Tag: ಮಠ

  • ರಾಯರ ಸನ್ನಿಧಿಯಲ್ಲಿ ಹಾಡು ಹೇಳಿ ಭಾವುಕರಾದ ಪುನೀತ್

    ರಾಯರ ಸನ್ನಿಧಿಯಲ್ಲಿ ಹಾಡು ಹೇಳಿ ಭಾವುಕರಾದ ಪುನೀತ್

    ರಾಯಚೂರು: ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ವರ್ಧಂತಿ ಉತ್ಸವ ಹಿನ್ನೆಲೆಯಲ್ಲಿ ಮಂತ್ರಾಲಯದ ಶ್ರೀ ಮಠಕ್ಕೆ ಆಗಮಿಸಿ ನಟ ಪುನೀತ್ ರಾಜ್‍ಕುಮಾರ್ ರಾಯರ ದರ್ಶನ ಪಡೆದು ಪುನೀತರಾದರು.

    ಕಳೆದ ಏಳು ದಿನಗಳಿಂದ ನಡೆಯುತ್ತಿರುವ ಗುರು ವೈಭವೋತ್ಸವದ ಕೊನೆಯ ದಿನದ ಸಮಾರಂಭದಲ್ಲಿ ಪುನೀತ್ ರಾಜ್‍ಕುಮಾರ್ ಅವರನ್ನ ಸನ್ಮಾನಿಸಲಾಯಿತು. ಸನ್ಮಾನಕ್ಕೂ ಮುನ್ನ ವೇದಿಕೆಯಲ್ಲಿ ಕುಳಿತಿದ್ದ ಪುನೀತ್ ರಾಜ್‍ಕುಮಾರ್ ತಮ್ಮ ಹಳೆಯ ನೆನಪುಗಳನ್ನು ನೆನಪಿಸಿಕೊಂಡು ಭಾವುಕರಾದರು.

    ವೇದಿಕೆ ಮೇಲೆ ರಾಯರ ಹಾಡು ಹೇಳಿದ ಪುನೀತ್ ರಾಯರಿಗೆ ತಮ್ಮ ಭಕ್ತಿ ಸಮರ್ಪಿಸಿದರು. ಆರಾಧನಾ ವೇಳೆ ಮಂತ್ರಾಲಯಕ್ಕೆ ಆಗಮಿಸಿ ಮೂರು ಹಾಡುಗಳನ್ನ ಹಾಡುವುದಾಗಿ ಹೇಳಿದರು.

    ಡಾ.ರಾಜಕುಮಾರ್ ಅವರಿಗೆ ಮಂತ್ರಾಲಯದೊಂದಿಗೆ ಇದ್ದ ಅವಿನಾಭಾವ ಸಂಬಂಧದ ಬಗ್ಗೆ ಹೇಳಿದರು. ಭಾಗ್ಯವಂತರು ಚಿತ್ರವನ್ನ ಮಂತ್ರಾಲಯದಲ್ಲಿ ಚಿತ್ರಿಕರಿಸಿದ್ದನ್ನ ನೆನಪು ಮಾಡಿಕೊಂಡರು. ಮಂತ್ರಾಲಯಕ್ಕೆ ಹೆಚ್ಚು ಬಾರಿ ಬರದಿದ್ದರೂ ಇಲ್ಲಿನ ನೆನಪುಗಳು ಹಾಗೇ ಇವೆ ಅಂತ ಪುನೀತ್ ಹೇಳಿದರು.

  • ದಿಢೀರ್ ಬೆಲೆ ಕುಸಿತ- ಮಠಗಳಿಗೆ ರೈತರಿಂದ 300 ಮೂಟೆ ಉಚಿತ ಎಲೆಕೋಸು ರವಾನೆ

    ದಿಢೀರ್ ಬೆಲೆ ಕುಸಿತ- ಮಠಗಳಿಗೆ ರೈತರಿಂದ 300 ಮೂಟೆ ಉಚಿತ ಎಲೆಕೋಸು ರವಾನೆ

    – 30, 40 ಸಾವಿರ ಖರ್ಚು ಮಾಡಿ ಬೆಳೆದಿದ್ದ ರೈತರು
    – 40 ಮಂದಿ ರೈತರಿಂದ ಕೂಲಿಯಿಲ್ಲದೆ ಉಚಿತ ಕಟಾವು

    ನೆಲಮಂಗಲ: ದೇಶದ ಬೆನ್ನಲುಬು ರೈತ ಎನ್ನುತ್ತಾರೆ. ಆದರೆ ರೈತರು ಬೆಳೆದ 300 ಚೀಲ ಕೋಸಿಗೆ ಬೆಂಬಲ ಬೆಲೆಯಿಲ್ಲದೆ ಎಲೆಕೋಸನ್ನು ಮಠ ಮಂದಿರಗಳಿಗೆ ಉಚಿತವಾಗಿ ನೀಡಿದ್ದಾನೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಕೆರೆಕತ್ತಿಗನೂರಿನ ರೈತ ಬಾಬು ಮತ್ತು ವಾಸು ಬೆಳೆದ ಎಲೆಕೋಸನ್ನು ಉಚಿತವಾಗಿ ಮಠ-ಮಂದಿರಗಳಿಗೆ ನೀಡುವ ಮೂಲಕ ಸಾರ್ಥಕ ಕಾರ್ಯಕ್ಕೆ ಮುಂದಾಗಿದ್ದಾರೆ. 30 ರಿಂದ 40 ಸಾವಿರ ಖರ್ಚು ಮಾಡಿ ಬೆಳೆದ ಎಲೆಕೋಸಿಗೆ ಬೆಲೆಯಿಲ್ಲಾದಂತಾಗಿದೆ. ಎಲೆಕೋಸಿಗೆ ಮಾರುಕಟ್ಟೆಯಲ್ಲಿ ಚೀಲಕ್ಕೆ 70 ರಿಂದ 80 ರೂಪಾಯಿ. ಈ ಹಿನ್ನೆಲೆಯಲ್ಲಿ ರೈತರ ತಂಡ ಮನಸ್ಸು ಮಾಡಿ, ತುಮಕೂರಿನ ಸಿದ್ದಗಂಗಾ ಮಠ, ಆದಿಚುಂಚನಗಿರಿ ಮಠ, ಯಡಿಯೂರು, ಧರ್ಮಸ್ಥಳಕ್ಕೆ ರವಾನೆ ಮಾಡಿ ಸಾರ್ಥಕತೆ ಮೆರೆದಿದ್ದಾರೆ.

    ಕೆರೆಕತ್ತಿಗನೂರು ರೈತರ ತಂಡ 300 ಚೀಲ ಎಲೆಕೋಸನ್ನು ಉಚಿತವಾಗಿ ನೀಡಿದ್ದಾರೆ. ಅಲ್ಲದೇ ಎಲೆಕೋಸನ್ನು ಕಟಾವು ಮಾಡಲು ಗ್ರಾಮದ 40 ಮಂದಿ ರೈತರು ಕೂಲಿಯಿಲ್ಲದೇ ಉಚಿತವಾಗಿ ಕೆಲಸ ನಿರ್ವಹಿಸಿದ್ದಾರೆ. ಸ್ಥಳೀಯ ಲಾರಿ ಮಾಲೀಕರೊಬ್ಬರು ಈ ಎಲೆಕೋಸನ್ನು ಸಾಗಿಸುವ ಹೊಣೆ ಹೊತ್ತು ಎಲ್ಲ ಮಠಗಳಿಗೆ ರವಾನೆ ಮಾಡುತ್ತಿದ್ದಾರೆ.

    ಅರ್ಧ ಎಕರೆಯಲ್ಲಿ ಮಗುವಿನಂತೆ ಹಾರೈಕೆ ಮಾಡಿರುವ ಎಲೆಕೋಸಿನ ಬೆಳೆ ಅನ್ನದಾತ ವಾಸು ಮತ್ತು ಕುಟುಂಬಕ್ಕೆ ಕೈ ಸುಡುವಂತೆ ಮಾಡಿದೆ. ರೈತ ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗದೆ ರೈತನ ಬದುಕು ದುಸ್ತಾರವಾಗುತ್ತದೆ. ಬೆಳೆದ ತರಕಾರಿಗಳಿಗೂ ಬೆಂಬಲ ಘೋಷಿಸಿ ಎಂದು ಎಲೆಕೋಸು ಬೆಳೆದ ಬಾಬು ಒತ್ತಾಯಿಸಿದ್ದಾರೆ. ಕೃಷಿ ಇಲಾಖೆ ಆಯಾ ಕಾಲಕ್ಕೆ ತಕ್ಕ ಬೆಳೆ ಬೆಳೆಯಲು ಸೂಕ್ತ ಮಾರ್ಗದರ್ಶನ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ.

  • ಶಿವಮೊಗ್ಗದ ರಾಮಲಿಂಗೇಶ್ವರ ಮಠದ ಆಸ್ತಿ ವಿವಾದ- ಬೆಂಗ್ಳೂರಿನ 18 ಎಕರೆ ಮೇಲೆ ಕಣ್ಣು

    ಶಿವಮೊಗ್ಗದ ರಾಮಲಿಂಗೇಶ್ವರ ಮಠದ ಆಸ್ತಿ ವಿವಾದ- ಬೆಂಗ್ಳೂರಿನ 18 ಎಕರೆ ಮೇಲೆ ಕಣ್ಣು

    – ಅಸಲಿ, ನಕಲಿ ಸ್ವಾಮೀಜಿಗಳ ಫೈಟ್

    ಶಿವಮೊಗ್ಗ: ನಗರದ ರಾಮಲಿಂಗೇಶ್ವರ ಮಠ, ಈ ಮಠದ ಹೆಸರಲ್ಲಿ ಬೆಂಗಳೂರಿನ ನಾಗಸಂದ್ರ ಬಳಿ 18 ಎಕರೆ ಜಮೀನಿದೆ. ನೂರಾರು ಕೋಟಿ ಬೆಲೆಬಾಳುವ ಈ ಜಾಗದ ಮೇಲೆ ಸ್ವಾಮೀಜಿಗಳು, ರಾಜಕಾರಣಿಗಳು, ಪ್ರಭಾವಿಗಳ ಕಣ್ಣು ಬಿದ್ದಿದೆ. ಸ್ವಾಮೀಜಿಗಳ ನಡುವೆಯೇ ಅಸಲಿ, ನಕಲಿ ಅಂತ ವಿವಾದ ತಾರಕಕ್ಕೇರಿದೆ.

    ಶಿವಮೊಗ್ಗ ಜಿಲ್ಲೆಯ ಹಾರನಹಳ್ಳಿಯಲ್ಲಿರುವ ರಾಮಲಿಂಗೇಶ್ವರ ಮಠಕ್ಕೆ ನೂರಾರು ವರ್ಷ ಇತಿಹಾಸ ಇದೆ. ಕೆಳದಿ ಸಂಸ್ಥಾನದ ಅರಸರ ಕಾಲದಲ್ಲಿ ಈ ಮಠ ಅಸ್ತಿತ್ವಕ್ಕೆ ಬಂತಂತೆ. ಮಠ ಆರಂಭದ ದಿನಗಳಲ್ಲಿ ದಾಸೋಹ, ಪೂಜೆ-ಪ್ರವಚನ ಮಾಡಿಕೊಂಡು ಸಾಮಾಜಮುಖಿ ಕೆಲಸದಲ್ಲಿ ತೊಡಗಿತ್ತು. ಕಾಲಕ್ರಮೇಣ ಮಠ ಕೂಡ ಕಮರ್ಷಿಯಲ್ ಟಚ್ ಪಡೆದುಕೊಂಡಿತು. ಈ ಮಠಕ್ಕೆ ಬೆಂಗಳೂರಿನ ನಾಗಸಂದ್ರ ಬಳಿ ನೂರಾರು ಕೋಟಿ ರೂ. ಬೆಲೆ ಬಾಳುವ 18 ಎಕರೆ ಜಮೀನಿದ್ದು ಮಠದ ಆಸ್ತಿ ಕಬಳಿಸಲು ಸ್ವಾಮೀಜಿಗಳ ನಡುವೆ ಪೈಪೋಟಿ ಶುರುವಾಗಿದ್ಯಂತೆ.

