Tag: ಮನೆ ಮಾರಾಟಕ್ಕಿದೆ

  • ಮನೆ ಮಾರಾಟಕ್ಕಿದೆ: ಕಾಡುವ ದೆವ್ವಕ್ಕೂ ನಗುವಿನ ಕಚಗುಳಿಯಿಡೋ ಚಿತ್ರ!

    ಮನೆ ಮಾರಾಟಕ್ಕಿದೆ: ಕಾಡುವ ದೆವ್ವಕ್ಕೂ ನಗುವಿನ ಕಚಗುಳಿಯಿಡೋ ಚಿತ್ರ!

    ಬೆಂಗಳೂರು: ಪ್ರತಿ ಪ್ರೇಕ್ಷಕರೂ ಕೂಡಾ ಸಿನಿಮಾ ನೋಡೋ ಪ್ರಧಾನ ಉದ್ದೇಶ ಮನೋರಂಜನೆ. ಅದರಲ್ಲಿಯೂ ಹಾಸ್ಯ ಸನ್ನಿವೇಶಗಳಿಗೆ ಮನಸೋಲದವರೇ ಇಲ್ಲ. ಹಾಗಿರುವಾಗ ಒಂದಿಡೀ ಚಿತ್ರವೇ ಕಾಮಿಡಿಮಯವಾಗಿದ್ದರೆ ಅದರತ್ತ ಪ್ರೇಕ್ಷಕರು ಆಕರ್ಷಿತರಾಗದಿರಲು ಸಾಧ್ಯವೇ ಇಲ್ಲ. ಈ ಕಾರಣದಿಂದಲೇ ಅಗಾಧ ನಿರೀಕ್ಷೆ ಮೂಡಿಸಿದ್ದ ‘ಮನೆ ಮಾರಾಟಕ್ಕಿದೆ’ ಚಿತ್ರವೀಗ ಬಿಡುಗಡೆಯಾಗಿದೆ. ಮಾರಾಟಕ್ಕಿರೋ ಮನೆ, ಅದಕ್ಕೆ ಥರ ಥರದ ಅನಿವಾರ್ಯತೆ, ವ್ಯಕ್ತಿತ್ವದ ಪೋಷಾಕು ತೊಟ್ಟು ಎಂಟ್ರಿ ಕೊಡುವ ಆಸಾಮಿಗಳೊಂದಿಗೆ ಭರಪೂರ ನಗುವಿನ ಮ್ಯಾಜಿಕ್ಕನ್ನು ನಿರ್ದೇಶಕ ಮಂಜು ಸ್ವರಾಜ್ ಮಾಡಿದ್ದಾರೆ. ಇದರಲ್ಲಿನ ಕಾಮಿಡಿ ಕಿಕ್ ಎಂಥಾದ್ದಿದೆಯೆಂದರೆ, ಅದು ಪ್ರೇಕ್ಷಿಕರಿಗೆ ಮಾತ್ರವಲ್ಲದೇ ಕಾಟ ಕೊಡಲು ಬಂದ ದೆವ್ವಗಳಿಗೂ ನಗೆಯ ಕಚಗುಳಿ ಇಡುವಂತಿದೆ!

    ಸಾಧು ಕೋಕಿಲಾ, ಚಿಕ್ಕಣ್ಣ, ಕುರಿ ಪ್ರತಾಪ್ ಮತ್ತು ರವಿಶಂಕರ್ ಗೌಡ ಒಂದೆಡೆ ಸೇರಿದ್ದಾರೆಂದರೆ ಅಲ್ಲಿ ನಗುವಿನ ಒರತೆ ಹುಟ್ಟಿಕೊಳ್ಳೋದು ಗ್ಯಾರೆಂಟಿ ಎಂಬ ನಂಬಿಕೆ ಎಲ್ಲರಲ್ಲಿಯೂ ಇತ್ತು. ಅದನ್ನು ನಿಜವಾಗಿಸುವಂತೆಯೇ ನಿರ್ದೇಶಕರು ಪಾತ್ರಗಳನ್ನು ರೂಪಿಸಿದ್ದಾರೆ. ಮನೋರಂಜನೆಯೇ ಪ್ರಧಾನವಾಗಿರುವ ಕಥೆ, ಅದಕ್ಕೆ ಪೂಕವಾದ ಪಾತ್ರಗಳು ಮತ್ತು ಕ್ಷಣ ಕ್ಷಣವೂ ನಗೆಯುಕ್ಕಿಸುವಂತೆ ಪೋಣಿಸಿರುವ ಹಾಸ್ಯ ಸನ್ನಿವೇಶಗಳೊಂದಿಗೆ ಮಾರಾಟಕ್ಕಿರೋ ಮನೆ ತುಂಬಾ ನಗು ಹರಿಡಿಕೊಂಡಿದೆ. ಅದು ಪ್ರತಿ ನೋಡುಗರ ಮೈ ಮನಸುಗಳನ್ನೂ ವ್ಯಾಪಿಸಿಕೊಂಡು ಮುದಗೊಳಿಸುವಷ್ಟು ಶಕ್ತವಾಗಿದೆ.

    ವಿದೇಶದಲ್ಲಿ ನೆಲೆಸಿದವನೊಬ್ಬನಿಗೆ ಊರಲ್ಲಿ ಅಪ್ಪ ಅಮ್ಮನಿರೋ ಮನೆಯನ್ನು ಮಾರಾಟ ಮಾಡೋ ಹಂಬಲ. ಆದರೆ ಅದರೊಳಗಿನ ದೆವ್ವ ಭೂತಗಳ ಕಾಟ ಊರಿಡೀ ತುಂಬಿಕೊಂಡು ಯಾರೆಂದರೆ ಯಾರೂ ಅದನ್ನು ಖರೀದಿ ಮಾಡೋ ಧೈರ್ಯ ತೋರೋದಿಲ್ಲ. ಈ ಕಾರಣದಿಂದಲೇ ಮನೆ ಮಾಲೀಕರು ಇದರೊಳಗಿನ ದೆವ್ವ ಓಡಿಸಿ ಮನೆ ಮಾರಾಟ ಮಾಡಿ ಕೊಟ್ಟವರಿಗೆ ಲಕ್ಷಗಟ್ಟಲೆ ಬಂಪರ್ ಬಹುಮಾನ ಘೋಷಣೆ ಮಾಡುತ್ತಾರೆ. ಬದುಕಿನ ನಾನಾ ಜಂಜಡಗಳಲ್ಲಿ ಮುಳುಗಿದ್ದ ನಾಲ್ಕು ಮಂದಿ ಆ ಸವಾಲನ್ನು ಸ್ವೀಕರಿಸಿ ದೆವ್ವವಿರೋ ಮನೆ ಪ್ರವೇಶಿಸಿದ ನಂತರ ಸಂಭವಿಸೋ ವಿದ್ಯಮಾನಗಳೇ ಈ ಸಿನಿಮಾದ ಜೀವಾಳ.

    ಸಾಧು ಕೋಕಿಲಾ, ಚಿಕ್ಕಣ್ಣ, ಕುರಿ ಪ್ರತಾಪ್ ಮತ್ತು ರವಿಶಂಕರ್ ಗೌಡ ಹೇಗಾದರೂ ಮಾಡಿ ಕಾಸು ಹೊಂದಿಸೋ ದರ್ದು ಹೊಂದಿರೋ ಪಾತ್ರಗಳಿಗೆ ಪರಕಾಯ ಪ್ರವೇಶ ಮಾಡಿದಂತೆ ನಟಿಸಿದ್ದಾರೆ. ಅವರೆಲ್ಲರ ಪಾತ್ರಗಳಿಗೂ ಒಂದು ಹಿನ್ನೆಲೆ ಇದೆ. ಅವರಿಗೆ ಬಂದೊದಗಿದ ಕಾಸಿನ ಅನಿವಾರ್ಯತೆಗಳನ್ನು ನಿರ್ದೇಶಕರು ಮಜವಾಗಿಯೇ ತೋರಿಸಿದ್ದಾರೆ. ಇನ್ನುಳಿದಂತೆ ಶ್ರುತಿ ಹರಿಹರನ್ ಮತ್ತು ಕಾರುಣ್ಯಾ ರಾಮ್ ಪಾತ್ರಗಳೂ ಮೋಹಕವಾಗಿವೆ. ಒಂದು ಸಿನಿಮಾದ ಒಂದಷ್ಟು ಕಾಮಿಡಿ ಸನ್ನಿವೇಶಗಳನ್ನೇ ಸಮರ್ಥವಾಗಿ ನಿಭಾಯಿಸೋದು ಕಷ್ಟ. ಆದರೆ ನಿರ್ದೇಶಕ ಮಂಜು ಸ್ವರಾಜ್ ಒಂದಿಡೀ ಚಿತ್ರವನ್ನೇ ಭರಪೂರ ನಗುವಲ್ಲಿ ಮಿಂದೇಳುವಂತೆ ಕಟ್ಟಿ ಕೊಟ್ಟಿರೋದು ಇಡೀ ಸಿನಿಮಾದ ಪ್ಲಸ್ ಪಾಯಿಂಟ್. ನೀವೂ ಒಮ್ಮೆ ಮಾರಾಟಕ್ಕಿರೋ ದೆವ್ವದ ಮನೆಯನ್ನು ಕಣ್ತುಂಬಿಕೊಳ್ಳಿ. ಖಂಡಿತಾ ಭರ್ಜರಿ ಕಾಮಿಡಿ ನಗವಿನಲೆಯಲ್ಲಿ ಮಿಂದೇಳುವಂತೆ ಮಾಡುತ್ತದೆ.

    ರೇಟಿಂಗ್: 3.5/5

  • ಮನೆ ಮಾರಾಟಕ್ಕಿದೆ: ನಿರ್ದೇಶಕ ಮಂಜು ಸ್ವರಾಜ್‍ರ ಮಹಾ ಕನಸು!

    ಮನೆ ಮಾರಾಟಕ್ಕಿದೆ: ನಿರ್ದೇಶಕ ಮಂಜು ಸ್ವರಾಜ್‍ರ ಮಹಾ ಕನಸು!

    ಬೆಂಗಳೂರು: ಒಂದು ಚಿತ್ರದಿಂದ ಇನ್ನೊಂದು ಚಿತ್ರಕ್ಕೆ ಯಾವ ನೆರಳೂ ಇಲ್ಲದಂಥಾ ಶೈಲಿಯಲ್ಲಿ ದೃಶ್ಯ ಕಟ್ಟೋದು ನಿರ್ದೇಶಕನೊಬ್ಬನ ಅಸಲಿ ಕಸುಬುದಾರಿಕೆ. ಹಾಗೆ ಒಂದು ಚಿತ್ರವಾದ ನಂತರ ಮತ್ತೊಂದರಲ್ಲಿ ಭಿನ್ನ ಜಾನರಿನ ಕಥೆಗಳನ್ನು ಆರಿಸಿಕೊಳ್ಳುತ್ತಾ ಸಾಗುವವರು ಮಾತ್ರವೇ ಯಾವುದೇ ಚಿತ್ರರಂಗಗಳಲ್ಲಿ ಚಾಲ್ತಿಯಲ್ಲಿರಲು ಸಾಧ್ಯ. ಈ ನಿಟ್ಟಿನಲ್ಲಿ ನೋಡ ಹೋದರೆ ಯುವ ನಿರ್ದೇಶಕ ಮಂಜು ಸ್ವರಾಜ್ ಅವರ ಯಶಸ್ಸಿನ ಗುಟ್ಟೂ ಕೂಡಾ ಇಂಥಾ ಬದಲಾವಣೆಯಲ್ಲಿಯೇ ಅಡಗಿದೆ. ಶಿಶಿರದಿಂದ ಮೊದಲೊಂಡು ಈವರೆಗೂ ವಿಶೇಷವಾದ ಕಥೆಗಳನ್ನೇ ಮುಟ್ಟುತ್ತಾ ಬಂದಿರುವ ಮಂಜು ಸ್ವರಾಜ್ ಮನೆ ಮಾರಾಟಕ್ಕಿದೆ ಚಿತ್ರದ ಮೂಲಕ ಇದೇ ಮೊದಲ ಬಾರಿ ಸಂಪೂರ್ಣವಾಗಿ ಕಾಮಿಡಿ ಜಾನರ್ ಚಿತ್ರವನ್ನು ರೂಪಿಸಿದ್ದಾರೆ.

    ಮಂಜು ಸ್ವರಾಜ್ ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಪ್ರತಿಭಾವಂತ ಯುವ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಶಿಶಿರ, ಪಟಾಕಿ, ಶ್ರಾವಣಿ ಸುಬ್ರಹ್ಮಣ್ಯ, ಶ್ರೀಕಂಠ ಮುಂತಾದ ಸಿನಿಮಾಗಳನ್ನು ನಿರ್ದೇಶನ ಮಾಡಿರೋ ಮಂಜು ಅತ್ಯತ್ತಮ ಬರಹಗಾರರಾಗಿ, ಸಿನಿಮಾ ರಂಗದಲ್ಲಿ ನಾನಾ ಅವತಾರಗಳನ್ನು ಎತ್ತಿರುವವರು. ಅತ್ಯಂತ ಕಷ್ಟದ ದಿನಗಳನ್ನು ಕಂಡು ಅದರ ನಡುವೆಯೂ ಚಿತ್ರರಂಗದಲ್ಲಿ ಹಂತ ಹಂತವಾಗಿ ಮೇಲೇರಿ ಬಂದಿರುವ ಮಂಜು ಸ್ವರಾಜ್ ಅವರ ಮಹಾ ಕನಸಿನಂಥಾ ಚಿತ್ರ ಮನೆ ಮಾರಾಟಕ್ಕಿದೆ.

    ಮಂಜು ಸ್ವರಾಜ್ ನಿರ್ದೇಶಕ ನಾಗತಿಹಳ್ಳಿ ಚಂದ್ರ ಶೇಖರ್ ಅವರ ಸಮ್ಮುಖದಲ್ಲಿ ಅರಳಿಕೊಂಡಿರೋ ಪ್ರತಿಭೆ. ಇದುವರೆಗೂ ಪ್ರೊಡಕ್ಷನ್ ಬಾಯ್, ಕ್ಯಾಮೆರಾ ಅಸಿಸ್ಟೆಂಟ್ ಸೇರಿದಂತೆ ನಾನಾ ಕಾರ್ಯಗಳನ್ನು ಮಾಡುತ್ತಲೇ ನಿರ್ದೇಶಕನಾಗಬೇಕೆಂಬ ಕನಸನ್ನು ಗಟ್ಟಿಗೊಳಿಸಿಕೊಂಡವರು ಮಂಜು ಸ್ವರಾಜ್. ಆ ನಂತರದಲ್ಲಿ ಮತ್ತೊಂದಷ್ಟು ಸಿನಿಮಾಗಳ ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸಿ ಅನುಭವ ಗಿಟ್ಟಿಸಿಕೊಂಡು ಶಿಶಿರ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದರು. ಈ ಬಾರಿ ಅವರು ಮನೆ ಮಾರಾಟಕ್ಕಿದೆ ಚಿತ್ರದ ಮೂಲಕ ನಿರ್ಮಾಪಕ ಎಸ್ ವಿ ಬಾಬು ಸಾರಥ್ಯದಲ್ಲಿ ಅದ್ಭುತ ಚಿತ್ರವನ್ನು ರೂಪಿಸಿದ ಖುಷಿಯಲ್ಲಿದ್ದಾರೆ.

    ಎಸ್ ವಿ ಬಾಬು ಈ ಹಿಂದೆ ಮಂಜು ನಿರ್ದೇಶನ ಮಾಡಿದ್ದ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಆ ಸಿನಿಮಾದಲ್ಲಿ ಮಂಜು ಅವರ ಕಸುಬುದಾರಿಕೆಯನ್ನು ಮೆಚ್ಚಿಕೊಂಡಿದ್ದ ಅವರು ಮನೆ ಮಾರಾಟಕ್ಕಿದೆ ಚಿತ್ರವನ್ನು ನಿರ್ಮಾಣ ಮಾಡಲು ಒಪ್ಪಿಕೊಂಡಿದ್ದರಂತೆ. ಈ ಮೂಲಕವೇ ಮಂಜು ಸ್ವರಾಜ್ ಹೊಸ ಅನುಭವವನ್ನು ಕಾಮಿಡಿ ಜಾನರ್ ಚಿತ್ರದ ಮೂಲಕ ದಕ್ಕಿಸಿಕೊಂಡಿದ್ದಾರೆ. ಇದು ದೊಡ್ಡ ಮಟ್ಟದಲ್ಲಿ ಹಿಟ್ ಆಗಿ ತಮ್ಮ ಸಿನಿ ಜೀವನ ಮತ್ತಷ್ಟು ಮಿಂಚುವಂತೆ ಮಾಡುತ್ತದೆಂಬ ನಂಬಿಕೆ ಮಂಜು ಸ್ವರಾಜ್ ಅವರಲ್ಲಿದೆ.

  • ಮಾರಾಟಕ್ಕಿರೋ ಮನೆ ಮೂಲಕ ಸಾಕಾರಗೊಂಡ ಮಹಾ ಕನಸು!

    ಮಾರಾಟಕ್ಕಿರೋ ಮನೆ ಮೂಲಕ ಸಾಕಾರಗೊಂಡ ಮಹಾ ಕನಸು!

    ಬೆಂಗಳೂರು: ಮಂಜು ಸ್ವರಾಜ್ ನಿರ್ದೇಶನ ‘ಮನೆ ಮಾರಾಟಕ್ಕಿದೆ’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಎಸ್ ವಿ ಬಾಬು ನಿರ್ಮಾಣ ಮಾಡಿರೋ ಈ ಅದ್ದೂರಿ ಚಿತ್ರ ಭರಪೂರ ಕಾಮಿಡಿಯೊಂದಿಗೆ ರೂಪುಗೊಂಡಿದೆ ಎಂಬ ವಿಚಾರ ಈಗಾಗಲೇ ಟ್ರೇಲರ್ ನೊಂದಿಗೆ ಜಾಹೀರಾಗಿದೆ. ಈ ಮೂಲಕವೇ ಮಹಾ ಸಾಹಸವೊಂದನ್ನು ಮಂಜು ಸ್ವರಾಜ್ ಸಾಧ್ಯವಾಗಿಸಿಕೊಂಡಿದ್ದಾರೆ. ಅದು ಇಲ್ಲಿರೋ ಕಾಮಿಡಿ ನಟರನ್ನು ಒಂದುಗೂಡಿಸಿರೋ ಸಾಹಸ. ಇನ್ನುಳಿದಂತೆ ಈ ಸಿನಿಮಾ ಮೂಲಕವೇ ಕನ್ನಡ ಸಿನಿಮಾ ಪ್ರೇಕ್ಷಕರ ಅದೆಷ್ಟೋ ವರ್ಷಗಳ ಕನಸೊಂದು ನನಸಾಗಿದೆ!

    ಯಾವುದೇ ಸಿನಿಮಾ ಎಂಥಾದ್ದೇ ಕಥೆಜಯನ್ನೊಳಗೊಂಡಿದ್ದರೂ ಅದರ ಪರಿಪೂರ್ಣ ಸ್ಥಿತಿ ಕಾಮಿಡಿ ಝಲಕ್ಕಿನೊಂದಿಗೇ ಸಂಪನ್ನಗೊಳ್ಳುತ್ತದೆ. ಓರ್ವ ಕಾಮಿಡಿ ನಟನ ಹಾಸ್ಯದ ಹೊನಲಿನಲ್ಲಿ ಪ್ರೇಕ್ಷಕರೆಲ್ಲರೂ ಮಿಂದೆದ್ದು ತೃಪ್ತರಾಗುತ್ತಾರೆ. ಅಷ್ಟಕ್ಕೂ ಕನ್ನಡದಲ್ಲಿರೋ ಕಾಮಿಡಿ ನಟರ ಸಂಖ್ಯೆಯೇ ತೀರಾ ಕಡಿಮೆ. ಹಾಗೆ ಲೀಡ್‍ನಲ್ಲಿರೋ ಹಾಸ್ಯ ಕಲಾವಿದರನ್ನೆಲ್ಲ ಒಂದೇ ಚಿತ್ರದಲ್ಲಿ ನೋಡಬೇಕು, ಆ ಮೂಲಕ ಭರಪೂರ ಕಾಮಿಡಿ ಝಲಕ್ಕುಗಳಲ್ಲಿ ಮೈ ಮರೆಯ ಬೇಕೆಂಬುದು ಹಲವು ಪ್ರೇಕ್ಷಕರ ವರ್ಷಾಂತರಗಳ ಕನಸಾಗಿತ್ತು. ಆದರೆ ಮೇಲು ನೋಡಕ್ಕೆ ಸಾಮಾನ್ಯವಾಗಿ ಕಂಡರೂ ಒಪಂದಷ್ಟು ಹಾಸ್ಯ ಕಲಾವಿದರನ್ನು ಒಟ್ಟಿಗೆ ಸೇರಿಸೋದೇ ಒಂದು ಸಾಹಸ. ಅದನ್ನು ನಿರ್ದೇಶಕ ಮಂಜು ಸಾಧ್ಯವಾಗಿಸಿದ್ದಾರೆ.

    ಸಾಧು ಕೋಕಿಲಾ, ಚಿಕ್ಕಣ್ಣ, ಕುರಿ ಪ್ರತಾಪ್ ಮತ್ತು ರವಿಶಂಕರ್ ಗೌಡರನ್ನು ಈ ಮೂಲಕ ಮಂಜು ಸ್ವರಾಜ್ ಒಟ್ಟಿಗೆ ನಟಿಸುವಂತೆ ಮಾಡಿದ್ದಾರೆ. ಈ ನಾಲಕ್ಕು ಮಂದಿಯೂ ಕಾಮಿಡಿಯಲ್ಲಿ ದೊಡ್ಡ ಹೆಸರು ಮಾಡಿರುವವರು. ಇವರೆಲ್ಲರೂ ಸದಾ ಒಂದಿಲ್ಲೊಂದು ಸಿನಿಮಾಗಳಲ್ಲಿ ಬ್ಯುಸಿಯಾಗಿರುತ್ತಾರೆ. ಪ್ರತೀ ದಿನವೂ ಒಂದಲ್ಲ ಒಂದು ಸಿನಿಮಾಗಳಲ್ಲಿ ತೊಡಗಿಸಿಕೊಂಡಿರೋ ಇವರೆಲ್ಲರನ್ನು ಒಂದುಗೂಡಿಸೋದೇ ಒಂದು ಸಾಹಸ. ಆದರೆ ಅದನ್ನು ಮಂಜು ಸ್ವರಾಜ್ ಲೀಲಾಜಾಲವಾಗಿಯೇ ಮಾಡಿ ಮುಗಿಸಿದ್ದಾರೆ. ಈ ಎಲ್ಲ ಕಲಾªವಿದರೂ ಕೂಡಾ ಈ ಸಿನಿಮಾಗಾಗಿ ಅದೆಷ್ಟೇ ಸವಾಲುಗಳೆದುರಾದರೂ ಲೆಕ್ಕಿಸದೇ ದುಡಿದಿದ್ದಾರೆ. ತಂತಮ್ಮ ಪಾತ್ರಗಳಲ್ಲಿ ಅದ್ಭುತವಾಗಿಯೇ ನಟಿಸಿದ್ದಾರೆಂಬ ಮೆಚ್ಚುಗೆ ಚಿತ್ರತಂಡದಲ್ಲಿದೆ. ಅಂದಹಾಗೆ ಅತ್ಯಂತ ವಿಶೇಷವಾದ, ಮಜವಾದ ಕಥೆ ಮತ್ತು ಪಾತ್ರಗಳೊಂದಿಗೆ ಈ ಚಿತ್ರ ಇದೇ ವಾರ ತೆರೆ ಕಾಣಲಿದೆ.

  • ಮಾರಾಟಕ್ಕಿರೋ ಮನೆಯಲ್ಲಿ ಕಾಮಿಡಿ ಕಲರವ!

    ಮಾರಾಟಕ್ಕಿರೋ ಮನೆಯಲ್ಲಿ ಕಾಮಿಡಿ ಕಲರವ!

    ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿರೋ ಅಷ್ಟೂ ಕಾಮಿಡಿ ಕಲಾವಿದರನ್ನು ಒಂದೇ ಚಿತ್ರದಲ್ಲಿ ನೋಡಬೇಕೆಂಬುದು ಬಹುತೇಕ ಪ್ರೇಕ್ಷಕರ ಹಲವಾರು ವರ್ಷಗಳ ಕನಸು. ಆದರೆ ಇದುವರೆಗೂ ಅದು ತೃಪ್ತಿದಾಯಕವಾಗಿ ಸಾಕಾರಗೊಂಡಿದ್ದಿಲ್ಲ. ಪ್ರೇಕ್ಷಕರಲ್ಲಿರೋ ಈ ಆಕಾಂಕ್ಷೆಯನ್ನು ಅರ್ಥೈಸಿಕೊಂಡಿರೋ ನಿರ್ದೇಶಕ ಮಂಜು ಸ್ವರಾಜ್ ‘ಮನೆ ಮಾರಾಟಕ್ಕಿದೆ’ ಚಿತ್ರದ ಮೂಲಕ ಲೀಡ್ ಕಾಮಿಡಿ ಕಲಾವಿದರನ್ನು ಕೂಡಿಟ್ಟುಕೊಂಡಿದ್ದಾರೆ. ಈ ಸಿನಿಮಾ ಬಗ್ಗೆ ಆರಂಭ ಕಾಲದಿಂದಲೂ ಪ್ರೇಕ್ಷಕರಲ್ಲೊಂದು ಕುತೂಹಲ ಇದ್ದೇ ಇತ್ತು. ಈ ಟ್ರೇಲರರ್ ನೋಡಿದ ಮೇಲಂತೂ ಅದು ಇಮ್ಮಡಿಸಿದೆ. ಯಾಕೆಂದರೆ ಈ ಟ್ರೇಲರ್ ಅಷ್ಟೊಂದು ಮಜವಾಗಿ ಮೂಡಿ ಬಂದಿದೆ.

    ಮನೆ ಮಾರಾಟಕ್ಕಿದೆ ಎಸ್.ವಿ ಬಾಬು ನಿರ್ಮಾಣದ ಹದಿನಾರನೇ ಚಿತ್ರ. ಈವರೆಗೂ ಪಟಾಕಿ, ಶ್ರಾವಣಿ ಸುಬ್ರಮಣ್ಯದಂಥಾ ಸೂಪರ್ ಹಿಟ್ ಸಿನಿಮಾಗಳನ್ನು ಕೊಡಮಾಡಿರುವ ಮಂಜು ಸ್ವರಾಜ್ ನಿರ್ದೇಶನದ ಐದನೇ ಚಿತ್ರ. ಸಾಧು ಕೋಕಿಲಾ, ಚಿಕ್ಕಣ್ಣ, ಕುರಿ ಪ್ರತಾಪ್ ಮತ್ತು ರವಿಶಂಕರ್ ಗೌಡ ಇದರ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಬಹು ವೈಶಿಷ್ಟ್ಯದ ಪಾತ್ರಕ್ಕೆ ಶ್ರುತಿ ಹರಿಹರನ್ ಜೀವ ತುಂಬಿದ್ದಾರೆ. ಇದೀಗ ಬಿಡುಗಡೆಯಾಗಿರೋ ಟ್ರೇಲರ್‍ನಲ್ಲಿ ಈ ಎಲ್ಲರ ಪಾತ್ರಗಳೂ ಕೂಡಾ ಪ್ರೇಕ್ಷಕರಿಗೆ ಪರಿಚಯವಾಗಿವೆ. ಅವೆಲ್ಲವೂ ತುಂಬಾನೇ ಮಜವಾದ ರೀತಿಯಲ್ಲಿ ಮೂಡಿ ಬಂದಿವೆ.

    ಈ ಟ್ರೇಲರ್ ಮೂಲಕವೇ ಮನೆ ಮಾರಾಟಕ್ಕಿದೆ ಎಂಬುದು ಕಾಮಿಡಿ ಹಾರರ್ ಜಾನರಿನ ಚಿತ್ರವೆಂಬುದು ಸ್ಪಷ್ಟವಾಗಿಯೇ ಗೊತ್ತಾಗಿದೆ. ಹೀಗೆ ಎಲ್ಲ ಕಾಮಿಡಿ ನಟರನ್ನೂ ಕೂಡಾ ಒಂದೆಡೆ ಸೇರಿಸೋ ಸಾಹಸದಲ್ಲಿ ನಿರ್ದೇಶಕ ಮಂಜು ಸ್ವಾರಾಜ್ ಗೆದ್ದಿದ್ದಾರೆಂಬುದಕ್ಕೆ, ಈ ಸಿನಿಮಾ ಜನರೆಲ್ಲರಿಗೆ ಇಷ್ಟವಾಗಿ ದೊಡ್ಡ ಮಟ್ಟದಲ್ಲಿಯೇ ಗೆಲ್ಲುತ್ತದೆ ಎಂಬುದಕ್ಕೆ ಈ ಟ್ರೇಲರ್‍ನ ತುಂಬಾ ಸಾಕ್ಷಿಗಳು ಸಿಗುತ್ತವೆ. ಇದು ಕಾಮಿಡಿ ಥ್ರಿಲ್ಲರ್ ಜಾನರಿನ ಚಿತ್ರವೆಂದಾಕ್ಷಣ ಸಿದ್ಧ ಸೂತ್ರಗಳಿಗೆ ತಕ್ಕುದಾದ ಕಲ್ಪನೆ ಇಟ್ಟುಕೊಳ್ಳುವಂತಿಲ್ಲ. ಯಾಕೆಂದರೆ ಪ್ರೇಕ್ಷಕರೆಲ್ಲರಿಗೂ ಸರ್‍ಪ್ರೈಸ್ ಎಂಬಂಥಾ ಹಲವಾರು ಅಂಶಗಳು ಇಲ್ಲಿವೆಯಂತೆ. ಅದೇನೆಂಬುದು ಶೀಘ್ರದಲ್ಲಿಯೇ ಜಾಹೀರಾಗಲಿದೆ.