಡಿಯಬೇಕಾದ ಪಾಲಿಕೆ ಸಿಬ್ಬಂದಿ ಮರಗಳನ್ನ ಕಡಿದು ಹಾಕಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರು ಗೃಹ ಸಚಿವ ಅಮಿತ್ ಶಾ ಅವರಿಗೆ ಭದ್ರತೆ ನೀಡುವ ಜವಾಬ್ದಾರಿ ಹೊತ್ತಿದ್ದಾರೆ. ಹೀಗಾಗಿ ರಕ್ಷಣೆಗೆ ತೊಡಕಾಗುತ್ತದೆ ಎಂದು ನೆಹರು ಮೈದಾನದಕ್ಕೆ ಹೊಂದಿಕೊಂಡಿರುವ ಕೊಪ್ಪಿಕರ ರಸ್ತೆಯ ಬಳಿಯ ಗಿಡಮರಗಳ ಟೊಂಗೆ ಕಡಿಯಲು ಪಾಲಿಕೆಗೆ ಸೂಚಿಸಿದ್ದರು. ಆದರೆ ಪಾಲಿಕೆ ಸಿಬ್ಬಂದಿ ಟೊಂಗೆಗಳನ್ನ ಕಡಿಯದೆ ಮರಗಳನ್ನೇ ನೆಲಕ್ಕೆ ಉರುಳಿಸಿದ್ದಾರೆ.

    ಮರ ಕಡಿದಿದ್ದಕ್ಕೆ ಸಚಿವರು ಗರಂ:
    ಅಮಿತ್ ಶಾ ಕಾರ್ಯಕ್ರಮದ ಭದ್ರತೆಗಾಗಿ ಮರಗಳನ್ನ ಕಡಿದು ಹಾಕಿರುವ ವಿಚಾರ ತಿಳಿಯುತ್ತಿದ್ದಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಿಟ್ಟಾಗಿ ಪಾಲಿಕೆ ಹಾಗೂ ಪೊಲೀಸ್ ಅಧಿಕಾರಿಗಳನ್ನ ತರಾಟೆಗೆ ತಗೆದುಕೊಂಡಿದ್ದಾರೆ. ಮರಗಳನ್ನ ಕಡಿದಿದ್ದು ಯಾರು? ಅವರಿಗೆ ಸೂಚನೆ ಕೊಟ್ಟವರು ಯಾರು? ಎಂದು ಪ್ರಲ್ಹಾದ ಜೋಶಿ ಪಾಲಿಕೆ ಆಯುಕ್ತರನ್ನ ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಮರಗಳನ್ನ ಕಡಿದಿರುವ ಬಗ್ಗೆ ಪರಿಶೀಲನೆ ನಡೆಸಿ ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಲ್ಹಾದ್ ಜೋಶಿ ಸೂಚನೆ ನೀಡಿದ್ದಾರೆ.

  • ಮೆಸ್ಕಾಂಗೆ ಸವಾಲಾಗಿರುವ ಮಲೆನಾಡ ಮಳೆ- ಸಿಬ್ಬಂದಿ ಮೇಲೆ ಬಿದ್ದ ಮರ

    ಮೆಸ್ಕಾಂಗೆ ಸವಾಲಾಗಿರುವ ಮಲೆನಾಡ ಮಳೆ- ಸಿಬ್ಬಂದಿ ಮೇಲೆ ಬಿದ್ದ ಮರ

    ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆ ಹಲವು ಕಡೆ ಅವಾಂತರ ಸೃಷ್ಟಿಸಿದೆ. ಮೆಳೆಯ ಅಬ್ಬರಕ್ಕೆ ಆಗುತ್ತಿರುವ ಅನಾಹುತಗಳು ಮೆಸ್ಕಾಂಗೆ ತಲೆನೋವಾಗಿದೆ.

