Tag: ಮನೆಕೆಲಸದಾಳು

  • ಪಿಯೂಷ್ ಗೋಯಲ್ ಮನೆಯಲ್ಲಿ ಕಳ್ಳತನ- ಕೆಲಸದಾಳು ಬಂಧನ

    ಪಿಯೂಷ್ ಗೋಯಲ್ ಮನೆಯಲ್ಲಿ ಕಳ್ಳತನ- ಕೆಲಸದಾಳು ಬಂಧನ

    ಮುಂಬೈ: ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ಅವರ ಮುಂಬೈ ನಿವಾಸದಲ್ಲಿ ಕಳ್ಳತನ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿಯನ್ನು ವಿಷ್ಣುಕುಮಾರ್ ವಿಶ್ವಕರ್ಮ ಎಂದು ಗುರುತಿಸಲಾಗಿದೆ. ಈತ ಕೇಂದ್ರ ಸಚಿವರ ಮನೆಯಲ್ಲಿ ಕೆಲಸದಾಳು ಆಗಿದ್ದನು. ವಿಷ್ಣು ಬೆಳ್ಳಿ ಕಲಾಕೃತಿ, ವಾಚ್, 40 ಸಾವಿರ ಮೌಲ್ಯದ ಬಟ್ಟೆ ಮತ್ತು ಹಾರ್ಡ್ ಡಿಸ್ಕ್ ಮೊದಲಾದವುಗಳನ್ನು ಸೆಪ್ಟೆಂಬರ್ 16ರಂದು ಕಳವು ಮಾಡಿದ್ದಾನೆ. ಈತನನ್ನು ದೆಹಲಿಯಲ್ಲಿ ಪೊಲೀಸರು ಮಂಗಳವಾರ ಬಂಧಿಸಿದ್ದು, ಗುರುವಾರ ಮುಂಬೈಗೆ ಕರೆತರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸೆ.10ರಂದು ಪಿಯೂಷ್ ಗೋಯಲ್ ಅವರ ಪತ್ನಿ ಸೀಮಾ ಮುಂಬೈನಲ್ಲಿರುವ ತಮ್ಮ ನಿವಾಸಕ್ಕೆ ಬಂದಾಗ ಬೆಳಕಿಗೆ ಬಂದಿದೆ. ಕೂಡಲೇ ಅವರು ತಮ್ಮ ಆಪ್ತ ಸಹಾಯಕನ್ನು ಪೊಲೀಸ್ ಠಾಣೆಗೆ ದೂರು ನೀಡಲು ಕಳುಹಿಸಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಗಮ್ದೇವಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

    ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದ ಸಂದರ್ಭದಲ್ಲಿ ಮನೆ ಕೆಲಸದಾತ ನಾಪತ್ತೆಯಾಗಿದ್ದನು. ಇದರಿಂದ ಸಂಶಯಗೊಂಡ ಪೊಲೀಸರು ವಿಶ್ವಕರ್ಮನನ್ನು ಟ್ರೇಸ್ ಮಾಡಿದ್ದಾರೆ. ಈ ವೇಳೆ ಆತ ದೆಹಲಿಯಲ್ಲಿರುವುದು ಗೊತ್ತಾಗಿದೆ. ಕೂಡಲೇ ಆತನನ್ನು ಬಂಧಿಸಿ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗಿದೆ. ವಿಚಾರಣೆಯ ವೇಳೆ ವಿಷ್ಣು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

    ಇದೇ ವೇಳೆ ಸಚಿವರ ಹಾರ್ಡ್ ಡಿಸ್ಕ್ ಕೂಡ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ನಾನು ಹಾರ್ಡ್ ಡಿಸ್ಕನ್ನು ಕದ್ದಿದ್ದೇನೆ. ಅಲ್ಲದೆ ಅದು ಸರಿ ಇದೆಯೋ ಇಲ್ಲವೋ ಎಂಬುದು ತಿಳಿಯಲು ಕಂಪ್ಯೂಟರ್ ಗೆ ಕನೆಕ್ಟ್ ಮಾಡಿದ್ದೇನೆ ಎಂದು ಅಧಿಕಾರಿಗಳ ಬಳಿ ವಿಷ್ಣು ಹೇಳಿದ್ದಾನೆ. ಈ ಹಿನ್ನೆಲೆಯಲ್ಲಿ ಪೊಲೀಸರು ಹಾರ್ಡ್ ಡಿಸ್ಕ್ ನಲ್ಲಿರುವ ಪ್ರಮುಖ ದಾಖಲೆಗಳನ್ನು ಸೋರಿಕೆ ಮಾಡಿದ್ದಾನೋ ಎಂಬುದರ ಬಗ್ಗೆಯೂ ಪರಿಶೀಲನೆ ನಡೆಸಿದ್ದಾರೆ.

    ಈ ಸಂಬಂಧ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 381(ಕಳ್ಳತನ) ಹಾಗೂ 405(ವಿಶ್ವಾಸದ್ರೋಹ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.