Tag: ಮದುವೆ ನಿಶ್ಚಯ

  • ಮದ್ವೆ ನಿಶ್ಚಯ ಮಾಡ್ಕೊಂಡು ಬಾಯ್‍ಫ್ರೆಂಡ್ ಜೊತೆ ಸೇರಿ ಯುವಕನ ಕೊಲೆ ಮಾಡಿದ್ಳು!

    ಮದ್ವೆ ನಿಶ್ಚಯ ಮಾಡ್ಕೊಂಡು ಬಾಯ್‍ಫ್ರೆಂಡ್ ಜೊತೆ ಸೇರಿ ಯುವಕನ ಕೊಲೆ ಮಾಡಿದ್ಳು!

    – ಉಸಿರುಗಟ್ಟಿ ಕೊಲೆಗೈದು ಹೊಲದಲ್ಲಿ ಹೂತಿಟ್ರು
    – ಮದುವೆಯಾಗಲು ಹೊರಟವ ಮಸಣ ಸೇರಿದ

    ರಾಯಚೂರು: ಜಿಲ್ಲೆಯಲ್ಲೊಂದು ಭಯಾನಕ ಹತ್ಯೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮದುವೆ ನಿಶ್ಚಯ ಆಗಿದ್ದ ಯುವತಿಯಿಂದಲೇ ಯುವಕ ಹತ್ಯೆಯಾಗಿದ್ದಾನೆ.

    ಸಿರವಾರ ಪಟ್ಟಣದ ಮೆಹಬೂಬ್ (30) ಕೊಲೆಯಾಗಿರೋ ಯುವಕ. ಈತನನ್ನು 15 ದಿನಗಳ ಹಿಂದೆ ಕೊಲೆ ಮಾಡಿ, ಆರೋಪಿಗಳು ಶವವನ್ನು ಜಮೀನಿನಲ್ಲಿ ಹೂತಿದ್ದರು. ಈ ಘಟನೆ ನಡೆದು ಸುಮಾರು 15 ದಿನಗಳ ಬಳಿಕ ಪ್ರಕರಣ ಬಯಲಾಗಿದೆ.

    ಸಿರವಾರ ಪಟ್ಟಣದ ಮೆಹಬೂಬ್‍ಗೆ ರೋಡಲಬಂಡಾ ಗ್ರಾಮದ ಖಾಜಾಬಿ ಜೊತೆ ನಿಶ್ಚಿತಾರ್ಥ ಆಗಿತ್ತು. ಆದರೆ ಶಬ್ಬೀರ್ ಎಂಬಾತ ಖಾಜಾಬಿಯನ್ನ ಪ್ರೀತಿಸುತ್ತಿದ್ದ. ಖಾಜಾಬಿ ಮದುವೆ ನಿಶ್ಚಯ ಆಗಿದ್ದರಿಂದ ಆತಂಕಗೊಂಡ ಶಬ್ಬೀರ್, ಒಂದು ದಿನ ತನ್ನ ಸ್ನೇಹಿತರ ಜೊತೆ ಸೇರಿ ಮೆಹಬೂಬ್‍ನನ್ನೇ ಕೊಲೆ ಮಾಡಿದ್ದಾನೆ. ಈ ಕೊಲೆಗೆ ಯುವತಿ ಖಾಜಾಬಿ ಕೂಡ ಸಾಥ್ ನೀಡಿದ್ದಾಳೆ.

    ನ.16ರಂದು ಸಿರವಾರ ಪಟ್ಟಣಕ್ಕೆ ಬಂದಿದ್ದ ಆರೋಪಿ ಶಬ್ಬೀರ್, ಪಟ್ಟಣದ ರೆಡಿಯೋ ಅಂಗಡಿಯ ಬಳಿ ಕುಳಿತಿದ್ದ ಮೆಹಬೂಬ್ ನನ್ನು ಒತ್ತಾಯ ಪೂರ್ವಕವಾಗಿ ಕವಿತಾಳ ಪಟ್ಟಣಕ್ಕೆ ಬೈಕಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ನಂತರ ಶಬ್ಬೀರ್ ಸ್ನೇಹಿತರಾದ ಚಂದ್ರು, ಫಯಾಜ್ ನನ್ನು ಕರೆಸಿಕೊಂಡು ಮದ್ಯಪಾನದ ಪಾರ್ಟಿ ಮಾಡಿದ್ದಾರೆ. ಇದಾದ ಬಳಿಕ ಶಬ್ಬೀರ್, ಚಂದ್ರು, ಫಯಾಜ್ ಕೊಲೆ ಮಾಡುವ ಸ್ಕೆಚ್ ಹಾಕಿದ್ರು. ಅಲ್ಲದೆ ಕವಿತಾಳ ಪಟ್ಟಣದಿಂದ ರೋಡಲಬಂಡಾ ಗ್ರಾಮಕ್ಕೆ ಕರೆದುಕೊಂಡು ಹೋಗಿ ಅನ್ವರಿ ಸೀಮಾಂತರದಲ್ಲಿ ಬರುವ ಹೊಲದಲ್ಲಿ ಟವಲ್ ನಿಂದ ಉಸಿರುಗಟ್ಟಿ ಕೊಲೆ ಮಾಡಿ ಆರೋಪಿಗಳು ಹೂತು ಹಾಕಿದ್ದಾರೆ.

    ಇತ್ತ ಮದುವೆ ನಿಶ್ಚಯವಾಗಿದ್ದ ಮಗ ಏಕಾಏಕಿ ಕಾಣೆಯಾಗಿದ್ದರಿಂದ ಗಾಬರಿಗೊಂಡ ಮೆಹಬೂಬ್ ಪೋಷಕರು, ನವೆಂಬರ್ 18ರಂದು ಸಿರವಾರ ಠಾಣೆಯಲ್ಲಿ ದೂರು ನೀಡಿದ್ರು. ದೂರು ಸ್ವೀಕರಿಸಿ ತನಿಖೆ ಆತನ ಪತ್ತೆಗೆ ಹುಡುಕಾಟ ನಡೆಸಿದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಈ ಹಿನ್ನೆಲೆಯಲ್ಲಿ ಒಟ್ಟಾರೆ ಘಟನೆ ನವೆಂಬರ್ 28ರಂದು ಬೆಳಕಿಗೆ ಬಂದಿದೆ.

    ಘಟನೆ ಸಂಬಂಧ ಸಿರವಾರ ಪೊಲೀಸರು ಖಾಜಾಬಿ ಹಾಗೂ ಶಬ್ಬೀರ್ ಇಬ್ಬರನ್ನೂ ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳಾದ ಚಂದ್ರು ಹಾಗೂ ಫಯಾಜ್ ನಾಪತ್ತೆಯಾಗಿದ್ದು, ಅವರಿಗಾಗಿ ಪೋಲೀಸರು ಹುಡುಕುತ್ತಿದ್ದಾರೆ.

  • ಸರಳ ಕಾರ್ಯಕ್ರಮ- ಡಿಕೆಶಿ ಪುತ್ರಿಗೂ ಎಸ್‍ಎಂಕೆ ಮೊಮ್ಮಗನಿಗೂ ಮದುವೆ ನಿಶ್ಚಯ

    ಸರಳ ಕಾರ್ಯಕ್ರಮ- ಡಿಕೆಶಿ ಪುತ್ರಿಗೂ ಎಸ್‍ಎಂಕೆ ಮೊಮ್ಮಗನಿಗೂ ಮದುವೆ ನಿಶ್ಚಯ

    ಬೆಂಗಳೂರು: ಇಂದು ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಮಗಳಿಗೂ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಮೊಮ್ಮಗನಿಗೂ ಮದುವೆ ನಿಶ್ಚಯವಾಗಿದೆ.

    ಇಂದು ಈ ಕಾರ್ಯಕ್ರಮಕ್ಕಾಗಿ ಡಿಕೆ ಶಿವಕುಮಾರ್ ಅವರ ಮನೆಗೆ ಎಂಸ್ ಕೃಷ್ಣ ಅವರ ಕುಟುಂಬ ಆಗಮಿಸಿತ್ತು. ಮೂರು ದಿನಗಳ ಹಿಂದೆಯಷ್ಟೇ ಎಸ್‍ಎಂಕೆ ನಿವಾಸಕ್ಕೆ ಡಿಕೆಶಿ ಕುಟುಂಬ ಹೋಗಿದ್ದರು. ಇಂದು ಗುರು-ಹಿರಿಯ ಸಮ್ಮಖದಲ್ಲಿ ದಿವಂಗತ ಸಿದ್ಧಾರ್ಥ ಅವರ ಪುತ್ರ ಅಮರ್ಥ್ಯ ಸುಬ್ರಮಣ್ಯಗೂ ಮತ್ತು ಡಿಕೆಶಿ ಪುತ್ರಿ ಐಶ್ವರ್ಯಗೂ ಮದುವೆ ನಿಶ್ಚಯವಾಗಿದೆ.

    ಇದೇ ತಿಂಗಳ 12ರಂದು ಡಿ.ಕೆ.ಶಿವಕುಮಾರ್ ಕುಟುಂಬದವರು ಸದಾಶಿವನಗರದ ಎಸ್.ಎಂ.ಕೃಷ್ಣ ನಿವಾಸಕ್ಕೆ ತೆರಳಿ ಮದುವೆ ಮಾತುಕತೆ ನಡೆಸಿದ್ದರು. ಕಳೆದ ಒಂದು ತಿಂಗಳಿಂದಲೂ ಡಿಕೆಶಿ ಪುತ್ರಿ ಐಶ್ವರ್ಯ ಹಾಗೂ ಉದ್ಯಮಿ ಸಿದ್ದಾರ್ಥ್ ಪುತ್ರ ಅಮರ್ಥ್ಯ ಸುಬ್ರಮಣ್ಯ ವಿವಾಹ ಸಂಬಂಧ ಎರಡು ಕುಟುಂಬಗಳು ಮಾತುಕತೆ ನಡೆಸುತ್ತಲೇ ಇದ್ದವು. ಆದರೆ ಇಂದು ಡಿಕೆಶಿ ನಿವಾಸದಲ್ಲೇ ಸರಳ ಕಾರ್ಯಕ್ರಮದಲ್ಲಿ ಹಾರವನ್ನು ಬದಲಿಸುವ ಮೂಲಕ ಮದುವೆ ನಿಶ್ಚಯ ಮಾಡಿಕೊಂಡಿದ್ದಾರೆ.

    ಈಗ ಕೇವಲ ಮದುವೆ ನಿಶ್ಚಯವಾಗಿದ್ದು, ಎರಡು ಕುಟುಂಬಗಳು ತಾಂಬೂಲ ಬದಲಿಸಿಕೊಂಡಿವೆ. ಆಷಾಢ ಕಳೆದ ನಂತರ ಆಗಸ್ಟ್ ತಿಂಗಳಲ್ಲಿ ನಿಶ್ಚಿತಾರ್ಥ ನಡೆಸುವ ಸಂಬಂಧ ಮಾತುಕತೆ ನಡೆದಿದೆ. ಆಗಸ್ಟ್ ತಿಂಗಳಿನಲ್ಲಿ ಒಳ್ಳೆಯ ದಿನ ನೋಡಿ ನಿಶ್ಚಿತಾರ್ಥದ ದಿನಾಂಕ ನಿಗದಿ ಆಗಲಿದೆ. ಬಹುತೇಕ ಡಿಸೆಂಬರ್ ನಲ್ಲಿ ಮದುವೆ ದಿನಾಂಕ ನಿಗದಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

    ಮಗಳ ಮದುವೆ ನಿಶ್ಚಯ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಅವರು, ಪಂಚೆ, ಶರ್ಟ್ ನಲ್ಲಿ ಮಿಂಚಿದ್ದಾರೆ. ಜೊತೆಗೆ ಡಿಕೆಶಿ ಪುತ್ರಿ ಐಶ್ವರ್ಯ ಪೀಚ್ ಕಲರ್ ಉಡುಗೆಯಲ್ಲಿ ಮಿಂಚಿದರೆ, ಅಮರ್ಥ್ಯ ಸುಬ್ರಮಣ್ಯ ನೀಲಿ ಬಣ್ಣದ ಶರ್ಟ್ ಮತ್ತು ಬಿಳಿ ಬಣ್ಣದ ಪ್ಯಾಂಟ್ ತೊಟ್ಟು ಮಿಂಚಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೇವಲ ಡಿಕೆಶಿ ಕುಟುಂಬ ಮತ್ತು ಎಸ್‍ಎಂ ಕೃಷ್ಣ ಅವರ ಕುಟುಂಬಸ್ಥರು ಹಾಗೂ ಕೆಲ ಅಪ್ತರು ಭಾಗವಹಿಸಿದ್ದರು.