Tag: ಮಡಿಕಲ್ ಶಾಪ್

  • ಹೈವೇಯಲ್ಲಿದ್ದ ಬಾರ್ ಕ್ಲೋಸ್ ಆದ್ರೇನು ಮೆಡಿಕಲ್ ಶಾಪಲ್ಲಿ ಮದ್ಯ ಸಿಗ್ತಿತ್ತು!

    ಹೈವೇಯಲ್ಲಿದ್ದ ಬಾರ್ ಕ್ಲೋಸ್ ಆದ್ರೇನು ಮೆಡಿಕಲ್ ಶಾಪಲ್ಲಿ ಮದ್ಯ ಸಿಗ್ತಿತ್ತು!

    ಕಾಸರಗೋಡು: ಸುಪ್ರೀಂ ಕೋರ್ಟ್ ಆದೇಶದ ಅನ್ವಯ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಮಾಡುವಂತಿಲ್ಲ. ಆದ್ರೆ ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಕೇರಳದಲ್ಲಿ ಮೆಡಿಕಲ್ ಶಾಪ್‍ನಲ್ಲಿ ಮದ್ಯವನ್ನು ಮಾರಾಟ ಮಾಡುತ್ತಿರುವ ವಿಚಾರ ಈಗ ಬೆಳಕಿಗೆ ಬಂದಿದೆ.

    ಹೌದು. ಕಾಸರಗೋಡು ಜಿಲ್ಲೆಯ ಬಂದ್ಯೋಡ್ ಎಂಬಲ್ಲಿರುವ ಮೆಡಿಕಲ್ ಶಾಪ್‍ನಲ್ಲಿ ಮದ್ಯ ಮಾರಾಟ ಮಾಡುತ್ತಿರುವುದನ್ನು ಅಬಕಾರಿ ಪೊಲೀಸರು ಪತ್ತೆ ಹಚ್ಚಿದ್ದಾರೆ.

    ಬೆಸ್ಟ್ ಮೆಡಿಕಲ್ ಶಾಪ್‍ನಲ್ಲಿ ಮದ್ಯ ಮಾರಾಟ ನಡೆಯುತ್ತಿದೆ ಎನ್ನುವ ಖಚಿತ ಮಾಹಿತಿಯನ್ನು ಆಧರಿಸಿ ಅಬಕಾರಿ ಪೊಲೀಸರು ಮಾರುವೇಷದಲ್ಲಿ ಬೆಸ್ಟ್ ಮೆಡಿಕಲ್ ಶಾಪ್‍ಗೆ ತೆರಳಿ ಮದ್ಯ ಕೇಳಿದ್ದಾರೆ. ಈ ವೇಳೆ ಪೊಲೀಸರಿಗೆ ಮದ್ಯ ಸಿಕ್ಕಿದ್ದು, ಕೂಡಲೇ ಮೆಡಿಕಲ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೂರಂಬೈಲ್ ಉದಯ್ ಎಂಬಾತನನ್ನು ಬಂಧಿಸಿದ್ದಾರೆ.

    ಇನ್ಸ್ ಪೆಕ್ಟರ್ ಪಿಜಿ ರಾಬಿನ್ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು ಅಬಕಾರಿ ಪೊಲೀಸರು ಕರ್ನಾಟಕದಲ್ಲಿ ತಯಾರಾಗಿರುವ 49 ಬಾಟಲ್ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

    ಸುಪ್ರೀಂ ಹೇಳಿದ್ದು ಏನು?
    ಮದ್ಯಪಾನದಿಂದಾಗಿ ರಸ್ತೆ ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ 2017ರ ಏಪ್ರಿಲ್ 1ರ ಒಳಗಡೆ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಎರಡೂ ಬದಿಯ 500 ಮೀಟರ್ ವ್ಯಾಪ್ತಿಯಲ್ಲಿನ ಮದ್ಯದ ಅಂಗಡಿಗಳನ್ನು ಮುಚ್ಚುವಂತೆ ಆದೇಶ ನೀಡಿತ್ತು. ಅಷ್ಟೇ ಅಲ್ಲದೇ ಈ ಮದ್ಯದ ಅಂಗಡಿಗಳ ಪರಾವನಗಿಗಳನ್ನು ಮಾರ್ಚ್ 31ರ ಬಳಿಕ ನವೀಕರಿಸಬಾರದು ಎಂದು ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ಅವರ ನೇತೃತ್ವದ ಪೀಠ ಹೇಳಿತ್ತು.

      ಫೋಟೋ ಕೃಪೆ: ಕಾಸರಗೋಡುವಾರ್ತಾ.ಕಾಂ