Tag: ಮನೋಹರ್ ಪರಿಕ್ಕರ್

  • ಮೂಗಿಗೆ ಪೈಪ್ ಹಾಕಿಕೊಂಡು ಬಜೆಟ್ ಮಂಡಿಸಿದ ಗೋವಾ ಸಿಎಂ ಪರಿಕ್ಕರ್

    ಮೂಗಿಗೆ ಪೈಪ್ ಹಾಕಿಕೊಂಡು ಬಜೆಟ್ ಮಂಡಿಸಿದ ಗೋವಾ ಸಿಎಂ ಪರಿಕ್ಕರ್

    ಪಣಜಿ: ತೀವ್ರ ಅನಾರೋಗ್ಯಕ್ಕೆ ಒಳಗಾಗಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಮೂಗಿಗೆ ಹಾಕಿಕೊಂಡೇ ಬುಧವಾರ ರಾಜ್ಯ ಬಜೆಟ್ ಮಂಡಿಸಿದ್ದಾರೆ.

    ಹಣಕಾಸು ಖಾತೆಯನ್ನು ನಿಭಾಯಿಸುತ್ತಿರುವ ಮನೋಹರ್ ಪರಿಕ್ಕರ್ ಅವರು ಇಂದು ಗೋವಾ ವಿಧಾನಸಭೆಗೆ ಮೂಗಿಗೆ ಪೈಪ್, ತಲೆಗೆ ಟೋಪಿ ಹಾಕಿಕೊಂಡು ಆಗಮಿಸಿದ್ದರು. ಬಳಿಕ ಮೆಲು ಧ್ವನಿಯಲ್ಲಿಯೇ ಬಜೆಟ್ ಮಂಡಿಸಿದರು. ಹೀಗಾಗಿ ವಿಧಾನಸಭೆಯ ಸದಸ್ಯರು ಶಾಂತವಾಗಿ ಬಜೆಟ್ ಭಾಷಣವನ್ನು ಆಲಿಸಿದರು.

    ಪರಿಕ್ಕರ್ ಅವರು ತಮ್ಮ ಭಾಷಣದ ಮಧ್ಯದಲ್ಲಿ ಹಲವು ಬಾರಿ ಸಿಬ್ಬಂದಿಗೆ ಕೇಳಿ ನೀರು ಪಡೆದು ಬಜೆಟ್ ಮಂಡನೆಯನ್ನು ಪೂರ್ಣಗೊಳಿಸಿದರು. ಅನಾರೋಗ್ಯ ಪರಿಸ್ಥಿತಿಯಲ್ಲೂ ಬಜೆಟ್ ಮಂಡನೆ ಮೂಲಕ ಕರ್ತವ್ಯ ನಿರ್ವಹಿಸಿದ ಮನೋಹರ್ ಪರಿಕ್ಕರ್ ಅವರಿಗೆ ಪಕ್ಷಾತೀತವಾಗಿ ಅಭಿನಂದನೆ ಸಲ್ಲಿಸಿದರು.

    ಕಾಂಗ್ರೆಸ್ ಶಾಸಕನಿಗೆ ಟಾಂಗ್:
    ಗೋವಾ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಚೋಡನ್ಕರ್, ಮೊದಲು ಹುಷಾರಾಗಿ ಬನ್ನಿ, ಆಮೇಲೆ ಜೋಷ್ ಕುರಿತಾಗಿ ಮಾತನಾಡಿ ಎಂದು ಕಳೆದ ಸೋಮವಾರ ವ್ಯಂಗ್ಯವಾಡಿದ್ದರು. ಬಜೆಟ್ ಮಂಡನೆಗೂ ಮುನ್ನ ಮಹೋಹರ್ ಪರಿಕ್ಕರ್ ಅವರು, ನಾನು ಅತ್ಯಂತ ಜೋಷ್‍ನಿಂದಲೇ ಬಜೆಟ್ ಮಂಡಿಸುತ್ತಿದ್ದೇನೆ ಎಂದು ಹೇಳುವ ಮೂಲಕ ಗಿರೀಶ್ ಚೋಡನ್ಕರ್ ಅವರಿಗೆ ತಿರುಗೇಟು ನೀಡಿದರು.

    ನನ್ನ ಕೊನೆ ಉಸಿರು ಇರುವವರೆಗೂ ರಾಜ್ಯದ ಜನರ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದು ಭಾವನಾತ್ಮಕವಾಗಿ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ರಫೇಲ್ ವಿಚಾರದಲ್ಲಿ ಟೀಕಿಸಿದ ಮರುದಿನವೇ ಪರಿಕ್ಕರ್ ಭೇಟಿಯಾದ ರಾಹುಲ್!

    ರಫೇಲ್ ವಿಚಾರದಲ್ಲಿ ಟೀಕಿಸಿದ ಮರುದಿನವೇ ಪರಿಕ್ಕರ್ ಭೇಟಿಯಾದ ರಾಹುಲ್!

    ಪಣಜಿ: ಸೋಮವಾರ ರಫೇಲ್ ಒಪ್ಪಂದ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವನ್ನು ಟೀಕಿಸಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರನ್ನು ಭೇಟಿ ಮಾಡಿದ್ದಾರೆ.

    ಆನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ಪರಿಕ್ಕರ್ ಅವರನ್ನು ರಾಹುಲ್ ಗಾಂಧಿ ಮಂಗಳವಾರ ಬೆಳಗ್ಗೆ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಭೇಟಿಯ ಬಳಿಕ ರಾಹುಲ್ ಗಾಂಧಿ, ಇದು ಖಾಸಗಿ ಭೇಟಿಯಾಗಿದ್ದು ಪರಿಕ್ಕರ್ ಬೇಗನೇ ಗುಣಮುಖರಾಗಲಿ ಎಂದು ಹಾರೈಸಿರುವುದಾಗಿ ಟ್ವೀಟ್ ಮಾಡಿದ್ದಾರೆ.

    ಸೋಮವಾರ ರಾಹುಲ್ ಗಾಂಧಿ ಟ್ವೀಟ್ ಮಾಡಿ, ರಫೇಲ್ ಕುರಿತ ಆಡಿಯೋ ಬಿಡುಗಡೆಯಾಗಿ 30 ದಿನ ಆಗಿದೆ. ಯಾವುದೇ ಎಫ್‍ಐಆರ್ ದಾಖಲಾಗಿಲ್ಲ, ತನಿಖೆಗೆ ಆದೇಶವಾಗಿಲ್ಲ. ಸಚಿವರ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ಆಡಿಯೋದಲ್ಲಿರುವ ಗೋವಾ ಮುಖ್ಯಮಂತ್ರಿ ಧ್ವನಿ ಸಾಚಾ ಆಗಿದೆ. ಪ್ರಧಾನಿಗಿಂತಲೂ ಪರಿಕ್ಕರ್ ಅವರಿಗೆ ಹೆಚ್ಚಿನ ಅಧಿಕಾರವಿದೆ ಎಂದು ಹೇಳಿದ್ದರು.

    ಖಾಸಗಿ ಭೇಟಿಗಾಗಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಗೋವಾಗೆ ಬಂದಿದ್ದರು. ಈ ವಿಚಾರ ತಿಳಿದು ಗೋವಾ ಬಿಜೆಪಿ ಟ್ವಿಟ್ಟರಿನಲ್ಲಿ, ರಾಹುಲ್ ಅವರೇ, ಅಟಲ್ ಸೇತುವೆಯನ್ನು ನೋಡಲು ಒಮ್ಮೆ ಬನ್ನಿ. ದೇಶದಲ್ಲಿ ಆಡಳಿತ ನಡೆಸುವ ಬಿಜೆಪಿ ಹೇಗೆ ಭಾರತವನ್ನು ಬದಲಾಯಿಸುತ್ತದೆ ಎನ್ನುವುದು ನಿಮಗೆ ಗೊತ್ತಾಗುತ್ತದೆ ಎಂದು ಬರೆದು ಆಹ್ವಾನಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲೋಕಸಭೆಯಲ್ಲಿ ಪರಿಕ್ಕರ್ ಆಡಿಯೋ ಗದ್ದಲ-ಮೋದಿ ಸರ್ಕಾರವನ್ನ ಬೆನ್ನತ್ತಿದ್ದ ರಫೇಲ್ ಹಗರಣ!

    ಲೋಕಸಭೆಯಲ್ಲಿ ಪರಿಕ್ಕರ್ ಆಡಿಯೋ ಗದ್ದಲ-ಮೋದಿ ಸರ್ಕಾರವನ್ನ ಬೆನ್ನತ್ತಿದ್ದ ರಫೇಲ್ ಹಗರಣ!

    -ಕಾಂಗ್ರೆಸ್ ಕೈಯಲ್ಲಿ ಹೊಸ ಅಸ್ತ್ರ!

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನ ರಫೇಲ್ ಹಗರಣ ಭೂತ ಬೆನ್ನತ್ತಿದ್ದಂತೆ ಕಾಣುತ್ತಿದೆ. ಗೋವಾ ಸಿಎಂ ಮನೋಹರ್ ತಮ್ಮ ಸಂಪುಟದ ಸಹೋದ್ಯೋಗಿ ವಿಶ್ವಜಿತ್ ರಾಣೆ ಜೊತೆ ಆಡಿದ್ದಾರೆ ಎನ್ನಲಾದ ಮಾತುಗಳು ಕಾಂಗ್ರೆಸ್ ದೊಡ್ಡ ಅಸ್ತ್ರವನ್ನೇ ಒದಗಿಸಿವೆ.

    ರಫೇಲ್ ವಿಮಾನ ಖರೀದಿ ಕುರಿತ ಗೌಪ್ಯ ಮಾಹಿತಿಗಳು ನನ್ನ ಫ್ಲ್ಯಾಟ್‍ನ ಬೆಡ್‍ರೂಮ್ ನಲ್ಲಿದೆ. ಹೀಗಾಗಿ ನನ್ನನ್ನು ಅಧಿಕಾರದಿಂದ ಕೆಳಗಿಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮನೋಹರ್ ಪರಿಕ್ಕರ್, ಸಚಿವ ವಿಶ್ವಜಿತ್ ರಾಣೆ ಬಳಿ ಹೇಳಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ವಿಶ್ವಜಿತ್ ರಾಣೆ, ಮೂರನೇ ವ್ಯಕ್ತಿಯೊಂದಿಗೆ ಮೊಬೈಲ್‍ನಲ್ಲಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋವನ್ನು ಕಾಂಗ್ರೆಸ್ ರಿಲೀಸ್ ಮಾಡಿದೆ. ಈ ಕುರಿತಂತೆ ಮಾತನಾಡಿದ ಎಐಸಿಸಿ ವಕ್ತಾರ ರಂದೀಪ್ ಸುರ್ಜೇವಾಲಾ, ಈ ಪ್ರಕರಣದಲ್ಲಿ ಸತ್ಯ ಏನೆಂಬುದು ಜನರಿಗೆ ಗೊತ್ತಾಗಬೇಕು. ಪ್ರಧಾನಿ ಈ ಬಗ್ಗೆ ಮಾತನಾಡ್ಬೇಕು ಎಂದು ಆಗ್ರಹಿಸಿದ್ದಾರೆ.

    ಇದು ಸುಳ್ಳು ಸುದ್ದಿ.. ಕಾಂಗ್ರೆಸ್‍ನವರು ಸುಳ್ಳನ್ನು ಸತ್ಯ ಮಾಡಲು ಹೊರಟಿದ್ದಾರೆ ಎಂದು ಗೋವಾ ಸಿಎಂ ಮನೋಹರ್ ಪರಿಕ್ಕರ್ ಮತ್ತು ವಿಶ್ವಜಿತ್ ರಾಣೆ ಹೇಳಿದ್ದಾರೆ. ಹಾಗಾದರೆ ಲೀಕ್ ಆಡಿಯೋ ಸಂಭಾಷಣೆ ಹೀಗಿದೆ.
    ವಿಶ್ವಜಿತ್ ರಾಣೆ – ರಫೇಲ್ ವಿವಾದ ಕುರಿತಂತೆ ನನ್ನ ಬೆಡ್‍ರೂಮ್‍ನಲ್ಲಿ ಎಲ್ಲಾ ಮಾಹಿತಿಗಳಿವೆ ಎಂದು ಮನೋಹರ್ ಪರಿಕ್ಕರ್ ನನ್ನ ಬಳಿ ಹೇಳಿದ್ದಾರೆ.
    ಅಪರಿಚಿತ ವ್ಯಕ್ತಿ – ಏನನ್ನು ಹೇಳುತ್ತಿದ್ದೀರಾ ನೀವು..?
    ವಿಶ್ವಜಿತ್ ರಾಣೆ – ಹೌದು.. ನಾನು ಹೇಳ್ತಿರೋದು ನಿಜ.
    ಅಪರಿಚಿತ ವ್ಯಕ್ತಿ – ಓ.. ಮೈ ಗಾಡ್..!
    ವಿಶ್ವಜಿತ್ ರಾಣೆ – ನಿಮಗೆ ಇದರ ಬಗ್ಗೆ ಸ್ಟೋರಿ ಮಾಡ್ಬೇಕು ಅಂತಾ ಇದ್ಯಾ..? ನಿನಗೆ ನನ್ನ ನಂಬಿಕೆ ಇಲ್ಲ ಅಂದ್ರೆ ಸಂಪುಟದಲ್ಲಿ ನಿನಗೆ ಆಪ್ತರಾಗಿದ್ದವರನ್ನು ಈ ಬಗ್ಗೆ ಕೇಳಿ ನೋಡು?

    ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಆಡಿದ್ದಾರೆನ್ನಲಾದ ಆಡಿಯೋ ಬಿಡುಗಡೆಗೆ ಲೋಕಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೋರಿದರು. ಸ್ಪೀಕರ್ ಸುಮಿತ್ರಾ ಮಹಜನ್ ನಿರಾಕರಿಸಿದ್ರು. ಪ್ರಧಾನಿ ಮೋದಿಗೆ ಸಂಸತ್ತಿಗೆ ಬಂದು ಎದುರಿಸೋ ತಾಕತ್ತಿಲ್ಲ. ಅವರು ಕೋಣೆಯಲ್ಲಿ ಅಡಗಿಕೊಂಡಿದ್ದಾರೆ. ರಕ್ಷಣಾ ಸಚಿವರು ಅಣ್ಣಾ ಡಿಎಂಕೆ ಸಂಸದರ ಹಿಂದೆ ಅಡಗಿಕೊಂಡಿದ್ದಾರೆ ಅಂತ ರಾಹುಲ್ ವಾಗ್ದಾಳಿ ನಡೆಸಿದರು.

    ರಫೇಲ್ ಡೀಲ್ ಬಗ್ಗೆ ಜೆಪಿಸಿ (Joint Parliamentary Committee) ತನಿಖೆ ಮಾಡಿಸಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ, ಕಾಂಗ್ರೆಸ್ ಅಧ್ಯಕ್ಷರು ಚರ್ಚೆಯ ದಾರಿ ತಪ್ಪಿಸಲು ಯತ್ನಿಸುತ್ತಿದ್ದಾರೆ. ಈ ಹಿಂದೆಯೂ, ಫ್ರಾನ್ಸ್ ಅಧ್ಯಕ್ಷರು ತಮಗೆ ಮಾಹಿತಿ ನೀಡಿದ್ದು, ರಫೇಲ್ ಡೀಲ್‍ನಲ್ಲಿ ಅವ್ಯವಹಾರ ನಡೆದಿರುವುದಾಗಿ ಖುದ್ದಾಗಿ ತಿಳಿಸಿದ್ದರು ಎಂದು ರಾಹುಲ್ ದೇಶದ ದಿಕ್ಕು ತಪ್ಪಿಸಿದ್ದರು ಎಂದು ಜೇಟ್ಲಿ ತಿರುಗೇಟು ನೀಡಿದರು. ಈ ನಡುವೆ ರಫೇಲ್ ಡೀಲ್ ಕುರಿತ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಯಶವಂತ ಸಿನ್ಹಾ, ಅರುಣ್ ಶೌರಿ, ಪ್ರಶಾಂತ್ ಭೂಷಣ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.

    ಸಂಸತ್ತಿನ ಉಭಯ ಸದನಗಳಲ್ಲಿಯೂ ಮೇಕೆದಾಟು ಡ್ಯಾಂ ವಿರೋಧಿಸಿ ಎಐಎಡಿಎಂಕೆ ಸಂಸದರು ಗದ್ದಲ ಎಬ್ಬಿಸಿದರು. ಲೋಕಸಭೆಯಲ್ಲಂತೂ ಪೇಪರ್‍ಗಳನ್ನು ಪೀಸ್ ಪೀಸ್ ಮಾಡಿ ಸ್ಪೀಕರ್ ಚೇರ್ ನತ್ತ ಎಸೆದ್ರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸ್ಪೀಕರ್, 24 ಸಂಸದರನ್ನು 5 ದಿನಗಳ ಕಾಲ ಕಲಾಪದಿಂದ ಅಮಾನತು ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗೋವಾ ಸಿಎಂ ಸ್ಥಾನವನ್ನು ಬಿಟ್ಟುಕೊಡಲಿದ್ದಾರಾ ಮನೋಹರ್ ಪರಿಕ್ಕರ್?

    ಗೋವಾ ಸಿಎಂ ಸ್ಥಾನವನ್ನು ಬಿಟ್ಟುಕೊಡಲಿದ್ದಾರಾ ಮನೋಹರ್ ಪರಿಕ್ಕರ್?

    ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಕಳೆದ 7 ತಿಂಗಳಿನಿಂದ ಪ್ಯಾಂಕ್ರಿಯಾಟಿಕ್ ಕಾಯಿಲೆ (ಮೆದೋಜೀರಕ ಗೃಂಥಿ ಸಮಸ್ಯೆ)ಯಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತನ್ನ ಮುಖ್ಯಮಂತ್ರಿ ಸ್ಥಾನವನ್ನು ತಾತ್ಕಾಲಿಕವಾಗಿ ಬೇರೆಯವರಿಗೆ ಬಿಟ್ಟುಕೊಡುವುದರ ಕುರಿತು ತಮ್ಮ ಇಚ್ಛೆ ವ್ಯಕ್ತಪಡಿಸಿದ್ದಾರೆ.

    ಹಲವು ವಾರಗಳ ಚಿಕಿತ್ಸೆ ಬಳಿಕ ಸೆಪ್ಟೆಂಬರ್ 6ರಂದು ಪರಿಕ್ಕರ್ ಅವರು ಅಮೆರಿಕಾದಿಂದ ವಾಪಸ್ಸಾಗಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಕ್ಯಾಂಡೋಲಿಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲದೇ ಪ್ರಧಾನಿ ಮೋದಿಯವರ ಸಲಹೆಯಂತೆ ಪರಿಕ್ಕರ್ ಅವರನ್ನು ಹೆಚ್ಚಿನ ಮೆಡಿಕಲ್ ಟೆಸ್ಟ್ ಗಾಗಿ ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಪರಿಕ್ಕರ್ ಅವರನ್ನು ವಿಮಾನದ ಮೂಲಕ ದೆಹಲಿಗೆ ಕಳುಹಿಸಲಾಗಿದೆ. ಸದ್ಯ ಮೋದಿ ಹಾಗೂ ಬಿಜೆಪಿ ರಾಷ್ಟಾಧ್ಯಕ್ಷ ಅಮಿತ್ ಶಾ ಅವರು ಪರಿಕ್ಕರ್ ಅವರೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಆರೋಗ್ಯ ವಿಚಾರಿಸುತ್ತಿದ್ದಾರೆ ಎಂಬುದಾಗಿ ವರದಿಯಾಗಿದೆ.

    ಮೂಲಗಳ ಪ್ರಕಾರ, ಅಮಿತ್ ಶಾ ಅವರು ಈಗಾಗಲೇ ಪರಿಕ್ಕರ್ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಪರಿಕ್ಕರ್ ಅವರ ಮುಖ್ಯಮಂತ್ರಿ ಹುದ್ದೆಯ ಜವಾಬ್ದಾರಿಯನ್ನು ತಾತ್ಕಾಲಿಕವಾಗಿ ನಿರ್ವಹಿಸುವ ಹೊಣೆಯನ್ನು ಯಾರಿಗೆ ನೀಡಬೇಕೆಂಬ ಬಗ್ಗೆ ಬಿಜೆಪಿ ಚಿಂತನೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ, ಸೋಮವಾರ ಪಕ್ಷದ ಉಸ್ತುವಾರಿ ವಿಜಯ್ ಪುರಾಣಿಕ್ ಹಾಗೂ ಸಂಯೋಜಕ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಇವರಿಬ್ಬರನ್ನು ಗೋವಾಗೆ ಕಳುಹಿಸಲು ತೀರ್ಮಾನಿಸಿದೆ. ಇದೇ ವೇಳೆ ಪಕ್ಷದ ಹಿರಿಯರು ಕೂಡ ಭಾಗಿಯಾಗಲಿದ್ದಾರೆ ಎಂಬುದಾಗಿ ವರದಿಯಾಗಿದೆ.

    ಸದ್ಯ ಮಹಾರಾಷ್ಟ್ರವಾದಿ ಗೋಮಾಂಟಕ್ ಪಕ್ಷದ(ಎಂಜಿಪಿ) ಸುದಿನ್ ಧವಲೀಕರ್ ಅವರಿಗೆ ತಾತ್ಕಾಲಿಕವಾಗಿ ಅಂದರೆ 18 ತಿಂಗಳುಗಳ ಕಾಲ ಸರ್ಕಾರದ ಜವಾಬ್ದಾರಿಯನ್ನು ನೀಡಲಾಗುವುದು ಅಂತ ಪಕ್ಷದ ಮೂಲಗಳಿಂದ ತಿಳಿದುಬಂದಿದೆ. ಆದ್ರೆ ಈ ಸಂಬಂಧ ಇದೂವರೆಗೂ ಯಾವುದೇ ಚರ್ಚೆ ನಡೆದಿಲ್ಲ. ಈ ಬಗ್ಗೆ ಸೋಮವಾರ ಬಿಜೆಪಿ ಉಸ್ತುವಾರಿಯವರು ಸಮ್ಮಿಶ್ರ ಸರ್ಕಾರದ ಶಾಸಕರನ್ನು ಭೇಟಿ ಮಾಡಿ ಚರ್ಚೆ ನಡೆಸಿದ ಬಳಿಕ ತೀರ್ಮಾನಕ್ಕೆ ಬರುವುದಾಗಿ ಪಕ್ಷದ ಅಧಿಕಾರಿಗಳು ತಿಳಿಸಿದ್ದಾರೆ.

    ಈ ಬಗ್ಗೆ ದಿವಾಕರ್ ಅವರನ್ನು ಮಾತನಾಡಿಸಿದಾಗ, ಪರಿಕ್ಕರ್ ಅವರನ್ನು ನಾನು ಭೇಟಿ ಆಗಿದ್ದೆ ಆದ್ರೆ ಅವರು ಈ ಬಗ್ಗೆ ಯಾವುದೇ ಮಾತುಕತೆ ನಡೆಸಿಲ್ಲ ಅಂತ ಹೇಳಿದ್ದಾರೆ.

    ಏನಿದು ಪ್ಯಾಂಕ್ರಿಯಾಸ್ ಕಾಯಿಲೆ?:
    ಪ್ಯಾಂಕ್ರಿಯಾಸ್ ಮಾನವ ದೇಹದ ಪ್ರಮುಖ ಅಂಗವಾಗಿದ್ದು, ಎರಡು ಪ್ರಮುಖ ಹಾರ್ಮೋನ್ ಗಳಾದ ಇನ್ಸುಲಿನ್, ಗ್ಲೂಕಾಗಾನ್ ಗಳ ಉತ್ಪಾದನೆ ಮೂಲಕ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಹೊಣೆಗಾರಿಕೆ ಹೊಂದಿದೆ. ಹೊಟ್ಟೆಯ ಭಾಗದಲ್ಲಿ ಕರುಳು ಮತ್ತು ಜಠರದ ಆಳವಾದ ಹಿಂಭಾಗದಲ್ಲಿರುವ ಪ್ಯಾಂಕ್ರಿಯಾಸ್ ಗಳನ್ನು ಕಾಡುವ ಹಲವಾರು ರೋಗಗಳ ಪೈಕಿ ಕ್ಯಾನ್ಸರ್ ಅತ್ಯಂತ ಮಾರಕವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗೋವಾದಲ್ಲಿ ಸಾರ್ವಜನಿಕವಾಗಿ ಮದ್ಯಸೇವನೆ ಮಾಡಿದ್ರೆ 2,500 ರೂ. ದಂಡ: ಪರಿಕ್ಕರ್

    ಗೋವಾದಲ್ಲಿ ಸಾರ್ವಜನಿಕವಾಗಿ ಮದ್ಯಸೇವನೆ ಮಾಡಿದ್ರೆ 2,500 ರೂ. ದಂಡ: ಪರಿಕ್ಕರ್

    ಪಣಜಿ: ಆಗಸ್ಟ್ 15 ರಿಂದ ಸಾರ್ವಜನಿಕವಾಗಿ ಮದ್ಯಸೇವನೆ ಮಾಡಿದವರಿಗೆ 2,500 ರೂ. ದಂಡ ವಿಧಿಸುವುದಾಗಿ ಗೋವಾದ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಘೋಷಿಸಿದ್ದಾರೆ.

    ಸಮಾರಂಭದಲ್ಲಿ ಮಾತನಾಡಿದ ಅವರು, ಆಗಸ್ಟ್ ನಲ್ಲಿ ಯಾರಾದರೂ ಸಾರ್ವಜನಿಕವಾಗಿ ಮದ್ಯಸೇವನೆ ಮಾಡುವುದು ಕಂಡು ಬಂದಲ್ಲಿ ಹೆಚ್ಚಿನ ದಂಡ ವಿಧಿಸಲಾಗುವುದು. ಹಾಗಾಗಿ ಮುಂಚಿತವಾಗಿಯೇ ಮಾಹಿತಿಯನ್ನು ತಿಳಿಸುತ್ತಿದ್ದೇನೆ. ಈ ಸಂಬಂಧ ಶೀಘ್ರವೇ ಸುತ್ತೋಲೆಯನ್ನು ಹೊರಡಿಸಲಾಗುವುದು ಎಂದರು.

    ಕಾಲೇಜು ವಿದ್ಯಾರ್ಥಿಗಳಿಗೆ ಎಚ್ಚರಿಕೆಯನ್ನು ನೀಡಿದ ಅವರು, ಸಾರ್ವಜನಿಕವಾಗಿ ನದಿ ಬಳಿ ಮದ್ಯಪಾನ ಮಾಡುತ್ತಿದ್ದ ಮೂವರು ವಿದ್ಯಾರ್ಥಿಗಳನ್ನು ನಾನು ರೆಡ್‍ಹ್ಯಾಂಡ್ ಆಗಿ ಹಿಡಿದಿದ್ದೇನೆ. ಮದ್ಯಪಾನ ಮಾಡಿದ ಬಳಿಕ ಅದನ್ನು ಎಲ್ಲೆಂದರಲ್ಲಿ ಎಸೆಯಲಾಗುತ್ತದೆ. ಇದರಿಂದ ಪರಿಸರ ಹಾಳಾಗುವುದಲ್ಲದೇ, ಕಲ್ಲಿನ ಮೇಲೆ ಎಸೆಯುವುದರಿಂದ ಅಪಾಯವು ಹೆಚ್ಚು ಎಂದು ಹೇಳಿದರು.

    ಈ ಹಿಂದೆ ಮನೋಹರ್ ಪರಿಕ್ಕರ್ ಅವರು, ಹುಡುಗಿಯರೂ ಮದ್ಯಪಾನ ಮತ್ತು ಬಿಯರ್ ಕುಡಿಯಲು ಶುರು ಮಾಡಿಕೊಂಡಿದ್ದಾರೆ. ಇದರಿಂದಾಗಿ ನನಗೀಗ ಭಯ ಹಾಗೂ ಆತಂಕ ಶುರುವಾಗಿದೆ ಎಂದು ಹೇಳಿದ್ದರು.

