Tag: ಮಮತಾಬ್ಯಾನರ್ಜಿ

  • ದಿದಿ ನಾಡಿನಲ್ಲೇ ಹಿಂಸಾಚಾರ – ಹೆದರಿ ಮನೆ ತೊರೆಯುತ್ತಿರುವ ಜನರು

    ದಿದಿ ನಾಡಿನಲ್ಲೇ ಹಿಂಸಾಚಾರ – ಹೆದರಿ ಮನೆ ತೊರೆಯುತ್ತಿರುವ ಜನರು

    ಕೊಲ್ಕತ್ತಾ: ಪಶ್ಚಿಮ ಬಂಗಾಳದ ಬಿರ್‌ಭುಮ್‌ನಲ್ಲಿ ನೆನ್ನೆಯಷ್ಟೇ ನಡೆದ ಹಿಂಸಾಚಾರದಿಂದಾಗಿ 8 ಮಂದಿ ಸಜೀವ ದಹನವಾಗಿದ್ದಾರೆ. ಈ ಸಂಬಂಧ ಕೋಲ್ಕತ್ತಾ ಹೈಕೋರ್ಟ್ ಸ್ವಯಂಪ್ರೇರಿತವಾಗಿ ಇಂದು ಮಧ್ಯಾಹ್ನದಿಂದಲೇ ವಿಚಾರಣೆ ಪ್ರಾರಂಭಿಸಿದೆ.

    ಏನಿದು ಪ್ರಕರಣ?
    ಇಲ್ಲಿನ ಬಗುಟಿ ಗ್ರಾಮ ಪಂಚಾಯಿತಿ ಮುಖಂಡ ಭಾದು ಶೇಖ್ ಅವರ ಮೇಲೆ ಸೋಮವಾರ ರಾತ್ರಿ ದಾಳಿ ನಡೆದಿತ್ತು. ರಾಷ್ಟ್ರೀಯ ಹೆದ್ದಾರಿ-60ರ ಅಂಗಡಿಯೊಂದರಲ್ಲಿ ಇರುವಾಗ ಶೇಖ್ ಅವರ ಮೇಲೆ ಬಾಂಬ್ ದಾಳಿ ನಡೆಸಲಾಗಿತ್ತು. ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಅವರು ಮೃತಪಟ್ಟಿದ್ದರು. ಮುಖಂಡನ ಸಾವಿನ ಸುದ್ದಿ ತಿಳಿದು ರೊಚ್ಚಿಗೆದ್ದ ಗುಂಪೊಂದು 10 ರಿಂದ 12 ಮನೆಗೆ ಬೆಂಕಿ ಹಚ್ಚಿದ್ದರು. ಇದರಿಂದಾಗಿ 8 ಮಂದಿ ಸಜೀವ ದಹನವಾಗಿದ್ದರು. ಇದರಲ್ಲಿ ಇಬ್ಬರು ಮಕ್ಕಳೂ ಸಹ ಇದ್ದರು ಎಂಬುದಾಗಿ ಬಿರ್‌ಬುಮ್ ಎಸ್‌ಪಿ ನಾಗೇಂದ್ರ ತ್ರಿಪಾಟಿ ಮಾಹಿತಿ ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್ ಸ್ವಯಂಪ್ರೇರಿತವಾಗಿಯೇ ವಿಚಾರಣೆ ನಡೆಸಲು ಮುಂದಾಗಿದೆ. ಇದನ್ನೂ ಓದಿ: ಯುಎಇಯಿಂದ ಜಮ್ಮು- ಕಾಶ್ಮೀರದಲ್ಲಿ 70 ಸಾವಿರ ಕೋಟಿ ಹೂಡಿಕೆ; 7 ಲಕ್ಷ ಉದ್ಯೋಗ ಸೃಷ್ಟಿಯ ಗುರಿ

    ಮನೆಗೆ ಬೆಂಕಿಯಿಟ್ಟ ಗುಂಪಿನ ಬಗ್ಗೆ ರಾಜ್ಯ ಸರ್ಕಾರವು ಎಡಿಜಿ (ಸಿಐಡಿ) ಜ್ಞಾನವಂತ್ ಸಿಂಗ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿದೆ. ಘಟನೆಗೆ ಸಂಬಂಧಿಸಿದಂತೆ 20ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಮಧ್ಯೆ ಕೇಂದ್ರ ಸರ್ಕಾರವೂ ಘಟನೆ ಬಗ್ಗೆ ಸಮಗ್ರ ವರದಿ ನೀಡುವಂತೆ ಪಶ್ಚಿಮ ಬಂಗಾಳ ರಾಜ್ಯ ಗೃಹ ಸಚಿವಾಲಯಕ್ಕೆ ಸೂಚಿಸಿದೆ.

    ಮನೆ ತೊರೆಯುತ್ತಿರುವ ಜನರು
    ಜಿಲ್ಲೆಯ ಜನರು ಹಿಂಸಾಚಾರಕ್ಕೆ ಬೆಚ್ಚಿಬಿದ್ದಿದ್ದು, ತಮ್ಮ ಮನೆಗಳನ್ನು ತೊರೆದು ಹೋಗುತ್ತಿದ್ದಾರೆ. ನಮ್ಮ ಭದ್ರತೆ ದೃಷ್ಟಿಯಿಂದ ಇಲ್ಲಿಂದ ಹೊರಡುತ್ತಿದ್ದೇವೆ. ಪೊಲೀಸರು ಬಿಗಿ ಭದ್ರತೆ ಕಲ್ಪಿಸಿದ್ದರೆ ಈ ಅನಾಹುತ ನಡೆಯುತ್ತಿರಲಿಲ್ಲ ಎಂದು ವಲಸೆ ಹೊರಡುತ್ತಿದ್ದ ವ್ಯಕ್ತಿಯೊಬ್ಬರು ಹೇಳಿದ್ದಾರೆ.

    ಈ ನಡುವೆ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನ್‌ಕರ್ ಸಹ ವೀಡಿಯೋ ಸಂದೇಶದ ಮೂಲಕ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಘಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತ ಬ್ಯಾನರ್ಜಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ರಾಜ್ಯಪಾಲರ ಹೇಳಿಕೆಗೆ ತಿರುಗೇಟು ನೀಡಿದ್ದು, ಅನಗತ್ಯ ಹೇಳಿಕೆಗಳನ್ನ ನೀಡಬೇಡಿ ಎಂದಿದ್ದಾರೆ. ಇದನ್ನೂ ಓದಿ: ಆರ್.ಆರ್.ಆರ್ ಬೈಕಾಟ್ : ಕನ್ನಡ ಪರ ಹೋರಾಟಗಾರರಿಗೇ ಜವಾಬ್ದಾರಿ ಕೊಟ್ಟ ರಾಜಮೌಳಿ ಟೀಮ್

    ಇನ್ನು ಈ ಘಟನೆ ರಾಜಕೀಯ ಕಾದಾಟಕ್ಕೂ ಕಾರಣವಾಗಿದೆ. ಮಮತಾ ಬ್ಯಾನರ್ಜಿ ಸಿಎಂ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿಗರು ಆಗ್ರಹಿಸುತ್ತಿದ್ದಾರೆ. ಹಿಂಸಾಚಾರದಲ್ಲಿ 20ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಆದರೆ ನೈಜ ಸಂಖ್ಯೆಯನ್ನು ಮುಚ್ಚಿಡಲಾಗುತ್ತಿದೆ. ಘಟನೆ ನಡೆದ ಸ್ಥಳಕ್ಕೆ ಕಾಲಿಡಲು ಯಾರಿಗೂ ಬಿಡುತ್ತಿಲ್ಲ ಎಂದು ಬಿಜೆಪಿ ಎಂಪಿ ಆರೋಪಿಸಿದ್ದಾರೆ.

    ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಸುವೇಂದು ಅಧಿಕಾರಿ, ಬಿರ್‌ಭುವ್ ಜಿಲ್ಲೆಯ ಘಟನೆಯ ಉದ್ವಿಗ್ನತೆ ಭಯೋತ್ಪಾದನೆಯನ್ನು ಆವರಿಸಿದೆ. ಪಶ್ಚಿಮ ಬಂಗಾಳದಲ್ಲಿ ಕಾನೂನು ವ್ಯವಸ್ಥೆ ಪತನಗೊಂಡಿದೆ ಎಂಬುದು ಇದರಿಂದ ತಿಳಿಯುತ್ತದೆ ಎಂದು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.

  • ಪರೀಕ್ಷಾ ಸಮಯದಲ್ಲೇ ಉಪಚುನಾವಣೆ ಯಾಕೆ – ಆಯೋಗದ ವಿರುದ್ಧ ಮಮತಾ ಕಿಡಿ

    ಪರೀಕ್ಷಾ ಸಮಯದಲ್ಲೇ ಉಪಚುನಾವಣೆ ಯಾಕೆ – ಆಯೋಗದ ವಿರುದ್ಧ ಮಮತಾ ಕಿಡಿ

    ಕೊಲ್ಕತ್ತಾ: ಪಂಚರಾಜ್ಯ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ವಿರುದ್ಧ ಸತತವಾಗಿ ವಾಗ್ದಾಳಿ ನಡೆಸುತ್ತಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇದೀಗ ಚುನಾವಣಾ ಆಯೋಗವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

    ಪಶ್ಚಿಮ ಬಂಗಾಳದ 12ನೇ ತರಗತಿಯ ಬೋರ್ಡ್ ಪರೀಕ್ಷೆಗಳ ಸಮಯದಲ್ಲಿ ಅಸನ್ಸೋಲ್ ಲೋಕಸಭಾ ಕ್ಷೇತ್ರ ಹಾಗೂ ಬ್ಯಾಲಿಗುಂಗೆ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಿಗದಿಪಡಿಸಿರುವುದಕ್ಕಾಗಿ ಚುನಾವಣಾ ಆಯೋಗವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕಾರಣದಿಂದಾಗಿ ಪರೀಕ್ಷೆಗಳನ್ನು ಮರುಹೊಂದಿಸಬೇಕಾಗಿದೆ ಎಂದು ಅವರು ಆಗ್ರಹಿಸಿದ್ದಾರೆ.

    ಚುನಾವಣಾ ಆಯೋಗವು ಬಿಜೆಪಿಯ ಆಜ್ಞೆಯಂತೆ ಕೆಲಸ ನಿರ್ವಹಿಸುತ್ತಿದೆ. ಹಾಗಾಗಿಯೇ ಅದು ಉಪಚುನಾವಣೆಯ ದಿನಾಂಕವನ್ನು ನಿಗದಿಪಡಿಸುವಾಗ ರಾಜ್ಯದ ಬೋರ್ಡ್ ಪರೀಕ್ಷೆಗಳನ್ನು ಪರಿಗಣಿಸಿಲ್ಲ. ಏ.2 ಮತ್ತು ಏ.26ರ ನಡುವೆ ನಡೆಯಬೇಕಿದ್ದ  12ನೇ ತರಗತಿಯ ಬೋರ್ಡ್ ಪರೀಕ್ಷೆಗಳು ನಡೆಯಲಿದ್ದು, ಏ.27ರಂದು ಪರೀಕ್ಷೆ ಕೊನೆಗೊಳ್ಳಲಿದೆ. ಈ ನಡುವೆ ಚುನಾವಣಾ ದಿನಾಂಕವನ್ನು ನಿಗದಿ ಮಾಡಿರುವುದು ಆಕ್ಷೇಪಾರ್ಹ ಎಂದು ಹೇಳಿದ್ದಾರೆ. ಇದನ್ನೂ ಓದಿ: ರೊಲ್ಸ್ ರಾಯಲ್ಸ್‌ಗಾಗಿ ಮತ್ತೊಂದು ವಿವಾದಕ್ಕೆ ಸಿಲುಕಿದ ವಿಜಯ್ ದಳಪತಿ

    ಇದಕ್ಕೆ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗವು, ಏ.12ರಂದು ಉಪಚುನಾವಣೆ ನಡೆಯುವ ಕಾರಣ ಏ.6ರಿಂದ 15ರ ವರೆಗೆ ಯಾವುದೇ ಪರೀಕ್ಷೆಗಳು ಇರುವುದಿಲ್ಲ. ಏ.16ರಂದು ಮತ ಏಣಿಕೆ ಕಾರ್ಯ ನಡೆಯಲಿದ್ದು, ಮೊದಲ ಭಾಷೆ ಏಪ್ರಿಲ್ 2 ರಂದು ಮತ್ತು 2ನೇ ಭಾಷೆ ಏಪ್ರಿಲ್ 4 ರಂದು ನಡೆಯಲಿದೆ. ಅಲ್ಲದೆ, ಉನ್ನತ ಶಿಕ್ಷಣದ ವೃತ್ತಿಪರ ಪರೀಕ್ಷೆಗಳು ಏಪ್ರಿಲ್ 5 ರಂದು ನಡೆಯಲಿದೆ. ಹಾಗಾಗಿ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಿದೆ.

    ಚುನಾವಣಾ ಆಯೋಗವು ಬಿಜೆಪಿಯ ಆಜ್ಞೆಯಂತೆ ಕೆಲಸ ಮಾಡುತ್ತಿಲ್ಲ. ಆದರೆ, ಯಾವುದೇ ಸ್ಥಾನಕ್ಕೆ ತೆರವಾದ 6 ತಿಂಗಳಲ್ಲಿ ಉಪಚುನಾವಣೆ ನಡೆಸಬೇಕಿರುವುದರಿಂದ ದಿನಾಂಕವನ್ನು ನಿಗದಿ ಮಾಡಲಾಗಿದೆ. ಕೇಂದ್ರ ಪಡೆಗಳು ಶೀಘ್ರದಲ್ಲೇ ಕೆಲಸ ಪ್ರಾರಂಭಿಸಲಿದ್ದು, ಅವರು ಶಾಲೆಗಳಲ್ಲಿ ಸ್ಥಾಪಿಸುವ ಮತಗಟ್ಟೆಗಳಲ್ಲೇ ಉಳಿಯಲಿದ್ದಾರೆ. ಈ ವೇಳೆ ಶಾಲೆಗಳಿಗೆ ಅಳವಡಿಸಲಾಗುವ ಸುರಕ್ಷಸತಾ ಸೌಲಭ್ಯವನ್ನು ಬೋರ್ಡ್ ಪರೀಕ್ಷೆಗೂ ಬಳಸಲಾಗುವುದು ಎಂದಿದ್ದಾರೆ.

    ಆದರೂ ಚುನಾವಣೆಯಿಂದ ವಿದ್ಯಾರ್ಥಿಗಳ ಪರೀಕ್ಷೆಗಳಿಗೆ ತೊಂದರೆಯಾಗಲಿದೆ ಎಂದು ಮಮತಾ ಬ್ಯಾನರ್ಜಿ ತಮ್ಮ ವಾದ ಮುಂದುವರಿಸಿದ್ದಾರೆ. ಪಂಜಾಬ್, ಉತ್ತರ ಪ್ರದೇಶ, ಗೋವಾ, ಮಣಿಪುರ ಮತ್ತು ಉತ್ತರಾಖಂಡದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಗಳ ಜೊತೆಗೆ ಈ ಎರಡೂ ಕ್ಷೇತ್ರಗಳಿಗೂ ಚುನಾವಣೆ ನಡೆಸಬಹುದಿತ್ತು. ಆಗಲೇ ಚುನಾವಣೆ ನಡೆಸಿದ್ದರೆ ವಿದ್ಯಾರ್ಥಿಗಳು ಈ ಸಮಸ್ಯೆ ಎದುರಿಸಬೇಕಾಗುತ್ತಿರಲಿಲ್ಲ. ಹಾಗಾಗಿ ಮುಖ್ಯಕಾರ್ಯದರ್ಶಿಗಳು ಹಾಗೂ ಚುನಾವಣಾ ಆಯೋಗವು ಪರೀಕ್ಷೆಯನ್ನು ಗಮನದಲ್ಲಿಟ್ಟುಕೊಂಡು ಉಪಚುನಾವಣೆಯ ದಿನಾಂಕವನ್ನು ನಿಗದಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ರಾಯಚೂರಿನಲ್ಲಿ ಮದ್ಯ ಮಾರಾಟ ನಿಷೇಧ

    ಈ ನಡುವೆ ಪಶ್ಚಿಮ ಬಂಗಾಳ ಕೌನ್ಸಿಲ್ ಫಾರ್ ಹೈಯರ್ ಸೆಕೆಂಡರಿ ಎಜುಕೇಶನ್ ಸಂಸ್ಥೆಯು ತನ್ನ 12ನೇ ತರಗತಿಯ ಕೆಲವು ಪರೀಕ್ಷಾ ದಿನಾಂಕಗಳನ್ನು ಜೆಇಇ ಸಂಸ್ಥೆಯೊಂದಿಗೆ ಹೊಂದಿಕೆಯಾಗುವಂತೆ ಪರಿಷ್ಕರಿಸಿದೆ.