Tag: ಮದ್ಯ ನಿಷೇಧ

  • ಸಾಮೂಹಿಕ ಗಣೇಶ ವಿಸರ್ಜನೆಗೆ ಬೆಂಗ್ಳೂರಿನ ಕೆಲವು ಏರಿಯಾಗಳಲ್ಲಿ ಮದ್ಯ ನಿಷೇಧ

    ಸಾಮೂಹಿಕ ಗಣೇಶ ವಿಸರ್ಜನೆಗೆ ಬೆಂಗ್ಳೂರಿನ ಕೆಲವು ಏರಿಯಾಗಳಲ್ಲಿ ಮದ್ಯ ನಿಷೇಧ

    ಬೆಂಗಳೂರು: ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆ ಸಾಮೂಹಿಕ ಗಣೇಶ ವಿಸರ್ಜನೆ ಮಾಡುವ ಬೆಂಗಳೂರಿನ ಕೆಲವು ಏರಿಯಾಗಳಲ್ಲಿ ಲಿಕ್ಕರ್ (liquor) ನಿಷೇಧಿಸಲಾಗಿದೆ.

    ಈ ಕುರಿತು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ (Karnataka State Police) ಆದೇಶ ಹೊರಡಿಸಿದೆ. ಕಾನೂನು ಸುವ್ಯವಸ್ಥೆಗೆ ತೊಂದರೆಯಾಗುವ ಸಾಧ್ಯತೆ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಬೆಂಗಳೂರಿನ (Bengaluru) ಕೆಲವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ CL-4, CL-6 ಪರವಾನಿಗೆ ಹೊರತುಪಡಿಸಿ ಉಳಿದೆಲ್ಲ ಮದ್ಯದಂಗಡಿಗಳನ್ನು ಬಂದ್ ಮಾಡಲಾಗುವುದು ಹಾಗೂ ರೆಸ್ಟೋರೆಂಟ್, ಹೋಟೆಲ್‌ಗಳಲ್ಲಿ ಆಹಾರ ಸೇವೆಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.ಇದನ್ನೂ ಓದಿ: ಮೈಸೂರಿನ ವಿಜ್ಞಾನ ಶಿಕ್ಷಕ ಮಧುಸೂದನ್‌ಗೆ ರಾಷ್ಟ್ರ ಪ್ರಶಸ್ತಿ

    ಎಲ್ಲೆಲ್ಲಿ ಬಂದ್?
    ಆ.29ರ ಬೆಳಿಗ್ಗೆ 6ಗಂಟೆಯಿಂದ ಆ.30ರ ಬೆಳಿಗ್ಗೆ 6 ಗಂಟೆವರೆಗೆ:
    ಉತ್ತರ ವಿಭಾಗದ ಆರ್.ಟಿ ನಗರ, ಜೆಸಿ ನಗರ, ಹೆಬ್ಬಾಳ ಮತ್ತು ಸಂಜಯನಗರ ಹಾಗೂ ಪೂರ್ವ ವಿಭಾಗದ ಡಿಜೆಹಳ್ಳಿ

    ಆ.31ರ ಬೆಳಿಗ್ಗೆ 6ಗಂಟೆಯಿಂದ ಸೆ.01ರ ಬೆಳಿಗ್ಗೆ 6 ಗಂಟೆವರೆಗೆ:
    ಪೂರ್ವ ವಿಭಾಗದ ಡಿಜೆಹಳ್ಳಿ, ಕೆಜಿಹಳ್ಳಿ, ಗೋವಿಂದಪುರ, ಭಾರತಿನಗರ, ಪುಲಿಕೇಶಿನಗರ, ಹಲಸೂರು, ಶಿವಾಜಿನಗರ, ಕಮರ್ಷಿಯಲ್ ಸ್ಟ್ರೀಟ್, ಈಶಾನ್ಯ ವಿಭಾಗದ ಯಲಹಂಕ, ಯಲಹಂಕ ಉಪನಗರ, ಕೊಡಿಗೇಹಳ್ಳಿ, ವಿದ್ಯಾರಣ್ಯಪುರ, ಹೆಬ್ಬಗೋಡಿ

    ಸೆ.14ರ ಬೆಳಿಗ್ಗೆ 6ಗಂಟೆಯಿಂದ ಸೆ.15ರ ಬೆಳಿಗ್ಗೆ 6 ಗಂಟೆವರೆಗೆ:
    ಕಾಮಾಕ್ಷಿಪಾಳ್ಯ ಹಾಗೂ ವಿಜಯನಗರ. ಇದನ್ನೂ ಓದಿ: ಇಂದು ಬೆಂಗಳೂರಿನ ಹಲವಡೆ ವಿದ್ಯುತ್‌ ವ್ಯತ್ಯಯ – ನಿಮ್ಮ ಏರಿಯಾ ಇದ್ಯಾ ಚೆಕ್‌ ಮಾಡಿಕೊಳ್ಳಿ

     

  • ನಿಷೇಧವಿದ್ದರೂ ಎಣ್ಣೆ ಪಾರ್ಟಿ ಮಾಡಿದ ವೈದ್ಯ ಅರೆಸ್ಟ್‌!

    ನಿಷೇಧವಿದ್ದರೂ ಎಣ್ಣೆ ಪಾರ್ಟಿ ಮಾಡಿದ ವೈದ್ಯ ಅರೆಸ್ಟ್‌!

    ಪಟ್ನಾ: ಮದ್ಯ ನಿಷೇಧಿಸಿದ್ದರೂ ಲೆಕ್ಕಿಸದೇ ಎಣ್ಣೆ ಪಾರ್ಟಿ ಮಾಡಿದ ವೈದ್ಯನನ್ನು ಪೊಲೀಸರು ಬಂಧಿಸಿರುವ ಘಟನೆ ಬಿಹಾರ್‌ನಲ್ಲಿ ನಡೆದಿದೆ. ಜಾರ್ಖಂಡ್‌ನ ಜಮ್ಷದ್‌ಪುರದ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಭಿಷೇಕ್‌ ಮುಂಡು ಬಂಧಿತ ವೈದ್ಯ.

    ನಿಷೇಧ ವಿಧಿಸಿದ್ದರೂ ನಿಯಮ ಉಲ್ಲಂಘಿಸಿ ಮದ್ಯ ಸೇವನೆ ಮಾಡಿರುವವರು ನಮ್ಮ ಕಸ್ಟಡಿಯಲ್ಲಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು. ಚರ್ಚ್‌ ಕಾಂಪೌಂಡ್‌ನಲ್ಲಿ ವೈದ್ಯ ಮದ್ಯ ಸೇವಿಸುತ್ತಿದ್ದಾರೆ ಎಂದು ಮಾಹಿತಿ ದೊರೆಯಿತು. ಸ್ಥಳಕ್ಕೆ ಧಾವಿಸಿ ಬಾಟಲಿ ಸಮೇತ ಆತನನ್ನು ವಶಕ್ಕೆ ಪಡೆದಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಅಂಕಲ್ ಅಂದಿದ್ದೇ ತಪ್ಪಾಯ್ತು – ಯುವತಿಗೆ ಹಿಗ್ಗಾಮುಗ್ಗಾ ಥಳಿಸಿದ ಅಂಗಡಿ ಮಾಲೀಕ

    ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮದ್ಯ ಸೇವನೆ ಮಾಡಿರುವುದು ದೃಢಪಟ್ಟಿದೆ. ಜಮ್ಷದ್‌ ಇಎಸ್‌ಐ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯ ಕ್ರಿಸ್‌ಮಸ್‌ ರಜೆ ಹಿನ್ನೆಲೆಯಲ್ಲಿ ಬಿಹಾರ್‌ಗೆ ಬಂದಿದ್ದ. ಈಗ ವೈದ್ಯ ಜೈಲು ಪಾಲಾಗಿದ್ದಾನೆ.

    POLICE JEEP

    ಈತ ಮದ್ಯದ ಬಾಟಲಿಯನ್ನು ಎಲ್ಲಿ ಖರೀದಿಸಿದ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ತನ್ನ ಬರ್ತ್‌ಡೇ ಪಾರ್ಟಿ ಸಿದ್ಧತೆಗೆ ಫಾರ್ಮ್‌ಹೌಸ್‌ಗೆ ಹೋಗಿದ್ದ ಸಲ್ಲುಗೆ ಹಾವು ಕಡಿತ!

    ಬಿಹಾರ್‌ ರಾಜ್ಯದಲ್ಲಿ ಮದ್ಯ ನಿಷೇಧ ಜಾರಿ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವುದಾಗಿ ಪೊಲೀಸರು ನ.26 ರಂದು ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದರು. ಮದ್ಯ ನಿಷೇಧದ ನಂತರ ರಾಜ್ಯದಲ್ಲಿ ಅಪರಾಧ ಪ್ರಕರಣಗಳ ಪ್ರಮಾಣ ಕಡಿಮೆಯಾಗಿದೆ ಎಂದು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.

  • ಇಡೀ ದೇಶದಲ್ಲಿ ಮದ್ಯ ನಿಷೇಧವಾಗಬೇಕು: ಸಂತೋಷ್ ಲಾಡ್

    ಇಡೀ ದೇಶದಲ್ಲಿ ಮದ್ಯ ನಿಷೇಧವಾಗಬೇಕು: ಸಂತೋಷ್ ಲಾಡ್

    ಧಾರವಾಡ: ಮದ್ಯ ಮಾರಾಟ ಎಲ್ಲ ಕಡೆ ನಿಷೇಧವಾಗಬೇಕು, ಇಡೀ ದೇಶದಲ್ಲಿ ಮದ್ಯ ನಿಷೇಧ ಆಗಬೇಕು ಎಂದು ಮಾಜಿ ಸಚಿವ ಸಂತೋಷ ಲಾಡ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ರಾಜ್ಯಗಳಲ್ಲಿ ಮದ್ಯ ನಿಷೇಧ ಮಾಡಿ, ಕೆಲ ರಾಜ್ಯಗಳಲ್ಲಿ ಚಾಲ್ತಿ ಇಡಬಾರದು. ಮದ್ಯ ಇಲ್ಲದೆ ಸರ್ಕಾರ ಇಲ್ಲ ಅಂತಾರೆ, ಅದನ್ನು ನಾನು ಒಪ್ಪುತ್ತೇನೆ. ಆದರೆ ಅಕ್ರಮ ಮದ್ಯ ಮಾರಾಟವಾದರೂ ಬಂದ್ ಆಗಲಿ ಎಂದು ಹೇಳಿದರು.

    ನಮ್ಮ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚು, ಎಲ್ಲ ಪಕ್ಷಗಳಲ್ಲಿ ಗುಂಪುಗಾರಿಕೆ ಇದ್ದೇ ಇದೆ. ಕಾಂಗ್ರೆಸ್ ನಲ್ಲಿ ಅಷ್ಟೇ ಅಲ್ಲ, ಬಿಜೆಪಿಯಲ್ಲಿ ಈಗ ಅವರನ್ನ ಇಳಿಸಲು ಇವರು, ಇವರನ್ನ ಇಳಿಸಲು ಅವರು ಹೊರಟಿದ್ದಾರೆ. ನಾನು ಯಾರೊಬ್ಬರ ಫಾಲೋವರ್ ಅಲ್ಲ, ಕಾಂಗ್ರೆಸ್ ಫಾಲೋವರ್, ನಮ್ಮ ಹೈಕಮಾಂಡ್ ಹೇಳಿದ್ದೇ ಫೈನಲ್. ಕೆಲವರು ಈಗಲೇ ನಮ್ಮ ಮುಖಂಡರಿಗೆ ಸಿಎಂ ಎಂದು ಹೇಳುತಿದ್ದಾರೆ. ಅದು ಅವರ ವೈಯಕ್ತಿಕ ಅಭಿಪ್ರಾಯ, ಚುನಾವಣೆ ಆಗಬೇಕು, ನಂತರ ಸಿಎಂ ಯಾರು ಎಂದು ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದರು.

  • ಮದ್ಯ ನಿಷೇಧಕ್ಕೆ ಆಗ್ರಹಿಸಿ ಸರ್ಕಾರಕ್ಕೆ ಹಣ ಕಳಿಸಿದ ಮಹಿಳೆಯರು

    ಮದ್ಯ ನಿಷೇಧಕ್ಕೆ ಆಗ್ರಹಿಸಿ ಸರ್ಕಾರಕ್ಕೆ ಹಣ ಕಳಿಸಿದ ಮಹಿಳೆಯರು

    – ಸರ್ಕಾರದ ಬೊಕ್ಕಸಕ್ಕೆ ನಷ್ಟವಾದರೆ ನಾವು ಹಣ ಕೊಡ್ತೇವೆ
    – 1,020ರೂ. ಮನಿ ಆರ್ಡರ್ ಮಾಡಿ ಆಕ್ರೋಶ

    ಧಾರವಾಡ: ಸರ್ಕಾರಕ್ಕೆ ಮಹಿಳೆಯರು ಹಣ ಕಳುಹಿಸುವ ಮೂಲಕ ರಾಜ್ಯದಲ್ಲಿ ಮದ್ಯ ನಿಷೇಧಿಸುವಂತೆ ಒತ್ತಾಯಿಸಿದ್ದಾರೆ.

    ನಗರದ ಮುರುಘಾಮಠ ಆವರಣದ ಅಂಚೆ ಕಚೇರಿ ಎದುರು ಪ್ರತಿಭಟನೆ ಮಾಡಿದ ಮಹಿಳೆಯರು, ಮನಿ ಆರ್ಡರ್ ಮೂಲಕ ಸರ್ಕಾರಕ್ಕೆ ಹಣ ಕಳುಹಿಸಿ ರಾಜ್ಯದಲ್ಲಿ ಮದ್ಯ ನಿಷೇಧಿಸುವಂತೆ ಆಗ್ರಹಿಸಿದ್ದಾರೆ. ಈ ಮೂಲಕ ಮಹಿಳೆಯರು ವಿನೂತನ ಪ್ರತಿಭಟನೆ ಮಾಡಿದ್ದಾರೆ.

    ಈ ಮೊದಲು ಮಹಿಳೆಯರು ಮನಿ ಆರ್ಡರ್ ಅಭಿಯಾನ ಮಾಡಿದ್ದರು. ಈ ವೇಳೆ ನೂರಾರು ಮಹಿಳೆಯರಿಂದ 1,020ರೂಪಾಯಿ ಜಮೆಯಾಗಿತ್ತು. ಈ ಹಣವನ್ನು ಇದೀಗ ರಾಜ್ಯ ಸರ್ಕಾರಕ್ಕೆ ಮನಿ ಆರ್ಡರ್ ಮಾಡಿದ್ದಾರೆ. ನಂತರ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರದ ಖಜಾನೆಗೆ ನಾವು ದುಡಿದ ಹಣ ಕೊಡುತ್ತೇವೆ, ಆದರೆ ಮದ್ಯ ಮಾರಾಟ ನಿಷೇಧಿಸಬೇಕು ಎಂದು ಪ್ರತಿಭಟನಾಕಾರ ಮಹಿಳೆಯರು ಆಗ್ರಹಿಸಿದರು.

  • ಸಂಪೂರ್ಣ ಮದ್ಯ ನಿಷೇಧಕ್ಕೆ ಸಚಿವ ರಮೇಶ್ ಜಾರಕಿಹೊಳಿ ಬೆಂಬಲ

    ಸಂಪೂರ್ಣ ಮದ್ಯ ನಿಷೇಧಕ್ಕೆ ಸಚಿವ ರಮೇಶ್ ಜಾರಕಿಹೊಳಿ ಬೆಂಬಲ

    ಚಿಕ್ಕೋಡಿ(ಬೆಳಗಾವಿ): ರಾಜ್ಯದಲ್ಲಿ ಮದ್ಯ ಸಂಪೂರ್ಣ ನಿಷೇಧ ಮಾಡಬೇಕು. ಸಂಪೂರ್ಣವಾಗಿ ಮದ್ಯ ನಿಷೇಧ ಮಾಡಲು ಮೊದಲು ನಾನೇ ಬೆಂಬಲ ಸೂಚಿಸುತ್ತೇನೆ ಎಂದು ನೀರಾವರಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

    ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚಿದ ಕೊರೊನಾ ಪಾಸಿಟಿವ್ ಹೆಚ್ಚಳ ಹಿನ್ನೆಲೆಯಲ್ಲಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊರೋನಾ ರೋಗ ಬಂದು ಜನರಿಗೆ ಒಳ್ಳೆಯ ದಾರಿ ತೋರಿಸಿದೆ. ಕೆಟ್ಟ ಚಟಗಳನ್ನ ಕಡಿಮೆ ಮಾಡಲು ಅವಕಾಶ ಸಿಕ್ಕಿದೆ. ಮದ್ಯದಿಂದ ಬಡವರೇ ಹಾಳಾಗೋದು, ಶ್ರೀಮಂತರಲ್ಲ. ಲಾಕ್‍ಡೌನ್‍ನಿಂದ ಮದ್ಯ ಸಿಗದ ಕಾರಣ ಗ್ರಾಮೀಣ ಭಾಗದ ಮಹಿಳೆಯರು ಸಂತಸದಿಂದ ಇದ್ದಾರೆ. ಹೀಗಾಗಿ ಮದ್ಯ ಬಂದ್ ಮಾಡಬೇಕು ಎನ್ನುವುದು ನನ್ನ ಅಭಿಪ್ರಾಯವಾಗಿದೆ ಎಂದರು.

    ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಕೊರೊನಾ ಸೊಂಕಿತ ವ್ಯಕ್ತಿ ಡಾನ್ಸ್ ವಿಚಾರವಾಗಿ ಮಾತನಾಡಿದ ಅವರು, ಆತನ ವರದಿ ನೆಗೆಟಿವ್ ಬಂದಿದ್ದಕ್ಕೆ ಆತ ಡಾನ್ಸ್ ಮಾಡಿದ್ದಾನೆ ಎಂದರು.

    ಬೆಳಗಾವಿ ಜಿಲ್ಲೆಯ ಉಸ್ತುವಾರಿ ನೋಡಲು ಜಗದೀಶ್ ಶೆಟ್ಟರ್ ಎಲ್ಲ ಕಡೆ ಬರಬೇಕು ಅಂತೇನೂ ಇಲ್ಲ. ಜಾಗತಿಕ ವ್ಯಾಧಿ ಹಿನ್ನೆಲೆಯಲ್ಲಿ ಎಲ್ಲರೂ ಜವಾಬ್ದಾರಿ ಹೊತ್ತು ಕೆಲಸ ಮಾಡಲಿದ್ದೇವೆ ಎಂದ ಸಚಿವ ಜಾರಕಿಹೊಳಿ ಹೇಳಿದರು.

  • ಉಪಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಮಧ್ಯೆ ಹೊಂದಾಣಿಕೆ ಇಲ್ಲ- ಸಚಿವ ಕೋಟ

    ಉಪಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಮಧ್ಯೆ ಹೊಂದಾಣಿಕೆ ಇಲ್ಲ- ಸಚಿವ ಕೋಟ

    ಉಡುಪಿ: ಅನರ್ಹ ಶಾಸಕರ ಸ್ಥಾನಗಳಿಗೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಹೊಂದಾಣಿಕೆ ಇಲ್ಲ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಸ್ಪಷ್ಟಪಡಿಸಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ದೇವೇಗೌಡರು ರಾಷ್ಟ್ರದ ಹಿರಿಯ ರಾಜಕಾರಣಿ. ಬಿಜೆಪಿ ಅವರನ್ನು ಬಹಳ ಗೌರವಿಸುತ್ತದೆ. ಅವರ ಮಗ ಕುಮಾರಸ್ವಾಮಿಯವರಿಗೆ ಅದೇ ಗೌರವ ನಮ್ಮಿಂದ ಸಿಗುತ್ತದೆ. ಆದರೆ ಉಪಚುನಾವಣೆಯಲ್ಲಿ ನಮ್ಮ ನಡುವೆ ಹೊಂದಾಣಿಕೆ ಇಲ್ಲ. ಸರಕಾರ ಉಳಿಸಲು ಜೆಡಿಎಸ್ ಸಹಾನುಭೂತಿ ತೋರಿಸಿದೆ ಅದಕ್ಕೆ ಧನ್ಯವಾದಗಳು. ಎಲ್ಲ 15 ಕ್ಷೇತ್ರದಲ್ಲಿ ಯಾವುದೇ ಒಳ ಒಪ್ಪಂದ ಆಗಿಲ್ಲ, ಅತ್ಯಂತ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಇದೇ ವೇಳೆ ಸಿದ್ದರಾಮಯ್ಯ ಟೀಕೆ ಕುರಿತು ಪ್ರತಿಕ್ರಿಯಿಸಿದ ಅವರು, ಟೀಕೆ ಮಾಡುವುದೇ ಸಿದ್ದರಾಮಯ್ಯನವರ ಕೆಲಸ. ನಾವು ಹೇಳಿದಂತೆ ಟಿಪ್ಪು ಜಯಂತಿಯನ್ನು ರದ್ದು ಮಾಡಿದ್ದೇವೆ. ಟಿಪ್ಪು ಪಠ್ಯ ರದ್ದು ಅದರ ಮುಂದುವರಿದ ಭಾಗ. ಈಗಿನ ತಲೆಮಾರಿಗೆ ಟಿಪ್ಪು ನ್ಯೂನತೆ ಕಂಡಿದೆ. ಮಡಿಕೇರಿ ಶಾಸಕರೊಬ್ಬರು ಟಿಪ್ಪು ಪಠ್ಯ ರದ್ದು ಮಾಡಲು ಮನವಿ ಮಾಡಿದ್ದರು. ಅವರ ಮನವಿ ಪರಿಶೀಲಿಸುವುದಾಗಿ ಶಿಕ್ಷಣ ಸಚಿವರು ಹಾಗೂ ಸಿಎಂ ಭರವಸೆ ನೀಡಿದ್ದಾರೆ ಎಂದರು.

    ಈಗ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಏಕಾಂಗಿಯಾಗಿದ್ದಾರೆ. ಸ್ವಪಕ್ಷೀಯರನ್ನು ಬಿಟ್ಟು ತಾಳ್ಮೆ ಕಳೆದುಕೊಂಡು ಮಾತನಾಡುವ ಅವರ ಮುನ್ನುಗ್ಗುವ ಗುಣವನ್ನು ಕಾಂಗ್ರೆಸ್ ಸಹಿಸುವುದಿಲ್ಲ ಎಂದರು.

    ದೇವರ ಹೆಸರಿನ ಮದ್ಯದಂಗಡಿಗಳಿಗೆ ಮರು ನಾಮಕರಣ ಮಾಡುವ ಕುರಿತು ಪ್ರತಿಕ್ರಿಯಿಸಿದ ಅವರು, ಮದ್ಯದಂಗಡಿಗೆ ದೇವರ ಹೆಸರು ಇಡುವುದು ಆಭಾಸವಾಗುತ್ತದೆ. ಹೀಗಾಗಿ ಬಾರ್, ವೈನ್ ಶಾಪ್ ಗಳಿಗೆ ದೇವರ ಹೆಸರಿಗೆ ಜನರಿಂದ ವಿರೋಧ ಬಂದಿದೆ. ನಾನು ಮುಜರಾಯಿ ಇಲಾಖೆ ಕಾರ್ಯದರ್ಶಿಗೆ ಒಂದು ಟಿಪ್ಪಣಿ ಕಳುಹಿಸಿದ್ದೇನೆ. ಸಾರ್ವಜನಿಕರಿಂದ ಬಂದಿರುವ ಅಭಿಪ್ರಾಯಕ್ಕೆ ಅಧಿಕಾರಿಗಳಿಂದ ಕಡತ ಸಿದ್ಧಪಡಿಸಲು ಸೂಚಿಸಿದ್ದೇನೆ. ಅಬಕಾರಿ ಮತ್ತು ಕಾನೂನು ಇಲಾಖೆ ಜೊತೆ ಚರ್ಚೆ ಮಾಡಲು ಸೂಚನೆ ನೀಡಿದ್ದೇನೆ. ಈ ಕುರಿತು ಯಾರೂ ಗಾಬರಿಗೊಳ್ಳುವ ಅಗತ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚರ್ಚೆಗೆ ಅವಕಾಶ ಇದೆ. ಸಾರ್ವಜನಿಕ ಅಭಿಪ್ರಾಯಕ್ಕೂ ಅವಕಾಶ ಇದೆ. ಅಭಾಸ ಹೆಸರು ಬದಲಿಸುವ ಚಿಂತನೆ ಮುಜರಾಯಿ ಇಲಾಖೆ ಮುಂದಿದೆ ಎಂದರು.

    ಬಾರ್ ಒಳಗೆ ದೇವರ ಫೋಟೋ ಇಡಬೇಡಿ ಎಂದಿಲ್ಲ. ದೇವರ ಹೆಸರಿರುವವರು ಕುಡಿಯಬಹುದಾ ಎಂದು ನೀವು ಪ್ರಶ್ನೆ ಮಾಡಬಹುದು? ದೇವರ ಹೆಸರು ಇರುವವರು ಮದ್ಯದಂಗಡಿಯಿಂದ ವಾಪಾಸ್ ಕಳುಹಿಸಬೇಕು ಎಂಬ ಅಭಿಪ್ರಾಯ ಇದೆ. ಸರಕಾರ ಈ ವರೆಗೆ ಯಾವುದೇ ನಿರ್ಧಾರ ಮಾಡಿಲ್ಲ. ಅಬಕಾರಿ, ಕಾನೂನು ಇಲಾಖೆ ಒಪ್ಪದಿದ್ದರೆ ನಾವೇನೂ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

    ಬಿಜೆಪಿಯಲ್ಲಿ ಫೇಲ್ ಆಗುವ ವಿದ್ಯಾರ್ಥಿಗಳಿಲ್ಲ, ಹೈಕಮಾಂಡ್ ನಿಂದ ರಾಜ್ಯ ಸರಕಾರದ ಸಾಧನೆ ಕುರಿತು ಪರಾಮರ್ಶೆ ನಡೆಸುತ್ತಿದೆ. ರಾಜ್ಯ ಸರಕಾರದ ನೂರು ದಿನದ ಸಾಧನೆ ಜನತೆ ಮುಂದಿಟ್ಟಿದ್ದೇವೆ. ನೆರೆಯ ವಾತಾವರಣವನ್ನು ನಿಭಾಯಿಸಿದ್ದೇವೆ. ಕೇಂದ್ರ ಸರಕಾರ ಸಹ ನಮ್ಮ ಕೆಲಸವನ್ನು ಗಮನಿಸುತ್ತದೆ. ನೀವು ಎಷ್ಟು ಕೆಲಸ ಮಾಡಿದ್ದೀರಿ ಎಮದು ಕೇಳಿದರೆ ತಪ್ಪೇನು? ಹೈಕಮಾಂಡ್ ಸಮೀಕ್ಷೆ ಮಾಡಿದ್ದರೆ ತಪ್ಪೇನು? ನಮ್ಮನ್ನು ಗಮನಿಸುತ್ತಿದ್ದರೆ ನಾವು ಚೆನ್ನಾಗಿ ಕೆಲಸ ಮಾಡಬಹುದು. ಪಾಸು- ಫೇಲಿನ ಪಟ್ಟಿ ನಮ್ಮಲ್ಲಿಲ್ಲ, ಫೇಲ್ ಆಗುವ ವಿದ್ಯಾರ್ಥಿಗಳು ನಮ್ಮಲ್ಲಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ನಿಮ್ಮ ಬೆಂಬಲ ಇದ್ದರೆ ಮದ್ಯ ನಿಷೇಧಕ್ಕೆ ಧ್ವನಿ ಎತ್ತುತ್ತೇನೆ- ಸಿ.ಟಿ.ರವಿ

    ನಿಮ್ಮ ಬೆಂಬಲ ಇದ್ದರೆ ಮದ್ಯ ನಿಷೇಧಕ್ಕೆ ಧ್ವನಿ ಎತ್ತುತ್ತೇನೆ- ಸಿ.ಟಿ.ರವಿ

    ಚಿತ್ರದುರ್ಗ: ಮದ್ಯ ನಿಷೇಧದ ಕುರಿತು ಸದನ ಹೊರಗೂ ಹಾಗೂ ಒಳಗೆ ಧ್ವನಿ ಎತ್ತುತ್ತೇನೆ. ಆದರೆ ನಮ್ಮ ಬೆಂಬಲಕ್ಕೆ ನೀವು ನಿಲ್ಲುತ್ತೀರಾ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.

    ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಸಾಣೆಹಳ್ಳಿಯ ತರಳುಬಾಳು ಗುರುಪೀಠದ ಬಯಲು ರಂಗ ಮಂದಿರದಲ್ಲಿ ನಡೆದ ರಾಷ್ಟ್ರೀಯ ನಾಟಕೋತ್ಸವದಲ್ಲಿ ರವಿ ಮಾತನಾಡಿದರು. ಎಲ್ಲರೂ ಒಟ್ಟಾಗಿ ಧ್ವನಿ ಎತ್ತಿದರೆ ಸರ್ಕಾರವೂ ಅನೈತಿಕ ಆದಾಯವನ್ನು ಬಯಸುವುದಿಲ್ಲ. ಆದರೆ ಎಲ್ಲರೂ ಒಟ್ಟಾಗಿ ಮದ್ಯ ನಿಷೇಧದ ಬಗ್ಗೆ ಧ್ವನಿ ಎತ್ತಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಮದ್ಯ ನಿಷೇಧಕ್ಕೆ ಸಿಎಂ ಬಿಎಸ್‍ವೈ ಚಿಂತನೆ – ಸಂಸದ ಬಸವರಾಜು

    ನೀವು ಬೆಂಬಲ ನೀಡುವುದಾದರೆ, ನಾನು ಸಹ ಸಂಪುಟದ ಒಳಗೆ ಹಾಗೂ ಹೊರಗೆ ಮದ್ಯಪಾನ ನಿಷೇಧದ ಪರ ಧ್ವನಿ ಎತ್ತುತ್ತೇನೆ. ಅಲ್ಲದೆ ಇಂದಿನ ಪರಿಸ್ಥಿತಿಯಲ್ಲಿ ಮದ್ಯಪಾನ ನಿಷೇಧ ಮಾಡಬೇಕಾದ ಅಗತ್ಯವಿದೆ. ಗಾಂಧೀಜಿಯವರ 150ನೇ ಜನ್ಮ ದಿನ ಆಚರಿಸುತ್ತಿರುವ ಸಂದರ್ಭದಲ್ಲಿ ನಾವುಗಳು ಅವರ ಹಾದಿಯಲ್ಲಿ ನಡೆಯೋಣ. ಹೀಗಾಗಿ ಕೇವಲ ಮಾತಿಗೆ ಸೀಮಿತರಾಗಿ ಮದ್ಯ ನಿಷೇಧದ ಬಗ್ಗೆ ಮಾತನಾಡದೇ ನಿಷೇಧಕ್ಕೆ ಎಲ್ಲರೂ ಕೈ ಜೋಡಿಸಬೇಕಿದೆ ಎಂದರು.

    ಅನೈತಿಕ ಮೂಲದ ಆದಾಯವನ್ನು ವ್ಯಕ್ತಿಯೂ ಹೊಂದಬಾರದು, ಸರ್ಕಾರವೂ ಹೊಂದಬಾರದು. ಮತಕ್ಕಾಗಿ ರಾಜಕೀಯ ಮಾಡುವವರು ನಾವಲ್ಲ. ಸಿದ್ಧಾಂತದ ಹಿನ್ನೆಲೆ ನಾವು ರಾಜಕೀಯಕ್ಕೆ ಬಂದಿದ್ದೇವೆ. ಹೀಗಾಗಿ ಕೆಲವೊಮ್ಮೆ ನಿಷ್ಠುರವಾಗಿ ಮಾತನಾಡುತ್ತೇವೆ. ರಾಜಕಾರಣಕ್ಕಾಗಿ ಸಿದ್ಧಾಂತ ಹಿಡಿದಿಲ್ಲ, ಸಿದ್ಧಾಂತಕ್ಕಾಗಿ ರಾಜಕಾರಣಕ್ಕೆ ಬಂದಿದ್ದೇವೆ. ಮದ್ಯ ನಿಷೇಧದ ಕುರಿತು ಖಂಡಿತ ಧ್ವನಿ ಎತ್ತುತ್ತೇವೆ ಎಂದು ಭರವಸೆ ನೀಡಿದರು.

  • ಮದ್ಯ ನಿಷೇಧಕ್ಕೆ ಸಿಎಂ ಬಿಎಸ್‍ವೈ ಚಿಂತನೆ – ಸಂಸದ ಬಸವರಾಜು

    ಮದ್ಯ ನಿಷೇಧಕ್ಕೆ ಸಿಎಂ ಬಿಎಸ್‍ವೈ ಚಿಂತನೆ – ಸಂಸದ ಬಸವರಾಜು

    ತುಮಕೂರು: ರಾಜ್ಯದಲ್ಲಿ ಮದ್ಯ ನಿಷೇಧ ಮಾಡುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಿಂತನೆ ಮಾಡಿದ್ದಾರೆ ಎಂದು ಸಂಸದ ಜಿ.ಎಸ್.ಬಸವರಾಜು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

    ನಗರದಲ್ಲಿ ಗಾಂಧಿ ಸಂಕಲ್ಪ ಯಾತ್ರೆ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ಕಾಲದಲ್ಲಿ ಏನಾದರೂ ಮಾಡಿ ಮದ್ಯವನ್ನು ನಿಷೇಧಿಸಬೇಕು ಎಂಬುದು ನನ್ನ ಬಯಕೆಯಾಗಿದೆ ಎಂದು ಯಡಿಯೂರಪ್ಪನವರು ನನ್ನ ಬಳಿ ಮಾತನಾಡುವಾಗ ತಮ್ಮ ಮನದಾಳವನ್ನು ಹಂಚಿಕೊಂಡಿದ್ದಾರೆ ಎನ್ನುವ ವಿಚಾರವನ್ನು ಬಹಿರಂಗ ಪಡಿಸಿದರು.

    ಈ ಬಗ್ಗೆ ಸಿಎಂ ನನ್ನ ಜೊತೆ ಕೂಡ ಮಾತನಾಡಿದ್ದು, ಬ್ಯಾನ್ ಮಾಡಿದ ನಂತರ ಉಂಟಾಗುವ ಬೊಕ್ಕಸದ ಹೊರೆಯನ್ನು ಭರಿಸುವ ಬಗ್ಗೆಯೂ ತುಂಬಾ ಚಿಂತನೆ ನಡೆಸಿದ್ದಾರೆ. ಮದ್ಯ ನಿಷೇಧದ ಬಗ್ಗೆ ನಾವೂ ಕೂಡ ಸಂಸತ್ತಿನಲ್ಲಿ ಧ್ವನಿ ಎತ್ತುತ್ತೇವೆ. ಪ್ರಧಾನಿ ಮೋದಿ ನಿರ್ದೇಶನ ನೀಡಿ ಮದ್ಯವನ್ನು ನಿಷೇಧಿಸಬಹುದು ಎಂದು ತಿಳಿಸಿದರು.

    ಈಗಾಗಲೇ ಗುಜರಾತ್ ಮತ್ತು ಬಿಹಾರದಲ್ಲಿ ಮದ್ಯ ನಿಷೇಧವಾಗಿದೆ. ಅದೇ ರೀತಿ ನಮ್ಮ ರಾಜ್ಯದಲ್ಲೂ ಸಹ ಮದ್ಯ ನಿಷೇಧವಾಗಬೇಕಿದೆ. ಈ ಕುರಿತು ಮುಖ್ಯಮಂತ್ರಿ ಬಳಿ ಇನ್ನಷ್ಟು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

  • ಪಂಚಾಯ್ತಿ ಕಟ್ಟೆ ನಡೆಸಿ ಗ್ರಾಮದಲ್ಲಿ ಮದ್ಯ ಬ್ಯಾನ್ ಮಾಡಿದ ಮಹಿಳೆಯರು

    ಪಂಚಾಯ್ತಿ ಕಟ್ಟೆ ನಡೆಸಿ ಗ್ರಾಮದಲ್ಲಿ ಮದ್ಯ ಬ್ಯಾನ್ ಮಾಡಿದ ಮಹಿಳೆಯರು

    -ಊರಲ್ಲಿ ಮದ್ಯಪಾನ ಮಾಡಿದ್ರೆ ಬೀಳುತ್ತೆ ದಂಡ

    ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಕುಪ್ಪೂರು ಗ್ರಾಮದಲ್ಲಿ ಪಂಚಾಯ್ತಿ ಕಟ್ಟೆ ನಡೆಸಿ ಗ್ರಾಮದಲ್ಲಿ ಮದ್ಯಪಾನವನ್ನು ಮಹಿಳೆಯರು ನಿಷೇಧಿಸಿದ್ದಾರೆ. ಒಂದು ವೇಳೆ ಪಂಚಾಯ್ತಿ ಆದೇಶ ಮೀರಿ ಊರಲ್ಲಿ ಮದ್ಯಪಾನ ಮಾಡಿದರೆ ದಂಡ ಹಾಕಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

    ಹೌದು. ಕುಪ್ಪೂರು ಗ್ರಾಮದಲ್ಲಿ ಪುರುಷರಿಗೆ ಸೆಡ್ಡು ಹೊಡೆದು ಮಹಿಳೆಯರೇ ಪಂಚಾಯ್ತಿ ಕಟ್ಟೆ ನಡೆಸಿ ಈ ತೀರ್ಮಾನ ತೆಗೆದುಕೊಂಡಿದ್ದಾರೆ. ಗಂಡಂದಿರ ಮದ್ಯಪಾನ ಚಟ ಬಿಡಿಸಲು ಮಹಿಳೆಯರೇ ಒಗ್ಗಟ್ಟಾಗಿ ಹೋರಾಟಕ್ಕಿಳಿದು, ಗ್ರಾಮದಲ್ಲಿ ಮದ್ಯವನ್ನು ನಿಷೇಧಿಸಿದ್ದಾರೆ. ಗ್ರಾಮದಲ್ಲಿ ಪಂಚಾಯ್ತಿ ನಡೆಸಿ ಊರಲ್ಲಿ ಮದ್ಯ ಮಾರಾಟ ಮಾಡಬಾರದು ಎಂದು ಕಟ್ಟಪ್ಪಣೆ ಹೊರಡಿಸಿದ್ದಾರೆ. ಈ ತೀರ್ಮಾನಕ್ಕೆ ಗ್ರಾಮದ ಪುರುಷರು ವಿರೋಧ ಮಾಡದೇ ಒಪ್ಪಿಕೊಂಡಿದ್ದಾರೆ.

    ಮದ್ಯ ನಿಷೇಧ ಮಾಡಿದ ಬಳಿಕ ಹಗಲು, ರಾತ್ರಿ ಗ್ರಾಮ ಮೂಲೆ ಮೂಲೆ ಸುತ್ತಿ ಮಹಿಳೆಯರೇ ಅಕ್ರಮ ಮದ್ಯ ಮಾರಾಟ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಗ್ರಾಮದ ಮನೆಯೊಂದರಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಮಹಿಳೆಗೆ ಫುಲ್ ಕ್ಲಾಸ್ ತೆಗೆದುಕೊಂಡರು. ಜೊತೆಗೆ ಮನೆಗೆ ನುಗ್ಗಿ ಅಲ್ಲಿದ್ದ ಮದ್ಯವನ್ನು ವಶಕ್ಕೆ ಪಡೆದು, ನಡುರಸ್ತೆಯಲ್ಲಿ ಮದ್ಯದ ಪಾಕೆಟ್‍ಗಳಿಗೆ ಬೆಂಕಿ ಹಚ್ಚಿ ಸುಟ್ಟುಹಾಕಿದರು. ಹೀಗಾಗಿ ಮದ್ಯ ನಿಷೇಧ ವಿಚಾರದಲ್ಲಿ ಮಹಿಳೆಯರ ಒಗ್ಗಟ್ಟಿಗೆ ಗ್ರಾಮದ ಪುರುಷರು ಬೆಸ್ತುಬಿದ್ದಿದ್ದಾರೆ.

  • ಆಂಧ್ರದಲ್ಲಿ ಮದ್ಯ ಬ್ಯಾನ್ ಸಾಧ್ಯತೆ – ಯಾವ ರಾಜ್ಯಕ್ಕೆ ಎಷ್ಟು ಆದಾಯ ಬಂದಿದೆ?

    ಆಂಧ್ರದಲ್ಲಿ ಮದ್ಯ ಬ್ಯಾನ್ ಸಾಧ್ಯತೆ – ಯಾವ ರಾಜ್ಯಕ್ಕೆ ಎಷ್ಟು ಆದಾಯ ಬಂದಿದೆ?

    – ಮಹಿಳಾ ಮತದಾರರನ್ನು ಸೆಳೆಯಲು ಮದ್ಯ ಬ್ಯಾನ್
    – ಅಕ್ರಮವಾಗಿ ರಾಜ್ಯಗಳಿಗೆ ಬರುತ್ತಿದೆ ಮದ್ಯ

    ನವದೆಹಲಿ: ನೆರೆಯ ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧ ಜಾರಿಗೊಳಿಸುವ ನಿಟ್ಟಿನಲ್ಲಿ ಸಾಗುತ್ತಿದ್ದಾರೆ. ಈಗಾಗಲೇ ಆಂಧ್ರ ಸರ್ಕಾರ ಸುಮಾರು 3,500 ಖಾಸಗಿ ಮದ್ಯದಂಗಡಿಗಳ್ನು ತನ್ನ ಸ್ವಾದೀನಕ್ಕೆ ಪಡೆದುಕೊಂಡಿದೆ. ಹೀಗೆ ಹಂತ ಹಂತವಾಗಿ ಮದ್ಯದಂಗಡಿಗಳನ್ನು ಮುಚ್ಚಿಸುತ್ತಾ, ಮುಂದಿನ ವರ್ಷ ಆಂಧ್ರ ಪ್ರದೇಶವನ್ನು ಮದ್ಯ ನಿಷೇಧ ರಾಜ್ಯ ಎಂದು ಘೋಷಿಸಲು ಜಗನ್ ಮೋಹನ್ ರೆಡ್ಡಿ ಸಿದ್ಧತೆ ನಡೆಸಿಕೊಂಡಿದ್ದಾರೆ. ಚುನಾವಣೆ ಪ್ರಣಾಳಿಕೆಯಲ್ಲಿ ಹೇಳಿದಂತೆ ಮದ್ಯ ನಿಷೇಧ ಮಾಡಿದ್ದೇವೆ ಎಂಬ ಸಂದೇಶವನ್ನು ರಾಜ್ಯದ ಜನತೆಗೆ ನೀಡಲಿದ್ದಾರೆ.

    ಸಂಪೂರ್ಣವಾಗಿ ನಿಷೇಧ ಮಾಡುವುದರಿಂದ ರಾಜ್ಯದಲ್ಲಿ ಶಾಂತಿ ನೆಲಸಲಿದೆ. ಹಾಗೆಯೇ ಅಪರಾಧ ಚಟುವಟಿಕೆಗಳು ಮತ್ತು ಕೌಟುಂಬಿಕ ಸಮಸ್ಯೆಗಳು ಕಡಿಮೆ ಆಗಿ ಸಮಾಜದಲ್ಲಿ ಶಾಂತಿ ನೆಲಸಲಿದೆ ಎಂದು ಜಗನ್ ಮೋಹನ್ ರೆಡ್ಡಿ ಹೇಳುತ್ತಾರೆ. ಚುನಾವಣೆ ಪ್ರಚಾರದಲ್ಲಿ ಜಗನ್ ಮೋಹನ್ ರೆಡ್ಡಿ ಇದೇ ವಿಷಯವನ್ನು ಪ್ರಸ್ತಾಪಿಸಿ ಮಹಿಳೆಯರ ಬಳಿ ಮತ ಕೇಳಿದ್ದರು. ಮದ್ಯ ನಿಷೇಧಗೊಂಡಿರುವ ರಾಜ್ಯಗಳಲ್ಲಿ ಭಿನ್ನ ಭಿನ್ನ ಕಾನೂನುಗಳಿವೆ. ಅವುಗಳ ಪುಟ್ಟ ಸಮೀಕ್ಷೆಯ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

    ಖಜಾನೆ ಮೇಲೆ ಭಾರೀ ಹೊಡೆತ: ಮದ್ಯ ಮಾರಾಟದಿಂದ ಸಂಗ್ರಹವಾಗುವ ತೆರಿಗೆಯೇ ರಾಜ್ಯದ ಬೊಕ್ಕಸಕ್ಕೆ ಮೂಲ ಆದಾಯವಾಗಿರುತ್ತದೆ. ಬಹುತೇಕ ರಾಜ್ಯಗಳಿಗೆ ಮದ್ಯದ ಆದಾಯ ನಾಲ್ಕನೇ ಸ್ಥಾನದಲ್ಲಿದೆ. ದಿಢೀರ್ ಆದೇಶಗಳಿಂದ ಸರ್ಕಾರ ತನ್ನ ಖರ್ಚುಗಳನ್ನು ತಗ್ಗಿಸಬೇಕಾಗುತ್ತದೆ. ಮುಂದಿನ ವರ್ಷಗಳಲ್ಲಿ ಜಿಎಸ್‍ಟಿ ಸಂಗ್ರಹ ಸ್ಥಿರವಾಗಿರೋದರ ಜೊತೆಗೆ ಕೇಂದ್ರದಿಂದ ರಾಜ್ಯಕ್ಕೆ ಅನುದಾನ ಲಭ್ಯವಾಗಬೇಕು. ಇಲ್ಲವಾದಲ್ಲಿ ಇದರ ನೇರ ಪರಿಣಾಮ ರಾಜ್ಯದ ಅಭಿವೃದ್ಧಿಯ ಮೇಲಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ.

    ಮದ್ಯ ನಿಷೇಧ ಪರೋಕ್ಷವಾಗಿ ರಾಜ್ಯದ ಪ್ರವಾಸೋದ್ಯಮಕ್ಕೆ ಸಣ್ಣ ಹೊಡೆತ ಬೀಳುವುದುಂಟು. ಹೆಚ್ಚಿನ ಪ್ರವಾಸಿಗರು ಮದ್ಯ ನಿಷೇಧಿತ ರಾಜ್ಯಗಳ ಪ್ರವಾಸಕ್ಕೆ ಹಿಂದೇಟು ಹಾಕುತ್ತಾರೆ. ಇದರಿಂದ ಪ್ರವಾಸಿ ಸ್ಥಳಗಳಲ್ಲಿ ಉದ್ಯೋಗ ಕಡಿತಗೊಳ್ಳುತ್ತವೆ. ಹಾಗಾಗಿ ಸರ್ಕಾರ ಪ್ರವಾಸೋದ್ಯಮಕ್ಕೆ ಹೆಚ್ಚಿನ ಪ್ರಚಾರ ನೀಡಬೇಕು.

    ಮದ್ಯ ನಿಷೇಧಿತ ರಾಜ್ಯಗಳು:
    1. 1960 ಮೇನಲ್ಲಿ ಮೊದಲ ಬಾರಿಗೆ ಗುಜರಾತಿನಲ್ಲಿ ಮದ್ಯ ನಿಷೇಧ ಮಾಡಲಾಗಿದೆ. ಇಂದಿಗೂ ಇಲ್ಲಿ ಮದ್ಯ ನಿಷೇಧವಿದೆ.
    2. 1989ರಲ್ಲಿ ನಾಗಾಲ್ಯಾಂಡ್ ನಲ್ಲಿ ಮದ್ಯಪಾನ ಮತ್ತು ಮಾರಾಟಕ್ಕೆ ನಿಷೇಧವಿದೆ.
    3. 1991ರಲ್ಲಿ ಮಣಿಪುರದಲ್ಲಿ ಮದ್ಯ ನಿಷೇಧಿಸಲಾಗಿತ್ತು. ತದನಂತರ 2002ರಲ್ಲಿ ನಿಷೇಧವನ್ನು ತೆರವುಗೊಳಿಸಲಾಗಿದೆ.
    4. 1997ರಲ್ಲಿ ಮೀಜೋರಾಂನಲ್ಲಿ ಮದ್ಯ ನಿಷೇಧ ಮಾಡಲಾಗಿತ್ತು. 2014ರಲ್ಲಿ ನಿಷೇಧವನ್ನು ಹಿಂಪಡೆದು, 2019ರಲ್ಲಿ ಮತ್ತೆ ನಿಷೇಧ ಆದೇಶ ಹೊರಡಿಸಲಾಗಿದೆ.
    5. 1996ರಲ್ಲಿ ಹರ್ಯಾಣದಲ್ಲಿ ನಿಷೇಧ ವಿಧಿಸಿ, 1998ರಲ್ಲಿ ಆದೇಶವನ್ನು ಹಿಂಪಡೆಯಲಾಗಿದೆ.
    6. 1974ರಲ್ಲಿ ತಮಿಳುನಾಡಿನಲ್ಲಿ ಸಂಪೂರ್ಣ ಮದ್ಯದ ಮೇಲೆ ನಿಷೇಧ ವಿಧಿಸಲಾಗಿತ್ತು. ಆದ್ರೆ 1981ರಲ್ಲಿ ಸರ್ಕಾರ ತನ್ನ ಆದೇಶವನ್ನು ಹಿಂಪಡೆದಿತ್ತು.
    7. ಬಿಹಾರ ಸಿಎಂ ನಿತೀಶ್ ಕುಮಾರ್ 2016ರಿಂದ ಮದ್ಯ ನಿಷೇಧ ಮಾಡಿ ಆದೇಶ ಹೊರಡಿಸಿದ್ದಾರೆ.
    8. ಕೇರಳದಲ್ಲಿ 2014ರಲ್ಲಿ ಮದ್ಯ ಮೇಲೆ ನಿಷೇಧ ವಿಧಿಸಿ ಮೂರು ವರ್ಷಗಳ ಬಳಿಕ ಅಂದ್ರೆ 2017ರಲ್ಲಿ ತೆರವುಗೊಳಿಸಲಾಗಿದೆ.
    9. 1992ರಲ್ಲಿ ಆಂಧ್ರದ ಟಿಡಿಪಿ ಸರ್ಕಾರ ಮದ್ಯವನ್ನು ನಿಷೇಧ ಮಾಡಿತ್ತು. ರಾಜ್ಯ ಬೊಕ್ಕಸಕ್ಕೆ ಹೊಡೆತ ಬಿದ್ದ ಕಾರಣ ನಾಲ್ಕು ವರ್ಷಗಳ ಬಳಿಕ ತನ್ನ ಆದೇಶವನ್ನು ಹಿಂಪಡೆಯಿತು. ಈಗ ಜಗನ್ ಮೋಹನ್ ರೆಡ್ಡಿ ಮದ್ಯ ಮುಕ್ತ ರಾಜ್ಯಕ್ಕೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.

    ಕುಡುಕರ ಮುಕ್ತವಾಗುತ್ತಾ ರಾಜ್ಯ?
    ಗುಜರಾತ್, ನಾಗಾಲ್ಯಾಂಡ್ ಮತ್ತು ಬಿಹಾರ್ ಮದ್ಯ ಮುಕ್ತ ರಾಜ್ಯಗಳಾಗಿವೆ. ಆದರೆ ಈ ರಾಜ್ಯದ ಜನರು ಮದ್ಯ ಸೇವನೆಯನ್ನು ತೊರೆದಿಲ್ಲ. ಬದಲಾಗಿ ನೆರೆಯ ರಾಜ್ಯಗಳಿಂದ ಅಕ್ರಮವಾಗಿ ಮದ್ಯವನ್ನು ತರಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಮದ್ಯ ನಿಷೇಧಗೊಳಿಸಿರುವ ಕಳೆದ ಆರು ತಿಂಗಳಿನಿಂದ ಮೀಜೋರಾಂ ಸರ್ಕಾರ ಕಟ್ಟುನಿಟ್ಟಾಗಿ ಕೆಲಸ ಮಾಡುತ್ತಿದೆ. ಬಿಹಾರ, ಗುಜರಾತ್ ರಾಜ್ಯಗಳಂತೆ ಮೀಜೋರಾಂ ರಾಜ್ಯದಲ್ಲಿಯೂ ಅಕ್ರಮ ಮದ್ಯ ಮಾರಾಟ ಆರಂಭಗೊಂಡಿವೆ.

    2016ರಲ್ಲಿ ಮದ್ಯ ನಿಷೇಧ ಮಾಡಿರುವ ಬಿಹಾರಕ್ಕೆ ಪಕ್ಕದ ರಾಜ್ಯಗಳಾದ ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಉತ್ತರ ಪ್ರದೇಶದಿಂದ ಅಕ್ರಮವಾಗಿ ಮದ್ಯ ಬರುತ್ತಿದೆ. ಈ ಅಕ್ರಮ ದಂಧೆಯಲ್ಲಿ ರಾಜ್ಯದ ಗಡಿ ಭಾಗಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಕೆಲವಡೆ ಗ್ರಾಮಗಳಿಂದ ಗ್ರಾಮಕ್ಕೆ ಮದ್ಯ ರವಾನೆ ಆಗುತ್ತೆ ಎಂದು ವರದಿಯಾಗಿದೆ.

    ನಾಗಾಲ್ಯಾಂಡ್ ನಲ್ಲಿ ಮದ್ಯ ನಿಷೇಧಗೊಳಿಸಿದ ಬಳಿಕ ಅಸ್ಸಾಂನಿಂದ ಅಕ್ರಮ ಸರಬರಾಜು ಹೆಚ್ಚಾಯ್ತು. ಒಮ್ಮೆ ಈ ಕುರಿತು ಪ್ರತಿಕ್ರಿಯಿಸಿದ್ದ ಅಸ್ಸಾಂ ಸಿಎಂ, ಮದ್ಯ ನಿಷೇಧಗೊಂಡಿರುವ ನಾಗಾಲ್ಯಾಂಡ್ ಆಲ್ಕೋಹಾಲ್ ನಿಂದ ತುಂಬಿಕೊಂಡಿದೆ. ನಿಷೇಧ ಮಾಡುವುದರಿಂದ ಜನರಿಗೆ ಮದ್ಯ ಕುಡಿಯುವ ತುಡಿತ ಹೆಚ್ಚಾಗುತ್ತದೆ. ಇದನ್ನೇ ಬಂಡವಾಳ ಮಾಡಿಕೊಳ್ಳುವ ಕೆಲವರು ಅಕ್ರಮದ ಹಾದಿ ತುಳಿಯುತ್ತಾರೆ. ಹಣದ ಆಸೆಗಾಗಿ ಪೊಲೀಸರು ಸೇರಿದಂತೆ ಅಧಿಕಾರಿಗಳು ಭ್ರಷ್ಟರಾಗುತ್ತಾರೆ ಎಂದಿದ್ದರು.

    ಮದ್ಯ ಮಾರಾಟದಿಂದ ಅತಿ ಹೆಚ್ಚು ಆದಾಯ ಪಡೆಯುವ ಮೊದಲ 10 ರಾಜ್ಯಗಳು (2015-16 ಅಂಕಿ ಅಂಶಗಳ ಪ್ರಕಾರ, ಕೋಟಿ ರೂ.ಗಳಲ್ಲಿ)
    1. ತಮಿಳುನಾಡು – 29,672
    2. ಹರ್ಯಾಣ – 19,703
    3. ಮಹಾರಾಷ್ಟ್ರ – 18,000
    4. ಕರ್ನಾಟಕ – 15,332
    5. ಉತ್ತರ ಪ್ರದೇಶ – 14,083
    6. ಆಂಧ್ರ ಪ್ರದೇಶ – 12,736
    7. ತೆಲಂಗಾಣ – 12,144
    8. ಮಧ್ಯ ಪ್ರದೇಶ – 7,926
    9. ರಾಜಸ್ಥಾನ – 5,585
    10. ಪಂಜಾಬ್ – 5,000
    ಇತ್ತೀಚಿನ ವರ್ಷಗಳಲ್ಲಿ ಮದ್ಯ ಮಾರಾಟ ಶೇ.38ರಷ್ಟು ಏರಿಕೆ ಕಂಡಿದೆ. 2010ರಿಂದ 2017ರ ಪ್ರತಿ ವಯಸ್ಕನ ಬಳಕೆ 4.3 ಲೀ.ನಿಂದ 5.9 ಲೀ.ನಷ್ಟು ಏರಿಕೆ ಕಂಡಿದೆ.

    ಕೇಂದ್ರ ಸರ್ಕಾರ ಏಪ್ರಿಲ್ 1958ರೊಳಗೆ ಭಾರತವನ್ನು ಮದ್ಯ ಮುಕ್ತ ರಾಷ್ಟ್ರವನ್ನಾಗಿ ಮಾಡುವ ಗುರಿಯನ್ನು ಹೊಂದಿದೆ. ಇಂದಿಗೂ ಈ ಗುರಿ ತಲುಪಲು ಯಾವ ಸರ್ಕಾರಗಳು ಮುಂದಾಗಿಲ್ಲ. ಸ್ವತಂತ್ರ ನಂತರ ಎರಡು ದಶಕಗಳವರೆಗೆ ಮಹಾರಾಷ್ಟ್ರ, ತಮಿಳುನಾಡು, ಒಡಿಶಾ, ಕರ್ನಾಟಕ ಮತ್ತು ಕೇರಳದಲ್ಲಿ ಮದ್ಯ ಮಾರಾಟ ಇರಲಿಲ್ಲ. 1967ರಿಂದ ಎಲ್ಲ ರಾಜ್ಯಗಳಲ್ಲೂ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿತ್ತು. ಈ ನಡುವೆ ಕೆಲ ರಾಜ್ಯಗಳು ಬೊಕ್ಕಸಕ್ಕೆ ಹೊಡೆತ ಬಿದ್ದರೂ ಪರವಾಗಿಲ್ಲ ಎಂದು ಮದ್ಯ ನಿಷೇಧ ಮಾಡಿಕೊಂಡಿವೆ.