Tag: ಮಧ್ಯಂತರ ಚುನಾವಣೆ

  • ಅನರ್ಹರಿಗೆ ರಿಲೀಫ್ ಅಲ್ಲ ಶಾಕ್ – ಬೀಸೋ ದೊಣ್ಣೆಯಿಂದ ಪಾರಾದ ಬಿಜೆಪಿ

    ಅನರ್ಹರಿಗೆ ರಿಲೀಫ್ ಅಲ್ಲ ಶಾಕ್ – ಬೀಸೋ ದೊಣ್ಣೆಯಿಂದ ಪಾರಾದ ಬಿಜೆಪಿ

    ಬೆಂಗಳೂರು: ಉಪ ಚುನಾವಣೆಗೆ ತಡೆ ನೀಡುವ ಮೂಲಕ ಸುಪ್ರೀಂ ಅನರ್ಹರಿಗೆ ಈಗ ರಿಲೀಫ್ ಸಿಕ್ಕಿದೆ. ಆದರೆ ಮುಂದೆ ಉಪಚುನಾವಣೆ ರಾಜ್ಯದಲ್ಲಿ ನಡೆಯುತ್ತಾ ಎನ್ನುವ ಅನುಮಾನ ಈಗ ಎದ್ದಿದೆ.

    ಸುಪ್ರೀಂ ಕೋರ್ಟಿನಲ್ಲಿ ತಮ್ಮ ಪರವಾಗಿ ತೀರ್ಪು ಬಂದರೆ ಅನರ್ಹರು ಚುನಾವಣೆ ನಿಂತು ಜಯಗಳಿಸಿ ಮಂತ್ರಿಯಾಗುವ ಕನಸಿನಲ್ಲಿದ್ದಾರೆ. ಆದರೆ ಬಿಜೆಪಿ ಹೈಕಮಾಂಡ್ ಉಪ ಚುನಾವಣೆ ನಡೆಸದೇ ವಿಧಾನಸಭೆಯಲ್ಲಿ ವಿಸರ್ಜಿಸಿ ಚುನಾವಣೆಗೆ ಹೋಗಲು ಚಿಂತಿಸಿದೆ ಎನ್ನಲಾಗುತ್ತಿದೆ.

    ಹೌದು, ರಾಜ್ಯ ಉಪಚುನಾವಣೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ ಬಿಜೆಪಿ ಬೀಸೋ ದೊಣ್ಣೆಯಿಂದ ಪಾರಾಗಿದೆ. ಆದರೆ ಇದೇ ವೇಳೆ ಬಿಎಸ್ ಯಡಿಯೂರಪ್ಪ ಅವರ ಸರ್ಕಾರದ ಅವಧಿ ಕೇವಲ 9 ತಿಂಗಳು ಮಾತ್ರವೇ ಎನ್ನುವ ಪ್ರಶ್ನೆ ಎದ್ದಿದೆ.

    ಸದ್ಯ ಚುನಾವಣೆಗೆ ನ್ಯಾಯಾಲಯ ಬ್ರೇಕ್ ಹಾಕಿರುವುದರಿಂದ ಪಕ್ಷದಲ್ಲಿ ಉಂಟಾಗಿದ್ದ ಬಂಡಾಯವನ್ನು ಶಮನ ಮಾಡಲು ನಾಯಕರಿಗೆ ಅವಕಾಶ ಸಿಕ್ಕಿದೆ. ಆದರೆ ಬಿಜೆಪಿ ಹೈಕಮಾಂಡ್ ಮಾತ್ರ ಬಂಡಾಯ ನಡುವೆ ಸರ್ಕಾರ ನಡೆಸುವುದು ಅಗತ್ಯತೆ ಹಾಗೂ ಪಕ್ಷದ ವರ್ಚಸ್ಸಿಗೆ ಉಂಟಾಗಬಹುದಾದ ಹಾನಿಯ ಬಗ್ಗೆಯೂ ಚರ್ಚೆ ನಡೆಸಿದೆ. ಈ ಹಿನ್ನೆಲೆಯಲ್ಲಿಯೇ ಉಪಚುನಾವಣೆಗೆ ಅವಕಾಶ ನೀಡದೆ ನೇರ ಚುನಾವಣೆ ಎದುರಿಸುವ ಕುರಿತು ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ.

    ಹೈಕಮಾಂಡ್ ಚುನಾವಣೆಯೇ ಸರಿ ಎನ್ನುವ ನಿರ್ಧಾರ ತಗೆದು ಜನವರಿ ಬಳಿಕ ಚುನಾವಣೆ ಹೋಗುವ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಪರಿಣಾಮ ಫೆಬ್ರವರಿಯಲ್ಲಿ ಚುನಾವಣೆ ಎದುರಿಸುವ ಸಾಧ್ಯತೆ ಇದೆ. ಏಕೆಂದರೆ ಶಾಸಕರ ತಮ್ಮ ಅನರ್ಹತೆಯನ್ನು ಪ್ರಶ್ನೆ ಮಾಡಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದು, ಪ್ರಕರಣ ಸುದೀರ್ಘ ವಿಚಾರಣೆಗೆ ನ್ಯಾಯಾಲಯ ಮುಂದಾಗಿ ಸಾಂವಿಧಾನಿಕ ಪೀಠ ರಚನೆ ಮಾಡಿದರೆ ಪ್ರಕರಣ ಇತ್ಯರ್ಥವಾಗಬೇಕಾದರೆ ಹಲವು ದಿನಗಳು ಬೇಕಾಗಬಹುದು. ತೆರವಾದ ವಿಧಾನಸಭಾ ಕ್ಷೇತ್ರಗಳನ್ನು 6 ತಿಂಗಳ ಕಾಲ ಖಾಲಿ ಬಿಡುವಂತಿಲ್ಲ. ಹೀಗಾಗಿ ದೀರ್ಘ ಸಮಯಗಳ ಕಾಲ ವಿಚಾರಣೆ ನಡೆಸಲು ಬರುವುದಿಲ್ಲ.

    ಕರ್ನಾಟಕ ಉಪಚುನಾವಣೆ ಮಾತ್ರ ಮುಂದೂಡಿರುವುದರಿಂದ ಬಿಜೆಪಿ ಹೈಕಮಾಂಡ್ ಮಹಾರಾಷ್ಟ್ರ ಚುನಾವಣೆಯತ್ತ ಹೆಚ್ಚು ಗಮನಹರಿಸಿದ್ದು, ಇಲ್ಲೂ ಬಹುಮತ ಸಿಕ್ಕರೆ ಕರ್ನಾಟಕದಲ್ಲೂ ಮಧ್ಯಂತರ ಚುನಾವಣೆ ಘೋಷಣೆಯಾಗುವ ಸಾಧ್ಯತೆಯಿದೆ. ಅನರ್ಹರ ಪ್ರಕರಣ ಇತ್ಯರ್ಥಕ್ಕೆ ಕೆಲ ತಿಂಗಳ ಅವಧಿ ಅಗತ್ಯ ಇರುವ ಕಾರಣ ಅಲ್ಲಿಯವರೆಗೂ ರಾಜ್ಯದಲ್ಲಿ ಬಿಎಸ್‍ವೈ ಅವರ ಸರ್ಕಾರ ಆಡಳಿತ ನಡೆಯನ್ನು ತುಲನೆ ಮಾಡಿ ಚುನಾವಣೆಗೆ ಹೋಗುವ ಅಂತಿಮ ನಿರ್ಧಾರ ಮಾಡುವ ಚಿಂತನೆ ಹೈಕಮಾಂಡ್ ಮುಂದಿದೆ.

    ಯಾಕೆ ಚುನಾವಣೆ?
    ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ನಿರೀಕ್ಷೆಗೂ ಮೀರಿ ಬಿಜೆಪಿ ಗೆಲುವು ಸಾಧಿಸಿದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ಅವರು ಕರ್ನಾಟಕವನ್ನ ಟಾರ್ಗೆಟ್ ಮಾಡಲಿದ್ದಾರೆ. ಕೇಂದ್ರದಂತೆ ರಾಜ್ಯದಲ್ಲಿ ಕೂಡ ಸ್ಪಷ್ಟ ಬಹುಮತದ ಬಿಜೆಪಿ ಸರ್ಕಾರವನ್ನು ರಚಿಸಲು ಬಿಜೆಪಿ ಹೈಕಮಾಂಡ್ ಯೋಚಿಸಿದೆ ಎನ್ನಲಾಗಿದೆ.

    ಕಾಂಗ್ರೆಸ್, ಜೆಡಿಎಸ್ ಶಾಸಕರ ರಾಜೀನಾಮೆಯಿಂದ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ತನ್ನ ಅವಧಿಯನ್ನು ಪೂರ್ಣಗೊಳಿಸಬೇಕಾದರೆ ಉಪಚುನಾವಣೆಯಲ್ಲಿ 6 ಕ್ಷೇತ್ರಗಳಲ್ಲಿ ಜಯಗಳಿಸಬೇಕು. ಕರ್ನಾಟಕ ವಿಧಾನಸಭೆಯಲ್ಲಿ ಒಟ್ಟು ಈಗ ಬಿಜೆಪಿಯ ಸಂಖ್ಯಾ ಬಲ 105(ಪಕ್ಷೇತರ ಸೇರಿದರೆ 106) ಇದೆ. ಸರಳ ಬಹುಮತಕ್ಕೆ 112 ಸ್ಥಾನಗಳ ಅವಶ್ಯಕತೆಯಿದೆ. ಹೀಗಾಗಿ 15 ಕ್ಷೇತ್ರಗಳಲ್ಲಿ ನಡೆಯುವ ಉಪಚುನಾವಣೆಯಲ್ಲಿ ಕನಿಷ್ಟ 6 ಕ್ಷೇತ್ರಗಳಲ್ಲಿ ಜಯಗಳಿಸಲೇಬೇಕಾದ ಅನಿವಾರ್ಯತೆಗೆ ಬಿಜೆಪಿ ಸಿಲುಕಿದೆ.

    ಸದ್ಯ ವಿಧಾನಸಭೆಯಲ್ಲಿ ಬಿಎಸ್‍ಪಿ 1, ಬಿಜೆಪಿ 105, ಕಾಂಗ್ರೆಸ್ 66, ಜೆಡಿಎಸ್ 34 ಶಾಸಕರ ಬಲಾಬಲವನ್ನು ಹೊಂದಿದೆ. ಒಂದು ವೇಳೆ 6 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲದೇ ಇದ್ದರೆ ರಾಜ್ಯದಲ್ಲಿ ಮತ್ತೆ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ. ಒಂದೊಮ್ಮೆ 6 ಸ್ಥಾನ ಗೆದ್ದರು ಬಿಜೆಪಿ ಅಲ್ಪ ಬಹುಮತದ ಸರ್ಕಾರ ಮುಂದುವರಿಯುತ್ತದೆ. ಈ ಅವಧಿಯಲ್ಲಿ ಬಿಜೆಪಿಯ ಯಾವುದೇ ಶಾಸಕರು ಕೈಕೊಟ್ಟರು ಮತ್ತೆ ಸರ್ಕಾರ ಪತನವಾಗುತ್ತದೆ. ಪರಿಣಾಮ ಇಂತಹ ಸರ್ಕಾರ ಹೊಂದಿರುವುದಕ್ಕಿಂತ ಚುನಾವಣೆ ಎದುರಿಸಿ ಬಹುಮತದ ಸ್ಪಷ್ಟ ಸರ್ಕಾರ ರಚನೆ ಮಾಡುವುದು ಉತ್ತಮ ಎಂಬ ಚರ್ಚೆ ಹೈಕಮಾಂಡ್ ಮಾಡುತ್ತಿದೆ ಎನ್ನಲಾಗುತ್ತಿದೆ.

  • ಡಿಸಿಎಂ ಸ್ಥಾನ ತಪ್ಪಿಸಲು ಯತ್ನಿಸಿದ್ರು- ಪರಮೇಶ್ವರ್ ಪರ ಅನರ್ಹ ಶಾಸಕ ಸೋಮಶೇಖರ್ ಬ್ಯಾಟಿಂಗ್

    ಡಿಸಿಎಂ ಸ್ಥಾನ ತಪ್ಪಿಸಲು ಯತ್ನಿಸಿದ್ರು- ಪರಮೇಶ್ವರ್ ಪರ ಅನರ್ಹ ಶಾಸಕ ಸೋಮಶೇಖರ್ ಬ್ಯಾಟಿಂಗ್

    ಬೆಂಗಳೂರು: ಮಾಜಿ ಡಿಸಿಎಂ ಪರಮೇಶ್ವರ್ ಅವರಿಗೆ ಮೈತ್ರಿ ಸರ್ಕಾರದಲ್ಲಿ ಡಿಸಿಎಂ ಸ್ಥಾನ ತಪ್ಪಿಸಲು ಯತ್ನಿಸಿದ್ದರು ಎಂದು ಅನರ್ಹ ಶಾಸಕ ಸೋಮಶೇಖರ್ ಅವರು ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ಅವರನ್ನು ಬಿಟ್ಟು ಕಾಂಗ್ರೆಸ್ ಪಕ್ಷ ಕಟ್ಟಲು ಆಗಲ್ಲ. ಯಾರಾದರೂ ಪರಮೇಶ್ವರ್ ಅವರನ್ನು ಬಿಟ್ಟು ಪಕ್ಷ ಕಟ್ಟುತ್ತೇವೆ ಎಂದರೆ ಅದು ಸುಳ್ಳು. ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ಒಂದೇ ನಾಣ್ಯದ ಎರಡು ಮುಖಗಳು. ಸುಮ್ಮನೆ ಕೆಲವರು ಅವರನ್ನು ಹಾವು, ಮುಂಗುಸಿ ಎಂದು ಬಿಂಬಿಸುತ್ತಿದ್ದಾರೆ. ಡಿಸಿಎಂ ಸ್ಥಾನ ತಪ್ಪಿಸಲು ಕೂಡ ಪ್ರಯತ್ನ ನಡೆಸಿದ್ದರು. ಅದು ಸಾಧ್ಯವಾಗಲಿಲ್ಲ, ಈ ಕುರಿತು ಸೂಕ್ತ ಸಂದರ್ಭದಲ್ಲಿ ಬಹಿರಂಗ ಪಡಿಸುತ್ತೇವೆ ಎಂದರು.

    ಇದೇ ವೇಳೆ ಮಧ್ಯಂತರ ಚುನಾವಣೆ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಎಚ್‍ಡಿ ದೇವೇಗೌಡ, ಸಿದ್ದರಾಮಯ್ಯ ಅವರು ಏನೇ ಹೇಳಲಿ. ಚುನಾವಣೆಯ ಕುರಿತು ಅಧಿಕೃತವಾಗಿ ಹೇಳುವುದು ಆಯೋಗ ಮಾತ್ರ. ಕಾಂಗ್ರೆಸ್ ನಾಯಕರಿಗೆ ಮಾಡಲು ಕೆಲಸ ಇಲ್ಲ. ಬೆಳಗ್ಗೆ ಎದ್ದ ಕ್ಷಣವೇ ನಮ್ಮದೇ ಚಿಂತೆ ಎಂದು ಕಿಡಿಕಾರಿದರು.

    ಅಭಿವೃದ್ಧಿಗಾಗಿ ಭಿಕ್ಷೆ: ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಾವು ಕ್ಷೇತ್ರದ ಅಭಿವೃದ್ಧಿಗಾಗಿ ಭಿಕ್ಷೆ ಕೇಳುತ್ತಿದ್ದೇವೆ. ಹುಲಿ ಎಲ್ಲೇ ಇದ್ದರು ಹುಲಿಯೇ. ಅಶ್ವಥ್ ನಾರಾಯಣ್ ಹಾಗೂ ಯೋಗೇಶ್ವರ್ ಅವರಿಗೂ ನಮಗೂ ಯಾವುದೇ ಸಂಬಂಧವಿಲ್ಲ, ನಮ್ಮ ಪ್ರಕರಣ ಸದ್ಯದಲ್ಲೇ ನ್ಯಾಯಾಲಯದಲ್ಲಿ ವಿಚಾರಣೆಗೆ ಬರುತ್ತೆ. ನಮ್ಮ ಪರ ತೀರ್ಪು ಬರುವ ವಿಶ್ವಾಸವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ನಾವು ಕಾಂಗ್ರೆಸ್ ನಾಯಕರಿಗೆ ಸಚಿವರಾಗುತ್ತೇವೆ ಎಂದು ಹೇಳಿಲ್ಲ. ಅಲ್ಲದೇ ನಾವು ಯಾರು ಬಿಜೆಪಿಗೆ ಸೇರ್ಪಡೆಯಾಗುತ್ತೇವೆ ಎಂದು ಹೇಳಿಲ್ಲ. ನ್ಯಾಯಾಲಯದ ವಿಚಾರಣೆ ನಡೆದ ಬಳಿಕ ಏನಾಗುತ್ತದೆ ತೀರ್ಮಾನ ಮಾಡುತ್ತೇವೆ. ಚುನಾವಣೆ ಬಗ್ಗೆ ಈಗಾಗಲೇ ಆಯೋಗಕ್ಕೂ ಪತ್ರ ಬರೆದಿದ್ದೇವೆ. ಆದರೆ ಕಾಂಗ್ರೆಸ್ ನಾಯಕರಿಗೆ ಹೇಳಲು ಬೇರೆ ಏನು ಇಲ್ಲದ ಕಾರಣ ಮಧ್ಯಂತರ ಚುನಾವಣೆ ಬಗ್ಗೆ ಹೇಳಿಕೆ ನೀಡುತ್ತಾರೆ ಅಷ್ಟೇ. ಅವರಿಗೆ ಅನರ್ಹ ಶಾಸಕರ ಕ್ಷೇತ್ರದಲ್ಲಿ ಚುನಾವಣೆಯದ್ದೆ ಬಹುದೊಡ್ಡ ಚಿಂತೆಯಾಗಿದೆ ಎಂದರು. ಅಲ್ಲದೇ ನಾವು ಕಾಂಗ್ರೆಸ್ ಪಕ್ಷವನ್ನ ಕ್ಷೇತ್ರದಲ್ಲಿ ಕಟ್ಟಿ ಬೆಳೆಸಿದ್ದೇವೆ, ನಮ್ಮನ್ನು ಉಚ್ಛಾಟನೆ ಮಾಡಲು ಆಗಲ್ಲ. ಇನ್ನೂ ಮೂರು ವರ್ಷ ಶಾಸಕರಾಗಿ ಇರಬೇಕು ಎಂದೇ ನ್ಯಾಯಾಲಯಕ್ಕೆ ಹೋಗಿದ್ದೇವೆ ಎಂದು ತಿಳಿಸಿದರು.

  • 18 ತಿಂಗಳ ನಂತರ ಮತ ಭಿಕ್ಷೆ: ಕೋಡಿಹಳ್ಳಿ ಶ್ರೀ ಭವಿಷ್ಯ

    18 ತಿಂಗಳ ನಂತರ ಮತ ಭಿಕ್ಷೆ: ಕೋಡಿಹಳ್ಳಿ ಶ್ರೀ ಭವಿಷ್ಯ

    ಹಾವೇರಿ: 18 ತಿಂಗಳ ನಂತರ ಮತ ಭಿಕ್ಷೆ ಎಂದು ನಾನು ಚುನಾವಣೆ ಪೂರ್ವದಲ್ಲಿ ಹೇಳಿದ್ದೆ. ಈಗ 14, 15 ತಿಂಗಳು ಮುಗಿದಿದೆ, ಇನ್ನೂ ಮೂರು ನಾಲ್ಕು ತಿಂಗಳು ಕಾದು ನೋಡಿ ಎಂದು ಕೋಡಿಹಳ್ಳಿ ಮಠದ ಶ್ರೀ ಭವಿಷ್ಯ ಹೇಳಿದ್ದಾರೆ.

    ಹಾವೇರಿಯಲ್ಲಿ ಮಾತನಾಡಿದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಬಿಎಸ್‍ವೈ ಸರ್ಕಾರದ ಪತನದ ಮುನ್ಸೂಚನೆ ನೀಡಿದ್ದಾರೆ. ಮಧ್ಯಂತರ ಚುನಾವಣೆ ಸನಿಹ ಬಂದಿದೆ ಎಂಬ ವಿಚಾರ ಕೇಳಿದಾಗ ಮೈತ್ರಿ ಸರ್ಕಾರ 14 ತಿಂಗಳಿಗೆ ಪತನವಾಗಿದೆ. ಇನ್ನೂ ಕಾಲಾವಕಾಶ ಇದೆ ಕಾದು ನೋಡಿ ಎಂದರು.

    ಇದೇ ವೇಳೆ ಅನರ್ಹ ಶಾಸಕರ ಬಗ್ಗೆ ಕೇಳಿದಾಗ, ಆದರ ಬಗ್ಗೆ ಹೇಳಿದರೆ ದೈವತ್ವದ ಬೆಲೆ ಇಲ್ಲದಾಗುತ್ತೆ. ದೇವರು, ಧರ್ಮ ಹೇಳಬಹುದು. ರಾಜಕೀಯ ಏನು ಮಾಡೋಕೆ ಹೇಳೋದು ಎಂದರು. ದೇಶದಲ್ಲಿ ದಾಯಾದಿಗಳ ಕಲಹ ಮೊದಲಿನಿಂದಲೂ ನಡೆಯುತ್ತಲೇ ಬಂದಿದೆ. ಅದರಂತೆ ಭಾರತ-ಪಾಕ್ ಯುದ್ಧೋನ್ಮಾದ, ಯುದ್ಧ ಮುಂದುವರಿಯುತ್ತದೆ ಎಂದು ಶ್ರೀಗಳು ಭವಿಷ್ಯ ಹೇಳಿದ್ದಾರೆ.

  • ಮಹಾರಾಷ್ಟ್ರದ ಚುನಾವಣೆ ಫಲಿತಾಂಶದ ಮೇಲೆ ನಿಂತಿದೆ ರಾಜ್ಯದ ರಾಜಕೀಯ ಭವಿಷ್ಯ

    ಮಹಾರಾಷ್ಟ್ರದ ಚುನಾವಣೆ ಫಲಿತಾಂಶದ ಮೇಲೆ ನಿಂತಿದೆ ರಾಜ್ಯದ ರಾಜಕೀಯ ಭವಿಷ್ಯ

    ಬೆಂಗಳೂರು: ನೆರೆಯ ಮಹಾರಾಷ್ಟ್ರದಲ್ಲಿ ಫೆಬ್ರವರಿಯಲ್ಲಿ ನಡೆಯುವ ಚುನಾವಣೆ ಕರ್ನಾಟಕದಲ್ಲಿ ಮಧ್ಯಂತರ ಚುನಾವಣೆ ಭವಿಷ್ಯವನ್ನು ನಿರ್ಧರಿಸುತ್ತೆ ಎನ್ನಲಾಗುತ್ತಿದ್ದು, ರಾಜ್ಯದಲ್ಲಿ ಯಾವ ಕ್ಷಣದಲ್ಲಿ ಬೇಕಾದರು ಚುನಾವಣೆ ನಡೆಯಬಹುದು ಅನ್ನೋ ವಿಪಕ್ಷಗಳ ಮಾತು ನಿಜವಾಗುತ್ತೆ ಎಂಬ ಅನುಮಾನಗಳು ಶುರುವಾಗಿದೆ.

    ನೆರೆಯ ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ಬಿಜೆಪಿ ಗೆಲುವು ಸಾಧಿಸಿದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ಅವರು ಕರ್ನಾಟಕವನ್ನ ಟಾರ್ಗೆಟ್ ಮಾಡಲಿದ್ದಾರೆ. ಕೇಂದ್ರದಂತೆ ರಾಜ್ಯದಲ್ಲಿ ಕೂಡ ಸ್ಪಷ್ಟ ಬಹುಮತದ ಬಿಜೆಪಿ ಸರ್ಕಾರವನ್ನು ರಚಿಸಲು ಬಿಜೆಪಿ ಹೈಕಮಾಂಡ್ ಯೋಚಿಸಿದೆ ಎನ್ನಲಾಗಿದೆ. ಆದ್ದರಿಂದ ಮಹಾರಾಷ್ಟ್ರದಲ್ಲಿ ನಡೆಯುವ ಚುನಾವಣೆ ಫಲಿತಾಂಶದ ಮೇಲೆ ಕರ್ನಾಟಕದ ಮಧ್ಯಂತರ ಚುನಾವಣೆ ಭವಿಷ್ಯ ನಿರ್ಧಾರವಾಗುತ್ತದೆ. ಸ್ವತಃ ಬಿಜೆಪಿ ನಾಯಕರುಗಳೇ ಚುನಾವಣೆಗೆ ತೆರೆ ಮರೆಯಲ್ಲಿ ಸಿದ್ಧತೆ ನಡೆಸುತ್ತಿದ್ದಾರಾ ಎಂಬ ಪ್ರಶ್ನೆ ಉದ್ಭವಿಸಿದೆ.

    ಫೆಬ್ರವರಿಯಲ್ಲಿ ಮಹಾರಾಷ್ಟ್ರದಲ್ಲಿ ಚುನಾವಣೆ ನಡೆಯಲಿದೆ. ಆದ್ದರಿಂದ ಇನ್ನು 6 ತಿಂಗಳಿಗೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯೋದು ಗ್ಯಾರಂಟಿನಾ? ಸಿಎಂ ಬಿಎಸ್ ಯಡಿಯೂರಪ್ಪ ಅವರ ವಿರೋಧದ ನಡುವೆಯು ಬಿಜೆಪಿಯಲ್ಲಿ ಚುನಾವಣಾ ಸಿದ್ಧತೆ ಆರಂಭವಾಗಿದೆಯಾ ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

    ಮೋದಿ, ಶಾ ಅವರ ಈ ಲೆಕ್ಕಾಚಾರಕ್ಕೆ ರಾಜ್ಯ ಬಿಜೆಪಿಯ ಕೆಲವು ನಾಯಕರು ಸಹ ಸಮ್ಮತಿ ಸೂಚಿಸಿದ್ದಾರೆ. ಆದರೆ ಸಿಎಂ ಯಡಿಯೂರಪ್ಪ ಮಾತ್ರ ಚುನಾವಣೆಯ ಬಗ್ಗೆ ಮಾತನಾಡದೆ ಸರ್ಕಾರ ಉಳಿಸಿಕೊಂಡು ಹೋಗುವ ಲೆಕ್ಕಾಚಾರದಲ್ಲಿದ್ದಾರೆ. ಆದರೆ ಮಹಾರಾಷ್ಟ್ರ ಚುನಾವಣಾ ಫಲಿತಾಂಶದ ಮೇಲೆ ರಾಜ್ಯ ರಾಜಕಾರಣದ ಭವಿಷ್ಯವು ನಿರ್ಧಾರವಾಗಲಿದೆ. ಈ ಮೂಲಕ ಕೇಂದ್ರ ಬಿಜೆಪಿ ನಾಯಕರ ಚುನಾವಣಾ ಆಸಕ್ತಿ ರಾಜ್ಯ ರಾಜಕಾರಣದಲ್ಲಿ ಇನ್ನೊಂದು ಸುತ್ತಿನ ರಾಜಕೀಯ ಜಿದ್ದಾ ಜಿದ್ದಿಗೆ ವೇದಿಕೆ ಸೃಷ್ಟಿಸಿ ಕೊಡುವ ಸಾಧ್ಯತೆ ಕಂಡುಬರುತ್ತಿದೆ.

  • ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಗ್ಯಾರಂಟಿ- ವಾಟಾಳ್ ನಾಗರಾಜ್

    ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಗ್ಯಾರಂಟಿ- ವಾಟಾಳ್ ನಾಗರಾಜ್

    ಹುಬ್ಬಳ್ಳಿ: ಬಿಜೆಪಿಯವರ ನಡೆ ಸರಿಯಾಗಿಲ್ಲ. ಬಿಜೆಪಿಯವರ ಬಹಿರಂಗವಾಗಿ ವ್ಯಾಪಾರಕ್ಕೆ ಇಳಿದಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಗ್ಯಾರಂಟಿ ಬರುತ್ತದೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಭವಿಷ್ಯ ನುಡಿದಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿಲ್ಲ. ನಂಜುಂಡಪ್ಪ ವರದಿಯನ್ನು ಸರಿಯಾಗಿ ಅನುಷ್ಠಾನ ಮಾಡಿಲ್ಲ. ಮಹದಾಯಿ ವಿಷಯದಲ್ಲಿ ಸರ್ಕಾರ ಏನು ಮಾಡಿದೆ. ಜಿಂದಾಲ್ ಉಳಿಸಿಕೊಳ್ಳಲು ಒಬ್ಬ ಮಂತ್ರಿಯನ್ನು ನೇಮಕ ಮಾಡುತ್ತಾರೆ. ಆದರೆ ಮಹದಾಯಿ ವಿಷಯದಲ್ಲಿ ಒರ್ವ ಮಂತ್ರಿಯನ್ನು ನೇಮಕ ಮಾಡಿಲ್ಲ ಎಂದು ಗರಂ ಆದರು.

    ಅಗಸ್ಟ್ 12 ರಂದು ಕರ್ನಾಟಕದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹೋರಾಟ ಮಾಡುತ್ತೇನೆ. ಬೀದರ್ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಲಗಿ ಹೋರಾಟ ಮಾಡುತ್ತೇನೆ. ಉತ್ತರ ಕರ್ನಾಟಕ ಕುಡಿಯುವ ನೀರು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಈ ಹೋರಾಟ ಮಾಡುವುದಾಗಿ ಎಚ್ಚರಿಕೆ ನಿಡಿದರು.

    ಶಾಸಕರು, ಹಾದಿ ಬೀದಿಯಲ್ಲಿ ಹೋಗುವವರಿಗೆ ರಾಜೀನಾಮೆ ಕೊಡೋಕೆ ಆಗೋದಿಲ್ಲ. ರಾಜ್ಯಪಾಲರಿಗೆ ರಾಜೀನಾಮೆ ಕೊಡುವ ಬದಲು ಸ್ಪೀಕರ್ ಅವರಿಗೆ ಕೊಡಬೇಕು. ಇದು ಬ್ಲ್ಯಾಕ್‍ಮೇಲ್ ತಂತ್ರವಾಗಿದೆ ಎಂದರು.

    ಈ ಹಿಂದೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಕೂಡ ಮಧ್ಯಂತರ ಚುನಾವಣೆ ಬರಬಹುದು ಎಂದು ಹೇಳಿಕೆ ನಿಡಿದ್ದರು. ತಮ್ಮ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಒಳಗಾಗುತ್ತಿದ್ದಂತೆಯೇ ಸ್ಪಷ್ಟನೆ ನೀಡಿದರು. ಮುಖ್ಯಮಂತ್ರಿಗಳಾಗಿ ಸಿದ್ದರಾಮಯ್ಯ ಅವರು ಉತ್ತಮ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಮೈತ್ರಿ ಸರ್ಕಾರದಲ್ಲೂ ಮುಂದುವರಿಸಲಾಗಿದೆ. ಮೈತ್ರಿ ಸರ್ಕಾರ ಉಳಿಯವುದು ಬಿಡುವುದು ಕಾಂಗ್ರೆಸ್ ಹೈಕಮಾಂಡ್‍ಗೆ ಬಿಟ್ಟು ಕೊಟ್ಟಿದ್ದೇನೆ. ಸದ್ಯ ಪಕ್ಷದ ಸಂಘಟನೆಯಲ್ಲಿ ತಾವು ತೊಡಗಿದ್ದೇವೆ ಎಂದು ಹೇಳಿದ್ದರು.

    ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕೆಲ ಸ್ಥಾನಗಳಿಗೆ ಮಧ್ಯಂತರ ಚುನಾವಣೆಗಳು ಮುಂದಿನ ಅವಧಿಯಲ್ಲಿ ಬರುತ್ತಿದ್ದು, ಈ ಚುನಾವಣೆಯಲ್ಲಿ ನಾವು ಕಳೆದುಕೊಂಡ ಸ್ಥಾನಗಳ ಬಗ್ಗೆ ಮಾತನಾಡಿದ್ದೇನೆ. ಮತ್ತೆ ಜನರ ವಿಶ್ವಾಸ ಗಳಿಸಿ ತಳ ಮಟ್ಟದಿಂದ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದೇನೆ. ಈ ಬಗ್ಗೆ ನಾನು ಮಾತನಾಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದರು.