Tag: ಮಧುಮಗ

  • ಬಿಟ್ ಬಿಡಿ ಸಾರ್ ನಾನೇ ಮದ್ವೆ ಗಂಡು-ಪೊಲೀಸರಿಗೆ ವರನ ಮನವಿ

    ಬಿಟ್ ಬಿಡಿ ಸಾರ್ ನಾನೇ ಮದ್ವೆ ಗಂಡು-ಪೊಲೀಸರಿಗೆ ವರನ ಮನವಿ

    ಬೆಂಗಳೂರು: ರಾಜ್ಯದಲ್ಲಿ ವೀಕೆಂಡ್ ಲಾಕ್‍ಡೌನ್ ಮಧ್ಯೆ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡ ಮಧುಮಗನೊಬ್ಬ ಬಿಟ್ ಬಿಡಿ ಸಾರ್ ನಾನೇ ಮದ್ವೆ ಗಂಡು ಎಂದು ಪೊಲೀಸರಿಗೆ ಮನವಿ ಮಾಡಿಕೊಂಡು ಮದುವೆಗೆ ತೆರಳಿರುವ ಘಟನೆ ನಗರದ ಮಾಗಡಿ ರಸ್ತೆಯಲ್ಲಿ ನಡೆದಿದೆ.

    ಬೆಂಗಳೂರಿನ ಪ್ರಮುಖ ರಸ್ತೆಗಳನ್ನು ಮುಚ್ಚಿ ವೀಕೆಂಡ್ ಲಾಕ್‍ಡೌನ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರು, ಅನಗತ್ಯ ರೋಡ್‍ಗಿಳಿಯುವವರ ಮೇಲೆ ಕ್ರಮಕ್ಕೆ ಮುಂದಾಗಿದ್ದಾರೆ. ಹಾಗಾಗಿ ನಗರದ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಸಂಚರಿಸುವವರನ್ನು ತಪಾಸಣೆಗೆ ಒಳಪಡಿಸುತ್ತಿದ್ದಾರೆ. ಇಂದು ಮಾಗಡಿ ರೋಡ್‍ನಲ್ಲಿ ಪೊಲೀಸರು ಬೆಳಗ್ಗೆ ತಪಾಸಣೆಗೆ ಇಳಿದಿದ್ದರು. ಈ ವೇಳೆ ಬೈಕ್‍ನಲ್ಲಿ ಬಂದಾತನೊಬ್ಬ ಮದ್ವೆ ಸಾರ್, ಮದ್ವೆ ಸಾರ್ ನನ್ನನ್ನು ಬಿಡಿ ಎಂದಿದ್ದಾನೆ. ಪೊಲೀಸರು ಕೊಡಪ್ಪ ಮದ್ವೆ ಕಾರ್ಡ್ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಆತ ನಾನೇ ಮದ್ವೆ ಗಂಡು ನನ್ನ ನಂಬಿ ಎಂದು ಖಾಕಿಗಳಿಗೆ ರಿಕ್ವೆಸ್ಟ್ ಮಾಡಿಕೊಂಡಿದ್ದಾನೆ.

    ವರ ಎಷ್ಟೇ ಕೇಳಿಕೊಂಡರು ನಂಬದ ಪೊಲೀಸರು ಮದುವೆ ಕಾರ್ಡ್ ತೋರಿಸುವಂತೆ ತಿಳಿಸಿದ್ದಾರೆ. ಕೊನೆಗೆ ತಡಕಾಡಿ ಮದುವೆಯ ಆಮಂತ್ರಣ ಪತ್ರವನ್ನು ಪೊಲೀಸರ ಕೈಗೆ ನೀಡಿದ್ದಾನೆ. ನಂತರ ಪೊಲೀಸರು ಆತನೊಂದಿಗೆ ಅಲ್ಲಪ್ಪ ನೀನೇ ಮದುವೆ ಗಂಡು ಆದರೂ ಬೈಕ್ ನಲ್ಲಿ ಬಂದಿದ್ದೀಯಾ ಎಂದು ಪೊಲೀಸರು ಹಾಸ್ಯಚಟಾಕಿ ಹಾರಿಸಿದ್ದಾರೆ. ಹತ್ತು ಗಂಟೆಗೆ ಮುಹೂರ್ತ ಟೈಂ ಆಯ್ತು. ಹಾಗಾಗಿ ಬೈಕ್‍ನಲ್ಲಿ ಬಂದೆ ದೇವಸ್ಥಾನದಲ್ಲಿ ಸಿಂಪಲ್ ಮದ್ವೆ ಎಂದು ಉತ್ತರಿಸಿದ್ದಾನೆ. ಇದನ್ನು ಕಂಡ ಪೊಲೀಸರು ಮಧುಮಗನಿಗೆ ಶುಭಕೋರಿ ಮದುವೆಗೆ ಕಳಿಸಿಕೊಟ್ಟಿದ್ದಾರೆ.

  • ಪ್ರೀತಿಸಿದ್ದವಳ ಕೈ ಹಿಡಿಯಲು ಹೊರಟಿದ್ದ ಮಧುಮಗ ಅಪಘಾತದಲ್ಲಿ ಸಾವು

    ಪ್ರೀತಿಸಿದ್ದವಳ ಕೈ ಹಿಡಿಯಲು ಹೊರಟಿದ್ದ ಮಧುಮಗ ಅಪಘಾತದಲ್ಲಿ ಸಾವು

    ಕಾರವಾರ: ಕಾರು ಹಾಗೂ ಲಾರಿ ನಡುವೆ ಡಿಕ್ಕಿಯಾಗಿ ಮದುವೆಗೆ ಹೊರಟಿದ್ದ ಮಧುಮಗ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ನಡೆದಿದೆ.

    ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಿವಾಸಿ ಅಫ್ರೋಜ್ ಶೇಖ್ (27) ಮೃತಪಟ್ಟ ಮಧುಮಗ. ಅವಘಾತದಲ್ಲಿ ನಾಲ್ಕು ಜನರು ಗಂಭೀರವಾಗಿ ಗಾಯಗೊಂಡಿದ್ದು, ಯಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಅಫ್ರೋಜ್ ಶೇಖ್ ಕೆಲವು ವರ್ಷಗಳಿಂದ ಹಾವೇರಿ ಜಿಲ್ಲೆ ಹಾನಗಲ್ ಮೂಲದ ಯುವತಿಯನ್ನು ಪ್ರೀತಿಸುತ್ತಿದ್ದ. ಈ ವಿಚಾರವನ್ನು ಪೋಷಕರಿಗೆ ತಿಳಿಸಿ ಮದುವೆಗೆ ಒಪ್ಪಿಸಿದ್ದ. ಯುವತಿಯ ಮನೆಯಲ್ಲೂ ಮದುವೆಗೆ ಒಪ್ಪಿಗೆ ಸಿಕ್ಕಿತ್ತು. ಹೀಗಾಗಿ ಇಂದು ಹಾನಗಲ್‍ನಲ್ಲಿ ಅಫ್ರೋಜ್ ಶೇಖ್ ಮದುವೆ ನಿಶ್ಚಯವಾಗಿತ್ತು.

    ಅಫ್ರೋಜ್ ಸಂಬಂಧಿಕರ ಜೊತೆಗೆ ಕಾರಿನಲ್ಲಿ ದಾಂಡೇಲಿಯಿಂದ ಹಾನಗಲ್‍ಗೆ ಇಂದು ಬೆಳಗ್ಗೆ ಹೊರಟಿದ್ದ. ರಾಷ್ಟ್ರೀಯ ಹೆದ್ದಾರಿ 63ರಲ್ಲಿ ವೇಗವಾಗಿ ಕಾರು ಚಾಲನೆ ಮಾಡುತ್ತಿದ್ದ ಅಫ್ರೋಜ್ ಯಲ್ಲಾಪುರ ಪಟ್ಟಣದ ಸಮೀಪದಲ್ಲಿ ನಿಯಂತ್ರಣ ತಪ್ಪಿ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಅಫ್ರೋಜ್ ಸ್ಥಳದಲ್ಲೇ ಮೃತಪಟ್ಟಿದ್ದು, ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.

    ಅಪಘಾತವನ್ನು ನೋಡಿದ ಕೆಲ ಸ್ಥಳೀಯರು ಪೊಲೀಸ್ ಹಾಗೂ ಅಂಬುಲೆನ್ಸ್ ಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಗಾಯಾಳುಗಳನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮದ್ವೆಯಲ್ಲಿ ವರನಿಗೆ ಟೊಮೆಟೋ, ಮೊಟ್ಟೆ, ಸಗಣಿ ನೀರು, ಹಾಕಿ ಸ್ನಾನ ಮಾಡಿಸಿದ ಸ್ನೇಹಿತರು

    ಮದ್ವೆಯಲ್ಲಿ ವರನಿಗೆ ಟೊಮೆಟೋ, ಮೊಟ್ಟೆ, ಸಗಣಿ ನೀರು, ಹಾಕಿ ಸ್ನಾನ ಮಾಡಿಸಿದ ಸ್ನೇಹಿತರು

    ಮಂಗಳೂರು: ಮದುವೆಯ ದಿನ ಮಧುಮಗನಿಗೆ ಕೀಟಲೆ ಮಾಡೋದು ಮಾಮೂಲಿ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ರಾಯಿ ಎಂಬಲ್ಲಿ ನಡೆದ ಮದುವೆ ಮಾತ್ರ ತುಂಬನೇ ಡಿಫರೆಂಟ್ ಆಗಿತ್ತು. ಇತರ ಸ್ನೇಹಿತರಿಗೆ ಮದುವೆಯ ದಿನ ಕೀಟಲೆ ಕೊಡುತ್ತಿದ್ದ ಆತನಿಗೆ ಆತನ ಸ್ನೇಹಿತರು ಸಖತ್ ಆಗಿಯೇ ಶಾಕ್ ಕೊಟ್ಟಿದ್ದಾರೆ.

    ಹೌದು. ಬಂಟ್ವಾಳದ ರಾಯಿ ನಿವಾಸಿ ಮಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿರುವ ರಾಕೇಶ್‍ಗೆ ಕಳೆದ ಫೆಬ್ರವರಿ 19 ರಂದು ಮೆಹಂದಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮಧುಮಗ ರಾಕೇಶ್ ಶಾಸ್ತ್ರೋಕ್ತವಾಗಿ ಮೆಹೆಂದಿ ಕಾರ್ಯಕ್ರಮಕ್ಕೆ ತಯಾರಾಗುತ್ತಿದ್ದರೆ ಇತ್ತ ರಾಕೇಶ್ ಸ್ನೇಹಿತರು ಮಾತ್ರ ಕುಚೇಷ್ಠೆಗೆ ತಯಾರಾಗಿದ್ದರು.

    ಮಧುಮಗನಿಗೆ ಮನೆಯವರು ಹಾಲು ಸುರಿಯುತ್ತಿದ್ದಂತೆ ಬಂದ ಸ್ನೇಹಿತರು ರಾಕೇಶ್ ಮೇಲೆ ಹಳಸಿದ ಟೊಮೆಟೋ, ಮೊಟ್ಟೆ, ಸಗಣಿ ನೀರು ಸುರಿದಿದ್ದಾರೆ. ಅಷ್ಟೇ ಅಲ್ಲದೇ ಮದುವೆ ದಿನಾನೂ ಮಧುಮಗನನ್ನು ಬಿಡದ ಸ್ನೇಹಿತರು, ವಿವಿಧ ತರಕಾರಿಗಳ ಮಾಲೆಯನ್ನು ಮಾಡಿ ಹೊರೆಕಾಣಿಕೆ ರೂಪದಲ್ಲಿ ಮದುವೆ ಮಂಟಪಕ್ಕೆ ತಂದಿದ್ರು. ಎಲ್ಲಾ ಸ್ನೇಹಿತರು ಒಂದೇ ರೀತಿಯ ಪಂಚೆ ಹಾಗೂ ಅಂಗಿ ಧರಿಸಿದ್ದು, ಎಲ್ಲರ ಗಮನ ಸೆಳೆದಿತ್ತು.

    ಅಲ್ಲದೆ “ರಾಪಾಟದ ರಾಕೇಶ್‍ನ ಮದುವೆ” ಎಂದು ಬ್ಯಾನರ್ ಕೂಡಾ ಊರು ತುಂಬಾ ಹಾಕಿದ್ದಾರೆ. ಅದರಲ್ಲಿ ಮದುವೆಯ ಕುರಿತು ಡಿಫರೆಂಟ್ ಡೈಲಾಗ್‍ಗಳನ್ನು ಹಾಕಿದ್ದು ಊರಿನವರ ಗಮನ ಸೆಳೆದಿತ್ತು. ಬೇರೆ ಸ್ನೇಹಿತರ ಮದುವೆಯಲ್ಲಿ ಮಧುಮಕ್ಕಳಿಗೆ ರೇಗಿಸುತ್ತಿದ್ದ ರಾಕೇಶ್ ಗೆ ಈ ಬಾರಿ ಸ್ನೇಹಿತರೂ ರೇಗಿಸಿ ಸಖತ್ ಮಜಾ ತೆಗೆದುಕೊಂಡರು.

    ಸದ್ಯ ಮಧುಮಗನಿಗೆ ಯುವಕರ ಕೀಟಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಜನ ಸಖತ್ ಎಂಜಾಯ್ ಮಾಡುತ್ತಿದ್ದಾರೆ.

    https://www.youtube.com/watch?v=_zP21lk-DnI