Tag: ಮದನಪಲ್ಲಿ

  • ಡಬಲ್ ಮರ್ಡರ್ ಕೇಸ್ – ಮಗಳ ನಾಲಗೆಯನ್ನು ತುಂಡರಿಸಿ ತಿಂದಳು ತಾಯಿ

    ಡಬಲ್ ಮರ್ಡರ್ ಕೇಸ್ – ಮಗಳ ನಾಲಗೆಯನ್ನು ತುಂಡರಿಸಿ ತಿಂದಳು ತಾಯಿ

    ತಿರುಪತಿ: ಆಂಧ್ರದ ಮದನಪಲ್ಲಿಯಲ್ಲಿ ಜನವರಿ 24ರಂದು ಹೆತ್ತವರೇ ಇಬ್ಬರು ಮಕ್ಕಳನ್ನು ಕೊಂದ ಪ್ರಕರಣದಲ್ಲಿ ಬೆಚ್ಚಿಬೀಳುವ ವಿಚಾರಗಳು ಬೆಳಕಿಗೆ ಬರುತ್ತಿವೆ. ತನ್ನನ್ನು ತಾಯಿ ಕಾಳಿಯ ಅಪರಾವತಾರ ಎಂದು ಭಾವಿಸಿಕೊಂಡ ನನ್ನ ಪತ್ನಿ ಪದ್ಮಜ, ದೊಡ್ಡ ಮಗಳು ಅಲೇಖ್ಯಾಳನ್ನು ಕೊಂದ ನಂತರ, ನಾಲಗೆಯನ್ನು ಕಟ್ ಮಾಡಿಕೊಂಡು ತಿಂದುಬಿಟ್ಟಳು’ ಎಂದು ಪುರುಷೋತ್ತಮ ನಾಯ್ಡು ಕಣ್ಣೀರಿಡುತ್ತಾ ವೈದ್ಯರ ಮುಂದೆ ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಈ ವಿಚಾರದಲ್ಲಿ ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ.

    ಪೂರ್ವಜನ್ಮದಲ್ಲಿ ನಂಬಿಕೆ ಇರಿಸಿದ್ದ ಅಲೇಖ್ಯಾ, ಅಪ್ಪ ನೀನು ಮಹಾಭಾರತ ನಡೆದಾಗ ಅರ್ಜುನನಾಗಿ ಜನಿಸಿದ್ದೆ. ಕಾಲೇಜಿಗೆ ಹೋಗಿ ಪಾಠ ಮಾಡುವುದು ನಿನ್ನ ವೃತ್ತಿ ಅಲ್ಲ. ಪಾಂಡವರ ಪರವಾಗಿ ಮುಂದೆ ನಿಂತು ನಡೆಸಿದ ಹೋರಾಟ ಸ್ಫೂರ್ತಿಯನ್ನು ಈಗಲೂ ಮುಂದುವರೆಸಿಕೊಂಡು ಹೋಗಬೇಕು ಎಂದು ಹೇಳುತ್ತಿದ್ದಳು ಎಂದು ಪುರುಷೋತ್ತಮ್ ನಾಯ್ಡು ವೈದ್ಯರಲ್ಲಿ ಹೇಳಿಕೊಂಡಿದ್ದಾರೆ.

    ಕಲಿಯುಗ ಅಂತ್ಯವಾಗಿ ಸತ್ಯ ಯುಗ ಆರಂಭವಾಗಲಿದೆ. ಕೊರೊನಾ ಕೂಡ ಇದರ ಸೂಚಕ ಎಂದು ಮಗಳು ಅಲೇಖ್ಯಾ ಹೇಳುತ್ತಿದ್ದಳು. “ನನ್ನ ಮಗಳ ಮಾತುಗಳೆಲ್ಲಾ ಸತ್ಯ ನಾನು ಓದಿದ ಆಧ್ಯಾತ್ಮಿಕ ಪುಸ್ತಗಳಲ್ಲಿಯೂ ಈ ವಿಷಯಗಳೇ ಇವೆ” ಎಂದು ಪುರುಷೋತ್ತಮ್ ನಾಯ್ಡು ವೈದ್ಯರಲ್ಲಿ ಹೇಳಿದ್ದಾರೆ.

    ವೈದ್ಯರ ಮುಂದೆಯೂ ಮಂತ್ರಪಠಣ ಮಾಡುತ್ತಿದ್ದ ಪದ್ಮಜ, “ನನ್ನ ಮಕ್ಕಳು ಮತ್ತೆ ಬದುಕಿ ಬರುತ್ತಾರೆ.. ಮನೆಗೆ ವಾಪಸ್ ಹೋಗಬೇಕು.. ಜೈಲಲ್ಲಿ ನನ್ನ ಜೊತೆ ಇದ್ದ ಶಿವ, ಕೃಷ್ಣ ಇಲ್ಲಿ ಕಾಣುತ್ತಿಲ್ಲ” ಎಂದು ಬಡಬಡಿಸುತ್ತಿದ್ದರು ಎನ್ನಲಾಗಿದೆ.

    ಪುರುಷೋತ್ತಮ್ ನಾಯ್ಡು ಮತ್ತು ಪದ್ಮಜ ಇಬ್ಬರಿಗೂ ಮಾನಸಿಕ ಸಮಸ್ಯೆಯ ಲಕ್ಷಣಗಳು ಹೆಚ್ಚಿವೆ. ಸದ್ಯದ ಸಂದರ್ಭದಲ್ಲಿ ಜೈಲಿನಂತಹ ವಾತಾವರಣದಲ್ಲಿ ಅವರಿಗೆ ಚಿಕಿತ್ಸೆ ನೀಡಬೇಕು ಹೀಗಾಗಿ, ವಿಶಾಖಪಟ್ಟಣದ ಸರ್ಕಾರಿ ಮಾನಸಿಕ ಚಿಕಿತ್ಸಾ ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ ಎಂದು ತಿರುಪತಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಇಬ್ಬರನ್ನು ಶುಕ್ರವಾರ ಮದನಪಲ್ಲಿಯ ಸಬ್ ಜೈಲಿನಿಂದ ತಿರುಪತಿಯ ಮೆಂಟಲ್ ಆಸ್ಪತ್ರೆಗೆ ಬಿಗಿ ಭದ್ರತೆಯಲ್ಲಿ ಕರೆತರಲಾಗಿತ್ತು.

  • ಹೆಂಡತಿಯ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ ಪತಿ

    ಹೆಂಡತಿಯ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ ಪತಿ

    ಹೈದರಾಬಾದ್: ವರದಕ್ಷಿಣೆ ಆಸೆಗೆ ವ್ಯಕ್ತಿಯೊಬ್ಬ ಹಂಡತಿಯ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿರುವ ಹೃದಯವಿದ್ರಾವಕ ಘಟನೆ ಮದನಪಲ್ಲಿ ಜಿಲ್ಲೆಯ ಕುರಬಲ ಕೋಟ ಮಂಡಲ್ ನಲ್ಲಿ ನಡೆದಿದೆ.

    ಕೇವಲ ಐದು ತಿಂಗಳ ಹಿಂದೆ ಸೈಯದ್ ಬಾಷರವರು ತನ್ನ ಮಗಳು ಶಮಿನಾ(20)ಳನ್ನು ಆಂಗಲ್ಲು ಪಂಚಾಯ್ತಿ ಪ್ರದೇಶದ ನಂದಿರೆಡ್ಡಿಪಲ್ಲೆಯ ನಿವಾಸಿ ಎಸ್.ಕೆ.ಇಸ್ಮಾಯಿಲ್ ಎಂಬವನೊಂದಿಗೆ ಮದುವೆ ಮಾಡಿಕೊಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಮದುವೆಯಾದ ದಿನದಿಂದ ಹೆಚ್ಚುವರಿ ವರದಕ್ಷಿಣೆ ತರುವಂತೆ ಶಮಿನಾ ಅತ್ತೆ ರೆಡ್ಡಿಬು ಮತ್ತು ಮಾವ ದಸ್ತಗಿರಿ ಇಬ್ಬರೂ ಕಿರುಕುಳ ನೀಡುತ್ತಿದ್ದರು. ಇದೇ ಸಂಬಂಧ ಗುರುವಾರ ಮಧ್ಯಾಹ್ನ ಶಮಿನಾಳಿಗೆ ಮತ್ತೆ ಕಿರುಕುಳ ನೀಡಿದ್ದು ಸಂಜೆ ಸುಮಾರು ಏಳು ಗಂಟೆಯ ಸಮಯಕ್ಕೆ ಎಸ್ಮಾಯಿಲ್ ಬೆಂಕಿ ಹಚ್ಚಿದ್ದಾನೆ. ಶಮಿನಾಳಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು ಶೇ.80 ರಷ್ಟು ದೇಹದ ಭಾಗ ಸುಟ್ಟಿದೆ ಮತ್ತು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎಂದು ಮದನಪಲ್ಲಿ ಎಸ್.ಐ. ವೆಂಕಟೇಶ್ವರುಲು ತಿಳಿಸಿದ್ದಾರೆ.

    ಘಟನೆ ನಂತರ ಗ್ರಾಮಸ್ಥರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಶಮಿನಾಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಪೊಲೀಸರು ಇಸ್ಮಾಯಿಲ್ ಮತ್ತು ಅವನ ಪೋಷಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

  • ಊಟದ ದುಡ್ಡಿಗಾಗಿ ಎಟಿಎಂನಲ್ಲಿ ಮಚ್ಚು ಬೀಸಿದ್ನಂತೆ ಮಧುಕರ್!

    ಬೆಂಗಳೂರು: ನಗರದ ಎಟಿಎಂನಲ್ಲಿ ಜ್ಯೋತಿ ಎಂಬವರ ಮೇಲೆ ಹಲ್ಲೆ ಮಾಡಿದ್ದ ಸೈಕೋ ಮಧುಕರ್ ರೆಡ್ಡಿ ಪೊಲೀಸರ ಮುಂದೆ ಒಂದೊಂದೇ ಮಾಹಿತಿ ಬಾಯ್ಬಿಡ್ತಿದ್ದಾನೆ. ಈತ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ಮಾಡಲು ಕಾರಣ ಊಟಕ್ಕಾಗಿ ಅಂತೆ. ಹೌದು, ಪೊಲೀಸರ ಮುಂದೆ ಅವನೇ ಹೇಳಿರೋ ಪ್ರಕಾರ ಹಣವಿಲ್ಲದೆ ಎರಡು ದಿನದಿಂದ ಊಟ ಮಾಡಿರಲಿಲ್ಲವಂತೆ.

    ಮೂರು ವರ್ಷಗಳ ಹಿಂದೆ ಆಂಧ್ರದಲ್ಲಿ ಕೊಲೆ ಮಾಡಿ, ಬೆಂಗಳೂರಿಗೆ ಓಡಿ ಬಂದೆ. ಇದ್ದ ಬದ್ದ ದುಡ್ಡು ಮುಗಿದ ಮೇಲೆ ಎರಡು ದಿನ ಊಟ ಇಲ್ಲದೇ ಹಾಗೆ ಇದ್ದೆ. ಕೊನೆಗೆ ಊಟಕ್ಕೆ ದುಡ್ಡು ಪಡೆಯೋ ಉದ್ದೇಶದಿಂದ ಹಲವಾರು ಎಟಿಎಂಗಳ ಮುಂದೆ ವಾಚ್ ಮಾಡಿದ್ದೆ. ಆದ್ರೆ ಜನ ದಟ್ಟಣೆಯ ಕಾರಣಕ್ಕೆ ಭಯ ಆಗಿತ್ತು. ಕೊನೆಗೆ ಕಾರ್ಪೊರೇಷನ್ ಎಟಿಎಂಗೆ ಮಹಿಳೆಯೊಬ್ಬರು ಹೋಗಿದ್ದನ್ನು ನೋಡಿ ಅಂದು ಬೆಳಗ್ಗೆ ಯಾರೂ ಇಲ್ಲದಿದ್ದಾಗ ಎಟಿಎಂಗೆ ನುಗ್ಗಿದೆ. ಎಟಿಎಂ ಕಾರ್ಡ್ ಕಸಿದುಕೊಂಡು ಪಿನ್ ನಂಬರ್ ಕೇಳಿದೆ. ಆದ್ರೆ ಅವರು ಹೇಳಲಿಲ್ಲ. ಹಾಗಾಗಿ ಮಹಿಳೆ ಮೇಲೆ ಹಲ್ಲೆ ಮಾಡಿದೆ ಅಂತ ಪೊಲೀಸರ ಮುಂದೆ ಹೇಳಿದ್ದಾನೆ.

    ಆಂಧ್ರದಲ್ಲಿ ಕೊಲೆ ಮಾಡಿ ಬಂದಿದ್ದ ಮಧುಕರ್, ದುಡ್ಡು ಮುಗಿದ ಮೇಲೆ ಕಬ್ಬನ್‍ಪಾರ್ಕ್‍ನಲ್ಲಿ ಎರಡು ದಿನ ಕಾಲ ಕಳೆದಿದ್ದ. ಅದೆಲ್ಲಿಂದಲೋ ಒಂದು ಮಚ್ಚನ್ನು ಕದ್ದಿದ್ದ. ಇದೇ ಮಚ್ಚನ್ನು ಎಟಿಎಂನಲ್ಲಿ ಬಳಸಿದೆ ಅಂತ ಹೇಳಿದ್ದಾನೆ. ಸದ್ಯ ಬೆಂಗಳೂರಿನ ಕ್ರೈಂ ಬ್ರಾಂಚ್ ಪೊಲೀಸರು ಮದನಪಲ್ಲಿಯಲ್ಲಿ ಬೀಡು ಬಿಟ್ಟು ಮತ್ತಷ್ಟು ಮಾಹಿತಿ ಕಲೆ ಹಾಕ್ತಿದ್ದಾರೆ.