Tag: ಮನು ಕೆ ಶೆಟ್ಟಿಹಳ್ಳಿ

  • ರೈತರ ಪ್ರೀತಿ ಗಿಟ್ಟಿಸಿಕೊಂಡ ರಣಹೇಡಿ!

    ರೈತರ ಪ್ರೀತಿ ಗಿಟ್ಟಿಸಿಕೊಂಡ ರಣಹೇಡಿ!

    ನು ಕೆ ಶೆಟ್ಟಿಹಳ್ಳಿ ನಿರ್ದೇಶನದ ರಣಹೇಡಿ ಕಳೆದ ವಾರ ಬಿಡುಗಡೆಗೊಂಡಿತ್ತು. ಅನ್ನದಾತರ ಬದುಕಿನ ಕಥೆ ಎಂದ ಮೇಲೆ ಅದರತ್ತ ಒಂದು ಆಕರ್ಷಣೆ ಇದ್ದೇ ಇರುತ್ತದೆ. ಅಷ್ಟಕ್ಕೂ ಕನ್ನಡದ ಪ್ರೇಕ್ಷಕರೂ ಕೂಡ ಇಂತಹ ನೆಲದ ಕಂಪಿನ ಕಥೆಗಳಿಗಾಗಿ ಸದಾ ಕಾತರಿಸುತ್ತಿರುತ್ತಾರೆ. ಅದಕ್ಕೆ ತಕ್ಕುದಾದ ಕಥೆಯೊಂದಿಗೆ ಬಂದ ಈ ಚಿತ್ರಕ್ಕೆ ಮೊದಲ ದಿನವೇ ಪ್ರೇಕ್ಷಕರ ಪ್ರೀತಿ ಸಿಕ್ಕಿದೆ. ಆ ನಂತರದಲ್ಲಿ ದಿನ ಕಳೆದಂತೆ ಹೆಚ್ಚು ಹೆಚ್ಚು ಪ್ರೇಕ್ಷಕರನ್ನು ಸೆಳೆದುಕೊಳ್ಳುತ್ತಾ ಸಾಗಿ ಬಂದ ರಣಹೇಡಿ ಕ್ರಮೇಣ ರಾಜ್ಯದ ರೈತರ ಪ್ರೀತಿಯನ್ನೂ ಪಡೆದುಕೊಂಡಿದೆ. ಇದು ರಣಹೇಡಿಗೆ ಮತ್ತಷ್ಟು ಶಕ್ತಿ ತುಂಬಿದೆ. ಯಾವುದೇ ಚಿತ್ರದ ಗೆಲುವಿನಲ್ಲಿ ರೈತಾಪಿ ವರ್ಗದ ಪಾತ್ರ ಬಹಳಷ್ಟಿದೆ. ಅವರದ್ದೇ ಬದುಕು ಬವಣೆಯ ಕಥೆ ಹೊಂದಿರೋ ರಣಹೇಡಿಯನ್ನು ರಾಜ್ಯದ ರೈತರೆಲ್ಲರೂ ಮೆಚ್ಚಿ ಕೊಂಡಾಡುತ್ತಿದ್ದಾರೆ.

    ಸುರೇಶ್ ನಿರ್ಮಾಣದ ಈ ಚಿತ್ರದಲ್ಲಿ ರೈತ ಸಮುದಾಯದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ. ಅದನ್ನು ಪಕ್ಕಾ ಕಮರ್ಷಿಯಲ್ ಹಾದಿಯಲ್ಲಿಯೇ ನಿರೂಪಿಸಲಾಗಿದೆ. ಹಳ್ಳಿ ಜೀವನ ಅಂದಮೇಲೆ ಅಲ್ಲಿ ದ್ವೇಷ, ಅಸೂಯೆ, ಜಗಳ, ಕಾದಾಟಗಳೆಲ್ಲ ಇದ್ದಿದ್ದೇ. ಅದೇ ರೀತಿ ಇಲ್ಲಿಯೂ ಎರಡು ಫೈಟಿಂಗುಗಳಿವೆ. ಆದರೆ ಅದಕ್ಕೆ ಯಾವುದೇ ಬಿಲ್ಡಪ್ಪುಗಳನ್ನು ಅಳವಡಿಸಲಾಗಿಲ್ಲ. ಆ ನೈಜತೆಯಲ್ಲಿಯೂ ಈ ಸಾಹಸ ಸನ್ನಿವೇಶಗಳು ಮಿರುಗುವಂತೆ ಕಟ್ಟಿ ಕೊಡಲಾಗಿದೆ. ಯಾವ ಸ್ಟಾರ್ ಸಿನಿಮಾಗಳಿಗೂ ಕಮ್ಮಿಯಿಲ್ಲದಂತೆ ಮೂಡಿ ಬಂದಿರುವ ಈ ಚಿತ್ರವನ್ನು ರಾಜ್ಯಾದ್ಯಂತ ಜನ ಮೆಚ್ಚಿಕೊಂಡಿದ್ದಾರೆ. ದಿನದಿಂದ ದಿನಕ್ಕೆ ಹೆಚ್ಚೆಚ್ಚು ಪ್ರೇಕ್ಷಕರನ್ನು ಸೆಳೆದುಕೊಳ್ಳುತ್ತಿರುವ ಈ ಚಿತ್ರವೀಗ ಯಶಸ್ವೀ ಪ್ರದರ್ಶನ ಕಾಣುತ್ತಿದೆ.

    ಈ ಚಿತ್ರವನ್ನು ಕನ್ನಡ ಚಿತ್ರರಂಗದ ಸದಭಿರುಚಿಯ ನಿರ್ಮಾಪಕರಾದ ಸುರೇಶ್ ನಿರ್ಮಾಣ ಮಾಡಿದ್ದಾರೆ. ಇದು ರೈತರ ಕಥಾನಕ ಹೊಂದಿದ್ದರೂ ರಣಹೇಡಿ ಎಂಬ ಹೆಸರನ್ನು ಯಾಕಿಡಲಾಗಿದೆ ಅನ್ನೋ ಪ್ರಶ್ನೆ ಬಹುತೇಕರನ್ನು ಕಾಡುತ್ತಿತ್ತು. ಆದರೆ ರೈತ ರಣಹೇಡಿಯಲ್ಲ ಯೋಧ ಎಂಬಂತಹ ಕಥಾ ತಿರುಳನ್ನು ಈ ಸಿನಿಮಾ ಒಳಗೊಂಡಿದೆ ಎಂಬ ವಿಚಾರವೇ ರೈತ ಸಂಕುಲ ಇದರತ್ತ ಆಕರ್ಷಣೆಗೀಡಾಗಲು ಕಾರಣವಾಗಿದೆ. ಅಷ್ಟಕ್ಕೂ ರೈತರ ಬದುಕೇ ಒಂದು ಹೋರಾಟ. ಅದಕ್ಕೆ ತಕ್ಕುದಾಗಿಯೇ ಈ ಸಿನಿಮಾದಲ್ಲಿ ಮೈ ನವಿರೇಳಿಸುವಂತಹ ದೇಸೀ ಸಾಹಸ ಸನ್ನಿವೇಶಗಳೂ ಇವೆ. ಒಟ್ಟಾರೆಯಾಗಿ ಈ ಭಿನ್ನ ಹೂರಣವೇ ಜನರಿಗೆ ಹಿಡಿಸಿದೆ. ಇದರಿಂದಾಗಿಯೇ ಅಮೋಘ ಗೆಲುವು ರಣಹೇಡಿಯ ಕೈಹಿಡಿಯುವ ಸಾಧ್ಯತೆಗಳು ಮಿರುಗಲಾರಂಭಿಸಿವೆ.

  • ರಣಹೇಡಿ: ಕಥೆಗೆ ಮನಸೋತು ಕಾಸು ಹೂಡಿದ ಸುರೇಶ್ ಸಾಹಸ!

    ರಣಹೇಡಿ: ಕಥೆಗೆ ಮನಸೋತು ಕಾಸು ಹೂಡಿದ ಸುರೇಶ್ ಸಾಹಸ!

    ನ್ನಡ ಚಿತ್ರರಂಗದಲ್ಲಿ ಹೊಸ ಆಲೋಚನೆಯ ಪ್ರಕ್ರಿಯೆಗೆ ಯಾವ ಭಂಗವೂ ಇಲ್ಲ. ಆಗಾಗ ಸಿದ್ಧ ಸೂತ್ರದ ಚಿತ್ರಗಳ ಅಲೆಗೆದುರಾಗಿ ಇಂತಹ ಪ್ರಯೋಗಾತ್ಮಕ ಚಿತ್ರಗಳು ತೆರೆಗಾಣುತ್ತಿರುತ್ತವೆ. ಆದರೆ ಅದೆಷ್ಟೋ ಒಳ್ಳೆ ಕಥೆಗಳು, ಭಿನ್ನ ಆಲೋಚನೆಗಳು ಎಲ್ಲೆಲ್ಲೋ ಮಣ್ಣಾಗಿರುತ್ತವೆ. ಅದಕ್ಕೆ ಕಾರಣ ಅಭಿರುಚಿ ಹೊಂದಿರುವ, ವ್ಯವಹಾರವನ್ನು ಮೀರಿದ ಸಿನಿಮಾ ಪ್ರೇಮ ಹೊಂದಿರುವ ನಿರ್ಮಾಪಕರ ಕೊರತೆ. ಬಹುಶಃ ಸುರೇಶ್ ಅವರಂತಹ ಸದಭಿರುಚಿಯ ನಿರ್ಮಾಪಕರು ಸಿಗದಿದ್ದಿದ್ದರೆ ರಣಹೇಡಿ ಎಂಬ ಚಿತ್ರ ಕೂಡ ಎಲ್ಲಿಯೋ ಕಳೆದು ಹೋಗುತ್ತಿತ್ತು. ಈ ನೆಲದ ಕಂಪು ಹೊಂದಿರೋ ಈ ಕಥೆಯೂ ಕಣ್ಮರೆಯಾಗುತ್ತಿತ್ತು.

    ಸುರೇಶ್ ಈ ಹಿಂದೆಯೂ ಒಂದು ಸದಭಿರುಚಿಯ ಸಿನಿಮಾ ನಿರ್ಮಾಣ ಮಾಡಿದ್ದರು. ಹೆಚ್ಚಿನ ನಿರ್ಮಾಪಕರು ಪಕ್ಕಾ ಕಮರ್ಷಿಯಲ್ ವಿಧಾನದ ಸಿನಿಮಾಗಳತ್ತ ಮಾತ್ರವೇ ಆಕರ್ಷಿತರಾಗುತ್ತಾರೆ. ಆದರೆ ಸಮಾಜಮುಖಿಯಾದ, ಪ್ರೇಕ್ಷಕರಿಗೆ ದಾಟಿಕೊಳ್ಳಲೇ ಬೇಕಾದ ಕಥೆಯನ್ನೊಳಗೊಂಡಿರೋ ಸಿನಿಮಾಗಳತ್ತ ಒಲವು ಹೊಂದಿರುವವರು ಕಡಿಮೆಯೇ. ಆದರೆ ಸುರೇಶ್ ಅವರದ್ದು ಭಿನ್ನ ಅಭಿರುಚಿ. ವ್ಯಾಪಾರ-ವಹಿವಾಟುಗಳ ಪಾಡು ಏನೇ ಆದರೂ ತಾವು ನಿರ್ಮಾಣ ಮಾಡೋ ಸಿನಿಮಾಗಳು ಮಹತ್ವದ ಸಂದೇಶ ಕೊಡುವಂತಿರಬೇಕೆಂಬುದು ಸುರೇಶ್ ಅವರ ಅಭಿಲಾಷೆ. ಈ ಕಾರಣದಿಂದಲೇ ಮನು ಕೆ ಶೆಟ್ಟಿಹಳ್ಳಿಯವರ ಕಥೆಯನ್ನು ಮೆಚ್ಚಿಕೊಂಡು ರಣಹೇಡಿಯ ನಿರ್ಮಾಣದ ಹೊಣೆ ಹೊತ್ತುಕೊಂಡಿದ್ದಾರೆ.

    ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ಮೈಲಿಗಲ್ಲಿನಂತೆ ಮೂಡಿ ಬಂದಿದೆ ಎಂಬ ಭರವಸೆ ಸುರೇಶ್ ಅವರಲ್ಲಿದೆ. ಅವರು ಈ ಕಥೆಯನ್ನು ಇಷ್ಟೊಂದು ಇಷ್ಟಪಟ್ಟು ನಿರ್ಮಾಣ ಮಾಡೋ ರಿಸ್ಕ್ ತೆಗೆದುಕೊಳ್ಳಲು ಕಾರಣವಾಗಿರೋದು ಅದರಲ್ಲಿರೋ ಮಣ್ಣಿನ ಘಮ. ಇಲ್ಲಿ ರೈತಾಪಿ ವರ್ಗದ ತಲ್ಲಣಗಳ ಕಥೆಯಿದೆ. ಹೊಲದಿಂದ ಮೊದಲ್ಗೊಂಡು ಆ ರೈತಾಪಿ ವರ್ಗದ ಜೀವನ ಪದ್ಧತಿ, ಮರೆಯಾಗುತ್ತಿರೋ ಅಮೂಲ್ಯ ಆಚರಣೆಗಳನ್ನು ಕೂಡ ಪುನರ್ ಸೃಷ್ಟಿಸಿ ಈ ಜನರೇಷನ್ನಿಗೆ ತಲುಪಿಸುವಲ್ಲಿಯೂ ರಣಹೇಡಿ ಮಹತ್ವದ ಪಾತ್ರ ವಹಿಸಲಿದೆ. ಈ ಎಲ್ಲ ಕಾರಣದಿಂದ ಮಹತ್ವದ್ದಾಗಿ ಗುರುತಿಸಿಕೊಂಡಿರುವ ಈ ಚಿತ್ರ ಇದೇ ತಿಂಗಳ 29ರಂದು ಬಿಡುಗಡೆಯಾಗಲಿದೆ.

  • ಗ್ರಾಮೀಣ ಸೊಗಡಿನ ರಣಹೇಡಿ!

    ಗ್ರಾಮೀಣ ಸೊಗಡಿನ ರಣಹೇಡಿ!

    ಬೆಂಗಳೂರು: ಪಕ್ಕಾ ಕಮರ್ಶಿಯಲ್ ಜಾಡಿನ ಮಾಸ್ ಸಿನಿಮಾಗಳ ಜೊತೆ ಜೊತೆಗೆ ಗ್ರಾಮೀಣ ಸೊಗಡಿನ ಸಿನಿಮಾಗಳೂ ಆಗಾಗ ರೂಪುಗೊಳ್ಳುತ್ತಿರುತ್ತವೆ. ಅದರಲ್ಲಿಯೂ ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುತ್ತಲೇ ಆ ಭಾಗದ ಜನಜೀವನವನ್ನು ಅನಾವರಣಗೊಳಿಸುವ ಸಾಕಷ್ಟು ಸಿನಿಮಾಗಳು ಅಪರೂಪಕ್ಕಾದರೂ ನಿರ್ಮಾಣಗೊಳ್ಳುತ್ತಿರುತ್ತವೆ. ಅದೇ ಸಾಲಿನಲ್ಲಿ ತಯಾರಾಗಿ ಈಗ ಬಿಡುಗಡೆಗೆ ಸಜ್ಜುಗೊಂಡಿರೋ ಚಿತ್ರ ‘ರಣಹೇಡಿ’. ಒಂದಷ್ಟು ಕಾಲದಿಂದ ನಾನಾ ಬಗೆಯಲ್ಲಿ ಸುದ್ದಿ ಕೇಂದ್ರದಲ್ಲಿರುವ, ಪ್ರೇಕ್ಷಕರೆಲ್ಲರ ಕುತೂಹಲಕ್ಕೆ ಕಾರಣವಾಗಿರುವ ಈ ಚಿತ್ರವೀಗ ಇದೇ ನವೆಂಬರ್ 22ರಂದು ಬಿಡುಗಡೆಗೆ ರೆಡಿಯಾಗಿದೆ.

