Tag: ಮಣ್ಣು

  • ಮಣ್ಣಲ್ಲಿ ಮುಚ್ಚಿ ಹೋಗ್ತಿದೆ 500 ವರ್ಷದ ದೇಗುಲ

    ಮಣ್ಣಲ್ಲಿ ಮುಚ್ಚಿ ಹೋಗ್ತಿದೆ 500 ವರ್ಷದ ದೇಗುಲ

    – ದೇವಸ್ಥಾನಕ್ಕೆ ಕಂಟಕವಾಯ್ತು ರಸ್ತೆ ಅಗಲೀಕರಣ

    ಮಂಡ್ಯ: ಹೆದ್ದಾರಿ ಕಾಮಗಾರಿಯಿಂದಾಗಿ ಜಿಲ್ಲೆಯಲ್ಲಿರುವ 500 ವರ್ಷಗಳ ಹಳೆಯದಾದ ಪ್ರಸಿದ್ಧ ದೇವಸ್ಥಾನಕ್ಕೆ ಕಂಟಕ ಎದುರಾಗಿದೆ. ಇದೀಗ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ದೇಗುಲವೇ ಮುಚ್ಚಿಹೋಗುವ ಆತಂಕ ಎದುರಾಗಿದೆ.

    ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿ ತೀರದಲ್ಲಿ ರಂಗನಾಥ ಸ್ವಾಮಿ ದೇವಾಲಯ ಇದೆ. ಇದು 500 ವರ್ಷಗಳ ಹಿಂದಿನ ಪುರಾಣ ಪ್ರಸಿದ್ಧ ದೇವಾಲಯ. ರಂಗನಾಥ ಸ್ವಾಮಿ ಮಲಗಿರುವ ಭಂಗಿಯಲ್ಲಿ ವಿಗ್ರಹ ಕೆತ್ತಲಾಗಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ದೇವಾಲಯ ಮಣ್ಣಲ್ಲಿ ಮಣ್ಣಾಗುವ ಆತಂಕ ಎದುರಾಗಿದೆ.

    ನೂರಾರು ವರ್ಷಗಳ ಇತಿಹಾಸ ಹೊಂದಿರುವ ದೇಗುಲಗಳು ಹತ್ತಾರಿವೆ. ಅದರಲ್ಲಿ ವಿಜಯನಗರ ಅರಸರ ಕಾಲದ ಈ ರಂಗನಾಥ ಸ್ವಾಮಿ ದೇಗುಲವೂ ಒಂದು. ಶ್ರೀರಂಗಪಟ್ಟಣದ ಗಂಜಾಂ ಸಮೀಪದ ಗದ್ದೆಯೊಂದರಲ್ಲಿ ದೇವಾಲಯ ನಿರ್ಮಿಸಿರುವುದರಿಂದ ಈ ದೇವಸ್ಥಾನವನ್ನು ಗದ್ದೆ ರಂಗನಾಥಸ್ವಾಮಿ ಎಂದು ಕರೆಯಲಾಗುತ್ತದೆ. ಆದರೆ ಬೆಂಗಳೂರು-ಮೈಸೂರು ಹೆದ್ದಾರಿ ನಿರ್ಮಾಣ ಕಾಮಗಾರಿಯಿಂದಾಗಿ ಗದ್ದೆ ರಂಗನಾಥಸ್ವಾಮಿ ದೇವಾಲಯ ಮುಚ್ಚಿಹೋಗುವ ಭೀತಿ ಎದುರಾಗಿದೆ.

    ಈಗಾಗಲೇ ದೇವಾಲಯದ ಸುತ್ತಾ ಮಣ್ಣಿನ ರಾಶಿ ಹಾಕಲಾಗುತ್ತಿರುವುದರಿಂದ ಮುಚ್ಚಿಹೋಗುವ ಅಪಾಯ ಎದುರಾಗಿದೆ. ಹೀಗಿದ್ದರೂ ದೇವಾಲಯ ಸ್ಥಳಾಂತರ ಮಾಡದೇ ಅಧಿಕಾರಿಗಳು ನಿರ್ಲಕ್ಷ್ಯಿಸಿದ್ದಾರೆ. ಹೆದ್ದಾರಿ ಕಾಮಗಾರಿಗೆ ಭೂಮಿ ವಶಪಡಿಸಿಕೊಳ್ಳುವ ಸಂದರ್ಭದಲ್ಲೇ ಸ್ಥಳೀಯರು ದೇವಾಲಯ ಸ್ಥಳಾಂತರ ಮಾಡುವಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು. ಆದರೆ ಈವರೆಗೂ ಅಧಿಕಾರಿಗಳು ದೇವಸ್ಥಾನವನ್ನು ಸ್ಥಳಾಂತರಿಸದೇ ನಿರ್ಲಕ್ಷಿಸಿದ್ದಾರೆ.

  • 800 ಕಿ.ಮೀ ನಡ್ಕೊಂಡೇ ಅಯೋಧ್ಯೆ ಭೂಮಿ ಪೂಜೆಗೆ ಹೊರಟ ಫಯಾಜ್ ಖಾನ್!

    800 ಕಿ.ಮೀ ನಡ್ಕೊಂಡೇ ಅಯೋಧ್ಯೆ ಭೂಮಿ ಪೂಜೆಗೆ ಹೊರಟ ಫಯಾಜ್ ಖಾನ್!

    – ಕೌಸಲ್ಯೆ ಹುಟ್ಟಿದ ಸ್ಥಳವೆಂದು ನಂಬಲಾಗಿರುವಲ್ಲಿಂದ ಮಣ್ಣು

    ರಾಯ್ಪುರ್: ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ಭೂಮಿ ಪೂಜೆ ಕಾರ್ಯಕ್ರಮ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು 800 ಕಿ.ಮೀ ನಡೆದುಕೊಂಡೇ ತೆರಳಲು ನಿರ್ಧರಿಸಿ ಹೊರಟಿದ್ದಾರೆ.

