Tag: ಮನೋಹರ್ ಪರಿಕ್ಕರ್

  • ಮನೋಹರ್ ಪರಿಕ್ಕರ್ ಅಣ್ಣ ನಗುತ್ತಿರಬಹುದು- ಗೋವಾ ಸಿಎಂ ಪತ್ನಿ

    ಮನೋಹರ್ ಪರಿಕ್ಕರ್ ಅಣ್ಣ ನಗುತ್ತಿರಬಹುದು- ಗೋವಾ ಸಿಎಂ ಪತ್ನಿ

    ಪಣಜಿ: ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಮುನ್ನಡೆಯನ್ನು ಸಾಧಿಸುತ್ತಿದೆ. ಇದನ್ನು ನೋಡಿ ಗೋವಾದ ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ (Manohar Parrikar) ಅವರು ನಗುತ್ತಿರಬಹುದು ಎಂದು ಸಿಎಂ ಪ್ರಮೋದ್ ಸಾವಂತ್ (Pramod Sawant)  ಅವರ ಪತ್ನಿ ಸುಲಕ್ಷಣಾ ಸಾವಂತ್ (Sulakshana Sawant) ಹೇಳಿದ್ದಾರೆ.

    ಮಾಧ್ಯಮದವರೊಂದಿಗೆ ಮಾತನಾಡಿದ ಗೋವಾ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆಯೂ ಆಗಿರುವ ಸುಲಕ್ಷಣಾ, 2012ರಲ್ಲಿ ಬಿಜೆಪಿ ಪೂರ್ಣ ಬಹುಮತಗಳಿಸಿತ್ತು. ಅದೇ ಚಿತ್ರಣವನ್ನು 2022ರಲ್ಲಿಯೂ ನೋಡುತ್ತಿದ್ದೇವೆ. ಈ ವಿಜಯಕ್ಕಾಗಿ ಕಾರ್ಯಕರ್ತರು ಹೇಗೆ ಒಗ್ಗಟ್ಟಾಗಿ ಶ್ರಮಿಸಿದರು ಎಂಬುದನ್ನು ಕಂಡು ಅಣ್ಣ ಮನೋಹರ್ ಪರಿಕ್ಕರ್ ಸಂತಸಗೊಂಡಿರಬಹುದು ಎಂದು ನನಗನಿಸುತ್ತದೆ ಎಂದು ಹೇಳಿದ್ದಾರೆ.

    ಈ ಜಯ ಪಕ್ಷದ ಕಾರ್ಯಕರ್ತರು ತಮ್ಮಿಂದ ಸಾಧ್ಯವಾದ ಮಟ್ಟಿಗೆ ಮಾಡಿದ ಸಾಮೂಹಿಕ ಪ್ರಯತ್ನದ ಫಲ. ಪ್ರಮೋದ್ ಸಾವಂತ್ ನಾಯಕತ್ವದಲ್ಲಿ ನಾವು ಮ್ಯಾಜಿಕ್ ನಂಬರ್ 21ನ್ನು ತಲುಪಿದ್ದೇವೆ. ಅಭಿವೃದ್ಧಿ ಮತ್ತು ಡಬಲ್ ಎಂಜಿನ್ ಸರ್ಕಾರಕ್ಕೆ ಸಿಕ್ಕ ಮತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಚುನಾವಣಾ ಉಸ್ತುವಾರಿ ದೇವೇಂದ್ರ ಫಡ್ನವಿಸ್‌  ಅವರಿಗೆ ಕೃತಜ್ಞಳಾಗಿದ್ದೇನೆ. ಚುನಾವಣೋತ್ತರ ಸಮೀಕ್ಷೆಗಳು ಏನೇ ಇರಲಿ, ಜನರು ನಮಗೆ ಮತ ನೀಡಿದ್ದಾರೆ ಎಂದು ಸಂತೋಷದ ಮಾತುಗಳನ್ನಾಡಿದ್ದಾರೆ. ಇದನ್ನೂ ಓದಿ: ಜನರ ತೀರ್ಪನ್ನು ನಮ್ರತೆಯಿಂದ ಸ್ವೀಕರಿಸುತ್ತೇನೆ, ನಾವು ಕಲಿಯುತ್ತೇವೆ: ರಾಹುಲ್ ಗಾಂಧಿ

    ಮನೋಹರ್ ಪರಿಕ್ಕರ್ ಅವರು ಮುಖ್ಯಮಂತ್ರಿ ಸ್ಥಾನದಲ್ಲಿದ್ದಾಗಲೇ ಅನಾರೋಗ್ಯದ ಕಾರಣದಿಂದ 2019ರಲ್ಲಿ ನಿಧನರಾಗಿದ್ದರು. ಅದಾದ ಬಳಿಕ ಪ್ರಮೋದ್ ಸಾವಂತ್ ಮುಖ್ಯಮಂತ್ರಿ ಸ್ಥಾನಕ್ಕೇರಿದರು. 2012ರಲ್ಲಿ ಮೊದಲ ಬಾರಿಗೆ ಬಿಜೆಪಿ ಗೋವಾದಲ್ಲಿ ಬಹುಮತ ಪಡೆದುಕೊಂಡಿತ್ತು.

  • ರಾಹುಲ್‍ ಗಾಂಧಿ ಮೋದಿ ಫೋಬಿಯಾದಿಂದ ಬಳಲುತ್ತಿದ್ದಾರೆ: ಅಮಿತ್ ಶಾ

    ರಾಹುಲ್‍ ಗಾಂಧಿ ಮೋದಿ ಫೋಬಿಯಾದಿಂದ ಬಳಲುತ್ತಿದ್ದಾರೆ: ಅಮಿತ್ ಶಾ

    ಪಣಜಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಮೋದಿ ಫೋಬಿಯಾದಿಂದ ಬಳಲುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟೀಕಿಸಿದರು.

    ಗೋವಾದಲ್ಲಿ ಬಿಜೆಪಿ ಅಭ್ಯಥಿ ಪರ ಪ್ರಚಾರ ನಡೆಸಿದ ಅವರು, ಕಾಂಗ್ರೆಸ್‍ನ ಗಾಂಧಿ ಪರಿವಾರವು ಗೋವಾವನ್ನು ತಮ್ಮ ಪ್ರವಾಸದ ತಾಣವಾಗಿ ಪರಿಗಣಿಸುತ್ತದೆ. ಆದರೆ ಬಿಜೆಪಿಯ ಗೋವಾ ಮುಖ್ಯಮಂತ್ರಿಯಾಗಿದ್ದ ಮನೋಹರ್ ಪರಿಕ್ಕರ್ ಅವರು ಚಿನ್ನದ ಗೋವಾ ಕನಸನ್ನು ನನಸು ಮಾಡಿದ್ದಾರೆ ಎಂದು ತಿಳಿಸಿದರು.

    ಬಿಜೆಪಿಯಿಂದ ಮಾತ್ರ ಗೋವಾದ ಅಭಿವೃದ್ಧಿ ಸಾಧ್ಯ. ನಿಮಗೆ ಬಿಜೆಪಿಯ ಚಿನ್ನದ ಗೋವಾ ಬೇಕಾ ಅಥವಾ ಕಾಂಗ್ರೆಸ್‍ನ ಗಾಂಧಿ ಪರಿವಾರದ ಗೋವಾ ಬೇಕೇ ಎಂಬುದನ್ನು ನೀವೇ ತೀರ್ಮಾನ ಮಾಡಿಕೊಳ್ಳಿ ಎಂದು ಹೇಳಿದರು. ಇದನ್ನೂ ಓದಿ: ಸೂಪರ್ ಫಾಸ್ಟ್ ಊಟ ಮಾಡಿ 5 ಸಾವಿರ ಹಣ ಗೆದ್ದ!

    ಗೋವಾ ಚುನಾವಣೆಯಲ್ಲಿ ಈ ಬಾರಿ ಟಿಎಂಸಿ, ಆಪ್, ಎನ್‍ಸಿಪಿ ಪಕ್ಷಗಳು ತಮ್ಮ ನೆಲೆಯನ್ನು ವಿಸ್ತರಿಕೊಳ್ಳಲು ಅಥವಾ ತಮ್ಮ ಪಕ್ಷಕ್ಕೆ ರಾಷ್ಟ್ರೀಯ ಪಕ್ಷದ ಮಾನ್ಯತೆಗಾಗಿ ಸ್ಪರ್ಧಿಸುತ್ತಿವೆ. ಈ ಪಕ್ಷಗಳಿಂದ ಗೋವಾದಲ್ಲಿ ಸರ್ಕಾರ ರಚನೆ ಅಸಾಧ್ಯ. ಬಿಜೆಪಿಯಿಂದ ಮಾತ್ರವೇ ಸರ್ಕಾರ ರಚನೆ ಮಾಡಬಹುದು. ರಾಜಕೀಯ ಸ್ಥಿರತೆ ಇರದಿದ್ದರೆ, ಅಭಿವೃದ್ಧಿ ನಿರೀಕ್ಷೆ ಸಾಧ್ಯವೇ ಇಲ್ಲ ಎಂದರು. ಇದನ್ನೂ ಓದಿ: ಶಿಲ್ಲಾಂಗ್‍ನ ಜನನಿಬಿಡ ಪ್ರದೇಶದಲ್ಲಿ ಬಾಂಬ್ ಸ್ಫೋಟ

  • ಬಿಜೆಪಿ ತೊರೆದ ಗೋವಾ ಮಾಜಿ ಸಿಎಂ ಪುತ್ರ – ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ

    ಬಿಜೆಪಿ ತೊರೆದ ಗೋವಾ ಮಾಜಿ ಸಿಎಂ ಪುತ್ರ – ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ

    ಪಣಜಿ: ತನ್ನ ತಂದೆಯ ಕ್ಷೇತ್ರ ಪಣಜಿಯಲ್ಲಿ ಸ್ಪರ್ಧಿಸಲು ಟಿಕೆಟ್‌ ನಿರಾಕರಿಸಿದ್ದಕ್ಕೆ ಗೋವಾ ಮಾಜಿ ಸಿಎಂ ಮನೋಹರ್‌ ಪರಿಕ್ಕರ್‌ ಪುತ್ರ ಉತ್ಪಲ್‌ ಪರಿಕ್ಕರ್‌, ಬಿಜೆಪಿ ತೊರೆದಿದ್ದಾರೆ. ಅಲ್ಲದೇ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

    ಕಳೆದ ಹಾಗೂ ಈ ಚುನಾವಣೆ ಸಮಯದಲ್ಲಿ ಪಕ್ಷಕ್ಕೆ ಮನವರಿಕೆ ಮಾಡಲು ಪ್ರಯತ್ನಿಸಿದೆ. ಎಷ್ಟೇ ಪ್ರಯತ್ನಿಸಿದರೂ ಪಣಜಿ ಕ್ಷೇತ್ರದ ಉಮೇದುವಾರಿಕೆಯನ್ನು ಪಡೆಯಲು ನನಗೆ ಸಾಧ್ಯವಾಗಲಿಲ್ಲ. ಕಳೆದ ಎರಡು ವರ್ಷಗಳಲ್ಲಿ ಪಕ್ಷಕ್ಕೆ ಅವಕಾಶವಾದಿಯಾಗಿ ಬಂದವರಿಗೆ ಟಿಕೆಟ್‌ ನೀಡಲಾಗಿದೆ. ಅದಕ್ಕಾಗಿಯೇ ನಾನು ಪಕ್ಷದಿಂದ ಹೊರಬರುವ ನಿರ್ಧಾರ ಮಾಡಿದ್ದೇನೆ. ಪಣಜಿ ಜನರು ನನ್ನ ರಾಜಕೀಯ ಭವಿಷ್ಯವನ್ನು ನಿರ್ಧರಿಸುತ್ತಾರೆ ಎಂದು ಪರಿಕ್ಕರ್‌ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಪರಿಕ್ಕರ್ ಪುತ್ರನನ್ನು ಎಎಪಿಗೆ ಆಹ್ವಾನಿಸಿದ ಕೇಜ್ರಿವಾಲ್

    ಮೂರು ಬಾರಿ ಗೋವಾ ಮುಖ್ಯಮಂತ್ರಿಯಾಗಿದ್ದ ಹಾಗೂ ಕಡಲತೀರದ ರಾಜ್ಯದಲ್ಲಿ ಬಿಜೆಪಿಯ ಪ್ರಮುಖ ನಾಯಕರಾಗಿದ್ದ ಮನೋಹರ್‌ ಪರಿಕ್ಕರ್‌ ಅವರು 2019ರಲ್ಲಿ ನಿಧನರಾದರು. ತಮ್ಮ ವರ್ಚಸ್ಸು ಹಾಗೂ ಜನಪ್ರಿಯತೆಯಿಂದಾಗಿ 25 ವರ್ಷಗಳ ಕಾಲ ಪಣಜಿ ಕ್ಷೇತ್ರದಲ್ಲಿ ರಾಜಕೀಯ ಪ್ರಾಬಲ್ಯ ಹೊಂದಿದ್ದರು.

    ತಂದೆಯಂತೆಯೇ ಮಗ ಉತ್ಪಲ್‌ ಪರಿಕ್ಕರ್‌ ಕೂಡ ಪಣಜಿ ಕ್ಷೇತ್ರದಿಂದಲೇ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ ಅವರಿಗೆ ಪಣಜಿ ಕ್ಷೇತ್ರದಲ್ಲಿ ಟಿಕೆಟ್‌ ನೀಡಲು ಬಿಜೆಪಿ ನಿರಾಕರಿಸಿದೆ. ಇದನ್ನೂ ಓದಿ: ಸಿಎಂ ಅಭ್ಯರ್ಥಿಯಾಗಿ ನನ್ನ ಮುಖವನ್ನು ನೋಡಬಹುದು ಅಲ್ಲವೇ: ಪ್ರಿಯಾಂಕಾ ಗಾಂಧಿ

  • ಪಣಜಿ ಉಪ ಚುನಾವಣೆ: ಮನೋಹರ್ ಪರಿಕ್ಕರ್ ಪುತ್ರನಿಗಿಲ್ಲ ಬಿಜೆಪಿ ಟಿಕೆಟ್

    ಪಣಜಿ ಉಪ ಚುನಾವಣೆ: ಮನೋಹರ್ ಪರಿಕ್ಕರ್ ಪುತ್ರನಿಗಿಲ್ಲ ಬಿಜೆಪಿ ಟಿಕೆಟ್

    ಪಣಜಿ: ಗೋವಾ ರಾಜ್ಯದ ಪಣಜಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯ ಹೆಸರನ್ನು ಭಾನುವಾರ ಸಂಜೆ ಬಿಜೆಪಿ ಘೋಷಣೆ ಮಾಡಿದೆ. ಆದರೆ ಮನೋಹರ್ ಪರಿಕ್ಕರ್ ಅವರ ಪುತ್ರ ಉತ್ಪಾಲ್ ಪರಿಕ್ಕರ್ ಅವರಿಗೆ ಟಿಕೆಟ್ ತಪ್ಪಿದೆ.

    ಸಿದ್ಧಾರ್ಥ್ ಕುಂಕಲೇನಕರ್ ಅವರಿಗೆ ಪಣಜಿ ಉಪ ಚುನಾವಣೆಯ ಟಿಕೆಟ್ ನೀಡಲಾಗಿದೆ. ಬಿಜೆಪಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಕರ್ನಾಟಕದ ಚಿಂಚೋಳಿ ಕ್ಷೇತ್ರದ ಅಭ್ಯರ್ಥಿ ಅವಿನಾಶ್ ಜಾಧವ್ ಹಾಗೂ ಕುಂದಗೋಳದ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡರ್ ಅವರ ಹೆಸರನ್ನು ಘೋಷಣೆ ಮಾಡಲಾಗಿದೆ.

    ಗೋವಾ ಮುಖ್ಯಮಂತ್ರಿಯಾಗಿದ್ದ ಮನೋಹರ್ ಪರಿಕ್ಕರ್ ನಿಧನದಿಂದ ತೆರವಾದ ಪಣಜಿ ವಿಧಾನಸಭಾ ಕ್ಷೇತ್ರದ ಚುನಾವಣೆ ಮೇ 19ರಂದು ನಡೆಯಲಿದೆ. ಹೀಗಾಗಿ ಬಿಜೆಪಿಯು ಉತ್ಪಾಲ್ ಪರಿಕ್ಕರ್ ಅವರಿಗೆ ಟಿಕೆಟ್ ನೀಡುತ್ತದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಅಂತಿಮವಾಗಿ ಸಿದ್ಧಾರ್ಥ್ ಕುಂಕಲೇನಕರ್ ಅವರ ಹೆಸರನ್ನು ಬಿಜೆಪಿ ಹೈಕಮಾಂಡ್ ಘೋಷಣೆ ಮಾಡಿದೆ.

    ಸಿದ್ಧಾರ್ಥ್ ಕುಂಕಲೇನಕರ್ ಅವರು ಈ ಹಿಂದೆ ಎರಡು ಬಾರಿ ಪಣಜಿ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದರು. ಆದರೆ ಕೇಂದ್ರ ರಕ್ಷಣಾ ಸಚಿವರಾಗಿದ್ದ ಮನೋಹರ್ ಪರಿಕ್ಕರ್ ಅವರು ಗೋವಾ ರಾಜಕಾರಣಕ್ಕೆ ಮರಳಲು ನಿರ್ಧರಿಸಿದ್ದರು. ಹೀಗಾಗಿ ಸಿದ್ಧಾರ್ಥ್ ಕುಂಕಲೇನಕರ್ ಅವರು 2017 ಮೇ 10ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ನಡೆದ ಪಣಜಿ ಉಪ ಚುನಾವಣೆಯಲ್ಲಿ ಜಯಗಳಿಸಿದ್ದ ಮನೋಹರ್ ಪರಿಕ್ಕರ್ ಅವರು ಮತ್ತೆ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದರು.

    ಸಿದ್ಧಾರ್ಥ್ ಕುಂಕಲೇನಕರ್ ಅವರು ಎರಡು ಬಾರಿ ಪಣಜಿ ಕ್ಷೇತ್ರದಿಂದ ಜಯಗಳಿದ್ದರಿಂದ ಹಾಗೂ ಮನೋಹರ್ ಪರಿಕ್ಕರ್ ಅವರ ಸ್ಪರ್ಧೆಗೆ ಸಹಕರಿಸಿದ್ದರು ಎಂಬ ಕಾರಣಕ್ಕೆ ಮತ್ತೆ ಅವರಿಗೆ ಟಿಕೆಟ್ ನೀಡಲಾಗಿದೆ ಎಂಬ ಮಾತು ಕೇಳಿ ಬರುತ್ತಿವೆ.

    ತೇಜಸ್ವಿನಿ ಅನಂತ್‍ಕುಮಾರ್ ಅವರಿಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಟಿಕಟ್ ತಪ್ಪಿದ್ದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ರಾಷ್ಟ್ರೀಯ ಸಹ ಸಂಘಟಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಡಿಎನ್‍ಎ ಆಧಾರದ ಮೇಲೆ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಆದರೆ ಕಲಬುರಗಿ ಕ್ಷೇತ್ರದಲ್ಲಿ ಯಾವ ಡಿಎನ್‍ಎ ನೋಡಿ ಅವಿನಾಶ್ ಜಾಧವ್ ಅವರಿಗೆ ಟಿಕೆಟ್ ನೀಡಿದ್ದಾರೆ ಅಂತ ವಿಪಕ್ಷ ನಾಯಕರು ವ್ಯಂಗ್ಯವಾಡುತ್ತಿದ್ದಾರೆ.

  • ವಿಶ್ವಾಸ ಮತಯಾಚನೆಯಲ್ಲಿ ಗೋವಾ ಸಿಎಂ ಪಾಸ್

    ವಿಶ್ವಾಸ ಮತಯಾಚನೆಯಲ್ಲಿ ಗೋವಾ ಸಿಎಂ ಪಾಸ್

    ಪಣಜಿ: ಇಂದು ನಡೆದ ವಿಶ್ವಾಸ ಮತಯಾಚನೆಯಲ್ಲಿ  ಗೋವಾ ಸಿಎಂ ಪ್ರಮೋದ್ ಸಾವಂತ್ ಬಹುಮತವನ್ನು ಸಾಬೀತು ಪಡಿಸಿದ್ದಾರೆ.

    20 ಶಾಸಕರು ಸರ್ಕಾರದ ಪರವಾಗಿ ವೋಟ್ ಚಲಾಯಿಸಿದ ಪರಿಣಾಮ ಬಿಜೆಪಿ ಗೋವಾ ರಾಜ್ಯವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. 11 ಬಿಜೆಪಿ, 3 ಎಂಜೆಪಿ, 3 ಜಿಎಂಫ್‍ಪಿ, ಮೂರು ಮಂದಿ ಪಕ್ಷೇತರ ಸದಸ್ಯರು ವಿಶ್ವಾಸ ಮತಯಾಚನೆಯ ಪರವಾಗಿ ವೋಟ್ ಹಾಕಿದ್ದರೆ, 14 ಕಾಂಗ್ರೆಸ್, ಓರ್ವ ಎನ್‍ಸಿಪಿ ಶಾಸಕರು ವಿರೋಧಿಸಿ ವೋಟ್ ಹಾಕಿದರು.

    ಒಟ್ಟು 40 ಸಂಖ್ಯಾ ಬಲದ ಗೋವಾ ವಿಧಾನಸಭೆಯಲ್ಲಿ ಪ್ರಸ್ತುತ 36 ಸದಸ್ಯರಿದ್ದಾರೆ. ಪ್ರಸ್ತುತ ಗೋವಾದಲ್ಲಿ ಬಿಜೆಪಿ 12 ಸದಸ್ಯ ಬಲವನ್ನು ಹೊಂದಿದ್ದು, ಬಿಜೆಪಿ ಮೈತ್ರಿ ಪಕ್ಷಗಳಾದ ಎಂಜಿಪಿ ಮತ್ತು ಜಿಎಫ್‍ಪಿ ಮೂರು ಶಾಸಕರನ್ನು ಹೊಂದಿದೆ. ಆ ಮೂಲಕ ಬಿಜೆಪಿ ಮೈತ್ರಿಕೂಟ ಒಟ್ಟು 15 ಸ್ಥಾನಗಳನ್ನು ಹೊಂದುವ ಮೂಲಕ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂಬುದು ಬಿಜೆಪಿ ಹೇಳಿತ್ತು. ಅಷ್ಟೇ ಅಲ್ಲದೇ ಮೂವರು ಪಕ್ಷೇತರ ಶಾಸಕರೂ ಕೂಡ ಬಿಜೆಪಿಗೆ ಬೆಂಬಲ ನೀಡುತ್ತೇವೆ ಎಂದು ಹೇಳಿದ್ದರು.

    ಮಾಜಿ ಸಿಎಂ ದಿವಂಗತ ಮನೋಹರ್ ಪರಿಕ್ಕರ್ ಅವರ ಸಾವಿನ ಬೆನ್ನಲ್ಲೇ ಗೋವಾದಲ್ಲಿ ಭಾರೀ ರಾಜಕೀಯ ಬೆಳವಣಿಗೆ ಆರಂಭವಾಗಿತ್ತು. ಪರಿಕ್ಕರ್ ನಿಧನರಾದ ರಾತ್ರಿಯೇ ಕಾಂಗ್ರೆಸ್ ಸರ್ಕಾರಕ್ಕೆ ಬಹುಮತವಿಲ್ಲ. ಸರ್ಕಾರ ರಚಿಸಲು ಅನುಮತಿ ನೀಡಬೇಕೆಂದು ಮನವಿ ಮಾಡಿತ್ತು. ಕಾಂಗ್ರೆಸ್ ಸರ್ಕಾರ ರಚಿಸಲು ಪ್ರಯತ್ನ ನಡೆಸುತ್ತಿದ್ದಂತೆ ಎಚ್ಚೆತ್ತ ಬಿಜೆಪಿ ನಾಯಕರು ಮಂಗಳವಾರ ರಾತ್ರಿ ಪ್ರಮಾಣವಚನ ಸ್ವೀಕರಿಸಿದ್ದರು.

  • ಗೋವಾ ಸಿಎಂ ಆಗಿ ಪ್ರಮೋದ್ ಸಾವಂತ್ ಪದಗ್ರಹಣ

    ಗೋವಾ ಸಿಎಂ ಆಗಿ ಪ್ರಮೋದ್ ಸಾವಂತ್ ಪದಗ್ರಹಣ

    – ಪರಿಕ್ಕರ್ ಅಂತ್ಯಕ್ರಿಯೆ ಬೆನ್ನಲ್ಲೆ ಸರ್ಕಾರ ರಚನೆ
    – ರಾತ್ರೋರಾತ್ರಿ ಮುಗಿದೇ ಹೋಯ್ತು ಕಾರ್ಯಕ್ರಮ

    ಪಣಜಿ: ಗೋವಾ ನೂತನ ಸಿಎಂ ಆಗಿ ಪ್ರಮೋದ್ ಸಾವಂತ್ ರಾತ್ರೋರಾತ್ರಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಉಪಮುಖ್ಯಮಂತ್ರಿಗಳಾಗಿ ಮಹಾರಾಷ್ಟ್ರವಾದಿ ಗೋಮಂತಕ್ ಪಾರ್ಟಿ (ಎಂಜಿಪಿ)ಯ ಸುದೀನ್ ದಾವಲೀಕರ್ ಮತ್ತು ಗೋವಾ ಫಾವರ್ಡ್ ಪಾರ್ಟಿ (ಜಿಎಫ್‍ಪಿ)ಯ ವಿಜಯ್ ಸರ್ದೇಸಾಯಿ ಕೂಡಾ ಪ್ರಮಾಣ ವಚನ ಸ್ವೀಕರಿಸಿದರು.

    11 ಗಂಟೆಗೆ ನಡೆಯಬೇಕಿದ್ದ ಕಾರ್ಯಕ್ರಮ ವಿವಿಧ ಕಾರಣಗಳಿಂದಾಗಿ ತಡವಾಯಿತು. ಮಧ್ಯರಾತ್ರಿ 2 ಗಂಟೆ ವೇಳೆಗೆ ರಾಜಭವನದಲ್ಲಿ ಪ್ರಮೋದ್ ಸಾವಂತ್, 11 ಸಚಿವರೊಂದಿಗೆ ಪ್ರಮಾಣವಚನ ಸ್ವೀಕರಿಸಿದರು. ಇದಕ್ಕೂ ಮುನ್ನ ಗವರ್ನರ್ ಭೇಟಿಯಾದ ಕೇಂದ್ರ ಸಚಿವ ನಿತಿನ್ ಗಡ್ಕರಿ ಬಿಜೆಪಿ ಮೈತ್ರಿಪಕ್ಷದ ಶಾಸಕರ ಬೆಂಬಲ ಪತ್ರವನ್ನು ನೀಡಿದರು. ಪ್ರಮೋದ್ ಸಾವಂತ್ ಗೋವಾ ಸ್ಪೀಕರ್ ಆಗಿ ಕಾರ್ಯ ನಿರ್ವಸುತ್ತಿದ್ದರು. ದೊಡ್ಡ ಪಕ್ಷವಾದ ನಮಗೆ ಸರ್ಕಾರ ರಚಿಸಲು ಅವಕಾಶ ನೀಡಬೇಕಿತ್ತು ಎಂದು ಕಾಂಗ್ರೆಸ್ ಟೀಕಿಸಿದೆ.

    ಗೋವಾದಲ್ಲಿ ಪಕ್ಷಗಳ ಬಲಾಬಲ ಹೇಗಿದೆ?
    40 ಶಾಸಕರನ್ನು ಹೊಂದಿರುವ ಗೋವಾ ವಿಧಾನಸಭೆ ಸಂಖ್ಯೆ 36ಕ್ಕೆ ಇಳಿದಿದ್ದು, 19 ಶಾಸಕರನ್ನು ಹೊಂದಿರುವ ಪಕ್ಷ ಅಥವಾ ಮೈತ್ರಿ ಸರ್ಕಾರ ರಚಿಸಬಹುದು. ಬಿಜೆಪಿ-12, ಮಹಾರಾಷ್ಟ್ರ ಗೋಮಂತಕ ಪಕ್ಷ-3, ಗೋವಾ ಪಾರ್ವರ್ಡ್ ಪಕ್ಷ-3, ನಿರ್ದಲಿಯ-3, ಕಾಂಗ್ರೆಸ್-14 ಮತ್ತು ಎನ್‍ಎಸ್‍ಪಿ-1 ಒಳಗೊಂಡಂತೆ 36 ಶಾಸಕರನ್ನು ಗೋವಾ ವಿಧಾನಸಭೆ ಹೊಂದಿದೆ. ಎಂಜಿಪಿ, ಜಿಎಫ್ ಪಿ ಯಿಂದ ತಲಾ ಮೂವರು ಹಾಗೂ ಮೂವರು ಪಕ್ಷೇತರರ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ರಚಿಸಿದೆ.

  • ದೇಶ ಕಂಡ ಅತ್ಯುತ್ತಮ ರಕ್ಷಣಾ ಸಚಿವ, ಗೋವಾ ಸಿಎಂ ಪಂಚಭೂತಗಳಲ್ಲಿ ಲೀನ

    ದೇಶ ಕಂಡ ಅತ್ಯುತ್ತಮ ರಕ್ಷಣಾ ಸಚಿವ, ಗೋವಾ ಸಿಎಂ ಪಂಚಭೂತಗಳಲ್ಲಿ ಲೀನ

    – ಸಹೋದ್ಯೋಗಿಯನ್ನ ಕಳೆದುಕೊಂಡು ಕಣ್ಣೀರಿಟ್ಟ  ಸ್ಮೃತಿ ಇರಾನಿ

    ಪಣಜಿ: ತೀವ್ರ ಅನಾರೋಗ್ಯ ಕಾರಣ ಇಹಲೋಕ ತ್ಯಜಿಸಿದ ಸರಳ ಮತ್ತು ಸಜ್ಜನ ರಾಜಕಾರಣಿ, ದೇಶಕಂಡ ಅತ್ಯುತ್ತಮ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ (63) ಪಂಚಭೂತಗಳಲ್ಲಿ ಲೀನರಾಗಿದ್ದಾರೆ.

    ಪಣಜಿಯ ಮಿರಮಾರ್ ಬೀಚ್‍ನಲ್ಲಿ ಪರಿಕ್ಕರ್ ಮಕ್ಕಳಾದ ಉತ್ಪಲ್ ಮತ್ತು ಅಭಿಜಿತ್ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಸಕಲ ಸರ್ಕಾರಿ ಗೌರವಗಳೊಂದಿಗೆ ಮನೋರ್ ಪರಿಕ್ಕರ್ ಅಂತ್ಯಕ್ರಿಯೆಗೆ ನಡೆಯಿತು. ಇದಕ್ಕೂ ಮುನ್ನ ಪರಿಕ್ಕರ್ ಅವರ ಮೃತದೇಹವನ್ನು ಕಲಾ ಅಕಾಡೆಮಿಯಿಂದ ಎಸ್‍ಎಜಿ ಮೈದಾನದವರೆಗೆ ಅಂತಿಮ ಯಾತ್ರೆಯಲ್ಲಿ ತರಲಾಯಿತು. ಈ ಅಂತಿಮ ಯಾತ್ರೆಯಲ್ಲಿ ಸಾವಿರಾರು ಅಭಿಮಾನಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.

    ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಹಲವರು ನಮನ ಸಲ್ಲಿಸಿದರು. ಪರಿಕ್ಕರ್ ಅವರ ಅಂತಿಮ ದರ್ಶನ ಪಡೆದ ಬಳಿಕ ಅವರ ಮಕ್ಕಳ ಬಳಿಗೆ ತೆರಳಿದ ಮೋದಿ ಕ್ಷಣ ಕಾಲ ಮೌನವಾಗಿ ನಿಂತಿದ್ದರು. ಈ ವೇಳೆ ಅಂತಿಮ ದರ್ಶನ ಪಡೆಯಲು ಆಗಮಿಸಿದ ಬಿಜೆಪಿ ನಾಯಕಿ ಸ್ಮೃತಿ ಇರಾನಿ ಅವರು, ಪರಿಕ್ಕರ್ ಅವರ ಅಂತಿಮ ದರ್ಶನ ಪಡೆದು ಕಣ್ಣೀರಿಡುತ್ತಾ ತೆರಳಿದ್ದು ಕಂಡು ಬಂತು.

    ಪರಿಕ್ಕರ್ ಅವರ ನಿಧನದಿಂದಾಗಿ ಇಂದು ರಜೆ ಘೋಷಣೆ ಮಾಡಲಾಗಿತ್ತು. ಅಲ್ಲದೇ ರಾಜ್ಯದಲ್ಲಿ 7 ದಿನಗಳ ಕಾಲ ಶೋಕಾಚರಣೆ ಘೋಷಿಸಲಾಗಿದೆ. ಅಂತಿಮವಾಗಿ ಪರಿಕ್ಕರ್ ಅವರು ಜನವರಿಯಲ್ಲಿ ನಡೆದ ಮಾಂಡೋವಿ ನದಿ ನಿರ್ಮಿಸಿಲಾಗಿದ್ದ ಅಟಲ್ ಸೇತುವೆಯನ್ನು ಉದ್ಘಾಟನ ಕಾರ್ಯಕ್ರಮದಲ್ಲಿ ಭಾಗಹಿಸಿ ಮಾತನಾಡಿದ್ದರು. ಈ ವೇಳೆ ನನ್ನ ಅಂತಿಮ ಉಸಿರು ಇರುವವರೆಗೂ ಗೋವಾ ಸಿಎಂ ಆಗಿ ಸೇವೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದರು. ಇದರಂತೆಯೇ ಅವರು ತಮ್ಮ ಕೊನೆ ಉಸಿರಿನವರೆಗೂ ಸಿಎಂ ಆಗಿಯೇ ಇಹಲೋಕ ತ್ಯಜಿಸಿದ್ದಾರೆ.

  • ಗೋವಾದಲ್ಲಿ ಹೊಸ ಸಿಎಂಗಾಗಿ ಬಿಜೆಪಿ ಹುಡುಕಾಟ

    ಗೋವಾದಲ್ಲಿ ಹೊಸ ಸಿಎಂಗಾಗಿ ಬಿಜೆಪಿ ಹುಡುಕಾಟ

    -ಸರ್ಕಾರ ರಚನೆಗೆ ಮುಂದಾದ ಕಾಂಗ್ರೆಸ್

    ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ನಿಧನ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಬಿಜೆಪಿ ನಡೆಸಿದ ಹೊಸ ಸಿಎಂ ಆಯ್ಕೆಯ ಸಭೆಯಲ್ಲಿ ಸಹಮತ ವ್ಯಕ್ತವಾಗಿಲ್ಲ. ಇತ್ತ ಸರ್ಕಾರ ರಚಿಸಲು ತಮಗೆ ಅವಕಾಶ ನೀಡಬೇಕೆಂದು ಕಾಂಗ್ರೆಸ್ ನವರು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.

    ಭಾನುವಾರ ರಾತ್ರಿ ಸುಮಾರು 6 ಗಂಟೆ ಬಿಜೆಪಿ ಹೈಕಮಾಂಡ್ ಹೊಸ ಅಭ್ಯರ್ಥಿ ಆಯ್ಕೆಗಾಗಿ ಚರ್ಚೆ ನಡೆಸಿತ್ತು. ಸಭೆಯ ಅಂತ್ಯದಲ್ಲಿ ವಿಧಾನಸಭೆಯ ಅಧ್ಯಕ್ಷ ಪ್ರಮೋದ್ ಸಾವಂತ್ ಮತ್ತು ವಿಶ್ವಜಿತ್ ರಾಣೆ ಅವರ ಹೆಸರು ಕೇಳಿಬಂದಿದೆ. ಕೆಲ ನಾಯಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಬಿಜೆಪಿ ಸಿಎಂ ಯಾರಾಗಬೇಕೆಂಬುದನ್ನು ಅಂತಿಮಗೊಳಿಸಿಲ್ಲ. 40 ಶಾಸಕರನ್ನು ಹೊಂದಿರುವ ಗೋವಾ ವಿಧಾನಸಭೆ ಸಂಖ್ಯೆ 36ಕ್ಕೆ ಇಳಿದಿದ್ದು ಕಾಂಗ್ರೆಸ್ ಸರ್ಕಾರ ರಚನೆಗೆ ಅವಕಾಶ ಕೋರಿದೆ.

    ಗೋವಾದಲ್ಲಿ ಪಕ್ಷಗಳ ಬಲಾಬಲ ಹೇಗಿದೆ?
    ಬಿಜೆಪಿ-12, ಮಹಾರಾಷ್ಟ್ರ ಗೋಮಂತಕ ಪಕ್ಷ-3, ಗೋವಾ ಪಾರ್ವರ್ಡ್ ಪಕ್ಷ-3, ನಿರ್ದಲಿಯ-3, ಕಾಂಗ್ರೆಸ್-14 ಮತ್ತು ಎನ್‍ಎಸ್‍ಪಿ-1 ಒಳಗೊಂಡಂತೆ 36 ಶಾಸಕರನ್ನು ಗೋವಾ ವಿಧಾನಸಭೆ ಹೊಂದಿದೆ. ಸದ್ಯ 19 ಶಾಸಕರನ್ನು ಹೊಂದಿರುವ ಪಕ್ಷ ಅಥವಾ ಮೈತ್ರಿ ಸರ್ಕಾರ ರಚಿಸಬಹುದು.

    ಈ ಮೊದಲು ಬಿಜೆಪಿ ತನ್ನ 12 ಶಾಸಕರೊಂದಿಗೆ ಮಹಾರಾಷ್ಟ್ರ ಗೋಮಂತಕ ಪಕ್ಷ (3), ಗೋವಾ ಪಾರ್ವರ್ಡ್ ಪಕ್ಷ (3) ಮತ್ತು ನಿರ್ದಲಿಯ (3) ಬೆಂಬಲದೊಂದಿಗೆ ಗೋವಾದಲ್ಲಿ ಸರ್ಕಾರ ರಚನೆ ಮಾಡಿತ್ತು. ಸದ್ಯ ಮನೋಹರ್ ಪರಕ್ಕರ್ ನಿಧನದ ಹಿನ್ನೆಲೆಯಲ್ಲಿ ಸಿಎಂ ಆಯ್ಕೆ ವಿಚಾರದಲ್ಲಿ ಮೈತ್ರಿ ಪಕ್ಷಗಳಲ್ಲಿ ಒಮ್ಮತ ಮೂಡುತ್ತಿಲ್ಲ ಎಂದು ರಾಷ್ಟ್ರೀಯ ಪತ್ರಿಕೆಗಳು ವರದಿ ಮಾಡಿವೆ. ಈ ಮಧ್ಯೆ ಕಾಂಗ್ರೆಸ್ ಇತರೆ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಲು ಹೊಸ ತಂತ್ರಗಳನ್ನು ಬಳಸಿಕೊಳ್ಳಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.

  • ಇಂದು ಗೋವಾ ಸಿಎಂ ಪರಿಕ್ಕರ್ ಅಂತ್ಯಕ್ರಿಯೆ – ಪ್ರಧಾನಿ ಮೋದಿ ಭಾಗಿ, ಬಿಜೆಪಿ ಟಿಕೆಟ್ ಹಂಚಿಕೆ ಸಭೆ ರದ್ದು

    ಇಂದು ಗೋವಾ ಸಿಎಂ ಪರಿಕ್ಕರ್ ಅಂತ್ಯಕ್ರಿಯೆ – ಪ್ರಧಾನಿ ಮೋದಿ ಭಾಗಿ, ಬಿಜೆಪಿ ಟಿಕೆಟ್ ಹಂಚಿಕೆ ಸಭೆ ರದ್ದು

    ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಭಾನುವಾರ ಪಣಜಿಯಲ್ಲಿರುವ ಮಗನ ನಿವಾಸದಲ್ಲಿ ವಿಧಿವಶರಾಗಿದ್ದು, ಅವರ ಅಂತ್ಯಕ್ರಿಯೆ ಇಂದು ನಡೆಯಲಿದೆ.

    ಸಂಜೆ 5 ಗಂಟೆಗೆ ಬೀಚ್‍ಬಳಿಯ ಮಿರಾಮರ್‍ನಲ್ಲಿ ಅಂತ್ಯಸಂಸ್ಕಾರ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆವರೆಗೆ ಕಲಾ ಅಕಾಡೆಮಿಯಲ್ಲಿ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ.

    ಇತ್ತ ಪರಿಕ್ಕರ್ ನಿಧನ ಬೆನ್ನಲ್ಲೇ ರಾಜಕೀಯ ಬಿಕ್ಕಟ್ಟು ಸೃಷ್ಟಿ ಆಗಿದ್ದು, ಹೊಸ ಸಿಎಂ ಯಾರಾಗಬೇಕೆಂಬ ಬಗ್ಗೆ ತಡರಾತ್ರಿವರೆಗೂ ನಡೆದ ಸಭೆ ವಿಫಲವಾಗಿದೆ.

    ತೀವ್ರ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ 63 ವರ್ಷದ ಮನೋಹರ್ ಪರಿಕ್ಕರ್ ಕಳೆದ ಒಂದು ವರ್ಷದಿಂದ ಪ್ಯಾಂಕ್ರಿಯಾಟಿಕ್ ಕಾಯಿಲೆ (ಮೆದೋಜೀರಕ ಗೃಂಥಿ ಸಮಸ್ಯೆ)ಯಿಂದ ಬಳಲುತ್ತಿದ್ದರು. ಅಲ್ಲದೇ ಕೆಲ ತಿಂಗಳ ಹಿಂದೆಯಷ್ಟೇ ಅಮೆರಿಕದಲ್ಲಿ 3 ತಿಂಗಳ ಕಾಲ ಚಿಕಿತ್ಸೆ ಪಡೆದಿದ್ದ ಅವರು ಸೆ.6 ರಂದು ಚೇತರಿಸಿಕೊಂಡು ಮತ್ತೆ ತಾಯ್ನಾಡಿಗೆ ಮರಳಿದ್ದರು. ಗೋವಾ, ಮುಂಬೈ, ನವದೆಹಲಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಸಂಪೂರ್ಣವಾಗಿ ಗುಣಮುಖರಾಗದ ಕಾರಣ ಅವರ ಮೂಗಿಗೆ ಪೈಪ್ ಅಳವಡಿಸಲಾಗಿತ್ತು. ಹಾಗಿದ್ದರೂ ಕೂಡ ಬಜೆಟ್ ಅಧಿವೇಶದಲ್ಲಿ ಭಾಗವಹಿಸಿ ಬಜೆಟ್ ಮಂಡನೆ ಮಾಡಿದ್ದರು.

    ಗೋವಾದ ತಮ್ಮ ಖಾಸಗಿ ನಿವಾಸದಲ್ಲೇ ಹೆಚ್ಚಿನ ಸಮಯ ವಿಶ್ರಾಂತಿ ಪಡೆದು ಚೇತರಿಸಿಕೊಳ್ಳುತ್ತಿದ್ದ ಅವರು ಅಲ್ಲಿಂದಲೇ ಸರ್ಕಾರದ ಆಡಳಿತವನ್ನು ನಿರ್ವಹಿಸುತ್ತಿದ್ದರು. ಆದರೆ ಫೆಬ್ರವರಿ ಅಂತ್ಯದಲ್ಲಿ ಅವರ ಆರೋಗ್ಯದಲ್ಲಿ ಮತ್ತೆ ಏರುಪೇರು ಕಾಣಿಸಿಕೊಂಡ ಪರಿಣಾಮ ಆಸ್ಪತ್ರೆಗೆ ದಾಖಲಾಗಿದ್ದರು. ಅಂದಿನಿಂದಲೂ ಅವರ ಆರೋಗ್ಯದ ಮೇಲೆ ನಿಗಾವಹಿಸಿದ್ದ ವೈದ್ಯರ ತಂಡ ಸೂಕ್ತ ಚಿಕಿತ್ಸೆ ನೀಡುತ್ತಿದ್ದರು.

  • ಮನಸಿದ್ದರೆ ಯಾವ ಕಾಯಿಲೆ ಬೇಕಾದ್ರೂ ಗೆಲ್ಲಬಹುದು: ಪರಿಕ್ಕರ್

    ಮನಸಿದ್ದರೆ ಯಾವ ಕಾಯಿಲೆ ಬೇಕಾದ್ರೂ ಗೆಲ್ಲಬಹುದು: ಪರಿಕ್ಕರ್

    ಪಣಜಿ: ಮನಸ್ಸಿದ್ದರೆ ಯಾವ ಕಾಯಿಲೆ ಬೇಕಾದರೂ ಗೆಲ್ಲಬಹುದು ಎಂದು ಗೋವಾ ಸಿಎಂ ಮನೋಹರ್ ಪರಿಕ್ಕರ್ ಹೇಳಿದ್ದಾರೆ.

    ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಮನೋಹರ್ ಪರಿಕ್ಕರ್ ಅವರು ಮನಸ್ಸು ಒಂದಿದ್ದರೆ ಯಾವ ಕಾಯಿಲೆಯನ್ನು ಬೇಕಾದರೂ ಗೆಲ್ಲಬಹುದು ಎಂದು ಟ್ವೀಟ್ ಮಾಡಿದ್ದಾರೆ. ಕೆಲ ತಿಂಗಳಿನಿಂದ ಅನಾರೋಗ್ಯದಲ್ಲಿರುವ ಪರಿಕ್ಕರ್ ಜನವರಿ 31 ರಂದು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

    ಗೋವಾದ ಉಪ ಸ್ಪೀಕರ್ ಪ್ರತಿಕ್ರಿಯಿಸಿ, ಪರಿಕ್ಕರ್ ಅವರ ಆರೋಗ್ಯ ಉತ್ತಮವಾಗಿಲ್ಲ. ದೇವರ ಆಶೀರ್ವಾದದಿಂದ ಅವರು ಬದುಕಿದ್ದಾರೆ. ಅವರಿಗೆ ಏನಾದರೂ ಆದರೆ ಗೋವಾದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಲಿದೆ ಎಂದು ತಿಳಿಸಿದ್ದಾರೆ.

    ಮೆದೋಜೀರಕ ಗ್ರಂಥಿ ಸಮಸ್ಯೆಯಿಂದ ಬಳಲುತ್ತಿರುವ ಪರಿಕ್ಕರ್ ಕೆಲ ವರ್ಷಗಳಿಂದ ಪಣಜಿ, ಮುಂಬೈ, ದೆಹಲಿ, ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆದಿದ್ದಾರೆ.

    ಹಣಕಾಸು ಖಾತೆಯನ್ನು ನಿಭಾಯಿಸುತ್ತಿರುವ ಮನೋಹರ್ ಪರಿಕ್ಕರ್ ಅವರು ಕಳೆದ ವಾರ ಗೋವಾ ವಿಧಾನಸಭೆಗೆ ಮೂಗಿಗೆ ಪೈಪ್, ತಲೆಗೆ ಟೋಪಿ ಹಾಕಿಕೊಂಡು ಆಗಮಿಸಿದ್ದರು. ಬಳಿಕ ಮೆಲು ಧ್ವನಿಯಲ್ಲಿಯೇ ಬಜೆಟ್ ಮಂಡಿಸಿದರು. ಹೀಗಾಗಿ ವಿಧಾನಸಭೆಯ ಸದಸ್ಯರು ಶಾಂತವಾಗಿ ಬಜೆಟ್ ಭಾಷಣವನ್ನು ಆಲಿಸಿದ್ದರು.

    ಪರಿಕ್ಕರ್ ಅವರು ತಮ್ಮ ಭಾಷಣದ ಮಧ್ಯದಲ್ಲಿ ಹಲವು ಬಾರಿ ಸಿಬ್ಬಂದಿಗೆ ಕೇಳಿ ನೀರು ಪಡೆದು ಬಜೆಟ್ ಮಂಡನೆಯನ್ನು ಪೂರ್ಣಗೊಳಿಸಿದರು. ಅನಾರೋಗ್ಯ ಪರಿಸ್ಥಿತಿಯಲ್ಲೂ ಬಜೆಟ್ ಮಂಡನೆ ಮೂಲಕ ಕರ್ತವ್ಯ ನಿರ್ವಹಿಸಿದ ಮನೋಹರ್ ಪರಿಕ್ಕರ್ ಅವರಿಗೆ ಪಕ್ಷಾತೀತವಾಗಿ ಅಭಿನಂದನೆ ಸಲ್ಲಿಸಿದ್ದರು.

    ಗೋವಾ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಚೋಡನ್ಕರ್, ಮೊದಲು ಹುಷಾರಾಗಿ ಬನ್ನಿ, ಆಮೇಲೆ ಜೋಷ್ ಕುರಿತಾಗಿ ಮಾತನಾಡಿ ಎಂದು ಕಳೆದ ಸೋಮವಾರ ವ್ಯಂಗ್ಯವಾಡಿದ್ದರು. ಬಜೆಟ್ ಮಂಡನೆಗೂ ಮುನ್ನ ಮಹೋಹರ್ ಪರಿಕ್ಕರ್ ಅವರು, ನಾನು ಅತ್ಯಂತ ಜೋಷ್‍ನಿಂದಲೇ ಬಜೆಟ್ ಮಂಡಿಸುತ್ತಿದ್ದೇನೆ ಎಂದು ಹೇಳುವ ಮೂಲಕ ಗಿರೀಶ್ ಚೋಡನ್ಕರ್ ಅವರಿಗೆ ತಿರುಗೇಟು ನೀಡಿದ್ದರು. ನನ್ನ ಕೊನೆ ಉಸಿರು ಇರುವವರೆಗೂ ರಾಜ್ಯದ ಜನರ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದು ಬಜೆಟ್ ಮಂಡನೆ ವೇಳೆ ಭಾವನಾತ್ಮಕವಾಗಿ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv