Tag: ಮನೋಜ್ ಮುಕುಂದ್ ನರವಾಣೆ

  • ಭಾರತದಿಂದ ವಿಶ್ವಕ್ಕೆ ಔಷಧಿ ಪೂರೈಕೆ, ಪಾಕ್‍ನಿಂದ ಭಯೋತ್ಪಾದನೆ ರಫ್ತು: ಆರ್ಮಿ ಮುಖ್ಯಸ್ಥ ಗರಂ

    ಭಾರತದಿಂದ ವಿಶ್ವಕ್ಕೆ ಔಷಧಿ ಪೂರೈಕೆ, ಪಾಕ್‍ನಿಂದ ಭಯೋತ್ಪಾದನೆ ರಫ್ತು: ಆರ್ಮಿ ಮುಖ್ಯಸ್ಥ ಗರಂ

    – ಪುಂಡಾಟ ಮುಂದುವರಿಸಿದ ಪಾಕ್

    ನವದೆಹಲಿ: ಹೆಮ್ಮಾರಿ ಕೊರೊನಾ ವೈರಸ್ ವಿರುದ್ಧ ಭಾರತ ಹೋರಾಡುತ್ತಿದೆ. ಅಷ್ಟೇ ಅಲ್ಲದೆ ವಿವಿಧ ದೇಶಗಳಿಗ ಸಹಾಯ ಮಾಡುತ್ತಿದೆ. ಇಂತಹ ಪರಿಸ್ಥಿತಿ ಪಾಕಿಸ್ತಾನ ತನ್ನ ಪುಂಡಾಟವನ್ನು ಮುಂದುವರಿಸಿದೆ ಎಂದು ಆರ್ಮಿ ಮುಖ್ಯಸ್ಥ ಜನರಲ್‌ ಮನೋಜ್ ಮುಕುಂದ್ ನರವಾಣೆ ಗುಡುಗಿದ್ದಾರೆ.

    ಆರ್ಮಿ ಮುಖ್ಯಸ್ಥ ಜನರಲ್‌ ನರವಾಣೆ ಅವರ ಹೇಳಿಕೆಯ ಕೆಲವೇ ಗಂಟೆಗಳ ಮುನ್ನ ಪಾಕಿಸ್ತಾನ ಸೇನೆಯು ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ನಿಯಂತ್ರಣ ರೇಖೆಯಲ್ಲಿ (ಎಲ್‍ಒಸಿ) ಅಪ್ರಚೋದಿತ ಕದನ ವಿರಾಮ ಉಲ್ಲಂಘನೆಗೆ ಯತ್ನಿಸಿತ್ತು. ಅಷ್ಟೇ ಅಲ್ಲದೆ ಕಸ್ಬಾ ಮತ್ತು ಕಿರ್ನಿ ವಲಯಗಳಲ್ಲಿನ ಎಲ್‍ಒಸಿ ಉದ್ದಕ್ಕೂ ಸಣ್ಣ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸಿತ್ತು.

    ಕುಪ್ವಾರಾದಲ್ಲಿ ಮಾತನಾಡಿದ ಆರ್ಮಿ ಮುಖ್ಯಸ್ಥ ಜನರಲ್‌ ನರವಾಣೆ ಅವರು, ”ನಾವು ನಮ್ಮ ನಾಗರಿಕರಿಗೆ ಮಾತ್ರವಲ್ಲದೆ ವಿಶ್ವದ ಇತರ ಭಾಗಗಳಿಗೆ ವೈದ್ಯಕೀಯ ತಂಡ, ಔಷಧಿಗಳನ್ನು ರಫ್ತು ಮಾಡಿ ಕೊರೊನಾ ವಿರುದ್ಧ ಹೋರಾಡುತ್ತಿದ್ದೇವೆ. ಆದರೆ ಮತ್ತೊಂದೆಡೆ ಪಾಕಿಸ್ತಾನ ಭಯೋತ್ಪಾದನೆಯನ್ನು ಮಾತ್ರ ರಫ್ತು ಮಾಡುತ್ತಿದೆ. ಇದು ಉತ್ತಮ ಬೆಳವಣಿಗೆಯಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ.

    ಇಲ್ಲಿಯವರೆಗೆ ಭಾರತೀಯ ಸೈನ್ಯದಲ್ಲಿ ಕೇವಲ 8 ಜನರಿಗೆ ಕೊರೊನಾ ಸೋಂಕು ತಗುಲಿದೆ. ಅವರಲ್ಲಿ 2 ವೈದ್ಯರು ಮತ್ತು 1 ನರ್ಸಿಂಗ್ ಸಹಾಯಕ, 4 ಜನರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಲಡಾಖ್‍ನಲ್ಲಿ ಒಬ್ಬರಿಗೆ ಸೋಂಕು ತಗುಲಿತ್ತು ಅವರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಮತ್ತು ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದು ತಿಳಿಸಿದರು.

    ಯಾವುದೇ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿರದ ಯೋಧರನ್ನು ಮತ್ತೆ ಘಟಕಗಳಿಗೆ ಸ್ಥಳಾಂತರಿಸಲಾಗುತ್ತಿದೆ. ನಾವು ಈಗಾಗಲೇ ಎರಡು ವಿಶೇಷ ರೈಲುಗಳನ್ನು ಒದಗಿಸಿದ್ದೇವೆ. ಬೆಂಗಳೂರಿನಿಂದ ಜಮ್ಮು ಮತ್ತು ಬೆಂಗಳೂರಿನಿಂದ ಗುವಾಹಟಿಗೆ ರೈಲು ಸೇವೆ ಕಲ್ಪಿಸಲಾಗಿದ್ದು, ಅಲ್ಲಿಂದ ಯೋಧರನ್ನು ಕರೆತರಲಾಗುತ್ತಿದೆ ಎಂದು ಮಾಹಿತಿ ನೀಡಿದರು.

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಕ್ಷಣಾ ಸಚಿವಾಲಯದ ವಕ್ತಾರ ಕರ್ನಲ್ ದೇವೇಂದರ್ ಆನಂದ್ ಅವರು, ”ಇಂದು ಬೆಳಗ್ಗೆ 11 ಗಂಟೆಗೆ ಪಾಕಿಸ್ತಾನವು ಕಸ್ಬಾ ಮತ್ತು ಕಿರ್ನಿ ವಲಯಗಳಲ್ಲಿನ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಸಣ್ಣ ಶಸ್ತ್ರಾಸ್ತ್ರ ಮತ್ತು ಗಾರೆಗಳಿಂದ ಗುಂಡು ಹಾರಿಸುವ ಮೂಲಕ ಅಪ್ರಚೋದಿತ ಕದನ ವಿರಾಮ ಉಲ್ಲಂಘನೆಗೆ ಮಾಡಿದೆ. ಇದಕ್ಕೆ ಭಾರತೀಯ ಸೇನೆಯು ಸೂಕ್ತವಾಗಿ ಪ್ರತೀಕಾರ ತೀರಿಸುತ್ತಿದೆ” ಎಂದು ತಿಳಿಸಿದ್ದಾರೆ.

    ಪಾಕಿಸ್ತಾನದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 6000ಕ್ಕೆ ತಲುಪಿದ್ದರೆ, ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 117ಕ್ಕೆ ತಲುಪಿದೆ. ವಿಶ್ವಾದ್ಯಂತ 1.3 ಲಕ್ಷಕ್ಕೂ ಹೆಚ್ಚು ಜನರು ಕೊರೊನಾಗೆ ಬಲಿಯಾಗಿದ್ದಾರೆ.