Tag: ಮತಾಂತರ ನಿಷೇಧ ಮಸೂದೆ

  • ಮತಾಂತರ ನಿಷೇಧ ಕಾಯ್ದೆ ಜಾರಿ RSS ಅಜೆಂಡಾ: ಸಿದ್ದರಾಮಯ್ಯ

    ಮತಾಂತರ ನಿಷೇಧ ಕಾಯ್ದೆ ಜಾರಿ RSS ಅಜೆಂಡಾ: ಸಿದ್ದರಾಮಯ್ಯ

    ಬೆಳಗಾವಿ: ರಾಜ್ಯ ಸರ್ಕಾರ ತರಲು ಹೊರಟಿರುವ ಮತಾಂತರ ನಿಷೇಧ ಕಾಯಿದೆ ವ್ಯಕ್ತಿ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ. ಇದು ಸಂವಿಧಾನ ವಿರೋಧಿ ಕಾನೂನು. ಇದು ಆರ್‌ಎಸ್‌ಎಸ್‌ನವರ ಅಜೆಂಡಾ. ಈ ಸರ್ಕಾರ ಸಾಧನೆ ಎಂದು ಹೇಳಿಕೊಳ್ಳಲು ಯಾವ ಕೆಲಸಗಳನ್ನು ಮಾಡಿಯೇ ಇಲ್ಲ, ಹಾಗಾಗಿ ಇಂಥದ್ದೊಂದು ವಿವಾದಾತ್ಮಕ ಕಾನೂನು ಜಾರಿ ಮಾಡಿ ಎಂದು ಆರ್‌ಎಸ್‌ಎಸ್‌ನವರೇ ಸರ್ಕಾರಕ್ಕೆ ಹೇಳಿರುತ್ತಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹರಿಹಾಯ್ದರು.

    ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ಸದನದಲ್ಲಿ ಮಂಡಿಸಿದ ಬಳಿಕ ಸಭಾತ್ಯಾಗ ಮಾಡಿ ಮಾಧ್ಯಮದವರ ಜೊತೆ ಮಾತನಾಡಿದ ಸಿದ್ದರಾಮಯ್ಯ, ಪರಿಷತ್ ಚುನಾವಣೆಯ ಫಲಿತಾಂಶ ಇಂಥದ್ದೊಂದು ವಿವಾದಾತ್ಮಕ ಕಾನೂನು ಜಾರಿ ಮಾಡಲು ಕಾರಣ. ನಮಗೆ 45% ಮತ ಬಿದ್ದಿದೆ, ಬಿಜೆಪಿಗೆ 41% ಮತ ಬಿದ್ದಿದೆ. ಹೋದ ಮಾನ ಉಳಿಸಿಕೊಳ್ಳಲು ಸರ್ಕಾರ ಸಂವಿಧಾನ ಬಾಹಿರ ಕಾನೂನು ಜಾರಿ ಮಾಡಲು ಹೊರಟಿದೆ. ಭಾರತದ ಸಂವಿಧಾನದ ಆಧಾರದ ಮೇಲೆ ಸರ್ಕಾರ ನಡೆಸಬೇಕು, ಪಾಕಿಸ್ತಾನದ ಸಂವಿಧಾನ ನೋಡಿಕೊಂಡಲ್ಲ. ಈಶ್ವರಪ್ಪ ಅವರಿಗೆ ನಮ್ಮ ಸಂವಿಧಾನದ ಬಗ್ಗೆ ಗೊತ್ತಿಲ್ಲ ಎಂದು ಕಾಣುತ್ತದೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಮತಾಂತರ ನಿಷೇಧ ಮಸೂದೆಯನ್ನು ಹರಿದು ಹಾಕಿದ್ದೇನೆ, ಇದು ನನ್ನ ಹಕ್ಕು: ಡಿಕೆಶಿ

    ಕದ್ದು ಮುಚ್ಚಿ ಮಸೂದೆ ಮಂಡನೆ: ಕಲಾಪದ ಇಂದಿನ ಅಜೆಂಡಾದಲ್ಲಿ ಮತಾಂತರ ನಿಷೇಧ ಕಾಯ್ದೆಯ ಪ್ರಸ್ತಾಪ ಇರಲಿಲ್ಲ. ಇಂದು ಮಧ್ಯಾಹ್ನ ಊಟದ ವಿರಾಮಕ್ಕೆ ತೆರಳುವ ಮೊದಲು ಆರ್.ಅಶೋಕ್ ಅವರು ನೆರೆ, ಅತಿವೃಷ್ಟಿ ಪರಿಹಾರ ಕಾರ್ಯದ ಉತ್ತರ ನೀಡಲು ಆರಂಭ ಮಾಡಿದ್ದರು. ಉತ್ತರ ಮುಗಿದ ಮೇಲೆ ಬೇರೆ ವಿಷಯ ಕೈಗೆತ್ತಿಕೊಳ್ಳುವುದು ನಿಯಮ. ಆದರೆ ಸರ್ಕಾರ ಹೆಚ್ಚುವರಿ ಅಜೆಂಡಾವನ್ನು ಸೇರಿಸಿ ಇದ್ದಕ್ಕಿದ್ದಂತೆ ಮತಾಂತರ ನಿಷೇಧ ಕಾಯಿದೆಯನ್ನು ಪ್ರಸ್ತಾಪ ಮಾಡಿ, ಸದನದ ಮತಕ್ಕೆ ಹಾಕಿತು. ಸರ್ಕಾರ ಸಭಾಧ್ಯಕ್ಷರ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಕದ್ದು ಮುಚ್ಚಿ ಮಸೂದೆಯನ್ನು ಮಂಡಿಸಿದೆ. ಈ ಮಸೂದೆ ಮಂಡನೆಗೆ ಅಂತಹಾ ತುರ್ತು ಏನಿತ್ತು? ನಾಳೆ ಅಥವಾ ನಾಡಿದ್ದು ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲು ಸರ್ಕಾರದ ಬಳಿ ಸಮಯವಿತ್ತು. ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶದಲ್ಲಿ ಈ ಕಾನೂನು ಜಾರಿ ಮಾಡಿದ್ದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ಗುಜರಾತ್ ನ್ಯಾಯಾಲಯ ಮತಾಂತರ ನಿಷೇಧ ಕಾನೂನಿಗೆ ತಡೆಯಾಜ್ಞೆ ನೀಡಿದೆ. ಇನ್ನೂ ಕೆಲವು ರಾಜ್ಯಗಳಲ್ಲಿ ಕಾಯ್ದೆ ಜಾರಿಯನ್ನು ತಡೆಹಿಡಿಯಲಾಗಿದೆ ಎಂದರು. ಇದನ್ನೂ ಓದಿ: ಪ್ರತಿಪಕ್ಷಗಳ ವಿರೋಧದ ನಡುವೆಯೂ ಮತಾಂತರ ನಿಷೇಧ ಮಸೂದೆ ಮಂಡನೆ

    ಅವರವರ ಹಕ್ಕು: ಸಂವಿಧಾನದ 25ನೇ ಆರ್ಟಿಕಲ್ ವ್ಯಕ್ತಿಗೆ ಯಾವುದೇ ಧರ್ಮವನ್ನು ಅನುಸರಿಸುವ, ಸ್ವೀಕರಿಸುವ, ಪ್ರಚಾರ ಮಾಡುವ ಹಕ್ಕು ನೀಡಿದೆ. ಮಹಿಳೆ ಅಥವಾ ಪುರುಷನ ಸಂಗಾತಿ ಆಯ್ಕೆಯ ಹಕ್ಕನ್ನು ಈ ಕಾಯ್ದೆ ಕಸಿಯಲು ಹೊರಟಿದೆ. ಯಾರು ಯಾರನ್ನು ಮದುವೆಯಾಗಬೇಕು ಎಂದು ಸರ್ಕಾರ ನಿರ್ಧಾರ ಮಾಡಲು ಬರುತ್ತಾ? ಈ ಕಾನೂನು ಸಂವಿಧಾನ ಬಾಹಿರವಾಗಿದೆ ಎಂದು ಹೇಳಲು ನಮಗೆ ಅವಕಾಶವನ್ನೇ ನೀಡಿಲ್ಲ. ಕದ್ದು ಮುಚ್ಚಿ ಕಾಯಿದೆ ಜಾರಿ ಮಾಡುವ ಅಗತ್ಯವೇನಿದೆ? ಆರ್.ಅಶೋಕ್ ಅವರು ಅತಿವೃಷ್ಟಿ, ಪ್ರವಾಹ ಪರಿಹಾರ ಕಾರ್ಯದ ಬಗ್ಗೆ ಉತ್ತರ ನೀಡುತ್ತಿದ್ದಾರೆ. ಸಂವಿಧಾನ ಬಾಹಿರವಾಗಿರುವ ಸರ್ಕಾರ ನೀಡುವ ಉತ್ತರ ನಾವು ಕೇಳಲು ಸಿದ್ಧರಿಲ್ಲ. ಹೀಗಾಗಿ ಸಭಾತ್ಯಾಗ ಮಾಡಿದ್ದೇವೆ. ನಾಳೆ ನಡೆಯುವ ಕಲಾಪದ ಚರ್ಚೆಯಲ್ಲಿ ಭಾಗವಹಿಸುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಮತಾಂತರ ನಿಷೇಧ ಜೊತೆಗೆ ಪಕ್ಷಾಂತರ ನಿಷೇಧ ಕಾನೂನನ್ನೂ ಜಾರಿಗೆ ತರಲಿ: ಸಿ.ಎಂ ಇಬ್ರಾಹಿಂ

    ಸರ್ಕಾರದ ಬಣ್ಣ ಬಯಲು ಮಾಡುತ್ತೇವೆ!: ರಾಜ್ಯದಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳಿವೆ. ಕೊರೊನಾದಿಂದ ಸತ್ತವರಿಗೆ ಪರಿಹಾರ ನೀಡಿಲ್ಲ, ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಮನೆ ಕೊಟ್ಟಿಲ್ಲ, ಬೆಳೆ ಪರಿಹಾರ ನೀಡಿಲ್ಲ, ಅಂಗನವಾಡಿ, ಶಾಲೆ, ರಸ್ತೆ, ಸೇತುವೆಗಳು ಬಿದ್ದು ಹೋಗಿವೆ. ಅದನ್ನು ಸರಿ ಮಾಡಿಲ್ಲ. ಅವೆಲ್ಲಾ ಬಿಟ್ಟು ಜನರನ್ನು ಭಾವನಾತ್ಮಕವಾಗಿ ದಾರಿ ತಪ್ಪಿಸಲು ಮತಾಂತರ ನಿಷೇಧ ಕಾಯಿದೆಗೆ ಕದ್ದುಮುಚ್ಚಿ ಅನುಮೋದನೆ ಪಡೆಯಲು ಹೊರಟಿದ್ದಾರೆ. ಒಟ್ಟಿನಲ್ಲಿ ಜನರ ಗಮನ ಬೇರೆ ಕಡೆ ಸೆಳೆಯುವುದೇ ಕಾಯಿದೆಯ ಉದ್ದೇಶ. ನಾಳೆ ನಡೆಯುವ ಚರ್ಚೆಯಲ್ಲಿ ಭಾಗವಹಿಸಿ, ತೀವ್ರವಾಗಿ ವಿರೋಧ ಮಾಡುತ್ತೇವೆ. ಸದನದಲ್ಲಿ ಸರ್ಕಾರದ ಬಣ್ಣ ಬಯಲು ಮಾಡುತ್ತೇವೆ. ಸದನವನ್ನು ಶುಕ್ರವಾರವೇ ಮುಗಿಸಬೇಕು ಎಂಬ ನಿಯಮವಿದೆಯೇ? ಇನ್ನೂ ಒಂದು ವಾರ ವಿಸ್ತರಿಸಲು ಅವಕಾಶ ಇಲ್ಲವಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

  • ಮತಾಂತರ ನಿಷೇಧ ಮಸೂದೆಯನ್ನು ಹರಿದು ಹಾಕಿದ್ದೇನೆ, ಇದು ನನ್ನ ಹಕ್ಕು: ಡಿಕೆಶಿ

    ಮತಾಂತರ ನಿಷೇಧ ಮಸೂದೆಯನ್ನು ಹರಿದು ಹಾಕಿದ್ದೇನೆ, ಇದು ನನ್ನ ಹಕ್ಕು: ಡಿಕೆಶಿ

    ಬೆಳಗಾವಿ: ಮತಾಂತರ ನಿಷೇಧ ಮಸೂದೆಯನ್ನು ನಾನು ಹರಿದು ಹಾಕಿದ್ದೇನೆ, ಇದು ನನ್ನ ಹಕ್ಕು. ಅವರು ಏನು ಮಾಡುತ್ತಾರೋ ಮಾಡಲಿ. ಈ ಮಸೂದೆ ಸಂವಿಧಾನಕ್ಕೆ ವಿರುದ್ಧವಾದುದ್ದು. ಸರ್ಕಾರ ಕಳ್ಳರಂತೆ ವರ್ತಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕಿಡಿಕಾರಿದ್ದಾರೆ.

    ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಸದನದಲ್ಲಿ ಸಮಯಾವಕಾಶ ಇದ್ದರೂ ಕಾಯಲಿಲ್ಲ. ಕಂದಾಯ ಸಚಿವರು ಉತ್ತರ ನೀಡುವ ಸಂದರ್ಭದಲ್ಲಿ ಅವರ ಮಾತು ಮುಗಿಸಿ, ನಂತರ ನಮ್ಮ ಸಮ್ಮುಖದಲ್ಲೇ ಮಂಡನೆ ಮಾಡಬಹುದಿತ್ತು. ನಾವು ಕೂಡ ಪ್ರಸ್ತಾವನೆ ಸಂದರ್ಭದಲ್ಲೇ ಇದನ್ನು ಆಕ್ಷೇಪಿಸಲು ಸಿದ್ಧರಿದ್ದೆವು. ಸರ್ಕಾರ ಮಸೂದೆ ಮಂಡಿಸಿ ನಂತರ ಮತಕ್ಕೆ ಹಾಕಲು ಅವಕಾಶ ಮಾಡಿ ಕೊಡಬೇಕಿತ್ತು. ಬಹುಮತದ ಆಧಾರದ ಮೇಲೆ ತೀರ್ಮಾನ ಕೈಗೊಳ್ಳಬಹುದಿತ್ತು. ಆದರೆ ಸ್ಪೀಕರ್ ಅವರು ರಾಜಕೀಯ ಪಕ್ಷದ ಸದಸ್ಯರಂತೆ ನಡೆದುಕೊಂಡಿದ್ದಾರೆ. ಅವರು ಕಾನೂನಿನ ಪ್ರಕಾರವಾಗಿ ನಡೆದುಕೊಂಡಿಲ್ಲ ಎಂದು ಆರೋಪಿಸಿದರು. ಇದನ್ನೂ ಓದಿ: ಪ್ರತಿಪಕ್ಷಗಳ ವಿರೋಧದ ನಡುವೆಯೂ ಮತಾಂತರ ನಿಷೇಧ ಮಸೂದೆ ಮಂಡನೆ

    ನಾವು ಯಾರನ್ನೂ ನಂಬಲ್ಲ: ಜೆಡಿಎಸ್ ಬೆಂಬಲ ಪಡೆಯುವ ಬಗ್ಗೆ ಯಡಿಯೂರಪ್ಪ ಅವರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಜೆಡಿಎಸ್‌ಗೆ ಬಿಟ್ಟ ವಿಚಾರ. ಗೋಹತ್ಯೆ ನಿಷೇಧ ಮಸೂದೆ ಮಂಡನೆ ಸಮಯದಲ್ಲಿ ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ. ಈಗಲೂ ಅವರು ವಿರೋಧಿಸುತ್ತೇವೆ ಎಂದು ಹೇಳಿ, ನಂತರ ಹಿಂದೆ ಸರಿಯುತ್ತಾರೆ. ನಾವು ಇಲ್ಲಿ ಯಾರನ್ನೂ ನಂಬಲು ಸಾಧ್ಯವಿಲ್ಲ. ಇದು ನಮ್ಮ ಅನುಭವ. ನಮಗೆ ಬಹುಮತ ಇದೆಯೋ, ಇಲ್ಲವೋ ಬೇರೆ ವಿಚಾರ. ಆದರೆ ಈ ಮಸೂದೆ ಸಂವಿಧಾನ ವಿರುದ್ಧವಾಗಿದೆ. ಈ ಮಸೂದೆಯಲ್ಲಿ ಶಿಕ್ಷಣ ಸಂಸ್ಥೆಗಳು ಉಚಿತ ಶಿಕ್ಷಣ ನೀಡುವ ಆಮಿಷ ನೀಡಲಾಗುತ್ತಿದೆ ಎಂಬ ಅಸಂಬದ್ಧ ಅಂಶಗಳಿವೆ ಎಂದರು.

    ಒಂದು ವರ್ಗ ಗುರಿಯಾಗಿಸಲು ಮಸೂದೆ: ಮತಾಂತರ ನಿಷೇಧ ಹಾಗೂ ಲವ್ ಜಿಹಾದ್ ಅನ್ನು ಒಂದೇ ಮಸೂದೆಯಲ್ಲಿ ತರಲಾಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಮದುವೆಯು ನಂಬಿಕೆ, ಪರಸ್ಪರ ಒಪ್ಪಿಗೆ ಹಾಗೂ ಪ್ರೀತಿಯ ಸಂಬಂಧದ ಆಧಾರದ ಮೇಲೆ ನಡೆಯುತ್ತದೆ. ಮದುವೆಯನ್ನು ಬಲವಂತವಾಗಿ ಮಾಡಲು ಸಾಧ್ಯವಿಲ್ಲ. ಇಂತಹ ಮದುವೆಯನ್ನು ಅವರು ಅಸಿಂಧು ಮಾಡಲು ಹೇಗೆ ಸಾಧ್ಯ? ಸಂವಿಧಾನದ 21 ನೇ ಪರಿಚ್ಛೇದ ಏನು ಹೇಳುತ್ತದೆ? ಅನೇಕ ಪ್ರಕರಣಗಳಲ್ಲಿ ನ್ಯಾಯಾಲಯದ ತೀರ್ಪು ಏನು? ಮತಾಂತರ ವಿಚಾರದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದೇನು? ಇದು ಕೇವಲ ಕ್ರೈಸ್ತರಿಗೆ ಮಾತ್ರ ಸೀಮಿತವಾದುದಲ್ಲ. ಎಲ್ಲ ಧರ್ಮಕ್ಕೆ ಸಂಬಂಧಿಸಿದ್ದು, ಒಂದು ವರ್ಗವನ್ನು ಗುರಿಯಾಗಿಸಲು ಹಾಗೂ ಶೋಷಣೆ ಮಾಡಲು ಈ ಮಸೂದೆ ತರಲಾಗಿದೆ ಎಂದರು. ಇದನ್ನೂ ಓದಿ: ಮತಾಂತರ ನಿಷೇಧ ಜೊತೆಗೆ ಪಕ್ಷಾಂತರ ನಿಷೇಧ ಕಾನೂನನ್ನೂ ಜಾರಿಗೆ ತರಲಿ: ಸಿ.ಎಂ ಇಬ್ರಾಹಿಂ

    ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮತಾಂತರಗೊಂಡಾಗ ದೊಡ್ಡ ಪ್ರಮಾಣದಲ್ಲಿ ಸಾಮೂಹಿಕ ಮತಾಂತರ ನಡೆಯಿತು. ಇದು ಭಾರತದ ಇತಿಹಾಸ. ರಾಜ್ಯದಲ್ಲಿ ಅನೇಕ ವೈದ್ಯಕೀಯ, ಇಂಜಿನಿಯರಿಂಗ್, ಪದವಿ ಕಾಲೇಜು ಹಾಗೂ ಶಾಲೆಗಳು ಇವೆ. ಆಸ್ಪತ್ರೆಗಳು, ಧಾರ್ಮಿಕ ಸಂಸ್ಥೆಗಳಿವೆ. ಆದರೂ ಸಚಿವರ ಮಕ್ಕಳು ಕ್ರೈಸ್ತ ಸಮುದಾಯದ ಶಿಕ್ಷಣ ಸಂಸ್ಥೆಗಳಲ್ಲೇ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಮುಂದಾಗುತ್ತಾರೆ. ಈಗಲೂ ಕೇಂದ್ರದ ಹಲವು ಸಚಿವರ ಮಕ್ಕಳು ಕ್ರೈಸ್ತ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿದ್ದಾರೆ. ಈ ಮಸೂದೆ ರಾಜ್ಯದಲ್ಲಿ ಮುಂದೆ ಬರಬಹುದಾದ ಬಂಡವಾಳ ಹೂಡಿಕೆ ಮೇಲೂ ಕೆಟ್ಟ ಪರಿಣಾಮ ಬೀರಲಿದೆ. ವಿದೇಶಿ ಬಂಡವಾಳ ಹೂಡಿಕೆದಾರರು ರಾಜ್ಯಕ್ಕೆ ಬರಲು ಹಿಂದೇಟು ಹಾಕುತ್ತಾರೆ. ಹೀಗಾಗಿ ಕಾಂಗ್ರೆಸ್ ಪಕ್ಷ ಇದರ ವಿರುದ್ಧ ಹೋರಾಡುತ್ತದೆ. ನಾವು ಜನರ ಮುಂದೆ ಹೋಗುತ್ತೇವೆ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಈ ಮಸೂದೆಯನ್ನು ಹಿಂಪಡೆಯಲಿದೆ ಎಂದರು.

    ತಹಶೀಲ್ದಾರ್‌ ವರ್ಗಾವಣೆ ಏಕೆ?: ಚಿತ್ರದುರ್ಗದಲ್ಲಿ ಒಂದೇ ಒಂದು ಬಲವಂತದ ಮತಾಂತರ ಆಗಿಲ್ಲ ಎಂದು ವರದಿ ನೀಡಿರುವ ತಹಶೀಲ್ದಾರರನ್ನು ವರ್ಗಾವಣೆ ಮಾಡಿರುವ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಶಾಸಕರೊಬ್ಬರು ಹುಚ್ಚರಂತೆ ಮಾತನಾಡುತ್ತಿದ್ದಾರೆ. ಅವರ ತಾಯಿ ವಿಚಾರದಲ್ಲಿ ಏನಾಗಿದೆಯೋ ಅದು ಅವರ ವೈಯಕ್ತಿಕ ವಿಚಾರ. ಆದರೆ ಚಿತ್ರದುರ್ಗ ತಹಶೀಲ್ದಾರ್ ಅವರು ವರದಿ ನೀಡಿದಾಗ ವರ್ಗಾವಣೆ ಮಾಡಿರುವುದೇಕೆ? ಕೇವಲ ಇದೊಂದೇ ಅಲ್ಲ, ಶಿಕ್ಷೆ, ಸಾಕ್ಷ್ಯಾಧಾರ ಸೇರಿದಂತೆ ಅನೇಕ ವಿಚಾರಗಳು ಇದರಲ್ಲಿ ಅಡಗಿವೆ ಎಂದರು. ಇದನ್ನೂ ಓದಿ: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆಯ ಅವಶ್ಯಕತೆ ಏನಿದೆ?: ಎಚ್.ಡಿ ರೇವಣ್ಣ

    ಮತಾಂತರ ಆಗುವ ಮುನ್ನ ಅಥವಾ ನಂತರ ಅವರು ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಂದೆ ಹೋಗಬೇಕು ಎಂಬ ಅಂಶವಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಮತಾಂತರ ಆಗಲು ಮ್ಯಾಜಿಸ್ಟ್ರೇಟ್ ಮುಂದೆ ಅರ್ಜಿ ಹಾಕಬೇಕಂತೆ. ಇದು ಈ ದೇಶದಲ್ಲಿ ಸಾಧ್ಯವೇ? ಈ ದೇಶದ ಅನೇಕ ಹಿಂದೂ ಧಾರ್ಮಿಕ ಸಂಸ್ಥೆಗಳಲ್ಲಿ ವಿದೇಶದಿಂದ ಬಂದ ಅನೇಕರು ಭಜನೆ ಮಾಡುತ್ತಾರೆ. ಇದನ್ನು ತಡೆಯಲು ಸಾಧ್ಯವೇ? ಇದು ಬಲವಂತದಿಂದ ಮಾಡಲಾಗುತ್ತಿದೆಯೇ ಎಂದು ಅವರು ಪ್ರಶ್ನಿಸಿದರು.

  • ಪ್ರತಿಪಕ್ಷಗಳ ವಿರೋಧದ ನಡುವೆಯೂ ಮತಾಂತರ ನಿಷೇಧ ಮಸೂದೆ ಮಂಡನೆ

    ಪ್ರತಿಪಕ್ಷಗಳ ವಿರೋಧದ ನಡುವೆಯೂ ಮತಾಂತರ ನಿಷೇಧ ಮಸೂದೆ ಮಂಡನೆ

    ಬೆಳಗಾವಿ: ಪ್ರತಿಪಕ್ಷಗಳ ತೀವ್ರ ವಿರೋಧದ, ಗದ್ದಲದ ನಡುವೆಯೂ ಮಂಗಳವಾರ ವಿಧಾನಸಭೆಯಲ್ಲಿ ಮತಾಂತರ ನಿಷೇಧ ಮಸೂದೆಯನ್ನು ಮಂಗಳವಾರ ಮಂಡಿಸಲಾಯಿತು. ಭೋಜನ ನಂತರ ಕಲಾಪದ ಬಳಿಕ ವಿಧೇಯಕವನ್ನು ದಿಢೀರ್ ವಿಧೇಯಕ ಮಂಡಿಸಲಾಗಿದೆ.

    ಕಾಂಗ್ರೆಸ್ ವಿರೋಧಿಸುತ್ತಿದ್ದರೂ ಗೃಹ ಸಚಿವ ಆರಗ ಜ್ಞಾನೇಂದ್ರ ಮಸೂದೆ ಮಂಡಿಸಲು ಮುಂದಾದರು. ಈ ವೇಳೆ ಮಸೂದೆ ಮಂಡನೆಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದರು. ಇದನ್ನೂ ಓದಿ: ಮತಾಂತರ ನಿಷೇಧ ಜೊತೆಗೆ ಪಕ್ಷಾಂತರ ನಿಷೇಧ ಕಾನೂನನ್ನೂ ಜಾರಿಗೆ ತರಲಿ: ಸಿ.ಎಂ ಇಬ್ರಾಹಿಂ

    ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣಾ ಹಕ್ಕು-2021 ತಿದ್ದುಪಡಿ ಮಸೂದೆ ಮಂಡಿಸಲಾಯಿತು. ಹೆಚ್ಚುವರಿ ಕಾರ್ಯಸೂಚಿಯಲ್ಲಿ ಮಸೂದೆ ಮಂಡನೆ ಬಗ್ಗೆ ಪ್ರಸ್ತಾಪಿಸಲಾಗಿದೆ. ಚರ್ಚೆ ಮಾಡಿ ಎಂದು ಸ್ಪೀಕರ್ ವಿಶೇಶ್ವರ ಹೆಗಡೆ ಕಾಗೇರಿ ಹೇಳಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು, ಚರ್ಚೆ ಮಾಡಿ ಮೊದಲು ಎಂದು ಮನವಿ ಮಾಡಿದರು. ಆಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕದ್ದು ಮುಚ್ಚಿ ಮಸೂದೆ ಯಾಕೆ ಮಾಡಿದ್ದೀರಿ ಎಂದು ಖಾರವಾಗಿ ಪ್ರಶ್ನಿಸಿದರು. ಶಿವಕುಮಾರ್ ಮಾತು ವಾಪಸ್ ತೆಗೆದುಕೊಳ್ಳಬೇಕು. ಕದ್ದುಮುಚ್ಚಿ ಮಾಡಿಲ್ಲ, ಅಜೆಂಡಾದಲ್ಲಿ ತಂದೇ ಮಾಡಿರುವುದು ಎಂದ ಸ್ಪೀಕರ್ ಪ್ರತ್ಯುತ್ತರ ನೀಡಿದರು. ಆಗ ವಿಧಾನಸಭೆಯಲ್ಲಿ ಕಾಂಗ್ರೆಸ್ ಗದ್ದಲ ಎಬ್ಬಿಸಿತು. ಸರ್ಕಾರ ಕಳ್ಳತನದಿಂದ ಮಸೂದೆ ಮಂಡನೆ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು. ಶೇಮ್ ಶೇಮ್ ಎಂದು ಕಾಂಗ್ರೆಸ್ ಸದಸ್ಯರ ಗದ್ದಲ ಸೃಷ್ಟಿಸಿದರು.

    ನಿನ್ನೆ ಮಸೂದೆ ಮುದ್ರಣ ಆಗಿರಲಿಲ್ಲ, ಅದಕ್ಕೆ ನಿನ್ನೆ ಅಜೆಂಡಾದಲ್ಲಿ ಸೇರಿಸಿರಲಿಲ್ಲ. ಇವತ್ತು ಮುದ್ರಣ ಆಗಿ ತಂದರು. ಇವತ್ತೇ ಮಾಡಿ ಅಂತಾ ಸರ್ಕಾರ ಹೇಳಿದ ಮೇಲೆ ಹೆಚ್ಚುವರಿ ಅಜೆಂಡಾದಲ್ಲಿ ಸೇರಿಸಿದ್ದು. ಕದ್ದುಮುಚ್ಚಿ ಮಾಡಿಲ್ಲ, ಚರ್ಚೆ ಮಾಡಿ. ಕಾನೂನಿನ ಪ್ರಕಾರವೇ ಮಸೂದೆ ಮಂಡನೆಗೆ ಅವಕಾಶ ಕೊಡಲಾಗಿದೆ. ನಾಳೆ ಚರ್ಚೆಗೆ ಅವಕಾಶ ಕೊಡುತ್ತೇವೆ ಎಂದು ಸ್ಪೀಕರ್ ತಿಳಿಸಿದರು. ಇದನ್ನು ಒಪ್ಪದ ಸಿದ್ದರಾಮಯ್ಯ, ಇದೊಂದು ಕೆಟ್ಟ ಸರ್ಕಾರ, ವಿಧಾನಸಭೆ ನಡೆಸೋದು ಹೀಗೆನಾ ಎಂದು ಖಾರವಾಗಿ ಪ್ರಶ್ನಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆಯ ಅವಶ್ಯಕತೆ ಏನಿದೆ?: ಎಚ್.ಡಿ ರೇವಣ್ಣ

    ಈ ವೇಳೆ ವಿಧಾನಸಭೆಯಲ್ಲಿ ಅತಿವೃಷ್ಟಿ ಹಾನಿ ಬಗ್ಗೆ ನಡೆದ ಚರ್ಚೆಗೆ ಸರ್ಕಾರದ ಉತ್ತರ ಕೊಡಲು ಸ್ಪೀಕರ್ ಸೂಚನೆ ನೀಡಿದರು. ಉತ್ತರ ಕೊಡಲು ಕಂದಾನ ಸಚಿವ ಅಶೋಕ್ ಎದ್ದು ನಿಂತಾಗ, ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿ, ಈ ಬಿಲ್ ಅಷ್ಟು ಅರ್ಜೆಂಟ್ ಇತ್ತಾ ಎಂದು ಪ್ರಶ್ನಿಸಿದರು. ಆಗ ಡಿ.ಕೆ.ಶಿವಕುಮಾರ್ ಮಸೂದೆ ಪ್ರತಿಯನ್ನು ಹರಿದು ಹಾಕಿದರು. ಡಿಕೆಶಿ ನೀವು ಹಿರಿಯ ಶಾಸಕರು, ಬಿಲ್ ಹರಿದು ಹಾಕಿದ್ದು ಸರಿಯಲ್ಲ. ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಮತಾಂತರ ನಿಷೇಧ ಮಸೂದೆ ಸಂವಿಧಾನಕ್ಕೆ ವಿರುದ್ಧವಾಗಿದೆ: ಡಿಕೆಶಿ

    ಮಸೂದೆಗೆ ಜೆಡಿಎಸ್ ನಿಂದಲೂ ವಿರೋಧ ವ್ಯಕ್ತವಾಯಿತು. ಮತಾಂತರ ನಿಷೇಧ ಮಸೂದೆ ವಿರೋಧಿಸಿ ಕಾಂಗ್ರೆಸ್ ಸಭಾತ್ಯಾಗ ಮಾಡಿತು.

    ಮತಾಂತರ ನಿಷೇಧ ವಿಧೇಯಕದಲ್ಲಿ ಇರುವ ಪ್ರಮುಖ ಅಂಶಗಳೇನು?
    * ಬಲವಂತ, ವಂಚನೆ, ಒತ್ತಾಯ ಹಾಗೂ ಆಮಿಷದ ಮೂಲಕ ನಡೆಸುವ ಮತಾಂತರ ಹಾಗೂ ಮದುವೆಯಾಗುವ ಭರವಸೆಯ ಮೂಲಕ ನಡೆಸುವ ಮತಾಂತರಕ್ಕೆ ನಿಷೇಧವಿದೆ.

    * ವ್ಯಕ್ತಿಯು ಆತನ ನಿಕಟ ಪೂರ್ವ ಧರ್ಮಕ್ಕೆ ಮರು ಮತಾಂತರಗೊಂಡರೆ ಅದನ್ನು ಈ ಅಧಿನಿಯಮದ ಅಡಿಯಲ್ಲಿ ಮತಾಂತರವೆಂದು ಪರಿಗಣಿಸಲಾಗುವುದಿಲ್ಲ

    * ಮತಾಂತರಗೊಂಡ ವ್ಯಕ್ತಿಯ ಪೋಷಕರು, ಸಹೋದರ, ಸಹೋದರಿ, ಸಹವರ್ತಿ ಅಥವಾ ಸಹೋದ್ಯೋಗಿಗಳಿಗೂ ಮತಾಂತರದ ಬಗ್ಗೆ ದೂರನ್ನು ನೀಡಿದರೆ ಎಫ್ ಐಆರ್ ದಾಖಲಿಸುವ ಅವಕಾಶವಿದೆ.

    * ಬಲವಂತದ ಮತಾಂತರಕ್ಕೆ ಮೂರು ವರ್ಷದಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ಇಪ್ಪತ್ತೈದು ಸಾವಿರ ರೂಪಾಯಿಗಳ ದಂಡ ವಸೂಲಾತಿಗೆ ಅವಕಾಶವಿದೆ.

    * ಅಪ್ರಾಪ್ತರು, ಬುದ್ದಿಮಾಂದ್ಯ ವ್ಯಕ್ತಿಗಳು, ಸೇರಿದ ವ್ಯಕ್ತಿಯ ಬಲವಂತದ ಮತಾಂತರಕ್ಕೆ ಮೂರು ವರ್ಷದಿಂದ ಹತ್ತು ವರ್ಷಗಳ ವರೆಗೆ ಜೈಲು ಶಿಕ್ಷೆಗೆ ಕಾಯ್ದೆಯಲ್ಲಿ ಅವಕಾಶವಿದೆ. ಅಷ್ಟೇ ಅಲ್ಲದೆ 50 ಸಾವಿರ ದಂಡ ವಸೂಲಿಗೂ ಅವಕಾಶವಿದೆ.

    * ಮತಾಂತರಕ್ಕೆ ಬಲಿಯಾದವರಿಗೆ ಆಪಾದಿತನಿಂದ ಸಂದಾಯವಾಗುವಂತೆ ಗರಿಷ್ಠ ಐದು ಲಕ್ಷ ರೂಪಾಯಿ ಪರಿಹಾರ ಕೊಡಿಸಲು ಅವಕಾಶ ಕಲ್ಪಿಸಲಾಗಿದೆ.

    * ಅಪರಾಧ ಪುನರಾವರ್ತನೆ ಆದಲ್ಲಿ ಐದು ವರ್ಷ ಜೈಲು ಶಿಕ್ಷೆ ಹಾಗೂ ಎರಡು ಲಕ್ಷ ದಂಡ ವಸೂಲಿಗೂ ಅವಕಾಶವಿದೆ.

    * ಮತಾಂತರದ ಉದ್ದೇಶದ ಆದ ಮದುವೆಯನ್ನು ಅಸಿಂಧುವೆಂದು ಘೋಷಿಸಲು ನ್ಯಾಯಾಲಯಕ್ಕೆ ಅವಕಾಶ ನೀಡಲಾಗಿದೆ.

    ಮತಾಂತರ ಆಗಬೇಕಾದಲ್ಲಿ ಪಾಲಿಸಬೇಕಿದೆ ನಿಯಮಾವಳಿಗಳು!
    * ಮತಾಂತರವಾಗಲು‌ ಮುಂದಾಗಿರುವ ವ್ಯಕ್ತಿ ಕನಿಷ್ಠ ಮೂವತ್ತು ದಿನಗಳ ಮೊದಲು ಜಿಲ್ಲಾ ದಂಡಾಧಿಕಾರಿಗೆ ಈ ಬಗ್ಗೆ ತಿಳಿಸಬೇಕು.

    * ಮತಾಂತರ ಮಾಡುವ ವ್ಯಕ್ತಿಯೂ ಈ ಬಗ್ಗೆ ಜಿಲ್ಲಾ ದಂಡಾಧಿಕಾರಿಗೆ ಮೂವತ್ತು ದಿನಗಳ ಮೊದಲೇ ಈ ಬಗ್ಗೆ ಮಾಹಿತಿ ಕೊಡಬೇಕು.

    * ಈ ಮಾಹಿತಿಯನ್ನು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಕಚೇರಿ ಸೂಚನಾ ಫಲಕದಲ್ಲಿ ಹಾಕಬೇಕು. ಇದಕ್ಕೆ 30 ದಿನಗಳ ಒಳಗಾಗಿ ಆಕ್ಷೇಪಣೆ ಬಂದರೆ ಕಂದಾಯ ಅಥವಾ ಸಮಾಜ ಕಲ್ಯಾಣ ಇಲಾಖೆಯ ಮೂಲಕ ವಿಚಾರಣೆ ನಡೆಸಲು ಅವಕಾಶ ಇದೆ.

    * ವಿಚಾರಣೆಯ ಸಂದರ್ಭದಲ್ಲಿ ತಪ್ಪು ಕಂಡುಬಂದಲ್ಲಿ ಕ್ರಿಮಿನಲ್ ಕ್ರಮಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಲು ಅವಕಾಶವಿದೆ.

    * ಮತಾಂತರಗೊಂಡ ವ್ಯಕ್ತಿಯೂ ಮತಾಂತರಗೊಂಡ ದಿನಾಂಕದಿಂದ ಹಿಡಿದು ಮೂಲ ಧರ್ಮ, ಮತಾಂತರಗೊಂಡ ಧರ್ಮ ಹಾಗೂ ಇನ್ನಿತರ ಮಾಹಿತಿಯನ್ನು ಜಿಲ್ಲಾಧಿಕಾರಿಗೆ ನೀಡಬೇಕು.

    * ಅಪರಾಧಕ್ಕೆ ನೆರವು ಹಾಗೂ ದುಷ್ಪ್ರೇರಣೆ ನೀಡಿ ವ್ಯಕ್ತಿಯನ್ನು ಆರೋಪಿಯನ್ನಾಗಿ ಪರಿಗಣಿಸುವ ಅವಕಾಶವೂ ಇದೆ.

  • ಅಧಿವೇಶನದಲ್ಲಿ ಮತಾಂತರ ನಿಷೇಧ ಮಸೂದೆ ತಂದೇ ತರುತ್ತೇವೆ: ಬಿಎಸ್‌ವೈ

    ಅಧಿವೇಶನದಲ್ಲಿ ಮತಾಂತರ ನಿಷೇಧ ಮಸೂದೆ ತಂದೇ ತರುತ್ತೇವೆ: ಬಿಎಸ್‌ವೈ

    ಶಿವಮೊಗ್ಗ: ರಾಜ್ಯ ರಾಜಕೀಯದಲ್ಲಿ ಮತಾಂತರ ನಿಷೇಧ ಮಸೂದೆ ಬಗ್ಗೆ ಚರ್ಚೆಯ ಕಾವು ಜೋರಾಗಿದೆ. ಒಂದೆಡೆ ಸರ್ಕಾರ ಮಸೂದೆ ಜಾರಿಗೆ ಸಜ್ಜಾಗಿದ್ದರೆ, ಮತ್ತೊಂದೆಡೆ ಪ್ರತಿಪಕ್ಷಗಳು​ ತೀವ್ರ ವಿರೋಧ ವ್ಯಕ್ತಪಡಿಸಿವೆ. ಇದರ ಮಧ್ಯೆ ಬೆಳಗಾವಿ ಅಧಿವೇಶನದಲ್ಲಿಯೇ ನೂರಕ್ಕೆ ನೂರರಷ್ಟು ಮತಾಂತರ ನಿಷೇಧ ಮಸೂದೆಯನ್ನು ಅಂಗೀಕರಿಸುತ್ತೇವೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

    ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ವಿಧಾನ ಮಂಡಲ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಉದ್ದೇಶ ಪೂರ್ವಕವಾಗಿ ಈ ರೀತಿಯ ಗಲಭೆ ಮಾಡುವ ಪ್ರಯತ್ನ ನಡೆಯುತ್ತಿದೆ. ಮಹಾತ್ಮರ ಪುತ್ಥಳಿ ಹಾಳು ಮಾಡಿರುವುದನ್ನು ಸಹಿಸಲು ಸಾಧ್ಯವಿಲ್ಲ. ಈ ಬಗ್ಗೆ ವಿಧಾನ ಮಂಡಲದಲ್ಲಿ ಸುದೀರ್ಘ ಚರ್ಚೆ ನಡೆಸುತ್ತೇವೆ ಎಂದರು. ಇದನ್ನೂ ಓದಿ: ಬಿ.ಎಸ್‌.ಯಡಿಯೂರಪ್ಪ, ಮತಾಂತರ ನಿಷೇಧ ಮಸೂದೆ, ಶಿವಮೊಗ್ಗ

    ಮುಖ್ಯಮಂತ್ರಿ ಬೊಮ್ಮಾಯಿ ಅವರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಈಗಾಗಲೇ ಗೃಹ ಸಚಿವರಿಗೆ ಸೂಚನೆ ನೀಡಿದ್ದಾರೆ. ಈ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರನ್ನು ಬಂಧಿಸುವ ಕೆಲಸವಾಗಲಿದೆ. ಅಲ್ಲದೇ ಈಗಾಗಲೇ 27 ಮಂದಿಯನ್ನು ಬಂಧಿಸಿ, ಜೈಲಿಗೆ ಕಳುಹಿಸಲಾಗಿದೆ ಎಂದು ತಿಳಿಸಿದರು.

    ವಿಧಾನ ಮಂಡಲದಲ್ಲಿ ವ್ಯಾಪಕ ಚರ್ಚೆ ಮಾಡಿ ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಲು ಎಲ್ಲಾ ಕ್ರಮಕೈಗೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಅಪರಾಧಿಗಳು ಯಾರೇ ಇರಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಬಳಿಕ ಲವ್ ಜಿಹಾದ್ ನಿಷೇಧ ಕಾಯ್ದೆ: ಸುನಿಲ್ ಕುಮಾರ್

    ಸಚಿವ ಸಂಪುಟ ವಿಸ್ತರಣೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ, ಈ ಬಗ್ಗೆ ನನಗೆ ಮಾಹಿತಿಯಿಲ್ಲ. ಇದರ ಬಗ್ಗೆ ಮುಖ್ಯಮಂತ್ರಿಗಳನ್ನು ಕೇಳಬೇಕು. ನನಗೆ ಗೊತ್ತಿರುವ ಪ್ರಕಾರ ಈವರೆಗೆ ಅಂತಹ ಯಾವುದೇ ಚರ್ಚೆ ಸಹ ನಡೆದಿಲ್ಲ. ಬಿ.ವೈ.ವಿಜಯೇಂದ್ರ ಅವರಿಗೆ ಸಂಪುಟ‌ ಸೇರ್ಪಡೆ ಬಗ್ಗೆ ಕೂಡ ಚರ್ಚೆಯಾಗಿಲ್ಲ. ಅದು ಹೈಕಮಾಂಡ್‌ ಮತ್ತು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ ಎಂದು ಹೇಳಿದರು.

  • ಮತಾಂತರ ಮಸೂದೆ: ದುಸ್ಸಾಹಸಕ್ಕೆ ಕೈ ಹಾಕಿ ಪಾಸ್ ಮಾಡಿದ್ರೆ 2023ಕ್ಕೆ ನಾವೇ ಅಧಿಕಾರಕ್ಕೆ ಬರ್ತೀವಿ – ಸಿದ್ದು

    ಮತಾಂತರ ಮಸೂದೆ: ದುಸ್ಸಾಹಸಕ್ಕೆ ಕೈ ಹಾಕಿ ಪಾಸ್ ಮಾಡಿದ್ರೆ 2023ಕ್ಕೆ ನಾವೇ ಅಧಿಕಾರಕ್ಕೆ ಬರ್ತೀವಿ – ಸಿದ್ದು

    ಬೆಳಗಾವಿ: ದುಸ್ಸಾಹಸಕ್ಕೆ ಕೈ ಹಾಕಿ ಮತಾಂತರ ನಿಷೇಧ ಮಸೂದೆಯನ್ನು ಪಾಸ್‌ ಮಾಡಿದರೆ 2023ಕ್ಕೆ ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.

    ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನ ಮಂಡಲ ಅಧಿವೇಶನ ಹಿನ್ನೆಲೆ ಇಂದು ಸುವರ್ಣ ಗಾರ್ಡ್‌ನಲ್ಲಿ ಮತಾಂತರ ನಿಷೇಧ ಮಸೂದೆ ಜಾರಿ ಮಾಡದಂತೆ ಆಗ್ರಹಿಸಿ ಭಾರತೀಯ ಕ್ರೈಸ್ತ ಒಕ್ಕೂಟ ಸಾಂಕೇತಿಕ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದೆ. ಈ ವೇಳೆ ಪ್ರತಿಭಟನೆಯಲ್ಲಿ ಭಾಗವಹಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ ಅವರು, ಬಿಜೆಪಿಯವರು ಮತಾಂತರ ನಿಷೇಧ ಮಸೂದೆ ಜಾರಿ ಮಾಡುತ್ತೇವೆ ಎಂದಿದ್ದಾರೆ. ನಮ್ಮ ಪಕ್ಷ ಈ ಕಾಯ್ದೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತದೆ. ಇದು ಗಂಭೀರ ವಿಚಾರ, ದೇಶದಲ್ಲಿ ಕೋಮು ಸೌಹಾರ್ದ ಹಾಳು ಮಾಡಲು ಒಂದು ಧರ್ಮವನ್ನು ಗುರಿಯಾಗಿಟ್ಟುಕೊಂಡು ಮಸೂದೆ ಜಾರಿಗೊಳಿಸಲು ಸರ್ಕಾರ ಹೊರಟಿದೆ. ಇದರಲ್ಲಿ ರಾಜ್ಯದ ಹಿತವಿಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕ್ರೈಸ್ತ ಧರ್ಮಕ್ಕೆ ಮತಾಂತರವಾದ್ರೆ ಸಿದ್ದರಾಮಯ್ಯಗೆ ಜಾಗ ಎಲ್ಲಿದೆ: ಸಿ.ಟಿ ರವಿ ವ್ಯಂಗ್ಯ

    ನಾವು ಯಾವಾಗಲೂ ನಿಮ್ಮ ಜೊತೆ ಇರುತ್ತೇವೆ. ಯಾವುದೇ ಧರ್ಮದ ಆಯ್ಕೆ ಒಪ್ಪಿ ಪೂಜೆ ಮಾಡುವ ಪ್ರಚಾರ ಮಾಡುವ ಹಕ್ಕು ಸಂವಿಧಾನ ಕೊಟ್ಟಿದೆ. ಯಾವುದೇ ಧರ್ಮದ ಆಧಾರದ ಮೇಲೆ ಸಂವಿಧಾನ ರಚನೆ ಆಗಿಲ್ಲ. ಎಲ್ಲ ಧರ್ಮದವರಿಗೂ ಸಮಾನವಾದ ಸ್ಥಾನ ಕೊಟ್ಟಿದೆ. ಕ್ರೈಸ್ತ ಧರ್ಮದ ಕೊಡುಗೆ ದೇಶಕ್ಕೆ ಅಪಾರವಿದೆ. ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದೆ. ಹೀಗಿದ್ದಾಗ ಕಾಲೇಜು, ಆಸ್ಪತ್ರೆಗೆ ಹೋದವರು ಮತಾಂತರ ಆಗಬಹುದಾಗಿತ್ತಲ್ಲಾ ಎಂದು ಪ್ರಶ್ನಿಸಿದ್ದಾರೆ.

    ಬಲವಂತವಾಗಿ ಏನು ಮಾಡುವುದಕ್ಕೆ ಬರುವುದಿಲ್ಲ. ಸಾಮಾಜಿಕ ಅಸಮಾನತೆ ಆರ್ಥಿಕ ಅಸಮಾನತೆ ಸರಿಪಡಿಸಿಕೊಳ್ಳುವುದು ಸರ್ಕಾರದ ಕೆಲಸ. ನಿಮ್ಮನ್ನು ಗುರಿಯಾಗಿಟ್ಟುಕೊಂಡು ಮಸೂದೆ ಮಾಡುತ್ತಿದ್ದಾರೆ. ಮೋದಿ ಬಂದು ದೇಶ ಹಾಳು ಮಾಡಿ ಬಿಟ್ಟಿದ್ದಾರೆ. ಇದು ಆರ್‌ಎಸ್‌ಎಸ್‌ ಹುನ್ನಾರ, ಬಿಜೆಪಿ ಕುತಂತ್ರ ಗೊತ್ತಾಗಿದೆ. ನೀವೇನಾದರು ದುಸ್ಸಾಹಸಕ್ಕೆ ಕೈ ಹಾಕಿ ಮತಾಂತರ ನಿಷೇಧ ಮಸೂದೆ ಪಾಸ್ ಮಾಡಿದರೆ ನಾವು 2023ಕ್ಕೆ ಅಧಿಕಾರಕ್ಕೆ ಬಂದೇ ಬರ್ತೀವಿ. ಇಂತಹದ್ದೆಲ್ಲ ಮಾಡುವುದಕ್ಕೆ ಬಿಡಲ್ಲ ಎಂದು ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಬಲವಂತದ ಮತಾಂತರವಾಗಿಲ್ಲ ಎಂದು ವರದಿ ನೀಡಿದ್ದ ತಹಶೀಲ್ದಾರ್ ಎತ್ತಂಗಡಿ

  • ಬಲವಂತದ ಮತಾಂತರ ಜಾಮೀನುರಹಿತ ಅಪರಾಧ

    ಬಲವಂತದ ಮತಾಂತರ ಜಾಮೀನುರಹಿತ ಅಪರಾಧ

    – ಧರ್ಮ ಬದಲಿಸುವ ಮುನ್ನ ಅರ್ಜಿ ಸಲ್ಲಿಕೆ ಕಡ್ಡಾಯ
    – ಸೋಮವಾರ ಬಳಿಕ ಬಿಲ್ ಪಾಸ್‍ಗೆ ಸರ್ಕಾರ ಪ್ಲ್ಯಾನ್

    ಬೆಂಗಳೂರು: ಪ್ರಸಕ್ತ ಅಧಿವೇಶನದಲ್ಲಿಯೇ ಮತಾಂತರ ನಿಷೇಧ ಮಸೂದೆ ಮಂಡನೆಗೆ ತೀರ್ಮಾನಿಸಿರುವ ರಾಜ್ಯ ಬಿಜೆಪಿ ಸರ್ಕಾರ, ಇದಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ. ಈಗಾಗಲೇ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯ್ದೆ-2021ರ ಮಸೂದೆಯನ್ನು ಸಿದ್ಧಪಡಿಸಿದೆ. ಸೋಮವಾರದ ಸಂಪುಟ ಸಭೆಯಲ್ಲಿ ಈ ಮಸೂದೆಗೆ ಅನುಮೋದನೆ ಪಡೆದು, ಬುಧವಾರ ವಿಧಾನಸಭೆಯಲ್ಲಿ ಮಸೂದೆ ಮಂಡಿಸಲು ಬೊಮ್ಮಾಯಿ ಸರ್ಕಾರ ಯೋಚಿಸಿದೆ.

    ಒತ್ತಾಯ, ಆಮಿಷವೊಡ್ಡಿ ನಡೆಸಲಾಗುವ ಮತಾಂತರಗಳನ್ನು ನಿಷೇಧಿಸುವ ಅಂಶ ಪ್ರಸ್ತಾವಿತ ಮಸೂದೆಯಲ್ಲಿದೆ. ಆದರೆ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಸಹ ಮತಾಂತರ ವಿಧೇಯಕಕ್ಕೆ ನಮ್ಮ ವಿರೋಧ ಇದೆ ಎಂದಿದ್ದಾರೆ. ಕಾರಣ ನೀಡಿ ಎಂದು ಸರ್ಕಾರವನ್ನು ಕೇಳಿದ್ದಾರೆ. ಪ್ರಸ್ತಾವಿತ ಮಸೂದೆಯಲ್ಲಿ ಈ ಕೆಳಕಂಡ ಅಂಶಗಳಿವೆ. ಇದನ್ನೂ ಓದಿ: ರಾಜ್ಯ ವಿಶ್ವ ಮಟ್ಟದಲ್ಲೇ ಅತಿ ದೊಡ್ಡ ಭ್ರಷ್ಟ ಸರ್ಕಾರ ಎಂದು ಗುತ್ತಿಗೆದಾರರ ಸಂಘದವರೇ ಹೇಳಿದ್ದಾರೆ: ಡಿಕೆಶಿ

    ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯ್ದೆ-2021
    ಬಲವಂತದ ಮತಾಂತರ ಜಾಮೀನುರಹಿತ ಅಪರಾಧ ಮತ್ತು ಅಸಿಂಧುವಾಗಿದೆ. ಇದನ್ನು ನೇರ ವಿಚಾರಣೆಗೆ ಒಳಪಡಿಸಬಹುದು. ಉಡುಗೊರೆ, ಕೆಲಸ, ಉಚಿತ ಶಿಕ್ಷಣ, ವಿವಾಹದ ಆಮಿಷ ಒಡ್ಡಿ ಮತಾಂತರ ಮಾಡುವಂತಿಲ್ಲ. ಭಾವನಾತ್ಮಕವಾಗಿ ಸೆಳೆದು ಮತಾಂತರ ಮಾಡುವುದು ಅಪರಾಧ. ಅಮಿಷ ಒಡ್ಡಿ ಮತಾಂತರಗೊಂಡು ವಿವಾಹ ಆಗಿದ್ದರೆ ಆ ಮದುವೆ ಅಸಿಂಧು ಎಂದು ಘೋಷಿಸಲು ಕೌಟುಂಬಿಕ ನ್ಯಾಯಾಲಯಕ್ಕೆ ಈ ಮಸೂದೆಯಲ್ಲಿ ಅವಕಾಶ ನೀಡಲಾಗಿದೆ. ಸಾಮೂಹಿಕ ಮತಾಂತರದಲ್ಲಿ ಶಿಕ್ಷಣ ಸಂಸ್ಥೆ, ಆಶ್ರಮ, ಧಾರ್ಮಿಕ ಮಿಷನರಿ, ಎನ್‍ಜಿಓ ಪಾಲ್ಗೊಳ್ಳುವಂತಿಲ್ಲ. ಸಾಮೂಹಿಕ ಮತಾಂತರದಲ್ಲಿ ಭಾಗಿಯಾದ ಸಂಸ್ಥೆಗಳಿಗೆ ಸರ್ಕಾರದಿಂದ ಅನುದಾನ ನಿಲ್ಲಿಸಲಾಗುವುದು.

    ದಂಡ ಎಷ್ಟು?
    ಎಸ್‍ಸಿ, ಎಸ್‍ಟಿ ಸಮುದಾಯದವರನ್ನು ಬಲವಂತವಾಗಿ ಮತಾಂತರ ಮಾಡುವ ಹಾಗಿಲ್ಲ. ಅಪ್ರಾಪ್ತರು, ಮಹಿಳೆಯರು, ಬುದ್ದಿಮಾಂಧ್ಯರಿಗೆ ಆಸೆ, ಆಮಿಷ ಒಡ್ಡಿ ಮತಾಂತರ ಮಾಡಬಾರದು. ಕಾಯ್ದೆ ಉಲ್ಲಂಘಿಸಿದಲ್ಲಿ ಕನಿಷ್ಠ 3ರಿಂದ 10 ವರ್ಷ ಜೈಲು ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಲಾಗುವುದು. ಇತರರನ್ನು ಬಲವಂತವಾಗಿ ಮತಾಂತರಿಸಿದ್ದಲ್ಲಿ 3ರಿಂದ 5 ವರ್ಷ ಜೈಲು ಶಿಕ್ಷೆ ಮತ್ತು 25 ಸಾವಿರ ರೂ. ದಂಡ ಹಾಗೂ ಸಾಮೂಹಿಕ ಮತಾಂತರ ಮಾಡಿದವರಿಗೆ 3ರಿಂದ 10 ವರ್ಷ ಜೈಲು ಶಿಕ್ಷೆ, 1 ಲಕ್ಷ ರೂ. ದಂಡ ವಿಧಿಸಲಾಗುವುದು. ಇದನ್ನೂ ಓದಿ: ರಾಜ್ಯ ಸರ್ಕಾರ ವೆಜ್ ಬೇರೆ, ನಾನ್ ವೆಜ್ ಬೇರೆ ಶಾಲೆ ತೆರೆಯಲಿ: ದಯಾನಂದ ಸ್ವಾಮೀಜಿ

    ಪರಿಹಾರವೇನು?
    ಬಲವಂತದ ಮತಾಂತರ ಸಾಬೀತಾದಲ್ಲಿ ಮತಾಂತರಕ್ಕೆ ಒಳಗಾದವನಿಗೆ ಗರಿಷ್ಠ 5 ಲಕ್ಷ ಪರಿಹಾರ ನೀಡಬೇಕಾಗುತ್ತದೆ. ಪರಿಹಾರದ ಮೊತ್ತವನ್ನು ಮತಾಂತರ ಮಾಡಿದವನಿಂದಲೇ ವಸೂಲಿ ಮಾಡಬೇಕಾಗುತ್ತದೆ. ಈ ಹಿಂದೆಯೂ ಮತಾಂತರ ಮಾಡಿದ್ದು ಸಾಬೀತಾದಲ್ಲಿ ದುಪ್ಪಟ್ಟು ದಂಡ ವಿಧಿಸಲಾಗುವುದು.

    ಮತಾಂತರ ಪ್ರಕ್ರಿಯೆ ಹೇಗೆ?
    ಧರ್ಮ ಬದಲಿಸುವ 60 ದಿನ ಮೊದಲು ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಬೇಕು. ಮತಾಂತರ ಆಗುವವರು, ಮಾಡುವವರಿಗೆ ಡಿಸಿ, ಪೊಲೀಸ್ ಸಮ್ಮುಖದಲ್ಲಿ ವಿಚಾರಣೆ ಇರುತ್ತದೆ. ಶಾಲೆ, ಕಾಲೇಜು ಸಕ್ಷಮ ಪ್ರಾಧಿಕಾರಕ್ಕೆ ಮತ ಬದಲಾವಣೆಗೆ ಡಿಸಿ ಸೂಚಿಸಬೇಕು. ಮತಾಂತರಗೊಂಡ ಎಸ್‍ಸಿ, ಎಸ್‍ಟಿ ವ್ಯಕ್ತಿಗಳಿಗೆ ಸಿಗುವ ಮೀಸಲಾತಿ, ಇತರೆ ಸೌಲಭ್ಯ ರದ್ದುಗೊಳಿಸುವುದು ಪ್ರಸ್ತಾವಿತ ಮಸೂದೆಯಲ್ಲಿ ಇದೆ.

  • ಮತಾಂತರ ನಿಷೇಧ ಮಸೂದೆ ದುರುದ್ದೇಶಪೂರ್ವಕ: ಸಿದ್ದರಾಮಯ್ಯ ಟೀಕೆ

    ಮತಾಂತರ ನಿಷೇಧ ಮಸೂದೆ ದುರುದ್ದೇಶಪೂರ್ವಕ: ಸಿದ್ದರಾಮಯ್ಯ ಟೀಕೆ

    ಕೋಲಾರ: ಮತಾಂತರ ನಿಷೇಧ ಮಸೂದೆ ಹೆಸರಿನಲ್ಲಿ ಒಂದು ಧರ್ಮವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವುದು ಸರಿಯಲ್ಲ ಎಂದು ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

    ಕೋಲಾರ ಹೊರವಲಯದ ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ಜಾಲಪ್ಪ ಅವರ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಲವಂತವಾಗಿ ಮತಾಂತರ ಮಾಡುವುದಕ್ಕೆ ನಮ್ಮ ವಿರೋಧವೂ ಇದೆ. ಆದರೆ ಒಂದು ಧರ್ಮವನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ರಾಜಕೀಯ ಮಾಡಲು ಹೊರಟಿದೆ. ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ಮತಾಂತರ ನಿಷೇಧ ಮಸೂದೆ ಮಂಡಿಸಲು ಹೊರಟಿದೆ. ಈ ರೀತಿ ರಾಜಕೀಯ ಮಾಡುವುದು ಸರಿಯಲ್ಲ. ಇದು ದುರುದ್ದೇಶಪೂರ್ವಕ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವಿವಾಹ ನೋಂದಣಿಯಂತೆ ಮತಾಂತರ ನೋಂದಣಿ ಮಾಡೋ ಚಿಂತನೆ ನಡೆದಿದೆ: ಮಾಧುಸ್ವಾಮಿ

    ಬೆಳೆಹಾನಿ, ಕೊರೊನಾ ಪರಿಹಾರ, ಬಿಟ್ ಕಾಯಿನ್ ಹಗರಣ, ಪರ್ಸೆಂಟೇಜ್, ಮತಾಂತರ ನಿಷೇಧ ಕಾಯ್ದೆ ಸೇರಿದಂತೆ ಸರ್ಕಾರದ ವೈಫಲ್ಯಗಳ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

    ಶಾಲಾ ಮಕ್ಕಳಿಗೆ ಮೊಟ್ಟೆ ಕೊಡುವ ವಿಚಾರವಾಗಿ ಮಠಾಧೀಶರ ಬಗ್ಗೆ ನಾನು ಮಾತನಾಡುವುದಿಲ್ಲ. ಆಹಾರ ಪದ್ಧತಿ ಅವರವರಿಗೆ ಬಿಟ್ಟಿರೋ ವಿಚಾರ. ಮೊಟ್ಟೆ ಯಾರು ತಿನ್ನುತಾರೋ ಅವರಿಗೆ ಕೊಡಿ, ಇಲ್ಲ ಅಂದರೆ ಕೊಡ್ಬೇಡಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಿಂದುತ್ವವಾದಿಗಳು ಅಧಿಕಾರಕ್ಕಾಗಿ ಯಾರನ್ನು ಬೇಕಾದ್ರೂ ಕೊಲ್ತಾರೆ: ರಾಹುಲ್ ಗಾಂಧಿ

    ವಿಧಾನ ಪರಿಷತ್ ಚುನಾವಣೆಯಲ್ಲಿ 15 ಸ್ಥಾನದಲ್ಲಿ ಗೆಲ್ಲುತ್ತೇವೆ. ಕೋಲಾರದಲ್ಲಿ ಅನಿಲ್ ಕುಮಾರ್ ಗೆಲ್ಲುತ್ತಾರೆ. ಜೆಡಿಎಸ್ 6 ಕಡೆ ಮಾತ್ರ ಅಭ್ಯರ್ಥಿಗಳನ್ನು ಹಾಕಿದ್ದು, ಇನ್ನು 19 ಕಡೆ ಏಕೆ ಹಾಕಿಲ್ಲ? ಉಳಿದ ಕಡೆ ಬಿಜೆಪಿಗೆ ಜೆಡಿಎಸ್ ಕಡೆಯವರು ವೋಟು ಹಾಕಿಸಿರುತ್ತಾರೆ. ಬಿಜೆಪಿಗೆ ಜೆಡಿಎಸ್ ಯಾವಾಗಲೂ ‘ಬಿ’ ಟೀಂ. ನಾವು ಯಾವತ್ತೂ ಜೆಡಿಎಸ್ ಮನೆ ಬಾಗಿಲಿಗೆ ಹೋಗಿ ನಮ್ಮ ಜೊತೆ ಅಧಿಕಾರ ಮಾಡಿ ಎಂದು ಕೇಳಿಲ್ಲ. ಆಗ ಮಾತುಕತೆ ಆಗಿದ್ದು ನಿಜ, ಆದ್ರೆ ನಾನಂತೂ ಅವರ ಮನೆಗೆ ಹೋಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

  • ಮತಾಂತರ ಕಾಯ್ದೆ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ: ಶೋಭಾ ಕರಂದ್ಲಾಜೆ

    ಮತಾಂತರ ಕಾಯ್ದೆ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ: ಶೋಭಾ ಕರಂದ್ಲಾಜೆ

    ಬೆಳಗಾವಿ: ಬೆಳಗಾವಿ ಅಧಿವೇಶನದಲ್ಲಿ ಮತಾಂತರ ಕಾಯ್ದೆ ವಿಚಾರವಾಗಿ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕೇಂದ್ರ ಕೃಷಿ ಇಲಾಖೆ ಸಹಾಯಕ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

    Bommai

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಅಧಿವೇಶನದಲ್ಲಿ ಮತಾಂತರ ಕಾಯ್ದೆ ವಿಚಾರವಾಗಿ ಸರ್ಕಾರ ಒಂದು ನಿರ್ಧಾರ ತೆಗೆದುಕೊಳ್ಳುತ್ತದೆ. ಮಂಗಳೂರು ಆತ್ಮಹತ್ಯೆ, ಲವ್ ಜಿಹಾದಿ ಪ್ರಕರಣಗಳ ನಂತರ, ದೇಶದಲ್ಲಿ ಮತಾಂತರ ಕಾಯ್ದೆ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ದೊಡ್ಡ ಪ್ರಮಾಣದಲ್ಲಿ ಎಲ್ಲ ಜಾತಿ ವರ್ಗದ ಜನರನ್ನು ಅವರ ಬಡತನ, ಅನಾರೋಗ್ಯ ಸಂದರ್ಭ ಮುಂದಿಟ್ಟುಕೊಂಡು ಮತಾಂತರಗೊಳಿಸುವುದು ನಡೆಯುತ್ತಿದೆ. ಇದರ ಬಗ್ಗೆ ಸರ್ಕಾರ ಗಂಭೀರವಾಗಿ ಯೋಚನೆ ಮಾಡಬೇಕು ಎಂದರು. ಇದನ್ನೂ ಓದಿ: ಬಡತನಕ್ಕೆ, ಆಸೆ ಆಮಿಷಕ್ಕೆ ಮತಾಂತರ ಆಗೋದು ತಪ್ಪು : ಬೊಮ್ಮಾಯಿ

    ಸಾಮಾಜಿಕ ಅಸಮತೋಲನೆ ನಿರ್ಮಾಣ ಆಗಬಾರದು. ನಮ್ಮ ಬಡತನ ನಮ್ಮ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಳ್ಳಲು ಯಾರಿಗೂ ಅವಕಾಶ ಕೊಡಬಾರದು. ನಾವು ಕೂಡ ಸಮಾಜದ ಎಲ್ಲ ವರ್ಗದ ಜನರ ಅಭಿವೃದ್ಧಿ ಬಗ್ಗೆ ಯೋಚನೆ ಮಾಡಬೇಕು. ಯಾವ ಕಾರಣಕ್ಕೆ ಧರ್ಮವನ್ನು ಬಿಟ್ಟು ಹೋಗೋದಕ್ಕೆ ಸಾಧ್ಯವಾಗಿದೆ. ಇದಕ್ಕೆ ಜಾತಿ ಕಾರಣವೋ, ಆರೋಗ್ಯ ಕಾರಣವೋ, ಆರ್ಥಿಕ ಪರಿಸ್ಥಿತ ಕಾರಣವೋ, ಸಾಮಾಜಿಕ ಅಡತಡೆಗಳು ಕಾರಣವೋ ಎನ್ನುವುದನ್ನು ಪ್ರಾಮಾಣಿಕವಾಗಿ ಅಧ್ಯಯನ ಮಾಡಬೇಕು. ಸೂಕ್ತವಾದ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.

    ಮತಾಂತರ ಕಾಯ್ದೆಗೆ ಕಾಂಗ್ರೆಸ್ ವಿರೋಧಿಸುತ್ತಿರುವ ವಿಚಾರ ಕುರಿತಂತೆ ಮಾತನಾಡಿದ ಅವರು, ನಾನು ಕೇಂದ್ರ ಸಚಿವೆಯಾಗಿ ಈ ಬಗ್ಗೆ ಹೆಚ್ಚು ಮಾತಾಡಲ್ಲ. ಆದರೆ, ನಾನೇ ಕಂಡಂತೆ, ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಬಾಂಗ್ಲಾ ದೇಶದಿಂದ ಬರುವ ಮಕ್ಕಳನ್ನು ಇಲ್ಲಿಗೆ ತಂದು ರಕ್ಷಣೆ ಮಾಡಲಾಗುತ್ತದೆ. ಅವರಿಗೆ ವೋಟರ್ ಐಡಿ ಕೊಟ್ಟು ಮುಂದೆ ಅವರನ್ನು ಮತದಾರರನ್ನಾ ಮಾಡುತ್ತಿದ್ದಾರೆ. ಈ ಬಗ್ಗೆ ತನಿಖೆ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಈ ಮಾನಸಿಕತೆ ಇರುವುದು ಕಾಂಗ್ರೆಸ್‍ನಲ್ಲಿ ಮಾತ್ರ. ಜಾತಿ ಹಾಗೂ ಧರ್ಮದ ಆಧಾರದಲ್ಲಿ ಪರ್ಮನೆಂಟ್ ಆಗಿ ಅಧಿಕಾರದಲ್ಲಿ ಇರಬಹುದು ಎನ್ನುವುದು ಕಾಂಗ್ರೆಸ್ ಮಾನಸಿಕತೆ. ಈ ಬಗ್ಗೆ ಡಿಕೆ ಶಿವಕುಮಾರ್ ಚರ್ಚೆ ಮಾಡದೇ ಇರುವುದು ಒಳ್ಳೆಯದು. ಅವರ ಪಕ್ಷ ನಿಂತಿದ್ದೆ ಇದೇ ಆಧಾರದಲ್ಲಿ. ಜಾತಿ, ಧರ್ಮ, ಒಂದು ವರ್ಗ ಓಲೈಸಿ ಅಧಿಕಾರ ಪಡೆಯುವುದು ಅಲ್ಲ ಎಂದು ಮೋದಿ ಅವರು ಎರಡು ಚುನಾವಣೆಯಲ್ಲಿ ತೋರಿಸಿಕೊಟ್ಟಿದ್ದಾರೆ. ಇದನ್ನೂ ಓದಿ: ಎಷ್ಟೋ ಜನ ಮುಸ್ಲಿಮರು ಲಿಂಗಾಯತರಾದ್ರು, ನಾವೇನಾದ್ರೂ ಮಾತಾಡಿದ್ವಾ: ಸಿ.ಎಂ ಇಬ್ರಾಹಿಂ

    ರಾವತ್ ಸಾವಿಗೆ ವಿಕೃತ ಮನಸ್ಸುಗಳ ಸಂಭ್ರಮಿಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಮ್ಮ ದೇಶದ ಸಿಡಿಎಸ್ ರಾವತ್ ಅವರು ನಿಧನರಾದ ಸಂದರ್ಭದಲ್ಲಿ ಕೆಲವು ವಿಕೃತ ಮನಸ್ಸುಗಳು ಸಂಭ್ರಮಿಸಿದ್ದಾರೆ. ಅವರು ವಿಕೃತ ಮನಸ್ಸುಗಳಲ್ಲ, ದೇಶದ್ರೋಹಿಗಳು. ಈ ಬಗ್ಗೆ ಕೇಂದ್ರ ಸರ್ಕಾರದ ಗೃಹ ಇಲಾಖೆ ಮತ್ತು ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಇಂಥವರಿಗೆ ಕಠಿಣವಾದ ಶಿಕ್ಷೆಯನ್ನು ಕೊಡಬೇಕು ಅನ್ನುವುದು ನಮ್ಮೆಲ್ಲರ ಆಗ್ರಹ ಹಾಗೂ ದೇಶದ ಜನರ ಆಗ್ರಹವಾಗಿದೆ. ಇದರಲ್ಲೇನು ರಾಜಕೀಯವಿಲ್ಲ. ಕೆಲವರು ದೇಶಕ್ಕಾಗಿ ವಿರೋಧ ಮಾಡುವವರು ವಿರೋಧಿಗಳಾಗಿಯೇ ಇರುತ್ತಾರೆ. ಅಂತವರಿಗೆ ಪಕ್ಷ ಇಲ್ಲ, ಪಂಗಡ ಇಲ್ಲ, ಜಾತಿ ಇಲ್ಲ, ಪಂಥ ಇಲ್ಲ. ಅಂಥವರ ಮೇಲೆ ಉಗ್ರ ಕ್ರಮಕೈಗೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬದ್ಧವಾಗಿದೆ ಎಂದು ಹೇಳಿದರು.