Tag: ಮತಗಟ್ಟೆ

  • ಮತಗಟ್ಟೆಯ ಒಳಗಡೆ ಕಾಂಗ್ರೆಸ್‍ಗೆ ಮತ ಹಾಕುವಂತೆ ಒತ್ತಡ

    ಮತಗಟ್ಟೆಯ ಒಳಗಡೆ ಕಾಂಗ್ರೆಸ್‍ಗೆ ಮತ ಹಾಕುವಂತೆ ಒತ್ತಡ

    ಬಾಗಲಕೋಟೆ: ಮತಗಟ್ಟೆ ಒಳಗೆ ಹೋಗಿದ್ದ ಕಾರ್ಯಕರ್ತರು ಕಾಂಗ್ರೆಸ್‍ಗೆ ಮತ ಹಾಕುವಂತೆ ಮತದಾರರಿಗೆ ಒತ್ತಾಯ ಮಾಡಿದ ಘಟನೆ ಜಿಲ್ಲೆಯ ಗುಳೇದಗುಡ್ಡದಲ್ಲಿ ನಡೆದಿದೆ.

    ಗುಳೇದಗುಡ್ಡದ ಮತಗಟ್ಟೆ ಸಂಖ್ಯೆ 25 ರಲ್ಲಿ ಮತದಾನ ಪ್ರಕ್ರಿಯೆ ನಡೆಯುತಿತ್ತು. ಈ ವೇಳೆ ಅಲ್ಲಿಗೆ ಬಂದ ಕೆಲ ಕಾರ್ಯಕರ್ತರು ಕಾಂಗ್ರೆಸ್‍ಗೆ ಮತ ಹಾಕುವಂತೆ ಒತ್ತಾಯಿಸಿದರು. ಇದರಿಂದಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆಯಿತು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

    ಬಾಗಲಕೋಟೆ ನಗರದ ಪಂಕಾ ಮಸಿದಿ ಬಳಿ ಮತಗಟ್ಟೆ 2ರಲ್ಲಿ ಮತಚಲಾಯಿಸುವ ವಿಚಾರವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆದು ಗಲಾಟೆಯಾಗಿತ್ತು. ಇದರಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣವೇ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಈ ಮೂಲಕ ಎರಡೂ ಪಕ್ಷದ ಕಾರ್ಯಕರ್ತರನ್ನು ಚದುರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

    ಮತದಾನ ಪ್ರಕ್ರಿಯೆ ಯತಾಸ್ಥಿತಿಯಲ್ಲಿ ಮುಂದುವರಿದಿದ್ದು, ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ನಿಯಮ ಉಲ್ಲಂಘನೆ ಆರೋಪ ಕೇಳಿ ಬಂದಿದೆ.

  • ಫೋನಿನಲ್ಲಿ ಹೇಳಿದ್ದನ್ನು ಕೇಳಿ ಚುನಾವಣಾಧಿಕಾರಿ ಪ್ರಾಣ ಉಳಿಸಿದ ಯೋಧ

    ಫೋನಿನಲ್ಲಿ ಹೇಳಿದ್ದನ್ನು ಕೇಳಿ ಚುನಾವಣಾಧಿಕಾರಿ ಪ್ರಾಣ ಉಳಿಸಿದ ಯೋಧ

    ಶ್ರೀನಗರ: ಲಘು ಹೃದಯಾಘಾತಕ್ಕೆ ಒಳಗಾಗಿದ್ದ ಚುನಾವಣಾ ಅಧಿಕಾರಿಯನ್ನು ಸಿಆರ್‌ಪಿಎಫ್ ಯೋಧರೊಬ್ಬರು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

    ಯೋಧ ಸುರೇಂದ್ರ ಕುಮಾರ್ ಅವರ ಸಮಯ ಪ್ರಜ್ಞೆ ಹಾಗೂ ಮುಂಜಾಗ್ರತೆಯಿಂದಾಗಿ ಚುನಾವಣಾ ಅಧಿಕಾರಿ ಅಸನ್ ಉಲ್ ಹಕ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುರೇಂದ್ರ ಕುಮಾರ್ ಅವರ ಕೆಲಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

    ಆಗಿದ್ದೇನು?:
    ಜಮ್ಮು-ಕಾಶ್ಮೀರದಲ್ಲಿ ಗುರುವಾರ ಲೋಕಸಭಾ ಚುನಾವಣೆ ನಡೆದಿತ್ತು. ಈ ವೇಳೆ ಕಾಶ್ಮೀರದ 13ನೇ ಮತಗಟ್ಟೆಯ ಚುನಾವಣಾ ಅಧಿಕಾರಿ ಅಸನ್ ಉಲ್ ಹಕ್ ಅವರಿಗೆ ಲಘು ಹೃದಯಾಘಾತ ಸಂಭವಿಸಿತ್ತು. ಅದೇ ಮತಗಟ್ಟೆಯ ಭದ್ರತೆಗೆ ನಿಯೋಜನೆಗೊಂಡಿದ್ದ ಯೋಧ ಸುರೇಂದ್ರ ಕುಮಾರ್ ಅವರು ತಕ್ಷಣವೇ ಪ್ರಥಮ ಚಿಕಿತ್ಸೆಗೆ ಮುಂದಾದರು. ವೈದ್ಯ ಸುನೀಮ್ ಅವರು ಫೋನ್ ಮಾಡಿ, ಸುರೇಂದ್ರ ಕುಮಾರ್ ಅವರಿಗೆ ಏನು ಮಾಡಬೇಕು ಎಂದು ಸಲಹೆ ನೀಡಿದರು.

    ಸುರೇಂದ್ರ ಕುಮಾರ್ ಅವರು ವೈದ್ಯರು ಸಲಹೆಯಂತೆ 30 ಬಾರಿ ಅಸನ್ ಉಲ್ ಹಕ್ ಅವರ ಬಾಯಲ್ಲಿ ಬಾಯಿ ಇಟ್ಟು ಗಾಳಿ ಬಿಡುತ್ತಿದ್ದರು. ಈ ಮೂಲಕ ಸುಮಾರು 50 ನಿಮಿಷಗಳ ಕಾಲ ಪ್ರಥಮ ಚಿಕಿತ್ಸೆ ನೀಡಿದರು. ಆಂಬುಲೆನ್ಸ್ ಮೂಲಕ ಮತಗಟ್ಟೆ ತಲುಪಿದ ವೈದ್ಯರು ಚಿಕಿತ್ಸೆ ಮುಂದುವರಿಸಿದರು.

    ಈ ಕುರಿತು ಪ್ರತಿಕ್ರಿಯೆ ನೀಡಿದ ವೈದ್ಯ ಸುನೀಮ್ ಅವರು, ಸುರೇಂದ್ರ ಕುಮಾರ್ ಸಮಯ ಪ್ರಜ್ಞೆ ತೋರಿ, ನಾವು ಮತಗಟ್ಟೆ ತಲುಪುವವರೆಗೂ ಪ್ರಥಮ ಚಿಕಿತ್ಸೆ ನೀಡಿದರು. ಹೀಗಾಗಿ ಅಸನ್ ಉಲ್ ಹಕ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ.

  • ಮತಗಟ್ಟೆ ಬಾಗಿಲಿಗೆ ಬೆಂಕಿಯಿಟ್ಟ ದುಷ್ಕರ್ಮಿಗಳು!

    ಮತಗಟ್ಟೆ ಬಾಗಿಲಿಗೆ ಬೆಂಕಿಯಿಟ್ಟ ದುಷ್ಕರ್ಮಿಗಳು!

    ಕೋಲಾರ: ಮತದಾನಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗ ಮತಗಟ್ಟೆಯ ಬಾಗಿಲಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ಕೋಲಾರದಲ್ಲಿ ನಡೆದಿದೆ.

    ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಲೊಚರುವಪಲ್ಲಿ ಗ್ರಾಮದ ಮತಗಟ್ಟೆ ಸಂಖ್ಯೆ 94 ರಲ್ಲಿ ಈ ಘಟನೆ ನಡೆದಿದೆ. ಇಂದು ಬೆಳಗ್ಗಿನ ಜಾವ ದುಷ್ಕರ್ಮಿಗಳು ಬಾಗಿಲಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.

    ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ರಾಜ್ಯದಲ್ಲಿ ಲೋಕಸಭೆಯ ಮೊದಲ ಹಂತದ ಮತದಾನಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು ಒಟ್ಟು 14 ಕ್ಷೇತ್ರಗಳಲ್ಲಿ ಗುರುವಾರ ಮತದಾನ ನಡೆಯಲಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಉಡುಪಿ- ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

    ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಕೆ. ಎಚ್ ಮುನಿಯಪ್ಪ ಸ್ಪರ್ಧಿಸಿದ್ರೆ, ಬಿಜೆಪಿಯಿಂದ ಎಸ್. ಮುನಿಸ್ವಾಮಿ ಚುನಾವಣಾ ಕಣದಲ್ಲಿದ್ದಾರೆ.

  • ಮತಗಟ್ಟೆಗಳಲ್ಲಿ ಮೋದಿ ಸಿಸಿಟಿವಿ ಕ್ಯಾಮೆರಾ ಇಟ್ಟಿದ್ದಾರೆ: ಬಿಜೆಪಿ ಶಾಸಕ

    ಮತಗಟ್ಟೆಗಳಲ್ಲಿ ಮೋದಿ ಸಿಸಿಟಿವಿ ಕ್ಯಾಮೆರಾ ಇಟ್ಟಿದ್ದಾರೆ: ಬಿಜೆಪಿ ಶಾಸಕ

    – ಕಾಂಗ್ರೆಸ್‍ಗೆ ಯಾರು ಮತ ಹಾಕಿದ್ರು ಅಂತ ತಿಳಿಯುತ್ತೆ

    ಗಾಂಧಿನಗರ: ಕಾಂಗ್ರೆಸ್‍ಗೆ ಯಾರು ಮತ ಹಾಕಿದರು ಅಂತ ನೋಡಲು ಪ್ರಧಾನಿ ನರೇಂದ್ರ ಮೋದಿ ಅವರು ಮತಗಟ್ಟೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಇಟ್ಟಿದ್ದಾರೆ ಎಂದು ಗುಜರಾತ್‍ನ ಬಿಜೆಪಿ ಶಾಸಕ ರಮೇಶ್ ಕಟಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ದಾಹೊದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಸ್ವಂತ್ ಸಿನ್ಹಾ ಬಾಭೋರ್ ಅವರ ಪರ ಶಾಸಕರು ಪ್ರಚಾರ ಮಾಡುತ್ತಿದ್ದರು. ಈ ವೇಳೆ ಗ್ರಾಮವೊಂದರಲ್ಲಿ ಮಾತನಾತನಾಡಿದ ಶಾಸಕರು, ನೀವು ಮತದಾನ ಮಾಡುವಾಗ ಮತಯಂತ್ರ (ಇವಿಎಂ)ದಲ್ಲಿರುವ ಜಸ್ವಂತ್ ಸಿನ್ಹಾ ಬಾಭೋರ್ ಅವರ ಭಾವಚಿತ್ರ ಹಾಗೂ ಕಮಲದ ಚಿಹ್ನೆಯ ಪಕ್ಕದಲ್ಲೇ ಹಸಿರು ಗುಂಡಿ ಇರುತ್ತದೆ. ಅದನ್ನು ನೀವು ಒತ್ತಬೇಕು. ಸಿಸಿಟಿವಿ ಕ್ಯಾಮೆರಾಗಳು ಇರುವುದರಿಂದ ಯಾರು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದಾರೆ ಎನ್ನುವುದು ತಿಳಿಯುತ್ತದೆ ಎಂದು ತಿಳಿಸಿದ್ದಾರೆ.

    ನೀವು ಯಾರಿಗೆ ಮತ ಹಾಕುತ್ತೀರಿ ಎನ್ನುವುದನ್ನು ತಿಳಿಯಲು ಪ್ರಧಾನಿ ನರೇಂದ್ರ ಮೋದಿ ಅವರು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ಕಾಂಗ್ರೆಸ್‍ಗೆ ಮತ ಹಾಕಿದ ಮತದಾರರಿಗೆ ಉದ್ಯೋಗ ಸೇರಿದಂತೆ ಯಾವುದೇ ಸೌಕರ್ಯಗಳು ಸಿಗುವುದಿಲ್ಲ. ಆದರೆ ಬಿಜೆಪಿಗೆ ಮತದಾನ ಮಾಡಿದವರಿಗೆ ಎಲ್ಲ ರೀತಿಯ ಸೌಕರ್ಯಗಳು ಸಿಗಲಿವೆ ಎಂದು ಹೇಳಿದ್ದಾರೆ.

    ರಮೇಶ್ ಕಾತ್ರಾ ಅವರು ದಾಹೊದ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಫತೇಪುರ್ ಶಾಸಕರಾಗಿದ್ದಾರೆ. ಹೀಗಾಗಿ ತಮ್ಮ ಪಕ್ಷದ ಅಭ್ಯರ್ಥಿ ಜಸ್ವಂತ್ ಸಿನ್ಹಾ ಬಾಭೋರ್ ಅವರ ಪರ ಪ್ರಚಾರ ನಡೆಸಿದ್ದಾರೆ. ಸಿಸಿಟಿವಿ ಕ್ಯಾಮೆರಾ ಬಗ್ಗೆ ಶಾಸಕರು ನೀಡಿರುವ ಹೇಳಿಕೆಯ ಬಗ್ಗೆ ವಿಪಕ್ಷ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಮೊದಲು ಸುಲ್ತಾನಪುರದ ಬಿಜೆಪಿ ಅಭ್ಯರ್ಥಿಯಾಗಿರುವ, ಕೇಂದ್ರ ಸಚಿವೆ ಮನೇಕಾ ಗಾಂಧಿ, ಮುಸ್ಲಿಮರ ಮತಗಳ ಹೊರತಾಗಿ ನಾನು ಜಯ ಸಾಧಿಸುತ್ತೇನೆ. ಮುಸ್ಲಿಂ ಸಮುದಾಯದ ಮತ ಪಡೆಯದೇ ಜಯ ಸಾಧಿಸಲು ನನಗೆ ಇಷ್ಟವಿಲ್ಲ. ಗೆದ್ದ ಮೇಲೆ ಕೆಲಸ ಕೇಳಿಕೊಂಡು ಮುಸ್ಲಿಮರು ಬಂದಾಗ ನಾನು ನೂರು ಬಾರಿ ಯೋಚಿಸಿ ಉದ್ಯೋಗ ನೀಡೋದು ಬೇಡ ಎಂದು ನಿರ್ಧರಿಸಬೇಕಾಗುತ್ತದೆ. ಮತದ ಬದಲಾಗಿ ಉದ್ಯೋಗ ನೀಡೋದು ವ್ಯವಹಾರ ಎಂದು ಮುಸ್ಲಿಮರು ತಿಳಿದುಕೊಳ್ಳಬೇಕಿದೆ. ನಾವೇನು ಮಹಾತ್ಮ ಗಾಂಧೀಜಿಯ ಕುಟುಂಬಸ್ಥರು ಅಲ್ಲ. ಕೇವಲ ಕೊಡುವುದು ಗೊತ್ತಿಲ್ಲ. ನಮ್ಮ ಕೆಲಸಕ್ಕೆ ಪ್ರತಿಯಾಗಿ ನೀವು ನಮಗೆ ಮತ ನೀಡಬೇಕೆಂದು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದರು.

  • ಮೆಸೇಜ್ ಸೆಂಡ್ ಮಾಡಿ ಮೊಬೈಲ್‍ನಲ್ಲೇ ಮತಗಟ್ಟೆ ತಿಳಿಯಿರಿ

    ಮೆಸೇಜ್ ಸೆಂಡ್ ಮಾಡಿ ಮೊಬೈಲ್‍ನಲ್ಲೇ ಮತಗಟ್ಟೆ ತಿಳಿಯಿರಿ

    ಬೆಂಗಳೂರು: ರಾಜ್ಯದಲ್ಲಿ ಏ.18 ಮತ್ತು ಏ.23 ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಗ್ರಾಮೀಣ ಭಾಗದಲ್ಲಿ ಮತಗಟ್ಟೆಯನ್ನು ಹುಡುಕುವುದು ಕಷ್ಟದ ಕೆಲಸವಲ್ಲ. ಆದರೆ ಬೆಂಗಳೂರು ಸೇರಿದಂತೆ ದೊಡ್ಡ ದೊಡ್ಡ ನಗರದಲ್ಲಿ ಮತದಾನದ ಕೇಂದ್ರ ಎಲ್ಲಿದೆ ಎಂದು ಹುಡುಕುವುದೇ ಕಷ್ಟದ ಕೆಲಸ. ಕೆಲವು ಮಂದಿ ಮತಗಟ್ಟೆ ಸಿಕ್ಕಿಲ್ಲ ಎಂದು ಹೇಳಿ ವೋಟ್ ಹಾಕದೇ ಹೋಗುತ್ತಾರೆ.

    ಮತಗಟ್ಟೆ ಹುಡುಕುವುದು ಕಷ್ಟ ಆಗುತ್ತದೆ ಎಂದು ತಿಳಿದು ವೋಟ್ ಹಾಕದೇ ಇರಬೇಡಿ. ಕೇವಲ 1 ನಿಮಿಷದಲ್ಲಿ ಮೊಬೈಲ್ ನಲ್ಲೇ ನಿಮ್ಮ ಮತಗಟ್ಟೆ ಯಾವುದು ಎನ್ನುವುದನ್ನು ಕ್ಷಣದಲ್ಲೇ ತಿಳಿದುಕೊಳ್ಳಬಹುದು. ಒಂದು ಮೆಸೇಜ್ ಹಾಕಿದರೆ ನಿಮ್ಮ ಮೊಬೈಲ್ ಗೆ ಮತಗಟ್ಟೆಯ ಸಂಪೂರ್ಣ ವಿವರ ಲಭ್ಯವಾಗುತ್ತದೆ.

    ಯಾವ ನಂಬರ್?
    ಮತಗಟ್ಟೆಯನ್ನು ತಿಳಿಯಬೇಕಾದರೆ ನೀವು 1950 ಅಥವಾ 9731979899 ನಂಬರಿಗೆ ಮೆಸೇಜ್ ಕಳುಹಿಸಬಹುದು.

    ಮೆಸೇಜ್ ಹೇಗೆ ಮಾಡಬೇಕು?
    ECIPS ಟೈಪ್ ಮಾಡಿ ಒಂದು ಸ್ಪೇಸ್ ಬಿಟ್ಟು ವೋಟರ್ ಐಡಿ ನಂಬರ್ ಟೈಪ್ ಮಾಡಿ 1950 ನಂಬರ್ ಗೆ ಸೆಂಡ್ ಮಾಡಿ ಅಥವಾ ECIPS ಟೈಪ್ ಮಾಡಿ ಒಂದು ಸ್ಪೇಸ್ ಬಿಟ್ಟು ವೋಟರ್ ಐಟಿ ನಂಬರ್ ಟೈಪ್ ಮಾಡಿ 9731979899 ನಂಬರ್ ಗೆ ಕಳುಹಿಸಿ.

    ಉದಾಹರಣೆ : KAEPIC<“space”>ID CARD NO. ಈ ರೀತಿ  ಟೈಪ್ ಮಾಡಿ KAEPIC XVY15018368 ಸೆಂಡ್ ಮಾಡಿ.

    ಈ ಮೇಲಿನ ರೀತಿಯಲ್ಲಿ ನೀವು ಸರಿಯಾಗಿ ಟೈಪ್ ಮಾಡಿ ಮಸೇಜ್ ಕಳುಹಿಸಿದ್ದರೆ ನಿಮ್ಮ ಮೊಬೈಲ್‍ಗೆ ಮತಗಟ್ಟೆ ಎಲ್ಲಿದೆ ಎನ್ನುವ ಮಾಹಿತಿ ಕೂಡಲೇ ಬರುತ್ತದೆ.

  • ಮತಗಟ್ಟೆಗೆ ಪಿಸ್ತೂಲ್ ತಗೊಂಡೋದ ಬಿಜೆಪಿ ಅಭ್ಯರ್ಥಿ ಸಹೋದರ ವಶಕ್ಕೆ

    ಲಕ್ನೋ: ಉತ್ತರ ಪ್ರದೇಶದಲ್ಲಿ ಇಂದು ಬೆಳಗ್ಗಿನಿಂದಲೇ ಮೊದಲ ಹಂತದ ಮತದಾನ ನಡೆಯುತ್ತಿದ್ದು, ಮತಗಟ್ಟೆಗೆ ಪಿಸ್ತೂಲ್ ತೆಗೆದುಕೊಂಡು ಹೋದ ಬಿಜೆಪಿ ಮುಖಂಡ ಸಂಗೀತಾ ಸೋಮ್ ಸಹೋದರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಗಗನ್ ಸೋಮ್ ಇದೀಗ ಪೊಲೀಸರ ವಶದಲ್ಲಿದ್ದು, ಇವರು ಸಾರ್ಧನ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಮತದಾನದ ಹಿನ್ನೆಲೆಯಲ್ಲಿ ಮತಗಟ್ಟೆಯ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಈ ಮಧ್ಯೆಯೂ ಮೀರತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಗೀತ್ ಸೋಮ್ ಸಹೋದರ ಗಗನ್ ಸೋಮ್ ಪಿಸ್ತೂಲ್‍ನೊಂದಿಗೆ ಮತಗಟ್ಟೆ ಪ್ರವೇಶಿಸಿದ್ದರು. ಕೂಡಲೇ ಮಾಹಿತಿ ಪಡೆದ ಪೊಲೀಸರು ಗಗನ್ ಸೋಮ್ ಅವರನ್ನು ವಶಕ್ಕೆ ಪಡೆದಿದ್ದಾರೆ.

    ಪ್ರಕರಣ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮೊದಲ ಹಂತದ ಮತದಾನದಲ್ಲಿ ಇಂದು 73 ವಿಧಾನಸಭಾ ಕ್ಷೇತ್ರಗಳಲ್ಲಿ 2.6 ಕೋಟಿಗೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಮುಂದಿನ 6 ಹಂತದ ಮತದಾನ ಫೆಬ್ರವರಿ 15, 19, 23 ಹಾಗೂ 27 ಮತ್ತು ಮಾರ್ಚ್ 4 ಹಾಗೂ 8ರಂದು ನಡೆಯಲಿದೆ.