  • ಕೆಲವು ವಾರದಲ್ಲಿ ರಾಜ್ಯಕ್ಕೆ ಮರಳುತ್ತೇನೆ: ಗೋವಾ ಸಿಎಂ ಮನೋಹರ್ ಪರಿಕ್ಕರ್

    ಕೆಲವು ವಾರದಲ್ಲಿ ರಾಜ್ಯಕ್ಕೆ ಮರಳುತ್ತೇನೆ: ಗೋವಾ ಸಿಎಂ ಮನೋಹರ್ ಪರಿಕ್ಕರ್

    ನವದೆಹಲಿ: ಅಮೇರಿಕದಲ್ಲಿ ಚಿಕೆತ್ಸೆ ಪಡೆಯುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಕೆಲವು ವಾರದಲ್ಲಿ ರಾಜ್ಯಕ್ಕೆ ಮರಳುತ್ತೇನೆ ಎಂದು ವಿಡಿಯೊ ಮೂಲಕ ಕಾರ್ಯಕರ್ತರಿಗೆ ತಿಳಿಸಿದ್ದಾರೆ.

    ಕಾರ್ಯಕರ್ತರ ಸಭೆಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪರಿಕ್ಕರ್ ಕಳುಹಿಸಿದ್ದ ವಿಡಿಯೊವನ್ನು ಕಾರ್ಯಕರ್ತರಿಗೆ ತೋರಿಸಿದ್ದಾರೆ.

    ಕಳೆದ 2 ತಿಂಗಳಿಂದ ನಾನು ನಿಮ್ಮ ಜೊತೆಯಲ್ಲಿ ಇಲ್ಲ. ಸಂಪೂರ್ಣ ವೈದ್ಯಕೀಯ ಚಿಕಿತ್ಸೆಯಲ್ಲಿದ್ದೇನೆ. ಆರೋಗ್ಯ ಸಮಸ್ಯೆಯಿಂದ ಕಾರ್ಯಕರ್ತರ ಸಭೆಗೆ ಬರಲಿಕ್ಕೆ ಆಗಲಿಲ್ಲ. ಕೆಲವು ವಾರಗಳಲ್ಲಿ ಗೋವಾಗೆ ಮರಳುತ್ತೇನೆ ಎಂದು ರೆಕಾರ್ಡೆಡ್ ವಿಡಿಯೊದಲ್ಲಿ ಹೇಳಿದ್ದಾರೆ.

    ನರೇಂದ್ರ ಮೋದಿಯವರು ಇನ್ನೊಮ್ಮೆ ಪ್ರಧಾನಿಯಾಗುವುದು ದೇಶದ ಅವಶ್ಯಕತೆಯಾಗಿದೆ. 2019ರ ಲೋಕಸಭಾ ಚುನಾವಣೆಗೆ ಸಜ್ಜಾಗಿ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದ್ದಾರೆ.

    62 ವಯಸ್ಸಿನ ಪರಿಕ್ಕರ್ ಪ್ಯಾಂಕ್ರಿಯಾಟಿಕ್ ಕಾಯಿಲೆಗೆ ಅಮೆರಿಕದ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಮೊದಲಿಗೆ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮಾರ್ಚ್ ಮೊದಲ ವಾರದಲ್ಲಿ ಅಮೆರಿಕದ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಪರಿಕ್ಕರ್ ಅವರ ದೀರ್ಘ ಕಾಲದ ಅನುಪಸ್ಥಿತಿಯಿಂದಾಗಿ ಪೂರ್ಣ ಪ್ರಮಾಣದ ಮುಖ್ಯಮಂತ್ರಿಯನ್ನು ನೇಮಿಸುವಂತೆ ವಿರೋಧ ಪಕ್ಷ ಕಾಂಗ್ರೆಸ್ ಆಗ್ರಹ ಮಾಡಿತ್ತು. ಪರಿಕ್ಕರ್ ಅವರ ಅನುಪಸ್ಥಿತಿಯಲ್ಲಿ ಸಚಿವ ಸಂಪುಟದ ಸದಸ್ಯರನ್ನು ಒಳಗೊಂಡತೆ ಮೂರು ಜನರ ಸಲಹಾ ಸಮಿತಿಯನ್ನು ರಚಿಸಲಾಗಿದೆ. ಸರ್ಕಾರದ ದೈನಂದಿನ ಚಟುವಟಿಕೆಗಳನ್ನು ಸಮಿತಿ ನೋಡಿಕೊಳ್ಳುತ್ತಿದೆ.

     

     

  • ಹುಡುಗಿಯರೂ ಬಿಯರ್ ಕುಡಿಯಲು ಶುರು ಮಾಡಿದ್ದಾರೆ, ನನಗೀಗ ಆತಂಕವಾಗ್ತಿದೆ- ಮನೋಹರ್ ಪರಿಕ್ಕರ್

    ಹುಡುಗಿಯರೂ ಬಿಯರ್ ಕುಡಿಯಲು ಶುರು ಮಾಡಿದ್ದಾರೆ, ನನಗೀಗ ಆತಂಕವಾಗ್ತಿದೆ- ಮನೋಹರ್ ಪರಿಕ್ಕರ್

    ಪಣಜಿ: ಹುಡುಗಿಯರೂ ಮದ್ಯಪಾನ ಮಾಡಲು ಶುರು ಮಾಡಿರೋದ್ರಿಂದ ಆತಂಕ ಶುರುವಾಗಿದೆ ಎಂದು ಗೋವಾ ಸಿಎಂ ಮನೋಹರ್ ಪರಿಕ್ಕರ್ ಹೇಳಿದ್ದಾರೆ.

    ನನಗೀಗ ಭಯ ಶುರುವಾಗಿದೆ. ಯಾಕಂದ್ರೆ ಹುಡುಗಿಯರೂ ಕೂಡ ಬಿಯರ್ ಕುಡಿಯಲು ಶುರು ಮಾಡಿದ್ದಾರೆ. ಸಹಿಷ್ಣುತೆಯ ಎಲ್ಲೆ ಮೀರ್ತಿದೆ ಎಂದು ಪರಿಕ್ಕರ್ ಹೇಳಿದ್ದಾರೆ.

    ರಾಜ್ಯ ಶಾಸಕಾಂಗ ಇಲಾಖೆ ಆಯೋಜಿಸಿದ್ದ ರಾಜ್ಯ ಯುವ ಸಂಸತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಎಲ್ಲರ ಬಗ್ಗೆ ಮಾತನಾಡ್ತಿಲ್ಲ. ನಾನು ಇಲ್ಲಿ ಕುಳಿತಿರುವ ಜನರ ಬಗ್ಗೆ ಮಾತನಾಡ್ತಿಲ್ಲ ಅಂದ್ರು.

    ಇದಕ್ಕೂ ಮುನ್ನ ಗೋವಾದಲ್ಲಿ ಮಾದಕದ್ರವ್ಯ ಮಾರಾಟದ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಾದಕದ್ರವ್ಯ ಜಾಲದ ಬಗ್ಗೆ ಶಿಸ್ತುಕ್ರಮ ತೆಗೆದುಕೊಳ್ಳಲಾಗ್ತಿದೆ. ಡ್ರಗ್ಸ್ ಕಣ್ಣಿಗೆ ಕಾಣದಂತೆ ಮರೆಯಾಗುವವರೆಗೆ ಇದು ಮುಂದುವರೆಯಲಿದೆ ಎಂದರು. ಇದು ಸಂಪೂರ್ಣವಾಗಿ ನಿಲ್ಲುತ್ತದೆ ಎಂಬ ನಂಬಿಕೆಯಿಲ್ಲ. ಆದ್ರೂ ಕಾಲೇಜುಗಳಲ್ಲಿ ತೀವ್ರವಾದ ಮಾದಕದ್ರವ್ಯ ಪ್ರಸರಣ ಇಲ್ಲ ಎಂದು ನಂಬಿದ್ದೇನೆ ಅಂತ ಹೇಳಿದ್ರು.

    ಮಾದಕದ್ರವ್ಯ ಮಾರಾಟದ ಬಗ್ಗೆ ಪೊಲೀಸರಿಗೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ ನಂತರ 170 ಮಂದಿಯನ್ನ ಡ್ರಗ್ಸ್ ಮಾರಾಟದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಹೇಳಿದ್ರು.

    ಕಾನೂನಿನ ಪ್ರಕಾರ ಸಣ್ಣ ಪ್ರಮಾಣದ ಡ್ರಗ್ಸ್ ಇದ್ದರೆ ವ್ಯಕ್ತಿಗೆ 8 ರಿಂದ 15 ದಿನಗಳಲ್ಲಿ ಅಥವಾ ಒಂದು ತಿಂಗಳಲ್ಲಿ ಜಾಮೀನು ಸಿಗುತ್ತದೆ. ಕೋರ್ಟ್ ಗಳೂ ಕೂಡ ಸಹಾನುಭೂತಿ ತೋರುತ್ತಿವೆ. ಆದ್ರೂ ತಪ್ಪಿತಸ್ಥರು ಸಿಕ್ಕಿಬೀಳುತ್ತಿದ್ದಾರೆ ಎಂದು ಹೇಳಿದ್ರು.

    ನಿರುದ್ಯೋಗದ ಬಗ್ಗೆ ಮಾತನಾಡಿದ ಪರಿಕ್ಕರ್, ಗೋವಾದ ಯುವ ಜನಾಂಗ ಕಷ್ಟಪಟ್ಟು ಕೆಲಸ ಮಾಡುವುದಕ್ಕೆ ಹಿಂಜರಿಯುತ್ತಿದ್ದಾರೆ. ಕಷ್ಟಪಟ್ಟು ಕೆಲಸ ಮಾಡಲು ಇಚ್ಛಿಸದ ಕಾರಣ ಸರ್ಕಾರಿ ಇಲಾಖೆಯೊಂದರಲ್ಲಿ ಲೋವರ್ ಡಿವಿಷನ್ ಕ್ಲರ್ಕ್ ಕೆಲಸಕ್ಕೆ ಉದ್ದ ಕ್ಯೂ ಇದ್ದಿದ್ದು ಕಂಡಿತು. ಸರ್ಕಾರಿ ಕೆಲಸ ಅಂದ್ರೆ ಅಷ್ಟೇನು ಕಷ್ಟದ ಕೆಲಸವಲ್ಲ ಅಂತ ಜನ ಅಂದುಕೊಂಡಿದ್ದಾರೆ ಎಂದು ಹೇಳಿದ್ರು.

  • ಮಹದಾಯಿಗಾಗಿ ಒಂದಾಗಿದೆ ಉತ್ತರ ಕರ್ನಾಟಕ ಜನತೆ- ಹುಬ್ಬಳ್ಳಿ, ಧಾರವಾಡ ಸಂಪೂರ್ಣ ಬಂದ್

    ಮಹದಾಯಿಗಾಗಿ ಒಂದಾಗಿದೆ ಉತ್ತರ ಕರ್ನಾಟಕ ಜನತೆ- ಹುಬ್ಬಳ್ಳಿ, ಧಾರವಾಡ ಸಂಪೂರ್ಣ ಬಂದ್

    ಧಾರವಾಡ: ಮಹದಾಯಿಗಾಗಿ ಉತ್ತರ ಕರ್ನಾಟಕದ ಜನತೆ ಒಂದಾಗಿದ್ದು, ಹುಬ್ಬಳ್ಳಿ, ಧಾರವಾಡ, ಗದಗ ಸಂಪೂರ್ಣ ಬಂದ್ ಆಗಿದೆ. ಹುಬ್ಬಳ್ಳಿ, ಧಾರವಾಡ, ಗದಗ ಜಿಲ್ಲೆಗಳಲ್ಲಿ ಬಸ್ ಸಂಚಾರ ಸಂಪೂರ್ಣ ರದ್ದಾಗಿದೆ. ಕೇಂದ್ರ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿದ್ದು, ಜನಸಾಮನ್ಯರು ಬಸ್‍ಗಳಿಲ್ಲದೆ ಪರದಾಡುತ್ತಿದ್ದಾರೆ.

    ಹುಬ್ಬಳ್ಳಿಯಲ್ಲಿ ಪ್ರವೀಣ್ ಶೆಟ್ಟಿ ಬಣದ ಕರವೇ ಕಾರ್ಯಕರ್ತರು ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸುತ್ತಿದ್ದಾರೆ. ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ನಗರದಲ್ಲಿ ಪ್ರತಿಭಟನಾಕಾರರು ಭಜನೆ ಮಾಡುತ್ತಾ ನಗರದಲ್ಲೆಡೆ ಸಂಚರಿಸುತ್ತಿದ್ದಾರೆ. ಬಂದ್ ಹಿನ್ನೆಲೆಯಲ್ಲಿ ನಗರದ ಚನ್ನಮ್ಮ ವೃತ್ತದಲ್ಲಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಬಳಿ ಕಲ್ಲು ತೂರಾಟ ಸಹ ನಡೆದಿದೆ ಎಂದು ತಿಳಿದು ಬಂದಿದೆ.

    ಧಾರವಾಡದ ಅಳ್ನಾವರ್ ಹೋಟೆಲ್ ಬಳಿ ಧಾರವಾಡ-ಗೋವಾ ರಸ್ತೆ ಬಂದ್ ಮಾಡಲಾಗಿದೆ. ಕರ್ನಾಟಕ ನವ ನಿರ್ಮಾಣ ಸೇನೆಯ ಜಿಲ್ಲಾ ಅಧ್ಯಕ್ಷ ಗಿರೀಶ್ ಪೂಜಾರ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ರಾಜ್ಯದಿಂದ ಗೋವಾದತ್ತ ತೆರಳುತ್ತಿರುವ ವಾಹನಗಳನ್ನು ತಡೆದು ಪ್ರತಿಭಟನಾಕಾರರು ಪ್ರತಿಭಟನೆ ನಡೆಸುತ್ತಿದ್ದಾರೆ.

  • ಮಹದಾಯಿ ನದಿ ಮೇಲೆ 3 ರಾಜ್ಯದ ಹಕ್ಕಿದೆ, ಬೇರೆ ನದಿಪಾತ್ರಕ್ಕೆ ನೀರು ಹರಿಸಲು ಸಾಧ್ಯವಿಲ್ಲ: ಮನೋಹರ್ ಪರಿಕ್ಕರ್

    ಮಹದಾಯಿ ನದಿ ಮೇಲೆ 3 ರಾಜ್ಯದ ಹಕ್ಕಿದೆ, ಬೇರೆ ನದಿಪಾತ್ರಕ್ಕೆ ನೀರು ಹರಿಸಲು ಸಾಧ್ಯವಿಲ್ಲ: ಮನೋಹರ್ ಪರಿಕ್ಕರ್

    ಬೆಂಗಳೂರು: ಮಹದಾಯಿ ಯೋಜನೆಗೆ ಅವಕಾಶ ಇಲ್ಲ. ಮಹಾರಾಷ್ಟ್ರ, ಕರ್ನಾಟಕ, ಗೋವಾದಲ್ಲಿ ಮಹದಾಯಿ ಹರಿಯುತ್ತಿದ್ದು, ನದಿ ಮೇಲೆ ಮೂರೂ ರಾಜ್ಯಗಳ ಹಕ್ಕಿದೆ ಅಂತಾ ಗೋವಾ ಸಿಎಂ ಮನೋಹರ್ ಪರಿಕ್ಕರ್ ಹೇಳಿದ್ದಾರೆ.

    ಕರ್ನಾಟಕ ಮಹದಾಯಿ ನದಿಯನ್ನು ಬೇರೆಡೆಗೆ ತಿರುಗಿಸಲು, ಬೇರೆ ನದಿಪಾತ್ರಕ್ಕೆ ಹರಿಸಲು ಅವಕಾಶ ನೀಡುವುದಿಲ್ಲ. ನದಿಪಾತ್ರದ ಪ್ರದೇಶದಲ್ಲೇ ನೀರನ್ನು ಬಳಸಿಕೊಳ್ಳಬೇಕು. ನಾನು ಬಿಎಸ್ ಯಡಿಯೂರಪ್ಪಗೆ ಬರೆದ ಪತ್ರದಲ್ಲಿ ನ್ಯಾಯಮಂಡಳಿಯ ವ್ಯಾಪ್ತಿಯಲ್ಲೇ ಮಾತುಕತೆ ನಡೆಸುವ ಬಗ್ಗೆ ಸ್ಪಷ್ಟಪಡಿಸಿದ್ದೇನೆ ಎಂದಿದ್ದಾರೆ.

    ಕರ್ನಾಟಕದ ಮುಖ್ಯಮಂತ್ರಿಗಳು ಮಹದಾಯಿ ನದಿ ಪಾತ್ರ ತಿರುವಿನ ಬೇಡಿಕೆ ಇಟ್ಟಿದ್ದಾರೆ. ಅಂತರರಾಜ್ಯ ನದಿ ನೀರು ವಿವಾದ ಕಾಯ್ದೆ ಪ್ರಕಾರ, ನೀರಿನ ಕೊರತೆ ಇರುವ ನದಿ ಪಾತ್ರದಿಂದ ನೀರನ್ನು ಬೇರೆಡೆಗೆ ತಿರುಗಿಸುವುದಕ್ಕೆ ಅವಕಾಶ ಇಲ್ಲ. ಮಹದಾಯಿ ನದಿಯಲ್ಲಿ ನೀರಿನ ಕೊರತೆ ಇದೆ ಎಂಬುದನ್ನು ನಾವು ದಾಖಲೆ ಸಮೇತ ಸಾಬೀತು ಮಾಡಿದ್ದೇವೆ ಅಂತಾ ಹೇಳಿದ್ದಾರೆ.

  • ಗೋವಾದಿಂದ ಕರ್ನಾಟಕದ ಗಡಿ ಜನರಿಗೆ ಮತ್ತೊಂದು ಬಿಗ್ ಶಾಕಿಂಗ್ ನ್ಯೂಸ್!

    ಗೋವಾದಿಂದ ಕರ್ನಾಟಕದ ಗಡಿ ಜನರಿಗೆ ಮತ್ತೊಂದು ಬಿಗ್ ಶಾಕಿಂಗ್ ನ್ಯೂಸ್!

    ಕಾರವಾರ: ಕಾರವಾರ ಸೇರಿದಂತೆ ಕರ್ನಾಟಕದ ಬೇರೆ ಜಿಲ್ಲೆಯ ರೋಗಿಗಳಿಗೆ ಗೋವಾ ಸರ್ಕಾರ ಉಚಿತ ಸೇವೆಯನ್ನು ಸ್ಥಗಿತಗೊಳಿಸುವ ಮೂಲಕ ಶಾಕ್ ನೀಡಿದೆ.

    ಗೋವಾ ರಾಜ್ಯದ ನಾಲ್ಕು ಆಸ್ಪತ್ರೆಗಳಲ್ಲಿ ಜನವರಿ ಮೊದಲ ದಿನದಿಂದಲೇ ಶುಲ್ಕ ಪಡೆಯಲಾಗುತ್ತಿದೆ. ಕಳೆದ ಎರಡು ದಿನಗಳಿಂದ ಪ್ರಮುಖವಾಗಿ ಕರ್ನಾಟಕದಿಂದ ಗೋವಾದ ಬಾಂಬೋಲಿಂ ವೈದ್ಯಕೀಯ ಆಸ್ಪತ್ರೆಯಲ್ಲಿ ದಾಖಲಾದ 80 ಜನ ಹೊರ ರೋಗಿಗಳನ್ನು ದಾಖಲಿಸಿಕೊಂಡಿದ್ದು, ಪ್ರತಿ ರೋಗಿಗಳಲ್ಲಿಯೂ ಶುಲ್ಕ ವಸೂಲಿ ಮಾಡಿದೆ. ಹೊರ ರಾಜ್ಯದಿಂದ ಬಂದ ರೋಗಿಗಳು ಇಷ್ಟು ಶುಲ್ಕ ಕಟ್ಟಲೇಬೇಕಾಗಿದೆ. ಹೊರ ರೋಗಿಗಳಾಗಿ ನೊಂದಾಯಿಸಿಕೊಳ್ಳಲು 50 ರೂ ಗಳಿಂದ 100 ರೂ ಗಳಿಗೆ ಹೆಚ್ಚಳ ಮಾಡಲಾಗಿದೆ.