    ಮಠದ ಆಸ್ತಿ ವ್ಯಾಜ್ಯ ಕೋರ್ಟಿನಲ್ಲಿದ್ದು 1988ರಿಂದ ಇಂದಿನವರೆಗೂ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಸದ್ಯ ವಿಶ್ವರಾಧ್ಯ ಸ್ವಾಮೀಜಿ ಮಠದಲ್ಲಿ ವಾಸವಿದ್ದು, ಕಾಶಿ ಪ್ರವಾಸಕ್ಕೆ ಹೋಗಿದ್ದಾರೆ. ಇದೇ ವೇಳೆ ರಾಮಲಿಂಗೇಶ್ವರ ಮಠದ ಮೂಲ ಸ್ವಾಮೀಜಿ ನಾನೇ ಅಂತ ಹೇಳಿಕೊಂಡು ಶಿವಕುಮಾರ ಸ್ವಾಮಿ ಅಲಿಯಾಸ್ ಚಂದ್ರಮೌಳೇಶ್ವರ ಸ್ವಾಮೀಜಿ ತಮ್ಮ ಬೆಂಬಲಿಗರ ಜೊತೆ ಬಂದು ಮಠಕ್ಕೆ ಪ್ರವೇಶಿಸಲು ಯತ್ನಿಸಿದ್ದಾರೆ. ಆಗ ಮಠದಲ್ಲಿದ್ದ ವಿಶ್ವರಾಧ್ಯ ಶ್ರೀ ಬೆಂಬಲಿಗರು ಅಡ್ಡಿಪಡಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಕುಂಸಿ ಪೊಲೀಸರು ಗುಂಪು ಗಲಾಟೆ ತಪ್ಪಿಸಿದ್ದಾರೆ.

    ಬೆಂಗಳೂರಿನ ನಾಗಸಂದ್ರ ಬಳಿ ಮಠಕ್ಕೆ ಸೇರಿದ 18 ಎಕರೆ ಜಮೀನನ್ನು ಮೆಟ್ರೋ ಕಾಮಗಾರಿಗೆ ಬಿಎಂಆರ್‍ಸಿಎಲ್ ವಶಪಡಿಸಿಕೊಂಡಿದೆ. ಪರಿಹಾರ ಮೊತ್ತವಾಗಿ 88 ಕೋಟಿ ರೂ.ನೀಡಿದೆ. ಆದರೆ ಈ ಭೂಮಿ ನ್ಯಾಯಾಲಯದಲ್ಲಿದ್ದ ಕಾರಣ ಪರಿಹಾರದ ಹಣ ಸರ್ಕಾರದ ಬಳಿಯೇ ಇದೆ. ಹಾಗಾಗಿ ಈ ಹಣ ಲಪಟಾಯಿಸಲು ಮಠದ ಗಂಧ-ಗಾಳಿಯೇ ಗೊತ್ತಿಲ್ಲದವರು ಕೂಡ ನಾನು ಸ್ವಾಮೀಜಿ, ನಾನು ಪೀಠಾಧಿಪತಿ ಅಂತ ಹೊಸಹೊಸದಾಗಿ ಹುಟ್ಟಿಕೊಳ್ತಿದ್ದಾರಂತೆ.

    ಒಟ್ಟಾರೆ, ರಾಮಲಿಂಗೇಶ್ವರ ಮಠದ ಆಸ್ತಿ ವಿವಾದ ಗೊಂದಲದ ಗೂಡಾಗಿದೆ. ಈಗಾಗಿ ಇಡಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ಆಗ ಸತ್ಯಾಸತ್ಯತೆ ಹೊರ ಬರಲಿದೆ ಅಂತ ಮಠದ ಭಕ್ತರು ಹಾಗು ಗ್ರಾಮಸ್ಥರು ಆಗ್ರಹಿಸಿದ್ದಾರೆ.

  • ನನಗೂ ಡಿಸಿಎಂ ಆಗುವ ಆಸೆ ಇತ್ತು: ಸಚಿವ ಶ್ರೀರಾಮುಲು

    ನನಗೂ ಡಿಸಿಎಂ ಆಗುವ ಆಸೆ ಇತ್ತು: ಸಚಿವ ಶ್ರೀರಾಮುಲು

    ದಾವಣಗೆರೆ: ನನಗೂ ಡಿಸಿಎಂ ಆಗುವ ಆಸೆ ಇತ್ತು. ಆದರೆ ಮುಖ್ಯಮಂತ್ರಿ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದು, ಅವರಿಗೆ ಮುಜುಗರ ತರುವ ಕೆಲಸ ಮಾಡೋಲ್ಲ ಎಂದು ನನಗೂ ಡಿಸಿಎಂ ಸ್ಥಾನದ ಮೇಲೆ ಆಸೆ ಇದೆ ಎನ್ನುವುದನ್ನು ಆರೋಗ್ಯ ಸಚಿವ ಶ್ರೀರಾಮುಲು ಹೊರಹಾಕಿದ್ದಾರೆ.

    ದಾವಣಗೆರೆಯ ರಾಜನಹಳ್ಳಿ ವಾಲ್ಮೀಕಿ ಪೀಠದಲ್ಲಿ ನಡೆಯುವ ವಾಲ್ಮೀಕಿ ಜಾತ್ರೆಗೆ ಸಚಿವ ಶ್ರೀರಾಮುಲು ಅಧ್ಯಕ್ಷರಾಗಿದ್ದಾರೆ. ಮಠಕ್ಕೆ ಹೊರಡುವ ಸಂದರ್ಭದಲ್ಲಿ ದಾವಣಗೆರೆಯಲ್ಲಿ ಮಾತನಾಡಿದ ಅವರು, ಡಿಸಿಎಂ ಆಗುವ ಅವಕಾಶ ಮುಂದೆ ಬರುತ್ತದೆ. ಯಡಿಯೂರಪ್ಪ ನವರು ವಾಲ್ಮೀಕಿ ಸಮಾಜಕ್ಕೆ ಅವಕಾಶ ಕೊಡುತ್ತಾರೆ. ಅಲ್ಲದೆ ಕೊಟ್ಟ ಮಾತನ್ನು ಯಡಿಯೂರಪ್ಪ ಯಾವತ್ತು ತಪ್ಪುವುದಿಲ್ಲ. ಈಗ ಸಿಎಂ ಸಾಕಷ್ಟು ಒತ್ತಡದಲ್ಲಿದ್ದಾರೆ. ಈಗ ಹೋಗಿ ಒತ್ತಡ ಹಾಕಿದ್ರೆ ಅವರಿಗೆ ಮುಜುಗರ ನೀಡಿದಂತಾಗುತ್ತದೆ.

    ನಾಳೆ, ನಾಡಿದ್ದು ಬಜೆಟ್ ಪೂರ್ವ ಸಭೆ ಇದ್ದು, ನಮ್ಮ ಸಲಹಗೆಳನ್ನು ನಾವು ಸಿಎಂಗೆ ಕೊಡುತ್ತೇವೆ ಎಂದು ಶ್ರೀರಾಮುಲು ಹೇಳಿದರು. ಇದೇ ವೇಳೆ ಅವರಿಗೆ ಬಳ್ಳಾರಿ ಉಸ್ತುವಾರಿ ಸಚಿವ ಸ್ಥಾನದ ಬಗ್ಗೆ ಕೇಳಿದಾಗ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾದರು.

