Tag: ಮನೀಶ್ ಪಾಂಡೆ

  • ಆಫ್ರಿಕಾ ವಿರುದ್ಧದ ಏಕದಿನ ಸರಣಿ ಟೀಂ ಇಂಡಿಯಾ ಪ್ರಕಟ- ಯಾರಾಗ್ತಾರೆ ಕೀಪರ್?

    ಆಫ್ರಿಕಾ ವಿರುದ್ಧದ ಏಕದಿನ ಸರಣಿ ಟೀಂ ಇಂಡಿಯಾ ಪ್ರಕಟ- ಯಾರಾಗ್ತಾರೆ ಕೀಪರ್?

    – ವಿರಾಟ್‍ಗೆ ಇಲ್ಲ ವಿಶ್ರಾಂತಿ, ಹಾರ್ದಿಕ್, ಭುಮಿ ಕಮ್‍ಬ್ಯಾಕ್
    – ರಾಹುಲ್, ರಿಷಬ್ ಇಬ್ಬರಿಗೆ ಅವಕಾಶ

    ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಟೀಂ ಇಂಡಿಯಾ ಆಟಗಾರರ ಪಟ್ಟಿ ಬಿಡುಗಡೆಯಾಗಿದ್ದು, ಕನ್ನಡಿಗರಾದ ಕೆ.ಎಲ್.ರಾಹುಲ್ ಹಾಗೂ ಮನೀಶ್ ಪಾಂಡೆ ಸ್ಥಾನ ಪಡೆದುಕೊಂಡಿದ್ದಾರೆ.

    ಗಾಯದಿಂದ ಚೇತರಿಸಿಕೊಂಡ ಅನುಭವಿ ಆಟಗಾರ, ಓಪನರ್ ಬ್ಯಾಟ್ಸ್‌ಮನ್ ಶಿಖರ್ ಧವನ್ ಮತ್ತು ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ತಂಡಕ್ಕೆ ಮರಳಿದ್ದಾರೆ. ಆದರೆ, ಹಿಟ್‍ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಅವರು ಗಾಯದಿಂದ ಇನ್ನೂ ಚೇತರಿಸಿಕೊಳ್ಳದೆ ಇರುವುದರಿಂದ ಅವರನ್ನು ಕೈಬಿಡಲಾಗಿದೆ.

    ಟೀಂ ಇಂಡಿಯಾದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಕೂಡ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಆಡುವ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಭುವಿ ಕೂಡ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಭುವನೇಶ್ವರ್ ಕುಮಾರ್ ಅವರು ಹಾರ್ದಿಕ್ ಪಾಂಡ್ಯ ಮತ್ತು ಜಸ್‍ಪ್ರೀತ್ ಬುಮ್ರಾ ಅವರೊಂದಿಗೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಸ್ವಲ್ಪ ಸಮಯ ಕಳೆದಿದ್ದರು. ಏಕದಿನ ಸರಣಿಯ ತಂಡದಲ್ಲಿ ಯುವ ಆಟಗಾರ ಶುಭ್‍ಮನ್ ಗಿಲ್ ಅವರನ್ನು ಉಳಿಸಿಕೊಳ್ಳಲಾಗಿದೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಅವರಿಗೆ ಅವಕಾಶ ಸಿಕ್ಕಿರಲಿಲ್ಲ.

    ಮೂವರು ವೇಗದ ಬೌಲರ್‌ಗಳು:
    ದಕ್ಷಿಣ ಆಫ್ರಿಕಾ ಸರಣಿಯಲ್ಲಿ ವೇಗದ ಬೌಲರ್ ಗಳಾದ ಜಸ್‍ಪ್ರೀತ್ ಬುಮ್ರಾ, ನವದೀಪ್ ಸೈನಿ ಹಾಗೂ ಭುವನೇಶ್ವರ್ ಕುಮಾರ್ ಸ್ಥಾನ ಪಡೆದುಕೊಂಡಿದ್ದಾರೆ. ಅನುಭವಿ ಆಟಗಾರ ಮೊಹಮ್ಮದ್ ಶಮಿ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕ ವಿರಾಟ್ ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‍ಗೆ ಇಳಿಸುವ ಸಾಧ್ಯತೆ ಇದೆ.

    ಭಾರತದ ಸ್ಪಿನ್ ಪಡೆಯಲ್ಲಿ ಆಲ್‍ರೌಂಡರ್ ರವೀಂದ್ರ ಜಡೇಜಾ ಹಾಗೂ ಯಜುವೇಂದ್ರ ಚಹಲ್ ಸ್ಥಾನ ಪಡೆದಿದ್ದಾರೆ. ಆದರೆ ಕುಲದೀಪ್ ಯಾದವ್ ಅವರನ್ನು ಇತರೆ ಆಟಗಾರರ ಪಟ್ಟಿಯಲ್ಲಿ ಇರಿಸಲಾಗಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್‍ನಲ್ಲಿ ಬಲವಾಗಿ ಕಾಣುತ್ತಿದೆ.

    ವಿಕೆಟ್ ಕೀಪರ್ ಯಾರು?
    ಟೀಂ ಇಂಡಿಯಾ ಕ್ರಿಕೆಟ್ ಆಯ್ಕೆ ಸಮಿತಿಯು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಯಾರು ವಿಕೆಟ್ ಕೀಪರ್ ಜವಾಬ್ದಾರಿ ನಿರ್ವಹಿಸುತ್ತಾರೆ ಎನ್ನುವ ಬಗ್ಗೆ ಮಾಹಿತಿ ನೀಡಿಲ್ಲ. ನ್ಯೂಜಿಲೆಂಡ್ ಪ್ರಸಾದ ವೇಳೆ 3 ಏಕದಿನ ಪಂದ್ಯ ಹಾಗೂ 5 ಟಿ20 ಪಂದ್ಯಗಳಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಕೀಪಿಂಗ್ ಜವಾಬ್ದಾರಿ ಹಾಗೂ ಎರಡನ್ನೂ ಸಮರ್ಥವಾಗಿ ನಿಭಾಯಿಸಿ ಸೈ ಎನಿಸಿಕೊಂಡಿದ್ದರು. ಹೀಗಾಗಿ ವಿಕೆಟ್ ಕೀಪಿಂಗ್ ಜವಾಬ್ದಾರಿ ಯಾರ ಹೆಗಲಿಗೆ ಬೀಳುತ್ತದೆ ಎನ್ನುವುದು ಸ್ಪಷ್ಟವಾಗಿಲ್ಲ.

     

    ವೇಳಾಪಟ್ಟಿ:
    ದಕ್ಷಿಣ ಆಫ್ರಿಕಾ ಏಕದಿನ ಸರಣಿಯ ಮೊದಲ ಪಂದ್ಯ ಧರ್ಮಶಾಲದಲ್ಲಿ ಮಾರ್ಚ್ 12ರಂದು ಮಧ್ಯಾಹ್ನ 1.30 ರಿಂದ ಆರಂಭವಾಗಲಿದೆ. ಎರಡನೇ ಪಂದ್ಯವು ಲಕ್ನೋದಲ್ಲಿ ಮಾರ್ಚ್ 15ರಂದು ಮಧ್ಯಾಹ್ನ 1.30 ರಿಂದ ನಡೆಯಲಿದೆ. ಕೊನೆಯ ಹಾಗೂ ಮೂರನೇ ಪಂದ್ಯ ಕೋಲ್ಕತ್ತಾದಲ್ಲಿ ಮಾರ್ಚ್ 18ರಂದು ಮಧ್ಯಾಹ್ನ 1.30 ರಿಂದ ನಡೆಯಲಿದೆ.

