Tag: ಮದ್ಯದಂಗಡಿ

  • ರಾಯಚೂರಿನಲ್ಲಿ ಬೆಳ್ಳಂಬೆಳಿಗ್ಗೆ 5 ಗಂಟೆಗೆ ಮದ್ಯದಂಗಡಿ ಓಪನ್ – ಕಣ್ಮುಚ್ಚಿ ಕುಳಿತ ಅಬಕಾರಿ ಇಲಾಖೆ

    ರಾಯಚೂರಿನಲ್ಲಿ ಬೆಳ್ಳಂಬೆಳಿಗ್ಗೆ 5 ಗಂಟೆಗೆ ಮದ್ಯದಂಗಡಿ ಓಪನ್ – ಕಣ್ಮುಚ್ಚಿ ಕುಳಿತ ಅಬಕಾರಿ ಇಲಾಖೆ

    ರಾಯಚೂರು: ಜಿಲ್ಲೆಯಲ್ಲಿ ಸೂರ್ಯೋದಯಕ್ಕೂ ಮುನ್ನ ಬಾರ್ ಗಳ ಬಾಗಿಲು ತೆರೆದಿರುತ್ತವೆ. ಮದ್ಯವ್ಯಸನಿಗಳಂತೂ ಈ ಮದ್ಯದಂಗಡಿಗಳ ಮುಂದೆ ಬೆಳಿಗ್ಗೆ ಐದು ಗಂಟೆಯಿಂದಲೇ ಕಾಯುತ್ತ ಕುಳಿತಿರುತ್ತಾರೆ.

    ಹೌದು. ರಾಯಚೂರು ನಗರದ ಶ್ರೀ ನಂದಿ ಬಾರ್ ಆ್ಯಂಡ್ ಗಾರ್ಡನ್ ರೆಸ್ಟೋರೆಂಟ್ ಹಾಗೂ ಮಂಜು ವೈನ್ಸ್ ಸೇರಿದಂತೆ ಹಲವು ಮದ್ಯದಂಗಡಿಗಳು ಎಗ್ಗಿಲ್ಲದೆ ಬೆಳ್ಳಂಬೆಳಿಗ್ಗೆ ವ್ಯಾಪಾರ ಶುರು ಮಾಡುತ್ತಿವೆ.

    ಬೆಳಿಗ್ಗೆ 10:30ರ ನಂತರ ಮದ್ಯದ ಅಂಗಡಿಗಳನ್ನ ತೆರೆಯಬೇಕು ಎನ್ನುವ ನಿಯಮವಿದ್ದರೂ ಅದನ್ನ ಗಾಳಿಗೆ ತೂರಿ ಬೆಳಿಗ್ಗೆ ಐದು ಗಂಟೆಗೆ ಮದ್ಯ ಮಾರಾಟ ನಡೆಯುತ್ತಿದೆ. ಈ ವಿಚಾರ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ತಿಳಿದಿದ್ದರೂ ಕೂಡ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಸಾರ್ವಜನಿಕರು ಇದುವರೆಗೂ ನೀಡಿದ ದೂರಿಗೆ ಬೆಲೆಯೇ ಇಲ್ಲದಂತಾಗಿದೆ.

    ಬೆಳ್ಳಂಬೆಳಿಗ್ಗೆ ಮದ್ಯದಂಗಡಿ ತೆರೆಯುವುದರಿಂದ ಕೂಲಿ ಕಾರ್ಮಿಕರು ಕೆಲಸಕ್ಕೆ ಹೋಗದೆ ಮದ್ಯದ ಅಮಲಿನಲ್ಲೇ ಕಾಲಕಳೆಯುತ್ತಿದ್ದಾರೆ. ಇದರಿಂದ ಬಡಕುಟುಂಬಗಳು ಬೀದಿಗೆ ಬರುವಂತಾಗಿದೆ ಎಂದು ಸ್ಥಳೀಯ ಹೋರಾಟಗಾರರು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ನಿಯಮ ಬಾಹಿರವಾಗಿ ಬೇಗನೆ ತೆರೆಯುವ ಬಾರ್ ಗಳ ಅನುಮತಿ ರದ್ದುಗೊಳಿಸಬೇಕು ಅಂತ ಆಗ್ರಹಿಸಿದ್ದಾರೆ. ಇತ್ತ ಅಬಕಾರಿ ಅಧಿಕಾರಿಗಳು ಮಾತ್ರ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಜಾಣ ಉತ್ತರ ಹೇಳಿ ಜಾರಿಕೊಳ್ಳುತ್ತಲೇ ಇದ್ದಾರೆ.

  • ಹಣದಾಸೆಗೆ ಹಾಲಿಗಿಂತ ಆಲ್ಕೋಹಾಲ್ ಮಾರಾಟಕ್ಕೆ ಉತ್ತೇಜನ ನೀಡಿದ ಜಿಲ್ಲಾಡಳಿತ

    ಹಣದಾಸೆಗೆ ಹಾಲಿಗಿಂತ ಆಲ್ಕೋಹಾಲ್ ಮಾರಾಟಕ್ಕೆ ಉತ್ತೇಜನ ನೀಡಿದ ಜಿಲ್ಲಾಡಳಿತ

    ಕಲಬುರಗಿ: ಸೂಫಿ ನಾಡು ಕಲಬುರಗಿ ಜಿಲ್ಲೆಯಲ್ಲಿ ಹಾಲಿಗಿಂತ ಆಲ್ಕೋಹಾಲ್ ಮಾರಾಟಕ್ಕೆ ಅಲ್ಲಿನ ಜಿಲ್ಲಾಡಳಿತ ಒತ್ತು ನೀಡಿದೆ. ಯಾಕೆಂದರೆ ಕೆಎಂಎಫ್‍ನ ಒಂದು ಮಳಿಗೆ ನೀಡಿ ಅಂದರೆ 1 ವರ್ಷ ಸತಾಯಿಸಿದ ಅಲ್ಲಿನ ಜಿಲ್ಲಾಡಳಿತ, ಅದೇ ವರ್ಷದಲ್ಲಿ 25 ಕ್ಕೂ ಹೆಚ್ಚು ಮದ್ಯದಂಗಡಿಗಳಿಗೆ ಅನುಮತಿ ನೀಡಿದೆ.

    ಕಲಬುರಗಿ ಜಿಲ್ಲೆಯಲ್ಲಿ ಈಗಾಗಲೇ ಹಲವು ಗ್ರಾಮಗಳಲ್ಲಿ ಮದ್ಯಮುಕ್ತ ಗ್ರಾಮ ಮಾಡಬೇಕು ಎಂದು ಹಳ್ಳಿಗಳು ಸಿದ್ಧವಾಗುತ್ತಿವೆ. ಆದರೆ ಲಿಕ್ಕರ್ ಮಾಫಿಯಾಕ್ಕೆ ಒಳಗಾದ ಇಲ್ಲಿನ ಅಬಕಾರಿ ಇಲಾಖೆ ಅಧಿಕಾರಿಗಳು, 2018-19ರಲ್ಲಿಯೇ ಜಿಲ್ಲೆಯಲ್ಲಿ ಒಟ್ಟು 25 ಬಾರ್ ಆ್ಯಂಡ್ ರೆಸ್ಟೋರೆಂಟ್ (ಸಿಎಲ್-7) ಹಾಗೂ ನಾಲ್ಕು ರಿಕ್ರಿಯೇಶನ್ ಕ್ಲಬ್ (ಸಿಎಲ್-4) ಅಂಗಡಿಗಳಿಗೆ ಅನುಮತಿ ನೀಡಿದೆ.

    ಹೀಗೆ ಅನುಮತಿ ಪಡೆದ ಬಹುತೇಕ ಮದ್ಯದಂಗಡಿಗಳು ಅಬಕಾರಿ ಇಲಾಖೆಯ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿವೆ. ಇದನ್ನು ಪರಿಶೀಲಿಸಬೇಕಾದ ಅಂದಿನ ಜಿಲ್ಲಾಧಿಕಾರಿ ಮತ್ತು ಇಲ್ಲಿನ ಅಬಕಾರಿ ಅಧಿಕಾರಿಗಳು ಹಣದಾಸೆಗೆ ಬೇಕಾಬಿಟ್ಟಿ ಲೈಸೆನ್ಸ್ ನೀಡಿದ್ದಾರೆ. ಈ ಕುರಿತು ನೂತನವಾಗಿ ಆಗಮಿಸಿದ ಜಿಲ್ಲಾಧಿಕಾರಿಯನ್ನು ಕೇಳಿದರೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ.

    ಒಂದೆಡೆ ಬೇಕಾಬಿಟ್ಟಿಯಾಗಿ ಮದ್ಯದಂಗಡಿಗಳಿಗೆ ಅನುಮತಿ ನೀಡುವ ಕಲಬುರಗಿಯ ಜಿಲ್ಲಾಡಳಿತ, ಅದೇ ಕೆಎಂಎಫ್ ಹಾಲು ಮಾರಾಟ ಮಾಡಲು ಉತ್ಸಾಹ ತೋರಿಸುತ್ತಿಲ್ಲ. ಇದಕ್ಕೆ ತಾಜಾ ಉದಾಹರಣೆಯಂದರೆ ಚಂದ್ರಕಾಂತ ಎಂಬವರು ಕಳೆದ ಒಂದು ವರ್ಷದಿಂದ ಕಲಬುರಗಿ ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ಕೆಎಂಎಫ್ ಮಳಿಗೆಗೆ ಅನುಮತಿಗಾಗಿ ಅಲೆದರೂ ಜಿಲ್ಲಾಡಳಿತ ಅನುಮತಿ ನೀಡಿಲ್ಲ.

    ವರ್ಷದಲ್ಲಿ 30 ಮದ್ಯಂದಗಡಿಗಳಿಗೆ ಅನುಮತಿ ನೀಡುವ ಇಲ್ಲಿನ ಜಿಲ್ಲಾಡಳಿತ ಒಂದು ಕೆಎಂಎಫ್ ಮಳಿಗೆ ಅನುಮತಿ ನೀಡುತ್ತಿಲ್ಲ. ಈ ಮೂಲಕ ಇಲ್ಲಿನ ಜಿಲ್ಲಾಡಳಿತ ಹಾಲಿಗಿಂತ ಆಲ್ಕೋಹಾಲ್ ಮೇಲೆ ಹೆಚ್ಚು ಪ್ರೀತಿಯನ್ನು ತೋರಿಸುತ್ತಿದೆ ಎಂದು ಜನಸಾಮಾನ್ಯರು ಆಕ್ರೋಶ ಹೊರಹಾಕಿದ್ದಾರೆ.

  • ಅತ್ಯಾಚಾರ ಯತ್ನಕ್ಕೆ ಕಾರಣವಾಯ್ತು ಮದ್ಯದಂಗಡಿ

    ಅತ್ಯಾಚಾರ ಯತ್ನಕ್ಕೆ ಕಾರಣವಾಯ್ತು ಮದ್ಯದಂಗಡಿ

    ಚಿಕ್ಕಬಳ್ಳಾಪುರ: ಅಪ್ರಾಪ್ತ ಬಾಲಕಿ ಮೇಲೆ ಮದ್ಯ ಕುಡಿದ ಅಮಲಿನಲ್ಲಿ ಯುವಕನೊರ್ವ ಅತ್ಯಾಚಾರಕ್ಕೆ ಯತ್ನಿಸಿದ್ದು, ಇದಕ್ಕೆ ಎಂಎಸ್‍ಐಎಲ್ ಮದ್ಯದಂಗಡಿಯೇ ಕಾರಣ ಅಂತ ಮಹಿಳೆಯರು ಪ್ರತಿಭಟನೆಗಿಳಿದಿರುವ ಘಟನೆ ಜಿಲ್ಲೆಯ ಶಿಡ್ಲಘಟ್ಟ ಪಟ್ಟಣದಲ್ಲಿ ನಡೆದಿದೆ.

    ಪಟ್ಟಣದ ಹೊರವಲಯದಲ್ಲಿ ನೂತನವಾಗಿ ಎಂಎಸ್‍ಐಎಲ್ ಮದ್ಯದಂಗಡಿ ಆರಂಭವಾಗಿದ್ದು, ಇಲ್ಲಿ ಮದ್ಯ ಖರೀದಿಸಿದ್ದ ಯುವಕನೊರ್ವ ಅಪ್ರಾಪ್ತ ಬಾಲಕಿಯನ್ನ ಪುಸಲಾಯಿಸಿ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ಬಗ್ಗೆ ಬಾಲಕಿ ಪೋಷಕರಿಗೆ ತಿಳಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.

    ವಿಷಯ ತಿಳಿದ ಪೋಷಕರು ಕೂಡಲೇ ಪೊಲೀಸರಿಗೆ ದೂರು ನೀಡಿದ್ದು, ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಆರೋಪಿ ಯುವಕನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಇದಕ್ಕೆಲ್ಲಾ ಸುಲಭವಾಗಿ ಎಂಎಸ್‍ಐಎಲ್ ಮದ್ಯದಂಗಡಿಯಲ್ಲಿ ಮದ್ಯ ಸಿಗುತ್ತಿರುವುದೇ ಇಂತಹ ಅತ್ಯಾಚಾರ ಪ್ರಕರಣಗಳಿಗೆ ಕಾರಣ ಅಂತ ಸ್ಥಳೀಯ ಮಹಿಳೆಯರು ಸಿಟ್ಟಿಗೆದ್ದು, ಮದ್ಯದಂಗಡಿ ಎತ್ತಂಗಡಿ ಮಾಡುವಂತೆ ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ದಾರೆ.

    ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಬಂದಿದ್ದು, ಪ್ರತಿಭಟನಾನಿರತರ ಮನವೊಲಿಕೆಗೆ ಮುಂದಾಗಿದ್ದಾರೆ. ಆದರೆ ಮಹಿಳೆಯರು ಅವರ ಮನವೊಲಿಕೆಗೆ ಜಗ್ಗದೆ ಎಂಎಸ್‍ಐಎಲ್ ಅಧಿಕಾರಿಯನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ಆಕ್ರೋಶ ಹೊರಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎಣ್ಣೆ ಕೊಳ್ಳಲು ವೈನ್ ಶಾಪ್‍ ಗಳ ಮುಂದೆ ಮುಗಿಬಿದ್ದ ಜನ!

    ಎಣ್ಣೆ ಕೊಳ್ಳಲು ವೈನ್ ಶಾಪ್‍ ಗಳ ಮುಂದೆ ಮುಗಿಬಿದ್ದ ಜನ!

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇನ್ನು 2 ಗಂಟೆಗಳಲ್ಲಿ ಬ್ರೇಕ್ ಬೀಳಲಿದ್ದು, ಚುನಾವಣಾ ನೀತಿ ಸಂಹಿತೆ ಪರಿಣಾಮದಿಂದ ಮದ್ಯ ಖರೀದಿಸಲು ವೈನ್ ಶಾಪ್‍ ಗಳ ಮುಂದೆ ನೂಕುನುಗ್ಗಲು ಶುರುವಾಗಿದೆ.

    ಶನಿವಾರ ರಾಜ್ಯಾದ್ಯಂತ ಮತದಾನ ನಡೆಯಲಿದ್ದು, ಇಂದು ಸಂಜೆ 5 ಗಂಟೆಯಿಂದ ಮದ್ಯದಂಗಡಿಗಳು ಬಂದ್ ಆಗಲಿವೆ. ಇಂದು ಸಂಜೆ 5 ಗಂಟೆಯಿಂದ ಮೇ 12ರ ಮಧ್ಯರಾತ್ರಿವರೆಗೆ ರಾಜ್ಯದ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚುವಂತೆ ಚುನಾವಣಾ ಅಧಿಕಾರಿಗಳು ಸೂಚನೆ ನೀಡಿದ್ದರು. ಇದನ್ನೂ ಓದಿ:  ಇಂದು ಸಂಜೆಯಿಂದ ಎರಡು ದಿನ ರಾಜ್ಯಾದ್ಯಂತ ಮದ್ಯದಂಗಡಿ ಬಂದ್

    ಚುನಾವಣಾ ಆಯೋಗದ ಸೂಚನೆಯಂತೆ ಇಂದು ಸಂಜೆ 5 ಗಂಟೆಗೆ ವೈನ್ ಶಾಪ್‍ ಗಳ ಮುಚ್ಚುವುದರಿಂದ ವೈನ್ ಶಾಪ್ ಗಳ ಮುಂದೆ ನೂಕುನುಗ್ಗಲು ಶುರುವಾಗಿದೆ. ಮದ್ಯ ಪ್ರಿಯರು ಇನ್ನು ಮತ್ತೆ ಚುನಾವಣೆ ಮುಗಿಯುವವರೆಗೂ ಮದ್ಯೆ ಸಿಗುವುದಿಲ್ಲ ಎಂದು ಎಲ್ಲರೂ ಬಾರ್, ವೈನ್ ಶಾಪ್ ಗಳಿಗೆ ಹೋಗಿ  ಮದ್ಯ ಖರೀದಿಸುತ್ತಿದ್ದಾರೆ.

    ತಿಂಗಳ ಆರಂಭ ಮತ್ತು ವೀಕೆಂಡ್ ಅಂತಾ ಪಾರ್ಟಿ ಮೂಡ್‍ನಲ್ಲಿರುವ ಮದ್ಯಪ್ರಿಯರಿಗೆ ಚುನಾವಣಾ ಆಯೋಗ ಶಾಕ್ ನೀಡಿದ್ದು, ವಿಧಾನಸಬಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಚುನಾವಣಾ ಆಯೋಗ ಎಲ್ಲ ರೀತಿಯಿಂದಲೂ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುತ್ತಿದೆ.

  • ಇಂದು ಸಂಜೆಯಿಂದ ಎರಡು ದಿನ ರಾಜ್ಯಾದ್ಯಂತ ಮದ್ಯದಂಗಡಿ ಬಂದ್

    ಇಂದು ಸಂಜೆಯಿಂದ ಎರಡು ದಿನ ರಾಜ್ಯಾದ್ಯಂತ ಮದ್ಯದಂಗಡಿ ಬಂದ್

    ಬೆಂಗಳೂರು: ತಿಂಗಳ ಆರಂಭ ಮತ್ತು ವೀಕೆಂಡ್ ಅಂತಾ ಪಾರ್ಟಿ ಮೂಡ್‍ನಲ್ಲಿರುವ ಮದ್ಯಪ್ರಿಯರಿಗೆ ಚುನಾವಣಾ ಆಯೋಗ ಶಾಕ್ ನೀಡಿದೆ.

    ಶನಿವಾರ ರಾಜ್ಯಾದ್ಯಂತ ಮತದಾನ ನಡೆಯಲಿದ್ದು, ಇಂದು ಸಂಜೆ 5 ಗಂಟೆಯಿಂದ ಮದ್ಯದಂಗಡಿಗಳು ಬಂದ್ ಆಗಲಿವೆ. ಇಂದು ಸಂಜೆ 5 ಗಂಟೆಯಿಂದ ಮೇ 12ರ ಮಧ್ಯರಾತ್ರಿವರೆಗೆ ರಾಜ್ಯದ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚುವಂತೆ ಚುನಾವಣಾ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

    ವಿಧಾನಸಬಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಚುನಾವಣಾ ಆಯೋಗ ಎಲ್ಲ ರೀತಿಯಿಂದಲೂ ಮುನ್ನೇಚ್ಚರಿಕಾ ಕ್ರಮಗಳನ್ನು ಅನುಸರಿಸುತ್ತಿದೆ. ಇದೇ ಶನಿವಾರ ಮೇ 12ರಂದು ಮತದಾನ ನಡೆದರೆ, ಮೇ 15ರಂದು ಫಲಿತಾಂಶ ಹೊರಬರಲಿದೆ.

  • ಚಿಕ್ಕೋಡಿ ಬಾರ್ ಗಳಲ್ಲಿ ಸರ್ವರ್ ಆಗಿ ಕೆಲಸ ಮಾಡ್ತಾರೆ ಬಾಲಕರು

    ಚಿಕ್ಕೋಡಿ ಬಾರ್ ಗಳಲ್ಲಿ ಸರ್ವರ್ ಆಗಿ ಕೆಲಸ ಮಾಡ್ತಾರೆ ಬಾಲಕರು

    ಬೆಳಗಾವಿ: ಬಾಲ ಕಾರ್ಮಿಕರನ್ನು ಮದ್ಯದಂಗಡಿಗಳಲ್ಲಿ ಬಳಕೆ ಮಾಡುತ್ತಿರುವ ಘಟನೆ ಬೆಳಗಾವಿಯ ರಾಯಭಾಗ ತಾಲೂಕಿನ ಹಾರೋಗೇರಿ ಹಾಗೂ ಮುಗಳಕೋಡ್ ಪಟ್ಟಣಗಳಲ್ಲಿ ಕಂಡು ಬಂದಿದೆ.

    ಬಾಲ ಕಾರ್ಮಿಕರ ಬಳಕೆ ಅಕ್ಷಮ್ಯ ಅಪರಾಧ. ಬಾಲ ಕಾರ್ಮಿಕರ ಬಳಕೆ ಮಾಡಿದರೆ ಜೈಲು ಶಿಕ್ಷೆ ಕೂಡ ಇದೆ. ಆದರೆ ಇಲ್ಲಿ ಬಾಲ ಕಾರ್ಮಿಕರನ್ನು ಮದ್ಯದಂಗಡಿಗಳಲ್ಲಿ ಬಳಕೆ ಮಾಡುತ್ತಿದ್ದರೂ ಅಬಕಾರಿ, ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸಿಲ್ಲ.

    ಚಿಕ್ಕ ಮಕ್ಕಳ ಕೈಯಲಿ ದುಡಿಸಿಕೊಳ್ಳೋದು ಕಾನೂನಿನ ಪ್ರಕಾರ ಅಪರಾಧ. ಇದು ಗೊತ್ತಿದರೂ ಬಾಲಕರನ್ನು ತಮ್ಮ ಕೆಲಸ ಕಾರ್ಯದಲ್ಲಿ ಬಳಸಿಕೊಳುತ್ತಿದ್ದಾರೆ. ಬೆಳಗಾವಿಯ ರಾಯಭಾಗ ತಾಲೂಕಿನ ಹಾರೋಗೇರಿ ಹಾಗೂ ಮುಗಳಕೋಡ್ ಪಟ್ಟಣದ ಮದ್ಯದಂಗಡಿಗಳಿಗೆ ಬರೋ ಕುಡುಕರಿಗೆ ಈ ಬಾಲಕರು ಸರ್ವ್ ಮಾಡ್ತಾರೆ. ಅಷ್ಟೇ ಅಲ್ಲ ಕುಡುಕರು ಬಳಸಿದ ಗ್ಲಾಸ್‍ಗಳನ್ನು ಬಾಲಕರೇ ತೊಳೆಯುತ್ತಾರೆ.

    ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆಯಲ್ಲಿ ಬಾಲ ಕಾರ್ಮಿಕ ಪದ್ದತಿ ಬೆಳಕಿಗೆ ಬಂದಿದ್ದು, ಇನ್ನೂ ರಾಯಭಾಗ, ಚಿಕ್ಕೋಡಿಯ ಡಾಬಾಗಳಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟವಾಗುತ್ತಿದೆ ಎಂಬ ಆರೋಪಗಳು ಸಹ ಕೇಳಿ ಬರುತ್ತಿವೆ. ಮಕ್ಕಳಿಗೆ ಕಡಿಮೆ ಹಣ ನೀಡಿ ದುಡಿಸಿಕೊಳ್ಳಲಾಗುತ್ತಿದೆ.

  • ಕೊಪ್ಪಳದಲ್ಲಿ ಶಾಸಕ ಇಕ್ಬಾಲ್ ಅನ್ಸಾರಿ ಮದ್ಯಕೋಟೆ?- ಇಲ್ಲಿ ಎಂಆರ್‍ಪಿಗಿಂತ ದುಪ್ಪಟ್ಟು ವಸೂಲಿ

    ಕೊಪ್ಪಳದಲ್ಲಿ ಶಾಸಕ ಇಕ್ಬಾಲ್ ಅನ್ಸಾರಿ ಮದ್ಯಕೋಟೆ?- ಇಲ್ಲಿ ಎಂಆರ್‍ಪಿಗಿಂತ ದುಪ್ಪಟ್ಟು ವಸೂಲಿ

    – ದೂರು ನೀಡಿದ್ರೆ ಧಮ್ಕಿ ಹಾಕ್ತಾರೆ ಶಾಸಕರ ಬೆಂಬಲಿಗರು

     ಕೊಪ್ಪಳ: ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವುದು ಜನಪ್ರತಿನಿಧಿಗಳ ಕರ್ತವ್ಯ. ಆದ್ರೆ ಗಂಗಾವತಿಯ ಶಾಸಕ ಇಕ್ಬಾಲ್ ಅನ್ಸಾರಿ ಮಾತ್ರ ಲಿಕ್ಕರ್ ಮಾಫಿಯಾ ಮೂಲಕ ಜನರನ್ನು ಹಗಲು ದರೋಡೆ ಮಾಡುತ್ತಿದ್ದಾರೆ.

    ಶಾಸಕ ಇಕ್ಬಾಲ್ ಅನ್ಸಾರಿ ಅವರಿ ಗಂಗಾವತಿ ತಾಲೂಕಿನಲ್ಲಿ ಬರೋಬ್ಬರಿ 24 ಬಾರ್‍ಗಳನ್ನು ಹೊಂದಿದ್ದಾರೆ. ಇದರಲ್ಲಿ 22 ಬಾರ್‍ಗಳು ಶಾಸಕ ಅನ್ಸಾರಿ ಹಾಗೂ ಪತ್ನಿ ತಬಸುಮ್ ಅನ್ಸಾರಿ ಅವರ ಹೆಸರಲ್ಲಿದೆ. ಹೀಗಾಗಿಯೇ ಇಲ್ಲಿ ಯಾವುದೇ ಬಾರ್‍ಗಳಿಗೆ ಹೋದರೂ ಎಂಆರ್‍ಪಿ ದರಕ್ಕಿಂತ 40 ರಿಂದ 50 ರೂ. ಹೆಚ್ಚಿನ ಹಣ ಕೊಡಲೇಬೇಕು. ಇನ್ನೂ ಇವರ ಬಾರ್‍ಗಳಲ್ಲಿ ಸರ್ಕಾರದ ನಿಯಮದಂತೆ ಯಾವುದೇ ದರಪಟ್ಟಿ ಅಥವಾ ಎಂಆರ್‍ಪಿ ರೇಟ್ ಲಿಸ್ಟ್ ಕೂಡ ಹಾಕಿಲ್ಲ. ಈಗ ಇವರ ಲಿಕ್ಕರ್ ಲಾಬಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ಸೈಯದ್ ಅಲಿ ಎಂಬುವರು ಬೆಂಗಳೂರಿನ ಅಬಕಾರಿ ಇಲಾಖೆ ಆಯುಕ್ತರಿಗೆ ದೂರು ನೀಡಿದ್ದಾರೆ.

    ಕೊಪ್ಪಳದ ಗಂಗಾವತಿ ತಾಲೂಕಿನಾದ್ಯಂತ ಲಿಕ್ಕರ್ ಮಾರಾಟದಲ್ಲಿ ಮಾತ್ರ ಸ್ಪರ್ಧೆಯೇ ಇಲ್ಲ. ಬದಲಾಗಿ ಇಕ್ಬಲ್ ಅನ್ಸಾರಿ ಅವರೇ ಇಡೀ ತಾಲೂಕಿನಲ್ಲಿ ಮದ್ಯ ಮಾರಾಟದ ಮೇಲೆ ಹಿಡಿತ ಸಾಧಿಸಿದ್ದಾರೆ. ಇದರಿಂಂದ ತಾಲೂಕಿನಾದ್ಯಂತ ಮದ್ಯವನ್ನು ನಿಗದಿಗಿಂದ 40 ರಿಂದ 50 ರೂಪಾಯಿ ಹೆಚ್ಚುವರಿ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ವಿವಿಧ ಮದ್ಯಕ್ಕೆ ಇಡೀ ರಾಜ್ಯದಲ್ಲೇ ಒಂದು ಬೆಲೆಯಾದ್ರೆ, ಗಂಗಾವತಿ ತಾಲೂಕಿನಲ್ಲೇ ಮತ್ತೊಂದು ಬೆಲೆ ನಿಗದಿಯಾಗಿದೆ. ಈ ಬಗ್ಗೆ ಕೆಲ ಸಾಮಾಜಿಕ ಕಾರ್ಯಕರ್ತ ಸೈಯದ್ ಅಲಿ ಅಬಕಾರಿ ಇಲಾಖೆಗೆ ಸಾಕಷ್ಟು ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ.

    ಗಂಗಾವತಿ ತಾಲೂಕಿನಲ್ಲಿ ಒಟ್ಟು 17 ಸಿಎಲ್ 2 ಬಾರ್‍ಗಳಿದ್ದು ಎಲ್ಲವೂ ಶಾಸಕ ಇಕ್ಬಾಲ್ ಅನ್ಸಾರಿ ಒಡೆತನದಲ್ಲಿಯೇ ಇವೆ. ಸಾಮಾನ್ಯವಾಗಿ ಸಿಎಲ್ 2 ಮದ್ಯದಂಗಡಿಯಲ್ಲಿ ಎಂಆರ್‍ಪಿ ದರಕ್ಕೆ ಮದ್ಯ ಮಾರಾಟ ಮಾಡಬೇಕು. ಜೊತೆಗೆ ಅಲ್ಲಿಯೇ ನಿಂತು ಕುಡಿಯಲು ಅವಕಾಶ ಇಲ್ಲ. ಆದ್ರೆ, ಗಂಗಾವತಿಯ ಎಲ್ಲ ಸಿಎಲ್ 2 ಅಂಗಡಿಯಲ್ಲಿ ಪ್ರತಿ ಫುಲ್ ಬಾಟಲ್ ಮೇಲೆ 40 ರಿಂದ 50 ರೂಪಾಯಿ ಹೆಚ್ಚು ಹಣ ಪೀಕುತ್ತಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ನಡೆಸಿದ ರಿಯಾಲಿಟಿ ಚೆಕ್‍ನಲ್ಲಿ ಲಿಕರ್ ಲಾಬಿ ಎಳೆಎಳೆಯಾಗಿ ಹೊರ ಬಿದ್ದಿದೆ.

    ಸರ್ಕಾರದ ನಿಯಮದಂತೆ ಗಂಗಾವತಿಯ ಯಾವುದೇ ಬಾರ್‍ನಲ್ಲಿ ದರಪಟ್ಟಿ ನೇತು ಹಾಕಿಲ್ಲ. ಇನ್ನು ಸಿಎಲ್ 2 ಅಂಗಡಿ ಮುಂದೆಯೇ ಕುಡುಕರು ಕುಡಿದು ಅಸಭ್ಯ ವರ್ತನೆ ಮಾಡುವುದು ಮಹಿಳೆಯರಿಗೆ ಬೇಸರ ತರಿಸಿದೆ. ಈ ಎಲ್ಲ ಅಕ್ರಮವನ್ನು ಪ್ರಶ್ನಿಸುವವರಿಗೆ ಶಾಸಕ ಅನ್ಸಾರಿ ಬೆಂಬಲಿಗರು ಧಮ್ಕಿ ಹಾಕಿ, ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

    https://youtu.be/PUaUP8kiIg0

     

  • ಮಂಡ್ಯ: ಮದ್ಯದಂಗಡಿ ಉದ್ಘಾಟನೆ ವಿಚಾರವಾಗಿ 2 ಗುಂಪುಗಳ ನಡುವೆ ಘರ್ಷಣೆ

    ಮಂಡ್ಯ: ಮದ್ಯದಂಗಡಿ ಉದ್ಘಾಟನೆ ವಿಚಾರವಾಗಿ 2 ಗುಂಪುಗಳ ನಡುವೆ ಘರ್ಷಣೆ

    ಮಂಡ್ಯ: ನೂತನವಾಗಿ ಎಂಎಸ್‍ಐಎಲ್ ಮದ್ಯದಂಗಡಿ ತೆರೆಯಲು ಮುಂದಾಗಿರೋ ಸರ್ಕಾರದ ನಡೆಯನ್ನ ವಿರೋಧಿಸಿ ಗ್ರಾಮದಲ್ಲಿ ಪರ ವಿರೋಧ ಗುಂಪುಗಳು ಹೋರಾಟ ನಡೆಸುತ್ತಿರುವುದರಿಂದ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಮರಳಿಗ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

    ಇಂದು ಮರಳಿಗ ಗ್ರಾಮದಲ್ಲಿ ನೂತನವಾಗಿ ಎಂಎಸ್‍ಐಎಲ್ ಮದ್ಯದಂಗಡಿ ಉದ್ಘಾಟನೆಗೆ ತಯಾರಿ ನಡೆಸಲಾಗಿತ್ತು. ಆದ್ರೆ ಗ್ರಾಮದಲ್ಲಿ ಕುಡಿಯಲು ನೀರಿಲ್ಲ. ದನ ಕರುಗಳು ನೀರಿಲ್ಲದೇ ಬವಣೆ ಪಡುತ್ತಿವೆ. ಕುಡಿಯೋ ನೀರಿನ ಸಮಸ್ಯೆ ಬಗೆಹರಿಸಿ ಅಂತಾ ಅಧಿಕಾರಿಗಳಿಗೆ ಕೇಳಿಕೊಂಡ್ರೆ ಗ್ರಾಮದಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ಕೊಟ್ಟು ಯುಗಾದಿ ಹಬ್ಬಕ್ಕೆ ಎಣ್ಣೆ ಭಾಗ್ಯ ಕೊಡಲು ಹೊರಟಿದ್ದಾರೆ ಎಂದು ಗ್ರಾಮದ ಮಹಿಳೆಯರು ಕಣ್ಣೀರು ಹಾಕುತ್ತಿದ್ದಾರೆ.

    ಇದಕ್ಕೆ ಪ್ರತಿಯಾಗಿ ಮತ್ತೊಂದು ಗುಂಪು ಊರಿನಲ್ಲಿ ಕಲಬೆರಕೆ ಮದ್ಯವನ್ನ ಅಕ್ರಮವಾಗಿ ಮಾರಲಾಗ್ತಿದೆ. ಅದರ ಬದಲು ಅಧಿಕೃತವಾಗಿ ಮದ್ಯ ಮಾರಾಟ ಮಾಡಲಿ ಎಂದು ವಾದ ಮಾಡುತ್ತಿದೆ. ಇದ್ರಿಂದ ಪರ ವಿರೋಧ ಹೋರಾಟ ಏರ್ಪಟ್ಟಿದ್ದು, ಮದ್ಯ ವಿರೋಧಿ ಹೋರಾಟಗಾರರು ಬಂದೋಬಸ್ತ್ ಗೆಂದು ಗ್ರಾಮಕ್ಕೆ ಬಂದ ಪೊಲೀಸ್ ಜೀಪ್ ತಡೆದು, ಬಿರು ಬಿಸಿಲಿನಲ್ಲಿ ಪೊಲೀಸ್ ವಾಹನದ ಕೆಳಗೆ ಮಲಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಘಟನೆಯಿಂದಾಗಿ ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದ ರೀತಿ ವಾತಾವಣವಿದ್ದು ಸುಮಾರು 50 ಕ್ಕೂ ಹೆಚ್ಚು ಸಿಬ್ಬಂದಿ ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಮದಲ್ಲೇ ಮೊಕ್ಕಾಂ ಹೂಡಿದ್ದಾರೆ.