Tag: ಮತದಾನ ಬಹಿಷ್ಕಾರ

  • ಚಾಮರಾಜನಗರದಲ್ಲಿ ಗ್ರಾಮಸ್ಥರಿಂದ ದಾಂಧಲೆ, ಇವಿಎಂ ಧ್ವಂಸ

    ಚಾಮರಾಜನಗರದಲ್ಲಿ ಗ್ರಾಮಸ್ಥರಿಂದ ದಾಂಧಲೆ, ಇವಿಎಂ ಧ್ವಂಸ

    ಚಾಮರಾಜನಗರ: ಮತದಾನ ಬಹಿಷ್ಕರಿಸಿದ್ದ ಗ್ರಾಮಸ್ಥರನ್ನು ಮನವೊಲಿಸಲು ತೆರಳಿದ್ದ ಅಧಿಕಾರಿಗಳ ವಿರುದ್ಧ ಜನ ಪ್ರತಿಭಟನೆ ನಡೆಸಿ ಕಲ್ಲು ತೂರಾಟ ನಡೆಸಿದ ಘಟನೆ ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದಲ್ಲಿ ನಡೆದಿದೆ.

    ಗ್ರಾಮದಲ್ಲಿ ಕುಡಿಯುವ ನೀರು ಹಾಗೂ ವಿದ್ಯುತ್ ಸೌಲಭ್ಯ ಇಲ್ಲ ಎಂದು ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದರು. ಈ ವೇಳೆ ಅಧಿಕಾರಿಗಳು ಕೆಲವರ ಮನವೊಲಿಸಿ ಮತದಾನಕ್ಕೆ ಕರೆತಂದಿದ್ದಾರೆ. ಈ ವೇಳೆ ಇಡೀ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದೇವೆ ಎಂದು ಗ್ರಾಮದ ಒಂದು ಗುಂಪು ಗಲಾಟೆ ಆರಂಭಿಸಿದೆ. ಎರಡು ಗುಂಪುಗಳ ಮಧ್ಯೆ ನಡೆದ ಜಗಳ ಕೊನೆಗೆ ವಿಕೋಪಕ್ಕೆ ತಿರುಗಿ ಇವಿಎಂ (EVM) ಹಾಗೂ ಮತಗಟ್ಟೆಯ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ. ಗಲಾಟೆಯಲ್ಲಿ ಕೆಲವು ಅಧಿಕಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ:ಮೂಲಭೂತ ಸೌಕರ್ಯ ಕೊರತೆ ಆರೋಪ – ಮಹದೇಶ್ವರ ಬೆಟ್ಟ ವ್ಯಾಪ್ತಿಯ 5 ಗ್ರಾಮಗಳಲ್ಲಿ ಮತದಾನ ಬಹಿಷ್ಕಾರ

    ಮೂಲಭೂತ ಸೌಕರ್ಯ ಕೊರತೆಯಿಂದ ಮಹದೇಶ್ವರ ಬೆಟ್ಟ (Mahadeshwara Hill) ವ್ಯಾಪ್ತಿಯ 5 ಗ್ರಾಮಗಳ ಗ್ರಾಮಸ್ಥರು ಮತದಾನದಿಂದ ದೂರ ಉಳಿದಿದ್ದರು. ಇಂಡಿಗನತ್ತ, ತೇಕಣೆ, ಮೆಂದಾರೆ ಹಾಗೂ ತುಳಸೀಕೆರೆ ಗ್ರಾಮಗಳಲ್ಲಿ ಮತದಾನ ಬಹಿಷ್ಕರಿಸಿದ್ದಾರೆ. ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಕೆಲ ದಿನಗಳ ಹಿಂದೆಯೇ ಮತದಾನ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದರು. ಅಧಿಕಾರಿಗಳು ಮನವೊಲಿಸುವ ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಾರಿ ಮತದಾನ ಮಾಡಲೇಬಾರದು ಎಂದು ಗ್ರಾಮಸ್ಥರು ದೃಢ ಸಂಕಲ್ಪ ಮಾಡಿದ್ದರು. ಇದನ್ನೂ ಓದಿ: ತಾಳಿ ಕಟ್ಟುವ ಮುನ್ನ ಓಡೋಡಿ ಬಂದು ಮತದಾನ ಮಾಡಿದ ವರ

  • ಮೂಲಭೂತ ಸೌಕರ್ಯ ಕೊರತೆ ಆರೋಪ – ಮಹದೇಶ್ವರ ಬೆಟ್ಟ ವ್ಯಾಪ್ತಿಯ 5 ಗ್ರಾಮಗಳಲ್ಲಿ ಮತದಾನ ಬಹಿಷ್ಕಾರ

    ಮೂಲಭೂತ ಸೌಕರ್ಯ ಕೊರತೆ ಆರೋಪ – ಮಹದೇಶ್ವರ ಬೆಟ್ಟ ವ್ಯಾಪ್ತಿಯ 5 ಗ್ರಾಮಗಳಲ್ಲಿ ಮತದಾನ ಬಹಿಷ್ಕಾರ

    ಚಾಮರಾಜನಗರ: ಮೂಲಭೂತ ಸೌಕರ್ಯ ಕೊರತೆ ಆರೋಪಿಸಿ ಮಹದೇಶ್ವರ ಬೆಟ್ಟ (Mahadeshwara Hill) ವ್ಯಾಪ್ತಿಯ 5 ಗ್ರಾಮಗಳ ಗ್ರಾಮಸ್ಥರು ಮತದಾನದಿಂದ (Voting) ದೂರ ಉಳಿದಿದ್ದಾರೆ.

    ಇಂಡಿಗನತ್ತ, ತೇಕಣೆ, ಮೆಂದಾರೆ ಹಾಗೂ ತುಳಸೀಕೆರೆ ಗ್ರಾಮಗಳಲ್ಲಿ ಮತದಾನ ಬಹಿಷ್ಕರಿಸಿದ್ದು (Election Boycott), ಪಡಸಲನತ್ತ ಗ್ರಾಮದಲ್ಲಿ 85 ಮತದಾರರ ಪೈಕಿ ಇಬ್ಬರು ಮಾತ್ರ ಮತದಾನ ಮಾಡಿದ್ದಾರೆ. ಉಳಿದಂತೆ ಯಾವುದೇ ಮತದಾರರು ಇದುವರೆಗೂ ಮತಗಟ್ಟೆಯತ್ತ ಸುಳಿದಿಲ್ಲ. ಕನಿಷ್ಠ ಮೂಲಭೂತ ಸೌಕರ್ಯದಿಂದ ಗ್ರಾಮಸ್ಥರು ವಂಚಿತರಾಗಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಕರ್ನಾಟಕದಲ್ಲಿ ಕಾಂಗ್ರೆಸ್‍ಗೆ ಉತ್ತಮವಾದ ವಾತಾವರಣ ಇದೆ: ಸಿದ್ದರಾಮಯ್ಯ

    ಕುಡಿಯುವ ನೀರು, ರಸ್ತೆ, ವಿದ್ಯುತ್, ಆರೋಗ್ಯ ಹಾಗೂ ಶಿಕ್ಷಣ ಮರಿಚೀಕೆಯಾಗಿದೆ ಎಂದು ಆರೋಪ ಹೊರಿಸಲಾಗಿದೆ. ಕೆಲ ದಿನಗಳ ಹಿಂದೆಯೇ ಮತದಾನ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದರು. ಅಧಿಕಾರಿಗಳು ಮನವೊಲಿಸುವ ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಾರಿ ಮತದಾನ ಮಾಡಲೇಬಾರದು ಎಂದು ಗ್ರಾಮಸ್ಥರು ದೃಢ ಸಂಕಲ್ಪ ಮಾಡಿದ್ದಾರೆ. ಇದನ್ನೂ ಓದಿ: Lok Sabha Elections 2024: ಒಂದೇ ಕುಟುಂಬದ 85 ಮಂದಿಯಿಂದ ಏಕಕಾಲದಲ್ಲಿ ಮತದಾನ!

  • ಮತ ಕೇಳಲು ಬರಬೇಡಿ- ಹುಬ್ಬಳ್ಳಿ ಮತದಾರರಿಂದ ಮನೆಗೆ ಬಹಿಷ್ಕಾರದ ಬೋರ್ಡ್

    ಮತ ಕೇಳಲು ಬರಬೇಡಿ- ಹುಬ್ಬಳ್ಳಿ ಮತದಾರರಿಂದ ಮನೆಗೆ ಬಹಿಷ್ಕಾರದ ಬೋರ್ಡ್

    ಹುಬ್ಬಳ್ಳಿ: ಮತ ಕೇಳಲು ಬರಬೇಡಿ ಎಂಬ ಬೋರ್ಡ್ ಹಿಡಿದು ನಿಂತು ಹಾಗೂ ಮನೆ ಗೇಟ್‍ಗಳಿಗೆ ಅಂಟಿಸಿ ಮತದಾರರು ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ.

    ಕಳೆದ ಹಲವು ವರ್ಷದಿಂದ ಮುಖ್ಯ ರಸ್ತೆಯಿಂದ ಕಾಲೋನಿಗೆ ಸಂಪರ್ಕಿಸುವ ರಸ್ತೆ ಬಂದ್ ಮಾಡಿರುವುದನ್ನು ತೆರವುಗೊಳಿಸಿ, ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿ ಈ ಪ್ರತಿಭಟನೆ ನಡೆಸಿದ್ದಾರೆ. ಭೈರಿದೇವರಕೊಪ್ಪದ ರಾಜಧಾನಿ ಕಾಲೋನಿ, ನಮ್ರತಾ ಕಾಲೋನಿ, ಮಲ್ಲನಗೌಡರ ಚಾಳದ ನಿವಾಸಿಗಳು ಪಾಲಿಕೆ ಚುನಾವಣೆ ವೇಳೆ ಮತದಾನ ಬಹಿಷ್ಕರಿಸುವುದಾಗಿ ಪ್ರತಿಭಟಿಸಿದ್ದಾರೆ. ಸಾವಿರಾರು ಮತದಾರರು ಮನೆ ಮನೆಗೆ ಬಹಿಷ್ಕಾರದ ಬೋರ್ಡ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನಮ್ಮ ಕಾಲೋನಿಗೆ ಸೂಕ್ತ ರಸ್ತೆ ಸಂಪರ್ಕ ಆಗುವರೆಗೆ ಮತದಾನ ಬಹಿಷ್ಕಾರ ಮಾಡುತ್ತೇವೆ. ಇಲ್ಲಿ ಮತಯಾಚಿಸಲು ಯಾರೂ ಬರಬಾರದು. ಸಮಸ್ಯೆ ಬಗೆಹರಿಸಿ ಮತಯಾಚನೆಗೆ ಬರುವಂತೆ ಚುನಾವಣಾ ಅಭ್ಯರ್ಥಿಗಳಿಗೆ ನಿವಾಸಿಗಳು ತಿಳಿಸಿದ್ದಾರೆ. ಸೆಪ್ಟೆಂಬರ್ 3ರಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ನಡೆಯಲಿದ್ದು, ಮತದಾನ ಬಹಿಷ್ಕಾರ ಅಭ್ಯರ್ಥಿಗಳಿಗೆ ಇನ್ನಿಲ್ಲದ ಸಂಕಷ್ಟ ತಂದಿದೆ. ಇದನ್ನೂ ಓದಿ: ಒಬ್ಬ ಮನುಷ್ಯನಿಗೆ ತಿಂಗಳಿಗೆ 5 ಕೆಜಿ ಅಕ್ಕಿ ಸಾಕು ಹೇಳಿಕೆ ವಾಪಸ್ ಪಡೆಯಲ್ಲ: ಕತ್ತಿ

    ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಶಾಸಕ ಅರವಿಂದ ಬೆಲ್ಲದ್, ಸಂಸದ ಪ್ರಲ್ಹಾದ್ ಜೋಶಿ, ಜಿಲ್ಲಾಧಿಕಾರಿ ಸೇರಿದಂತೆ ಎಲ್ಲ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೂ ಸಮಸ್ಯೆ ಕಗ್ಗಂಟಾಗಿಯೇ ಉಳಿದಿದೆ. ಹೀಗಾಗಿ ನಾವು ಮತದಾನ ಬಹಿಷ್ಕರಿಸಿದ್ದೇವೆ ಎಂದು ಬ್ಯಾನರ್‍ನಲ್ಲಿ ಬರೆಯಲಾಗಿದೆ.

    ಈ ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಬಿಜೆಪಿ ನಾಯಕರು, ಸ್ಥಳೀಯರೊಂದಿಗೆ ಚರ್ಚಿಸಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರೊಂದಿಗೆ ಸಭೆ ನಡೆಸಿ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಮೂರ್ನಾಲ್ಕು ದಿನಗಳಲ್ಲಿ ಬಂದ್ ಮಾಡಿರುವ ರಸ್ತೆ ತೆರವುಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸದಿದ್ದರೆ, ಕೋರ್ಟ್ ಮೆಟ್ಟಿಲೇರುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.

  • ನೀರು ಕೊಟ್ಟು ವೋಟು ಕೇಳೋಕೆ ಬನ್ನಿ – ನೀರಿಗಾಗಿ ಮತದಾನ ಬಹಿಷ್ಕಾರಿಸಿದ ಗ್ರಾಮಸ್ಥರು

    ನೀರು ಕೊಟ್ಟು ವೋಟು ಕೇಳೋಕೆ ಬನ್ನಿ – ನೀರಿಗಾಗಿ ಮತದಾನ ಬಹಿಷ್ಕಾರಿಸಿದ ಗ್ರಾಮಸ್ಥರು

    ಬೆಳಗಾವಿ (ಚಿಕ್ಕೋಡಿ): ಈ ಬಾರಿ ಲೋಕಸಭಾ ಚುನಾವಣೆ ನಮಗೆ ಬೇಡ, ನಮ್ಮೂರಿಗೆ ಜನಪ್ರತಿನಿಧಿಗಳು ಮತ ಕೇಳೋಕೆ ಬರೋದು ಬೇಡ ಅಂತ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಗ್ರಾಮಸ್ಥರು ನೀರಿಗಾಗಿ ಮತದಾನ ಬಹಿಷ್ಕರಿಸಲು ಮುಂದಾಗಿದ್ದಾರೆ.

    ನೀರು ಕೊಟ್ಟು ನಂತರ ವೋಟು ಕೇಳೋಕೆ ಬನ್ನಿ. ಪ್ರಜಾಪ್ರಭುತ್ವಕ್ಕೆ ಮತಬೇಕು, ಬದುಕಲು ನೀರು ಬೇಕು ಅಂತ ಕೈಯಲ್ಲಿ ಸ್ಲೋಗನ್ ಹಿಡಿದು ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ಗ್ರಾಮಸ್ಥರ ಈ ಗೋಳು ಕಳೆದ 30 ವರ್ಷಗಳಿಂದ ಯಾವುದೇ ಜನಪ್ರತಿನಿಧಿಗಳು ಕೇಳಿಲ್ಲ. ರಾಜ್ಯ ಸರ್ಕಾರದ ಮಾಸ್ಟರ್ ಮೈಂಡ್ ಅಂತಾನೇ ಕರೆಸಿಕೊಳ್ಳುವ ಸಚಿವ ಸತೀಶ್ ಜಾರಕಿಹೊಳಿಯವರು ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರದ ಹಂಚಿನಾಳ ಗ್ರಾಮ ಹಾಗೂ ಉಳ್ಳಾಗಡ್ಡಿ ಖಾನಾಪುರ, ಕುರಣಿ, ಚಿಕ್ಕಾಲಗುಡ್ಡ ಸೇರಿದಂತೆ ಐದು ಊರಿಗೆ ಸರಿಯಾಗಿ ಕುಡಿಯೋಕೆ ಮತ್ತು ಕೃಷಿಗೆ ನೀರು ಸಿಗುತ್ತಿಲ್ಲ. ತಮಗೆ ನೀರು ಕೊಡುವವರೆಗೂ ನಾವು ಮತದಾನ ಮಾಡುವುದಿಲ್ಲ ಅಂತ ಗ್ರಾಮಸ್ಥರು ಪಟ್ಟು ಹಿಡಿದು ಕುಳಿತಿದ್ದಾರೆ.

    ಈ ಗ್ರಾಮಗಳಿಗೆ ನೀರ ಹರಿಸುವ ಉದ್ದೇಶದಿಂದ ಸುಮಾರು 30 ವರ್ಷಗಳ ಹಿಂದೆ ಹಿಡಕಲ್ ಜಲಾಶಯದಿಂದ ಕುರಣಿ ಏತನೀರಾವರಿ ಯೋಜನೆ ನಿರ್ಮಾಣ ಮಾಡಲಾಗಿದೆ. ಈ ಗ್ರಾಮಗಳಿಂದ ಕುರಣಿ ಏತನೀರಾವರಿ ಯೋಜನೆಯ ನೀರೆತ್ತುವ ಜಾಗವಿರೋದು ಕೇವಲ 3 ಕಿ.ಮೀ ಅಷ್ಟೇ. ಆದರೆ ಅಲ್ಲಿಂದ ಇಲ್ಲಿಯವರೆಗೂ ಒಂದ ಬಾರಿ ಬಿಟ್ಟರೆ ಮತ್ಯಾವತ್ತೂ ಸಹ ನೀರು ಬಂದಿಲ್ಲ ಅನ್ನೋದು ಗ್ರಾಮಸ್ಥರ ಆರೋಪವಾಗಿದೆ.

    ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯ ಸದ್ಯ ಎರಡು ಜಿಲ್ಲೆಗಳ ನೀರಿನ ಬವಣೆ ಹೋಗಲಾಡಿಸ್ತಿದೆ. ಆದರೆ ದೀಪದ ಕೆಳಗೆ ಕತ್ತಲು ಎಂಬಂತೆ ಹುಕ್ಕೇರಿ ತಾಲೂಕಿನ ಜನರಿಗೆ ಸರಿಯಾಗಿ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಕೃಷಿಗೆ ಸಮರ್ಪಕ ನೀರಿನ ವ್ಯವಸ್ಥೆ ಸಿಕ್ಕಿಲ್ಲ. ಹೀಗಾಗಿ ಬರೀ ಆಶ್ವಾಸನೆ ನೀಡಿ ಕೈ ತೊಳೆದುಕೊಂಡು ಹೋಗುವ ನಾಯಕರಿಗೆ ಬಿಸಿ ಮುಟ್ಟಿಸುವ ಸಲುವಾಗಿ ಈ ಬಾರಿ ಈ ನಾಲ್ಕು ಗ್ರಾಮದ ಜನರು ಮತದಾನ ಬಹಿಷ್ಕಾರದ ಹಾದಿ ಹಿಡಿದಿದ್ದು, ಆದಷ್ಟು ಬೇಗ ಜನ ಪ್ರತಿನಿಧಿಗಳು ಇತ್ತ ಗಮನ ಹರಿಸಿ ಜನರ ಸಮಸ್ಯೆ ಬಗೆಹರಿಸಬೇಕು ಅಂತ ಆಗ್ರಹಿಸಿದ್ದಾರೆ.

  • ಯಾರಿಗೆ ಮತ ಹಾಕಿದ್ದಾರೋ ಅವರ ಜೊತೆ ಚರ್ಚೆ ಮಾಡಲಿ: ಸಾರಾ ಮಹೇಶ್

    ಯಾರಿಗೆ ಮತ ಹಾಕಿದ್ದಾರೋ ಅವರ ಜೊತೆ ಚರ್ಚೆ ಮಾಡಲಿ: ಸಾರಾ ಮಹೇಶ್

    ಮಂಡ್ಯ: ಕ್ಷೇತ್ರದಲ್ಲಿ ಚುನವಣಾ ಬಹಿಷ್ಕಾರ ಮಾಡಿರುವ ಗ್ರಾಮಗಳು ಕಾಂಗ್ರೆಸ್‍ಗೆ ಮತದಾನ ಮಾಡುವ ಗ್ರಾಮಗಳಾಗಿದ್ದು, ಅವರು ಕೇಳಿದ ಸಾಕಷ್ಟು ಮೂಲಭೂತ ಸೌಲಭ್ಯಗಳನ್ನು ನೀಡಿದ್ದೇನೆ. ಇನ್ನು ಹೆಚ್ಚಿನ ಸೌಲಭ್ಯ ಬೇಕಾದರೆ ಕಾಂಗ್ರೆಸ್ ನಾಯಕರು ಹೋಗಿ ಚರ್ಚೆ ಮಾಡುತ್ತಾರೆ ಎಂದು ಸಚಿವ ಸಾರಾ ಮಹೇಶ್ ಹೇಳಿದ್ದಾರೆ.

    ಜಿಲ್ಲೆಯ ಅರಂಬಳ್ಳಿ ಗ್ರಾಮಸ್ಥರು ರಸ್ತೆ ಕೇಳಿದ್ದರು. ಅವರ ಮನವಿ ಮೇರೆಗೆ ಕ್ರಮಕೈಗೊಂಡಿದ್ದೇನೆ. ಆದರೆ ಚುನಾವಣಾ ನೀತಿ ಸಂಹಿತೆಯಿಂದ ಸದ್ಯ ಪ್ರಕ್ರಿಯೆ ತಡವಾಗಿದೆ. ಅದ್ದರಿಂದ ಗ್ರಾಮಸ್ಥರ ಮನವೊಲಿಕೆ ಮಾಡುತ್ತೇನೆ. ಆದರೆ ಬಾಚಹಳ್ಳಿ, ದೊಡ್ಡ ಕೊಪ್ಪಲು ಗ್ರಾಮದಲ್ಲಿ ರಾಜಕೀಯ ಪ್ರೇರಿತವಾಗಿ ಬಹಿಷ್ಕಾರ ಮಾಡಿದ್ದಾರೆ. ಎರಡು ಗ್ರಾಮಗಳಿಗೆ ಈಗಾಗಲೇ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲೂ 2 ಗ್ರಾಮಗಳಲ್ಲಿ ಶೇ.99ರಷ್ಟು ಜನ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದಾರೆ. ಅವರಿಗೆ ಹೆಚ್ಚಿನ ಸೌಲಭ್ಯಗಳು ಬೇಕಾದಲ್ಲಿ ಅವರ ಮುಖಂಡರು ಹೋಗಿ ಚರ್ಚೆ ಮಾಡುತ್ತಾರೆ ಎಂದರು.

    ರಾಜಕೀಯ ಪಕ್ಷಗಳ, ಜನರ ಅಭಿಪ್ರಾಯಕ್ಕೆ ವಿರುದ್ಧವಾಗಿ ಚುನಾವಣೆ ಘೋಷಣೆ ಮಾಡಲಾಗಿದ್ದು, ಅದ್ದರಿಂದ ಮತದಾನ ಪ್ರಕ್ರಿಯೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಅಲ್ಲದೇ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತದಾನ ಮಾಡಲಾಗುತ್ತದೆ. ಈ ಬಾರಿಯೂ ಶೇ.50 ರಷ್ಟು ಮತದಾನ ಆಗುವ ಸಾಧ್ಯತೆ ಇದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದಯವಿಟ್ಟು ಮತ ಕೇಳಲು ಬರಬೇಡಿ – ಸ್ಮಾರ್ಟ್ ಸಿಟಿ ದಾವಣಗೆರೆ ಜನತೆಯಿಂದ ಅಭಿಯಾನ

    ದಯವಿಟ್ಟು ಮತ ಕೇಳಲು ಬರಬೇಡಿ – ಸ್ಮಾರ್ಟ್ ಸಿಟಿ ದಾವಣಗೆರೆ ಜನತೆಯಿಂದ ಅಭಿಯಾನ

    ದಾವಣಗೆರೆ: ಮೂಲ ಸೌಕರ್ಯ ಕಲ್ಪಿಸದ ಮಹಾನಗರ ಪಾಲಿಕೆ ವಿರುದ್ಧ ನಗರದ ಸ್ಮಾರ್ಟ್ ಸಿಟಿಯಲ್ಲಿನ ನಿವಾಸಿಗಳು ಕೋಪಗೊಂಡಿದ್ದು, ದಯವಿಟ್ಟು ಮತ ಕೇಳಲು ಬರಬೇಡಿ ಎಂದು ಮತದಾನ ಬಹಿಷ್ಕಾರ ಅಭಿಯಾನ ನಡೆಸುತ್ತಿದ್ದಾರೆ.

    ಮಹಾನಗರ ಪಾಲಿಕೆಯ 18 ನೇ ವಾರ್ಡ್ ವಿನಾಯಕ ನಗರದ “ಎ” ಬ್ಲಾಕ್ ನಲ್ಲಿ 200 ಕ್ಕೂ ಹೆಚ್ಚು ಮನೆಗಳಿವೆ. ಅದರಲ್ಲಿ 100 ಕ್ಕೂ ಹೆಚ್ಚು ಮನೆಗಳ ಮುಂದೆ ಜನ ಮತದಾನ ಬಹಿಷ್ಕಾರದ ಪೋಸ್ಟರ್ ಹಾಕಿದ್ದಾರೆ.

    20 ದಿನಗಳಿಗೊಮ್ಮೆ ಕುಡಿಯೋಕೆ ನೀರು ಬಿಡ್ತಾರೆ. ಅಲ್ಲದೇ ರಾತ್ರಿ ಬೀದಿ ದೀಪದ ವ್ಯವಸ್ಥೆ ಇಲ್ಲ, ರಸ್ತೆ ಗುಂಡಿಮಯವಾಗಿವೆ. ಹಾಗೂ ಸ್ವಚ್ಛತೆ ಅನ್ನೋದು ಮರೀಚಿಕೆಯಾಗಿದೆ. ಸಮಸ್ಯೆಯ ಬಗ್ಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಕೆಲಸ ಆಗದ ಹಿನ್ನೆಲೆಯಲ್ಲಿ ನಾವು ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ನಿವಾಸಿಗಳು ಹೇಳಿದ್ದಾರೆ.

    ಮೂಲ ಸೌಕರ್ಯಕ್ಕೆ ಆಗ್ರಹಿಸಿ ಸತತ ಮೂರು ವರ್ಷಗಳಿಂದ ಹೋರಾಟ ನಡೆಸಿದರೂ ಅಲ್ಲಿನ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜನರ ಸಮಸ್ಯೆ ಆಲಿಸದೇ ಅತ್ತ ತಿರುಗಿಯೂ ಕೂಡ ನೋಡುತ್ತಿಲ್ಲ. ಹಾಗಾಗಿ ಮೂಲ ಸೌಕರ್ಯ ಒದಗಿಸದ ಹೊರತು ಮತದಾನ ಮಾಡೋದಿಲ್ಲ ಅಂತ ಪಟ್ಟು ಹಿಡಿದು ನಿವಾಸಿಗಳು ಮತದಾನ ಬಹಿಷ್ಕಾರ ಅಭಿಯಾನವನ್ನು ಕೈಗೊಂಡಿದ್ದಾರೆ.

  • ಭರವಸೆ ಈಡೇರಿಸದೆ ಬಂದ ಶಾಸಕರೆದುರೇ ಮತದಾನ ಬಹಿಷ್ಕಾರ ಘೋಷಣೆ ಮಾಡಿದ ಗ್ರಾಮಸ್ಥರು!

    ಭರವಸೆ ಈಡೇರಿಸದೆ ಬಂದ ಶಾಸಕರೆದುರೇ ಮತದಾನ ಬಹಿಷ್ಕಾರ ಘೋಷಣೆ ಮಾಡಿದ ಗ್ರಾಮಸ್ಥರು!

    ಹಾಸನ: ಕೊಟ್ಟ ಭರವಸೆ ಈಡೇರಿಸದೆ ಮತ್ತೆ ಗ್ರಾಮಕ್ಕೆ ಬಂದ ಶಾಸಕರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡು ಬೆವರು ಇಳಿಸಿದ್ದಾರೆ. ಅಲ್ಲದೆ ಮತದಾನ ಬಹಿಷ್ಕರಿಸುವುದಾಗಿ ಶಾಸಕರ ಎದರೇ ಘೋಷಣೆ ಕೂಗಿದ್ದಾರೆ.

    ಈ ಘಟನೆ ಹಾಸನದ ಸಕಲೇಶಪುರ ತಾಲೂಕಿನ ಅತ್ತಿಹಳ್ಳಿಯಲ್ಲಿ ನಡೆದಿದೆ. ಕ್ಷೇತ್ರದ ಶಾಸಕ ಹೆಚ್.ಕೆ.ಕುಮಾರ್ ಸ್ವಾಮಿ ಗ್ರಾಮದಲ್ಲಿ ಸುಗ್ಗಿಹಬ್ಬ ಇರೋದ್ರಿಂದ ಭೇಟಿ ನೀಡಿದ್ದರು. ಆದ್ರೆ ಈ ಸಂದರ್ಭವನ್ನು ಉಪಯೋಗಿಸಿದ ಗ್ರಾಮಸ್ಥರು ಮೂಲಭೂತ ಸೌಕರ್ಯಗಳನ್ನು ನೀಡದೆ ಇರುವ ಬಗ್ಗೆ ಶಾಸಕರಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ರು.

    ಗ್ರಾಮಸ್ಥರ ಈ ರೀತಿಯ ಸಿಟ್ಟಿನಿಂದ ಹೈರಾಣಾದಂತೆ ಕಂಡ ಶಾಸಕರು ಕೊಂಚ ಸಮಾಧಾನಪಡಿಸುವ ಯತ್ನ ಮಾಡಿದರೂ ಪ್ರಯೋಜನ ಆಗಲಿಲ್ಲ. ಗ್ರಾಮಸ್ಥರು ಮತದಾನ ಬಹಿಷ್ಕಾರದ ಘೋಷಣೆಗಳನ್ನು ಕೂಗಿದರು. ಸಕಲೇಶಪುರ ಆಲೂರು ಮೀಸಲು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಈ ಗ್ರಾಮದಲ್ಲಿ ಕಳೆದ 10 ವರ್ಷಗಳಿಂದ ಒಮ್ಮೆ ಮಾತ್ರ ಅಭಿವೃದ್ಧಿ ಕಂಡಿದೆ.

    ಗ್ರಾಮಕ್ಕೆ ಸರಿಯಾದ ಕುಡಯುವ ನೀರಿಲ್ಲ. ಆಸ್ಪತ್ರೆ, ಪಶು ಆಸ್ಪತ್ರೆ ಇದೆ ಆದ್ರೆ ವೈದ್ಯರಿಲ್ಲ. ಶಾಲೆ ಇದೆ ಆದ್ರೆ ಮುರಿದ ಕಟ್ಟಡಗಳು. ಹೀಗೆ ಹಲವು ಸಮಸ್ಯೆಗಳು ಗ್ರಾಮದಲ್ಲಿವೆ. ಆದ್ರೆ ಶಾಸಕರು ನೆಪಕ್ಕೆ ಮಾತ್ರ ಆಶ್ವಾಸನೆ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

    ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕರು ನಾನು ಅಭಿವೃದ್ಧಿ ಮಾಡಿದ್ದೇನೆ. ಆದ್ರೆ ಸರ್ಕಾರದ ಅನುದಾನ ನನ್ನ ಕ್ಷೇತ್ರಕ್ಕೆ ಸಾಲುತಿಲ್ಲ ಎಂದು ಹೇಳಿ ಕೈಚೆಲ್ಲಿದ್ದಾರೆ. ಒಟ್ಟಿನಲ್ಲಿ ಅತ್ತಿಹಳ್ಳಿ ಗ್ರಾಮಸ್ಥರ ಆಕ್ರೋಶದಿಂದ ಪೇಚಿಗೆ ಸಿಲುಕಿದ ಶಾಸಕರು ಅಲ್ಲಿಂದ ವಾಪಸ್ಸಾದ್ರು.