    ತುರ್ತು ಪರಿಸ್ಥಿತಿಯಲ್ಲಿ ಬಂದವರೂ ಕಡ್ಡಾಯವಾಗಿ ಹಣ ಕಟ್ಟಬೇಕು. ಇನ್ನು ಉಚಿತ ಸೇವೆ ಪಡೆಯುತ್ತಿದ್ದ ಕರ್ನಾಟಕದ ಕಾರವಾರದ ಜನರಿಗೂ ಬಿಸಿ ತಟ್ಟಿದೆ. ಸ್ಕ್ಯಾನಿಂಗ್, ಇಸಿಜಿ ಸೇರಿದಂತೆ ಪ್ರಮುಖ ಸೇವೆಗಳಿಗೂ ಶುಲ್ಕ ವಿಧಿಸಲಾಗಿದೆ. ಈ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲ, ಕುಮಟಾ, ಜೋಯಿಡಾ, ಹಳಿಯಾಳ ಸೇರಿದಂತೆ ಕರ್ನಾಟಕದ ಗಡಿಭಾಗದ ಜನರು ಈ ಭಾಗದಲ್ಲಿ ವೈದ್ಯಕೀಯ ಸೇವೆ ಉತ್ತಮವಾಗಿರದ ಕಾರಣ ಗೋವಾ ರಾಜ್ಯದ ಬಾಂಬೋಲಿಂ ವೈದ್ಯಕೀಯ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯುತಿದ್ದರು. ಆದ್ರೆ ಗೋವಾ ಸರ್ಕಾರ ಹೊಸ ವರ್ಷದಲ್ಲಿಯೇ ಕರ್ನಾಟಕದ ಗಡಿಭಾಗದ ಜನರಿಗೆ ಮಹದಾಯಿ ನಂತರ ಮತ್ತೊಂದು ಶಾಕ್ ನೀಡಿದೆ.

    ಗೋವಾದಲ್ಲೇ ಯಾಕೆ ಚಿಕಿತ್ಸೆ?: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಭಾಗದ ಸರ್ಕಾರಿ ಆಸ್ಪತ್ರೆಯಲ್ಲಿ ಅಪಘಾತ ಹಾಗೂ ಕೆಲವು ರೋಗಗಳಿಗೆ ಚಿಕಿತ್ಸೆ ನೀಡಲು ಉಪಕರಣಗಳಾಗಲಿ ತಜ್ಞ ವೈದ್ಯರಾಗಲಿ ಇಲ್ಲ. ಇನ್ನು ಖಾಸಗಿ ಆಸ್ಪತ್ರೆಗಳು ಸರ್ಕಾರಿ ಆಸ್ಪತ್ರೆಗಳಿಗಿಂತ ಕೆಳಮಟ್ಟದ ವೈದ್ಯಕೀಯ ಸೇವೆ ನೀಡುತ್ತಿವೆ. ಕಾರವಾರದಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭವಾಗಿದ್ದರೂ ಇರಬೇಕಾದ ಸವಲತ್ತುಗಳು ರೋಗಿಗಳಿಗೆ ಸಿಗುತ್ತಿಲ್ಲ. ಈ ಕಾರಣದಿಂದ ಈ ಭಾಗದ ಜನರು ನೆರೆಯ ಗೋವಾದ ಪಣಜಿಯಲ್ಲಿರುವ ಬಾಂಬೋಲಿಂ ಆಸ್ಪತ್ರೆಗೆ ಹೋಗುತ್ತಾರೆ.

    ಕರ್ನಾಟಕದಿಂದ ಗೋವಾ ರಾಜ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಇದರಿಂದಾಗಿ ಗೋವಾ ಜನರಿಗೆ ಆಸ್ಪತ್ರೆಯ ಸವಲತ್ತುಗಳು ಸಿಗುವುದರಲ್ಲಿ ತೊಂದರೆಯಾಗುತ್ತಿತ್ತು. ಅಲ್ಲದೇ ಸರ್ಕಾರದ ಬೊಕ್ಕಸಕ್ಕೂ ನಷ್ಟವಾಗುತ್ತಿದೆ. ಇದನ್ನು ತಡೆಯಲು ಬಿಜೆಪಿ ನೇತೃತ್ವದ ಮನೋಹರ್ ಪರಿಕ್ಕರ್ ಸರ್ಕಾರ ಈ ತೀರ್ಮಾನ ಕೈಗೊಂಡಿದೆ. ಕಳೆದ ಮೂರು ದಿನಗಳಿಂದ ಕರ್ನಾಟಕದಿಂದ ಹೊರ ರೋಗಿಗಳು ಹಾಗೂ ವಿವಿಧ ಶಸ್ತ್ರ ಚಿಕಿತ್ಸೆಗಾಗಿ ಬಂದವರಲ್ಲಿ ಶುಲ್ಕ ವಸೂಲಿ ಮಾಡಲಾಗಿದ್ದು, ಈಗಾಗಲೇ ಎರಡೂವರೆ ಲಕ್ಷ ರುಪಾಯಿಗಳು ಜಮಾ ಆಗಿದೆ ಎಂದು ಬಾಂಬೋಲಿಂ ಆಸ್ಪತ್ರೆಯ ವೈದ್ಯಕೀಯ ಅಧಿಕಾರಿ ಡಾ. ಶಿವಾನಂದ ಬಾಂದೇಕರ್ ಅವರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಈ ಬಗ್ಗೆ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಪ್ರತಿಕ್ರಿಯಿಸಿದ್ದು, ಹೊರ ರಾಜ್ಯದಿಂದ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಇದರ ನಿಯಂತ್ರಣಕ್ಕಾಗಿ ಈ ನಿರ್ಣಯ ಕೈಗೊಳ್ಳಲಾಗಿದೆ. ಕಾರವಾರ ಭಾಗದಿಂದ ಬರುವ ಅಪಘಾತ ಮತ್ತು ತುರ್ತು ಸೇವೆಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಸೇವೆ ಮುಂದುವರೆಸುವುದಾಗಿ ಸ್ಪಷ್ಟಪಡಿಸಿದ್ದಾರೆ.

    ನಿರ್ಣಯ ಮರು ಪರಿಶೀಲಿಸಿ: ಬಾಂಬೋಲಿಂ ವೈದ್ಯಕೀಯ ಆಸ್ಪತ್ರೆಯಲ್ಲಿ ಹೊರ ರಾಜ್ಯದಿಂದ ಬರುವ ರೋಗಿಗಳಿಗೆ ಎಲ್ಲಾ ವೈದ್ಯಕೀಯ ಸೇವೆಗಳಿಗೆ ಪ್ರತ್ಯೇಕ ಶುಲ್ಕ ಪಡೆಯುವ ನಿರ್ಣಯ ಹಿಂಪಡೆಯಬೇಕೆಂದು ಮನವಿ ಮಾಡಲಾಗಿದೆ. ಕಾರವಾರ, ಜೋಯಿಡಾ, ಮಹಾರಾಷ್ಟ್ರ, ಸಿಂಧುದುರ್ಗದ ಜನತೆಯ ವತಿಯಿಂದ ವಕೀಲ ಆರ್.ವಿ.ನಾಯ್ಕರವರು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್, ಆರೋಗ್ಯ ಸಚಿವ ವಿಶ್ವಜಿತ್ ರಾಣೆ, ವಿರೋಧ ಪಕ್ಷದ ನಾಯಕ ಚಂದ್ರಕಾಂತ್ ಕವಳೇಕರ್ ಈ ಮನವಿಯನ್ನು ಸಲ್ಲಿಸಿದ್ದಾರೆ.