    ಮನು ಕೆ ಶೆಟ್ಟಿಹಳ್ಳಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಪ್ರಯಾಣಿಕರ ಗಮನಕ್ಕೆ ಎಂಬ ಸಿನಿಮಾ ನಿರ್ಮಾಣ ಮಾಡಿದ್ದ ಸುರೇಶ್ ಅವರೇ ಈ ಚಿತ್ರಕ್ಕೂ ಬಂಡವಾಳ ಹೂಡಿದ್ದಾರೆ. ಇಲ್ಲಿ ಈ ಹಿಂದೆ ಸಾಕಷ್ಟು ಪಾತ್ರಗಳಲ್ಲಿ ನಟಿಸಿರೋ ಕರ್ಣ ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ರವಿ ಹಿಸ್ಟರಿ, ಬಡ್ಡಿಮಗನ್ ಲೈಫು ಮುಂತಾದ ಸಿನಿಮಾಗಳಲ್ಲಿ ನಾಯಕಿಯಾಗಿದ್ದ ಐಶ್ವರ್ಯಾ ರಾವ್ ಇಲ್ಲಿ ಕೂಲಿ ಹುಡುಗಿಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಒಟ್ಟಾರೆಯಾಗಿ ಅಪ್ಪಟ ಗ್ರಾಮೀಣ ಸೊಗಡಿನೊಂದಿಗೆ ಈ ಚಿತ್ರ ಮೂಡಿ ಬಂದಿದೆ.

    ಹೊಸತನದ ಕಥೆಗಳಿಗೇ ಪ್ರಧಾನವಾಗಿ ಪ್ರಾಶಸ್ತ್ಯ ಕೊಡುವ ಸುರೇಶ್ ಅವರು ಈ ಹಿಂದೆ ಪ್ರಯಾಣಿಕರ ಗಮನಕ್ಕೆ ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಆ ನಂತರದಲ್ಲಿ ಗ್ರಾಮ್ಯ ಕಥನಕ್ಕೆ ಮನಸೋತು ಈ ಚಿತ್ರವನ್ನು ನಿರ್ಮಾಣ ಮಾಡಲು ಒಪ್ಪಿಕೊಂಡಿದ್ದಾರೆ. ಇದು ಕೇವಲ ಗ್ರಾಮೀಣ ಸೊಗಡಿನ ಕಥೆ ಮಾತ್ರವಲ್ಲ. ಇಲ್ಲಿ ರೈತರ ಸಮಸ್ಯೆಗಳತ್ತ ಬೆಳಕು ಹರಿಸಲಾಗಿದೆ. ನಿಜವಾಗಿಯೂ ಬೆಳೆಯನ್ನೇ ನಂಬಿ ಬದುಕೋ ರೈತ ಯಾವ್ಯಾವ ಸಮಸ್ಯೆಗಳನ್ನು ಎದುರಿಸಿ ನಲುಗುತ್ತಾನೆಂಬುದರ ಚಿತ್ರಣವೂ ಇಲ್ಲಿದೆಯಂತೆ. ಇದೆಲ್ಲವನ್ನೂ ಕಮರ್ಶಿಯಲ್ ಹಾದಿಯಲ್ಲಿ ಹೇಳುತ್ತಲೇ ಮಜವಾದ ಹೂರಣವನ್ನು ಬಿಚ್ಚಿಡಲಿರೋ ಈ ಸಿನಿಮಾ ಇನ್ನು ವಾರದೊಪ್ಪತ್ತಿನಲ್ಲಿಯೇ ಚಿತ್ರಮಂದಿರ ತಲುಪಿಕೊಳ್ಳಲಿದೆ.