Tag: ಮದುವೆ ಕಾರ್ಡ್

  • ಪ್ರಣಾಳಿಕೆಯನ್ನೇ ಮದ್ವೆ ಕಾರ್ಡ್‌ನಲ್ಲಿ ಮುದ್ರಿಸಿದ ಪವನ್ ಕಲ್ಯಾಣ್ ಬೆಂಬಲಿಗ!

    ಪ್ರಣಾಳಿಕೆಯನ್ನೇ ಮದ್ವೆ ಕಾರ್ಡ್‌ನಲ್ಲಿ ಮುದ್ರಿಸಿದ ಪವನ್ ಕಲ್ಯಾಣ್ ಬೆಂಬಲಿಗ!

    ಹೈದರಾಬಾದ್:‌ ಯಾವುದೇ ರಾಜಕೀಯ ಪಕ್ಷಕ್ಕೆ ಅದರ ಬೆಂಬಲಿಗರು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿರುತ್ತಾರೆ. ತಮ್ಮ ಪಕ್ಷದ ರಕ್ಷಣೆಗಾಗಿ ಇತರರೊಂದಿಗೆ ಹೋರಾಡಲು ಸಹ ಸಿದ್ಧರಾಗಿರುವ ಇಂತಹ ಅನೇಕ ಬೆಂಬಲಿಗರನ್ನು ನೀವು ಇಲ್ಲಿಯವರೆಗೆ ನೋಡಿರಬೇಕು. ಆದರೆ ಆಂಧ್ರಪ್ರದೇಶದ (Andhrapradesh) ವ್ಯಕ್ತಿಯೊಬ್ಬರು ತಮ್ಮ ನೆಚ್ಚಿನ ಪಕ್ಷದ ಬಗ್ಗೆ ಅಂತಹ ಉತ್ಸಾಹವನ್ನು ತೋರುವ ಮೂಲಕ ಇದೀಗ ಭಾರೀ ಸುದ್ದಿಯಾಗಿದ್ದಾರೆ.

    ಆಂಧ್ರಪ್ರದೇಶದ ಕಾಕಿನಾಡ ನಿವಾಸಿಯೊಬ್ಬರ ಮದುವೆ ಕಾರ್ಡ್‌ನಲ್ಲಿ ಜನಸೇನಾ ಪಕ್ಷದ (Janasena Party) ಪ್ರಣಾಳಿಕೆಯನ್ನು ಮುದ್ರಿಸಲಾಗಿದೆ. ವ್ಯಕ್ತಿ ಪಕ್ಷದ ನಾಯಕ ಪವನ್ ಕಲ್ಯಾಣ್ (Pawan Kalyan) ಅವರ ಬೆಂಬಲಿಗರಾಗಿದ್ದು, ಪಿಠಾಪುರಂನಲ್ಲಿ ಪವನ್ ಕಲ್ಯಾಣ್ ಅವರಿಗೆ ಮತ ನೀಡುವಂತೆ ಆಹ್ವಾನಿತರನ್ನು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಸಲೂನ್‌ನಲ್ಲಿ ಜನರಿಗೆ ಕ್ಷೌರ ಮಾಡಿ ಮತಯಾಚನೆ- ಗಮನ ಸೆಳೆದ ಅಭ್ಯರ್ಥಿಯ ಚುನಾವಣಾ ಪ್ರಚಾರ

    ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ವೀಡಿಯೋದಲ್ಲಿ ವ್ಯಕ್ತಿ ಜನರಿಗೆ ಮದುವೆ ಕಾರ್ಡ್‌ಗಳನ್ನು ವಿತರಿಸುತ್ತಿರುವುದನ್ನು ಕಾಣಬಹುದಾಗಿದೆ.

    ಬಿಜೆಪಿ-ಟಿಡಿಪಿ ಜೊತೆ ಮೈತ್ರಿ: ತೆಲುಗು ಸೂಪರ್ ಸ್ಟಾರ್ ಪವನ್ ಕಲ್ಯಾಣ್ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದು, ಜನಸೇನಾ ಪಕ್ಷವನ್ನೂ ಕಟ್ಟಿದ್ದಾರೆ ಎಂಬುದು ಗಮನಾರ್ಹ. ಇತ್ತೀಚಿನ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಅವರ ಪಕ್ಷವು ಎನ್‌ಡಿಎ ಮೈತ್ರಿಕೂಟದ ಭಾಗವಾಗಿತ್ತು. ‌ಪಕ್ಷವು ಮುಂಬರುವ ಲೋಕಸಭಾ ಮತ್ತು ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ-ಟಿಡಿಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸುತ್ತಿದೆ.

  • ಕೈ ಬರಹದಲ್ಲಿ ಮಳೆ ಹುಡುಗಿಯ ಮದುವೆ ಕಾರ್ಡ್: ಮೆಚ್ಚಿದ ಕರುನಾಡು

    ಕೈ ಬರಹದಲ್ಲಿ ಮಳೆ ಹುಡುಗಿಯ ಮದುವೆ ಕಾರ್ಡ್: ಮೆಚ್ಚಿದ ಕರುನಾಡು

    ಸೆಲೆಬ್ರಿಟಿಗಳ ಮದುವೆ ಕಾರ್ಡಿಗೆ ಲಕ್ಷ ಲಕ್ಷ ಖರ್ಚು ಮಾಡುವವರನ್ನು ನೋಡಿದ್ದೇವೆ. ದುಬಾರಿ ಮದುವೆ ಕಾರ್ಡ್ ಹಂಚಿದವರೂ ನಮ್ಮ ನಡುವೆ ಇದ್ದಾರೆ. ಆದರೆ, ಎಲ್ಲರಿಗೂ ಮಾದರಿ ಆಗುವಂತಹ ಕೆಲಸ ಮಾಡಿದ್ದಾರೆ ಮಳೆ ಹುಡುಗಿ ಖ್ಯಾತಿಯ ನಟಿ ಪೂಜಾ ಗಾಂಧಿ (Pooja Gandhi). ಸ್ವತಃ ತಮ್ಮದೇ ಕೈ ಬರಹದಲ್ಲಿ ಮದುವೆ ಕಾರ್ಡ್ ಸಿದ್ಧ ಪಡಿಸಿ, ಅದನ್ನೇ ಎಲ್ಲರಿಗೂ ಕಳುಹಿಸಿ ಕೊಟ್ಟಿದ್ದಾರೆ.

    ಮೂಲತಃ ಉತ್ತರ ಪ್ರದೇಶದವರಾದ ಪೂಜಾ ಗಾಂಧಿ, ಮುಂಗಾರು ಮಳೆ ಸಿನಿಮಾ ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ಬಂದವರು. ಕನ್ನಡವೇ ಬಾರದ ಪೂಜಾ ಇದೀಗ ಸ್ವಚ್ಛ ಕನ್ನಡದಲ್ಲಿ ಮಾತನಾಡುತ್ತಾರೆ. ವಚನಗಳನ್ನು ಪಟಪಟ ಹೇಳುತ್ತಾರೆ. ತಮ್ಮದೇ ಕೈ ಬರಹದಲ್ಲಿ ಕನ್ನಡದ ಮದುವೆ ಆಮಂತ್ರಣ ಪತ್ರಿಕೆಯನ್ನು (Wedding Card) ಸಿದ್ಧ ಮಾಡಿದ್ದಾರೆ. ಈ ನಡೆಗೆ ಕನ್ನಡಿಗರಿ ಮೆಚ್ಚಿದ್ದಾರೆ. ಆ ಪತ್ರಿಕೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದೆ.

    ನಾಳೆ ಮದುವೆ

    ಈ ಹಿಂದೆ ನಿಶ್ಚಾತಾರ್ಥ ಮುರಿದು ಬಿದ್ದ ಕಾರಣದಿಂದಾಗಿ ಮದುವೆಯನ್ನೇ ಮರೆತಿದ್ದ ಪೂಜಾ ಗಾಂಧಿ, ಇದೀಗ ಎಲ್ಲ ಕಹಿ ಘಟನೆಗಳನ್ನು ಮರೆತು ಮತ್ತೆ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ರಂಗದಿಂದಲೂ ದೂರವಿರುವ ಪೂಜಾ, ಕನ್ನಡ ಕಲಿಕೆಯ ಕಾರಣದಿಂದಾಗಿ ಸಖತ್ ಸುದ್ದಿಯಾಗಿದ್ದರು. ಇದೀಗ ಮದುವೆ ವಿಚಾರದಲ್ಲಿ ಮತ್ತೆ ಸುದ್ದಿಗೆ ಬಂದಿದ್ದಾರೆ.

    ಮಳೆ ಹುಡುಗಿ ಎಂದೇ ಖ್ಯಾತಿಯ ಆಗಿರುವ ಪೂಜಾ ಗಾಂಧಿ ನಾಳೆ ಮದುವೆ ಆಗುತ್ತಿದ್ದಾರೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಅವರ ಆಪ್ತರು ಹೇಳುವಂತೆ ನಾಳೆ ಉದ್ಯಮಿ ಜೊತೆ ಅವರು ಮಂತ್ರ ಮಾಂಗಲ್ಯ ಮಾದರಿಯಲ್ಲಿ ಮದುವೆ ಆಗುತ್ತಿದ್ದಾರೆ ಎನ್ನಲಾಗಿತ್ತು. ಅದೀಗ ಎಲ್ಲವೂ ನಿಜವಾಗಿದೆ. ಸ್ವತಃ ಪೂಜಾ ಗಾಂಧಿಯವರೆ ಮಾಧ್ಯಮಗಳಿಗೆ ತಮ್ಮ ಮದುವೆ ಕುರಿತಾಗಿ ಪತ್ರ ಬರೆದಿದ್ದಾರೆ.

    ಬೆಂಗಳೂರಿನ ಯಲಹಂಕದಲ್ಲಿ ಈ ಮದುವೆ ನಡೆಯುತ್ತಿದ್ದು, ಉದ್ಯಮಿ ಹಾಗೂ ಅವರಿಗೆ ಕನ್ನಡ ಕಲಿಸಿರುವ ವಿಜಯ್ ಘೋರ್ಪಡೆ (Vijay Ghorpade) ಎನ್ನುವವರ ಜೊತೆ ಪೂಜಾ ಹೊಸ ಬದುಕಿಗೆ ಕಾಲಿಡುತ್ತಿದ್ದಾರೆ. ವಿಜಯ್ ಬೆಂಗಳೂರಿನ ಲಾಜೆಸ್ಟಿಕ್ ಕಂಪನಿಯ ಮಾಲೀಕರು ಎಂದು ಹೇಳಲಾಗುತ್ತಿದೆ.

     

    ಈಗಾಗಲೇ ಪೂಜಾ ತಮ್ಮ ಆಪ್ತರಿಗೆ ಕರೆ ಮಾಡಿ, ಮದುವೆ ಆ‍ಹ್ವಾನ ನೀಡಿದ್ದಾರೆ. ಮದುವೆ ಅತ್ಯಂತ ಸರಳವಾಗಿ ನಡೆಯುವುದರಿಂದ ಕೇವಲ ಹಸ್ತಾಕ್ಷರದಲ್ಲಿ ಆಮಂತ್ರಣ ಪತ್ರಿಕೆಯನ್ನು ರೆಡಿ ಮಾಡಿ, ಆಪ್ತರಿಗೆ ಕಳುಹಿಸಿದ್ದಾರೆ. ಮುಂಗಾರು ಮಳೆ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದಾಗಿ ಈ ಹುಡುಗಿ ಇದೀಗ ಕನ್ನಡದವರೇ ಆಗಿದ್ದಾರೆ.

  • ಮಗನ ಮದುವೆಗೆ 4 ಕೆಜಿ ತೂಕದ ಮದುವೆ ಕಾರ್ಡ್ ಮಾಡಿಸಿದ ತಂದೆ!

    ಮಗನ ಮದುವೆಗೆ 4 ಕೆಜಿ ತೂಕದ ಮದುವೆ ಕಾರ್ಡ್ ಮಾಡಿಸಿದ ತಂದೆ!

    ಗಾಂಧಿನಗರ: ಮದುವೆ ಸಂಭ್ರಮಕ್ಕೆ ಏನಾದರೂ ಭಿನ್ನವಾಗಿ ಟ್ರೈ ಮಾಡಬೇಕು ಎಂದು ಇತ್ತೀಚಿನ ದಿನಗಳಲ್ಲಿ ಎಲ್ಲರೂ ಬಯಸುತ್ತಾರೆ. ಅದರಂತೆ ಇಲ್ಲೊಬ್ಬ ತಂದೆ ತನ್ನ ಮಗನಿಗಾಗಿ 4 ಕೆಜಿ, 280 ಗ್ರಾಂ ತೂಕದ ಮದುವೆ ಕಾರ್ಡ್ ಅನ್ನು ಮಾಡಿಸಿದ್ದು, ಆ ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

    ಪ್ರತಿಯೊಬ್ಬ ಪೋಷಕರಿಗೂ ತಮ್ಮ ಮಕ್ಕಳ ವಿವಾಹವನ್ನು ವಿಶೇಷವಾಗಿ ಮಾಡಬೇಕು ಎಂಬ ಕನಸು ಇರುತ್ತೆ. ಅದರಲ್ಲಿಯೂ ವಿಶೇಷವಾಗಿ ಭಾರತದಲ್ಲಿ, ಜನರು ಮದುವೆಗಾಗಿ ಲಕ್ಷಾಂತರ ಹಣವನ್ನು ಖರ್ಚು ಮಾಡುತ್ತಾರೆ. ಅದೇ ರೀತಿ ಇಲ್ಲೊಬ್ಬ ತಂದೆ ತನ್ನ ಮಗನ ಮದುವೆಗೆ ಆಮಂತ್ರಣದ ಕಾರ್ಡ್ ಅನ್ನು ಭಿನ್ನವಾಗಿ ಮಾಡಿಸಿದ್ದು, ಆ ಕಾರ್ಡ್ 4 ಕೆಜಿಗಿಂತ ಹೆಚ್ಚು ತೂಕವಿದೆ. ಆ ಕಾರ್ಡ್‍ನ ಬೆಲೆ ಏನಾದರು ಕೇಳಿದರೆ ಜನರು ಬಾಯಿಯ ಮೇಲೆ ಬೆರಳು ಇಟ್ಟುಕೊಳ್ಳುತ್ತಾರೆ. ಇದನ್ನೂ ಓದಿ: ಹಣಬಲ, ಜಾತಿಬಲದಿಂದ ಕಾಂಗ್ರೆಸ್ ಚುನಾವಣೆ ಗೆಲ್ತಿತ್ತು, ಆದ್ರೆ ಈಗ ಅವರಿಗೆ ಅಡ್ರೆಸ್ಸಿಲ್ಲ: BSY

    ಗುಜರಾತಿ ಉದ್ಯಮಿ ಮೌಲೇಶಭಾಯ್ ಉಕಾನಿ, ಸೋನಾಲ್ಬೆನ್ ಉಕಾನಿ ಅವರ ಮಗ ಜೇ ಉಕಾನಿ ಅವರ ವಿವಾಹಕ್ಕಾಗಿ 4 ಕೆಜಿ ಮತ್ತು 280 ಗ್ರಾಂ ತೂಕದ ಕಾರ್ಡ್ ಅನ್ನು ಮಾಡಿಸಿದ್ದಾರೆ. ನವೆಂಬರ್ 14 ರಿಂದ 16 ರವರೆಗೆ ರಾಜಸ್ಥಾನದ ಜೋಧ್‍ಪುರದ ಉಮೈದ್ ಭವನ ಅರಮನೆಯಲ್ಲಿ ಈ ವಿವಾಹ ನಡೆದಿತ್ತು. ಈ ಮದುವೆ ಮುಗಿದು ಹೋಗಿದ್ದರೂ, ಆಮಂತ್ರಣ ಪತ್ರಿಕೆ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿದೆ.

    ಭಾರೀ ತೂಕದ ಕಾರ್ಡ್ ಬೆಲೆ ಎಷ್ಟು ಎಂದರೆ ಬರೋಬ್ಬರಿ 7 ಸಾವಿರ ರೂಪಾಯಿ. ಈ ಕಾರ್ಡ್ ಗುಲಾಬಿ ಬಣ್ಣದ ಬಾಕ್ಸ್ ನಲ್ಲಿ ಇದ್ದು, ಈ ಕಾರ್ಡ್ ಅನ್ನು ತೆರೆದ ನಂತರ, ಅದರಲ್ಲಿ ಮಸ್ಲಿನ್ ಬಟ್ಟೆಯಲ್ಲಿ ಸುತ್ತುವ ನಾಲ್ಕು ಸಣ್ಣ ಪೆಟ್ಟಿಗೆಗಳನ್ನು ಕಾಣಬಹುದು. ಈ ನಾಲ್ಕೂ ಬಾಕ್ಸ್‍ಗಳಲ್ಲಿ ಗೋಡಂಬಿ, ಬಾದಾಮಿ, ಒಣದ್ರಾಕ್ಷಿ, ಚಾಕಲೇಟ್‍ಗಳನ್ನು ಹಾಕಲಾಗಿದೆ.

    ಅದು ಅಲ್ಲದೇ ಇದರೊಳಗೆ 7 ಪುಟಗಳಿದ್ದು, ಅದರಲ್ಲಿ ಮದುವೆಯ ಸಂಭ್ರಮದ ಎಲ್ಲ ವಿವರಗಳಿವೆ. ಉಕನಿ ಶ್ರೀಕೃಷ್ಣನ ಅಪಾರ ಭಕ್ತನಾಗಿರುವುದರಿಂದ ಕೃಷ್ಣನ ಚಿತ್ರವನ್ನು ಹಾಕಿಸಲಾಗಿದೆ. ಇದನ್ನೂ ಓದಿ: ಚಿನ್ನದ ಹುಡುಗನಿಗೆ ಮೋದಿ ಚಪ್ಪಾಳೆ

    ಮದುವೆ ಕಾರ್ಡ್ ಮಾತ್ರವಲ್ಲ, ಮದುವೆ ಸಹ ಅಷ್ಟೇ ಅದ್ದೂರಿಯಾಗಿ ನಡೆದಿದೆ. ಈ ಮದುವೆ ಭಾರತದ ರಾಜಮನೆತನದ ಮತ್ತು ದುಬಾರಿ ಹೋಟೆಲ್‍ಗಳಲ್ಲಿ ಒಂದಾದ ಜೋಧ್‍ಪುರದ ‘ಉಮೈದ್ ಭವನ್ ಪ್ಯಾಲೇಸ್’ ನಲ್ಲಿ ನಡೆಯಿತು. ಒಂದು ದಿನಕ್ಕೆ ಉಮೈದ್ ಭವನ್ ಅರಮನೆಯ ರೂಂಗೆ 2 ಲಕ್ಷದಿಂದ 3 ಲಕ್ಷದವರೆಗೆ ಆಗುತ್ತೆ. ಈ ಮದುವೆಯ ಔತಣಕೂಟದಲ್ಲಿ ಅತಿಥಿಗಳಿಗೆ ಬಡಿಸಿದ ತಟ್ಟೆಯ ಬೆಲೆ 18,000 ರೂ. ಆಗಿದೆ. ಒಟ್ಟರೆ ಈ ಮದುವೆ ಐಷಾರಾಮಿಯಾಗಿ ನೆರವೇರಿದ್ದು, ಮದುವೆ ಮುಗಿದರೂ ಸಹ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮುಗಿದಿಲ್ಲ.

  • ಪುತ್ರನ ಮದುವೆ ಕಾರ್ಡ್ ಹಂಚಲು ಹೋದ ದಂಪತಿ ಮಸಣಕ್ಕೆ

    ಪುತ್ರನ ಮದುವೆ ಕಾರ್ಡ್ ಹಂಚಲು ಹೋದ ದಂಪತಿ ಮಸಣಕ್ಕೆ

    ಬೀದರ್: ಪುತ್ರನ ಮದುವೆ ಕಾರ್ಡ್ ಹಂಚಲು ಹೋದ ದಂಪತಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಭಾಲ್ಕಿ ತಾಲೂಕಿನ ಸೇವಾಲಾಲ ತಾಂಡದ ಬಳಿ ನಡೆದಿದೆ.

    ಕಾಂಗ್ರೆಸ್ ಮುಖಂಡ ಸೂರ್ಯಕಾಂತ್ ಪಾಟೀಲ್ (50) ಹಾಗೂ ಪತ್ನಿ ಜಯಶ್ರೀ ಪಾಟೀಲ್ (45) ಸಾವನ್ನಪ್ಪಿದ ದುರ್ದೈವಿಗಳು. ಇದೇ ತಿಂಗಳು 26 ರಂದು ಮಗನ ಮದುವೆ ಇದ್ದ ಕಾರಣ ಲಗ್ನ ಪತ್ರಿಕೆ ಹಂಚಲು ಸಂಬಂಧಿಕರ ಮನೆಗೆ ಹೋಗಿದ್ದರು. ಇದನ್ನೂ ಓದಿ: ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್‍ಗೆ 3ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ

    ಮದುವೆ ಕಾರ್ಡ್ ಹಂಚಿಕೆ ಮಾಡಿ ಮನೆಗೆ ವಾಪಸ್ಸಾಗುತ್ತಿರುವ ವೇಳೆ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಪರಿಣಾಮ ದಂಪತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದ ಸೂರ್ಯಕಾಂತ್ ಪಾಟೀಲ್ ಮಾಜಿ ಗ್ರಾಪಂ ಅಧ್ಯಕ್ಷರಾಗಿದ್ದರು ಎಂದು ತಿಳಿದು ಬಂದಿದೆ. ಧನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಇದನ್ನೂ ಓದಿ: ಕತ್ರಿನಾ, ವಿಕ್ಕಿ ಮದುವೆಗೆ ನಮಗೆ ಯಾವುದೇ ಆಹ್ವಾನ ಬಂದಿಲ್ಲ: ಸಲ್ಮಾನ್‌ ಖಾನ್‌ ಸಹೋದರಿ

  • ಮದ್ವೆ ಕರೆಯೋಲೆಯಲ್ಲಿ ರಫೇಲ್ ವಿವರಣೆ – ಪ್ರಧಾನಿಯಿಂದ ಸಿಕ್ತು ಮೆಚ್ಚುಗೆ

    ಮದ್ವೆ ಕರೆಯೋಲೆಯಲ್ಲಿ ರಫೇಲ್ ವಿವರಣೆ – ಪ್ರಧಾನಿಯಿಂದ ಸಿಕ್ತು ಮೆಚ್ಚುಗೆ

    ಗಾಂಧಿನಗರ: ಚಳಿಗಾಲದ ಅಧಿವೇಶನದಲ್ಲಿ ಕಾಂಗ್ರೆಸ್ ರಫೇಲ್ ಎಂಬ ಅಸ್ತ್ರವನ್ನು ಬಳಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿತ್ತು. ರಫೇಲ್ ವಿಮಾನಗಳ ಖರೀದಿಯಲ್ಲಿ ಪ್ರಧಾನಿ ಮೋದಿ ಅವರು ಭ್ರಷ್ಟಾಚಾರ ಎಸಗಿದ್ದಾರೆಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅರೋಪಿಸುತ್ತಾ ಬಂದಿದ್ದಾರೆ. ಇದೀಗ ಮೋದಿ ಅಭಿಮಾನಿಯೊಬ್ಬರು ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ರಫೇಲ್ ವಿಮಾನ ಖರೀದಿಗೆ ಸಂಬಂಧಿಸಿದ ಮಾಹಿತಿಗಳನ್ನು ಮುದ್ರಿಸಿದ್ದಾರೆ.

    ಗುಜರಾತ್ ರಾಜ್ಯದ ಯುವರಾಜ್ ಪೋಖರನಾ ಅವರ ಮದುವೆ ಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಂದು ಯುವರಾಜ್ ಮತ್ತು ಸಾಕ್ಷಿ ಸತಿ-ಪತಿಗಳಾಗಿದ್ದಾರೆ. ನಮ್ಮ ಆಮಂತ್ರಣ ಪತ್ರಿಕೆಯನ್ನು ಪ್ರಧಾನಿಗಳು ಸಹ ನೋಡಿದ್ದು, ಮೆಚ್ಚುಗೆ ಸೂಚಿಸಿದ್ದಾರೆ ಎಂದು ಯುವರಾಜ್ ಹೇಳುತ್ತಾರೆ.

    ಪ್ರಧಾನಿ ಬರೆದ ಪತ್ರದಲ್ಲೇನಿದೆ?
    ಯುವರಾಜ್ ಮತ್ತು ಸಾಕ್ಷಿ ಮದುವೆಗೆ ಪೋಖರನಾ ಕುಟುಂಬಕ್ಕೆ ನನ್ನ ಶುಭಾಶಯಗಳು. ಅತಿಥಿಗಳು ಕಳುಹಿಸಿರುವ ಕರೆಯೋಲೆಯಲ್ಲಿ ಈ ವಿಭಿನ್ನ ಪತ್ರ ನನ್ನನ್ನು ಸೆಳೆಯಿತು. ಪತ್ರದಲ್ಲಿ ನಿಮ್ಮ ಸರಳತೆ, ರಾಷ್ಟ್ರದ ಬಗ್ಗೆ ನಿಮ್ಮ ಕಾಳಜಿ ಹಾಗು ನಿಮ್ಮ ದೇಶ ಭಕ್ತಿಯನ್ನು ತೋರಿಸುತ್ತಿತ್ತು. ಈ ಕರೆಯೋಲೆ ನನಗೆ ದೇಶಕ್ಕಾಗಿ ಕೆಲಸ ಮಾಡುವಂತೆ ಪ್ರೇರಣೆ ನೀಡುತ್ತಿದೆ. ಹೊಸ ಜೀವನಕ್ಕೆ ಕಾಲಿಡುತ್ತಿರುವ ಯುವರಾಜ್ ಮತ್ತು ಸಾಕ್ಷಿ ಅವರಿಗೆ ಮದುವೆ ಶುಭಾಶಯಗಳು ಎಂದು ಪ್ರಧಾನಿಗಳು ಕಳಹಿಸಿದ ಪತ್ರದಲ್ಲಿ ಬರೆಯಲಾಗಿದೆ ಎಂದು ಸ್ಥಳೀಯ ಪತ್ರಿಕೆಗಳು ಪ್ರಕಟಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮದ್ವೆಗೂ ಮುನ್ನ ವಧುವಿನಿಂದ ಷರತ್ತು – ಕಂಡಿಷನ್ ಕೇಳಿ ನಾಚಿ ನೀರಾದ ವರ

    ಮದ್ವೆಗೂ ಮುನ್ನ ವಧುವಿನಿಂದ ಷರತ್ತು – ಕಂಡಿಷನ್ ಕೇಳಿ ನಾಚಿ ನೀರಾದ ವರ

    ಪಾಟ್ನಾ: ಇತ್ತೀಚಿನ ದಿನಗಳಲ್ಲಿ ಮದುವೆಗೂ ಮುಂಚೆ ವಧು ಷರತ್ತು ಹಾಕುವುದು ಸಾಮಾನ್ಯವಾಗಿದೆ. ಅದೇ ರೀತಿ ವಧುವೊಬ್ಬಳು ತಾನು ಮದುವೆಯಾಗುವ ವರನಿಗೆ ಎರಡು ಷರತ್ತುಗಳನ್ನು ವಿಧಿಸಿ ಸುದ್ದಿಯಾಗಿದ್ದಾಳೆ.

    ಬಿಹಾರದ ಪೂರ್ನಿಯಾ ಜಿಲ್ಲೆಯಲ್ಲಿ ನವೆಂಬರ್ 19 ರಂದು ಅಂದರೆ ನಾಳೆ ವರ ಕೈಸರ್ ಹಾಗೂ ವಧು ಸೋನಿ ಜೋಡಿಯ ಮದುವೆ ನಿಶ್ಚಯವಾಗಿದೆ. ಆದರೆ ವಧು ಮದುವೆಗೂ ಮುನ್ನ ವರನಿಗೆ ಎರಡು ಷರತ್ತುಗಳನ್ನು ಹಾಕಿದ್ದಾಳೆ.

    ಮನೆಯಲ್ಲಿ ಶೌಚಾಲಯ ನಿರ್ಮಾಣವಾಗಬೇಕು. ಇದು ಆಕೆಯ ಮೊದಲನೇಯ ಷರತ್ತು. ಮದುವೆಯ ಪತ್ರಿಕೆಯಲ್ಲಿ ಕುಟುಂಬ ಯೋಜನೆ (ಫ್ಯಾಮಿಲಿ ಪ್ಲ್ಯಾನಿಂಗ್) ಬಗ್ಗೆ ಸಂದೇಶ ನೀಡಬೇಕು ಎರಡನೇ ಷರತ್ತು ಹಾಕಿದ್ದಾಳೆ. ಎರಡನೇ ಕಂಡೀಷನ್ ಕೇಳಿ ವರ ನಾಚಿಕೊಂಡು ನಕ್ಕಿದ್ದಾನೆ.

    ವಧು ಸೋನುವಿನ ಎರಡು ಷರತ್ತಿಗೂ ವರ ಒಪ್ಪಿಗೆ ಸೂಚಿಸಿದ್ದಾನೆ. ಅಷ್ಟೇ ಅಲ್ಲದೇ ವಧು ಮದುವೆ ಕಾರ್ಡ್ ನಲ್ಲಿ ಕುಟುಂಬ ಯೋಜನೆ ಸ್ಲೋಗನ್ ಜೊತೆ ಸ್ವಚ್ಛತೆ ಬಗ್ಗೆ ಜಾಗೃತಿ ಹಾಗೂ ಬೇಟಿ ಬಚಾವೋ ಬೇಟಿ ಪಡಾವೋ ಬಗ್ಗೆ ಸಂದೇಶ ಹಾಕಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾಳೆ.

    ವರ ಕೈಸರ್ ಭಾವಿ ಪತ್ನಿಯ ಎಲ್ಲ ಮನವಿ ಹಾಗೂ ಷರತ್ತಿಗೂ ಖುಷಿಯಾಗಿ ಒಪ್ಪಿಕೊಂಡಿದ್ದಾನೆ. ವಧು ಸೋನು ಈ ರೀತಿಯ ಜಾಗೃತಿಯ ಸಂದೇಶವನ್ನು ಸಾರಲು ಮುಂದಾಗಿದ್ದಕ್ಕೆ ವರ ಕೈಸರ್ ತುಂಬಾ ಸಂತಸವನ್ನು ವ್ಯಕ್ತಪಡಿಸಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews