Tag: ಮದ್ಯೆ

  • ಮೆಡಿಕಲ್ ಶಾಪ್ ಖಾಲಿ – ಮದ್ಯದಂಗಡಿ ಫುಲ್

    ಮೆಡಿಕಲ್ ಶಾಪ್ ಖಾಲಿ – ಮದ್ಯದಂಗಡಿ ಫುಲ್

    – ಬಿಸಿಲಿನಲ್ಲೇ ಕ್ಯೂ ನಿಂತ ಎಣ್ಣೆಪ್ರಿಯರು

    ಹುಬ್ಬಳ್ಳಿ: ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ಇದೂವರೆಗೂ ಮದ್ಯ ಮಾರಾಟವನ್ನ ಸ್ಥಗಿತಗೊಳಿಸಲಾಗಿತ್ತು. ಆದರೆ ಇಂದು ಲಾಕ್‍ಡೌನ್ ಸಡಿಲಿಕೆ ಮಾಡಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿದ ಪರಿಣಾಮ ಮದ್ಯ ಪ್ರಿಯರು ಬೆಳಗ್ಗೆಯಿಂದ ಮದ್ಯ ಖರೀದಿ ಮಾಡಲು ಕ್ಯೂ ನಿಂತಿದ್ದಾರೆ. ಆದರೆ ಪಕ್ಕದಲ್ಲಿದ್ದ ಮೆಡಿಕಲ್ ಶಾಪ್ ಮಾತ್ರ ಖಾಲಿಯಾಗಿದೆ.

    ಮದ್ಯ ಮಾರಾಟ ಆರಂಭವಾಗುತ್ತಿದ್ದಂತೆ ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣ ಬಳಿಯ ದಾರುವಾಲ್ ಶಾಪ್ ಮುಂದೆ ಎಣ್ಣೆ ಖರೀದಿ ಮಾಡಲು ಸುಮಾರು ಒಂದು ಕೀಲೋ ಮೀಟರ್‌ವರೆಗೂ ಕ್ಯೂನಲ್ಲಿ ಜನರು ನಿಂತಿದ್ದಾರೆ. ಮಧ್ಯಾಹ್ನವಾದರೂ ಕ್ಯೂ ಮಾತ್ರ ಕಡಿಮೆಯಾಗಿಲ್ಲ. ಬಿಸಿಲಿನ ತಾಪಮಾನ ಕ್ಷಣದಿಂದ ಕ್ಷಣಕ್ಕೆ ಏರಿಕೆಯಾಗುತ್ತಿದ್ದರೂ ಮದ್ಯಪ್ರಿಯರು ಮಾತ್ರ ಯಾವುದೇ ಬಿಸಿಲನ್ನು ಲೆಕ್ಕಿಸದೆ ಸರದಿ ಸಾಲಿನಲ್ಲಿ ನಿಂತಿದ್ದಾರೆ.

    ಇನ್ನೂ ಮದ್ಯದ ಅಂಗಡಿ ಪಕ್ಕದಲ್ಲಿರುವ ಮೆಡಿಕಲ್ ಶಾಪ್ ಮುಂದೆ ಯಾವುದೇ ಗ್ರಾಹಕರು ಇಲ್ಲದೇ ಬಿಕೋ ಎನ್ನುತ್ತಿದೆ. ಇದರ ಪಕ್ಕದಲ್ಲೇ ಇರುವ ಮದ್ಯ ಅಂಗಡಿಯಲ್ಲಿ ಮಾತ್ರ ಗ್ರಾಹಕರನ್ನು ನಿಯಂತ್ರಣ ಮಾಡಲು ಪೊಲೀಸರು ಹಾಗೂ ಅಂಗಡಿಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಜನರ ಪ್ರಮಾಣ ಪ್ರತಿ ಗಂಟೆಗೂ ಹೆಚ್ಚಾಗುತ್ತಿದ್ದು, ಮದ್ಯ ಖರೀದಿಗೆ ಕಿಕ್ಕಿರಿದು ಸೇರುತ್ತಿರುವ ಜನರನ್ನು ನೋಡಿ ಕರ್ತವ್ಯನಿರತ ಪೊಲೀಸರು ಕಂಗಾಲಾಗಿದ್ದಾರೆ.

  • ಏಪ್ರಿಲ್ ಫೂಲ್ ಆದ ಮದ್ಯಪ್ರಿಯರು

    ಏಪ್ರಿಲ್ ಫೂಲ್ ಆದ ಮದ್ಯಪ್ರಿಯರು

    – ಮದ್ಯದಂಗಡಿ ಮುಂದೆ ಕ್ಯೂ

    ಗದಗ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ದೇಶವೇ ಲಾಕ್‍ಡೌನ್ ಆಗಿದೆ. ಅಂದಿನಿಂದ ಕುಡಿಯಲು ಮದ್ಯ ಸಿಗದೇ ಅನೇಕರು ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದಾರೆ. ಇದೀಗ ನಗರದ ಕೆಲವು ಮದ್ಯ ಪ್ರಿಯರು ಏಪ್ರಿಲ್ ಫೂಲ್ ಆಗಿದ್ದಾರೆ.

    ಇಂದು ಏಪ್ರಿಲ್ 1 ರಂದು ಎಂಎಸ್‍ಐಎಲ್ ಓಪನ್ ಆಗುತ್ತೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿಬಿಟ್ಟಿದ್ದರು. ಅದು ನಿಜ ಎಂದು ತಿಳಿದ ಮದ್ಯ ಪ್ರಿಯರು ಬೆಳ್ಳಂಬೆಳಗ್ಗೆ ನಗರದ ಮುಳಗುಂದ ರಸ್ತೆಯ ಎಂಎಸ್‍ಐಎಲ್ ಮದ್ಯದಂಗಡಿ ಮುಂದೆ ಸರದಿ ಸಾಲಿನಲ್ಲಿ ನಿಂತಿದ್ದರು. ಈಗ ಓಪನ್ ಆಗಬಹುದು, ಆಗ ಓಪನ್ ಆಗಬಹುದು ಎಂದುಕೊಂಡು ಮದ್ಯಕ್ಕಾಗಿ ಕ್ಯೂ ನಿಂತುಕೊಂಡಿದ್ದರು.

    ಸುಳ್ಳು ವದಂತಿಯನ್ನ ನಿಜ ಎಂದು ನಂಬಿದ್ದ ಮದ್ಯ ವ್ಯಸನಿಗಳು ಎರಡು ಸಾಲಿನಲ್ಲಿ ನೂರಾರು ಜನರು ಜಮಾಯಿಸಿದ್ದರು. ಈ ಕ್ಯೂನಲ್ಲಿ ಓರ್ವ ಮಹಿಳೆ ಸಹ ಸರದಿ ಸಾಲಿನಲ್ಲಿ ನಿಂತುಕೊಂಡಿದ್ದಳು.

    ನೂರಾರು ಜನರು ಒಂದೆಕಡೆ ಜಮಾಯಿಸಿದ್ದರಿಂದ ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸರು ದೌಡಾಯಿಸಿದ್ದಾರೆ. ಪೊಲೀಸರನ್ನ ಕಂಡು ಕುಡುಕರು ಅಲ್ಲಿಂದ ದಿಕ್ಕಾಪಾಲಾಗಿ ಓಡಿದ್ದಾರೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಬಂದಂತಹ ಸುಳ್ಳು ಸುದ್ದಿಯಿಂದ ನಗರದ ಕೆಲವು ಮದ್ಯ ವ್ಯಸನಿಗಳು ಏಪ್ರಿಲ್ ಫೂಲ್ ಆಗಿದ್ದಾರೆ.

  • ಕುಡಿಯಲು ಮದ್ಯ ಸಿಗದೇ ನಾಲ್ವರು ಆತ್ಮಹತ್ಯೆ

    ಕುಡಿಯಲು ಮದ್ಯ ಸಿಗದೇ ನಾಲ್ವರು ಆತ್ಮಹತ್ಯೆ

    ಬೀದರ್/ಮಂಗಳೂರು: ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಭಾರತ ಸಂಪೂರ್ಣ ಲಾಕ್‍ಡೌನ್ ಆಗಿದ್ದು, ಹೀಗಾಗಿ ಅಬಕಾರಿ ಇಲಾಖೆ ಕೂಡ ಸಾರಾಯಿ ಬಂದ್ ಮಾಡಿರುವುದರಿಂದ ಕುಡುಕರು ಪರದಾಡುತ್ತಿದ್ದಾರೆ. ಅಲ್ಲದೇ ಕುಡಿಯಲು ಮದ್ಯ ಸಿಗದೇ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಕುಡಿಯಲು ಮದ್ಯ ಸಿಕ್ಕಿಲ್ಲ ಎಂಬ ಕಾರಣಕ್ಕೆ ಬಾವಿಗೆ ಹಾರಿ ಹೋಟೆಲ್ ಕಾರ್ಮಿಕ ಒಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಭಾಲ್ಕಿ ಪಟ್ಟಣದ ಕೋಟೆಯ ಝರ ಬಾವಿಗೆ ಹಾರಿ 40 ವರ್ಷದ ಭಾಸ್ಕರ್ ನಸುಕಿನ ಜಾವ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೂಲತ ಉಡುಪಿ ಜಿಲ್ಲೆಯ ಕುಂದಾಪೂರ ವ್ಯಕ್ತಿಯಾಗಿದ್ದು, ಸುಮಾರು ವರ್ಷಗಳಿಂದ ಬೀದರ್‌ನ ಭಾಲ್ಕಿಯಲ್ಲಿ ವಾಸವಾಗಿದ್ದನು.

    ಭಾಲ್ಕಿ ಪಟ್ಟಣದ ಉಡುಪಿ ಹೋಟೆಲ್‍ನಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದನು. ಸುದ್ದಿ ತಿಳಿದು ಭಾಲ್ಕಿ ನಗರ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ಮಾಡಿದ್ದಾರೆ.

    ಇತ್ತ ದಕ್ಷಿಣ ಕನ್ನಡದಲ್ಲಿ ಮದ್ಯ ಸಿಗಲಿಲ್ಲ ಅಂತ ಎಣ್ಣೆ ಪ್ರಿಯರಿಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಡಬ ತಾಲೂಕಿನಲ್ಲಿ ಮದ್ಯ ದೊರೆಯದೇ ಬೇಸರದಿಂದ ಇಬ್ಬರು ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಎರಡೂ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

    ಇನ್ನೂ ಹುಬ್ಬಳ್ಳಿ ಜಿಲ್ಲೆಯ ಹೊಸೂರಿನ ಗಣೇಶ ಪಾರ್ಕಿನಲ್ಲಿ ಧಾರವಾಡ ಮೂಲದ ಉಮೇಶ್ ಹಡಪದ (46) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾಗರಾಜ ರಟಗಲ್ ಅವರ ನಿರ್ಮಾಣ ಹಂತದ ಮನೆಯ ವಾಚ್ ಮೆನ್ ಆಗಿ ಉಮೇಶ್ ಕೆಲಸ ಮಾಡುತ್ತಿದ್ದ. ಕಳೆದ ಐದು ದಿನದಿಂದ ಕುಡಿಯಲು ಮದ್ಯ ಸಿಕ್ಕಿಲ್ಲ ಎಂಬ ಕಾರಣಕ್ಕೆ ನೇಣಿಗೆ ಶರಣಾಗಿದ್ದಾನೆ.

    ಕಳೆದ 15 ದಿನದ ಹಿಂದೆ ಉಮೇಶ್ ಕೆಲಸಕ್ಕೆ ಸೇರಿಕೊಂಡಿದ್ದನು ಎಂದು ತಿಳಿದು ಬಂದಿದೆ. ಮೂರು ವರ್ಷದಿಂದ ಕುಟುಂಬ ವರ್ಗದವರಿಂದ ಉಮೇಶ್ ದೂರ ಉಳಿದಿದ್ದ. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಲೋ ಒಬ್ಬಬ್ರೇ ಬರ್ರೋ- ಎಣ್ಣೆ ನಶೆಯಲ್ಲಿ ಯುವತಿಯ ರಂಪಾಟ

    ಲೋ ಒಬ್ಬಬ್ರೇ ಬರ್ರೋ- ಎಣ್ಣೆ ನಶೆಯಲ್ಲಿ ಯುವತಿಯ ರಂಪಾಟ

    ದಾವಣಗೆರೆ: ಎಣ್ಣೆ ಮತ್ತಿನಲ್ಲಿ ಯುವತಿಯೊಬ್ಬಳು ಬಾರ್ ಮುಂದೆ ರಂಪಾಟ ಮಾಡಿರುವ ಘಟನೆ ದಾವಣಗೆರೆಯ ಹದಡಿ ರಸ್ತೆಯಲ್ಲಿರುವ ಬಾರ್‌ವೊಂದರಲ್ಲಿ ನಡೆದಿದೆ.

    ಬಾರ್‌ವೊಂದರಲ್ಲಿ ಮುಂಭಾಗ ಬಂದು ಯುವತಿ ಎಣ್ಣೆ ನಶೆಯಲ್ಲಿ ಗ್ರಾಹಕರಿಗೆ ತೊಂದರೆ ಕೊಟ್ಟಿದ್ದಾಳೆ. ಅಷ್ಟೇ ಅಲ್ಲದೇ ಅಲ್ಲಿದ್ದವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಗಲಾಟೆ ಮಾಡಿದ್ದಾಳೆ. ಬಾರ್ ಮುಂಭಾಗವೇ ನೆಲದ ಮೇಲೆ ಕುಳಿತು, ಮಲಗಿ ಒದ್ದಾಡಿದ್ದಾಳೆ.

    ಕೊನೆಗೆ ಯುವತಿಯ ಕಾಟಕ್ಕೆ ರೋಸಿ ಹೋದ ಗ್ರಾಹಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬರುಷ್ಟರಲ್ಲಿ ಯುವತಿಗೆ ಮೇಲೆ ನೀರು ಸುರಿದು ಎಣ್ಣೆ ನಶೆ ಇಳಿಸಲು ಪ್ರಯತ್ನ ಮಾಡಿದ್ದಾರೆ. ಇತ್ತ ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕೆ ಬಂದ ಪೊಲೀಸರಿಗೂ ಯುವತಿ ಅವಾಜ್ ಹಾಕಿದ್ದಾಳೆ.

    ಸ್ವಲ್ಪ ಸಮಯದವರೆಗೂ ರಸ್ತೆಯಲ್ಲಿಯೇ ಯುವತಿ ರಂಪಾಟ ಮಾಡಿದ್ದಾಳೆ. ನಂತರ ಪೊಲೀಸರು ಯುವತಿಯನ್ನು ಸಮಾಧಾನ ಮಾಡಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಯುವತಿಯ ಯಾರೆಂದು ಇನ್ನೂ ಪತ್ತೆಯಾಗಿಲ್ಲ.

  • ಠಾಣೆಯಲ್ಲಿಯೇ ಪೊಲೀಸ್ ಕೆನ್ನೆಗೆ ಹೊಡೆದ ವಿದ್ಯಾರ್ಥಿ

    ಠಾಣೆಯಲ್ಲಿಯೇ ಪೊಲೀಸ್ ಕೆನ್ನೆಗೆ ಹೊಡೆದ ವಿದ್ಯಾರ್ಥಿ

    – ರಾಜನಂತೆ ಠಾಣೆಯಲ್ಲಿ ಕುಳಿತ ವಿದ್ಯಾರ್ಥಿ
    – ಕಂಪ್ಯೂಟರ್ ವೈರ್ ಕಿತ್ತು ಹಾಕಿದ್ರು

    ಬೆಂಗಳೂರು: ಕುಡಿದ ಅಮಲಿನಲ್ಲಿ ಪೊಲೀಸರ ಮೇಲೆಯೇ ವಿದ್ಯಾರ್ಥಿಗಳು ಕೈ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ರಾಹುಲ್ ತ್ರಿಪಾಟಿ ಪೊಲೀಸ್ ಠಾಣೆಯಲ್ಲಿಯೇ ಪೊಲೀಸರ ಕೆನ್ನೆಗೆ ಹೊಡೆದಿದ್ದಾನೆ. ಈ ಘಟನೆ ಮೇ 4ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಏನಿದು ಪ್ರಕರಣ?
    ರಾಹುಲ್ ತನ್ನ ಸ್ನೇಹಿತ ಆದಿತ್ಯ ಜೊತೆ ಗೋವಾದಿಂದ ಬಂದು ವಿದ್ಯಾಭ್ಯಾಸ ಮಾಡುತ್ತಿದ್ದನು. ಮೇ 4ರಂದು ರಾಹುಲ್ ಹಾಗೂ ಆದಿತ್ಯ ಇಬ್ಬರು ಕಂಠಪೂರ್ತಿ ಕುಡಿದು ಸಿಲ್ಕ್ ಬೋರ್ಡ್ ನಿಂದ ಮಾರತ್ ಹಳ್ಳಿ ಕಡೆಗೆ ರಾಯಲ್ ಎನ್‍ಫೀಲ್ಡ್ ಬೈಕಿನಲ್ಲಿ ತೆರಳುತ್ತಿದ್ದರು.

    ಈ ವೇಳೆ ಹೆಚ್‍ಎಸ್‍ಆರ್ ಲೇಔಟ್ ಸಂಚಾರಿ ಪೊಲೀಸರು ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ಮಾಡುತ್ತಿದ್ದಾಗ ವಿದ್ಯಾರ್ಥಿಗಳನ್ನು ನಿಲ್ಲಿಸಿದ್ದಾರೆ. ಆಗ ಏಕಾಏಕಿ ಪೊಲೀಸರ ಮೇಲೆ ವಿದ್ಯಾರ್ಥಿಗಳು ಹಲ್ಲೆಗೆ ಮುಂದಾಗಿದ್ದು, ನಡುರಸ್ತೆಯಲ್ಲಿಯೇ ಪೊಲೀಸರ ಸಮವಸ್ತ್ರ ಹರಿದು ಹಾಕಿದ್ದಾರೆ. ಇದರಿಂದ ಕೋಪಗೊಂಡ ಪೊಲೀಸ್ ಸಿಬ್ಬಂದಿ ಇಬ್ಬರನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

    ರಾಹುಲ್ ತ್ರಿಪಾಟಿ ಠಾಣೆಯಲ್ಲಿ ಹೋಗಿದ್ದೇ ರಾಜನಂತೆ ಟೇಬಲ್ ಮೇಲೆ ಕುಳಿತಿದ್ದಾನೆ. ವಿದ್ಯಾರ್ಥಿಗಳ ಪುಂಡಾಟ ನೋಡಿ ರಾತ್ರಿ ಪಾಳಿಯ ಸಿಬ್ಬಂದಿ ಮೇಲಾಧಿಕಾರಿಗಳಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ಆಗಲೆ ಕಮೀಷನರ್ ಗೆ ಕಾಲ್ ಮಾಡುತ್ತಿದ್ದೀಯಾ ಎಂದೇಳಿ ಅವರಿಂದ ರಾಹುಲ್ ಫೋನ್ ಕಿತ್ತುಕೊಂಡಿದ್ದಾನೆ. ಬಳಿಕ ಪೋನ್ ಬಿಸಾಡಿ ಪೊಲೀಸ್ ಪೇದೆಯ ಕಪಾಳಕ್ಕೆ ಹೊಡೆದಿದ್ದಾನೆ.

    ಅಷ್ಟೇ ಅಲ್ಲದೇ ಠಾಣೆಯಲ್ಲಿ ಕಂಪ್ಯೂಟರ್ ವೈರ್ ಗಳನ್ನು ಕಿತ್ತುಹಾಕಿದ್ದಾನೆ. ಈ ವೇಳೆ ತಡೆಯಲು ಬಂದ ಪೊಲೀಸರನ್ನು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾನೆ. ವಿದ್ಯಾರ್ಥಿಗಳ ಪುಂಡಾಟವನ್ನು ಪೊಲೀಸ್ ಸಿಬ್ಬಂದಿಯೇ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದರು. ಸದ್ಯಕ್ಕೆ ಇಬ್ಬರ ವಿರುದ್ಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಿಸಿದ್ದು, ಇಬ್ಬರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

  • ಕೊಡಗಿನಲ್ಲಿ 28 ಲಕ್ಷ ಮೌಲ್ಯದ ಮದ್ಯ, 6.31 ಲಕ್ಷ ರೂ. ನಗದು ವಶ

    ಕೊಡಗಿನಲ್ಲಿ 28 ಲಕ್ಷ ಮೌಲ್ಯದ ಮದ್ಯ, 6.31 ಲಕ್ಷ ರೂ. ನಗದು ವಶ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಕಡೆಯಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 6.31 ಲಕ್ಷ ರೂ. ನಗದು ಮತ್ತು 28 ಲಕ್ಷ ಮೌಲ್ಯದ ಮದ್ಯ ವಶಕ್ಕೆ ಪಡೆಯಲಾಗಿದೆ.

    ಕೊಡಗು ಅಬಕಾರಿ ಇಲಾಖೆಯೂ ಭರ್ಜರಿ ಕಾರ್ಯಾಚರಣೆ ಮಾಡಿದ್ದು, ಅಕ್ರಮವಾಗಿ ಸಾಗಿಸುತ್ತಿದ್ದ ಮಹಾರಾಷ್ಟ್ರದ ಮದ್ಯ ವಶ ಪಡಿಸಿಕೊಂಡಿದ್ದಾರೆ. ಮೈಸೂರಿಂದ ವಯನಾಡಿಗೆ ಲಾರಿಯಲ್ಲಿ ಮದ್ಯವನ್ನು ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಆಧಾರದ ಮೇರೆಗೆ ಕೊಡಗು ಜಿಲ್ಲೆಯ ಪೆರುಂಬಾಡಿ ಬಳಿ ಕೊಡಗು ಅಬಕಾರಿ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಮದ್ಯ ಪತ್ತೆಯಾಗಿದೆ.

    28 ಲಕ್ಷ ಮೌಲ್ಯದ ಮದ್ಯ, ಲಾರಿ ಮತ್ತು ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕುಶಾಲನಗರದಲ್ಲಿ ಕೇರಳ ನೋಂದಣಿಯ ಜೀಪ್‍ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 6 ಲಕ್ಷ ನಗದು ಪತ್ತೆಯಾಗಿದೆ.

    ಕೊಪ್ಪ ಚುನಾವಣಾ ಚೆಕ್ ಪೋಸ್ಟ್ ನಲ್ಲಿ ಪರಿಶೀಲನೆ ನಡೆಸುವಾಗ ಈ ಹಣ ಪತ್ತೆಯಾಗಿದೆ. ಕೇರಳ ಮೂಲದ ಜೀವನ್ ಹಾಗೂ ಸಂತೋಷ್ ಬಳಿ ಹಣ ಪತ್ತೆಯಾಗಿದೆ. ಸದ್ಯಕ್ಕೆ ಅಧಿಕಾರಿಗಳು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಫ್ಲೈಯಿಂಗ್ ಸ್ಕ್ವಾಡ್ ಅವರು 6,31,050 ರೂಪಾಯಿ ವಶಕ್ಕೆ ಪಡೆದುಕೊಂಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಉಪ ವಿಭಾಗಾಧಿಕಾರಿ ಜವರೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಕೊಡಗಿನಲ್ಲಿ ಮದ್ವೆಗೆ ತಟ್ಟಿದ ಚುನಾವಣಾ ನೀತಿಸಂಹಿತೆ!

    ಕೊಡಗಿನಲ್ಲಿ ಮದ್ವೆಗೆ ತಟ್ಟಿದ ಚುನಾವಣಾ ನೀತಿಸಂಹಿತೆ!

    ಮಡಿಕೇರಿ: ತನ್ನ ಆಚಾರ, ವಿಚಾರ, ಪದ್ಧತಿ ಪರಂಪರೆಯಿಂದ ಪ್ರಸಿದ್ಧಯಾಗಿರುವ ಕೊಡಗಿನ ಜನತೆಯ ಮದುವೆ ಸಮಾರಂಭಕ್ಕೆ ನೀತಿಸಂಹಿತೆ ತಟ್ಟಿದೆ.

    ಸದ್ಯ ವಿವಾಹವಾಗಲು ಚೈತ್ರಕಾಲವಾಗಿರುವುದರಿಂದ ಜಿಲ್ಲೆಯಲ್ಲಿ ಮದುವೆಯ ಭರಾಟೆ ಜೋರಾಗಿದೆ. ಆದರೆ ಹೀಗೆ ನಡೆಯುತ್ತಿರುವ ಮದುವೆಗಳಿಗೆ ಒಂದು ರೀತಿಯ ಸಂಕಷ್ಟ ಎದುರಾಗಿದೆ. ಕೊಡಗಿನಲ್ಲಿ ಪ್ರತಿ ಮದುವೆ ಶುಭ ಸಮಾರಂಭಗಳಿಗೆ ಮದ್ಯಪಾನ ಮಾಡುವುದು ಇಲ್ಲಿನ ಸಂಸ್ಕೃತಿಯಲ್ಲಿ ಒಂದು ಭಾಗವೇ ಆಗಿ ಹೋಗಿದೆ. ಆದರೆ ಚುನಾವಣಾ ಆಯೋಗದ ನೀತಿ ಸಂಹಿತೆ ಕೊಡಗಿನ ಜನರಿಗೆ ತಲೆನೋವಾಗಿ ಪರಿಣಮಿಸಿದೆ.

    ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ನಿರ್ದೇಶನದಂತೆ ಈಗಾಗಲೇ ಅಬಕಾರಿ ಇಲಾಖೆಯಿಂದ ಕಲ್ಯಾಣ ಮಂಟಪಗಳಿಗೆ ಲಿಖಿತ ನೋಟಿಸ್ ಜಾರಿಗೊಳಿಸಿದ್ದು, ಕಲ್ಯಾಣ ಮಂಟಪ ಅಥವಾ ಶುಭ ಸಮಾರಂಭ ಸ್ಥಳಗಳಲ್ಲಿ ಮದ್ಯ ಸೇವನೆಗೆ ಅವಕಾಶ ನೀಡದಂತೆಯೂ, ಮದ್ಯ ಸಂಗ್ರಹ ಮಾಡಿ ಇಟ್ಟುಕೊಳ್ಳದಂತೆಯೂ ನಿರ್ದೇಶಿಸಿದೆ. ಮದುವೆ ಸೇರಿದಂತೆ ಶುಭ ಸಮಾರಂಭಗಳಲ್ಲಿ ಸಾಮಾನ್ಯವಾಗಿ ಕಿಕ್ಕೇರಿಸಿಕೊಳ್ಳುತ್ತಿದ್ದ ಮಂದಿ ಈ ನಿಯಮದಿಂದ ತುಂಬಾನೇ ಬೇಸರ ಮಾಡಿಕೊಳ್ಳುವಂತಾಗಿದೆ ಎಂದು ಅಬಕಾರಿ ಉಪ ನಿರೀಕ್ಷಕ ವೀರಣ್ಣ ಹೇಳಿದ್ದಾರೆ.

    ಚುನಾವಣೆ ನೀತಿ ಸಂಹಿತೆ ನಡುವೆಯೂ ಮದ್ಯ ಬಳಕೆಗೆ ಅವಕಾಶ ಬೇಕು ಎಂದ್ರೆ ಒಂದು ದಿನಕ್ಕೆ 11,500ರೂ ಹಣ ಸಂದಾಯ ಮಾಡಿ ಪರವಾನಿಗೆ ಪಡೆಯಬೇಕು ಎಂದು ಆದೇಶ ಮಾಡಲಾಗಿದೆ. ಈ ಮೊತ್ತ ಸರ್ಕಾರಕ್ಕೆ ಜಮೆಯಾಗಲಿದ್ದು, ವಾಪಸ್ ಪಡೆಯಲು ಅವಕಾಶ ಇರುವುದಿಲ್ಲ. ಚುನಾವಣೆ ಘೋಷಣೆಗೆ ಮುನ್ನವೇ ಜಿಲ್ಲೆಯ ಅನೇಕ ಕಡೆಗಳಲ್ಲಿ ವಿವಾಹ ಸಮಾರಂಭಗಳು ನಿಶ್ಚಯ ಆಗಿವೆ.

    ಸಾಮಾನ್ಯವಾಗಿ ಮದುವೆಯ ಮುನ್ನ ದಿನವಾದ ಚಪ್ಪರ ಹಾಗೂ ಮದುವೆ ದಿನ ಮದ್ಯವನ್ನು ನೀಡುವುದು ಹಿಂದಿನಿಂದಲೂ ನಡೆದುಕೊಂಡ ಬಂದ ಸಂಪ್ರದಾಯ. ಹೀಗಾಗಿ ಸದ್ಯ 2 ದಿನಕ್ಕೆ ಪರವಾನಿಗೆ ಬೇಕು ಅಂದ್ರೆ 23 ಸಾವಿರ ಹಣವನ್ನ ಅಬಕಾರಿ ಇಲಾಖೆಗೆ ಕಟ್ಟಬೇಕಾಗುತ್ತದೆ. ಈಗಿನ ಪರಿಸ್ಥಿತಿಯಲ್ಲಿ ಮದುವೆ ಮಂಟಪಗಳ ಬಾಡಿಗೆ ಹಾಗೂ ಇತರ ಖರ್ಚು ವೆಚ್ಚಗಳನ್ನು ಭರಿಸಿ ಶುಭ ಸಮಾರಂಭಗಳನ್ನು ನೆರವೇರಿಸಲು ಸಾಮಾನ್ಯ ಕುಟುಂಬಗಳು ಬವಣೆ ಪಡುತ್ತಿರುವಾಗ, ಹೆಚ್ಚುವರಿ ಸುಮಾರು 25 ಸಾವಿರ ಹಣವನ್ನ ಪಾವತಿಸುವುದು ನಮಗೆ ಕಷ್ಟವಾಗುತ್ತಿದೆ ಎಂದು ಸ್ಥಳೀಯ ನವೀನ್ ತಿಳಿಸಿದ್ದಾರೆ.