Tag: ಮದ್ಯದಂಗಡಿ

  • ಮದ್ಯದಂಗಡಿ ಮುಂದೆ ಪುರುಷರು, ರೇಷನ್ ಅಂಗಡಿ ಎದುರು ಮಹಿಳೆಯರು ಫುಲ್ ಕ್ಯೂ

    ಮದ್ಯದಂಗಡಿ ಮುಂದೆ ಪುರುಷರು, ರೇಷನ್ ಅಂಗಡಿ ಎದುರು ಮಹಿಳೆಯರು ಫುಲ್ ಕ್ಯೂ

    – ಮದ್ಯದಂಗಡಿ ಪಕ್ಕದಲ್ಲೇ ರೇಷನ್ ಅಂಗಡಿ
    – ರಾಯಚೂರಲ್ಲಿ ಸಿಕ್ಕಸಿಕ್ಕಲ್ಲೇ ಮದ್ಯಪಾನ

    ಧಾರವಾಡ/ರಾಯಚೂರು: ಇಂದು ಎಣ್ಣೆ ಅಂಗಡಿ ಮುಂದೆ ಎಲ್ಲಿ ನೋಡಿದರೂ ಉದ್ದದ್ದೂ ಕ್ಯೂ ಕಂಡುಬರುತ್ತಿದೆ. ಆದ್ರೆ ಧಾರವಾಡದಲ್ಲಿ ಒಂದೆಡೆ ಮದ್ಯದಂಗಡಿ ಇನ್ನೊಂದೆಡೆ ರೇಷನ್ ಅಂಗಡಿಗೆ ಕ್ಯೂ ಹಚ್ಚಿದ ಅಪರೂಪದ ದೃಶ್ಯಗಳು ಕಂಡುಬಂದಿವೆ.

    ಧಾರವಾಡದ ತೇಜಸ್ವಿ ನಗರದಲ್ಲಿರುವ ಖಾಸಗಿ ವೈನ್ ಶಾಪ್ ಪಕ್ಕವೇ ರೇಷನ್ ಅಂಗಡಿ ಸಹ ಇರುವುದರಿಂದ ಎಣ್ಣೆ ಅಂಗಡಿ ಮುಂದೆ ಪುರುಷರು ಕ್ಯೂ ನಿಂತಿದ್ದರೆ, ರೇಷನ್ ಅಂಗಡಿ ಮುಂದೆ ಮಹಿಳೆಯರು ಕ್ಯೂ ಹಚ್ಚಿದ್ದಾರೆ. ಎರಡು ಅಂಗಡಿಗಳು ಅಕ್ಕಪಕ್ಕದಲ್ಲಿರುವುದರಿಂದ ಈ ಅಪರೂಪ ದೃಶ್ಯ ಕಂಡು ಬಂದಿದೆ. ಒಂದು ಕಡೆ ಮಹಿಳೆಯರು ರೇಷನ್‍ಗೆ ಕ್ಯೂ ನಿಂತರೆ, ಮತ್ತೊಂದು ಕಡೆ ಮದ್ಯ ಖರೀದಿಗೆ ಪುರುಷರು ಕ್ಯೂ ನಿಂತಿದ್ದಾರೆ.

    ಇತ್ತ ರಾಯಚೂರಿನಲ್ಲಿ ಲಾಕ್‍ಡೌನ್ ಹಿನ್ನೆಲೆ ಕಂಗೆಟ್ಟಿದ್ದ ಮದ್ಯ ವ್ಯಸನಿಗಳು ಮದ್ಯದಂಗಡಿಗಳು ಆರಂಭಿಸುತ್ತಿದ್ದಂತೆ ಸಿಕ್ಕ ಸಿಕ್ಕಲ್ಲೇ ಮದ್ಯಪಾನ ಮಾಡುತ್ತಿದ್ದಾರೆ. ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಮದ್ಯವ್ಯಸನಿಗಳು ಎಣ್ಣೆ ಪಾರ್ಟಿ ನಡೆಸಿದ್ದಾರೆ. ಕಟ್ಟಡದ ಹಿಂಭಾಗ, ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿ ಕೆಳಗೆ ಮದ್ಯ ಸೇವನೆ ಮಾಡುತ್ತಿದ್ದಾರೆ.

    ಕ್ರೀಡಾಂಗಣದಲ್ಲಿ ನೆರಳಿರುವ ಜಾಗದಲ್ಲಿ ಅಲ್ಲಲ್ಲೇ ಕುಳಿತು ಮದ್ಯ ಸೇವನೆ ಮಾಡುತ್ತಿದ್ದಾರೆ. ಮದ್ಯ ಕೇವಲ ಪಾರ್ಸಲ್ ಸಿಗುತ್ತಿರುವ ಹಿನ್ನೆಲೆಯಲ್ಲಿ ಕುಡಿಯಲು ಸ್ಥಳವಿಲ್ಲದೆ ಸಿಕ್ಕಸಿಕ್ಕಲ್ಲೇ ಸೇವನೆ ಮಾಡಲು ಮುಂದಾಗಿದ್ದಾರೆ. ಸಿಎಲ್ 2 ಹಾಗೂ ಎಂಎಸ್‍ಐಎಲ್ ಮದ್ಯದಂಗಡಿಗಳಿಗೆ ಮಾತ್ರ ಅನುಮತಿಯನ್ನು ನೀಡಿರುವುದಿರಿಂದ ಮದ್ಯಸೇವನೆಗೆ ಸ್ಥಳದ ತೊಂದರೆಯಾಗಿದೆ. ಹೀಗಾಗಿ ನಿರ್ಜನ ಪ್ರದೇಶಗಳಲ್ಲಿ ಮದ್ಯಪಾನ ಜೋರಾಗಿ ನಡೆದಿದೆ.

    ಗ್ರೀನ್ ಝೋನಿನಲ್ಲಿ ಲಾಕ್‍ಡೌನ್ ಸಡಿಲಿಕೆ ಹಿನ್ನೆಲೆ ರಾಯಚೂರು ನಗರದಲ್ಲಿ ಎಲ್ಲಿ ನೋಡಿದರೂ ಜನರ ಓಡಾಟ ಜೋರಾಗಿದೆ. ಸಂಪೂರ್ಣ ಲಾಕ್‍ಡೌನ್ ತೆಗೆದಿರುವಂತೆ ವರ್ತಿಸುತ್ತಿರುವ ಜನ ಗುಂಪುಗುಂಪಾಗಿ ಓಡಾಡುತ್ತಿದ್ದಾರೆ. ಬೇರೆ ಬೇರೆ ಊರುಗಳಿಗೆ ತೆರಳಲು ಜನ ಪಾಸ್‍ಗಾಗಿ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಮುಗಿಬಿದ್ದಿದ್ದು, ಜನರನ್ನು ಚದುರಿಸಲು ಪೊಲೀಸರು ಹರಸಾಹಸ ಮಾಡಬೇಕಾಯಿತು.

  • ಸರತಿ ಸಾಲಿನಲ್ಲಿ ನಿಂತ ಮದ್ಯ ಪ್ರಿಯರಿಗೆ ಶಾಕ್ – ಪೊಲೀಸರಿಂದ ಮದ್ಯದಂಗಡಿ ಕ್ಲೋಸ್

    ಸರತಿ ಸಾಲಿನಲ್ಲಿ ನಿಂತ ಮದ್ಯ ಪ್ರಿಯರಿಗೆ ಶಾಕ್ – ಪೊಲೀಸರಿಂದ ಮದ್ಯದಂಗಡಿ ಕ್ಲೋಸ್

    ಮೈಸೂರು: ಜಿಲ್ಲೆಯಲ್ಲಿ ಸರತಿ ಸಾಲಿನಲ್ಲಿ ನಿಂತ ಮದ್ಯ ಪ್ರಿಯರಿಗೆ ಶಾಕ್ ಆಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳದ ಹಿನ್ನೆಲೆಯಲ್ಲಿ ಮದ್ಯದಂಗಡಿಯನ್ನು ಪೊಲೀಸರು ಕ್ಲೋಸ್ ಮಾಡಿಸಿದ್ದಾರೆ.

    ಮೈಸೂರಿನ ದೇವರಾಜ ಠಾಣಾ ವ್ಯಾಪ್ತಿಯಲ್ಲಿರುವ ಟ್ರೂ ಸ್ಪಿರೀಟ್ಸ್ ಮದ್ಯದಂಗಡಿಯನ್ನು ಪೊಲೀಸರು ಕ್ಲೋಸ್ ಮಾಡಿಸಿದ್ದಾರೆ. ಪೊಲೀಸ್ ಇನ್ಸ್‌ಪೆಕ್ಟರ್ ಪ್ರಸನ್ನ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನಾಲ್ಕೈದು ಬಾರಿ ಮಾಲೀಕನಿಗೆ ವಾರ್ನ್ ಮಾಡಿದ್ದರು. ಇನ್ಸ್‌ಪೆಕ್ಟರ್ ಮಾತಿಗೂ ಲೆಕ್ಕಿಸದೆ ಮಾಲೀಕ ಮದ್ಯ ಮಾರಾಟ ಮಾಡುತ್ತಿದ್ದನು. ಹೀಗಾಗಿ ಪೊಲೀಸರು ಮದ್ಯದಂಗಡಿಯನ್ನು ಮುಚ್ಚಿಸಿದ್ದಾರೆ.

    ಮದ್ಯದಂಗಡಿಯಲ್ಲಿ ಸಿಬ್ಬಂದಿಯಿಲ್ಲದೆ ಕೇವಲ ಇಬ್ಬರಿಂದ ಮಾತ್ರ ಮದ್ಯ ಮಾರಾಟ ಮಾಡಲಾಗುತ್ತಿತ್ತು. ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜನರು ಮುಗಿಬಿದ್ದಿದ್ದರು. ಆಗ ಪೊಲೀಸರು ಸಿಬ್ಬಂದಿಯನ್ನ ಕರೆಸಿಕೊಳ್ಳುವಂತೆ ಮಾಲೀಕನಿಗೆ ಹೇಳಿದ್ದರು. ಮಾಲೀಕ ಟೀಗೆ ಹೋಗಿದ್ದಾರೆ ಬರುತ್ತಾರೆ ಎಂದು ಸುಳ್ಳು ನೆಪ ಹೇಳಿದ್ದನು. ಈ ವೇಳೆ ಪೊಲೀಸರು ಖಡಕ್ ವಾರ್ನ್ ಮಾಡಿ ಮದ್ಯದಂಗಡಿಯನ್ನು ಮುಚ್ಚಿಸಿದ್ದಾರೆ.

    ಇವತ್ತಿಗೆ ವ್ಯಾಪಾರ ಸಾಕು, ಲೆಕ್ಕ ಹಾಕಿಕೊಂಡು ಮನೆಗೆ ಹೋಗಿ ಎಂದು ವಾರ್ನ್ ಮಾಡಿ ಕಳುಹಿಸಿದ್ದಾರೆ. ಅಲ್ಲದೇ ಮಳಿಗೆ ಮಾಲೀಕನಿಗೆ ಠಾಣೆಗೆ ಬಂದು ಅನುಮತಿ ಪಡೆಯುವಂತೆ ಎಚ್ಚರಿಸಿ ಹೋಗಿದ್ದಾರೆ. ಪದೇ ಪದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಪೊಲೀಸರು ಈ ಕ್ರಮಕೈಗೊಂಡಿದ್ದಾರೆ.

  • ಬೊಕ್ಕಸ ತುಂಬಿಸಿಕೊಳ್ಳಲು ಸರ್ಕಾರ ಮದ್ಯದಂಗಡಿ ತೆರೆದದ್ದು ತಪ್ಪು: ಚೌಕಿಮಠ ಸ್ವಾಮೀಜಿ ಕಿಡಿ

    ಬೊಕ್ಕಸ ತುಂಬಿಸಿಕೊಳ್ಳಲು ಸರ್ಕಾರ ಮದ್ಯದಂಗಡಿ ತೆರೆದದ್ದು ತಪ್ಪು: ಚೌಕಿಮಠ ಸ್ವಾಮೀಜಿ ಕಿಡಿ

    ರಾಯಚೂರು: ತನ್ನ ಬೊಕ್ಕಸ ತುಂಬಿಸಿಕೊಳ್ಳುವ ದೃಷ್ಟಿಯಿಂದ ಸರ್ಕಾರ ಮದ್ಯದಂಗಡಿ ತೆರೆದಿರುವುದು ಸರಿಯಲ್ಲ ಎಂದು ರಾಯಚೂರಿನ ಚಿಕ್ಕಸೂಗುರಿನ ಚೌಕಿಮಠದ ಸಿದ್ದಲಿಂಗ ಮಹಾಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಸ್ವಾಮೀಜಿ, ಮದ್ಯಪಾನ ನಿಷೇಧಕ್ಕೆ ಕೆಲ ಸಂಘ ಸಂಸ್ಥೆಗಳು ನಿರಂತರ ಹೋರಾಟ ನಡೆಸಿದ್ದರೂ ಸಾಧ್ಯವಾಗದ್ದನ್ನ ಕೊರೊನಾ ವೈರಸ್ ಮಾಡಿತ್ತು. ಲಾಕ್‍ಡೌನ್ ವೇಳೆ ಶೇ. 90ರಷ್ಟು ಜನ ಸಂಪೂರ್ಣವಾಗಿ ಮದ್ಯಪಾನ ತ್ಯಜಿಸಿದ್ದರು. ಇನ್ನಷ್ಟು ದಿನ ಮುಂದುವರೆದಿದ್ದರೆ ಉಳಿದ ಜನರು ಮದ್ಯಪಾನ ಬಿಡುತ್ತಿದ್ದರು. ಆದ್ರೆ ಸರ್ಕಾರ ತನ್ನ ಬೊಕ್ಕಸ ತುಂಬಿಸಿಕೊಳ್ಳುವ ಆಸೆಗೆ ಮದ್ಯದಂಗಡಿಗಳನ್ನ ತೆರೆದಿದೆ ಎಂದು ಕಿಡಿಕಾರಿದರು.

    ಕೂಲಿಕಾರರನ್ನ ಅವರ ಊರುಗಳಿಗೆ ಕರೆದುಕೊಂಡು ಬರಲಾಗುತ್ತಿದೆ. ಆದರೆ ಯಾರೂ ನಿಯಮಗಳನ್ನ ಪಾಲಿಸುತ್ತಿಲ್ಲ. ಸ್ವತಃ ಮಂತ್ರಿಗಳೇ ಕ್ವಾರಂಟೈನ್‍ಗೆ ಹೋಗುತ್ತಿರುವಾಗ ಸರ್ಕಾರ ಉತ್ತಮ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದರು.

    ಮಠ ಹಾಗೂ ಮಠಾಧೀಶರನ್ನ ಸರ್ಕಾರ ನಿರ್ಲಕ್ಷಿಸದೇ ನಮ್ಮ ಸಲಹೆಗಳನ್ನ ಪರಿಗಣಿಸಬೇಕು. ಉತ್ತರ ಕರ್ನಾಟಕದ ಮಠಗಳ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕು. ಶ್ರೀಮಂತ ಮಠಗಳಿಗೆ ಸರ್ಕಾರಗಳು 10 ಕೋಟಿ, 20 ಕೋಟಿ ರೂ. ಅನುದಾನ ನೀಡಿದೆ. ಅಂತೆಯೆ ನಮ್ಮ ಮಠಗಳಿಗೂ ಅನುದಾನ ನೀಡಬೇಕು ಎಂದು ಸ್ವಾಮಿಜಿ ಮನವಿ ಮಾಡಿದರು.

  • ಚಿಕ್ಕಬಳ್ಳಾಪುರ, ಗೌರಿಬಿದನೂರುನಲ್ಲಿ ಸದ್ಯಕ್ಕಿಲ್ಲ ಎಣ್ಣೆ ಭಾಗ್ಯ – ಮದ್ಯಪ್ರಿಯರಿಗೆ ನಿರಾಸೆ

    ಚಿಕ್ಕಬಳ್ಳಾಪುರ, ಗೌರಿಬಿದನೂರುನಲ್ಲಿ ಸದ್ಯಕ್ಕಿಲ್ಲ ಎಣ್ಣೆ ಭಾಗ್ಯ – ಮದ್ಯಪ್ರಿಯರಿಗೆ ನಿರಾಸೆ

    ಚಿಕ್ಕಬಳ್ಳಾಪುರ: ಇಂದು ಬೆಳಗ್ಗೆ 9 ಗಂಟೆಗೆ ಮದ್ಯದಂಗಡಿ ಬಾಗಿಲು ತೆರೆಯುತ್ತೆ ಅಂತ ಕಾಯುತ್ತಿದ್ದ ಚಿಕ್ಕಬಳ್ಳಾಪುರ ಹಾಗೂ ಗೌರಿಬಿದನೂರು ನಗರದ ಮದ್ಯಪಾನ ಪ್ರಿಯರಿಗೆ ನಿರಾಸೆಯಾಗಿದೆ.

    ಚಿಕ್ಕಬಳ್ಳಾಪುರ ನಗರದ 10 ಹಾಗೂ ಗೌರಿಬಿದನೂರು ನಗರದ 6 ಮದ್ಯದಂಗಡಿಗಳನ್ನ ಸದ್ಯಕ್ಕೆ ತೆರೆಯದಂತೆ ಅಬಕಾರಿ ಇಲಾಖೆ ಮೌಖಿಕ ಆದೇಶ ನೀಡಿದೆ. ಅಂದಹಾಗೆ ಚಿಕ್ಕಬಳ್ಳಾಪುರ ಹಾಗೂ ಗೌರಿಬಿದನೂರು ನಗರದಲ್ಲಿ ಕೊರೊನಾ ವೈರಸ್ ಕಂಟೈನ್‍ಮೆಂಟ್ ಝೋನ್‍ಗಳಿದ್ದು, ಈ ಎರಡು ನಗರಗಳು ಸಹ ಬಫರ್ ಝೋನ್ ವ್ಯಾಪ್ತಿಯಲ್ಲಿವೆ. ಹೀಗಾಗಿ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿ ಚಿಕ್ಕಬಳ್ಳಾಪುರ ಹಾಗೂ ಗೌರಿಬಿದನೂರು ನಗರದಲ್ಲಿ ಮದ್ಯದಂಗಡಿಗಳನ್ನ ತೆರೆಯುವುದಾ ಅಥವಾ ಬೇಡವಾ ಎಂಬುದನ್ನ ನಿರ್ಧರಿಸುವುದಾಗಿ ಅಬಕಾರಿ ಡಿ ಸಿ ನರೇಂದ್ರ ಅವರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಇತ್ತ ಇಂದಿನಿಂದ ಮದ್ಯದಂಗಡಿ ಆರಂಭ ಮಾಡಬಹುದು ಅಂತ ತಡೆಗೋಡೆಗಳನ್ನ ಕಟ್ಟಿ, ಬಾಕ್ಸ್ ಹಾಕಿ ಸಕಲ ಸಿದ್ಧತೆಗಳನ್ನ ಮದ್ಯದಂಗಡಿ ಮಾಲೀಕರು ಮಾಡಿಕೊಂಡಿದ್ದರು. ಆದ್ರೆ ಸದ್ಯ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಿದ ಹಿನ್ನೆಲೆ ಮದ್ಯ ಸಿಗುತ್ತೆ ಅಂತ ಬಂದಿದ್ದ ಮದ್ಯಪ್ರಿಯರು ಗ್ರಾಮೀಣ ಭಾಗಗಳ ಮದ್ಯದಂಗಡಿಗಳತ್ತ ಮುಖ ಮಾಡಿದ್ದಾರೆ.

  • ಬೆಳ್ಳಂಬೆಳಗ್ಗೆ ಎಣ್ಣೆಗಾಗಿ ಕ್ಯೂ – ಬಾಕ್ಸ್‌ನಲ್ಲಿ ಚಪ್ಪಲಿ ಇಟ್ಟು ರಿಸರ್ವ್

    ಬೆಳ್ಳಂಬೆಳಗ್ಗೆ ಎಣ್ಣೆಗಾಗಿ ಕ್ಯೂ – ಬಾಕ್ಸ್‌ನಲ್ಲಿ ಚಪ್ಪಲಿ ಇಟ್ಟು ರಿಸರ್ವ್

    – ಮಂಡ್ಯದಲ್ಲಿ ಪಟಾಕಿ ಹೊಡೆದು ಸಂಭ್ರಮಾಚರಣೆ

    ಬೆಂಗಳೂರು/ಮಂಡ್ಯ: ಇಂದಿನಿಂದ ಮದ್ಯ ಮಾರಾಟಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡಿರುವ ಹಿನ್ನೆಲೆ ಬಾಗಿಲು ತೆರೆಯುವ ಮುನ್ನವೇ ಮದ್ಯದಂಗಡಿ ಮುಂದೆ ಮದ್ಯಪ್ರಿಯರು ಕಾದು ಕುಳಿತಿದ್ದಾರೆ. ಅಲ್ಲದೆ ಹಲವೆಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹಾಕಿದ್ದ ಬಾಕ್ಸ್‌ಗಳಲ್ಲಿ ಚಪ್ಪಲಿ ಇಟ್ಟು ಜಾಗವನ್ನು ರಿಸರ್ವ್ ಮಾಡಿದ್ದಾರೆ.

    ಬೆಂಗಳೂರು ಹೊರವಲಯ ಬಾಗಲಗುಂಟೆಯ ಎಂಆರ್‌ಪಿ ಶಾಪ್ ಮುಂದೆ ಮದ್ಯಪ್ರಿಯರು ಬೆಳ್ಳಂಬೆಳಗ್ಗೆ ಕ್ಯೂ ನಿಂತಿದ್ದಾರೆ. ಮಧ್ಯದಂಗಡಿ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹಾಕಿದ್ದ ಬಾಕ್ಸ್‌ಗಳಲ್ಲಿ ಚಪ್ಪಲಿ, ಬ್ಯಾಗ್, ಇಟ್ಟಿಗೆ, ಮುಂತಾದ ವಸ್ತುವಿಟ್ಟು ಮದ್ಯಪ್ರಿಯರು ಕ್ಯೂ ನಿಲ್ಲುವ ಸ್ಥಳವನ್ನು ಅಡ್ವಾನ್ಸ್ ಬುಕ್ಕಿಂಗ್ ಮಾಡಿದ್ದಾರೆ.

    ಇತ್ತ ಮಂಡ್ಯ ನಗರದ ಮಾರ್ತಾಂಡ ವೈನ್ಸ್ ಅಂಗಡಿ ಮುಂದೆ ಬೆಳ್ಳಂಬೆಳಗ್ಗೆ ಮದ್ಯ ವ್ಯಸನಿಗಳು ಕ್ಯೂನಲ್ಲಿ ನಿಂತಿದ್ದಾರೆ. ಕಳೆದ ಒಂದೂವರೆ ತಿಂಗಳಿಂದ ಮದ್ಯ ಸಿಗದೇ ಹತಾಶರಾಗಿದ್ದ ಎಣ್ಣೆಪ್ರಿಯರ ಮೊಗದಲ್ಲಿ ಇಂದು ನಗು ಮೂಡಿದೆ. ಮದ್ಯ ಖರೀದಿಗೆ ಜನರು ಎಷ್ಟು ಹಾತೊರೆಯುತ್ತಿದ್ದಾರೆ ಎಂದರೆ ಅಂಗಡಿ ತೆರೆಯುವ ಮುನ್ನವೇ ಅಲ್ಲಿ ಸಾಮಾಜಿಕ ಅಂತರಕ್ಕಾಗಿ ಹಾಕಲಾಗಿರೋ ಬಾಕ್ಸ್‌ನಲ್ಲಿ ಚಪ್ಪಲಿ ಬಿಟ್ಟು ಕುಡುಕರು ಠಿಕಾಣಿ ಹೂಡಿದ್ದಾರೆ. ಅಲ್ಲದೆ ಎಣ್ಣೆ ಸಿಗುತ್ತಿರುವ ಖುಷಿಗೆ ಮದ್ಯದಂಗಡಿ ಮುಂದೆ ಪಟಾಕಿ ಹೊಡೆದು ಸಂಭ್ರಮಾಚರಣೆ ಮಾಡಿದ್ದಾರೆ.

    ಹುಬ್ಬಳ್ಳಿಯಲ್ಲಿ ಕೂಡ ಮದ್ಯ ಖರೀದಿ ಮಾಡಲು ಕುಡುಕರು ಶಿಸ್ತಾಗಿ ಕ್ಯೂನಲ್ಲಿ ನಿಂತಿದ್ದಾರೆ. ಹೊಸ ಬಸ್ ನಿಲ್ದಾಣ ಬಳಿ ಇರುವ ದಾರುವಾಲಾ ಮದ್ಯದಂಗಡಿ ಮುಂದೆ ಎಣ್ಣೆ ಖರೀದಿ ಮಾಡಲು ಸಾಮಾಜಿಕ ಅಂತರ ಕಾಯ್ದುಕೊಂಡು ಶಿಸ್ತಿನಿಂದ ಮದ್ಯಪ್ರಿಯರು ಸರತಿ ಸಾಲಲ್ಲಿ ನಿಂತು ಕಾತುರದಿಂದ ಕಾಯುತ್ತಿದ್ದಾರೆ.

    ಚಿಕ್ಕಬಳ್ಳಾಪುರದಲ್ಲಂತೂ ಮದ್ಯಪ್ರಿಯನೋರ್ವ ಎಣ್ಣೆ ಸಿಗುತ್ತಿರುವ ಖುಷಿಗೆ ಮದ್ಯದಂಗಡಿಗೆ ನಮಸ್ಕಾರ ಮಾಡಿ ಖುಷಿಪಟ್ಟಿದ್ದಾನೆ. ನಗರದ ಎಂಎಸ್‍ಐಎಲ್ ಮದ್ಯದಂಗಡಿ ಬಾಗಿಲು ತೆರೆಯುವ ಮುನ್ನವೇ ಮದ್ಯ ಖರೀದಿಗೆ ಜನರು ಬಂದು ನಿಂತಿದ್ದಾರೆ.

  • ಮತ್ತೆ ಯಾವತ್ತೂ ಮುಚ್ಚದಂತೆ ಮದ್ಯಪ್ರಿಯರಿಂದ ಎಣ್ಣೆ ಅಂಗಡಿಗೆ ಪೂಜೆ

    ಮತ್ತೆ ಯಾವತ್ತೂ ಮುಚ್ಚದಂತೆ ಮದ್ಯಪ್ರಿಯರಿಂದ ಎಣ್ಣೆ ಅಂಗಡಿಗೆ ಪೂಜೆ

    ಹಾಸನ: ಕಳೆದ ಒಂದೂವರೆ ತಿಂಗಳಿನಿಂದ ಎಣ್ಣೆ ಅಂಗಡಿ ಬಾಗಿಲು ಮುಚ್ಚಿದ್ದು ಇಂದಿನಿಂದ ವ್ಯಾಪಾರಕ್ಕೆ ಅವಕಾಶ ಕೊಟ್ಟ ಹಿನ್ನೆಲೆಯಲ್ಲಿ ಮದ್ಯಪ್ರಿಯರು ಮದ್ಯದಂಗಡಿ ಬಾಗಿಲಿಗೆ ಶ್ರದ್ಧೆ, ಭಕ್ತಿಯಿಂದ ಪೂಜೆ ಮಾಡಿ ಗಮನಸೆಳೆದರು.

    ಹಾಸನ ನಗರದ ಸಾಲಗಾಮೆ ರಸ್ತೆ, ಸಹ್ಯಾದ್ರಿ ಚಿತ್ರಮಂದಿರ ಬಳಿ ಇರುವ ಎಂ.ಎಸ್.ಐ.ಎಲ್. ಮದ್ಯದಂಗಡಿಗೆ ಬಳಿ ಧಾವಿಸಿದ ಕೆಲ ಮದ್ಯ ಪ್ರಿಯರು, ಮೊದಲು ತೆಂಗಿನಕಾಯಿ ಹೊಡೆದು ಕುಂಕುಮ ಹಚ್ಚಿದರು. ಮಲ್ಲಿಗೆ ಹೂವನ್ನು ಹಾಕಿ ನಮನ ಸಲ್ಲಿಸಿದರು. ಇದನ್ನೂ ಓದಿ:  ಮದ್ಯದಂಗಡಿಗಳು ಓಪನ್ – ಒಬ್ಬರಿಗೆ ಎಷ್ಟು ಕ್ವಾಟರ್ ಎಣ್ಣೆ? ನಿಯಮ ಏನು?

    ಕೇವಲ ಪೂಜೆ ಮಾಡದೇ ಮದ್ಯದ ಹೆಸರನ್ನು ದೇವರ ನಾಮದಂತೆ ಪಠಿಸಿ ನಮನ ಸಲ್ಲಿಸಿದರು. ಇನ್ನು ಮುಂದೆ ಯಾವ ಸಂದರ್ಭದಲ್ಲೂ ಎಣ್ಣೆ ಅಂಗಡಿ ಬಾಗಿಲು ಹಾಕದಂತೆ ಪೂಜೆ ವೇಳೆ ಬೇಡಿಕೊಂಡರು.

  • ಡೋಂಟ್ ವರೀ, ಉಡುಪಿಯಲ್ಲಿ ಯಥೇಚ್ಛವಾಗಿ ಮದ್ಯ ಸ್ಟಾಕ್ ಇದೆ: ಅಬಕಾರಿ ಉಪ ಆಯುಕ್ತ ಅಭಯ

    ಡೋಂಟ್ ವರೀ, ಉಡುಪಿಯಲ್ಲಿ ಯಥೇಚ್ಛವಾಗಿ ಮದ್ಯ ಸ್ಟಾಕ್ ಇದೆ: ಅಬಕಾರಿ ಉಪ ಆಯುಕ್ತ ಅಭಯ

    ಉಡುಪಿ: ಜಿಲ್ಲೆಯಲ್ಲಿ ಯಥೇಚ್ಛ ಮದ್ಯ ಲಭ್ಯವಿದೆ. ಯಾರೂ ನೂಕುನುಗ್ಗಲು ಮಾಡಬೇಡಿ ಅಂತ ಉಡುಪಿ ಅಬಕಾರಿ ಉಪ ಆಯುಕ್ತ ನಾಗೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

    ಉಡುಪಿ ಜಿಲ್ಲೆಯಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 1ರವರೆಗೆ ಮಾತ್ರ ಮದ್ಯ ಮಾರಾಟ ನಡೆಯಲಿದೆ. ಜಿಲ್ಲೆಯ 103 ವೈನ್ ಸ್ಟೋರ್ ಗಳಲ್ಲಿ ಮದ್ಯ ಲಭ್ಯವಿದೆ. ಈ ಪೈಕಿ 89 ವೈನ್ ಶಾಪ್ಸ್ , 14 ಎಂಎಸ್‍ಐಎಲ್ ಮಳಿಗೆಗಳಲ್ಲಿ ಮಾರಾಟ ನಡೆಯಲಿದೆ ಎಂದು ಹೇಳಿದರು.

    ಉಡುಪಿ ಜಿಲ್ಲೆಯಲ್ಲಿ ಯಥೇಚ್ಛ ಮದ್ಯ ಸ್ಟಾಕ್ ಇದೆ. ಯಾವುದೇ ಒತ್ತಡವಿಲ್ಲದೆ ಬಂದು ಮದ್ಯ ಖರಿದಿಸಿ. ಸಾರ್ವಜನಿಕ ಪ್ರದೇಶದಲ್ಲಿ ಮದ್ಯ ಸೇವನೆಗೆ ಅವಕಾಶ ಇಲ್ಲ. ಖರೀದಿಸಿದ ಮದ್ಯವನ್ನು ಮನೆಗೆ ತೆಗೆದುಕೊಂಡು ಹೋಗಿ ಕುಡಿಯಬೇಕು. ಮದ್ಯ ಮಾರಾಟಗಾರರು ಮತ್ತು ಗ್ರಾಹಕರಿಗೆ ಸಾಮಾಜಿಕ ಅಂತರ ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯ ಎಂದರು. ಮದ್ಯದಂಗಡಿಯ ಮುಂದೆ ನೂಕಾಟ -ತಳ್ಳಾಟ ಮಾಡಬೇಡಿ. ಸಮಾಜಿಕ ಅಂತರ ಕಾಪಾಡಿ ಎಂದರು.

    ಈ ನಡುವೆ ಬಹು ನಿರೀಕ್ಷಿತ ಮದ್ಯ ಮಾರಾಟ ನಾಳೆ ಆರಂಭವಾಗಲಿದೆ. ಉಡುಪಿಯಲ್ಲಿ ಕೊನೆಯ ಹಂತದ ತಯಾರಿ ನಡೆಯುತ್ತಿದೆ. ಪ್ರಮುಖ ವೈನ್ ಶಾಪ್ ಗಳಿಗೆ ಅಬಕಾರಿ ಅಧಿಕಾರಿಗಳು ಭೇಟಿ ಕೊಟ್ಟು ಸ್ಟಾಕ್ ಟ್ಯಾಲಿ ಮಾಡುತ್ತಿದ್ದಾರೆ. ನಾಳೆ ತೆಗೆದುಕೊಳ್ಳಬೇಕಾದ ಮುಂಜಾಗೃತಾ ಕ್ರಮದ ಬಗ್ಗೆ ತಾಕೀತು ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ನಾಲ್ಕೇ ಗಂಟೆ ಮದ್ಯ ಮಾರಾಟಕ್ಕೆ ಅವಕಾಶ ಕೊಡಲಾಗಿದೆ. ಇದೊಂದು ಪ್ರಾಯೋಗಿಕ ಆದೇಶವಾಗಿದ್ದು, ಜನ ಸ್ಪಂದನೆ ನೋಡಿ ಜಿಲ್ಲಾಡಳಿತ ಬದಲಾವಣೆಗಳನ್ನು ಮಾಡಬಹುದು ಎನ್ನಲಾಗಿದೆ.

  • ನಾಳೆ ಬಾರ್ ಓಪನ್ – ಇಂದೇ ಮದ್ಯದಂಗಡಿಗೆ ಆರತಿ ಎತ್ತಿ, ಕಾಯಿ ಒಡೆದ ಮದ್ಯಪ್ರಿಯ

    ನಾಳೆ ಬಾರ್ ಓಪನ್ – ಇಂದೇ ಮದ್ಯದಂಗಡಿಗೆ ಆರತಿ ಎತ್ತಿ, ಕಾಯಿ ಒಡೆದ ಮದ್ಯಪ್ರಿಯ

    ಚಿಕ್ಕಮಗಳೂರು/ಚಿತ್ರದುರ್ಗ/ಕೋಲಾರ: ಮೇ 4ರಿಂದ ರಾಜ್ಯದ ಹಲವು ಭಾಗದಲ್ಲಿ ಲಾಕ್‍ಡೌನ್ ಸಡಿಲಿಕೆಗೊಳಿಸಿ ಮದ್ಯ ಮಾರಾಟಕ್ಕೆ ಷರತ್ತು ವಿಧಿಸಿ ಅವಕಾಶ ನೀಡಲಾಗಿದೆ. ಇಷ್ಟು ದಿನ ಎಣ್ಣೆ ಇಲ್ಲದೇ ನಿರಾಶೆಗೆ ಒಳಗಾಗಿದ್ದ ಮದ್ಯಪ್ರಿಯರು ನಾಳೆ ಮದ್ಯದಂಗಡಿ ಬಾಗಿಲು ತೆರೆಯುವುದನ್ನೇ ಕಾಯುತ್ತಿದ್ದಾರೆ. ಈ ನಡುವೆ ಕೋಲಾರದಲ್ಲಿ ಮದ್ಯಪ್ರಿಯನೋರ್ವ ಅಂಗಡಿಗೆ ಬಾಗಿಲು ತೆರೆಯುವ ಮುನ್ನವೇ ಆರತಿ ಎತ್ತಿ ಪೂಜೆ ಮಾಡಿ, ಕಾಯಿ ಒಡೆದು ಖುಷಿಪಟ್ಟಿದ್ದಾನೆ.

    ಸೋಮವಾರ ಬಾರ್ ಓಪನ್ ಆಗುವ ಹಿನ್ನೆಲೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಗ್ರಾಮದಲ್ಲಿ ಮದ್ಯಪ್ರಿಯನೊಬ್ಬ ಬಾರ್ ಬಾಗಿಲಿಗೆ ಮಂಗಳಾರತಿ ಮಾಡಿ, ಕಾಯಿ ಒಡೆದು ಪೂಜೆ ಮಾಡಿದ್ದಾನೆ. ಬೂದಿಕೋಟೆ ಗ್ರಾಮದಲ್ಲಿನ ಎಂಎಸ್‍ಐಎಲ್ ಶಾಪ್‍ಗೆ ಪೂಜೆ ಮಾಡಿ ಖುಷಿಪಟ್ಟಿದ್ದಾನೆ. ಇತ್ತ ಮತ್ತೊಂದೆಡೆ ಬೇತಮಂಗಲದಲ್ಲಿ ಲೈಟಿಂಗ್ ಹಾಕಿಸಿ ಅಲಂಕಾರ ಮಾಡಿ ಮದ್ಯಅಂಗಡಿ ಓಪನ್‍ಗೆ ಭರ್ಜರಿ ಸಿದ್ಧತೆ ನಡೆದಿದೆ.

    ಸರ್ಕಾರ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದು ಕುಡುಕರಿಗೆ ಮರಳುಗಾಡಲ್ಲಿ ಓಯಾಸೀಸ್ ಸಿಕ್ಕಂತಾಗಿ, ಲಾಕ್‍ಡೌನ್ ನೋವನ್ನೆಲ್ಲಾ ಮರೆಸಿದೆ. ನಾವು ಬಾಗಿಲು ತೆಗೆಯುವ ಮುನ್ನವೇ ಕುಡುಕರು ಅಂಗಡಿ ಬಾಗಿಲು ಕಾಯ್ತಿರುತ್ತಾರೆ ಎಂದು ಚಿಕ್ಕಮಗಳೂರು ನಗರದ ಮದ್ಯದಂಗಡಿ ಮಾಲೀಕರು ಈಗಾಗಲೇ ಅಂಗಡಿ ಮುಂದೆ ಸಕಲ ಸಿದ್ಧತೆ ಮಾಡ್ಕೊಂಡು, ಮುಂಜಾಗೃತ ಕ್ರಮ ಕೈಗೊಂಡಿದ್ದಾರೆ. ಬಾರ್ ಮುಂದೆ ನಾಲ್ಕು ಅಡಿಗೊಂದರಂತೆ ಬಾಕ್ಸ್ ಗಳನ್ನ ಹಾಕಿದ್ದಾರೆ. ಒಳಬರೋದಕ್ಕೆ ಒಂದು ಮಾರ್ಗ, ಹೊರ ಹೋಗೋದಕ್ಕೆ ಒಂದು ಮಾರ್ಗದಂತೆ ಎಲ್ಲಾ ಸಿದ್ಧತೆ ಮಾಡಿದ್ದಾರೆ. ಒಬ್ಬರಿಗೆ ಕೇವಲ ಎರಡೂವರೆ ಲೀಟರ್ ಅಂದ್ರೆ ಸುಮಾರು ಮೂರು ಫುಲ್ ಬಾಟಲಿಯಷ್ಟು ಮದ್ಯ ನೀಡಲು ನಿರ್ಧರಿಸಲಾಗಿದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆವರೆಗೂ ಮದ್ಯದ ಅಂಗಡಿ ಬಾಗಿಲು ತೆರಿದಿರಲಿದೆ.

    ಈ ಮಧ್ಯೆ ಎಣ್ಣೆ ಅಂಗಡಿ ಸೀಜ್ ಮಾಡಿದ್ದ ಅಧಿಕಾರಿಗಳು ಸ್ಟಾಕ್ ಚೆಕ್ ಮಾಡ್ತಿದ್ರೆ ರಸ್ತೆಯಲ್ಲಿ ಓಡಾಡುತ್ತಿದ್ದ ಮಂದಿ ಬಂದು ಅಣ್ಣಾ ಎಣ್ಣೆ ಕೊಡ್ತೀರಾ ಅಂತ ಕೇಳ್ತಿದ್ದಾರೆ. ಕಾಫಿನಾಡಲ್ಲಿ ಕಳೆದ 15 ದಿನದಿಂದ ದಿನಬಿಟ್ಟು ದಿನ ಮಳೆಯಾಗ್ತಿದೆ. ಈಗ ಜೊತೆಗೆ ಎಣ್ಣೆ ಕೂಡ ಸಿಗ್ತಿರೋದು ಕಾಫಿನಾಡಿನ ಮದ್ಯಪ್ರಿಯರಿಗೆ ಖುಷಿ ಮೇಲೆ ಖುಷಿಕೊಟ್ಟಿದೆ.

    ಇತ್ತ ಗ್ರೀನ್ ಝೋನ್ ವ್ಯಾಪ್ತಿಯಲ್ಲಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಮದ್ಯದಂಗಡಿ ತೆರೆಯಲು ಮಾಲಿಕರು ಬರದ ಸಿದ್ಧತೆ ನಡೆಸಿದ್ದಾರೆ. ಇದರಿಂದಾಗಿ ಕೋಟೆನಾಡಿನ ಮದ್ಯಪ್ರಿಯರಲ್ಲಿ ಬಾರಿ ಸಂತಸ ಮನೆ ಮಾಡಿದೆ. ಜಿಲ್ಲೆಯಲ್ಲಿ 20 ಎಂಎಸ್‍ಐಎಲ್ ಸೇರಿದಂತೆ ಒಟ್ಟು 97 ಮದ್ಯದಂಗಡಿಗಳನ್ನು ತೆರೆಯಲು ಅಬಕಾರಿ ಇಲಾಖೆಯಿಂದ ಅನುಮತಿ ನೀಡಲಾಗಿದೆ. ಆದರೆ ಒಬ್ಬರಿಗೆ ಕೇವಲ ಎರಡು ಫುಲ್ ಬಾಟಲಿ ಮದ್ಯವನ್ನು ಮಾತ್ರ ನೀಡಲು ನಿಗಧಿಪಡಿಸಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪ್ರತಿ ಅಂಗಡಿ ಬಳಿ ಬ್ಯಾರಿಕೇಡ್ ಹಾಕಲಾಗಿದ್ದು, ಅಂಗಡಿ ಬಳಿ ಸರದಿ ಸಾಲಿನಲ್ಲಿ ಮದ್ಯ ಪ್ರಿಯರು ಬರುವಂತೆ ಸೂಚಿಸಲಾಗಿದೆ.

    ಅಲ್ಲದೇ ಅಂಗಡಿ ಮುಂದೆ ಐದಕ್ಕೂ ಹೆಚ್ಚು ಜನ ಸೇರದಂತೆ ನಿರ್ಭಂಧಿಸಲು ಅಬಕಾರಿ ಇಲಾಖೆ ಮಾಲೀಕರಿಗೆ ಸೂಚನೆ ನೀಡಿದ್ದು, ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಬೇಕು ಮತ್ತು ಎಲ್ಲರು ಮಾಸ್ಕ್ ಹಾಗು ಸ್ಯಾನಿಟೈಸರ್ ಬಳಸಬೇಕೆಂಬ ಸೂಚನೆ ಸಹ ಅಬಕಾರಿ ಇಲಾಖೆ ಉಪ ಆಯುಕ್ತೆ ನಿರ್ಮಲಾ ನೀಡಿದ್ದಾರೆ. ಹೀಗಾಗಿ ಜಿಲ್ಲೆಯ ಎಲ್ಲಾ ಮದ್ಯದ ಅಂಗಡಿಗಳ ಬಳಿ ಪೊಲೀಸರು ಬಿಗಿ ಭದ್ರತೆ ಒದಗಿಸಲು ಸಜ್ಜಾಗಿದ್ದಾರೆ.

  • ಉಡುಪಿಯಲ್ಲಿ ಎಣ್ಣೆ ಪ್ರಿಯರಿಗೆ ಶಾಕ್ – ಹೊಸ ರೂಲ್ಸ್ ಜಾರಿ

    ಉಡುಪಿಯಲ್ಲಿ ಎಣ್ಣೆ ಪ್ರಿಯರಿಗೆ ಶಾಕ್ – ಹೊಸ ರೂಲ್ಸ್ ಜಾರಿ

    ಉಡುಪಿ: ಗ್ರೀನ್ ಝೋನ್‍ನಲ್ಲಿ ಉಡುಪಿ ಜಿಲ್ಲೆ ಇದ್ದರೂ ಮದ್ಯದಂಗಡಿಗೆ ಬ್ರೇಕ್ ಹಾಕಲಾಗಿದೆ. ಉಡುಪಿಯಲ್ಲಿ ಮದ್ಯಕ್ಕೂ ಮಧ್ಯಾಹ್ನದ ಲಗಾಮು ಹಾಕಲಾಗಿದೆ.

    ನಾಳೆಯಿಂದ ರಾಜ್ಯಾದ್ಯಂತ ಮದ್ಯದಂಗಡಿ ಓಪನ್ ಮಾಡಲು ರಾಜ್ಯ ಸರ್ಕಾರ ಆದೇಶ ಮಾಡಿದೆ. ನಿಯಮದ ಪ್ರಕಾರ ಬೆಳಗ್ಗೆ 9 ರಿಂದ ಸಂಜೆ ಏಳರವರೆಗೆ ಎಣ್ಣೆ ಶಾಪ್‍ಗಳು ತೆರೆದಿರಬೇಕು. ಆದರೆ ಉಡುಪಿಯಲ್ಲಿ ಮಧ್ಯಾಹ್ನ ಒಂದಕ್ಕೆ ಸೀಮಿತ ಮಾಡಲಾಗಿದೆ. ಈ ಬಗ್ಗೆ ಉಡುಪಿ ಶಾಸಕ ರಘುಪತಿ ಭಟ್ ಸುಳಿವು ನೀಡಿದ್ದಾರೆ.

    ನಮ್ಮ ಜಿಲ್ಲೆಯಲ್ಲಿ ಮದ್ಯವನ್ನು ಸಂಜೆಯ ತನಕ ಮಾರಾಟ ಮಾಡುವುದಿಲ್ಲ. ವೈನ್ ಶಾಪ್ ಎಂಎಸ್‍ಐಎಲ್‍ಗಳನ್ನು ಮಧ್ಯಾಹ್ನದವರೆಗೆ ಮಾತ್ರ ತೆರೆಯುತ್ತೇವೆ. ನಮ್ಮ ಜಿಲ್ಲೆಗೆ ವೈನ್ ಶಾಪ್ ಮದ್ಯದಂಗಡಿ ಮುಖ್ಯ ಅಲ್ಲ. ಜಿಲ್ಲೆಯ ಜನರ ಆರೋಗ್ಯ ನಮಗೆ ಮುಖ್ಯ. ಬ್ಯೂಟಿ ಪಾರ್ಲರ್ ಮತ್ತು ಸಲೂನ್ ಗಳನ್ನು ಒಂದು ವಾರ ಓಪನ್ ಮಾಡುವುದಿಲ್ಲ. ಸಲೂನ್ ಪಾರ್ಲರ್ ತೆರೆಯಲು ಕೇಂದ್ರ ಸರ್ಕಾರದ ಮಾರ್ಗದರ್ಶಿ ಸೂತ್ರಗಳಿವೆ ಎಂದು ತಿಳಿಸಿದರು.

    ಕೇಂದ್ರದ ನಿರ್ದೇಶನ ಇದ್ದರೂ, ಜನರ ಆರೋಗ್ಯ ಕಾಪಾಡುವುದು ನಮ್ಮ ಮೊದಲ ಆದ್ಯತೆ. ಲಾಕ್‍ಡೌನ್ ಮುಗಿಯುವ ತನಕ ಜಿಲ್ಲೆಯಲ್ಲಿ ಯಾವುದೇ ಡೆಂಟಲ್ ಕ್ಲಿನಿಕ್ ತೆರೆಯಲ್ಲ. ರಾಜ್ಯ ಸರ್ಕಾರ ಹೇಳಿದರೂ ನಮ್ಮ ಜಿಲ್ಲೆಯಲ್ಲಿ ಒಂದು ಗಂಟೆಗೆ ಮದ್ಯದಂಗಡಿ ಬಂದ್ ಆಗುತ್ತದೆ ಎಂದು ರಘುಪತಿ ಭಟ್ ಹೇಳಿದರು.

    ಅಗತ್ಯ ವಸ್ತುಗಳಿಗೆ ಒಂದು ಗಂಟೆಯೊಳಗೆ ವಿನಾಯಿತಿ ಕೊಟ್ಟು ಮದ್ಯದಂಗಡಿಯನ್ನು ಸಂಜೆಯವರೆಗೆ ತೆರೆಯುವುದು ಸರಿಯಲ್ಲ ಎಂಬ ಚರ್ಚೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಜನ ಪ್ರತಿನಿಧಿ ಮತ್ತು ಅಧಿಕಾರಿಗಳ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.

  • ಬಾರ್‌ಗಳ ಮುಂದೆ ಸ್ವತಃ ತಾವೇ ಬ್ಯಾರಿಕೇಡ್ ನಿರ್ಮಿಸಿದ ಮದ್ಯ ಪ್ರಿಯರು

    ಬಾರ್‌ಗಳ ಮುಂದೆ ಸ್ವತಃ ತಾವೇ ಬ್ಯಾರಿಕೇಡ್ ನಿರ್ಮಿಸಿದ ಮದ್ಯ ಪ್ರಿಯರು

    – ನಾಳೆ ಮದ್ಯದಂಗಡಿಗೆ ಪೂಜೆ ಸಲ್ಲಿಸಲು ಸಿದ್ಧತೆ

    ಹುಬ್ಬಳ್ಳಿ: ಲಾಕ್‍ಡೌನ್ ಜಾರಿಯಾದ ದಿನದಿಂದಲೂ ಎಣ್ಣೆ ಸಿಗದೆ ಪರದಾಡಿದ ಕುಡುಕರು ನಾಳೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ರಾಜ್ಯ ಸರ್ಕಾರ ಮೇ 4ರಿಂದ ಮದ್ಯ ಮಾರಾಟಕ್ಕೆ ಅನುಮತಿ ನೀಡಿದ್ದು, ಕುಡುಕರಲ್ಲಿ ಸಂಭ್ರಮ ಮನೆ ಮಾಡಿದೆ.

    ಹೀಗಾಗಿ ಮದ್ಯಪ್ರಿಯರು ನಗರದ ಕಾಟನ್ ಮಾರ್ಕೆಟ್ ನಲ್ಲಿ ಸ್ವತ ತಾವೇ ಮುಂದೆ ನಿಂತು ಬಾರ್‍ಗಳಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕಾಟನ್ ಮಾರ್ಕೆಟ್‍ನ ಎಂಎಸ್‍ಐಎಲ್ ಮುಂದೆ ನೂಕುನುಗ್ಗಲು ಆಗದಂತೆ ತಾವೇ ಕಟ್ಟಿಗೆಯ ಬ್ಯಾರಿಕೇಡ್ ಗಳನ್ನು ಕಟ್ಟುವ ಕೆಲಸ ಮಾಡುತ್ತಿದ್ದಾರೆ.

    ಸರತಿ ಸಾಲಿನಲ್ಲಿ ನಿಂತುಕೊಳ್ಳಲು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ಬಾಕ್ಸ್ ಗಳನ್ನು ಹಾಕುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ನಾಳೆಯ ದಿನವನ್ನು ಸಂಭ್ರಮದಿಂದ ಬರ ಮಾಡಿಕೊಳ್ಳಲು ಹಾಗೂ ಯಾವುದೇ ಗೊಂದಲ ಸೃಷ್ಟಿಯಾಗದಂತೆ ನೋಡಿಕೊಳ್ಳಲು ಕುಡುಕರು ಸಿದ್ಧತೆ ನಡೆಸಿದ್ದಾರೆ. ಬೆಳಗ್ಗೆ ಎಂಎಸ್‍ಐಎಲ್ ಪ್ರಾರಂಭವಾಗುತ್ತಿದಂತೆ ಪೂಜೆ ಸಲ್ಲಿಸುವ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದಾರೆ.