Tag: ಮಧ್ಯ ಮಾರಾಟ

  • ಮದ್ಯದಂಗಡಿಗಳು ಮುಚ್ಚಿದ್ದರೂ ಎಣ್ಣೆಗೆ ಬರ ಇಲ್ಲ- ಮದ್ಯವ್ಯಸನಿಗಳ ಅಡ್ಡೆಯಾದ ಎಪಿಎಂಸಿ

    ಮದ್ಯದಂಗಡಿಗಳು ಮುಚ್ಚಿದ್ದರೂ ಎಣ್ಣೆಗೆ ಬರ ಇಲ್ಲ- ಮದ್ಯವ್ಯಸನಿಗಳ ಅಡ್ಡೆಯಾದ ಎಪಿಎಂಸಿ

    – ಎಗ್ಗಿಲ್ಲದೆ ನಡೆಯುತ್ತಿದೆ ಅಕ್ರಮ ಮದ್ಯ ಮಾರಾಟ

    ರಾಯಚೂರು: ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‍ಡೌನ್ ಹೇರಿರುವುದರಿಂದ ಮದ್ಯ ಮಾರಾಟಕ್ಕೂ ಬ್ರೇಕ್ ಬಿದ್ದಿದ್ದು, ಮದ್ಯದಂಗಡಿಗಳು ಬಾಗಿಲು ಮುಚ್ಚಿಕೊಂಡಿವೆ. ಆದರೆ ಅಕ್ರಮವಾಗಿ ನಡೆಯುತ್ತಿರುವ ಮದ್ಯ ಮಾರಾಟಕ್ಕೆ ಮಾತ್ರ ಯಾವುದೇ ತಡೆಯಿಲ್ಲದಂತಾಗಿದೆ. ನಗರದ ರಾಜೇಂದ್ರ ಗಂಜ್ ಆವರಣ ಮದ್ಯವ್ಯಸನಿಗಳ ನೆಚ್ಚಿನ ತಾಣವಾಗಿದೆ. ಇಲ್ಲಿನ ಹಮಾಲಿಗಳು ಹಾಗೂ ಹೊರಗಡೆಯಿಂದ ಬರುವ ಸಾರ್ವಜನಿಕರು ಎಲ್ಲಂದರಲ್ಲಿ ಕುಳಿತು ಮದ್ಯಪಾನ ಮಾಡುತ್ತಿದ್ದಾರೆ.

    ಎಪಿಎಂಸಿಯಲ್ಲಿ ಮಹಿಳೆಯರು ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟ ನಡೆಸಿದ್ದಾರೆ. ಮಾರಾಟ ಮಾಡಲು ಇವರಿಗೆ ಮದ್ಯ ಎಲ್ಲಿಂದ ಸಿಗುತ್ತದೆ ಅನ್ನೋದು ಪ್ರಶ್ನೆಯಾಗಿದ್ದು, ಮದ್ಯದಂಗಡಿಯವರು ಸಹ ಶಾಮೀಲಾಗಿರುವ ಶಂಕೆಯಿದೆ. ಎಪಿಎಂಸಿಯಲ್ಲಿ ಅಕ್ರಮ ಮದ್ಯಮಾರಾಟದ ಮಾಹಿತಿ ತಿಳಿದು ವರದಿಗೆ ಹೊರಟ ಪಬ್ಲಿಕ್ ಟಿವಿ ಕ್ಯಾಮೆರಾ ಕಂಡು ಮದ್ಯ ಪ್ರೀಯರು ಎದ್ನೋ ಬಿದ್ನೋ ಅಂತ ಓಡಿಹೋಗಿದ್ದಾರೆ. ಕೆಲವರು ಕುಡಿದ ನಶೆಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ.

    ಲಾಕ್‍ಡೌನ್ ಮಾಡಿರುವುದು ಮದ್ಯವ್ಯಸನಿಗಳಿಗೆ ಬಹಳ ತೊಂದರೆಯಾಗಿದೆಯಂತೆ. ದುಡಿಯಲು ಕೆಲಸವಿಲ್ಲ, ಕೆಲಸಯಿಲ್ಲದಿರುವುದರಿಂದ ಹಣವೂ ಇಲ್ಲ. ಮದ್ಯದ ಅಂಗಡಿಗಳನ್ನು ಬಂದ್ ಮಾಡಿಸಿರುವುದರಿಂದ ನಮಗೆ ಮದ್ಯವೂ ಸಿಗುತ್ತಿಲ್ಲ ನಾವೇನು ಮಾಡಬೇಕು ಅಂತ ಮದ್ಯಪ್ರೀಯರು ಪ್ರಶ್ನಿಸಿದ್ದಾರೆ. ಸಂಪೂರ್ಣ ಲಾಕ್‍ಡೌನ್ ಹಿನ್ನೆಲೆ ಮೂರು ದಿನಕ್ಕೆ ಒಂದು ಬಾರಿ ಅಗತ್ಯ ವಸ್ತು ಕೊಳ್ಳಲು ಅವಕಾಶ ನೀಡಿರುವ ಜಿಲ್ಲಾಡಳಿತ ಮದ್ಯದಂಗಡಿ ತೆರೆಯಲು ಸಹ ಅವಕಾಶ ನೀಡಿದೆ. ಆದರೂ ಜಿಲ್ಲೆಯಲ್ಲಿ ಅಕ್ರಮ ಮದ್ಯಮಾರಾಟ ಜೋರಾಗಿ ನಡೆದಿದೆ.

  • ಮದ್ಯ ಪ್ರಿಯರಿಗೆ ಚುನಾವಣೆ ಸೈಡ್ ಎಫೆಕ್ಟ್

    ಮದ್ಯ ಪ್ರಿಯರಿಗೆ ಚುನಾವಣೆ ಸೈಡ್ ಎಫೆಕ್ಟ್

    ಬೆಂಗಳೂರು: ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿ ನಾಲ್ಕು ದಿನ ಮದ್ಯ ನಿಷೇಧ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಟಿ ಸುನೀಲ್ ಕುಮಾರ್ ಆದೇಶ ಮಾಡಿದ್ದಾರೆ.

    ಮೇ 10, ಸಂಜೆ 5 ಘಂಟೆಯಿಂದ ಮೇ 12 ಮಧ್ಯರಾತ್ರಿಯವರೆಗೆ ಮದ್ಯವನ್ನು ನಿಷೇಧಿಸಲಾಗಿದೆ. ಮತದಾನದ ದಿನ ಸೇರಿ 3 ರಾತ್ರಿ ಮದ್ಯ ಮಾರಾಟ ಇರುವುದಿಲ್ಲ ಎಂದು ತಿಳಿಸಿದರು. ಮೇ 15 ಮತ ಎಣಿಕೆ ದಿನವೂ ಕೂಡ ಮಧ್ಯ ಮಾರಾಟ ನಿಷೇಧಿಸಲಾಗಿದೆ ಎಂದು ತಿಳಿಸಿದರು.

    ಬಾರ್ ಗಳಿಗೆ ಬೀಗ
    ಚುನಾವಣೆ ಸಮಯದಲ್ಲಿ ಮತದಾರರನ್ನು ಸೆಳೆಯಲು ಕೆಲ ರಾಜಕಾರಣಿಗಳು ಮದ್ಯ ಹಂಚಲು ಮುಂದಾಗುತ್ತಾರೆ. ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿ ಆದಾಗಿನಿಂದ ಪ್ರತಿನಿತ್ಯ ರಾಜ್ಯಾದ್ಯಂತ ಅಧಿಕಾರಿಗಳು ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಅಕ್ರಮ ಮದ್ಯ ಸಾಗಾಟ ನಿಯಂತ್ರಿಸಲು ಚುನಾವಣಾ ಅಧಿಕಾರಿಗಳು ಬೆಂಗಳೂರು ಸೇರಿದಂತೆ ಅಕ್ರಮ ಬಾರ್ ಗಳಿಗೆ ಬೀಗ ಹಾಕಿದ್ದಾರೆ.

    ಪರವಾನಿಗೆಯನ್ನು ನವೀಕರಣ ಮಾಡಿಕೊಳ್ಳದ ಬಾರ್ ಗಳನ್ನು ಸಹ ಮುಚ್ಚುವಂತೆ ಆದೇಶ ಹೊರಡಿಸಲಾಗಿದೆ. ಟೋಕನ್ ಗಳ ಮೂಲಕ ಮತದಾರರಿಗೆ ಮದ್ಯ ಹಂಚಲಾಗುತ್ತಿದೆ ಎಂಬ ಮಾತುಗಳು ಕೇಳಿಬರತೊಡಗಿದ್ದವು. ಈ ಹಿನ್ನೆಲೆಯಲ್ಲಿ ಲೈಸನ್ಸ್ ಪಡೆಯದೇ ತೆರೆದಿರುವ ಬಾರ್ ಗಳನ್ನು ಗುರುತಿಸಿ, ಅವುಗಳಿಗೆ ಬೀಗ ಹಾಕಲಾಗಿದೆ.

    ಕರ್ನಾಟಕದಾದ್ಯಂತ ಒಟ್ಟು 508 ಅಕ್ರಮ ಬಾರ್ ಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ 245 ಬೆಂಗಳೂರು ನಗರದಲ್ಲಿವೆ. ಮತದಾರರಿಗೆ ಮದ್ಯ ಹಂಚುವ ಮೂಲಕ ವೋಟ್ ಪಡೆಯಲು ಮುಂದಾಗಿದ್ದವರಿಗೆ ಚುನಾವಣಾ ಆಯೋಗ ಸರಿಯಾಗಿಯೇ ಬಿಸಿ ಮುಟ್ಟಿಸಿದೆ.

    ಬೆಂಗಳೂರು ನಗರದಲ್ಲಿ ಮುಚ್ಚಲ್ಪಟ್ಟ ಬಾರ್ ಗಳ ಪಟ್ಟಿ ಹೀಗಿದೆ:
    ಬೆಂಗಳೂರು ಪೂರ್ವ ವಿಭಾಗ- 123
    ಬೆಂಗಳೂರು ದಕ್ಷಿಣ ವಿಭಾಗ- 62
    ಬೆಂಗಳೂರು ಪೂರ್ವ ವಿಭಾಗ- 56
    ಬೆಂಗಳೂರು ಪಶ್ಚಿಮ ವಿಭಾಗ- 4