    ಹೌದು. ಮಲೆನಾಡಿನಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಗೆ ಜನ ಜೀವನ ಅಸ್ತವ್ಯಸ್ಥಗೊಂಡಿದ್ದು, ರಸ್ತೆಗಳ ಮೇಲೆ ಬೃಹತ್ ಮರಗಳು ಉರುಳಿ ಬಿದ್ದು ಭಾರೀ ಅವಾಂತರ ಸೃಷ್ಟಿಯಾಗಿದೆ. ಅಲ್ಲದೆ ಧರೆಗುರುಳಿರುವ ಮರಗಳ ಜೊತೆಗೆ ಹಲವು ಕಡೆ ವಿದ್ಯುತ್ ಕಂಬಗಳು ಕೂಡ ನೆಲಕ್ಕುರುಳಿದೆ. ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಬಂಡೀಗಡಿ ಬಳಿ ರಸ್ತೆಗೆ ಬೃಹತ್ ಮರ ಉರುಳಿ ಬಿದ್ದಿದೆ.

    ಈ ಹಿನ್ನೆಲೆ ಮಳೆಯಲ್ಲೇ ಮರ ತೆರವು ಕಾರ್ಯಾಚರಣೆ ಮಾಡಿ, ಮೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ಲೈನ್ ರಿಪೇರಿ ಕೆಲಸವನ್ನು ಮಾಡುತ್ತಿದ್ದಾರೆ. ಹೀಗೆ ಲೈನ್ ರಿಪೇರಿ ಮಾಡುತ್ತಿದ್ದ ಮೆಸ್ಕಾಂ ಸಿಬ್ಬಂದಿ ಮೇಲೆ ಮರವೊಂದು ಬಿದ್ದಿದ್ದು, ತಕ್ಷಣ ಸ್ಥಳದಲ್ಲಿದ್ದವರು ಸಿಬ್ಬಂದಿಯನ್ನು ರಕ್ಷಿಸಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಸಿಬ್ಬಂದಿ ಪಾರಾಗಿದ್ದಾರೆ.

    ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಕಳೆದ ಬಾರಿ 17 ಬಾರಿ ಮುಳುಗಿದ್ದ ಹೆಬ್ಬಾಳೆ ಸೇತುವೆ ಈ ವರ್ಷ ಮೊದಲ ಬಾರಿ ಮುಳುಗಡೆಯಾಗಿದ್ದು, ಮಹಾಮಳೆಗೆ ಜನ ಮನೆಯಿಂದ ಹೊರಬರದಂತ ಸ್ಥಿತಿ ನಿರ್ಮಾಣವಾಗಿದೆ.

    ರಾಜ್ಯದ ಹಲವೆಡೆ ಮಳೆರಾಯನ ರೌದ್ರನರ್ತನಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಅಲ್ಲದೆ ಭಾರೀ ಮಳೆಯ ಹಿನ್ನೆಲೆ ಹಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಗೆ ಕೃಷ್ಣಾ ನದಿ ಅಪಾಯದ ಮಟ್ಟ ಮೀರಿ ಸುರಿಯುತ್ತಿದ್ದು, ಉತ್ತರ ಕರ್ನಾಟಕದ ಭಾಗದಲ್ಲಿ ಪ್ರವಾಹ ಸೃಷ್ಟಿಸಿದೆ. ಮಳೆಯ ಅಬ್ಬರಕ್ಕೆ ರಾಜ್ಯದ ನದಿಗಳು ಭೋರ್ಗರೆದು ಹರಿಯುತ್ತಿದ್ದು, ಚಿಕ್ಕಮಗಳೂರು ಸೇರಿದಂತೆ ಹಲವೆಡೆ ಸೇತುವೆಗಳು ಮುಳುಗಡೆಯಾಗಿದೆ, ರಸ್ತೆಗಳ ಮೇಲೆ ಮರಗಳು, ಗುಡ್ಡಗಳು ಕುಸಿದು ಸಂಚಾರ ಸ್ಥಗಿತಗೊಂಡಿದೆ.