    ಶನಿವಾರವಾದ್ದರಿಂದ ದಾವಣಗೆರೆಯ ಹೊರವಲಯದಲ್ಲಿರುವ ಶಾಮನೂರು ಗ್ರಾಮದ ಆಂಜನೇಯನ ದೇವಸ್ಥಾನಕ್ಕೆ ಶ್ರೀರಾಮುಲು ಭೇಟಿ ನೀಡಿದ್ದು, ಆಂಜನೇಯನಿಗೆ ಪೂಜೆ ಸಲ್ಲಿಸಿದರು. ಅಲ್ಲದೆ ಆಂಜನೇಯ ಹಾಗೂ ಈಶ್ವರನಿಗೆ ಪೂಜೆ ಸಲ್ಲಿಸಿ ದೇವಸ್ಥಾನದ ಪಕ್ಕದಲ್ಲೇ ಇದ್ದ ಹೋಟೆಲೊಂದರಲ್ಲಿ ಒಗ್ಗರಣೆ ಮಂಡಕ್ಕಿ ಹಾಗೂ ಮೆಣಸಿನಕಾಯಿ ತಿಂದು ಅಲ್ಲಿಂದ ವಾಲ್ಮೀಕಿ ಮಠಕ್ಕೆ ಪ್ರಯಾಣ ಬೆಳಸಿದರು. ಇನ್ನು ಸಚಿವ ಶ್ರೀರಾಮುಲು ಅವರನ್ನು ನೋಡುತ್ತಿದ್ದಂತೆ ಸಾಕಷ್ಟು ಜನರು ಅವರನ್ನು ನೋಡಲು ಮುಗಿಬಿದ್ದಿದ್ದರು.

  • ‘ಕಪಾಲ ಬೆಟ್ಟದ ಸ್ಥಳ ವಾಪಸ್ ಪಡೆದ್ರೆ ಮಠ, ದರ್ಗಾಗಳಿಗೆ ನೀಡಿರೋ ಜಾಗವನ್ನೂ ವಾಪಸ್ ಪಡೆಯಿರಿ’

    ‘ಕಪಾಲ ಬೆಟ್ಟದ ಸ್ಥಳ ವಾಪಸ್ ಪಡೆದ್ರೆ ಮಠ, ದರ್ಗಾಗಳಿಗೆ ನೀಡಿರೋ ಜಾಗವನ್ನೂ ವಾಪಸ್ ಪಡೆಯಿರಿ’

    ರಾಮನಗರ: ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದ ಕಪಾಲ ಬೆಟ್ಟದಲ್ಲಿ ನಿರ್ಮಾಣವಾಗುತ್ತಿರುವ ವಿಶ್ವದ ಅತೀ ಎತ್ತರದ ಏಸುಕ್ರಿಸ್ತನ ಪ್ರತಿಮೆ ವಿವಾದ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಸಾಕಷ್ಟು ವಿರೋಧಗಳ ನಡುವೆ ಇದೀಗ ಏಸುಕ್ರಿಸ್ತನ ಬೆಂಬಲಕ್ಕೂ ಕೆಲ ಸಂಘಟನೆಯ ಕಾರ್ಯಕರ್ತರು ಮುಂದಾಗಿದ್ದಾರೆ.

    ಕಪಾಲ ಬೆಟ್ಟದಲ್ಲಿ ಏಸುಕ್ರಿಸ್ತನ ಪ್ರತಿಮೆ ನಿರ್ಮಾಣವಾಗುತ್ತಿರುವ 10 ಏಕರೆ ಜಾಗವನ್ನು ಸರ್ಕಾರ ವಾಪಸ್ ಪಡೆಯುವುದಾದರೆ, ಈ ಹಿಂದೆ ಮಠ, ಆಶ್ರಮ, ದರ್ಗಾದಂತಹ ಧಾರ್ಮಿಕ ಸಂಸ್ಥೆಗಳಿಗೆ ನೀಡಿರುವ ಜಾಗಗಳನ್ನು ಕೂಡ ವಾಪಸ್ ಪಡೆಯಬೇಕು ಎಂದು ಕರ್ನಾಟಕ ಸಮತಾ ಸೈನಿಕದಳದ ಜಿಲ್ಲಾದ್ಯಕ್ಷ ಕೋಟೆ ಕುಮಾರ್ ಆಗ್ರಹಿಸಿದ್ದಾರೆ.

    ಪ್ರವಾಸಿ ಮಂದಿರದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂಘಟನೆ ವತಿಯಿಂದ ಏಸು ಪ್ರತಿಮೆ ನಿರ್ಮಾಣಕ್ಕೆ ಬೆಂಬಲವನ್ನು ನೀಡುತ್ತಿದ್ದೇವೆ. ಪ್ರತಿಮೆ ನಿರ್ಮಾಣದ ವಿಚಾರವಾಗಿ ಏನೆಲ್ಲಾ ಅನುಕೂಲಗಳು ಬೇಕಿದೆ, ಜೊತೆಗೆ ಪ್ರತಿಮೆ ವಿರೋಧಿಸುವವರ ವಿರುದ್ಧ ಹೋರಾಟಕ್ಕೂ ತಾವು ಕೈ ಜೋಡಿಸುವುದಾಗಿ ತಿಳಿಸಿದರು.

    ಕೆಲವರು ಏಸುಕ್ರಿಸ್ತನ ಪ್ರತಿಮೆ ನಿರ್ಮಾಣ ವಿಚಾರವಾಗಿ ಆಧಾರಗಳೇ ಇಲ್ಲದ ಮತಾಂತರದ ಊಹಾಪೋಹದ ಆರೋಪಗಳನ್ನು ಮಾಡುತ್ತಿದ್ದಾರೆ. ಹಾರೋಬೆಲೆಯಲ್ಲದೇ ಪ್ರತಿಮೆಯಾದರೆ ವಿಶ್ವದ ಜನ ಈ ಭಾಗಕ್ಕೆ ಬರುತ್ತಾರೆ ಪ್ರವಾಸೋದ್ಯಮ ಕೂಡ ಅಭಿವೃದ್ದಿಯಾಗಲಿದೆ. ಅಲ್ಲದೇ ಈ ಭಾಗದ ರೈತರ ಜಮೀನುಗಳು ಚಿನ್ನದಂತಹ ಬೆಲೆಯನ್ನ ಪಡೆದುಕೊಳ್ಳಲಿವೆ. ಆದರೆ ಧರ್ಮದ ಹೆಸರಿನಲ್ಲಿ ಕಲಹವನ್ನುಂಟು ಮಾಡುವಂತಹ ಕೆಲಸವನ್ನು ಮತಾಂಧರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಲಂಡನ್‍ನಲ್ಲಿ ವಿಶ್ವಮಾನವತೆ ಸಾರಿದ ಬಸವಣ್ಣನ ವಿಗ್ರಹವನ್ನ ಇಲ್ಲಿಂದ ತೆರಳಿ ಅಲ್ಲಿ ವಾಸ ಮಾಡುತ್ತಿರುವ ಹಿಂದೂಗಳು ಪ್ರತಿಷ್ಠಾಪನೆ ಮಾಡಿದ್ದಾರೆ. ಆದರೆ ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಏಸುವಿನ ಪ್ರತಿಮೆಗೆ ಮತಾಂಧರಿಂದ ಪ್ರತಿಮೆ ನಿರ್ಮಾಣಕ್ಕೆ ಅಡ್ಡಿಪಡಿಸಲಾಗುತ್ತಿದೆ. ಇದೇ ಜ.13ಕ್ಕೆ ಕನಕಪುರ ಚಲೋಗೆ ಮುಂದಾಗಿದ್ದಾರೆ, ಇದು ಯಾವ ನ್ಯಾಯ ಎಂದು ಪ್ರಶ್ನೆ ಮಾಡಿದರು.

    ಸರ್ವಧರ್ಮದ ರಾಷ್ಟ್ರ ನಮ್ಮದಾಗಿದ್ದು. ಸಂವಿಧಾನದಲ್ಲೇ ಸರ್ವಧರ್ಮದ ಕಲ್ಪನೆಯನ್ನ ಹೇಳಲಾಗಿದೆ. ದೇಶದಲ್ಲಿ ಹಿಂದೂಗಳು ಮಾತ್ರವಲ್ಲದೇ ಮುಸ್ಲಿಂ, ಕ್ರೈಸ್ತ, ಸಿಖ್, ಪಾರ್ಸಿ, ಜೈನ, ಭೌದ್ಧರು ವಾಸಿಸುತ್ತಿದ್ದಾರೆ. ಕೆಲವರು ಸಮಾಜದ ಸ್ವಾಸ್ಥ್ಯ ಕದಡುವಂತಹ ಕೆಲಸ ಮಾಡುತ್ತಿದ್ದಾರೆ. ಪ್ರತಿಮೆ ನಿರ್ಮಾಣದ ಜಾಗ ವಾಪಸ್ ಪಡೆಯುವಂತೆ ಆಗ್ರಹಿಸಿರುವುದು ಸರಿಯಲ್ಲ ಎಂದರು.

     

  • ಮಠಕ್ಕೆ ಡೊನೇಷನ್ ಕೊಡೋ ಹೆಸ್ರಲ್ಲಿ ಕಳ್ಳತನ!

    ಮಠಕ್ಕೆ ಡೊನೇಷನ್ ಕೊಡೋ ಹೆಸ್ರಲ್ಲಿ ಕಳ್ಳತನ!

    – ಅರ್ಚಕರ ಮನೆಯಲ್ಲೇ ಉಳಿದುಕೊಂಡಿದ್ದ ಕಳ್ಳ

    ಮೈಸೂರು: ಬ್ರಾಹ್ಮಣರ ವೇಷ ಧರಿಸಿ ಮಠಕ್ಕೆ ಡೊನೇಷನ್ ಕೊಡುವ ನೆಪದಲ್ಲಿ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಸ್ಥಳೀಯರು ರೆಡ್ ಹ್ಯಾಂಡಾಗಿ ಹಿಡಿದು ಥಳಿಸಿದ ಘಟನೆ ಮೈಸೂರಿನ ರಾಮಾನುಜ ರಸ್ತೆಯಲ್ಲಿ ನಡೆದಿದೆ.

    ದೇವಾಲಯಕ್ಕೆ ಡೊನೇಷನ್ ಕೊಡುವ ನೆಪದಲ್ಲಿ ಮಠದ ಅರ್ಚಕರ ಮನೆಯಲ್ಲಿ ಉಳಿದುಕೊಂಡು ಕಳ್ಳತನ ಮಾಡುತ್ತಿದ್ದನು. ಪಂಚೆ, ಶಲ್ಯ, ತುಳಸಿ ಹಾರ ಧರಿಸಿ ಬಂದು ಬ್ರಾಹ್ಮಣರ ಮನೆಗಳಲ್ಲಿ ಉಳಿದುಕೊಳ್ಳುತ್ತಿದ್ದ ಇವನು ಮನೆಯವರ ನಂಬಿಕೆ ಗಳಿಸಿ ಅದೇ ಮನೆಯಲ್ಲೆ ಕಳ್ಳತನ ಮಾಡುತ್ತಿದ್ದ. ಇವತ್ತು ಕಳ್ಳತನ ಮಾಡುವ ವೇಳೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ.

    ಪ್ರವೀಣ್ ಎಂದು ಹೇಳಿಕೊಂಡಿರುವ ಈ ಕಳ್ಳ ತಾನು ಭದ್ರಾವತಿ ನಿವಾಸಿ ಎಂದು ಹೇಳಿಕೊಂಡಿದ್ದಾನೆ. ರಾಮಾನುಜ ರಸ್ತೆಯ ಮನೆಯಲ್ಲಿ ಕಳ್ಳತನ ಮಾಡಿ ಗೂಸ ತಿಂದಿದ್ದಾನೆ. ರಾಘವೇಂದ್ರ ಸ್ವಾಮಿ ಮಠದ ಅರ್ಚಕ ವ್ಯಾಸಾತೀರ್ಥಾಚಾರ್ಯ ಮನೆಯಲ್ಲಿ ಕಳ್ಳತನ ಮಾಡುವಾಗ ಸಿಕ್ಕಿಬಿದ್ದಿದ್ದಾನೆ. ಈ ಹಿಂದೆಯೂ ಇದೇ ರೀತಿಯಲ್ಲಿ ಇವರ ಮನೆಯಲ್ಲಿ ಉಳಿದುಕೊಂಡು 50 ಸಾವಿರ ಕದ್ದಿದ್ದನು.

    ಕೆ.ಆರ್.ಪೊಲೀಸರು ಇವನನ್ನು ವಶಕ್ಕೆ ಪಡೆದಿದ್ದಾರೆ.

  • ಗುರುಗಳ ಕೊನೆಯಾಸೆ ಈಡೇರಿಸಲು ಕಿರಿಯಶ್ರೀ ದಿಟ್ಟ ನಿರ್ಧಾರ – ಶ್ರೀಗಳು ಮಠಕ್ಕೆ ಶಿಫ್ಟ್

    ಗುರುಗಳ ಕೊನೆಯಾಸೆ ಈಡೇರಿಸಲು ಕಿರಿಯಶ್ರೀ ದಿಟ್ಟ ನಿರ್ಧಾರ – ಶ್ರೀಗಳು ಮಠಕ್ಕೆ ಶಿಫ್ಟ್

    ಉಡುಪಿ: ವಿಶ್ವಸಂತ ಪೇಜಾವರ ಶ್ರೀಗಳ ದೇಹಸ್ಥಿತಿ ಕ್ಷಣ ಕ್ಷಣಕ್ಕೂ ಕ್ಷೀಣಿಸುತ್ತಿದ್ದು, ಚಿಕಿತ್ಸೆಗೆ ಶ್ರೀಗಳ ದೇಹ ಸ್ಪಂದಿಸುತ್ತಿಲ್ಲ. ಹೀಗಾಗಿ ಗುರುಗಳ ಕೊನೆಯಾಸೆ ಈಡೇರಿಸಲು ಕಿರಿಯ ಶ್ರೀಗಳು ದಿಟ್ಟ ನಿರ್ಧಾರ ಮಾಡಿದ್ದಾರೆ. ಹೀಗಾಗಿ ಶ್ರೀಗಳ ಕೊನೆಯಾಸೆಯಂತೆ ಮಠಕ್ಕೆ ಶಿಫ್ಟ್ ಮಾಡಲಾಗಿದೆ.

    ಮಣಿಪಾಲದ ಕೆಎಂಸಿ ಆಸ್ಪತ್ರೆಯಿಂದ ನಸುಕಿನ ಜಾವವೇ ವೆಂಟಿಲೇಟರ್ ಸಹಿತ ಪೇಜಾವರ ಶ್ರೀಗಳನ್ನು ಅಂಬುಲೆನ್ಸ್ ಮೂಲಕ ಉಡುಪಿ ಮಠಕ್ಕೆ ಕರೆದುಕೊಂಡು ಹೋಗಲಾಗಿದೆ. ಶ್ರೀಗಳ ಮಠದ ಕೊಠಡಿಯಲ್ಲಿ ಮುಂದಿನ ಚಿಕಿತ್ಸೆಗೆ ವ್ಯವಸ್ಥೆ ಕೂಡ ಮಾಡಲಾಗಿದೆ. ಹೀಗಾಗಿ ಕೃಷ್ಣನೂರು ಉಡುಪಿಯಲ್ಲಿ ಆತಂಕದ ಛಾಯೆ ಮನೆ ಮಾಡಿದೆ.

    ಇತ್ತ ಪೇಜಾವರ ಶ್ರೀಗಳು ಅಧೋಕ್ಷಜ ಮಠಕ್ಕೆ ಶಿಫ್ಟ್ ಆದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯಿಂದ ಭಕ್ತರಿಗೆ ಮಠಕ್ಕೆ ಪ್ರವೇಶವನ್ನು ನಿರ್ಬಂಧ ಮಾಡಲಾಗಿದೆ. ಜೊತೆಗೆ ಪೇಜಾವರ ಮಠದ ಸುತ್ತಲೂ ಬಿಗಿ ಬಂದೋಬಸ್ತ್ ಮಾಡಲಾಗಿದೆ. ನಗರದಾದ್ಯಂತ 700 ಪೊಲೀಸ್ ಭದ್ರತೆ ನಿಯೋಜಿಸಲಾಗಿದ್ದು, ಮಠದ ಸುತ್ತ ವಾಹನ ಸಂಚಾರ ನಿರ್ಬಂಧ ಮಾಡಲಾಗಿದೆ. ಪೇಜಾವರ ಮಠದೊಳಗೆ ಭಕ್ತರ್ಯಾರು ಬರಬಾರದು, ಪೇಜಾವರ ಶ್ರೀ ಚಿಕಿತ್ಸೆಗೆ ತೊಂದರೆ ಮಾಡಬಾರದು ಎಂದು ಪೇಜಾವರ ಮಠದ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಪೇಜಾವರ ಶ್ರೀ ಆರೋಗ್ಯ ಗಂಭೀರ ಹಿನ್ನೆಲೆಯಲ್ಲಿ ಶ್ರೀಕೃಷ್ಣನಿಗೆ ಎಂದಿಗಿಂತ ಶೀಘ್ರವಾಗಿ ಪೂಜೆಯನ್ನು ಪಲಿಮಾರು ಸ್ವಾಮೀಜಿ ನೆರವೇರಿಸುತ್ತಿದ್ದಾರೆ. ಪೇಜಾವರ ಶ್ರೀಗಳ ಚೇತರಿಕೆಗಾಗಿ ವಿಶೇಷ ಪೂಜೆ, ಪಾರಾಯಣ ಮಾಡಲಾಗುತ್ತಿದೆ. ಇತ್ತ ಪೇಜಾವರ ಶ್ರೀಗಳನ್ನು ಮಠಕ್ಕೆ ಕರೆತರುವ ವಿಚಾರ ಗೊತ್ತಾಗುತ್ತಿದ್ದಂತೆ, ದೂರದೂರಿನಿಂದ ಕೃಷ್ಣಮಠಕ್ಕೆ ಭಕ್ತರು ಆಗಮಿಸುತ್ತಿದ್ದಾರೆ. ಜೊತೆಗೆ ಕೃಷ್ಣನ ಸನ್ನಿಧಾನದಲ್ಲಿ ಭಕ್ತರಿಂದ ಪ್ರಾರ್ಥನೆ ಮಾಡಲಾಗುತ್ತಿದೆ.

  • ಸಚಿವ ಶ್ರೀರಾಮುಲು ಮಂತ್ರಾಲಯಕ್ಕೆ ಭೇಟಿ

    ಸಚಿವ ಶ್ರೀರಾಮುಲು ಮಂತ್ರಾಲಯಕ್ಕೆ ಭೇಟಿ

    ರಾಯಚೂರು: ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ಮಂತ್ರಾಲಯ ಮಠಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದಿದ್ದಾರೆ.

    ಉಪ ಮಖ್ಯಮಂತ್ರಿ ಸ್ಥಾನದ ಆಕಾಂಕ್ಷೆಯಲ್ಲಿ ಇರುವ ಶ್ರೀರಾಮುಲು ರಾಯರಿಗೆ ವಿಶೇಷ ಪೂಜೆ ಸಲ್ಲಿಸಿದರು. ಗುರುವಾರ ಸೂರ್ಯಗ್ರಹಣ ಹಿನ್ನೆಲೆಯೂ ರಾಯರ ಕ್ಷೇತ್ರಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ.

    ಮಂತ್ರಾಲಯ ಮಠದಲ್ಲಿ ಸಚಿವ ಶ್ರೀರಾಮುಲು ಅವರನ್ನು ವಾದ್ಯಗೋಷ್ಠಿ ಮೂಲಕ ಸ್ವಾಗತಿಸಲಾಯಿತು. ಬಳಿಕ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಶಾಲು ಹೊದಿಸಿ ಆಶೀರ್ವದಿಸಿದರು. ಮಂತ್ರಾಕ್ಷತೆ ನೀಡಿ ಆಶೀರ್ವಚನ ನೀಡಿದರು.

    ಈ ವೇಳೆ ರಾಯಚೂರು ಜಿಲ್ಲಾ ಬಿಜೆಪಿ ಮುಖಂಡರು ಶ್ರೀರಾಮುಲು ಜೊತೆಗಿದ್ದರು. ಮಂತ್ರಾಲಯ ಮಠದ ಬಳಿಕ ಎಲೆಬಿಚ್ಚಾಲಿಯ ರಾಯರ ಏಕಶಿಲಾ ಸ್ವಪ್ನ ಬೃಂದಾವನಕ್ಕೆ ಭೇಟಿ ನೀಡಿ ದರ್ಶನ ಪಡೆದು ಯಾದಗಿರಿ ಜಿಲ್ಲಾ ಪ್ರವಾಸಕ್ಕೆ ತೆರಳಲಿದ್ದಾರೆ.

  • ಒಂದು ದಿನದ ಭಾಗ್ಯ – 22 ವರ್ಷಗಳಿಂದ ಬ್ಯಾಂಕ್ ಲಾಕರ್‌ನಲ್ಲಿದ್ದ  ಲಿಂಗಕ್ಕೆ ಭಕ್ತರ ಅಭಿಷೇಕ

    ಒಂದು ದಿನದ ಭಾಗ್ಯ – 22 ವರ್ಷಗಳಿಂದ ಬ್ಯಾಂಕ್ ಲಾಕರ್‌ನಲ್ಲಿದ್ದ ಲಿಂಗಕ್ಕೆ ಭಕ್ತರ ಅಭಿಷೇಕ

    ಶಿವಮೊಗ್ಗ: ಸರ್ಕಾರದ ಮಧ್ಯಪ್ರವೇಶದಿಂದಾಗಿ 22 ವರ್ಷಗಳ ಕಾಲ ಬ್ಯಾಂಕ್ ಲಾಕರ್‌ನಲ್ಲಿದ್ದ  ಶಿವಲಿಂಗಕ್ಕೆ ಭಕ್ತರು ಇಂದು ಅಭಿಷೇಕ ಮಾಡಿದ್ದಾರೆ.

    ಸಾಗರ ತಾಲೂಕಿನ ಕೆಳದಿ ರಾಜಗುರು ಬಂದಗದ್ದೆ ಹಿರೇಮಠದ ಪಚ್ಚೆ ಲಿಂಗಕ್ಕೆ 600 ವರ್ಷದ ಇತಿಹಾಸವಿದೆ. 1 ಕೆಜಿ ತೂಕದ ಪಚ್ಚೆಲಿಂಗವನ್ನು ಕೆಳದಿ ಅರಸರು ರಾಜಗುರು ಮಠಕ್ಕೆ ನೀಡಿದ್ದರು. ಅಂದಿನಿಂದ ಪ್ರತಿವರ್ಷ ನವರಾತ್ರಿ ಸೇರಿದಂತೆ ವಿಶೇಷ ಸಂದರ್ಭದ ದಿನಗಳಲ್ಲಿ ಪೂಜೆ ಸಲ್ಲಿಸಿ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತಿತ್ತು.’

    ಮಠದ ಹಿಂದಿನ ಸ್ವಾಮೀಜಿ ಗುರು ಸಿದ್ದದೇವರು ಆರ್ಥಿಕ ಸಂಕಷ್ಟದಿಂದಾಗಿ ಪಚ್ಚೆ ಲಿಂಗವನ್ನು ಶಿವಮೊಗ್ಗದ ಎಸ್‍ಬಿಐ ಬ್ಯಾಂಕಿನಲ್ಲಿಟ್ಟು 2.80 ಲಕ್ಷ ರೂ. ಸಾಲ ಪಡೆದುಕೊಂಡಿದ್ದರು. ನಂತರದಲ್ಲಿ ಸಾಲವನ್ನು ತೀರಿಸಲಾಗಿತ್ತು. ಆದರೆ ಇಂದಿನ ಸ್ವಾಮೀಜಿ ಡಾ.ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗು ಸದ್ಯ ಬೆಳಗಾವಿಯ ಮಠವೊಂದರಲ್ಲಿ ಸ್ವಾಮೀಜಿಯಾಗಿರುವ ಮೃತ್ಯುಂಜಯ ಸ್ವಾಮೀಜಿಯವರ ನಡುವೆ ಆಸ್ತಿ ವಿಚಾರವಾಗಿ ಮನಸ್ತಾಪ ಉಂಟಾದ ಹಿನ್ನೆಲೆಯಲ್ಲಿ ಮೃತ್ಯುಂಜಯ ಸ್ವಾಮೀಜಿ ಆಪ್ತರು ನ್ಯಾಯಾಲಯದಲ್ಲಿ ದಾವೆ ಹೂಡಿ ಮಠದ ಆಸ್ತಿಯನ್ನು ಪರಭಾರೆ ಮಾಡದಂತೆ ತಡೆಯಾಜ್ಞೆ ತಂದಿದ್ದರು.

    ತಡೆಯಾಜ್ಞೆಯಿಂದಾಗಿ ಭದ್ರತೆ ದೃಷ್ಟಿಯಿಂದ ಪಚ್ಚೆಲಿಂಗ ಮತ್ತೆ ಬ್ಯಾಂಕಿನ ಲಾಕರ್ ಸೇರಿತು. ಆದರೆ ಈ ಬಾರಿ ನವರಾತ್ರಿಯ ಕೊನೆಯ ಒಂದು ದಿನ ಪಚ್ಚೆಲಿಂಗ ದರ್ಶನ ಮಾಡಬೇಕು ಎಂಬುದು ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗು ಭಕ್ತರ ಆಸೆಯಾಗಿತ್ತು. ಅದರಂತೆ ಸ್ಥಳೀಯ ಶಾಸಕ ಹಾಲಪ್ಪ ನೇತೃತ್ವದಲ್ಲಿ ತೆರಳಿದ್ದ ನಿಯೋಗ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಪಚ್ಚೆಲಿಂಗ ದರ್ಶನಕ್ಕೆ ಮನವಿ ಸಲ್ಲಿಸಿತ್ತು.

    ಭಕ್ತರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಯವರು ಇಂದು ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ತಹಶೀಲ್ದಾರ್ ಸಮ್ಮುಖದಲ್ಲಿ ಬಿಗಿ ಭದ್ರತೆಯೊಂದಿಗೆ ಇಂದು ಸಾಗರ ಖಜಾನೆಯಿಂದ ಪಚ್ಚೆಲಿಂಗ ತೆಗೆದುಕೊಂಡು ಹೋಗಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಪಚ್ಚೆಲಿಂಗ 22 ವರ್ಷಗಳ ನಂತರ ಮಠಕ್ಕೆ ಆಗಮಿಸುತ್ತಿದ್ದಂತೆ ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ಅಲ್ಲದೇ ಸ್ವಾಮೀಜಿಯವರು ಪಚ್ಚೆಲಿಂಗಕ್ಕೆ ಜಲಾಭಿಷೇಕ, ಕ್ಷೀರಾಭಿಷೇಕ, ಗಂಧಾಭಿಷೇಕ, ಬಿಲ್ವಾರ್ಚನೆ ಮಾಡಿದ ನಂತರ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

    22 ವರ್ಷಗಳ ನಂತರ ಪಚ್ಚೆಲಿಂಗ ದರ್ಶನ ಮಾಡಿದ್ದಕ್ಕೆ ಭಕ್ತರು ಸಂತಸ ವ್ಯಕ್ತಪಡಿಸಿದರು. ಪ್ರತಿ ವರ್ಷ ನವರಾತ್ರಿ ದಿನದಂದು ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ. ಅಲ್ಲದೇ ಇಂದು ರಾತ್ರಿ ಮತ್ತೆ ಬಿಗಿ ಭದ್ರತೆ ನಡುವೆ ಪಚ್ಚೆಲಿಂಗ ಲಾಕರ್ ಸೇರಿದೆ.

  • ಕುಕ್ಕೆ ದೇವಸ್ಥಾನ, ಮಠದ ನಡುವೆ ಕಿತ್ತಾಟ – ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದ ಅರ್ಚಕ

    ಕುಕ್ಕೆ ದೇವಸ್ಥಾನ, ಮಠದ ನಡುವೆ ಕಿತ್ತಾಟ – ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದ ಅರ್ಚಕ

    ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯದಲ್ಲಿ ದೇವಸ್ಥಾನ ಹಾಗೂ ಮಠದ ನಡುವೆ ಕಿತ್ತಾಟ ನಡೆಯುತ್ತಿದ್ದು, ಈ ಸಂಬಂಧ ಮಠದ ಪರ ನಿಂತಿದ್ದ ಅರ್ಚಕರೊಬ್ಬರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.

    ಅರ್ಚಕ ಕುಮಾರ್ ಬನ್ನಿಂತಾಯ(61) ಹಲ್ಲೆಗೊಳಗಾಗಿದ್ದಾರೆ. ಸರ್ಪ ಸಂಸ್ಕಾರ ಸೇವೆ ವಿಷಯಕ್ಕೆ ಮಠ ಮತ್ತು ದೇವಸ್ಥಾನದ ನಡುವೆ ಗಲಾಟೆ ನಡೆದಿತ್ತು. ಇದರಿಂದ ದೇವಸ್ಥಾನ ಹಾಗೂ ಮಠದ ಸಿಬ್ಬಂದಿ ನಡುವೆ ಕೂಡ ಭಿನ್ನಾಭಿಪ್ರಾಯ ಉಂಟಾಗಿತ್ತು. ಆದರೆ ಈ ಹಿನ್ನೆಲೆಯಲ್ಲಿ ದೇವಸ್ಥಾನದ ಅರ್ಚಕ ಮಠದ ಪರ ನಿಂತಿದ್ದರು. ಶನಿವಾರ ರಾತ್ರಿ ವೇಳೆ ದೇವಸ್ಥಾನದ ಹೊರಗೆ ಅರ್ಚಕ ನಿಂತಿದ್ದಾಗ ದುಷ್ಕರ್ಮಿಗಳು ಏಕಾಏಕಿ ಹಲ್ಲೆ ನಡೆಸಿದ್ದಾರೆ.

    ಹಲ್ಲೆಯಿಂದ ಗಾಯಗೊಂಡ ಅರ್ಚಕರನ್ನು ಸ್ಥಳದಲ್ಲಿದ್ದವರು ಪುತ್ತೂರು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ದೇವಸ್ಥಾನದ ವಿರುದ್ಧ ನಿಂತು ಮಠಕ್ಕೆ ಬೆಂಬಲ ನೀಡಿದ್ದಕ್ಕೆ ಈ ರೀತಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

    ಬೆಂಗಳೂರಿನ ನಿವಾಸಿ ಪಳನಿಸ್ವಾಮಿ ಅವರು ಸರ್ಪ ಸಂಸ್ಕಾರ ಪೂಜೆ ಮಾಡಿಸಲು 7 ಸಾವಿರ ರೂ. ನೀಡಿ ಮಠದಿಂದ ರಶೀದಿ ಪಡೆದಿದ್ದರು. ಆದರೆ ಈ ರಶೀದಿಯನ್ನು ಹಿಡಿದು ದೇವಸ್ಥಾನಕ್ಕೆ ಪೂಜೆ ಮಾಡಿಸಲು ಹೋದಾಗ ದೇಗುಲದ ಕಚೇರಿಯಲ್ಲಿ ಮಠಕ್ಕೂ ನಮಗೂ ಸಂಬಂಧ ಇಲ್ಲವೆಂದು ಹೇಳಿ ವಾಪಸ್ ಕಳುಹಿಸಿದ್ದಾರೆ. ಹೀಗಾಗಿ ಮಠದ ಸಿಬ್ಬಂದಿ ಬಳಿ ಈ ಬಗ್ಗೆ ಪ್ರಶ್ನಿಸಿದಾಗ ಹಣ ಹಿಂತಿರುಗಿಸಲು ನಿರಾಕರಿಸಿದ್ದಾರೆ. ಈ ಕಾರಣಕ್ಕೆ ಸುಬ್ರಹ್ಮಣ್ಯ ಠಾಣೆಗೆ ಪಳನಿಸ್ವಾಮಿ ದೂರು ನೀಡಿದ್ದರು. ಹೀಗಾಗಿ ದೇವಸ್ಥಾನ ಹಾಗೂ ಮಠದ ಸಿಬ್ಬಂದಿ ನಡುವೆ ಬಿರುಕು ಉಂಟಾಗಿತ್ತು.