Tag: ಮಟನ್ ಊಟ

  • ಪಶುವೈದ್ಯೆ ಅತ್ಯಾಚಾರಿಗಳಿಗೆ ಜೈಲಿನಲ್ಲಿ ಮಟನ್ ಊಟ, ಹೈ ಸೆಕ್ಯೂರಿಟಿ

    ಪಶುವೈದ್ಯೆ ಅತ್ಯಾಚಾರಿಗಳಿಗೆ ಜೈಲಿನಲ್ಲಿ ಮಟನ್ ಊಟ, ಹೈ ಸೆಕ್ಯೂರಿಟಿ

    ಹೈದರಾಬಾದ್: ಸಂಚು ರೂಪಿಸಿ ಪಶುವೈದ್ಯೆಯನ್ನು ಅತ್ಯಾಚಾರಗೈದು, ಕೊಲೆ ಮಾಡಿ ಅಮಾನುಷವಾಗಿ ಸುಟ್ಟುಹಾಕಿ ವಿಕೃತಿ ಮೆರೆದಿದ್ದ ಕಾಮ ಪಿಶಾಚಿಗಳಿಗೆ ಜೈಲಿನಲ್ಲಿ ಹೈ ಸೆಕ್ಯೂರಿಟಿ ನೀಡಲಾಗುತ್ತಿದ್ದು, ರಾತ್ರಿ ಊಟಕ್ಕೆ ಮಟನ್ ನೀಡಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ತಿಳಿದು ಹೀನಾಯ ಕೃತ್ಯವೆಸೆಗಿದ ನೀಚರನ್ನು ಗಲ್ಲಿಗೇರಿಸುವ ಬದಲು ಸತ್ಕರಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಹೈದರಾಬಾದ್ ಪಶುವೈದ್ಯೆ ಮೇಲಿನ ಭೀಕರ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಇಡೀ ದೇಶ ಮಮ್ಮಲ ಮರುಗಿದೆ. ಕೃತ್ಯವೆಸೆಗಿದ ನಾಲ್ವರು ಆರೋಪಿಗಳನ್ನು ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಜೈಲಿನಲ್ಲಿರಿಸಲಾಗಿದೆ. ಒಂದೆಡೆ ಈ ದುಷ್ಟರನ್ನು ನಮಗೆ ಒಪ್ಪಿಸಿ ನಾವೇ ಶಿಕ್ಷೆ ವಿಧಿಸುತ್ತೇವೆ ಎಂದು ಸಾರ್ವಜನಿಕರು ಸಿಡಿದೆದ್ದಿದ್ದಾರೆ. ಆದರೆ ಜೈಲಿನ ಕೈಪಿಡಿ ಪ್ರಕಾರ, ಭಾನುವಾರ ಕೈದಿಗಳಿಗೆ ಬಾಡೂಟ ನೀಡಲಾಗುತ್ತದೆ. ಆ ನಿಯಮದಂತೆ ಜೈಲಿನ ಒಳಗಿರುವ ಆರೋಪಿಗಳಿಗೂ ಮಟನ್ ಊಟ ನೀಡಲಾಗಿದ್ದು, ಬಿಗಿಭದ್ರತೆ ಒದಗಿಸಲಾಗಿದೆ. ಇದನ್ನೂ ಓದಿ: ಕೊಲೆಗೈದ ಮೇಲೂ ಪಶುವೈದ್ಯೆ ಮೇಲೆ ಅತ್ಯಾಚಾರವೆಸೆಗಿದ ರಾಕ್ಷಸರು

    ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳಿಗೆ ಚೆರಪಲ್ಲಿಯ ಜೈಲಿನಲ್ಲಿ ಬಿಗಿಭದ್ರತೆಯ ಒದಗಿಸಲಾಗಿದೆ. ಭಾನುವಾರ ಮಧ್ಯಾಹ್ನದ ಊಟಕ್ಕೆ ಆರೋಪಿಗಳಿಗೆ ದಾಲ್ ಹಾಗೂ ಅನ್ನವನ್ನು ನೀಡಲಾಗಿತ್ತು. ಆದರೆ ರಾತ್ರಿ ಊಟಕ್ಕೆ ಮಟನ್ ಕರಿ ನೀಡಲಾಗಿತ್ತು ಎಂದು ಮಾಧ್ಯಮವೊಂದು ವರದಿ ಮಾಡಿದೆ. ಈ ಬಗ್ಗೆ ತಿಳಿದ ಸಾರ್ವಜನಿಕರು ರೊಚ್ಚಿಗೆದ್ದಿದ್ದು, ನಡುರಸ್ತೆಯಲ್ಲಿ ಕೊಂದು ಶಿಕ್ಷೆ ನೀಡಬೇಕಾದ ಕಾಮುಕರಿಗೆ ಜೈಲಿನಲ್ಲಿ ಸತ್ಕರಿಸುತ್ತಿದ್ದೀರಾ ಎಂದು ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಪಶುವೈದ್ಯೆಯನ್ನು ಕೊಂದಂತೆ ನನ್ನ ಮಗನನ್ನು ಕೊಲ್ಲಿ – ಸಿಡಿದೆದ್ದ ಅತ್ಯಾಚಾರಿಯ ತಾಯಿ

    ಸ್ವತಃ ಆರೋಪಿ ತಾಯಿಯೇ ನನ್ನ ಮಗನ ತಪ್ಪು ಮಾಡಿದ್ದಾನೆ ಎಂದು ಸಾಬೀತಾದರೆ ಸಂತ್ರಸ್ತೆಯನ್ನು ಕೊಲೆಗೈದಂತೆ ಆತನನ್ನು ಕೊಲೆ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ದೇಶದೆಲ್ಲೆಡೆ ಮಹಿಳೆಯರ ಮೇಲೆ ನಡೆಯುತ್ತಿರುವ ಕಾಮುಕರ ಅಟ್ಟಹಾಸ ಕೊನೆಯಾಗಬೇಕು. ರೇಪ್ ಆರೋಪಿಗಳನ್ನು ಗಲ್ಲಿಗೇರಿಸಿ ಆಗ ವಿಕೃತಿ ಮೆರೆಯಲು ದುಷ್ಕರ್ಮಿಗಳು ಹೆದರುತ್ತಾರೆ ಎಂಬ ಕೂಗುಗಳು ಕೇಳಿಬರುತ್ತಿವೆ. ಇದನ್ನೂ ಓದಿ: ವೈದ್ಯೆಗೆ ಕೂಲ್ ಡ್ರಿಂಕ್ಸ್‌ನಲ್ಲಿ ವಿಸ್ಕಿ ಕುಡಿಸಿ ಅತ್ಯಾಚಾರಗೈದ ಪಾಪಿಗಳು

    ನವೆಂಬರ್ 27ರಂದು 26 ವರ್ಷದ ಪಶುವೈದ್ಯೆಯನ್ನು ಸ್ಕೂಟಿ ಪಂಕ್ಚರ್ ಹಾಕಿಸಿಕೊಡುವ ನೆಪದಲ್ಲಿ ಲಾರಿ ಚಾಲಕ ಮಹ್ಮದ್ ಪಾಷಾ, ಮೂವರು ಕ್ಲೀನರ್ ಗಳಾದ ನವೀನ್, ಚೆನ್ನಕೇಶವುಲು ಮತ್ತು ಶಿವಾ ಸೇರಿ ಕಿಡ್ನಾಪ್ ಮಾಡಿ, ಸಾಮೂಹಿಕ ಅತ್ಯಾಚಾರ ಮಾಡಿದ್ದರು. ಅಲ್ಲದೆ ವೈದ್ಯೆಯ ಮೃತ ದೇಹವನ್ನು ಸುಟ್ಟು ಹಾಕಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸೈಬರಾಬಾದ್ ಪೊಲೀಸರು, ನಾಲ್ವರು ಮೃಗೀಯ ಮನುಷ್ಯರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಈ ಕೃತ್ಯಕ್ಕೆ ಇವರನ್ನು ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.