    ಗಮನಾರ್ಹ ವಿಷಯವೆಂದರೆ ಭಗವಾನ್ ರಾಮನ ತಾಯಿ ಕೌಸಲ್ಯೆ ಹುಟ್ಟಿದ್ದು ಛತ್ತೀಸ್‍ಗಢದ ಚಂದ್ಖುರಿಯಲ್ಲಿ ಎಂಬ ನಂಬಿಕೆಯಿದೆ. ಈ ಹಿನ್ನೆಲೆಯಲ್ಲಿ ಇದೇ ಗ್ರಾಮದ ನಿವಾಸಿ ಮೊಹಮ್ಮದ್ ಫಯಾಝ್ ಖಾನ್ ಅವರು ಶ್ರೀರಾಮನ ಪರಮ ಭಕ್ತನಾಗಿದ್ದಾರೆ. ಇದನ್ನೂ ಓದಿ: ವಿಡಿಯೋ ಕಾನ್ಫರೆನ್ಸ್ ಮೂಲಕ ರಾಮ ಮಂದಿರ ಭೂಮಿ ಪೂಜೆಗೆ ವಿರೋಧ- ಉದ್ಧವ್ ಠಾಕ್ರೆ ಹೇಳಿಕೆಗೆ ವಿಎಚ್‍ಪಿ ಕಿಡಿ

    ಮಧ್ಯಪ್ರದೇಶಕ್ಕೆ ತಲುಪಿದೆ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಫಯಾಜ್ ಖಾನ್, ನನ್ನ ಹೆಸರು ಹಾಗೂ ಧರ್ಮದಲ್ಲಿ ನಾನೊಬ್ಬ ಮುಸ್ಲಿಂ. ಆದರೆ ನನ್ನ ದೇವರು ರಾಮ. ನಾನು ರಾಮನ ಪರಮಭಕ್ತನಾಗಿದ್ದೇನೆ. ನಮ್ಮ ಪೂರ್ವಜರ ಬಗ್ಗೆ ತಿಳಿದುಕೊಂಡರೆ ಅವರು ಹಿಂದೂಗಳಾಗಿರಬಹುದು. ಅಲ್ಲದೆ ಅವರ ಹೆಸರು ರಾಮ್‍ಲಾಲ್ ಅಥವಾ ಶ್ಯಾಮ್‍ಲಾಲ್ ಆಗಿರಬಹುದು. ನಾವು ಚರ್ಚ್ ಅಥವಾ ಮಸೀದಿಗೇ ಹೋಗಲಿ ಆದರೆ ನಾವೆಲ್ಲರೂ ಹಿಂದೂ ಮೂಲವನ್ನು ಹೊಂದಿದ್ದೇವೆ ಎಂದು ತಿಳಿಸಿದರು.

    ನಮ್ಮ ಮುಖ್ಯ ಪೂರ್ವಜ ಭಗವಾನ್ ರಾಮನಾಗಿದ್ದಾನೆ. ಅಲ್ಲಮ ಇಕ್ಬಾಲ್(ಪಾಕಿಸ್ತಾನಿ ರಾಷ್ಟ್ರೀಯ ಕವಿ) ಅವರು ಅವರದ್ದೇ ಆದ ರೀತಿಯಲ್ಲಿ ವಿವರಣೆ ನೀಡಲು ಪ್ರಯತ್ನಿಸಿದ್ದರು. ರಾಮನನ್ನು ಭಾರತದ ಅಧಿಪತಿ ಅಥವಾ ದೊರೆ ಎಂದು ಪರಿಗಣಿಸುತ್ತಾರೆ ಎಂದು ಹೇಳಿದ್ದರು. ಇದೇ ಪೂಜ್ಯ ಭಾವದಿಂದ ಇಂದು ನಾನು ಕೌಸಲ್ಯೆ ಹುಟ್ಟಿದ ಸ್ಥಳ ಎಂದು ನಂಬಲಾಗಿರುವ ಚಂದ್ಖುರಿಯಿಂದ ಅಯೋಧ್ಯೆಗೆ ರಾಮಮಂದಿರ ನಿರ್ಮಾಣದ ಭೂಮಿ ಪೂಜೆಗೆ ಮಣ್ಣು ತೆಗೆದುಕೊಂಡು ಹೋಗುತ್ತಿದ್ದೇನೆ ಎಂದು ಖಾನ್ ಹೇಳಿದರು. ಇದನ್ನೂ ಓದಿ: ರಾಮಮಂದಿರ ಶಿಲಾನ್ಯಾಸಕ್ಕೆ ಭರ್ಜರಿ ಸಿದ್ಧತೆ – ಸಿಎಂ ಯೋಗಿ ಆದಿತ್ಯನಾಥ್ ಪರಿಶೀಲನೆ

    ಇದೇ ಸಂದರ್ಭದಲ್ಲಿ ಮಾಧ್ಯಮದವರು ನಿಮ್ಮ ಈ ಕಾರ್ಯವನ್ನು ಟೀಕಿಸುವವರಿಗೆ ಏನು ಹೇಳುತ್ತೀರಿ ಎಂದು ಕೇಳಿದಾಗ, ಪಾಕಿಸ್ತಾನದ ಕೆಲವರು ಹಿಂದೂ ಮುಸ್ಲಿಂ ಹೆಸರುಗಳೊಂದಿಗೆ ನಕಲಿ ಐಡಿಗಳನ್ನು ರಚಿಸಿಕೊಂಡು ಭಾರತದಲ್ಲಿ ಎಲ್ಲಾ ಸಮುದಾಯದವರೂ ಪರಸ್ಪರ ನಿಂದಿಸಿಕೊಳ್ಳುತ್ತಿದ್ದಾರೆ ಎಂದು ತೋರ್ಪಡಿಸಲು ಈ ರೀತಿ ಮಾಡುತ್ತಾರೆ ಎಂದು ಹೇಳಿದರು.

    ಇದೂವರೆಗೂ ನಾನು 15,000 ಕಿ.ಮೀ ನಡದುಕೊಂಡೇ ಹಲವು ದೇವಾಲಯಗಳಿಗೆ ತೆರಳಿದ್ದೇನೆ. ಹಾಗೂ ಕೆಲವೆಡೆ ದೇವಾಲಯಗಳಲ್ಲಿ ಉಳಿದುಕೊಂಡಿದ್ದೂ ಇದೆ. ಆದರೆ ಯಾರೊಬ್ಬರೂ ನನ್ನ ವಿರುದ್ಧ ಮಾತನಾಡಿಲ್ಲ ಎಂದು ಇದೇ ವೇಳೆ ಖಾನ್ ವಿವರಿಸಿದ್ದಾರೆ.

  • ಮಣ್ಣು ಕುಸಿದು ಕೂಲಿ ಅರಸಿ ಬಂದಿದ್ದ ಕಾರ್ಮಿಕರಿಬ್ಬರು ಸಾವು

    ಮಣ್ಣು ಕುಸಿದು ಕೂಲಿ ಅರಸಿ ಬಂದಿದ್ದ ಕಾರ್ಮಿಕರಿಬ್ಬರು ಸಾವು

    ಬೆಂಗಳೂರು: ಮಣ್ಣು ಕುಸಿದ ಪರಿಣಾಮ ಕೂಲಿ ಅರಸಿ ದೂರದೂರಿಂದ ಸಿಲಿಕಾನ್ ಸಿಟಿಗೆ ಬಂದಿದ್ದ ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಘಟನೆ ಕೆಂಗೇರಿಯ ಕೆಂಪೇಗೌಡ ಲೇಔಟ್‍ನ ಹೊಸ ಬೈರೊಹಳ್ಳಿಯಲ್ಲಿ ನಡೆದಿದೆ.

    ಕರಿಯಪ್ಪ ಮತ್ತು ನಿಖಿಲೇಶ್ ಮೃತ ಕಾರ್ಮಿಕರು. ಸ್ಯಾನಿಟರಿ ಪೈಪ್ ಅಳವಡಿಸಲು ಗುಂಡಿ ತೆಗೆಯಲಾಗಿತ್ತು. 12 ಅಡಿ ಉದ್ದದ ಗುಂಡಿ ತೋಡಿ ಅಲ್ಲಿ ಪೈಪ್‍ಗಳನ್ನ ಜೋಡಿಸಿ ಕೆಲಸ ಮಾಡಲಾಗುತ್ತಿತ್ತು. ದುರದೃಷ್ಟ ಮೇಲಿಂದ ಕುಸಿದು ಬಿದ್ದ ಮಣ್ಣು ಇಬ್ಬರು ಕಾರ್ಮಿಕರನ್ನು ಮುಚ್ಚಿ ಹಾಕಿತ್ತು. ತಕ್ಷಣ ಸ್ಥಳೀಯರು ಕರಿಯಪ್ಪನ ಮೇಲಿದ್ದ ಮಣ್ಣು ತೆಗೆದು ಆಸ್ಪತ್ರೆಗೆ ದಾಖಲಿಸಿದ್ದರು.

    ಮತ್ತೊಬ್ಬ ಕಾರ್ಮಿಕ ನಿಖಿಲೇಶ್‍ನನ್ನ ರಕ್ಷಣೆ ಮಾಡಲು ಸಾಧ್ಯವಾಗಿಲ್ಲ. ಅಗ್ನಿಶಾಮಕ ಸಿಬ್ಬಂದಿ ಬಂದು ಹೊರತೆಗೆಯುವಷ್ಟರಲ್ಲಿ ನಿಖಿಲೇಶ್ ಮೃತಪಟ್ಟಿದ್ದನು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕರಿಯಪ್ಪ ಕೂಡ ಸಾವನ್ನಪ್ಪಿದ್ದಾನೆ. ಅಗ್ನಿಶಾಮಕ ದಳದವರು 12 ಅಡಿ ಆಳದಿಂದ ಮಣ್ಣನ್ನು ಹೊರತೆಗೆದು ರಕ್ಷಿಸುವಷ್ಟರಲ್ಲಿ ಕಾರ್ಮಿಕರು ಸಾವನ್ನಪ್ಪಿದ್ದಾರೆ.

    ಕರಿಯಪ್ಪ ಮತ್ತು ನಿಖಿಲೇಶ್ ಆಂಧ್ರ ಮತ್ತು ಬಿಹಾರದಿಂದ ಕೂಲಿಗಾಗಿ ಬಂದಿದ್ದರು. ಸದ್ಯ ಈ ಬಗ್ಗೆ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಗುತ್ತಿಗೆ ಪಡೆದ ಏಜೆನ್ಸಿ ವಿರುದ್ಧ ನಿರ್ಲಕ್ಷ್ಯದಡಿ ಪ್ರಕರಣ ದಾಖಲಿಸಲಾಗಿದೆ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಭಟ್ಟರಹಳ್ಳಿ ಕೆರೆಗೆ ವಾಪಸ್ ಬಂತು ಮಣ್ಣು

    ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಭಟ್ಟರಹಳ್ಳಿ ಕೆರೆಗೆ ವಾಪಸ್ ಬಂತು ಮಣ್ಣು

    ಬೆಂಗಳೂರು: ನೆಲಮಂಗಲ ಭಟ್ಟರಹಳ್ಳಿ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ಲೂಟಿ ಮಾಡುತ್ತಿದ್ದ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿದ ಬೆನ್ನಲ್ಲೇ ಕೆರೆಯ ಸುತ್ತಲಿನ ಮಣ್ಣನ್ನು ಅಕ್ರಮವಾಗಿ ಲೂಟಿ ಮಾಡಿದ್ದ ಕಂಟ್ರಾಕ್ಟರ್ ಗೆ ತಹಶೀಲ್ದಾರ್ ಬಿಸಿ ಮುಟ್ಟಿಸಿದ್ದಾರೆ.

    ಭಟ್ಟರಹಳ್ಳಿ ಕೆರೆಯ ಪ್ರದೇಶದ ಸುತ್ತಲಿನ ಮಣ್ಣಿಗೆ ಕಂಟ್ರಾಕ್ಟರ್ ಒಬ್ಬರು ಕನ್ನ ಹಾಕಿದ್ದರು. ಈ ಬಗ್ಗೆ ಕಳೆದ ವಾರ ಪಬ್ಲಿಕ್ ಟಿವಿ ಕೆರೆಯ ಮಣ್ಣಿಗೆ ಕನ್ನ ಶೀರ್ಷಿಕೆ ಅಡಿ ಸುದ್ದಿ ಪ್ರಸಾರ ಮಾಡಿತ್ತು. ಅಲ್ಲದೆ ಈ ಬಗ್ಗೆ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಬೆಂಬಲ ವ್ಯಕ್ತಪಡಿಸಿದ್ದರು. ಇದೀಗ ಎಚ್ಚೆತ್ತುಕೊಂಡಿರುವ ಸ್ಥಳೀಯ ಆಡಳಿತ ಅಕ್ರಮವಾಗಿ ಕೆರೆಯ ಮಣ್ಣನ್ನ ತೆಗೆದಿದ್ದ ಕಂಟ್ರಾಕ್ಟರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಖುದ್ದು ನೆಲಮಂಗಲ ತಹಶೀಲ್ದಾರ್ ಶ್ರೀನಿವಾಸ್ ಅವರು ಕೆರೆಯನ್ನು ಪರಿಶೀಲಿಸಿ ಮಣ್ಣು ತೆಗೆದಿದ್ದ ಕಂಟ್ರಾಕ್ಟರ್‍ನಿಂದಲೇ 20 ಅಡಿಯಷ್ಟು ಮಣ್ಣನ್ನು ತರಿಸಿದ್ದಾರೆ. ಒಟ್ಟಾರೆ ಕೆರೆಯ ಅಂದ ಹಾಗೂ ಕೆರೆಯ ಮಣ್ಣನ್ನು ತೆಗೆದು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದ ಕಂಟ್ರಾಕ್ಟರ್ ವಿರುದ್ಧ ತಹಶೀಲ್ದಾರ್ ಕ್ರಮ ತೆಗೆದುಕೊಂಡಿದ್ದಾರೆ.

  • ಕಾವೇರಿ ಒಡಲಿಗೆ ಕಲ್ಲು ಬೀಳುತ್ತಿದ್ದರೂ ಕಣ್ಮುಚ್ಚಿ ಕುಳಿತ ಅಧಿಕಾರಿಗಳು

    ಕಾವೇರಿ ಒಡಲಿಗೆ ಕಲ್ಲು ಬೀಳುತ್ತಿದ್ದರೂ ಕಣ್ಮುಚ್ಚಿ ಕುಳಿತ ಅಧಿಕಾರಿಗಳು

    ಕೊಡಗು: ಕಾವೇರಿ ನದಿಗೆ ಸಾವಿರಾರು ಲೋಡ್ ಕಲ್ಲು, ಮಣ್ಣು ಸುರಿದು ಸಮತಟ್ಟು ಮಾಡುತ್ತಿದ್ದರೂ ಪಂಚಾಯ್ತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತ್ತಿದ್ದಾರೆ.

    ಕೊಡಗಿನಲ್ಲಿ ಕಳೆದ ಎರಡು ವರ್ಷಗಳಿಂದ ಕಾವೇರಿ ನದಿ ಉಕ್ಕಿ ಹರಿದು ಸಾವಿರಾರು ಜನರು ಮನೆಮಠ ಕಳೆದುಕೊಂಡಿದ್ದಾರೆ. ನದಿಪಾತ್ರದ ಜಾಗ ದಿನದಿಂದ ದಿನಕ್ಕೆ ಕಿರಿದಾಗುತ್ತಿರುವುದು ಕಾವೇರಿ ನದಿ ಉಕ್ಕಿ ಹರಿಯೋದಕ್ಕೆ ಕಾರಣ ಎನ್ನೋದು ಸಾಬೀತಾಗಿದೆ. ಇಷ್ಟೆಲ್ಲಾ ಆದರೂ ಜನರು ಮಾತ್ರ ಬುದ್ಧಿ ಕಲಿತಿಲ್ಲ. ಕೆಲ ಮಂದಿ ಕಾವೇರಿ ನದಿಗೆ ಸಾವಿರಾರು ಲೋಡ್ ಕಲ್ಲು, ಮಣ್ಣು ಸುರಿದು ಸಮತಟ್ಟು ಮಾಡುತ್ತಿದ್ದಾರೆ. ಆದರೆ ಇತ್ತ ಗಮನ ಕೊಡದೇ ಸ್ಥಳೀಯ ಪಂಚಾಯ್ತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಮಾತ್ರ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ.

    ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಶಾಲನಗರದ ಸುತ್ತಮುತ್ತಲು ಹರಿಯುತ್ತಿರುವ ಕಾವೇರಿ ನದಿಯ ಒಡಲು ಇದೀಗ ಬರಿದಾಗುತ್ತಿದೆ. ನದಿಯ ಒಂದಡಿ ಜಾಗವನ್ನು ಬಿಡದಂತೆ ಮನೆಗಳನ್ನು ನಿರ್ಮಿಸಿರುವುದು ಅದಕ್ಕೆ ಕಾರಣವಾಗಿದೆ. ಹಲವರು ನದಿ ಪಾತ್ರದ ಜಾಗಗಳನ್ನು ಒತ್ತುವರಿ ಮಾಡಿ ಲೇಔಟ್‍ಗಳನ್ನು ಮಾಡಿದ್ದಾರೆ. ಇದೆಲ್ಲದರ ಪರಿಣಾಮವಾಗಿ ಕೊಡಗಿನಲ್ಲಿ ಎರಡು ದಿನ ಮಳೆ ಸುರಿದರೆ ಸಾಕು ಪ್ರವಾಹ ಸೃಷ್ಟಿಯಾಗಿ ಬಿಡುತ್ತದೆ.

    ಈ ಬಗ್ಗೆ ಗೊತ್ತಿದ್ದರೂ ಕೊಡಗು ಜಿಲ್ಲೆ ಕುಶಾಲನಗರ ಸಮೀಪದ ಕಣಿವೆಯಲ್ಲಿ ಕಾವೇರಿ ನದಿಗೆ ಸಾವಿರಾರು ಲೋಡ್ ಕಲ್ಲು ಮಣ್ಣನ್ನು ತುಂಬಲಾಗಿದೆ. ಇದರ ಜೊತೆಗೆ ಬರೋಬ್ಬರಿ 20 ಅಡಿ ಆಳದಷ್ಟು ನದಿಯ ಪಕ್ಕದಲ್ಲಿ ಇರುವ ಗುಂಡಿಗಳನ್ನು ಮುಚ್ಚಿ ಸಮತಟ್ಟು ಮಾಡಲಾಗಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಿದ್ದ ಜಿಲ್ಲಾ ಪಂಚಾಯ್ತಿ ಸದಸ್ಯ ಹೆಬ್ಬಾಲೆ ಕ್ಷೇತ್ರದ ಶ್ರೀನಿವಾಸ್ ಅವರು ತಮ್ಮ ಜಮೀನಿನಲ್ಲಿದ್ದ ದೊಡ್ಡ ಗುಡ್ಡವೊಂದನ್ನು ಅಗೆಸಿ, ಅಲ್ಲಿನ ಭಾರೀ ಗಾತ್ರದ ಕಲ್ಲು, ಮಣ್ಣನ್ನು ಕಾವೇರಿ ನದಿಗೆ ತುಂಬಿಸಿದ್ದಾರೆ. ಯಾಕೆ ಹೀಗೆ ಕಲ್ಲು, ಮಣ್ಣು ತುಂಬುತ್ತಿದ್ದೀರಾ ಎಂದು ಪ್ರಶ್ನಿಸಿದರೆ ಕಣಿವೆ ಗ್ರಾಮದಲ್ಲಿ ಭಾರೀ ಪ್ರಮಾಣದಲ್ಲಿ ನದಿ ಹರಿಯುತ್ತಿದ್ದು, ಅದರ ರಕ್ಷಣೆಗೆ ಹಾಕುವಂತೆ ಜನರು ಆಗ್ರಹಿಸಿದ್ದಕ್ಕೆ ತುಂಬಿಸಿದ್ದೇನೆ ಎಂದಿದ್ದಾರೆ.

    ನದಿಯಿಂದ ಬರೋಬ್ಬರಿ 900 ಅಡಿ ಜಾಗ ಬಫರ್ ಜೋನ್ ಆಗಿದ್ದು, ಅಲ್ಲಿ ಯಾವುದೇ ಕಾಮಗಾರಿ ಮಾಡುವಂತಿಲ್ಲ. ಅದಕ್ಕಿಂತ ಮುಖ್ಯವಾಗಿ ಈ ಕಣಿವೆ ಜಾಗದಲ್ಲಿಯೇ ಹಾರಂಗಿಯಿಂದ ಹರಿದು ಬರುವ ಸಾವಿರಾರು ಕ್ಯೂಸೆಕ್ ನೀರು ಕೂಡ ಕಾವೇರಿ ನದಿ ಸೇರುತ್ತದೆ. ಆದರೆ ಹೀಗೆ ನದಿಗೆ ಸಾವಿರಾರು ಲೋಡ್ ಮಣ್ಣು ತುಂಬಿದರೆ ಕಾವೇರಿ ನೀರು ಮತ್ತು ಹಾರಂಗಿ ನೀರು ಎಲ್ಲಿ ಹರಿದು ಹೋಗಬೇಕು? ನದಿಯ ಜಾಗ ದೊಡ್ಡ ಗಾತ್ರದಲ್ಲಿ ಇರುವಾಗಲೇ ಕಾವೇರಿ ನೀರು ಉಕ್ಕಿ ಹರಿದು ಕಣಿವೆ, ಕೂಡುಮಂಗಳೂರು, ಕುಶಾಲನಗರದ ಹಲವು ಬಡಾವಣೆ ಸೇರಿದಂತೆ ಮೂರ್ನಾಡುವರೆಗೆ ಹಲವು ಗ್ರಾಮಗಳು ಮುಳುಗಿದ್ದವು. ಇಷ್ಟೆಲ್ಲಾ ಸಮಸ್ಯೆ ಎದುರಾಗಿರುವಾಗಲೂ ಕಾವೇರಿಗೆ ಇಷ್ಟೊಂದು ಮಣ್ಣು ತುಂಬುತ್ತಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರಿರುವುದು ವಿಪರ್ಯಾಸ.

  • ಕೆಸರಿನಲ್ಲಿ ಜೋಡಿಯ ವೆಡ್ಡಿಂಗ್ ಫೋಟೋಶೂಟ್

    ಕೆಸರಿನಲ್ಲಿ ಜೋಡಿಯ ವೆಡ್ಡಿಂಗ್ ಫೋಟೋಶೂಟ್

    ತಿರುವನಂತಪುರಂ: ಇತ್ತೀಚೆಗೆ ವೆಡ್ಡಿಂಗ್ ಫೋಟೋಶೂಟ್ ಮಾಡಿಸುವುದು ಟ್ರೆಂಡ್ ಆಗಿದೆ. ಪ್ರತಿಯೊಂದು ಜೋಡಿಯೂ ತಮ್ಮ ಫೋಟೋಶೂಟ್ ಇಂತಹ ಸ್ಥಳದಲ್ಲಿ, ಹೀಗೆಯೇ ಆಗಬೇಕೆಂಬ ಕನಸು ಕಂಡಿರುತ್ತಾರೆ. ಅದರಲ್ಲೂ ಸುಂದರವಾದ ಸ್ಥಳಗಳಲ್ಲಿ, ನದಿಯ ಮಧ್ಯೆ, ವಿಧವಿಧವಾದ ಕಾಸ್ಟ್ಯೂಮ್ಸ್ ಧರಿಸಿಕೊಂಡು ವಿಭಿನ್ನವಾಗಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸುತ್ತಾರೆ. ಆದರೆ ಇಲ್ಲೊಂದು ಜೋಡಿ ಯಾವುದೇ ಮೇಕಪ್ ಇಲ್ಲದೇ ಪ್ರಕೃತಿಯ ನಡುವೆ, ಕೆಸರಿನ ಮಣ್ಣಿನ ಮಧ್ಯೆ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ್ದಾರೆ.

    ಇದೀಗ ಈ ಜೋಡಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕೇರಳ ಮೂಲದ ಜೋಸ್ ಮತ್ತು ಅನಿಷಾ ಜೋಡಿ ಈ ರೀತಿಯ ಕೆಸರಿನ ಮಣ್ಣಿನಲ್ಲಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳು ಟ್ವಿಟ್ಟರ್ ಮತ್ತು ಫೇಸ್‍ಬುಕ್ ಪೇಜಿನಲ್ಲಿ ಹರಿದಾಡುತ್ತಿವೆ.

    ಈ ಜೋಡಿ ಪ್ರಕೃತಿಯ ಮಧ್ಯೆ ಒಂದು ಕೆಸರಿನ ಗದ್ದೆಯಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಸರಳವಾದ ಉಡುಪು ಧರಿಸಿಕೊಂಡು ಕೆಸರಿನಲ್ಲಿ ಉರುಳಾಡಿ ಫೋಟೋಶೂಟ್ ಮಾಡಿಸಿದ್ದಾರೆ. ಅದರಲ್ಲೂ ಮುಖಕ್ಕೂ ಕೆಸರು ಹಾಕಿಕೊಂಡು ವಿಭಿನ್ನವಾಗಿ ಕ್ಯಾಮೆರಾಗೆ ಪೋಸ್ ಕೊಡುವ ಮೂಲಕ ಡಿಫರೆಂಟ್ ಆಗಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ್ದಾರೆ.

    ಈ ಜೋಡಿಯ ವೆಡ್ಡಿಂಗ್ ಫೋಟೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಯಾವುದೇ ಮೇಕಪ್, ಆಡಂಬರವಿಲ್ಲದೇ ಸರಳವಾಗಿ ಫೋಟೋಶೂಟ್ ಮಾಡಿಸಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

  • ಕೊಡಗಿನಲ್ಲಿ ಮಳೆರಾಯನ ಅವಾಂತರ- ಎರಡು ಮನೆಗಳ ಮೇಲೆ ಮಣ್ಣು ಕುಸಿತ

    ಕೊಡಗಿನಲ್ಲಿ ಮಳೆರಾಯನ ಅವಾಂತರ- ಎರಡು ಮನೆಗಳ ಮೇಲೆ ಮಣ್ಣು ಕುಸಿತ

    ಕೊಡಗು: ಆರೆಂಜ್ ಅಲರ್ಟ್‍ನಲ್ಲಿರೋ ಕೊಡಗಿನ ವಿವಿಧೆಡೆ ಮಳೆ ಅವಾಂತರವನ್ನೇ ಸೃಷ್ಟಿಸಿದೆ. ವಿರಾಜಪೇಟೆ ತಾಲೂಕಿನಲ್ಲಿ ಜಿಟಿ ಜಿಟಿ ಮಳೆಯ ಪರಿಣಾಮ ಮಲೆತಿರಕೆ ಬೆಟ್ಟದ ಸಮೀಪ ಇರುವ ಎರಡು ಮನೆಗಳ ಮೇಲೆ ಮಣ್ಣು ಕುಸಿದಿದೆ.

    ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗ್ರಾಮದ ಪುಪ್ಪರಾಜ್ ಮತ್ತು ದಿನೇಶ್ ಎಂಬವರ ಮನೆಗಳಿಗೆ ತೀವ್ರವಾಗಿ ಹಾನಿಯಾಗಿದೆ. ಮನೆಯಲ್ಲಿ ಇದ್ದವರನ್ನು ಸನೀಹದ ಸಮುದಾಯ ಭವನಕ್ಕೆ ಸ್ಥಳಾಂತರ ಮಾಡಲಾಗಿದೆ. ಅಷ್ಟೇ ಅಲ್ಲದೇ ನಾಪೋಕ್ಲು ಬಳಿ ಕಾವೇರಿ ನದಿ ಉಕ್ಕಿ ಹರಿಯುತ್ತಿರೋದ್ರಿಂದ ಮಳೆ ಮುಂದುವರಿದಲ್ಲಿ ರಸ್ತೆ ಮುಳುಗಡೆಯಾಗುವ ಭೀತಿ ಕಾಡುತ್ತಿದೆ.

    ಬ್ರಹ್ಮಗಿರಿ ತಪ್ಪಲಿನಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ತ್ರಿವೇಣಿ ಸಂಗಮದಲ್ಲಿ ನೀರಿನ ಪ್ರಮಾಣ ಗಣನೀಯ ಏರಿಕೆಯಾಗುತ್ತಿದೆ. ಕೊಡಗಿನಲ್ಲಿ ವಾಡಿಕೆ ಮಳೆಯಾಗದಿದ್ದರೂ ಕಳೆದ ಬಾರಿ ಭೂ ಕುಸಿತ ಉಂಟಾಗಿದ್ದ ಸ್ಥಳಗಳಲ್ಲಿ ಕುಸಿಯುತ್ತಿರೋ ಸಣ್ಣ ಪ್ರಮಾಣದ ಮಣ್ಣು ಆತಂಕ ಸೃಷ್ಟಿಸಿದೆ.

    ಒಟ್ಟಿನಲ್ಲಿ ಹೀಗೇ ಮಳೆ ಹೆಚ್ಚಾದಲ್ಲಿ ಮತ್ತೆ ಯಾವ ಅನಾಹುತ ಎದುರಸಬೇಕಾಗುತ್ತೋ ಅನ್ನೋ ಭಯದಲ್ಲೇ ಜಿಲ್ಲೆಯ ಜನ ದಿನದೂಡುವಂತಾಗಿರೋದಂತು ಸತ್ಯ.

  • ತಿನ್ನಲು ಊಟವಿಲ್ಲದೆ ಮಣ್ಣು ತಿಂದು ಮಕ್ಕಳಿಬ್ಬರ ದುರ್ಮರಣ!

    ತಿನ್ನಲು ಊಟವಿಲ್ಲದೆ ಮಣ್ಣು ತಿಂದು ಮಕ್ಕಳಿಬ್ಬರ ದುರ್ಮರಣ!

    ಚಿಕ್ಕಬಳ್ಳಾಪುರ: ತಿನ್ನಲು ಊಟವಿಲ್ಲದೆ ಮಣ್ಣು ತಿಂದು ಇಬ್ಬರು ಮಕ್ಕಳು ಸಾವನ್ನಪ್ಪಿರುವ ದಾರುಣ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕದಿರಿ ತಾಲೂಕಿನ ಕುಮ್ಮರವಾಂಡ್ಲಪಲ್ಲಿಯಲ್ಲಿ ನಡೆದಿದೆ.

    ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಮೂಲದ ಮಹೇಶ್-ನಾಗಮಣಿ ಬಡ ದಂಪತಿ ಕೂಲಿ ಅರಸಿ ಕಳೆದ 10 ವರ್ಷಗಳ ಹಿಂದೆ ಅನಂತಪುರ ಜಿಲ್ಲೆಗೆ ತೆರಳಿದ್ದರು. ಜಿಲ್ಲೆಯ ಕದಿರಿ ತಾಲೂಕಿನ ಕುಮ್ಮರವಾಂಡ್ಲಪಲ್ಲಿ ಹಮಾಲಿ ಕಾಲೋನಿಯಲ್ಲಿ ಕಳೆದ 3 ವರ್ಷಗಳಿಂದ ಗುಡಿಸಲು ಹಾಕಿಕೊಂಡು ವಾಸ ಮಾಡುತ್ತಿದ್ದ ಮಹೇಶ್, ಕಲ್ಲು ಹೊಡೆಯುವ ಕೆಲಸ ಮಾಡುತ್ತಿದ್ದರು.

    ಈ ಬಡ ದಂಪತಿಗೆ ಆರು ಜನ ಮಕ್ಕಳಿದ್ದು ಪತಿ ಮಹೇಶ್ ಕೆಲಸಕ್ಕೆ ಹೋದರೆ, ಪತ್ನಿ ನಾಗಮಣಿ ಮದ್ಯವ್ಯಸನಿಯಾಗಿದ್ದಾಳೆ. ಹೀಗಾಗಿ ವಿಪರೀತ ಕುಡಿದು ಆಡುಗೆ ಮಾಡದೆ ಹಾಗೆಯೇ ಮಲಗಿ ಬಿಡುತ್ತಿದ್ದಳು ಎನ್ನಲಾಗಿದೆ. ಹೀಗಾಗಿ ಒಂದು ಗಂಡು ಮಗು ಹಾಗೂ ಹೆಣ್ಣು ಮಗು ಊಟ ಇಲ್ಲದೆ ಮಣ್ಣು ತಿಂದು ಸಾವನ್ನಪ್ಪಿದ್ದಾರೆ.

    ಘಟನೆ ನಂತರ ಸ್ಥಳೀಯರು ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಇವರ ಪರಿಸ್ಥಿತಿ ಕಂಡು ಮರುಕ ವ್ಯಕ್ತಪಡಿಸಿದ್ದಾರೆ. ಸದ್ಯ ಸ್ಥಳೀಯ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳ ಸಹಾಯದಿಂದ ಉಳಿದ ನಾಲ್ಕು ಮಕ್ಕಳಿಗೆ ಆಶ್ರಯ ಕಲ್ಪಿಸಲಾಗಿದೆ. ಉಳಿದಂತೆ ಪೊಲೀಸರೇ ಬಡ ದಂಪತಿಗೆ ಮನೆ ಕಟ್ಟಿಸಿಕೊಡಲು ಮುಂದಾಗಿದ್ದಾರೆ.

    ಬಡ ದಂಪತಿಯ ಸ್ಥಿತಿ ಬಹಳಷ್ಟು ಶೋಚನೀಯವಾಗಿದ್ದು ತಿನ್ನಲು ಊಟವೂ ಇಲ್ಲ. ಮಲಗಲು ಮನೆಯೂ ಇಲ್ಲ. ಮುರುಕಲು ಗುಡಿಸಲಿನಲ್ಲೇ ವಾಸ ಮಾಡುತ್ತಿದ್ದು, ಇವರ ದಯನೀಯ ಸ್ಥಿತಿಗೆ ಇಬ್ಬರು ಮಕ್ಕಳು ಮಣ್ಣು ತಿಂದು ಅಸುನೀಗಿದ್ದಾರೆ.

  • ರಾಜ್ಯದ 30 ಜಿಲ್ಲೆಗಳ ಮಣ್ಣಿನಿಂದ ಪುಟ್ಟಣ್ಣಯ್ಯ ಅವರ ಅಂತ್ಯಕ್ರಿಯೆ

    ರಾಜ್ಯದ 30 ಜಿಲ್ಲೆಗಳ ಮಣ್ಣಿನಿಂದ ಪುಟ್ಟಣ್ಣಯ್ಯ ಅವರ ಅಂತ್ಯಕ್ರಿಯೆ

    ಮಂಡ್ಯ: ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅಂತ್ಯಕ್ರಿಯೆ ಇಂದು ಹುಟ್ಟೂರು ಮಂಡ್ಯ ಜಿಲ್ಲೆಯ ಪಾಂಡವಪುರದ ಕ್ಯಾತನಹಳ್ಳಿಯಲ್ಲಿ ನಡೆಯಲಿದೆ. ಪುಟ್ಟಣ್ಣಯ್ಯ ಅವರ ಅಂತ್ಯಕ್ರಿಯೆಗೆ ಕ್ಯಾತನಹಳ್ಳಿ ಗ್ರಾಮದಲ್ಲಿರುವ 9 ಎಕರೆ ತೆಂಗಿನತೋಟದಲ್ಲಿ ಎಲ್ಲ ಸಿದ್ಧತೆಗಳು ನಡೆಯುತ್ತಿದೆ. ಗ್ರಾಮಸ್ಥರೆಲ್ಲಾ ಸೇರಿ ಗುಂಡಿ ತೆಗೆಯುತ್ತಿದ್ದಾರೆ.

    ಕ್ಯಾತನಹಳ್ಳಿ ಮೈದಾನದಿಂದ ಪಾರ್ಥಿವ ಶರೀರ ಬಂದ ನಂತರ ಅಂತ್ಯಕ್ರಿಯೆ ನಡೆಯಲಿದ್ದು, ರಾಜ್ಯದ 30 ಜಿಲ್ಲೆಗಳ ಮಣ್ಣಿನಿಂದ ಅಂತ್ಯಕ್ರಿಯೆ ನಡೆಸಲಿದ್ದಾರೆ. ರೈತ ಮುಖಂಡರು 30 ಜಿಲ್ಲೆಗಳಿಂದ ಮಣ್ಣು ತಂದಿದ್ದಾರೆ ಎಂದು ಕ್ಯಾತನಹಳ್ಳಿಯಲ್ಲಿ ಮಂಡ್ಯ ಜಿಲ್ಲಾ ರೈತ ಸಂಘದ ಅಧ್ಯಕ್ಷ ರೈತ ಸುರೇಶ್ ಗೌಡ ಹೇಳಿಕೆ ನೀಡಿದ್ದಾರೆ.

    ಸದ್ಯ ಕ್ಯಾತನಹಳ್ಳಿಯಲ್ಲಿರುವ ಪುಟ್ಟಣ್ಣಯ್ಯ ನಿವಾಸದಲ್ಲಿ ಪಾರ್ಥಿವ ಶರೀರವನ್ನು ಇಡಲಾಗಿದೆ. ತಮ್ಮ ನೆಚ್ಚಿನ ಹೋರಾಟಗಾರನ ಅಂತಿಮ ದರ್ಶನಕ್ಕೆ ಅಭಿಮಾನಿಗಳು ಬರುತ್ತಿದ್ದಾರೆ. ಅಂತ್ಯ ಸಂಸ್ಕಾರಕ್ಕೆ ಬರುವವರಿಗೆ ಪುಟ್ಟಣ್ಣಯ್ಯ ಅಭಿಮಾನಿಗಳು ಕ್ಯಾತನಹಳ್ಳಿ ಸಂತೆ ಮೈದಾನದಲ್ಲಿ ತಿಂಡಿ-ಊಟದ ವ್ಯವಸ್ಥೆ ಮಾಡ್ತಿದ್ದಾರೆ. ಈ ಮೂಲಕವಾದ್ರೂ ಒಂದಷ್ಟು ಅನ್ನದ ಋಣ ತೀರಿಸ್ತೇವೆ ಅಂತಿದ್ದಾರೆ ಸುತ್ತಮುತ್ತಲಿನ ಹಳ್ಳಿಗಳ ರೈತರು.

    ಮಕ್ಕಳು ಮತ್ತು ಕುಟುಂಬ ಆಗಮನ ವಿಳಂಬ ಹಿನ್ನೆಲೆಯಲ್ಲಿ ಪುಟ್ಟಣ್ಣಯ್ಯ ಅಂತ್ಯಕ್ರಿಯೆ ವಿಳಂಬವಾಗಿತ್ತು. ಅಮೆರಿಕದ ಕ್ಯಾಲಿಫೋರ್ನಿಯಾದಿಂದ ಪುಟ್ಟಣ್ಣಯ್ಯ ತಮ್ಮ ಲೇಟ್ ರಮೇಶ್ ಪತ್ನಿ ಸುಜಾತ, ಮಕ್ಕಳಾದ ಮನು, ಮೋಹನ್ ಆಗಮಿಸಿದ್ದಾರೆ. ಯುಎಸ್‍ಎಯಿಂದ ಪುಟ್ಟಣ್ಣಯ್ಯರ ಎರಡನೇ ಮಗಳ ಕುಟುಂಬ ಮಗಳು ಅಕ್ಷತಾ, ಅಳಿಯ ಶ್ರೀನಿವಾಸ್ ಬಂದಿದ್ದಾರೆ. ಕೆನಡಾದಿಂದ ಪುಟ್ಟಣ್ಣಯ್ಯ ಸಹೋದರಿ ರೇಣುಕಾ, ಮೊದಲ ಮಗಳು ಸ್ಮಿತಾ ಹಾಗೂ ಅಳಿಯ ಬಾಲು ಆಗಮಿಸಿದ್ದಾರೆ.

    ಪುಟ್ಟಣ್ಣಯ್ಯ ಮೌಢ್ಯ ವಿರೋಧಿಯಾದ ಕಾರಣ ಯಾವುದೇ ವಿಧಿವಿಧಾನಗಳಿಲ್ಲದ ಅಂತ್ಯಕ್ರಿಯೆಗೆ ಕುಟುಂಬಸ್ಥರು ನಿರ್ಧರಿಸಿದ್ದಾರೆ. ನಂತರ ತೆಂಗಿನ ತೋಟದಲ್ಲಿ ಅವರ ತಂದೆ ಮತ್ತು ತಾಯಿಯ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಪುಟ್ಟಣ್ಣಯ್ಯ ಎಲ್ಲರನ್ನೂ ಸಮನವಾಗಿ ಕಾಣುತ್ತಿದ್ದರು. ಹೀಗಾಗಿ ಅವರ ಪಾರ್ಥಿವ ಶರೀರಕ್ಕೆ ದಲಿತ ಮಹಿಳೆಯಿಂದ ಮೊದಲಿಗೆ ಪೂಜೆ ನಡೆಯಲಿದೆ ಎಂದು ಪಬ್ಲಿಕ್ ಟಿವಿಗೆ ಪುಟ್ಟಣ್ಣಯ್ಯ ಪುತ್ರ ದರ್ಶನ್ ಹೇಳಿದ್ದಾರೆ.

    ಇತ್ತ ಗಣ್ಯ ವ್ಯಕ್ತಿಗಳು ಮರಣದ ಬಳಿಕ ಶಾಲಾ ಕಾಲೇಜುಗಳಿಗೆ ರಜೆ ನೀಡೋದಕ್ಕೆ ಪುಟ್ಟಣ್ಣಯ್ಯ ವಿರೋಧಿಸ್ತಿದ್ರು. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆ ಶಾಲಾ-ಕಾಲೇಜುಗಳಿಗೆ ರಜೆ ನೀಡಿಲ್ಲ. ರಜೆ ನೀಡಿದರೆ ಮಕ್ಕಳ ಕಲಿಕೆಗೆ ತೊಂದರೆಯಾಗಲಿದೆ ಅನ್ನೋ ನಿಲುವು ಹೊಂದಿದ್ದ ಪುಟ್ಟಣ್ಣಯ್ಯ ಅವರ ನಿಲುವನ್ನ ಗೌರವಿಸಿ ನಾವು ರಜೆ ನೀಡುವುದು ಬೇಡ ಅನ್ನೊ ನಿರ್ಧಾರಕ್ಕೆ ಬರಲಾಯ್ತು ಅಂತ ಜಿಲ್ಲಾಧಿಕಾರಿ ಮಂಜುಳಾ ಹೇಳಿದ್ದಾರೆ.

  • ದಿನಕ್ಕೆ 1 ಕೇಜಿ ಮಣ್ಣು ತಿನ್ನೋ 99ರ ಅಜ್ಜ!

    ದಿನಕ್ಕೆ 1 ಕೇಜಿ ಮಣ್ಣು ತಿನ್ನೋ 99ರ ಅಜ್ಜ!

    ರಾಂಚಿ: ದೀರ್ಘಾಯುಷ್ಯ ಪಡೆಯಲು ಜನ ಹೆಚ್ಚಾಗಿ ನೈಸರ್ಗಿಕವಾದ ಆಹಾರವನ್ನು ಸೇವಿಸುತ್ತಾರೆ. ಆದರೆ ಜಾರ್ಖಂಡ್ ವ್ಯಕ್ತಿಯೊಬ್ಬರು ನೈಸರ್ಗಿಕ ವಸ್ತುವಾದ ಮಣ್ಣನ್ನೇ ಪ್ರತಿದಿನ ಸೇವಿಸಿ ಸುದ್ದಿಯಾಗಿದ್ದಾರೆ.

    ಕಾರು ಪಾಸ್ವಾನ್ ಅವರಿಗೆ ಈಗ 99 ವರ್ಷ. ಪಾಸ್ವಾನ್ ಪ್ರತಿದಿನ ಮಣ್ಣು ತಿನ್ನುವ ಹಿಂದೆ ನೋವಿನ ಕಥೆಯಿದೆ. ಬಾಲ್ಯದಲ್ಲಿ ಇವರಿಗೆ ಬಡತನವಿತ್ತು. ಎಷ್ಟು ಬಡತನ ಅಂದ್ರೆ ಒಂದು ಹೊತ್ತಿನ ಆಹಾರಕ್ಕೂ ಪರದಾಡಬೇಕಾದ ಪರಿಸ್ಥಿತಿ ಇತ್ತು.

    11ನೇ ವಯಸ್ಸಿನಲ್ಲಿ ಯಾವುದೇ ಆಹಾರ ಸಿಗದೇ ಇದ್ದಾಗ ಮೊದಲ ಬಾರಿ ಮಣ್ಣನ್ನು ತಿಂದಿದ್ದಾರೆ. ಮಣ್ಣಿನಲ್ಲಿ ಏನೋ ರುಚಿ ಇದೆ ಎಂದು ತಿಳಿದು ಪ್ರತಿ ದಿನ ಸ್ವಲ್ಪ ಸ್ವಲ್ಪವೇ ತಿನ್ನಲು ಆರಂಭಿಸಿದರು. ಪ್ರತಿದಿನ ತಿನ್ನುವ ಅಭ್ಯಾಸ ಆರಂಭಿಸಿದ ಪರಿಣಾಮ ಅದು ಚಟವಾಗಿ ಪರಿಣಮಿಸಿತು. ವಿಶೇಷ ಏನೆಂದರೆ ಈಗಲೂ ಇವರು ಪ್ರತಿದಿನ 1 ಕೇಜಿ ಮಣ್ಣು ತಿನ್ನುತ್ತಿದ್ದಾರೆ.

    ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ನನಗೆ ಪ್ರತಿದಿನ ಮಣ್ಣು ತಿನ್ನದೇ ಇರಲು ಸಾಧ್ಯವೇ ಇಲ್ಲ ಎಂದು ತಿಳಿಸಿದ್ದಾರೆ. ಮಣ್ಣು ತಿಂದರೆ ಆರೋಗ್ಯ ಹಾಳಾಗಬಹುದಲ್ಲವೇ ಎನ್ನುವ ಪ್ರಶ್ನೆ ಹುಟ್ಟುವುದು ಸಹಜ. ಆದರೆ ಅವರಿಗೆ ಆರೋಗ್ಯ ಕೈ ಕೊಟ್ಟಿಲ್ಲ. 1919ರಲ್ಲಿ ಜನಿಸಿರುವ ಇವರು ಈಗಲೂ ಗಟ್ಟಿಮುಟ್ಟಾಗಿರುವುದು ವಿಶೇಷ.

    ಮಣ್ಣು ತಿನ್ನುವ ಚಟವನ್ನು ಬಿಡುವಂತೆ ನಾವು ಸಾಕಷ್ಟು ಬಾರಿ ಹೇಳಿದರೂ ತಂದೆ ನಮ್ಮ ಮಾತನ್ನು ಕೇಳಲೇ ಇಲ್ಲ. ಕೊನೆಗೆ ಈ ಬುದ್ಧಿವಾದ ಹೇಳುವ ಪ್ರಯತ್ನವನ್ನು ನಿಲ್ಲಿಸಿದೆವು ಎಂದು ರಾಮ್ ಪಾಸ್ವಾನ್ ಅವರ ಹಿರಿಯ ಮಗ ತಿಳಿಸಿದ್ದಾರೆ.