    ಭಾರತ ತಂಡ:
    ಶಿಖರ್ ಧವನ್, ಪೃಥ್ವಿ ಶಾ, ವಿರಾಟ್ ಕೊಹ್ಲಿ (ನಾಯಕ), ಕೆ.ಎಲ್.ರಾಹುಲ್, ಮನೀಶ್ ಪಾಂಡೆ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಯಜುವೇಂದ್ರ ಚಹಲ್, ಜಸ್‍ಪ್ರೀತ್ ಬುಮ್ರಾ ಇದ್ದಾರೆ. ಇತರೆ ಆಟಗಾರರ ಪಟ್ಟಿಯಲ್ಲಿ ನವದೀಪ್ ಸೈನಿ, ಕುಲದೀಪ್ ಯಾದವ್, ಶುಭ್‍ಮನ್ ಗಿಲ್.

  • ಕುಕ್ಕೆ ಸುಬ್ರಹ್ಮಣ್ಯನ ದರ್ಶನ ಪಡೆದ ಮನೀಶ್ ಪಾಂಡೆ ದಂಪತಿ

    ಕುಕ್ಕೆ ಸುಬ್ರಹ್ಮಣ್ಯನ ದರ್ಶನ ಪಡೆದ ಮನೀಶ್ ಪಾಂಡೆ ದಂಪತಿ

    ಮಂಗಳೂರು: ಭಾರತ ಕ್ರಿಕೆಟ್ ತಂಡದ ಆಟಗಾರ ಹಾಗೂ ಕರ್ನಾಟಕ ಏಕದಿನ ತಂಡದ ನಾಯಕ ಮನೀಶ್ ಪಾಂಡೆ ತಮ್ಮ ಪತ್ನಿ ಜೊತೆ ತುಳುನಾಡಿನ ಪ್ರಸಿದ್ಧ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಾಸ್ಥಾನಕ್ಕೆ ಭೇಟಿ ನೀಡಿದ್ದಾರೆ.

    ಮನೀಶ್ ಪಾಂಡೆ ತಮ್ಮ ಪತ್ನಿ ಆಶ್ರಿತಾ ಶೆಟ್ಟಿ ಜೊತೆ ಇಂದು ಶ್ರೀಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಪಡೆದರು. ಕಳೆದ ಡಿಸೆಂಬರ್ ತಿಂಗಳಿನಲ್ಲಿ ಮನೀಶ್ ಪಾಂಡೆ ವಿವಾಹ ತುಳುನಾಡಿನ ಬೆಡಗಿ, ತಮಿಳು ಹಾಗೂ ತುಳು ನಟಿ ಆಶ್ರಿತಾ ಶೆಟ್ಟಿ ಜೊತೆ ಮುಂಬೈಯಲ್ಲಿ ನಡೆದಿತ್ತು. ವಿವಾಹದ ಬಳಿಕ ದಂಪತಿ ಮೊದಲ ಬಾರಿಗೆ ಕುಕ್ಕೆ ಕ್ಷೇತ್ರಕ್ಕೆ ಬಂದಿದ್ದಾರೆ. ಇದನ್ನೂ ಓದಿ: ರಾತ್ರಿ ಟ್ರೋಫಿ ಗೆದ್ದು ಮರುದಿನ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮನೀಶ್ ಪಾಂಡೆ

    ಮಾರ್ಚ್ 6 ರಂದು ಕುಕ್ಕೆ ಸುಬ್ರಹಣ್ಯಕ್ಕೆ ತಮ್ಮ ಗೆಳೆಯನ ಜೊತೆ ಆಗಮಿಸಿದ ದಂಪತಿ ಇಲ್ಲಿನ ಖಾಸಗಿ ಹೋಟೆಲ್ ಒಂದರಲ್ಲಿ ತಂಗಿದ್ದರು. ಇಂದು ಬೆಳಿಗ್ಗೆ ದಂಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ನಾಗದೇವರಿಗೆ ವಿಶೇಷ ಪೂಜೆಯಾದ ಆಶ್ಲೇಷ ಪೂಜೆಯನ್ನು ನೆರೆವೇರಿಸಿದರು. ಬಳಿಕ ಆದಿ ಸುಬ್ರಹ್ಮಣ್ಯ ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ದೇವರ ದರ್ಶನ ಪಡೆದರು.

  • ಜಮ್ಮು-ಕಾಶ್ಮೀರ ವಿರುದ್ಧ ಭರ್ಜರಿ ಬ್ಯಾಟಿಂಗ್- ಸೆಮಿಯತ್ತ ಕರ್ನಾಟಕ?

    ಜಮ್ಮು-ಕಾಶ್ಮೀರ ವಿರುದ್ಧ ಭರ್ಜರಿ ಬ್ಯಾಟಿಂಗ್- ಸೆಮಿಯತ್ತ ಕರ್ನಾಟಕ?

    ಜಮ್ಮು: ಆರ್.ಸಿದ್ದಾರ್ಥ್, ಮನೀಶ್ ಪಾಂಡೆ ಹಾಗೂ ದೇವದತ್ತ ಪಡಿಕ್ಕಲ್ ಉತ್ತಮ ಬ್ಯಾಟಿಂಗ್‍ನಿಂದ ಕರ್ನಾಟಕ ತಂಡವು ಸೆಮಿ ಫೈನಲ್ ಪ್ರವೇಶದ ಭರವಸೆಯನ್ನು ಮೂಡಿಸಿದೆ.

    ರಣಜಿಯ ಟ್ರೋಫಿ 2019-20ರ ಭಾಗವಾಗಿ ಜಮ್ಮುವಿನ ಗಾಂಧಿ ಮೆಮೊರಿಯಲ್ ಸರ್ಕಾರಿ ಸೈನ್ಸ್ ಕಾಲೇಜಿನ ಮೈದಾನದಲ್ಲಿ ನಡೆಯುತ್ತಿರುವ ಜಮ್ಮು-ಕಾಶ್ಮೀರ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ಉತ್ತಮ ಮುನ್ನಡೆ ಸಾಧಿಸಿದೆ.

    ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಮೊದಲ ಇನ್ನಿಂಗ್ಸ್ ಆರಂಭಿಸಿದ್ದ ಕರ್ನಾಟಕ ತಂಡವು 69.1 ಓವರಿಗೆ 206 ರನ್ ಗಳಿಸಿ ಸರ್ವಪತನ ಕಂಡಿತ್ತು. ಈ ವೇಳೆ ಕರ್ನಾಟಕದ ಕೆ.ವಿ.ಸಿದ್ದಾರ್ಥ್ 76 ರನ್ (189 ಎಸೆತ, 9 ಬೌಂಡರಿ), ಮನೀಶ್ ಪಾಂಡೆ 37 ರನ್ (26 ಎಸೆತ, 7 ಬೌಂಡರಿ) ಗಳಿಸಿದ್ದರು.

    ಬಳಿಕ ಬ್ಯಾಟಿಂಗ್ ಆರಂಭಿಸಿದ ಜಮ್ಮು-ಕಾಶ್ಮೀರ ತಂಡವು ಆರಂಭದಲ್ಲೇ ಆಘಾತಕ್ಕೆ ತುತ್ತಾಗಿತ್ತು. ಪ್ರಮುಖ ಬ್ಯಾಟ್ಸ್‌ಮನ್‌ ಸೂರ್ಯಾಂಶ್ ರೈನಾ 12 ರನ್‍ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು. ಬಳಿಕ ಬಂದ ಬ್ಯಾಟ್ಸ್‌ಮನ್‌ಗಳು ಬಹುಬೇಗ ವಿಕೆಟ್ ಒಪ್ಪಿಸಿ ಪೆವಿಲಿಯನ್ ಕಡೆಗೆ ಪರೇಡ್ ನಡೆಸಿದರು. ಪರಿಣಾಮ ಜಮ್ಮು-ಕಾಶ್ಮೀರ 62.4 ಓವರ್‌ಗಳಲ್ಲಿ 192 ಆಲೌಟ್ ಆಯಿತು. ಈ ಮೂಲಕ ಕರ್ನಾಟಕ ತಂಡವು ಮೊದಲ ಇನ್ನಿಂಗ್ಸ್ ನಲ್ಲಿ 14 ರನ್ ಮುನ್ನಡೆ ಸಾಧಿಸಿತ್ತು.

    ಈ ಸಮಯದಲ್ಲಿ ಜಮ್ಮು-ಕಾಶ್ಮೀರದ ಪರ ಶುಭಂ ಖಜುರಿಯಾ 62 ರನ್ (155 ಎಸೆತ, 10 ಬೌಂಡರಿ) ಹಾಗೂ ಅಬ್ದುಲ್ ಸಾಮದ್ 43 ರನ್ (50 ಎಸೆತ, 6 ಬೌಂಡರಿ, 1 ಸಿಕ್ಸ್) ಗಳಿಸಿದ್ದರು. ಕರ್ನಾಟಕದ ಪರ ಪ್ರಸಿದ್ಧ ಕೃಷ್ಣ 4 ವಿಕೆಟ್ ಪಡೆದು ಮಿಂಚಿದರೆ, ರೋನಿತ್ ಮೊರೆ ಹಾಗೂ ಸುಚಿತ್ ಜಿ ತಲಾ ಎರಡು ವಿಕೆಟ್ ಕಿತ್ತಿದ್ದರು. ಉಳಿದಂತೆ ಗೌತಮ್ ಕೆ ಒಂದು ವಿಕೆಟ್ ಪಡೆದರೆ, ಅಭಿಮನ್ಯು ಮಿಥುನ್ ಯಾವುದೇ ವಿಕೆಟ್ ಪಡೆಯದಿದ್ದರೂ ಕನಿಷ್ಠ 25 ರನ್ ನೀಡಿದ್ದರು.

    ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಕರ್ನಾಟಕ ಉತ್ತಮ ಆರಂಭ ನೀಡಿತು. ಆರ್.ಸಮರ್ಥ್ ಹಾಗೂ ದೇವದತ್ತ ಪಡಿಕ್ಕಲ್ ಜೋಡಿಯು ಮೊದಲ ವಿಕೆಟ್‍ಗೆ 53 ರನ್‍ಗಳ ಕೊಡುಗೆ ನೀಡಿತು. ದೇವದತ್ತ 34 ರನ್ (33 ಎಸೆತ, 8 ಬೌಂಡರಿ) ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಮೈದಾನಕ್ಕಿಳಿ ನಾಯಕ ಕರುಣ್ ನಾಯರ್ 15 ರನ್ (33 ಎಸೆತ, 2 ಬೌಂಡರಿ) ದಾಖಲಿಸಿ ವಿಕೆಟ್ ಕಳೆದುಕೊಂಡರು. ಈ ಬೆನ್ನಲ್ಲೇ ಮೈದಾಕ್ಕಿಳಿದ ಸಿದ್ದಾರ್ಥ್ ಆರಂಭಿಕ ಬ್ಯಾಟ್ಸ್‌ಮನ್ ಸಮರ್ಥ್ ಜೊತೆ ಸೇರಿ ಉತ್ತಮ ಇನ್ನಿಂಗ್ಸ್ ಕಟ್ಟಿದರು. ಈ ಜೋಡಿಯು ಮೂರನೇ ವಿಕೆಟ್‍ಗೆ 98 ರನ್ ಕೊಡುಗೆ ನೀಡಿತು. ಸಮರ್ಥ್ 74 ರನ್ (133 ಎಸೆತ, 7 ಬೌಂಡರಿ) ಗಳಿಸಿ ವಿಕೆಟ್ ಒಪ್ಪಿಸಿದರು.

    5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಮನೀಶ್ ಪಾಂಡೆ 35 ರನ್ (35 ಎಸೆತ, 5 ಬೌಂಡರಿ, 1 ಸಿಕ್ಸ್) ಗಳಿಸಿ ವಿಕೆಟ್ ಒಪ್ಪಿಸಿದರು. 4ನೇ ದಿನದ ಮುಕ್ತಾಯದ ವೇಳೆಗೆ ಕರ್ನಾಟಕ ತಣಡವು 4 ವಿಕೆಟ್ ನಷ್ಟಕ್ಕೆ 245 ರನ್ ಪೇರಿಸಿದೆ. ಸಿದ್ದಾರ್ಥ್ 75 ರನ್ (136 ಎಸೆತ, 6 ಬೌಂಡರಿ, 2 ಸಿಕ್ಸರ್) ಹಾಗೂ ಎಸ್.ಶರತ್ 9 ರನ್ (33 ಎಸೆತ) ಗಳಿಸಿ ಅಜೇಯರಾಗಿ ಉಳಿದಿದ್ದಾರೆ.

    ಕರ್ನಾಟಕ ಈಗ 259 ರನ್ ಗಳ ಭರ್ಜರಿ ಮುನ್ನಡೆ ಸಾಧಿಸಿದೆ. ಮೊದಲ ಎರಡು ದಿನ ಆಟ ನಡೆಯದ ಕಾರಣ ಮತ್ತೆ ಮೂರು ದಿನ ಪಂದ್ಯ ನಡೆಯದೇ ಇದ್ದಲ್ಲಿ ಲೀಗ್ ಪಂದ್ಯ ಅಂಕದ ಆಧಾರದಲ್ಲಿ ಜಮ್ಮು ಕಾಶ್ಮೀರ ಸೆಮಿಫೈನಲ್ ಸುಲಭವಾಗಿ ಪ್ರವೇಶಿಸುತಿತ್ತು. ಆದರೆ ಈಗ ಕರ್ನಾಟಕ ಮೊದಲ ಇನ್ನಿಂಗ್ಸ್ ನಲ್ಲಿ 14 ರನ್ ಗಳ ಮುನ್ನಡೆ ಸಾಧಿಸಿದ ಹಿನ್ನೆಲೆಯಲ್ಲಿ ಸೆಮಿ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ. ಜಮ್ಮು ಕಾಶ್ಮೀರ ಸೆಮಿ ಪ್ರವೇಶಿಸಬೇಕಾದರೆ ಸೋಮವಾರ ಕರ್ನಾಟಕವನ್ನು ಬೇಗನೇ ಆಲ್ ಔಟ್ ಮಾಡಿ ಚೇಸಿಂಗ್ ಮಾಡಿ ಜಯಗಳಿಸುವ ಅನಿವಾರ್ಯತೆ ಎದುರಾಗಿದೆ.

  • ‘ಬೇಡ ಮಗಾ ಬೇಡ, ನಾರ್ಮಲ್ ಆಡು’- ಕಿವೀಸ್ ನೆಲದಲ್ಲಿ ಕನ್ನಡ ಡಿಂಡಿಮ

    ‘ಬೇಡ ಮಗಾ ಬೇಡ, ನಾರ್ಮಲ್ ಆಡು’- ಕಿವೀಸ್ ನೆಲದಲ್ಲಿ ಕನ್ನಡ ಡಿಂಡಿಮ

    – ಕನ್ನಡಿಗರ ಮನಗೆದ್ದ ರಾಹುಲ್-ಪಾಂಡೆ ಮಾತು
    – ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 5 ವಿಕೆಟ್ ಸೋಲು
    – ರಾಹುಲ್ ಶತಕ, ಚಹಲ್ ಉತ್ತಮ ಬೌಲಿಂಗ್ ವ್ಯರ್ಥ

    ಮೌಂಟ್ ಮಾಂಗನುಯಿ: ಟೀಂ ಇಂಡಿಯಾದಲ್ಲಿ ಮತ್ತೆ ಕನ್ನಡಿಗರ ಕಮಾಲ್ ಶುರುವಾಗಿದೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಕೊನೆಯ ಹಾಗೂ ಮೂರನೇ ಪಂದ್ಯದಲ್ಲಿ ಮೂವರು ಕನ್ನಡಿಗರು ಆಡುವ ಇಲೆವೆನ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದರು. ಈ ವೇಳೆ ರನ್ ಓಡುವಾಗ ಕೆ.ಎಲ್.ರಾಹುಲ್ ಹಾಗೂ ಮನೀಶ್ ಪಾಂಡೆ ಕನ್ನಡದಲ್ಲೇ ಮಾತನಾಡಿದ್ದಾರೆ.

    ಇಂದಿನ ಪಂದ್ಯದಲ್ಲಿ ಕೆ.ಎಲ್.ರಾಹುಲ್, ಮಯಾಂಕ್ ಅಗರ್ವಾಲ್ ಹಾಗೂ ಮನೀಶ್ ಪಾಂಡೆ ಆಡಿದರು. ಅದರಲ್ಲೂ ಮನೀಶ್ ಪಾಂಡೆ ಹಾಗೂ ಕೆ.ಎಲ್.ರಾಹುಲ್ ಜೋಡಿ ಮೈದಾನದಲ್ಲಿ ಕಮಾಲ್ ಮಾಡಿತು. ಭಾರತದ ಇನ್ನಿಂಗ್ಸ್ ನ 31ನೇ ಓವರಿನಲ್ಲಿ ಶ್ರೇಯಸ್ ಅಯ್ಯರ್ ವಿಕೆಟ್ ಒಪ್ಪಿಸಿದರು. ಈ ವೇಳೆ ಟೀಂ ಇಂಡಿಯಾ 162 ರನ್ ಗಳಿಸಿತ್ತು. ಬಳಿಕ ಕೆ.ಎಲ್.ರಾಹುಲ್‍ಗೆ ಮನೀಶ್ ಪಾಂಡೆ ಸಾಥ್ ನೀಡಿದರು. ಈ ಜೋಡಿ 5ನೇ ವಿಕೆಟ್‍ಗೆ 107 ರನ್‍ಗಳ ಜೊತೆಯಾಟದ ಕೊಡುಗೆ ನೀಡಿತು.

    ಇನ್ನಿಂಗ್ಸ್ 41 ಓವರಿನಲ್ಲಿ ರಾಹುಲ್, ‘ಮೆತ್ತಗೆ ಆಡಬೇಕಾ ಮಾಮ್ಸ್’ ಎಂದು ಮನೀಶ್ ಪಾಂಡೆ ಅವರನ್ನು ಪ್ರಶ್ನಿಸಿದರು. ಆಗ ಪಾಂಡೆ, ‘ಹೌದು ನಾರ್ಮಲ್ ಆಡು’ ಎಂದು ಹೇಳಿದರು. ಈ ಸಂಭಾಷಣೆ ಸ್ಟಂಪ್ ನಲ್ಲಿರುವ ಮೈಕ್ ನಲ್ಲಿ ದಾಖಲಾಗಿದೆ. ಅಷ್ಟೇ ಅಲ್ಲದೆ 45 ನೇ ಓವರಿನಲ್ಲಿ ಸ್ಟ್ರೈಕ್‍ನಲ್ಲಿದ್ದ ರಾಹುಲ್ ಎರಡು ರನ್ ಕದಿಯಲು ಮುಂದಾದರು. ಆಗ ಇಬ್ಬರು ‘ಬಾ.. ಬಾ.. ಬೇಡ ಬೇಡ’ ಎಂದು ಹೇಳಿದರು. ಬಳಿಕ ಮನೀಶ್ ಪಾಂಡೆ ಒಂಟಿ ರನ್ ಓಡಲು ಯತ್ನಿಸಿದರು. ಆದರೆ ನಾನ್ ಸ್ಟ್ರೈಕ್‍ನಲ್ಲಿದ್ದ ಕೆ.ಎಲ್ ರಾಹುಲ್ ಮನೀಶ್ ಪಾಂಡೆಗೆ ‘ಬೇಡ ಬೇಡ’ ಎಂದು ಜೋರಾಗಿ ಕೂಗಿದರು. ಪಂದ್ಯದಲ್ಲಿ ಕನ್ನಡದ ಮತು ಕೇಳಿದ ಕನ್ನಡಿಗರು ಫುಲ್ ಖುಷ್ ಆಗಿದ್ದಾರೆ.

    ಕೆ.ಎಲ್.ರಾಹುಲ್ 112 ರನ್ (113 ಎಸೆತ, 9 ಬೌಂಡರಿ ಹಾಗೂ 2 ಸಿಕ್ಸರ್) ಸಿಡಿಸಿ ವಿಕೆಟ್ ಒಪ್ಪಿಸಿದರು. ಈ ಬೆನ್ನಲ್ಲೇ ಮನೀಶ್ ಪಾಂಡೆ 42 ರನ್ (48 ಎಸೆತ, 2 ಬೌಂಡರಿ) ಗಳಿಸಿ ವಿಕೆಟ್ ಕಳೆದುಕೊಂಡರು. ಈ ಇಬ್ಬರು ಕರ್ನಾಟಕದ ಆಟಗಾರರು. ಅಷ್ಟೇ ಅಲ್ಲದೆ ಉತ್ತಮ ಸ್ನೇಹಿತರೂ ಹೌದು. ಭಾರತದ ಇನ್ನಿಂಗ್ಸ್ ವೇಳೆ ರಾಹುಲ್ ಮತ್ತು ಮನೀಶ್ ಪಾಂಡೆ ಕನ್ನಡದಲ್ಲಿ ಮಾತನಾಡಿ ಕನ್ನಡಿಗರ ಮನಗೆದ್ದಿದ್ದಾರೆ.

    ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಕೊನೆಯ ಹಾಗೂ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದೆ. ಆರಂಭಿಕ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ಪರಿಣಾಮ ಕೊಹ್ಲಿ ಪಡೆ 300 ಗಡಿ ದಾಟಲು ಸಾಧ್ಯವಾಗಲಿಲ್ಲ. ಈ ಪಂದ್ಯದಲ್ಲೂ ವಿರಾಟ್ ಕೊಹ್ಲಿ ಎರಡಂಕಿ ದಾಡುವಲ್ಲಿ ವಿಫಲರಾದರು. ಕೆ.ಎಲ್.ರಾಹುಲ್ 112 ರನ್ (113 ಎಸೆತ, 9 ಬೌಂಡರಿ ಹಾಗೂ 2 ಸಿಕ್ಸರ್), ಶ್ರೇಯಸ್ ಅಯ್ಯರ್ 62 ರನ್ (63 ಎಸೆತ, 9 ಬೌಂಡರಿ), ಮನೀಶ್ ಪಾಂಡೆ 42 ರನ್ (48 ಎಸೆತ, 2 ಬೌಂಡರಿ) ಹಾಗೂ ಪೃಥ್ವಿ ಶಾ 40 ರನ್ (42 ಎಸೆತ, 3 ಬೌಂಡರಿ, 2 ಸಿಕ್ಸ್) ಸಹಾಯದಿಂದ ಭಾರತ 7 ವಿಕೆಟ್‍ಗೆ 296 ರನ್ ಪೇರಿಸಿತ್ತು.

    ಟೀಂ ಇಂಡಿಯಾ ನೀಡಿದ್ದ ಸಾಧಾರಣ ರನ್ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ 47.1 ಓವರಿನಲ್ಲಿ 5 ವಿಕೆಟ್‍ಗೆ 300 ರನ್ ಸಿಡಿಸಿ ಭರ್ಜರಿ ಗೆಲುವು ಸಾಧಿಸಿತು. ನ್ಯೂಜಿಲೆಂಡ್ ಭಾರತದ ವಿರುದ್ಧ 3-0 ಅಂತರದಿಂದ ಕ್ಲೀನ್‍ಸ್ವೀಪ್ ಮೂಲಕ ಸರಣಿಯನ್ನು ಗೆದ್ದು ಬೀಗಿದೆ. ನ್ಯೂಜಿಲೆಂಡ್ ಪರ ಮಾರ್ಟಿನ್ ಗಪ್ಟಿಲ್ 66 ರನ್ (46 ಎಸೆತ, 6 ಬೌಂಡರಿ, 4 ಸಿಕ್ಸರ್), ನಿಕೋಲಸ್ 80 ರನ್ (103 ಎಸೆತ, 9 ಬೌಂಡರಿ), ಗ್ಯಾಂಡ್‍ಹೋಮ್ ಔಟಾಗದೆ 58 ರನ್ (28 ಎಸೆತ, 6 ಬೌಂಡರಿ, 3 ಸಿಕ್ಸರ್) ಗಳಿಸಿದರು.

  • ಟೀಂ ಇಂಡಿಯಾದಲ್ಲಿ ಕನ್ನಡಿಗರ ಕಮಾಲ್

    ಟೀಂ ಇಂಡಿಯಾದಲ್ಲಿ ಕನ್ನಡಿಗರ ಕಮಾಲ್

    ನ್ಯೂಜಿಲೆಂಡ್: ಟೀಂ ಇಂಡಿಯಾದಲ್ಲಿ ಕನ್ನಡಿಗರು ಕಮಾಲ್ ಮಾಡಲು ಸಿದ್ಧರಾಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಮೂವರು ಕನ್ನಡಿಗರು ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಬ್ಯಾಟ್ಸ್‌ಮನ್‌ಗಳಾದ ಕೆ.ಎಲ್.ರಾಹುಲ್, ಮನೀಶ್ ಪಾಂಡೆ ಬಳಿಕ ಈಗ ಮಯಾಂಕ್ ಅಗರ್ವಾಲ್ ತಂಡ ಸೇರಿಕೊಂಡಿದ್ದಾರೆ.

    ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾದ ಕ್ಯಾಪನ್ನು ಮಯಾಂಕ್ ಅಗರ್ವಾಲ್ ತೊಡಲಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಲಿದ್ದಾರೆ. ಈಗಾಗಲೇ ಟೆಸ್ಟ್‍ನಲ್ಲಿ ಕೊಟ್ಟ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡಿರುವ ಮಯಾಂಕ್ ಅಗರ್ವಾಲ್ ಏಕದಿನ ಕ್ರಿಕೆಟ್‍ನಲ್ಲಿ ಕಿವೀಸ್ ನಾಡಲ್ಲೂ ಸ್ಫೋಟಕ ಬ್ಯಾಟಿಂಗ್‍ಗೆ ಸನ್ನದ್ಧರಾಗಿದ್ದಾರೆ.

    ನ್ಯೂಜಿಲೆಂಡ್ ವಿರುದ್ಧ ನಡೆದ ಟಿ20 ಸರಣಿಯಲ್ಲಿ ಕನ್ನಡಿಗರಾದ ಕೆ.ಎಲ್.ರಾಹುಲ್ ಹಾಗೂ ಮನೀಶ್ ಪಾಂಡೆ ಸಖತ್ ಮಿಂಚಿದ್ದಾರೆ. ಕೆ.ಎಲ್.ರಾಹುಲ್ 5 ಪಂದ್ಯಗಳಲ್ಲೂ ಬ್ಯಾಟಿಂಗ್ ಹಾಗೂ ಕೀಪಿಂಗ್‍ನಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದರು.

    ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಮನೀಶ್ ಪಾಂಡೆ ಸಹ ಮಿಡಲ್ ಆರ್ಡರ್‍ನಲ್ಲಿ ತಂಡಕ್ಕೆ ನೆರವಾಗಿ, ಪಂದ್ಯದ ಗೆಲುವಿನ ಕಾರಣಿಕರ್ತರಾದರು. ಇದರೊಂದಿಗೆ ತಂಡದಲ್ಲಿ ಕೆ.ಎಲ್.ರಾಹುಲ್, ಮನೀಶ್ ಪಾಂಡೆ ಸ್ಥಾನವನ್ನು ಭದ್ರ ಮಾಡಿಕೊಂಡಿದ್ದಾರೆ. ಮಯಾಂಕ್ ಅಗರ್ವಾಲ್ ಸಹ ಬುಧವಾರದ ಪಂದ್ಯದಲ್ಲಿ ಮಿಂಚಿದರೆ 11 ರ ಬಳಗದಲ್ಲಿ ನೆಲೆಯುರಲಿದ್ದಾರೆ.

    ಒಟ್ಟಿನಲ್ಲಿ ಮೂವರು ಕನ್ನಡಿಗರು ಬುಧವಾರದ ಪಂದ್ಯದಲ್ಲಿ ಅವಕಾಶಗಿಟ್ಟಿಸಿಕೊಂಡರೆ ಇತಿಹಾಸ ಮರುಕಳುಹಿಸಲಿದೆ. ದಶಕದ ಹಿಂದೆ ಭಾರತ ತಂಡದಲ್ಲಿ ಕನ್ನಡಿಗ ಆಟಗಾರರೇ ಹೆಚ್ಚಿದ್ದರು. ಮಾಜಿ ಕ್ರಿಕೆಟಿಗರಾದ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್ ಒಟ್ಟಿಗೆ ಕಣಕ್ಕಿಳಿದಿದ್ದು ಇದೀಗ ಇತಿಹಾಸ.

  • ತಮ್ಮ ಸೂಪರ್ ಫುಡ್ ರಿವೀಲ್ ಮಾಡಿದ ನವದೀಪ್ ಸೈನಿ

    ತಮ್ಮ ಸೂಪರ್ ಫುಡ್ ರಿವೀಲ್ ಮಾಡಿದ ನವದೀಪ್ ಸೈನಿ

    – ಸೈನಿ ತಯಾರಿಸಿ ಫ್ರೂಟ್ ಸ್ಮೂಥಿ ಕುಡಿದ ಮನೀಶ್ ಖುಷ್

    ವೆಲ್ಲಿಂಗ್ಟನ್: ಭಾರತೀಯ ಕ್ರಿಕೆಟ್ ತಂಡದ ಯುವ ವೇಗದ ಬೌಲರ್ ನವದೀಪ್ ಸೈನಿ ಉತ್ತಮ ಬೌಲಿಂಗ್ ಪ್ರದರ್ಶನದ ಮೂಲಕ ಮಿಂಚುತ್ತಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ನಾಲ್ಕನೇ ಪಂದ್ಯಕ್ಕೆ ರೋಚಕ ತಿರುವು ನೀಡಿದ್ದ ಸೈನಿ ತಮ್ಮ ಸೂಪರ್ ಫುಡ್ ರಿವೀಲ್ ಮಾಡಿದ್ದಾರೆ.

    ನವದೀಪ್ ಸೈನಿ ಫ್ರೂಟ್ ಸ್ಮೂಥಿ ತಯಾರಿಸಿ ಕನ್ನಡಿಗ, ಬ್ಯಾಟ್ಸ್‌ಮನ್‌ ಮನೀಶ್ ಪಾಂಡೆಗೆ ನೀಡಿದ ವಿಡಿಯೋವೊಂದನ್ನು ಬಿಸಿಸಿಐ ಟ್ವೀಟ್ ಮಾಡಿದೆ. ‘ನಾನು ಈಗ ಫ್ರೂಟ್ ಸ್ಮೂಥಿ ತಯಾರಿಸುತ್ತಿವೆ. ಇದಕ್ಕೆ ಎರಡು ಟೀ ಸ್ಪೂನ್ ಪ್ರೋಟೀನ್, ಒಂದು ಬಾಳೆಹಣ್ಣು, ಒಂದು ಸೇಬು, ಡ್ರೈಫ್ರೂಟ್ ಹಾಗೂ ಸ್ವಲ್ಪ ನೀರು ಹಾಕಿ ಮಿಕ್ಸ ಮಾಡಬೇಕು ಎಂದು ಸೈನಿ ತಿಳಿಸಿದ್ದಾರೆ. ಇದನ್ನೂ ಓದಿ: ಸೈನಿ, ಶಾರ್ದೂಲ್, ರಾಹುಲ್, ಪಾಂಡೆ ಕಮಾಲ್- ಸೂಪರ್ ಓವರಿನಲ್ಲಿ ಮತ್ತೆ ಭಾರತಕ್ಕೆ ಜಯ

    ಸೈನಿ ತಾವು ತಯಾರಿಸಿದ ಫ್ರೂಟ್ ಸ್ಮೂಥಿಯನ್ನು ಮನೀಶ್ ಪಾಂಡೆಗೆ ನೀಡಿದ್ದಾರೆ. ಅದನ್ನು ಕುಡಿದ ಮನೀಶ್, ಪಾಂಡೆ ಬಹುದಿನಗಳ ನಂತರ ರುಚಿಕರವಾದ ಫ್ರೂಟ್ ಸ್ಮೂಥಿ ಕುಡಿದೆ. ಥ್ಯಾಂಕ್ಸ್ ಸೈನಿ ಎಂದು ತಿಳಿಸಿದ್ದಾರೆ.

    ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ನಾಲ್ಕನೇ ಪಂದ್ಯದಲ್ಲಿ ಮನೀಶ್ ಪಾಂಡೆ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಔಟಾಗದೆ 50 ರನ್ (36 ಎಸೆತ, 3 ಬೌಂಡರಿ) ಗಳಿಸಿ ತಂಡದ ಮೊತ್ತವನ್ನು ಏರಿಸಿದ್ದರು. ಇನಿಂಗ್ಸ್ ಅಂತ್ಯದಲ್ಲಿ ಯಜುವೇಂದ್ರ ಚಾಹಲ್ 1 ರನ್ ಹಾಗೂ ನವದೀಪ್ ಸೈನಿ ಔಟಾಗದೆ 11 ರನ್ ಗಳಿಸಿದ್ದರು. ಈ ಮೂಲಕ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್‍ಗೆ 165 ರನ್‍ಗಳ ಸವಾಲಿನ ಮೊತ್ತ ಪೇರಿಸಿತ್ತು.

    ಇನ್ನಿಂಗ್ಸ್ ನ ಕೊನೆಯ ಎರಡು ಓವರಿನಲ್ಲಿ ನ್ಯೂಜಿಲೆಂಡ್ ಗೆಲ್ಲಲು 11 ರನ್ ಬೇಕಿತ್ತು. 19ನೇ ಓವರ್ ನವದೀಪ್ ಸೈನಿ ಎಸೆದು ಯಾವುದೇ ವಿಕೆಟ್ ಪಡೆಯದೇ ಕೇವಲ 4 ರನ್ ನೀಡುವ ಮೂಲಕ ಪಂದ್ಯವನ್ನು ರೋಚಕ ಘಟ್ಟಕ್ಕೆ ತಂದು ನಿಲ್ಲಿಸಿದ್ದರು.

  • ಮನೀಶ್ ಪಾಂಡೆ ಮದುವೆಯಲ್ಲಿ ಎಲ್ಲರ ಗಮನ ಸೆಳೆದ ಯುವರಾಜ್: ವಿಡಿಯೋ

    ಮನೀಶ್ ಪಾಂಡೆ ಮದುವೆಯಲ್ಲಿ ಎಲ್ಲರ ಗಮನ ಸೆಳೆದ ಯುವರಾಜ್: ವಿಡಿಯೋ

    ಮುಂಬೈ: ಭಾರತ ಕ್ರಿಕೆಟ್ ತಂಡದ ಸ್ಟೈಲಿಶ್ ಆಟಗಾರ ಮನೀಶ್ ಪಾಂಡೆ ಆರತಕ್ಷತೆಯಲ್ಲಿ ಮಾಜಿ ಆಟಗಾರ ಯುವರಾಜ್ ಸಿಂಗ್ ಪಂಜಾಬಿ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಅಲ್ಲದೆ ಅವರು ಡ್ಯಾನ್ಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

    ಸೋಮವಾರ ಮನೀಶ್ ನಟಿ ಆಶ್ರಿತಾ ಶೆಟ್ಟಿ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯ ಆಚರಣೆ ಎರಡು ದಿನಗಳ ಕಾಲ ನಡೆದಿದೆ. ಮನೀಶ್ ಅವರ ಆರತಕ್ಷತೆಯಲ್ಲಿ ಮಾಜಿ ಕ್ರಿಕೆಟ್ ಆಟಗಾರ ಯುವರಾಜ್ ಸಿಂಗ್ ಭಾಗವಹಿಸಿದ್ದರು. ಈ ವೇಳೆ ಅವರು ಡೋಲು ಸದ್ದಿಗೆ ಬಾಂಗ್ರಾ ನೃತ್ಯ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಇದನ್ನೂ ಓದಿ: ತುಳು ನಟಿಯನ್ನು ವರಿಸಲಿದ್ದಾರೆ ಕ್ರಿಕೆಟಿಗ ಮನೀಶ್ ಪಾಂಡೆ

    ಯುವರಾಜ್ ಅವರು ಒಬ್ಬರೇ ನೃತ್ಯ ಮಾಡುತ್ತಿರುವುದನ್ನು ನೋಡಿ ಮನೀಶ್ ಕೂಡ ಅವರ ಜೊತೆ ಸೇರಿ ಡ್ಯಾನ್ಸ್ ಮಾಡಿದ್ದಾರೆ. ಈ ವೇಳೆ ಡೋಲು ಬಾರಿಸುತ್ತಿದ್ದವರು ಯುವರಾಜ್ ಹಾಗೂ ಮನೀಶ್ ಡ್ಯಾನ್ಸ್ ನೋಡಿ ಖುಷಿಪಟ್ಟಿದ್ದಾರೆ. ಇದನ್ನೂ ಓದಿ: ರಾತ್ರಿ ಟ್ರೋಫಿ ಗೆದ್ದು ಮರುದಿನ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮನೀಶ್ ಪಾಂಡೆ

    ಯುವರಾಜ್ ಸಿಂಗ್ ತಮ್ಮ ಇನ್‍ಸ್ಟಾದಲ್ಲಿ ಮನೀಶ್ ಹಾಗೂ ಆಶ್ರಿತಾ ಜೊತೆಗಿರುವ ಫೋಟೋ ಹಂಚಿಕೊಂಡಿದ್ದಾರೆ. ಅಲ್ಲದೆ ಅದಕ್ಕೆ, “ಪ್ರೀತಿಯ ಮನೀಶ್ ಹಾಗೂ ಆಶ್ರಿತಾ ನೀವು ಜೀವನದಲ್ಲಿ ಯಾವಾಗಲೂ ಸಂತೋಷವಾಗಿರಿ ಎಂದು ನಾನು ಹಾರೈಸುತ್ತೇನೆ. ಉಳಿದರು ನಮ್ಮ ಹಿಂದೆ ನಿಂತಿರುವ ಡೋಲು ಬಾರಿಸುವವನನ್ನು ನೋಡಿ” ಎಂದು ಬರೆದುಕೊಂಡಿದ್ದರು.

    ಸೋಮವಾರ ಮನೀಶ್, ನಟಿ ಆಶ್ರಿತಾ ಶೆಟ್ಟಿ ಅವರ ಜೊತೆ ವಿವಾಹವಾಗಿದ್ದರು. ಹಿಂದಿನ ದಿನ ಎಂದರೆ ಭಾನುವಾರ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಮನೀಶ್ ಅವರ ನಾಯಕತ್ವದಲ್ಲಿ ತಮಿಳುನಾಡಿನ ತಂಡದ ವಿರುದ್ಧ ಕರ್ನಾಟಕ ತಂಡ ಜಯಗಳಿಸಿತ್ತು. ಈ ಪಂದ್ಯದಲ್ಲಿ ಮನೀಶ್ 60 ರನ್‍ಗಳನ್ನು ಗಳಿಸಿದ್ದರು.

     

    View this post on Instagram

     

    Nice dance #yuvrajsingh and #manishpandey #ashritashetty with my team #dholibros Rocking ???????????? performance

    A post shared by Vijay Bhatt (@vijaybhatt888) on

  • ರಾತ್ರಿ ಟ್ರೋಫಿ ಗೆದ್ದು ಮರುದಿನ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮನೀಶ್ ಪಾಂಡೆ

    ರಾತ್ರಿ ಟ್ರೋಫಿ ಗೆದ್ದು ಮರುದಿನ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮನೀಶ್ ಪಾಂಡೆ

    ಮುಂಬೈ: ಭಾರತದ ಕ್ರಿಕೆಟ್ ತಂಡದ ಆಟಗಾರ ಮನೀಶ್ ಪಾಂಡೆ ಇಂದು ತುಳು ನಟಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಮನೀಶ್ ಪಾಂಡೆ ಅವರು ತುಳು ಹಾಗೂ ದಕ್ಷಿಣ ಭಾರತದ ನಟಿಯಾಗಿರುವ ಆಶ್ರಿತಾ ಶೆಟ್ಟಿ ಅವರ ಜೊತೆ ವಿವಾಹವಾಗಿದ್ದಾರೆ. ಐಪಿಎಲ್‍ನಲ್ಲಿ ಮನೀಶ್ ಹೈದರಾಬಾದ್ ತಂಡದ ಪರವಾಗಿ ಆಡುತ್ತಿದ್ದಾರೆ. ಹಾಗಾಗಿ ಮನೀಶ್ ಮದುವೆಯ ಫೋಟೋವನ್ನು ಮೊದಲು ಸನ್‍ರೈಸರ್ಸ್ ಹೈದರಾಬಾದ್ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ. ಇದನ್ನೂ ಓದಿ: ತುಳು ನಟಿಯನ್ನು ವರಿಸಲಿದ್ದಾರೆ ಕ್ರಿಕೆಟಿಗ ಮನೀಶ್ ಪಾಂಡೆ

    ವರದಿಗಳ ಪ್ರಕಾರ ಮದುವೆಯ ಆಚರಣೆ ಇನ್ನೂ ಎರಡು ದಿನಗಳ ಕಾಲ ನಡೆಯಲಿದ್ದು, ಕೇವಲ ಕುಟುಂಬಸ್ಥರು ಹಾಗೂ ಆತ್ಮೀಯ ಸ್ನೇಹಿತರು ಭಾಗಿಯಾಗಿದ್ದಾರೆ. ಈ ಹಿಂದೆ ಮನೀಶ್ ಪಾಂಡೆ ಹಾಗೂ ಆಶ್ರಿತಾ ಡೇಟ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಈಗ ಇವರಿಬ್ಬರು ಮದುವೆಯಾಗುವ ಮೂಲಕ ಗಾಸಿಪ್‍ಗಳಿಗೆ ತೆರೆ ಎಳೆದಿದ್ದಾರೆ.

    2012ರಲ್ಲಿ ‘ತೆಲಿಕೆದ ಬೊಳ್ಳಿ’ ತುಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಆಶ್ರಿತಾ ‘ಇಂದ್ರಜಿತ್’, ‘ಒರು ಕಣ್ಣಿಯುನ್ ಮೂನು ಕಲಾವಾನಿಕಲಂ’, ‘ಉದಯಂ ಎನ್.ಎಚ್4’ ಸೇರಿದಂತೆ ಹಲವು ಚಿತಗಳಲ್ಲಿ ನಟಿಸಿದ್ದಾರೆ. ಬ್ಯೂಟಿ ಕಾಂಪಿಟೇಶನ್ ಭಾಗವಹಿಸಿದ ಆಶ್ರಿತಾ ಜಾಹೀರಾತುಗಳಲ್ಲಿಯೂ ಅಭಿನಯಿಸಿದ್ದಾರೆ.

    ಭಾನುವಾರ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಮನೀಶ್ ಪಾಂಡೆ ಅವರ ನಾಯಕತ್ವದಲ್ಲಿ ತಮಿಳುನಾಡಿನ ತಂಡದ ವಿರುದ್ಧ ಕರ್ನಾಟಕ ತಂಡ ಜಯಗಳಿಸಿದೆ. ಈ ಪಂದ್ಯದಲ್ಲಿ ಮನೀಶ್ 60 ರನ್‍ಗಳನ್ನು ಗಳಿಸಿದ್ದಾರೆ.

  • ತುಳು ನಟಿಯನ್ನು ವರಿಸಲಿದ್ದಾರೆ ಕ್ರಿಕೆಟಿಗ ಮನೀಶ್ ಪಾಂಡೆ

    ತುಳು ನಟಿಯನ್ನು ವರಿಸಲಿದ್ದಾರೆ ಕ್ರಿಕೆಟಿಗ ಮನೀಶ್ ಪಾಂಡೆ

    ಮುಂಬೈ: ಭಾರತ ತಂಡದ ಕ್ರಿಕೆಟ್ ಆಟಗಾರ ಮನೀಶ್ ಪಾಂಡೆ ಅವರು ನಟಿ ಆಶ್ರಿತಾ ಶೆಟ್ಟಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

    ಮನೀಶ್ ಪಾಂಡೆ ಹಾಗೂ ಆಶ್ರಿತಾ ಸುಮಾರು ದಿನಗಳಿಂದ ಡೇಟ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಈಗ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಡಿಸೆಂಬರ್ 2ರಂದು 30 ವರ್ಷದ ಮನೀಶ್, 26 ವರ್ಷದ ಆಶ್ರಿತಾ ಜೊತೆ ಮುಂಬೈನಲ್ಲಿ ಮದುವೆ ಆಗಲಿದ್ದಾರೆ.

    2012ರಲ್ಲಿ ‘ತೆಲಿಕೆದ ಬೊಳ್ಳಿ’ ತುಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಆಶ್ರಿತಾ ‘ಇಂದ್ರಜಿತ್’, ‘ಒರು ಕಣ್ಣಿಯುನ್ ಮೂನು ಕಲಾವಾನಿಕಲಂ’, ‘ಉದಯಂ ಎನ್.ಎಚ್4’ ಸೇರಿದಂತೆ ಹಲವು ಚಿತಗಳಲ್ಲಿ ನಟಿಸಿದ್ದಾರೆ. ಬ್ಯೂಟಿ ಕಾಂಪಿಟೇಶನ್ ಭಾಗವಹಿಸಿದ ಆಶ್ರಿತಾ ಜಾಹೀರಾತುಗಳಲ್ಲಿಯೂ ಅಭಿನಯಿಸಿದ್ದಾರೆ.

    ಮನೀಶ್ ಕರ್ನಾಟಕದ ಪರ ಉತ್ತಮ ಪ್ರದರ್ಶನ ನೀಡುವ ಮೂಲಕ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಏಕದಿನ ಪಂದ್ಯದಲ್ಲಿ ಮನೀಶ್ ಮಿಡಿಲ್ ಆರ್ಡರ್ ನಲ್ಲಿ ಆಡುತ್ತಾರೆ. ಜೊತೆಗೆ ಮನೀಶ್ ಐಪಿಎಲ್ ಪಂದ್ಯಗಳಲ್ಲೂ ಮಿಂಚಿದ್ದಾರೆ. ಮನೀಶ್ ಈಗ ಕರ್ನಾಟಕ ಕ್ರಿಕೆಟ್ ತಂಡದ ನಾಯಕನಾಗಿದ್ದು, ವಿಜಯ್ ಹಜಾರೆ ಟ್ರೋಫಿಯಲ್ಲೂ ಆಡುತ್ತಿದ್ದಾರೆ.

    ಮನೀಶ್ ಹಾಗೂ ಆಶ್ರಿತಾ ಮದುವೆಯಲ್ಲಿ ಕೇವಲ ಆತ್ಮೀಯ ಸ್ನೇಹಿತರು ಹಾಗೂ ಸಂಬಂಧಿಕರು ಭಾಗಿಯಾಗಲಿದ್ದು, ಎರಡು ದಿನಗಳ ಕಾಲ ಈ ಮದುವೆ ನಡೆಯಲಿದೆ. ಮನೀಶ್ ಮದುವೆಯಲ್ಲಿ ಭಾರತ ಕ್ರಿಕೆಟ್ ತಂಡದ ಆಟಗಾರರು ಭಾಗವಹಿಸುವ ಸಾಧ್ಯತೆಯಿದೆ.

  • ಬೌಂಡರಿ ಗೆರೆಯಲ್ಲಿ ಮನೀಶ್ ಪಾಂಡೆ ಅದ್ಭುತ ಕ್ಯಾಚ್ – ವೀಡಿಯೋ ನೋಡಿ

    ಬೌಂಡರಿ ಗೆರೆಯಲ್ಲಿ ಮನೀಶ್ ಪಾಂಡೆ ಅದ್ಭುತ ಕ್ಯಾಚ್ – ವೀಡಿಯೋ ನೋಡಿ

    ದುಬೈ: ರೋಚಕ ಹಣಾಹಣಿಗೆ ಸಾಕ್ಷಿಯಾಗುತ್ತದೆ ಎಂದು ನಿರೀಕ್ಷಿಸಿದ್ದ ಇಂಡೋ ಪಾಕ್ ಕದನದಲ್ಲಿ ಭಾರತದ ಬೌಲರ್ ಗಳು ಮಿಂಚು ಹರಿಸಿದ್ದು, ಇತ್ತ ಕರ್ನಾಟಕ ಮನೀಶ್ ಪಾಂಡೆ ಬೌಂಡರಿ ಗೆರೆಯಲ್ಲಿ ಅದ್ಭುತ ಕ್ಯಾಚ್ ಪಡೆದಿದ್ದಾರೆ.

    ಪಂದ್ಯದ ವೇಳೆ ಗಾಯಗೊಂಡು ಹಾರ್ದಿಕ್ ಪಾಂಡ್ಯ ಕ್ರೀಡಾಂಗಣ ತೊರೆದ ಕಾರಣ ಕರ್ನಾಟಕದ ಮನೀಶ್ ಪಾಂಡೆ ಬದಲಿಯಾಗಿ ಅವಕಾಶ ಪಡೆದರು. ಸಿಕ್ಕ ಅವಕಾಶದಲ್ಲಿ ಮಿಂಚಿದ ಮನೀಶ್ ಪಾಕ್ ನಾಯಕ ಸರ್ಫರಾಜ್ ಖಾನ್ ಕ್ಯಾಚ್ ಪಡೆದು ಮಿಂಚಿದರು.

    25ನೇ ಓವರ್ ಎಸೆದ ಜಾದವ್ ಎಸೆತದಲ್ಲಿ ಸರ್ಫರಾಜ್ ಖಾನ್ ಭಾರೀ ಹೊಡೆತಕ್ಕೆ ಕೈ ಹಾಕಿದರು. ಈ ವೇಳೆ ಬೌಂಡರಿಯಲ್ಲಿ ಫೀಲ್ಡಿಂಗ್ ನಡೆಸುತ್ತಿದ್ದ ಮನೀಶ್ ಕ್ಯಾಚ್ ಪಡೆದು ಬೌಂಡರಿ ಗೆರೆ ದಾಟುವ ಸಂದರ್ಭದಲ್ಲಿ ಮತ್ತೆ ಬಾಲ್ ಮೇಲಕ್ಕೆ ಎಸೆದು ಸಮಯಪ್ರಜ್ಞೆಯಿಂದ ಅದ್ಭುತ ಕ್ಯಾಚ್ ಪಡೆದರು. ಇದರಿಂದ ಉತ್ತಮ ಆಟದ ನಿರೀಕ್ಷೆಯಲ್ಲಿದ್ದ ಪಾಕ್ ನಾಯಕ ಪೆವಿಲಿಯನತ್ತ ನಡೆಯಬೇಕಾಯಿತು.

    ಪಂದ್ಯದಲ್ಲಿ ಹಲವು ಕ್ಯಾಚ್ ಡ್ರಾಪ್ ಮಾಡಿದ ಟೀಂ ಇಂಡಿಯಾ ಆಟಗಾರರು ಫೀಲ್ಡಿಂಗ್ ನಲ್ಲಿ ನಿರಾಸೆ ಮೂಡುವಂತೆ ಮಾಡಿದ್ದರು. ಪ್ರಮುಖವಾಗಿ ಧೋನಿ, ಹಾರ್ದಿಕ್ ಪಾಂಡ್ಯ ಇದಕ್ಕೂ ಮುನ್ನವೇ 2 ಕ್ಯಾಚ್ ಬಿಟ್ಟಿದ್ದರು. ಚಹಲ್, ಧವನ್ ಕೂಡ ಕ್ಯಾಚ್ ಕೈ ಚೆಲ್ಲಿದ್ದರು.

    ಪಿಸಿಬಿ ಎಡವಟ್ಟು: ಟೀಂ ಇಂಡಿಯಾ ಹಾಗೂ ಪಾಕಿಸ್ತಾನದ ನಡುವಿನ ಕದನ ಆರಂಭಕ್ಕೂ ಮುನ್ನ ಟೀಂ ಇಂಡಿಯಾವನ್ನು ಟ್ರೋಲ್ ಮಾಡಲು ಯತ್ನಿಸಿದ್ದ ಪಾಕಿಸ್ತಾನ ಕ್ರಿಕೆಟ್ ನಿಯಂತ್ರಣ ಮಂಡಳಿ (ಪಿಸಿಬಿ) ಎಡವಟ್ಟು ಮಾಡಿಕೊಂಡು ಟ್ರೋಲ್ ಆಗಿದೆ.

    ಹೌದು, ಪಂದ್ಯ ಆರಂಭಕ್ಕೂ ಕೆಲವೇ ಕ್ಷಣಗಳ ಮುನ್ನ ಕಳೆದ ವರ್ಷದ ಚಾಂಪಿಯನ್ ಟ್ರೋಫಿ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಗೆಲುವು ಪಡೆದಿದ್ದ ಪಂದ್ಯದ ಸನ್ನಿವೇಶಗಳ ಐಸಿಸಿ ವೀಡಿಯೋವನ್ನು ಶೇರ್ ಮಾಡಿದ್ದ ಪಿಸಿಬಿ ತನ್ನ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿತ್ತು. ಆದರೆ ಈ ವೇಳೆ ಅಕ್ಷರ ದೋಷ ಮಾಡಿ ಪಾಕ್ ಟ್ರೋಲ್ ಒಳಗಾಗಿದೆ. ಇದನ್ನು ಕಂಡ ಅಭಿಮಾನಿಗಳು ಪಿಸಿಬಿಗೆ ಮರುಟ್ವೀಟ್ ಮಾಡುವ ಮೂಲಕ ಕಾಲೆಳೆದಿದ್ದಾರೆ. ಅಲ್ಲದೇ ಪಿಸಿಬಿ ಟ್ವೀಟ್ ಮಾಡಿದ್ದ `hepoened’ ಪದದ  ಅರ್ಥ ಕೇಳಿ, ಶುಭಾಶಯ ಕೋರಿದ್ದರೆ, ಮತ್ತು ಕೆಲವರು ನಮ್ಮ ಸೋಲನ್ನು ನೆನಪಿಸಿದ್ದಕ್ಕೆ ಧನ್ಯವಾದ ಆದರೆ ನಿಮ್ಮನ್ನು ಟ್ರೋಲ್ ಮಾಡುತ್ತಿರುವವರಿಗೆ ಉತ್ತರಿಸಿ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv