Tag: ಮದ್ಯದಂಗಡಿ

  • ನಾಳೆಯಿಂದ ಮದ್ಯದಂಗಡಿಗಳು ಓಪನ್ – ಒಬ್ಬರಿಗೆ ಎಷ್ಟು ಕ್ವಾಟರ್ ಎಣ್ಣೆ? ನಿಯಮ ಏನು?

    ನಾಳೆಯಿಂದ ಮದ್ಯದಂಗಡಿಗಳು ಓಪನ್ – ಒಬ್ಬರಿಗೆ ಎಷ್ಟು ಕ್ವಾಟರ್ ಎಣ್ಣೆ? ನಿಯಮ ಏನು?

    ಶಿವಮೊಗ್ಗ: ನಾಳೆಯಿಂದ ಕಂಟೈನ್‍ಮೆಂಟ್ ಜೋನ್‍ಗಳನ್ನು ಬಿಟ್ಟು ಬೇರೆ ಎಲ್ಲ ಕಡೆ ಮದ್ಯದಂಗಡಿಗಳು ತೆರೆಯಲಿವೆ. ಆದರೆ ಮದ್ಯ ಖರೀದಿಗೆ ಸರ್ಕಾರ ಕೆಲ ಷರತ್ತುಗಳು ಮತ್ತು ಮಿತಿಯನ್ನು ಹೇರಿದೆ.

    ಕೊರೊನಾ ಲಾಕ್‍ಡೌನ್ ನಿಂದ ಹಲವಾರು ದಿನಗಳಿಂದ ಮುಚ್ಚಿದ್ದ ಮದ್ಯದಂಗಡಿಗಳು ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆದರೆ ರಾಜ್ಯ ಸರ್ಕಾರವೂ ಕೆಲ ನಿಮಗಳು ಮತ್ತು ಷರತ್ತುಗಳನ್ನು ವಿಧಿಸಿದೆ. ಜೊತೆಗೆ ಒಂದು ದಿನಕ್ಕೆ ಒಬ್ಬರಿಗೆ ಇಂತಿಷ್ಟೇ ಮದ್ಯ ನೀಡಬೇಕು ಎಂದು ನಿಗದಿ ಮಾಡಿದೆ.

    ಪ್ರತಿಯೊಬ್ಬ ಗ್ರಾಹಕನಿಗೆ 2.3 ಲೀ. ಮದ್ಯ ಅಥವಾ 6 ಕ್ವಾಟರ್, 4 ಬಾಟಲ್ ಬೀರ್ ಅಥವಾ 6 ಪಿಂಟ್ ಬಾಟಲಿಗಳನ್ನು ಮಾತ್ರ ಮಾರಾಟ ಮಾಡಬೇಕು ಅದಕ್ಕಿಂತ ಹೆಚ್ಚಿನ ಮದ್ಯವನ್ನು ಒಬ್ಬನೇ ಗ್ರಾಹಕನಿಗೆ ಮಾರಾಟ ಮಾಡುವಂತಿಲ್ಲ. ಅಲ್ಲದೇ ಗ್ರಾಹಕನಿಗೆ ಕೇವಲ ಪಾರ್ಸಲ್ ಮಾತ್ರ ನೀಡಬೇಕು ಕೌಂಟರ್ ನಲ್ಲಿ ಕುಡಿಯುವುದಕ್ಕೆ ಅವಕಾಶ ನೀಡಬಾರದು. ಜೊತೆಗೆ ಮದ್ಯದ ಅಂಗಡಿಯಲ್ಲಿ ಕೇವಲ 5 ಮಂದಿ ಮಾತ್ರ ಇರಬೇಕು. ಇವರು ಮಾಸ್ಕ್, ಕೈಗವಸು, ಸ್ಯಾನಿಟೈಜರ್ ಬಳಕೆ ಮಾಡಬೇಕು ಎಂದು ಸೂಚಿಸಿದೆ.

    ಇದರ ಜೊತೆಗೆ ಮದ್ಯದಂಗಡಿಗೆ ಬಂದು ಮದ್ಯಕೊಳ್ಳುವವರು ಗುಂಪಿನಲ್ಲಿ ಬರಬಾರದು. ಸುಮಾರು ಆರು ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಅಂಗಡಿ ಮುಂಭಾಗದಲ್ಲಿ ಜನಜಂಗುಳಿ ಸೇರದಂತೆ ನೋಡಿಕೊಳ್ಳಬೇಕು. ಬ್ಯಾರಿಕೇಡ್ ಅಳವಡಿಸಬೇಕು. ಸಿಸಿ ಕ್ಯಾಮರಾ ಸೇರಿದಂತೆ ಇಬ್ಬರು ಭದ್ರತಾ ಸಿಬ್ಬಂದಿಯನ್ನು ಅಂಗಡಿ ಮಾಲೀಕರೆ ನೇಮಿಸಿಕೊಳ್ಳುವ ಮೂಲಕ ಯಾವುದೇ ಗೊಂದಲ ಉಂಟಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.

    ಷರತ್ತುಗಳು ಏನು?
    1. ಕಂಟೈನ್‍ಮೆಂಟ್ ಝೋನ್ ಬಿಟ್ಟು ಉಳಿದೆಡೆ ಮದ್ಯ ಮಾರಾಟ
    2. ವೈನ್‍ಶಾಪ್, ಎಂಆರ್‍ಪಿ, ಎಂಎಸ್‍ಐಎಲ್‍ಗಳಲ್ಲಿ ಮದ್ಯ ಮಾರಾಟ
    3. ಬೆಳಗ್ಗೆ 9ರಿಂದ ಸಂಜೆ 7 ಗಂಟೆಯವರೆಗೂ ವೈನ್‍ಶಾಪ್ ಓಪನ್
    4. ವೈನ್ ಶಾಪ್‍ನಲ್ಲಿ ಮದ್ಯಪಾನ ಇಲ್ಲ, ಪಾರ್ಸಲ್‍ಗಷ್ಟೇ ಅವಕಾಶ
    5. ಸೂಪರ್ ಮಾರ್ಕೆಟ್ ಗಳಲ್ಲಿ ಮದ್ಯ ಮಾರಾಟ ಇರಲ್ಲ
    6. ಬಾರ್ ಅಂಡ್ ರೆಸ್ಟೋರೆಂಟ್ ತೆರೆಯುವಂತೆ ಇಲ್ಲ
    7. ಮದ್ಯಕೊಂಡು ಕೊಳ್ಳುವವರಿಗೆ ಮಾಸ್ಕ್ ಕಡ್ಡಾಯ
    8. ಮದ್ಯದಂಗಡಿಯಲ್ಲಿ ಸ್ಯಾನಿಟೈಸರ್ ಬಳಕೆ ಕಡ್ಡಾಯ
    9. 5 ಜನ ಮಾತ್ರ ಇರುವಂತೆ ನೋಡಿಕೊಳ್ಳಬೇಕು
    10. 6 ಅಡಿ ಸಾಮಾಜಿಕ ಅಂತರ ಇರಬೇಕು

  • ವಾರಕ್ಕೊಮ್ಮೆಯಾದ್ರೂ ಮದ್ಯದಂಗಡಿ ತೆರೆಯಿರಿ – ಶಾಸಕ ಪುಟ್ಟರಂಗಶೆಟ್ಟಿ ಒತ್ತಾಯ

    ವಾರಕ್ಕೊಮ್ಮೆಯಾದ್ರೂ ಮದ್ಯದಂಗಡಿ ತೆರೆಯಿರಿ – ಶಾಸಕ ಪುಟ್ಟರಂಗಶೆಟ್ಟಿ ಒತ್ತಾಯ

    – ಮಹಿಳೆಯರಿಂದಲೇ ಕಳ್ಳಭಟ್ಟಿ ದಂಧೆ

    ಚಾಮರಾಜನಗರ: ಲಾಕ್‍ಡೌನ್ ಹಿನ್ನೆಲೆಯಲ್ಲಿ ಮದ್ಯದಂಗಡಿಗಳನ್ನು ಮುಚ್ಚಿರುವುರದಿಂದ ಚಾಮರಾಜನಗರ ಜಿಲ್ಲೆಯಲ್ಲಿ ಕಳ್ಳಭಟ್ಟಿ ದಂಧೆ ಹೆಚ್ಚಾಗುತ್ತಿದೆ ಎಂದು ಚಾಮರಾಜನಗರ ಶಾಸಕ ಸಿ. ಪುಟ್ಟರಂಗಶೆಟ್ಟಿ ಆತಂಕ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವೆಡೆ ಮಹಿಳೆಯರೇ ಕಳ್ಳಭಟ್ಟಿ ತಯಾರಿಕೆಯಲ್ಲಿ ತೊಡಗಿದ್ದಾರೆ. ಹೀಗೆ ಬಿಟ್ಟರೆ ಅಪಾಯ ಎದುರಾಗಲಿದ್ದು, ಕಳ್ಳಭಟ್ಟಿ ದಂಧೆಗೆ ಕಡಿವಾಣ ಹಾಕುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದಿದ್ದೇನೆ ಎಂದರು.

    ಮದ್ಯದಂಗಡಿ ಮುಚ್ಚಿರುವುದರಿಂದ ಸರ್ಕಾರಕ್ಕೆ ಬರುವ ಆದಾಯದಲ್ಲಿ ಖೋತಾ ಆಗುತ್ತಿದೆ. ಅಲ್ಲದೆ ಮದ್ಯ ಮಾರಾಟದ ಕಳ್ಳದಂಧೆ ನಡೆಯುತ್ತಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಸರ್ಕಾರ ಹಸಿರು ವಲಯದಲ್ಲಿರುವ ಚಾಮರಾಜನಗರ ಜಿಲ್ಲೆಯಲ್ಲಿ ವಾರಕ್ಕೊಮ್ಮೆ ಮದ್ಯದಂಗಡಿ ತೆರೆಯಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಕಳ್ಳದಾರಿಗಳಲ್ಲಿ ಮದ್ಯ ಮಾರಾಟ ಆಗುತ್ತಿದೆ. ಮದ್ಯದಂಗಡಿಗಳು ಮುಚ್ಚಿದ್ದರೂ ಹೇಗೆ ಮದ್ಯ ಮಾರಾಟ ಆಗುತ್ತಿದೆ. ಒಂದಕ್ಕೆ ಹತ್ತು ಪಟ್ಟು ಹಣ ನೀಡಿ ಜನ ಮದ್ಯ ಸೇವಿಸುತ್ತಿದ್ದಾರೆ ಎಂದು ತಿಳಿಸಿದರು.

    ಕಾಳಸಂತೆಯಲ್ಲಿ ಲೋಕಲ್ ಮದ್ಯಕ್ಕೂ 500, 600 ರೂಪಾಯಿಗಳಾಗಿದೆ. ಮದ್ಯದಂಗಡಿಗಳನ್ನು ಬಂದ್ ಮಾಡಿದ್ದ ಮೇಲೆ ಕಾಳಸಂತೆಯಲ್ಲಿ ಹೇಗೆ ದೊರೆಯುತ್ತಿದೆ? ಬಂದ್ ಮಾಡುವಾಗ ವಿಡಿಯೋ ರೆಕಾರ್ಡ್ ಮಾಡಲಾಗಿದೆಯೇ? ನಿಯಮಾನುಸಾರ ಸೀಲ್ ಮಾಡಲಾಗಿದೆಯೇ ಎಂಬುದರ ಬಗ್ಗೆ ಪರಿಶೀಲಿಸಬೇಕು ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಆಗ್ರಹಿಸಿದ್ದಾರೆ.

  • ಮದ್ಯದಂಗಡಿಗಳನ್ನು ತೆರೆಯಲು ಮುಖ್ಯಮಂತ್ರಿಗಳಿಗೆ ಒಲವಿದೆ: ಸಚಿವ ನಾಗೇಶ್

    ಮದ್ಯದಂಗಡಿಗಳನ್ನು ತೆರೆಯಲು ಮುಖ್ಯಮಂತ್ರಿಗಳಿಗೆ ಒಲವಿದೆ: ಸಚಿವ ನಾಗೇಶ್

    ಕೋಲಾರ: ಸರ್ಕಾರದ ಖಜಾನೆ ಖಾಲಿಯಾಗಿದ್ದು, ಮುಖ್ಯಮಂತ್ರಿಗಳಿಗೆ ಮದ್ಯದಂಗಡಿಗಳನ್ನ ತೆರೆಯುವ ಒಲವಿದೆ ಎಂದು ಕೋಲಾರದಲ್ಲಿ ಅಬಕಾರಿ ಸಚಿವ ಎಚ್.ನಾಗೇಶ್ ಹೇಳಿದ್ದಾರೆ.

    ಕೋಲಾರದ ಜಿಲ್ಲಾಪಂಚಾಯತಿ ಬಳಿ ಮಾತನಾಡಿದ ಸಚಿವ ನಾಗೇಶ್ ಅವರು, ಮೇ 3ರ ನಂತರ ಮದ್ಯದಂಗಡಿಗಳನ್ನ ತೆರೆಯುವ ಮುನ್ಸೂಚನೆಯನ್ನು ನೀಡಿದರು.

    ಕೊರೊನಾ ಕಾರಣದಿಂದ ಸರ್ಕಾರಿ ಅಧಿಕಾರಗಳ ವೇತನ ನೀಡುವುದು ಸೇರಿದಂತೆ ಯೋಜನೆಗಳಿಗೆ ಹಣ ನೀಡಲು ಸರ್ಕಾರಕ್ಕೆ ತುಂಬಾ ಹೊರೆಯಾಗಿದೆ. ಸರ್ಕಾರದ ಖಜಾನೆ ಖಾಲಿಯಾಗಿರುವ ಕಾರಣ ಮುಖ್ಯಮಂತ್ರಿಗಳು ಮದ್ಯದಂಗಡಿಗಳನ್ನು ತೆರೆಯುವ ಒಲವನ್ನು ಹೊಂದಿದ್ದಾರೆ. ಆದರೆ ಸದ್ಯ ವಿಶ್ವದಲ್ಲಿಯೇ ಪ್ರಧಾನಿ ಮೋದಿ ಅವರು ನಂಬರ್ ಒನ್ ಆಗಿದ್ದು. ಇಂದಿನ ಸಭೆಯಲ್ಲಿ ಮೋದಿ ಏನು ಹೇಳಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ. ಆದ್ದರಿಂದ ಸಿಎಂ ಅವರೊಂದಿಗೆ ಚರ್ಚೆ ನಡೆಸಿ ಮೋದಿ ಅವರ ಸೂಚನೆ ಮೇರೆಗೆ ಮದ್ಯದಂಗಡಿಗಳು ತೆರೆಯುವ ಬಗ್ಗೆ ತೀರ್ಮಾನ ಮಾಡಲಾಗುತ್ತದೆ ಎಂದರು.

    ಪಂಜಾಬ್ ರಾಜ್ಯದಲ್ಲಿ ಮದ್ಯದಂಗಡಿಗಳನ್ನು ತೆರೆಯುವುದಕ್ಕೆ ಅಲ್ಲಿನ ಸರ್ಕಾರ ಮನವಿ ಮಾಡಿತ್ತು. ಆದರೆ ಅವರ ಮನವಿಯನ್ನು ಪ್ರಧಾನಿಗಳು ನಿರಾಕರಿಸಿದ್ದಾರೆ. ನಾನು ಕೂಡ ಕಳೆದ ಕ್ಯಾಬಿನೆಟ್ ಸಭೆಯ ಬಳಿಕ ಸಿಎಂ ಅವರೊಂದಿಗೆ ಪ್ರತ್ಯೇಕವಾಗಿ ಚರ್ಚೆ ನಡೆಸಿ ಗಮನಕ್ಕೆ ತಂದಿರುವುದಾಗಿ ತಿಳಿಸಿದರು.

    ಉಳಿದಂತೆ ಮದ್ಯದಂಗಡಿಗಳಲ್ಲಿ ಸ್ಟಾಕ್ ಪರಿಶೀಲನೆ ಮಾಡಲಾಗುತ್ತಿದೆ. ಸ್ಟಾಕ್‍ನಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇತ್ತ ಬಾರ್ ಗಳ ಕಳ್ಳತನ ಹೆಚ್ಚಾಗಿದ್ದು, ದಿನ ನಿತ್ಯ ಇಂತಹ ಪ್ರಕರಣಗಳು ವರದಿಯಾಗುತ್ತಿದೆ. ಪೊಲೀಸರು ಈ ಕುರಿತು ಕ್ರಮಕೈಗೊಳ್ಳುತ್ತಾರೆ ಎಂದು ತಿಳಿಸಿದರು.

  • ಮೂಟೆ ಹೊತ್ತು ಸುಸ್ತಾಗುವ ನಮ್ಗೆ ಎಣ್ಣೆ ಇಲ್ಲದಿದ್ರೆ ಹೇಗೆ: ಹಮಾಲಿಗಳು ಆಕ್ರೋಶ

    ಮೂಟೆ ಹೊತ್ತು ಸುಸ್ತಾಗುವ ನಮ್ಗೆ ಎಣ್ಣೆ ಇಲ್ಲದಿದ್ರೆ ಹೇಗೆ: ಹಮಾಲಿಗಳು ಆಕ್ರೋಶ

    ರಾಯಚೂರು: ಲಾಕ್‍ಡೌನ್ ಹಿನ್ನೆಲೆ ಮದ್ಯಪ್ರಿಯರಿಗೆ ಬಹಿರಂಗವಾಗಿ ಹೇಳಿಕೊಳ್ಳಲು ಆಗದಿರುವಷ್ಟು ಪರಿಸ್ಥಿತಿ ಗಂಭೀರವಾಗಿದೆ. ಹೀಗಾಗಿ ಕೆಲವರು ದುಬಾರಿ ಬೆಲೆಗೆ ಅಕ್ರಮ ಮದ್ಯವನ್ನು ಕೊಂಡು ಕುಡಿಯುತ್ತಿದ್ದಾರೆ.

    ರಾಯಚೂರಿನ ಎಪಿಎಂಸಿ ಹಮಾಲಿಗಳು ಮಾತ್ರ ಮದ್ಯ ಬಂದ್ ಆಗಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮದ್ಯ ಸಿಗದಿರುವುದಕ್ಕೆ ಕೆಲವರು ಸಿಎಚ್ ಪೌಡರ್ ಕಲಬೆರಕೆ ಸೇಂದಿಗೆ ದಾಸರಾಗಿದ್ದಾರೆ. ಸೇಂದಿ ಬೆಲೆ ಸಹ ಲಾಕ್‍ಡೌನ್ ಹಿನ್ನೆಲೆ ಡಬಲ್ ಆಗಿದೆಯಂತೆ. ಲಾಕ್‍ಡೌನ್‍ನಿಂದ ಸಿಎಚ್ ಪೌಡರ್ ಸಹ ಸಿಗದಿರುವುದರಿಂದ ಅದರಲ್ಲೂ ನಕಲಿ ಸೇಂದಿ ತಯಾರಾಗುತ್ತಿದ್ದು ಕಳ್ಳ ಮಾರ್ಗದಲ್ಲಿ ಅದನ್ನೇ ಕುಡಿಯುತ್ತಿದ್ದಾರೆ.

    ಮೂಟೆ ಹೊತ್ತು ಸುಸ್ತಾಗುವ ನಮಗೆ ಎಣ್ಣೆ ಇಲ್ಲದಿದ್ದರೆ ಹೇಗೆ? ದುಡಿದು ದುಡ್ಡು ಏನು ಮಾಡುವುದು ಎಂದು ಹಮಾಲಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಆದಷ್ಟು ಬೇಗ ಮದ್ಯದ ಅಂಗಡಿಗಳನ್ನು ತೆರೆಯಬೇಕು ಎಂದು ಬಹಿರಂಗವಾಗಿ ಬೇಡಿಕೆ ಇಟ್ಟಿದ್ದಾರೆ. ಒಂದೆಡೆ ಕೊರೊನಾ ಭೀತಿಯಿಂದ ಭತ್ತ ನೇರವಾಗಿ ಮಿಲ್ ಗಳಿಗೆ ಹೋಗುತ್ತಿದೆ. ಹೀಗಾಗಿ ಎಪಿಎಂಸಿಯಲ್ಲಿ ಕೆಲಸ ಕಡಿಮೆಯಿದೆ. ಇನ್ನೊಂದೆಡೆ ಅಕ್ರಮವಾಗಿ ಮದ್ಯವನ್ನು ದುಬಾರಿ ಬೆಲೆಗೆ ಕೊಂಡುಕೊಳ್ಳಬೇಕಿದೆ ಅಂತ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಜಿಲ್ಲೆಯಲ್ಲಿ ಅಬಕಾರಿ ಇಲಾಖೆ ಹಾಗೂ ಪೊಲೀಸರು ನಿರಂತರ ದಾಳಿಗಳನ್ನು ಮಾಡಿ ಅಕ್ರಮ ಮದ್ಯ, ಕಳ್ಳಭಟ್ಟಿ, ಸಿಎಚ್ ಪೌಡರ್ ಕಲಬೆರಕೆ ಸೇಂದಿ ಮಾರುವವರನ್ನ ಬಂಧಿಸಿದ್ದು, ಪ್ರತಿದಿನ ಪ್ರಕರಣಗಳನ್ನ ಭೇದಿಸುತ್ತಿದ್ದಾರೆ. ಆದರೂ ಅಕ್ರಮ ಮಾರಾಟ ನಡೆಯುತ್ತಿದೆ.

    ತೆಲಂಗಾಣದ ಗದ್ವಾಲ್, ಕೃಷ್ಣಾದಿಂದ ಈ ಹಿಂದೆ ಅಕ್ರಮ ಸೇಂದಿ ಹಾಗೂ ಸಿಎಚ್ ಪೌಡರ್ ಬರುತ್ತಿತ್ತು. ಈಗ ರೈಲು ಮಾರ್ಗ ಬಂದ್ ಆಗಿದೆ. ಅಂತರರಾಜ್ಯ ಚೆಕ್ ಪೋಸ್ಟ್‍ಗಳು ಇರುವುದರಿಂದ ಸಿಎಚ್ ಪೌಡರ್ ಸರಬರಾಜು ನಿಂತಿದೆ. ಆದರೆ ದಂಧೆ ಕೋರರು ನಕಲಿ ಕಲಬೆರಕೆ ಹೆಂಡ ತಯಾರಿ ಕೂಲಿಕಾರ್ಮಿಕರಿಗೆ, ಹಮಾಲಿಗಳಿಗೆ ಮಾರುತ್ತಿರುವುದು ಬೆಳಕಿಗೆ ಬಂದಿದೆ.

  • ಮಾನ್ವಿಯಲ್ಲಿ ಮದ್ಯದಂಗಡಿಗಳಿಗೆ ಸೀಲ್ ಇಲ್ಲ: 4 ಪಟ್ಟು ದುಬಾರಿ ಬೆಲೆಗೆ ಮಾರಾಟ

    ಮಾನ್ವಿಯಲ್ಲಿ ಮದ್ಯದಂಗಡಿಗಳಿಗೆ ಸೀಲ್ ಇಲ್ಲ: 4 ಪಟ್ಟು ದುಬಾರಿ ಬೆಲೆಗೆ ಮಾರಾಟ

    – ಮಾಜಿ ಸಂಸದರ ಸಂಬಂಧಿಯ ಕಾರಿನಲ್ಲಿ ಮದ್ಯ ಸಾಗಾಟ

    ರಾಯಚೂರು: ಮಾನ್ವಿಯಿಂದ ರಾಯಚೂರು ನಗರಕ್ಕೆ ಅಕ್ರಮವಾಗಿ ಮದ್ಯ ಸಾಗಣೆ ಮಾಡುತ್ತಿದ್ದ ಕಾರೊಂದನ್ನು ರಾಯಚೂರು ಅಬಕಾರಿ ಪೊಲೀಸರು ಜಪ್ತಿಮಾಡಿ ಆರೋಪಿಗಳನ್ನ ಬಂಧಿಸಿದ್ದಾರೆ.

    ಮಾಜಿ ಸಂಸದ ಬಿ.ವಿ.ನಾಯಕ್ ಸಂಬಂಧಿ ಶ್ರೀನಿವಾಸ್ ನಾಯಕ್‍ಗೆ ಸೇರಿದ ಫೋರ್ಡ್ ಎಂಡಿವಿಯರ್ ಕಾರ್ (ಸಂಖ್ಯೆ ಕೆ.ಎ36 ಎಂಸಿ 0005) ನಲ್ಲಿ 750 ಎಂ.ಎಲ್‍ನ 10 ಬಾಟಲ್ ವಿಸ್ಕಿ, 650 ಎಂ.ಎಲ್‍ನ 24 ಬಾಟಲ್ ಬಿಯರ್ ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ತಾಲೂಕಿನ ಕಲ್ಲೂರು ಬಳಿ ಪರಿಶೀಲನೆ ಮಾಡಿದ ಅಬಕಾರಿ ಪೊಲೀಸರು ಮದ್ಯದ ಬಾಟಲಿಗಳನ್ನ ಜಪ್ತಿ ಮಾಡಿ ಇಬ್ಬರು ಆರೋಪಿಗಳನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಾಕೇಶ್ ಹಾಗೂ ಅಜಯ್‍ಕುಮಾರ್ ಬಂಧಿತ ಆರೋಪಿಗಳು.

    ಲಾಕ್‍ಡೌನ್ ಹಿನ್ನೆಲೆ ಮದ್ಯ ಮಾರಾಟಕ್ಕೆ ಬ್ರೇಕ್ ಬಿದ್ದಿದೆಯಾದರೂ ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ಮಾತ್ರ ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ. ಯಾಕೆಂದರೆ ಇಲ್ಲಿನ ಮದ್ಯದ ಅಂಗಡಿಗಳಿಗೆ ಅಬಕಾರಿ ಅಧಿಕಾರಿಗಳು ಇದುವರೆಗೂ ಸೀಲ್ ಹಾಕಿಲ್ಲ. ಮಾನ್ವಿಯ ಬಸ್ ನಿಲ್ದಾಣ ಹಾಗೂ ಸಿಂಧನೂರು ರಸ್ತೆಯಲ್ಲಿರುವ ಬಾರ್ ಗಳಿಗೆ ಕೇವಲ ಬೀಗ ಮಾತ್ರ ಹಾಕಲಾಗಿದೆ.

    ಕೇವಲ ಬೀಗ ಹಾಕಿರುವುದರಿಂದ ರಾತ್ರಿ ವೇಳೆ ಮದ್ಯದಂಗಡಿಯಿಂದ ಮದ್ಯ ರಾಜಾರೋಷವಾಗಿ ಹೊರಹೋಗುತ್ತಿದೆ. ಇದರಿಂದ ಬೇಸತ್ತಿರುವ ಸ್ಥಳೀಯರು ಕೂಡಲೇ ಬಾರ್ ಗಳನ್ನು ಅಧಿಕಾರಿಗಳು ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ. ತಾಲೂಕು ಅಬಕಾರಿ ಇನ್ಸ್ ಪೆಕ್ಟರ್ ಸಹಕಾರದಿಂದಲೇ ಅಗ್ಗದ ಮದ್ಯವನ್ನು ನಾಲ್ಕು ಪಟ್ಟು ದುಬಾರಿಗೆ ಮಾರಾಟ ಮಾಡಲಾಗುತ್ತಿದೆ ಅಂತ ಆರೋಪಿಸಿದ್ದಾರೆ. ಮಾನ್ವಿಯ ಮಲ್ಲಯ್ಯ ಹಾಗೂ ಸೋಮು ಎಂಬುವವರಿಗೆ ಸೇರಿದ 11 ಮದ್ಯದ ಅಂಗಡಿಗಳಿಗೆ ಮಾತ್ರ ಸೀಲ್ ಹಾಕಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಈ ಮಧ್ಯೆ ಕಳಭಟ್ಟಿ ಹಾಗೂ ಸಿಎಚ್ ಪೌಡರ್ ಸೇಂದಿ ಮಾರಾಟ ಕೂಡ ಜೋರಾಗಿದ್ದು ಅಬಕಾರಿ ಇಲಾಖೆ ಅಧಿಕಾರಿಗಳು ಲಿಂಗಸುಗೂರು ತಾಲೂಕಿನ ಬಗಾಡಿ ತಾಂಡದಲ್ಲಿ 250 ಕೊಡಗಳಲ್ಲಿದ್ದ 1500 ಲೀಟರ್ ಕಳ್ಳಭಟ್ಟಿ ಜಪ್ತಿ ಮಾಡಿದ್ದಾರೆ. ಮಾನ್ವಿ ತಾಲೂಕಿನ ಕುರಡಿ ಗ್ರಾಮದ ಬಳಿ 10 ಲೀಟರ್ ಕಳ್ಳಭಟ್ಟಿ ಹಾಗೂ ಒಂದು ಬೈಕ್ ಜಪ್ತಿಮಾಡಲಾಗದ್ದು ಆರೋಪಿಗಳು ಪರಾರಿಯಾಗಿದ್ದಾರೆ.

  • ಲಾಕ್‍ಡೌನ್ ವಿಸ್ತರಣೆಯ ಎಫೆಕ್ಟ್ – ಮದ್ಯದಂಗಡಿ ಕಳ್ಳತನ

    ಲಾಕ್‍ಡೌನ್ ವಿಸ್ತರಣೆಯ ಎಫೆಕ್ಟ್ – ಮದ್ಯದಂಗಡಿ ಕಳ್ಳತನ

    – ಕಳ್ಳರ ಕೈಚಳಕ ಸಿಸಿ ಕ್ಯಾಮೆರಾದಲ್ಲಿ ಸೆರೆ

    ರಾಯಚೂರು: ಲಾಕ್‍ಡೌನ್ ಹಿನ್ನೆಲೆ ಮದ್ಯ ಮಾರಾಟಕ್ಕೆ ನಿಷೇಧವಿದೆ. ಹೀಗಾಗಿ ಎಲ್ಲಾ ಬಾರ್‍ಗಳು ಬಂದ್ ಆಗಿವೆ. ಆದರೆ ರಾಯಚೂರಿನಲ್ಲಿ ಮದ್ಯ ಸಿಗದ ಹಿನ್ನೆಲೆಯಲ್ಲಿ ಕೆಲವರು ಬಾರ್‍ಗೆ ಕನ್ನ ಹಾಕಿ ಲಕ್ಷಾಂತರ ರೂಪಾಯಿ ಮದ್ಯ ಕದ್ದಿದ್ದು, ಅಂಗಡಿಯಲ್ಲಿನ ಉಳಿದ ವಸ್ತುಗಳು ಹಾಗೇ ಬಿಟ್ಟಿದ್ದಾರೆ. ಕಳ್ಳರ ಕೈಚಳಕ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ನಗರದ ಅಸ್ಕಿಹಾಳ ಬಳಿಯ ಶ್ರೀರೇಣುಕಾ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಕಳ್ಳತನವಾಗಿದೆ. ಕಳೆದ 20 ದಿನಗಳಿಂದ ಮದ್ಯ ಸಿಗದೇ ಕಂಗೆಟ್ಟ ಮದ್ಯ ಪ್ರಿಯರಿಂದ ಮದ್ಯದಂಗಡಿ ಕಳ್ಳತನವಾಗಿರುವ ಶಂಕೆಯಿದೆ. ವೆಂಕಟೇಶ್‍ಗೌಡ ಅವರಿಗೆ ಸೇರಿದ ರೇಣುಕಾ ಬಾರ್ ಅಂಡ್ ರೆಸ್ಟೋರೆಂಟ್‍ನ ಹಿಂದಿನ ಬಾಗಿಲು ಮುರಿದು ಮದ್ಯದ ಬಾಕ್ಸ್ ಗಳನ್ನು ಕಳ್ಳತನ ಮಾಡಲಾಗಿದೆ.

    ಹಿಂದಿನ ಬಾಗಿಲನ್ನು ಮುರಿದು ಒಳಬಂದ ಇಬ್ಬರು ಕಳ್ಳರು, ಮದ್ಯದ ಕೌಂಟರ್‍ಗೆ ತೆರಳು ಚಾವಣಿಯ ಸಿಮೆಂಟ್ ಸೀಟ್ ಗಳನ್ನ ಹೊಡೆದು ಲಕ್ಷಾಂತರ ರೂ. ಬೆಲೆ ಬಾಳುವ ಮದ್ಯ ಕಳ್ಳತನ ಮಾಡಿದ್ದಾರೆ. ಕಳ್ಳತನ ದೃಶ್ಯ ಸೆರೆಯಾಗಬಾರದು ಎಂದು ಮದ್ಯದಂಗಡಿಯ ಸಿಸಿ ಕ್ಯಾಮೆರಾಗಳ ಒಂದು ಮಾನಿಟರ್ ಅನ್ನು ಜಖಂಗೊಳಿಸಿ ಕೃತ್ಯ ಎಸಗಿದ್ದಾರೆ. ಪಶ್ಚಿಮ ಠಾಣೆ ಹಾಗೂ ಅಬಕಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಘಟನೆ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಕೆಲಸ ಮಾಡ್ತಿದ್ದ ಅಂಗಡಿಯಲ್ಲಿ ಮದ್ಯ ಕದ್ದು ಸಿಕ್ಕಿಬಿದ್ದ

    ಕೆಲಸ ಮಾಡ್ತಿದ್ದ ಅಂಗಡಿಯಲ್ಲಿ ಮದ್ಯ ಕದ್ದು ಸಿಕ್ಕಿಬಿದ್ದ

    – ವಿವಿಧ ಬ್ರ್ಯಾಂಡ್‍ನ 25 ಬಾಕ್ಸ್ ಮದ್ಯ ವಶಕ್ಕೆ

    ಶಿವಮೊಗ್ಗ: ತಾನು ಕೆಲಸ ಮಾಡುತ್ತಿದ್ದ ಅಂಗಡಿಯಲ್ಲಿ ಮದ್ಯ ಕದ್ದು ಪರಾರಿಯಾಗುತ್ತಿದ್ದವನನ್ನು ಪೊಲೀಸರು ಬಂಧಿಸಿರುವ ಘಟನೆ ಜಿಲ್ಲೆಯ ಸೊರಬ ತಾಲೂಕಿನ ಆನವಟ್ಟಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದಲ್ಲಿನ ವಿನಯ್ ವೈನ್ಸ್‍ನ ಬೀಗ ಮುರಿದು ಅದೇ ಮದ್ಯದಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ದೇವರಾಜ್ ಈ ಕೃತ್ಯ ಎಸಗಿದ್ದಾನೆ. ಅಬಕಾರಿ ಇಲಾಖೆಯಿಂದ ಸೀಜ್ ಮಾಡಲಾಗಿದ್ದ ಮದ್ಯದಂಗಡಿಯ ಬೀಗ ಮುರಿದು ಮದ್ಯ ಸಾಗಿಸಲು ಯತ್ನಿಸಿದ್ದ ಎಂದು ಹೇಳಲಾಗಿದೆ.

    ವಿವಿಧ ಬ್ರ್ಯಾಂಡ್‍ನ 25 ಬಾಕ್ಸ್ ಮದ್ಯವನ್ನು ಈ ವೇಳೆ ವಶಪಡಿಸಿಕೊಳ್ಳಲಾಗಿದ್ದು, ಮದ್ಯ ಸಾಗಿಸುತ್ತಿದ್ದ ಆಲ್ಟೋ ಕಾರನ್ನು ಕೂಡ ವಶಕ್ಕೆ ಪಡೆದುಕೊಳ್ಳಲಾಗಿದೆ. ಅಂಗಡಿಯಲ್ಲಿ ಇನ್ನಿಬ್ಬರು ಇದ್ದು ಅವರಿಬ್ಬರು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ. ಖಚಿತ ಮಾಹಿತಿ ಮೇರೆಗೆ ಶಿವಮೊಗ್ಗ ಅಬಕಾರಿ ಉಪ ಆಯುಕ್ತ ಕ್ಯಾ.ಅಜಿತ್ ನೇತೃತ್ವದಲ್ಲಿ ದಾಳಿ ನಡೆಸಿ ಲಕ್ಷಾಂತರ ರೂ. ಮೌಲ್ಯದ ಮದ್ಯ, ಆಲ್ಟೋ ಕಾರು ಸೇರಿದಂತೆ ಸುಮಾರು 2 ಲಕ್ಷದ 25 ಸಾವಿರ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

  • ತಪ್ಪು ತಿಳ್ಕೋಬೇಡಿ, ಮದ್ಯದಂಗಡಿ ತೆಗೆಯಿರಿ: ರಿಷಿ ಕಪೂರ್

    ತಪ್ಪು ತಿಳ್ಕೋಬೇಡಿ, ಮದ್ಯದಂಗಡಿ ತೆಗೆಯಿರಿ: ರಿಷಿ ಕಪೂರ್

    ಮುಂಬೈ: ಬಾಲಿವುಡ್ ಹಿರಿಯ ನಟ ರಿಷಿ ಕಪೂರ್, ಲೈಸನ್ಸ್ ಹೊಂದಿರುವ ಮದ್ಯದಂಗಡಿಗಳನ್ನು ತೆಗೆಯಬೇಕೆಂದು ಆಗ್ರಹಿಸಿ ಟ್ವೀಟ್ ಮಾಡಿದ್ದಾರೆ.

    ಕೊರೊನಾ ತಡೆಗೆ ಪ್ರಧಾನಿಗಳು ದೇಶವನ್ನು ಲಾಕ್‍ಡೌನ್ ಮಾಡಿದಾಗಿನಿಂದಲೂ ರಿಷಿ ಕಪೂರ್ ಈ ವಿಷಯವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇಂದು ಟ್ವೀಟ್ ಮಾಡಿರುವ ರಿಷಿ ಕಪೂರ್, ಒಂದು ಕಾರಣಕ್ಕಾಗಿ ಪರವಾನಿಗೆ ಪಡೆದ ಮದ್ಯದಂಗಡಿಗಳನ್ನು ತೆರೆದರೆ ಸೂಕ್ತ ಎಂದಿದ್ದಾರೆ.

    ರಿಷಿ ಕಪೂರ್ ಟ್ವೀಟ್: ಸರ್ಕಾರ ಪ್ರತಿಸಂಜೆ ಲೈಸನ್ಸ್ ಹೊಂದಿರುವ ಮದ್ಯದ ಮಳಿಗೆಗಳನ್ನು ತೆರೆಯಲು ಅನುಮತಿ ನೀಡಬೇಕು. ನೀವು ನನ್ನನ್ನು ತಪ್ಪು ತಿಳಿದುಕೊಳ್ಳಬೇಡಿ. ಜನರು ಮನೆಯಲ್ಲಿ ಡಿಪ್ರೆಶನ್ ಮತ್ತು ಗೊಂದಲಗಳ ನಡುವೆ ಬಂಧಿಯಾಗಿದ್ದಾರೆ. ಪೊಲೀಸ್, ವೈದ್ಯರು ಮತ್ತು ಜನರನ್ನು ಡಿಪ್ರೆಶನ್ ನಿಂದ ಮುಕ್ತಿಗೊಳಿಸಲು ಮದ್ಯದ ಅವಶ್ಯಕತೆ ಇದೆ. ನೀವು ಎಷ್ಟೇ ಬಂದ್ ಮಾಡಿದ್ರೂ ಬ್ಲಾಕ್ ನಲ್ಲಿ ಮದ್ಯ ಮಾರಾಟವಾಗುತ್ತಿದೆ. ಹಾಗಾಗಿ ಸರ್ಕಾರವೇ ಪ್ರತಿದಿನ ಸಂಜೆ ಮದ್ಯದಂಗಗಡಿಗಳಿಗೆ ವ್ಯಾಪಾರ ನಡೆಸಲು ಅನುಮತಿ ನೀಡಬೇಕು.

    ಮದ್ಯದಂಗಡಿಗಳ ತೆರೆಯುವದಿಂದ ರಾಜ್ಯ ಸರ್ಕಾರದ ಬೊಕ್ಕಸದಲ್ಲಿ ಚೇತರಿಕೆ ಕಾಣುವ ಸಾಧ್ಯತೆಗಳು ಹೆಚ್ಚಿವೆ. ಜನರು ಫ್ರೆಸ್ಟ್ರೆಶನ್ ನಿಂದ ಡಿಪ್ರೆಶನ್ ಗೆ ಒಳಗಾಗುವುದನ್ನು ತಡೆಯಬೇಕಿದೆ. ಬಂದ್ ನಡುವೆ ಜನ ಕಷ್ಟಪಟ್ಟು ಮದ್ಯ ಖರೀದಿಸುತ್ತಿದ್ದಾರೆ. ಹಾಗಾಗಿ ಸರ್ಕಾರ ತನ್ನ ಮಳಿಗೆಗಳಲ್ಲಿ ಮದ್ಯದ ಮಾರಾಟಕ್ಕೆ ಅವಕಾಶ ಕಲ್ಪಿಸಬೇಕೆಂದು ಹೇಳಿದ್ದಾರೆ.

  • ರೀಓಪನ್ ಆದಾಗ ಸ್ಟಾಕ್ ಹೋಲಿಕೆ ಆಗದಿದ್ರೆ ಮದ್ಯದಂಗಡಿ ಲೈಸೆನ್ಸ್ ರದ್ದು: ಮಾಧುಸ್ವಾಮಿ

    ರೀಓಪನ್ ಆದಾಗ ಸ್ಟಾಕ್ ಹೋಲಿಕೆ ಆಗದಿದ್ರೆ ಮದ್ಯದಂಗಡಿ ಲೈಸೆನ್ಸ್ ರದ್ದು: ಮಾಧುಸ್ವಾಮಿ

    ಹಾಸನ: ಹಾಸನ ಸುತ್ತಲಿನ ಜಿಲ್ಲೆಯಲ್ಲಿ ಪಾಸಿಟಿವ್ ಕೇಸ್ ಇರುವುದರಿಂದ, ಹಾಸನದ ಸುತ್ತ ಎಲ್ಲ ಕಡೆ ಸಂಪರ್ಕ ಕಡಿತ ಮಾಡಲು ಕಟ್ಟುನಿಟ್ಟಾಗಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹಾಸನದಲ್ಲಿ ಸಚಿವ ಮಾಧುಸ್ವಾಮಿ ಹೇಳಿದ್ದಾರೆ.

    ಇಂದು ನಗರದಲ್ಲಿ ಮಾತನಾಡಿದ ಅವರು, ಜನ ಎಷ್ಟು ಹೇಳಿದರೂ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಹೀಗಾಗಿ ಮಧ್ಯಾಹ್ನ ಎರಡು ಗಂಟೆಯವರೆಗೆ ಮಾತ್ರ ಶಾಪ್‍ಗಳನ್ನು ಓಪನ್ ನಂತರ ಕ್ಲೋಸ್ ಮಾಡಿಸಲಾಗುವುದು. ಮೆಡಿಕಲ್ ಸ್ಟೋರ್ ಮತ್ತು ಅಗತ್ಯ ವಸ್ತು ಬಿಟ್ಟು ಎಲ್ಲವನ್ನೂ ಕಡ್ಡಾಯವಾಗಿ ಕ್ಲೋಸ್ ಮಾಡಬೇಕು ಎಂದು ನಿರ್ಧಾರ ತೆಗೆದುಕೊಳ್ಳಲಾಗಿದೆ. ಹಾಸನ ಮಾರುಕಟ್ಟೆಯನ್ನು ಮೈದಾನಗಳಿಗೆ ಶಿಫ್ಟ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.

    ಜೊತೆಗೆ ಯಾವುದೇ ವೈದ್ಯರು ರಜೆ ತೆಗೆದುಕೊಳ್ಳಬಾರದು. ಯಾವ ವೈದ್ಯರೂ ರೋಗಿಗಳನ್ನು ರಿಜೆಕ್ಟ್ ಮಾಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಮದ್ಯದಂಗಡಿಗಳ ಸ್ಟಾಕ್ ಮೇಲೆ ನಿಗಾ ಇಡಲಾಗಿದ್ದು, ರೀ ಓಪನ್ ಆದಾಗ ಸ್ಟಾಕ್ ಪ್ರಮಾಣ ಈಗ ಇರುವ ಸ್ಟಾಕ್‍ಗೆ ಹೋಲಿಕೆ ಆಗಬೇಕು. ಇಲ್ಲದಿದ್ದರೆ ಮದ್ಯದಂಗಡಿಗಳ ಲೈಸೆನ್ಸ್ ರದ್ದುಪಡಿಸುವುದಾಗಿ ಸಚಿವರು ಎಚ್ಚರಿಕೆ ನೀಡಿದರು.

    ರಸ್ತೆ ಮೇಲೆ ಬರೀ ಟೂ ವ್ಹೀಲರ್ ಕಾಣುತ್ತಿವೆ. ಹೀಗಾಗಿ ಪೆಟ್ರೋಲ್ ಬಂಕ್ ಕಾರ್ಯನಿರ್ವಹಣೆಯಲ್ಲಿ ಬದಲಾವಣೆ ಮಾಡಲಾಗುವುದು ಎಂದು ಮಾಧುಸ್ವಾಮಿ ತಿಳಿಸಿದರು.

  • ಅಬಕಾರಿ ಆದಾಯದಲ್ಲಿ ಬೆಂಗ್ಳೂರು ಫಸ್ಟ್- ಪ್ರತಿ ವರ್ಷ 10 ಸಾವಿರ ಕೋಟಿ ಹೆಚ್ಚಳ

    ಅಬಕಾರಿ ಆದಾಯದಲ್ಲಿ ಬೆಂಗ್ಳೂರು ಫಸ್ಟ್- ಪ್ರತಿ ವರ್ಷ 10 ಸಾವಿರ ಕೋಟಿ ಹೆಚ್ಚಳ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಕೇವಲ ರಾಜ್ಯ ರಾಜಧಾನಿಯಲ್ಲ, ಮದ್ಯಪ್ರಿಯರ ರಾಜಧಾನಿಯೂ ಆಗಿದೆ. ಇಡೀ ರಾಜ್ಯದಲ್ಲಿ ಪ್ರತಿ ವರ್ಷ 17 ಸಾವಿರ ಕೋಟಿ ಅಬಕಾರಿ ಇಲಾಖೆಗೆ ಆದಾಯ ಬರುತ್ತೆ. ಇದರಲ್ಲಿ ಶೇ. 60ರಷ್ಟು ಅಂದ್ರೆ ಸುಮಾರು 10 ಕೋಟಿಗೂ ಜಾಸ್ತಿ ಹಣವನ್ನು ಬೆಂಗಳೂರು ನಗರ ಮತ್ತು ಗ್ರಾಮಾಂತರ, ಸರ್ಕಾರಕ್ಕೆ ತೆರಿಗೆ ಕಟ್ಟುತ್ತಿದೆ.

    ಬೆಂಗಳೂರಿನಲ್ಲಿ ಹೊಸ ವರ್ಷ ಎಂಟ್ರಿಯಾದರೆ ಸಾಕು, ಹೊಸದೊಂದು ಮಾಯಾ ಲೋಕವೇ ಸೃಷ್ಟಿಯಾಗುತ್ತೆ. ಮದ್ಯಪ್ರಿಯರಂತು ನ್ಯೂ ಇಯರ್ ಅನ್ನು ಗ್ರ್ಯಾಂಡ್ ಆಗಿ ಬರಮಾಡಿಕೊಳ್ಳುತ್ತಾರೆ. ಇಲ್ಲಿ ಮತ್ತೊಂದು ಶಾಕಿಂಗ್ ವಿಚಾರ ಏನೆಂದರೆ ಹೊಸ ಹೊರ್ಷದ ಮೊದಲ ಒಂದು ವಾರದಲ್ಲೇ ಸರಿಸುಮಾರು ಎರಡರಿಂದ ಮೂರು ಸಾವಿರ ಕೋಟಿ ರೂ. ಆದಾಯ ಹರಿದು ಬರುತ್ತೆ.

    ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳ ನಂತರ ಸ್ಥಾನ ಮೈಸೂರು, ಬೆಳಗಾವಿ. ಧಾರವಾಡ ಜಿಲ್ಲೆಗಳಿವೆ. ಬೆಂಗಳೂರಲ್ಲಿ 3,346 ಮದ್ಯದ ಅಂಗಡಿಗಳಿದ್ದರೆ, ಗ್ರಾಮಾಂತರದಲ್ಲಿ ಕೇವಲ 199 ಮದ್ಯದ ಅಂಗಡಿಗಳಿವೆ. ಹೀಗಿದ್ದರು ಕೂಡ ಆದಾಯ ಮತ್ತು ಮದ್ಯ ಪ್ರಿಯರ ಸಂಖ್ಯೆಯಲ್ಲಿ ನಗರಕ್ಕೆ ಗ್ರಾಮಾಂತರ ಪೈಪೋಟಿ ಕೊಡುತ್ತಿದೆ. ಬೆಳಗಾವಿ, ದಕ್ಷಿಣ ಕನ್ನಡ, ಮೈಸೂರಿನಲ್ಲಿ ತಲಾ 500ಕ್ಕೂ ಹೆಚ್ಚು ಮದ್ಯದಂಗಡಿಗಳಿದ್ದರೂ ಆದಾಯ ಇಲಾಖೆಗೆ ಆದಾಯ ತರುವಲ್ಲಿ ಹಿಂದುಳಿದಿವೆ ಎಂಬುದಾಗಿ ತಿಳಿದುಬಂದಿದೆ.