ಬೆಂಗಳೂರು: 2018ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ತಯಾರಿ ನಡೆಸಿದೆ. ಇಂದು ಬೆಳಿಗ್ಗೆ 11 ಗಂಟೆಗೆ ಕೆಪಿಸಿಸಿಯಿಂದ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಿಎಂ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಹಾಗು ಪರಮೇಶ್ವರ್ ರಿಂದ `ಮನೆ ಮನೆಗೆ ಕಾಂಗ್ರೆಸ್’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಕಳೆದ ನಾಲ್ಕುವರೆ ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿದ ಸಾಧನೆ ಬಗ್ಗೆ ಜನರಿಗೆ ಮಾಹಿತಿ ನೀಡಲಾಗುತ್ತಿದ್ದು, ರಾಜ್ಯದ ಎಲ್ಲಾ 52 ಸಾವಿರ ಬೂತ್‍ಗಳಲ್ಲೂ ಕಾಂಗ್ರೆಸ್ ಕಾರ್ಯಕ್ರಮ ಹಾಗೂ ಸಾಧನೆ ಬಗ್ಗೆ ಪ್ರಚಾರಕ್ಕೆ ಚಾಲನೆ ನೀಡಲಾಗಿದೆ. ರಾಜ್ಯ ಕಾಂಗ್ರೆಸ್ 2013 ರ ಚುನಾವಣಾ ಪ್ರಣಾಳಿಕೆಯಲ್ಲಿ ಒಟ್ಟು 165 ಭರವಸೆಗಳನ್ನ ನೀಡಿತ್ತು. ಅದರಲ್ಲಿ 155 ಭರವಸೆ ಜಾರಿಗೆ ತರಲಾಗಿದೆ ಎಂಬ ಅಂಶವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಈ ಹೊಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಕಾಂಗ್ರೆಸ್ ವರ್ಸಸ್ ಕಾಂಗ್ರೆಸ್: ಮನೆ ಮನೆಗೆ ಕಾಂಗ್ರೆಸ್ ಸಮಾವೇಶಕ್ಕೆ ಆರಂಭದ ದಿನವೇ ಬಿಗ್ ಶಾಕ್ ಕಾದಿತ್ತು. ಸ್ಥಳೀಯ ನಾಯಕರಿಗೆ ಟಿಕೆಟ್ ನೀಡೋದಾದ್ರೆ ಸಮಾವೇಶ ಮಾಡಿ ಇಲ್ಲ ಜಾಗ ಖಾಲಿ ಮಾಡಿ. ಮನೆ ಮನೆಗೆ ಕಾಂಗ್ರೆಸ್ ಸಮಾವೇಶ ಇಲ್ಲಿ ಮಾಡಬೇಡಿ ಎಂದು ಕೈ ಕಾರ್ಯಕರ್ತರು ಸರ್ಕಾರದ ವಿರುದ್ಧ ಹಾಕಿದ ಬ್ಯಾನರ್ ಹರಿದು ಸಿಎಂ ಸಿದ್ದರಾಮಯ್ಯ, ಪರಮೇಶ್ವರ್ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಳೆದ ಬಾರಿ ವಿಧಾನಸಭಾ ಚುನಾವಣೆಗೆ ಮೊದಲು “ಕಾಂಗ್ರೆಸ್ ನಡಿಗೆ ಜನರ ಬಳಿಗೆ” ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ನಾವು ಪ್ರಣಾಳಿಕೆಯಲ್ಲಿ ಕೊಟ್ಟಿದ್ದ 165 ಭರವಸೆಗಳ ಪೈಕಿ 155ಕ್ಕೂ ಹೆಚ್ಚು ಭರವಸೆಗಳನ್ನು ಈಡೇರಿಸಿದ್ದೇವೆ. ನಾವು ಈ ರಾಜ್ಯದ ಜನರಿಗೆ ಏನು ಮಾಡಿದ್ದೇವೆ ಎಂಬುದನ್ನು ಸಂಕ್ಷಿಪ್ತವಾಗಿ ಕಿರುಹೊತ್ತಿಗೆ ಮೂಲಕ ತಿಳಿಸಿದ್ದು, ನಾವು ಮಾತುಕೊಟ್ಟಂತೆ ನಡೆದುಕೊಂಡಿದ್ದೇವೆ. ಹೀಗಾಗಿ ನಮಗೆ ಮತ್ತೊಮ್ಮೆ ಆಶೀರ್ವಾದ ಮಾಡಿ ಅಂತಾ ನಮ್ಮ ಬೂತ್ ಮಟ್ಟದ ಕಾರ್ಯಕರ್ತರು ಮತದಾರರಿಗೆ ತಿಳಿಸಬೇಕು. ಬಿಜೆಪಿಯವರು ಸುಳ್ಳು ಹೇಳೋದರಲ್ಲಿ ನಿಸ್ಸೀಮರು. ಸುಳ್ಳಿನ ಬಗ್ಗೆ ಎಚ್ಚರಿಕೆ ಅಗತ್ಯ. ನಾವು ಸತ್ಯ ಹೇಳಬೇಕಲ್ಲಾ ಹಾಗಾಗಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಹೇಳಿದರು.

ನಮ್ಮದು `ಕಾಮ್ ಕೀ ಬಾತ್’: ನಾನು ಈಗ ರಾಮಗೊಂಡನಹಳ್ಳಿಯ ಮತದಾರರ ಮನೆಗೆ ಹೋಗಿದ್ದಾಗ ಅವರನ್ನು ವಿಚಾರಿಸಿದೆ. ಅಲ್ಲಿಯ ನಿವಾಸಿಗಳಿಗೆಲ್ಲಾ ಸರ್ಕಾರದ ಅನ್ನಭಾಗ್ಯ ಸೇರಿದಂತೆ ಹಲವು ಯೋಜನೆಗಳು ತಲುಪಿವೆ. ಅದಕ್ಕೆ ಮತ್ತೆ ನಮಗೇ ಆಶೀರ್ವಾದ ಮಾಡೋದಾಗಿ ಅವರು ನಮಗೆ ಹೇಳಿದ್ರು. ಮೋದಿ ಅವರದು `ಮನ್ ಕೀ ಬಾತ್’ ನಮ್ಮದು `ಕಾಮ್ ಕೀ ಬಾತ್’ ಎಂದು ಸಿದ್ದರಾಮಯ್ಯ ಬಿಜೆಪಿಯ ಕಾಲೆಳೆದರು.
ನಮ್ಮದು ಎಲ್ಲರನ್ನೂ ಒಳಗೊಂಡ ಪಕ್ಷ. ಜಾತಿ ಧರ್ಮ ವ್ಯತ್ಯಾಸ ಮಾಡಲ್ಲ. ಮೋದಿಯವರು ಮತ್ತು ಅವರ ಪಕ್ಷದವರ “ಸಬ್ ಕಾ ಸಾತ್ ಸಬ್ ಕಾ ವಿಕಾಸ್” ಕೇವಲ ಹೇಳಿಕೆಗೆ ಮಾತ್ರ ಸೀಮಿತವಾಗಿದ್ದು, ಶ್ರೀಮಂತರ ವಿಕಾಸ ಮಾತ್ರ ಮಾಡುತ್ತಿದ್ದಾರೆ. ಡಿಮಾನಿಟೈಸೇಷನ್‍ನಿಂದ ಯಾವುದಾದರೂ ಬಡವರಿಗೆ ಅನುಕೂಲ ಆಗಿದೆಯಾ? ಸತ್ತ 125 ಜನ ಬಡವರು, ರೈತರು, ಕೂಲಿ ಕಾರ್ಮಿಕರೇ ಹೊರತು ಶ್ರೀಮಂತರು ಯಾರೂ ಸಾಯಲಿಲ್ಲ. ಮೋದಿ ಪ್ರಧಾನಿ ಆದ ಮೇಲೆ ವಿಮಾನದಲ್ಲಿ ಓಡಾಡಿರೋದು, ವಿದೇಶಕ್ಕೆ ಹೋಗಿರೋದು, ಮನ್ ಕಿ ಬಾತ್ ಅಷ್ಟೇ ಎಂದು ಬಿಜೆಪಿ ವಿರುದ್ಧ ಹರಿಹಾಯದ್ದರು.