Tag: ಮಟಾಶ್

  • ಮಟಾಶ್: ಪುನೀತ್ ಹಾಡಿದ ಉತ್ತರ ಕರ್ನಾಟಕದ ಪವರ್ ಫುಲ್ ಹಾಡು!

    ಮಟಾಶ್: ಪುನೀತ್ ಹಾಡಿದ ಉತ್ತರ ಕರ್ನಾಟಕದ ಪವರ್ ಫುಲ್ ಹಾಡು!

    ಬೆಂಗಳೂರು: ಎಸ್.ಡಿ ಅರವಿಂದ್ ನಿರ್ದೇಶನದ ಮಟಾಶ್ ಚಿತ್ರದ ಜವಾರಿ ಹಾಡೊಂದು ಈಗ ಟ್ರೆಂಡ್ ಸೆಟ್ ಮಾಡಿದೆ. ಗಾಯಕರಾಗಿ ಪುನೀತ್ ರಾಜ್ ಕುಮಾರ್ ಈ ಹಾಡಿನ ಮೂಲಕ ವಿಶಿಷ್ಟವಾಗಿಯೇ ಜನರನ್ನು ತಲುಪಿದ್ದಾರೆ. ಉತ್ತರ ಕರ್ನಾಟಕ ಭಾಗದ ಜಾನಪದ ಟಚ್ಚಿನ ಸಾಹಿತ್ಯ, ಅದಕ್ಕೊಪ್ಪುವ ಸಂಗೀತ ಮತ್ತು ಪವರ್ ಸ್ಟಾರ್ ಧ್ವನಿಯಲ್ಲಿ ಅನಾವರಣಗೊಂಡಿರೋ ಪವರ್ ಫುಲ್ ಹಾಡು… ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಟ್ರೆಂಡ್ ಸೆಟ್ ಮಾಡಲು ಮತ್ತೇನು ಬೇಕು?

    ‘ಚಜ್ಜಿರೊಟ್ಟಿ ಚವಳಿಕಾಯ್ ದುಡ್ಡಿಗೆ ಸೇರ್ ಬದನಿಕಾಯ್’ ಎಂಬ ಈ ಹಾಡಿಗೆ ನಿರ್ದೇಶಕ ಅರವಿಂದ್ ಅವರೇ ಸಂಗೀತ ನಿರ್ದೇಶನವನ್ನೂ ಮಾಡಿದ್ದಾರೆ. ಜಾನಪದ ಸೊಗಡು ಮೆತ್ತಿದಂಥಾ ಈ ಹಾಡನ್ನು ಸುನೀಲ ಸುಧಾಕರ ಅವರು ಬರೆದಿದ್ದಾರೆ. ಈ ಹಾಡು ಬಿಡುಗಡೆಯಾಗಿ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಎಲ್ಲರಿಗೂ ಮತ್ತೇರಿಸಿದೆ!  ಇದನ್ನೂ ಓದಿಮಟಾಶ್ ಅಂದ್ರೆ ಅಂತ್ಯವಷ್ಟೇ ಮುಕ್ತಾಯವಲ್ಲ!

    ಈಗ ಎಲ್ಲೆಡೆ ‘ಚಜ್ಜಿರೊಟ್ಟಿ ಚವಳಿಕಾಯ್ ದುಡ್ಡಿಗೆ ಸೇರ್ ಬದನಿಕಾಯ್’ ಘಮ ಹರಡಿಕೊಂಡಿದೆ. ಒಂದು ವಿಶಿಷ್ಟವಾದ ಕಥಾನಕವನ್ನು ಮಟಾಶ್ ಚಿತ್ರದ ಮೂಲಕ ಹೇಳ ಹೊರಟಿರುವ ಅರವಿಂದ್ ಅವರು ಈ ಹಾಡಿನ ಮೂಲಕ ಮೋಡಿ ಮಾಡಿದ್ದಾರೆ. ಇದು ಪುನೀತ್ ಅವರ ಗಾಯನ ಯಾನದಲ್ಲಿಯೂ ಮಹತ್ವದ ಹಾಡಾಗಿ ದಾಖಲಾಗಿದೆ. ಯಾಕೆಂದರೆ, ಈವರೆಗೆ ಸಾಕಷ್ಟು ಹಾಡುಗಳನ್ನು ಹಾಡಿರೋ ಪುನೀತ್ ಈವರೆಗೂ ಉತ್ತರ ಕರ್ನಾಟಕ ಭಾಷೆಯ ಹಾಡು ಹಾಡಿರಲಿಲ್ಲ. ಇದು ಆ ಶೈಲಿಯಲ್ಲಿ ಪುನೀತ್ ಹಾಡಿರೋ ಮೊದಲ ಹಾಡಾಗಿಯೂ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಟಾಶ್ ಅಂದ್ರೆ ಅಂತ್ಯವಷ್ಟೇ ಮುಕ್ತಾಯವಲ್ಲ!

    ಮಟಾಶ್ ಅಂದ್ರೆ ಅಂತ್ಯವಷ್ಟೇ ಮುಕ್ತಾಯವಲ್ಲ!

    ಬೆಂಗಳೂರು: ಎಸ್.ಡಿ ಅರವಿಂದ್ ನಿರ್ದೇಶನದ ಮಟಾಶ್ ಚಿತ್ರದ ಸುತ್ತ ಎಲ್ಲೆಡೆ ಚರ್ಚೆಗಳಾಗುತ್ತಿವೆ. ಈ ಚಿತ್ರ ನೋಟು ಅಮಾನ್ಯೀಕರಣದ ಸುತ್ತಲಿನ ಸತ್ಯ ಘಟನೆಯನ್ನಾಧರಿಸಿದೆ ಅಂತೊಂದು ಸುದ್ದಿ ಹೊರ ಬಿದ್ದ ಕ್ಷಣದಿಂದಲೇ ಜನ ಇತ್ತಲೇ ದೃಷ್ಟಿ ನೆಟ್ಟಿದ್ದಾರೆ. ಹಾಗಾದರೆ ಈ ಚಿತ್ರ ಅಸಲೀ ಕಥೆಗೇ ದೃಶ್ಯ ರೂಪ ನೀಡಿದೆಯಾ? ನೋಟು ಅಮಾನ್ಯೀಕರಣ ಸರಿ ಮತ್ತು ತಪ್ಪುಗಳೆಂಬ ವಾದ ಚಾಲ್ತಿಯಲ್ಲಿದೆಯಲ್ಲಾ? ಈ ಚಿತ್ರ ಈ ಬಗ್ಗೆ ಒಂದು ನಿಲುವು ಪ್ರಕಟಿಸುತ್ತದೆಯಾ… ಇಂಥಾ ಪ್ರಶ್ನೆಗಳ ಸರಮಾಲೆಯೇ ಇದೆ.

    ಆದರೆ ನಿರ್ದೇಶಕ ಎಸ್.ಡಿ ಅರವಿಂದ್ ಇದೊಂದು ಸತ್ಯ ಘಟನೆಯಾಧಾರಿತ ಕಾಲ್ಪನಿಕ ಕಥಾ ಹಂದರ ಹೊಂದಿರುವ ಚಿತ್ರ ಎಂಬ ಖಚಿತ ವಿಚಾರವನ್ನು ಹೊರ ಹಾಕುತ್ತಾರೆ. ಆದರೆ ಕಾಲ್ಪನಿಕ ಕಥೆಯಲ್ಲಿಯೇ ವಾಸ್ತವ ಎದುರಾಗಲೂ ಬಹುದೆಂಬ ಸುಳಿವು ಕೊಡುವ ಮೂಲಕ ಕುತೂಹಲವನ್ನು ಮತ್ತಷ್ಟು ನಿಗಿ ನಿಗಿಸುವಂತೆಯೂ ಮಾಡುತ್ತಾರೆ. ನಿಖರವಾಗಿ ಹೇಳ ಬೇಕೆಂದರೆ ಇದು ಪಕ್ಕಾ ಕಮರ್ಷಿಯಲ್ ಅಂಶಗಳನ್ನು ಹೊಂದಿರೋ ಚಿತ್ರವಂತೆ.

    ಯೂಥ್‍ಫುಲ್ ಸಬ್ಜೆಕ್ಟಿನ ಈ ಚಿತ್ರ ನೋಟು ಅಮಾನ್ಯೀಕರಣ ನಡೆದಾದ ನಂತರದ ಐವತ್ತು ದಿನಗಳಲ್ಲಿ ನಡೆದ ಕಥಾವಳಿಗಳನ್ನಿಟ್ಟಿಕೊಂಡೇ ಒಂದು ಔಟ್ ಆಂಡ್ ಔಟ್ ಎಂಟರ್ಟೈನರ್ ಕಥೆಯನ್ನು ಹೇಳ ಹೊರಟಿದೆ. ಈ ಮೂಲಕವೇ ಈ ಹೊತ್ತಿನ ಯುವ ಜನಾಂಗದ ಮನಸ್ಥಿತಿಯನ್ನೂ ಅನಾವರಣಗೊಳಿಸಲಿದೆಯಂತೆ. ಇಲ್ಲಿ ಅಂದದ ಹಾಡುಗಳಿರುತ್ತವೆ, ಮೈ ನವಿರೇಳಿಸೋ ಚೇಸಿಂಗ್ ಸೀನುಗಳಿರುತ್ತವೆ. ರೋಮಾಂಚನಗೊಳಿಸೋ ಎಲ್ಲ ಅಂಶಗಳೂ ಇರುತ್ತವೆ ಎಂಬುದು ನಿರ್ದೇಶಕರ ಅಭಿಪ್ರಾಯ.

    ಹೀಗೆ ಬಹಳಷ್ಟು ಕುತೂಹಲ ಕೆರಳಿಸಿರುವ ಈ ಚಿತ್ರದ ವಿಚಾರದಲ್ಲಿ ಅರವಿಂದ್ ಅವರು ಭಾರೀ ಪರಿಶ್ರಮ ವಹಿಸಿದ್ದಾರೆ. ಈ ಚಿತ್ರವನ್ನು ಅವರೇ ಸ್ವತಃ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಹನ್ನೊಂದು ಹಾಡುಗಳಿವೆ. ಅವೆಲ್ಲದಕ್ಕೂ ಅವರೇ ಸಂಗೀತ ನಿರ್ದೇಶನವನ್ನೂ ಮಾಡಿದ್ದಾರೆ. ಅದರಲ್ಲೊಂದಷ್ಟು ಹಾಡುಗಳಿಗೆ ಸಾಹಿತ್ಯವನ್ನೂ ಬರೆದಿದ್ದಾರೆ. ಹೆಚ್ಚೂ ಕಮ್ಮಿ ಈ ಚಿತ್ರವನ್ನವರು ಒನ್ ಮ್ಯಾನ್ ಆರ್ಮಿಯಂತೆಯೇ ನಿಭಾಯಿಸಿದ್ದಾರೆ.

    ಈ ಚಿತ್ರಕ್ಕೆ ಮಟಾಶ್ ಅಂತ ಹೆಸರಿಡಲೂ ಕಾರಣವಿದೆ. ಮಟಾಶ್ ಅಂದರೆ ಪರಿಪೂರ್ಣತೆ ಇಲ್ಲದ ಅಂತ್ಯ ಎಂಬ ಅರ್ಥ ಧ್ವನಿಸುತ್ತೆ. ನೋಟು ಅಮಾನ್ಯೀಕರಣದ ವಿಚಾರದಲ್ಲಿ ಹಳೇ ನೋಟುಗಳ ಕಥೆ ಮುಗಿದಂತೆ ಕಂಡರೂ ಅದರ ಪರಿಣಾಮ ಇನ್ನೂ ಬಾಕಿ ಉಳಿದುಕೊಂಡಿದೆ. ಉದ್ದೇಶವೂ ಸಂಪೂರ್ಣವಾಗಿ ಈಡೇರಿದಂತಿಲ್ಲ. ಈ ಕಾರಣದಿಂದಷ್ಟೇ ಈ ಚಿತ್ರಕ್ಕೆ ಮಟಾಶ್ ಎಂಬ ಹೆಸರಿಡಲಾಗಿದೆಯಂತೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv